ಒಟ್ಟು 184 ಕಡೆಗಳಲ್ಲಿ , 1 ದಾಸರು , 178 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀ ದೇವಿ ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ ಜಗದುದರನ ಸೊಸೆಯೆ ಪ. ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ. ಸಾರಿ ಬಂದೆ ನಿನ್ನ ನಾರಿಮಣಿಯಳೆ ಭೂರಿ ಕರುಣದಿ ನೀ ಸತಿ ಪದಕೆ ಪತಿ ಸಹ ಭಾರತಿ ನಿನ್ನಯ ವಾರಿಜಪದವನು ಸೇರಿ ಸುಖಿಸುವಂಥ ದಯ ತೋರೆ ನೀ 1 ದಾರಿ ತೋರಿ ನೀ ಪಾರುಗಾಣಿಸೆ ತಾರತಮ್ಯದಿ ವಾರಿಜಾಂಬಕಿಯೆ ಆರು ಅರಿಯದ ಹರಿಯ ಮಹಿಮೆಯ ಸಾರತತ್ವ ನೀ ಪತಿಯಿಂದರಿತಿಹೆ ಬಾರದು ಅಜ್ಞತೆ ನಿನಗೆ ಪ್ರಳಯದಿ ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2 ಹಾರಪದಕವು ದೋರೆ ಕಂಕಣ ನಾರಿ ನಿನ್ನನು ಯಾರು ವರ್ಣಿಪರೆ ನಾರಿ ನಿನ್ನ ಪತಿದ್ವಾರದಿ ಎನ್ನ ಶ- ರೀರದಿ ಸರ್ವನಿಯಾಮಕರೊಡನೆ ತೋರೆ ಗೋಪಾಲಕೃಷ್ಣವಿಠ್ಠಲನ ನೀರಜನಾಭನ ಶ್ರೀ ರಮೇಶನ 3
--------------
ಅಂಬಾಬಾಯಿ
ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ ಪ. ಮಂಗಳಂ ಕೊಳಲನೂದುವ ದೊರೆಗೆ ಮಂಗಳಂ ಶ್ರೀ ಶ್ರೀನಿವಾಸ ವೆಂಕಟನಿಗೆ ಮಂಗಳಂ ಶೇಷಾಚಲ ಹರಿಗೆ ಅ.ಪ. ವೈಕುಂಠದಲಿ ಬಂದವಗೆ ಆ ಕೋಲಗಿರಿಯಲಿ ನಿಂದವಗೆ ತಾ ಕಾಸುಕಾಸಿಗೆ ಬಡ್ಡಿಯ ಕೊಳುತಲಿ ಬೇಕಾದ ವರಗಳ ಕೊಡುವನಿಗೆ 1 ಬುತ್ತಿ ಪೊಂಗಲುಗಳ ಮಾರುವಗೆ ಮತ್ತೆ ದರ್ಶನ ಕೊಡದೆ ಒದೆಸುವಗೆ ನಿತ್ಯ ಸ್ವಾಮಿಪುಷ್ಕರಣಿ ತೀರದಿ ನಿಂತು ಭೃತ್ಯವರ್ಗಗಳನು ಪೊರೆವವಗೆ 2 ಶಂಖ ಚಕ್ರ ವರ ಹಸ್ತನಿಗೆ ಶಂಕೆಯಿಲ್ಲದೆ ಅಭಯ ಕೊಡುವನಿಗೆ ಶಂಕರಮಿತ್ರಗೆ ಪರಮಪವಿತ್ರಗೆ ಸಂಕೋಲೆ ಹನುಮಗ್ಹಾಕಿಸಿದವಗೆ 3 ವೃಂದಾವನದಲಿ ಮೆರೆದವಗೆ ಮಂದಗಮನೆಯರ ಮೋಹಿಪಗೆ ಚಂದದ ಪೊಂಗೊಳಲೂದಿ ಗೋಪಿಯರ ಕಾಯ್ದ ಗೋಪಿ ಕಂದನಿಗೆ 4 ನಾಗರಾಜನ ಗಿರಿ ನಿಲಯನಿಗೆ ಯೋಗಿಗಳಿಗೆ ನಿಲುಕದ ಹರಿಗೆ ಸಾಗರನಿಲಯ ಗೋಪಾಲಕೃಷ್ಣವಿಠ್ಠಲ ಭೋಗಿಶಯನ ಲಕ್ಷ್ಮೀಪತಿಗೆ 5
--------------
ಅಂಬಾಬಾಯಿ
ಮಂಗಳ ಪಂಡರಿವಾಸನಿಗೆ ಜಯ ಮಂಗಳ ಇಟ್ಟಿಗೆ ನಿಲಯನಿಗೆ ಪ. ಗೋಕುಲವಾಸಗೆ ಆಕಳ ಪಾಲಗೆ ಲೋಕ ಲೋಕಗಳನ್ನು ಪೊರೆವನಿಗೆ ಪಾಕಶಾಸನ ವಂದ್ಯ ರುಕ್ಮಿಣಿ ರಮಣಗೆ ಲೋಕಮೋಹನ ಪಾಂಡುರಂಗನಿಗೆ 1 ಪಾಂಡವ ಪಾಲಕ ಪುಂಡಲೀಕನಿಗೊಲಿದು ಪಂಡರಿಕ್ಷೇತ್ರದಿ ನೆಲಸಿದಗೆ ಮಂಡೆ ಸೋಕಿಸಿಕೊಂಬ ಪುಂಡರೀಕ ಪಾದಯುಗಳನಿಗೆ 2 ಕಟಿಯಲ್ಲಿ ಕರವಿಟ್ಟು ಕೈಲಿ ಶಂಖವ ಪಿಡಿದು ನಟನೆಗೈಯ್ಯುವ ವೇಷಧಾರಕಗೆ ತಟಿನಿ ಚಂದ್ರಭಾಗೆ ತೀರದಿ ಮೆರೆಯುವ ವಟುರೂಪಿ ಗೋಪಾಲಕೃಷ್ಣವಿಠ್ಠಲಗೆ 3
--------------
ಅಂಬಾಬಾಯಿ
ಮಂಗಳ ಮುದ್ದು ಕೃಷ್ಣನಿಗೆ ಜಯ ಮದನ ಜನಕ ಬಾಲ ಹರಿಗೆ ಪ. ಕಡಗೋಲ ನೇಣು ಪಿಡಿದಗೆ ಪಾಲ್ ಗಡಿಗೆ ಒಡೆದು ಇಲ್ಲಿ ಓಡಿ ಬಂದವಗೆ ಕಡಲ ತಡಿಯಲಿ ನಿಂತವಗೆ ಅಷ್ಟ ಮಡದಿಯರರಸನೆಂತೆಂಬ ಪುರುಷಗೆ 1 ಯತಿವರರಿಂದರ್ಚಿತಗೆ ಬಹು ಜತನದಿ ಭಕ್ತವರ್ಗಗಳ ಕಾಯ್ವನಿಗೆ ಯತಿ ಮಧ್ವರಾಯಗೊಲಿದಗೆ ನಿತ್ಯ ಚ್ಯುತ ದೂರವಾದ ಸರ್ವೇಶನೆಂಬುವಗೆ 2 ಗರುಡನ್ನ ಎಡದಿ ನಿಲಿಸಿದಗೆ ಬಲದಿ ಮರುತನ್ನ ನಿಲಿಸಿ ಕೊಂಡ್ಹರುಷಪಡುವನಿಗೆ ಕಿರಿದ್ವಾರದಿ ಮಧ್ವ ಉಳ್ಳವಗೆ ನಮ್ಮ ಸಿರಿಪತಿ ಗೋಪಾಲಕೃಷ್ಣವಿಠ್ಠಲಗೆ 3
--------------
ಅಂಬಾಬಾಯಿ
ಮಂಗಳಂ ಶ್ರೀ ಗುರುವರ್ಯರಿಗೆ | ಮಂಗಳಾಂಗರಿಗೆ ಮಂಗಳಂ ಶ್ರೀ ಗುರುವರ್ಯರಿಗೆ ಪ. ರಂಗನಾಥನ ಪದ ಸರೋಜಕೆ ಭೃಂಗರೆನಿಸಿ ಮೆರೆಯುವರಿಗೆ ಅ.ಪ. ತಂದೆ ಮುದ್ದುಮೋಹನರೆಂ ತೆಂದು ಮೆರೆಯುತ ಮಂದಮತಿಯ ಬಿಡಿಸಿ ಎನ್ನ ತಂದೆಯಂತೆ ಪೊರೆಯುವರಿಗೆ 1 ನಾಗಶಯನ ಹರಿಯ ಭಜಿಪ ಭೋಗಿವರರಿಗೆ ಭಾಗವತರ ಸಂಘದೊಳಗೆ ಯೋಗಿಯಾಗಿ ಚರಿಸುವರಿಗೆ 2 ಪರಮಪ್ರಿಯರಾಗಿ ಹರಿಗೆ ಪರಮಪ್ರಿಯರೆಂದು ಕರೆಸಿಕೊಳುತ ನರಹರಿಯ ಚರಣ ಮನದಿ ಸ್ಮರಿಸುವರಿಗೆ 3 ಕರ್ಮಗಳನೆ ಕಡಿದು ಜ್ಞಾನ ಧರ್ಮಮಾರ್ಗದಿ ಧರ್ಮತತ್ವ ಬೋಧಿಸಿ ಅ- ಧರ್ಮಗಳನೆ ಬಿಡಿಸುವರಿಗೆ4 ಗೋಪಾಲಕೃಷ್ಣವಿಠ್ಠಲನ ರೂಪ ತೋರುತ ಪಾಪಗಳನೆ ತರಿದು ಭವ ಕೂಪದಿಂದ ಪೊರೆಯುವರಿಗೆ 5
--------------
ಅಂಬಾಬಾಯಿ
ಮಂಗಳಂ ಶ್ರೀ ಭಾರತೀಶಗೇ ಬಂಗಾರನೇತ್ರಗೆ ಪ. ರಂಗನಾಥನ ದಾಸೋತ್ತಮಗೆ ಶೃಂಗಾರದಿ ಶೋಭಿಪಗೆ ಅ.ಪ. ಬಿಟ್ಟುನೇಮ ತೊಟ್ಟು ವಸನ ಇಟ್ಟು ಆಭರಣ ಶ್ರೇಷ್ಠ ಪದಕ ಹಾರ ಧರಿಸಿ ದಿಟ್ಟತನದಿ ನಿಂತ ಧೀರಗೆ 1 ಹನುಮ ಭೀಮ ಮುನಿ ಮ ಚಿನುಮಯಾತ್ಮ ರಾಮಕೃಷ್ಣ ಮುನಿದ್ವೈಪಾಯನನು ಪೂಜಿಪಗೆ 2 ಶ್ರೀಪತಿಯ ಭಕ್ತನಿಗೆ ವ್ಯಾಪಕತ್ವಗೆ ಗೋಪಾಲಕೃಷ್ಣವಿಠ್ಠಲನ ರೂಪ ಮನದಿ ಸ್ಮರಿಸುವವಗೆ 3
--------------
ಅಂಬಾಬಾಯಿ
ಮಂಗಳಂ ಶ್ರೀ ರಾಮಚಂದ್ರನಿಗೆ ಕಂಗೊಳಿಪ ದೇವಗೆ ಪ. ಬಿಟ್ಟು ಪಟ್ಟ ತೊಟ್ಟು ವ್ರತವ ಮೆಟ್ಟಿ ವನವನೂ ದುಷ್ಟರನ್ನು ಕುಟ್ಟಿ ಬಂದು ಪಟ್ಟವಾಳ್ದ ಶ್ರೇಷ್ಠ ಮೂರ್ತಿಗೆ 1 ಸೀತೆ ಅನುಜರೊಡನೆ ವೆರಸಿ ವಾತತನಯನ ಪ್ರೀತಿ ಸೇವೆ ಕೊಳುತ ರಾಜ್ಯ ನೀತಿಯಿಂದ ನಡೆಸಿದವಗೆ 2 ಶ್ರೇಷ್ಠ ಭಕ್ತರೊಡನೆ ವೆರಸಿ ದಿಟ್ಟತನದಲಿ ಪಟ್ಟವಾಳಿ ಪ್ರಜರ ಪೊರೆದು ಇಷ್ಟ ಸಲಿಸಿ ಮುದವಿತ್ತವಗೆ 3 ರಾಮನಾಮ ಪಠಿಪ ಜನರ ಕಾಮಿತಾರ್ಥವ ಪ್ರೇಮದಿಂದ ಕೊಟ್ಟು ಪೊರೆವ ಸ್ವಾಮಿ ಸುಗುಣಧಾಮ ಹರಿಗೆ4 ಭೂಪರೊಳಗೆ ಶ್ರೇಷ್ಠ ರಾಮರೂಪ ಮಂಗಳಂಗೋಪಾಲಕೃಷ್ಣವಿಠ್ಠಲಗೆ ದೀಪದಾರತೀಯ ಬೆಳಗಿ 5
--------------
ಅಂಬಾಬಾಯಿ
ಮಂಗಳಂ ಶ್ರೀ ಶ್ರೀನಿವಾಸಗೆ ಶೃಂಗಾರರೂಪಗೆ ಮಂಗಳಂ ಶ್ರೀ ಶ್ರೀನಿವಾಸಗೆ ಪ. ಪದ್ಮನಾಭ ಪದ್ಮ ಮುಖಗೆ ಪದ್ಮಪಾದಗೆ ಪದ್ಮವತಿಯ ವರಿಸಿದವಗೆ ಪದ್ಮೋದ್ಭವನ ಸೇವೆ ಕೊಂಬಗೆ 1 ಆರ್ತ ಜನರ ಪೊರೆಯುವನಿಗೆ ಪಾರ್ಥಸಾರಥಿಗೆ ಕೀರ್ತಿಸುವರ ಕಾಯ್ದೆನೆಂದು ಅರ್ಥಿಯಿಂದ ನಿಂತಿರುವಗೆ 2 ಯೋಗಿಗಳಿಗೆ ನಿಲುಕದವಗೆ ಭೋಗಿಶಯನಗೆ ಭಾಗವತರು ಸ್ತುತಿಸಲು ಅನು- ರಾಗದಿಂದ ಲಾಲಿಪನಿಗೆ 3 ಭಕ್ತ ಜನರ ಕಾಯುವನಿಗೆ ಮುಕ್ತಿದಾಯಕನಿಗೆ ನಿತ್ಯಮುಕ್ತ ನಿಗಮವೇದ್ಯ ಸತ್ಯಸಂಕಲ್ಪ ಹರಿಗೆ 4 ಭೂಪರೈವರ ಪೊರೆದವಗೆ ತಾಪಹರನಿಗೆ ಗೋಪಾಲಕೃಷ್ಣವಿಠ್ಠಲಗೆ ಶ್ರೀಪತಿ ಶ್ರೀ ಶ್ರೀನಿವಾಸಗೆ 5
--------------
ಅಂಬಾಬಾಯಿ
ಮನರಥದಿಂದಲಿ ಘನರಥಕೀಗಲೆ ಬೇಗನೆ ಬಾರೊ ಪ. ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ದನುಜದಲ್ಲಣ ಬೇಗ ಬಾರೋ ಕೃಷ್ಣ ಅ.ಪ. ಮುತ್ತಿನ ತೋರಣ ಸುತ್ತು ಛತ್ತರಿಗೆಯು ಬೇಗನೆ ಬಾರೊ ಸಿರಿ ಸಹ ಬೇಗನೆ ಬಾರೊ ಉತ್ತಮ ಭಕ್ತರು ಎತ್ತಿ ಕೈ ಕರೆವರು ಬೇಗನೆ ಬಾರೊ ನಿತ್ಯ ಮಂಗಳ ನಿನ್ನ ಉತ್ತಮ ರೂಪವ ಚಿತ್ತದಿ ತೋರುತ ಸತ್ಯ ಸಂಕಲ್ಪನೆ 1 ಗಡಗಡ ನಡೆಯುವ ಘನರಥದಲಿ ನಿಂದು ಬೇಗನೆ ಬಾರೊ ಎಡಬಲದಲಿ ಶ್ರೀ ಭೂಮಿಯರೊಡಗೂಡಿ ಬೇಗನೆ ಬಾರೊ ಧಡಧಡ ನಡೆಯುತ ದೈತ್ಯದಲ್ಲಣನೆ ಬೇಗನೆ ಬಾರೊ ನುಡಿಸುವ ವಾದ್ಯಗಳ್ ಪಿಡಿದಿಹ ಚಾಮರ ಕಡೆಗಣ್ಣೊಳು ಭಕ್ತರನೀಕ್ಷಿಸುತಲಿ 2 ನಾರದ ತುಂಬುರ ನಾಟ್ಯವನಾಡ್ವರು ಬೇಗನೆ ಬಾರೊ ಬಾರಿ ಬಾರಿಗೆ ಭಕ್ತರು ನುತಿಗೈವರು ಬೇಗನೆ ಬಾರೊ ವಾರಿಜಾಸನ ವಂದ್ಯ ಶ್ರೀನಿವಾಸ ದೊರಿ ಬೇಗನೆ ಬಾರೊ ತೋರುತ ರೂಪವ ಬೀರುತ ಕರುಣವ ಮಾರಜನಕ ಅಪಾರ ಮಹಿಮನೆ 3 ವಂದಿಸಿ ಕರೆವರೊ ನಿಂದು ಭಕ್ತರೆಲ್ಲ ಬೇಗನೆ ಬಾರೊ ಇಂದಿರೆಯರಸನೆ ಮಂದರೋದ್ಧರ ಕೃಷ್ಣ ಬೇಗನೆ ಬಾರೊ ಇಂದು ಸ್ಥಿರವಾರ ಸ್ಥಿರವಾಗಿ ಸಲಹಲು ಬೇಗನೆ ಬಾರೊ ಹಿಂದೆ ಮುಂದೆ ಭಕ್ತ ಸಂದಣಿಯೊಳು ಗುರು ವೃಂದ ಬಿಂಬ ಮನ್ಮನ ಬಿಂಬನೆ ರಥಕೆ 4 ಅಪಾರ ಕರುಣದಿ ಭಕ್ತರ ಪೊರೆಯಲು ಬೇಗನೆ ಬಾರೊ ಶ್ರೀಪತಿ ಶೇಷಾಚಲನಿಲಯನೆ ಹರಿ ಬೇಗನೆ ಬಾರೊ ಗೋಪಾಲಕೃಷ್ಣವಿಠ್ಠಲನೆ ತ್ವರಿತದಿ ಬೇಗನೆ ಬಾರೊ ಭೂಪರೈವರ ಕಾಯ್ದ ಗೋಪಕುವರ ಕೃಷ್ಣ ಈ ಪರಿಯಿಂದಲಿ ಭಕ್ತರ ಪೊರೆಯಲು 5
--------------
ಅಂಬಾಬಾಯಿ
ಮಹಾಲಕ್ಷ್ಮಿ ಇಂದಿರೆ ಮುಕುಂದ ಹೃನ್ಮಂದಿರೆ ಪ. ಇಂದಿರೆ ಲೋಕವಿಖ್ಯಾತೆ | ಶ್ರೀ- ನಂದನ ಕಂದನೊಳು ಪ್ರೀತೆ | ಆಹ ಬಂದೆನೆ ಭವದೊಳು ನಿಂದೆನೆ ನಿನ ಪದ ದ್ವಂದ ಸನ್ನಿಧಿಯಲಿ ಇಂದಿರೇಶನ ತೋರೆ ಅ.ಪ. ತ್ರಿಗುಣಾಭಿಮಾನಿಯೆ ದೇವಿ | ನಿನ್ನ ಜಗದೊಳು ನುತಿಪರ ಕಾಯ್ವಿ | ನಿತ್ಯ ನಗಧರನನು ಸೇವಿಸುವಿ | ಲಯ ಜಗ ಸೃಷ್ಟಿ ಸ್ಥಿತಿಯಲ್ಲಿ ದೇವಿ | ಆಹ ಬಗೆ ಬಗೆ ರೂಪದಿ ಸುಗುಣವಂತೆಯಾಗಿ ನಿಗಮಾದಿಗಳಿಂದ ನಗಧರನನು ಸ್ತುತಿಪೆ 1 ಸಕಲಾಭರಣ ರೂಪದಿಂದ | ಹರಿಯ ಅಕಳಂಕ ಭಕ್ತಿಗಳಿಂದ | ಪಂಚ ಪ್ರಕೃತ್ಯಾದಿ ರೂಪಗಳಿಂದ | ನಾನಾ ಸಕಲ ಸಾಮಗ್ರಿಗಳಿಂದ | ಆಹಾ ಮುಕುತಿ ನಾಲ್ಕರಲ್ಲಿ ಭಕುತಿಯಿಂ ಸೇವಿಸುತ ಮುಕುತರಿಂದೋಲಗ ಅಕಳಂಕದಿಂ ಕೊಂಬೆ 2 ಪಾದದಿ ಪಿಲ್ಯೆ ಪಾಡಗವೊ | ಮೋದ ವಾದ ನೆರೆಗೆ ವೈಭವವೂ | ಗಾಂಭೀ- ರ್ಯದ ವಡ್ಯಾಣ ನಡುವು | ಮೇಲೆ ಭಾ- ರದ ಕುಚದ್ವಯ ಬಾಹು | ಆಹ ಶ್ರೀದನ ಪೆಗಲೊಳು ಮೋದದಿಂದೆಸೆವ ಕೈ ಆದರದಲಿ ನಿನ್ನ ಪಾದಸೇವೆಯ ನೀಡೆ 3 ಕರದಲ್ಲಿ ಕಡಗ ಕಂಕಣ | ಬೆರಳ ವರ ವಜ್ರದುಂಗುರಾ ಭರಣ | ನಾಗ- ಮುರಿಗೆ ಸರಿಗೆ ಕಂಠಾಭರಣ | ಬಲ ಕರದಲ್ಲಿ ಪದ್ಮ ಭಕ್ತರನ | ಆಹ ವರದೃಷ್ಟಿಯಿಂದಲಿ ನಿರುತ ಈಕ್ಷಿಸುತ ಪರಿಪರಿ ಬಗೆಯಿಂದ ಪೊರೆವೊ ಸುಂದರಕಾಯೆ4 ಗೋಪಾಲಕೃಷ್ಣವಿಠ್ಠಲನÀ | ನಿಜ ವ್ಯಾಪಾರ ಕೊಡೆ ಎನಗೆ ಮನನ | ಪೂರ್ಣ ರೂಪಳೆ ಮುಖದ ಚಲುವಿನ | ನಿನ್ನ ರೂಪವ ತೋರಿಸೆ ಮುನ್ನ | ಆಹ ತಾಪ ಹರಿಸಿ ಲಕುಮಿ ಶ್ರೀಪತಿ ಪದದಲ್ಲಿ ಕಾಪಾಡು ನಿತ್ಯದಿ 5
--------------
ಅಂಬಾಬಾಯಿ
ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ
ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ ಪ. ಮುದ್ದೆ ಬೆಣ್ಣೆ ಕೊಡುವೆ ಚೆನ್ನ ಮಧ್ವಮುನಿಯ ಮನ ಪ್ರಸನ್ನ ಅ.ಪ. ಲೀಲೆಯಿಂದ ಕೊಳಲನೂದಿ ಕಾಳಿಮಡುವ ಕಲಕಿ ನಿಂದ ಲೀಲೆ ಕೇಳೆ ಮನಕಾನಂದ 1 ನಿನ್ನ ಮಹಿಮೆ ಅಧಿಕವಾಗಿ ಎನ್ನ ಮನಕೆ ಹರುಷವಾಗಿ ಪನ್ನಗೇಂದ್ರಶಯನ ಸ್ವಾಮಿ ನಿನ್ನ ರೂಪ ತೋರೊ ಪ್ರೇಮಿ 2 ಪೊರೆ ಗೋಪಾಲಕೃಷ್ಣವಿಠ್ಠಲ ನಿರುತ ನಿನ್ನ ಚರಣ ಕಮಲ ಮೊರೆಯ ಹೊಕ್ಕೆ ಮರೆಯದೆನ್ನ ಕರುಣೆಯಿಂದ ಕಾಯೊ ಘನ್ನ 3
--------------
ಅಂಬಾಬಾಯಿ
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ಮುದ್ದು ಮುಖದ ಲಕುಮಿ ಎನಗೆ ಶುದ್ಧ ಜ್ಞಾನವÀ ನೀಡೆ ಪ. ಬಿದ್ದಿಹೆ ನಿನ್ನ ಪದದಲಿ ನಿರುತ ಮದ್ಬಿಂಬನ ತೋರೆ ಅ.ಪ. ಹರಿಸರ್ವೋತ್ತಮ ಸುರರಕ್ಷಕನೆಂಬ ಖರೆಯ ಜ್ಞಾನವ ನೀಡೆ ಕರಕರೆಗೊಳಿಸದೆ ದುರ್ವಿಷಯದಲೆನ್ನ ಹರಿಯ ಧ್ಯಾನವನೀಡೆ 1 ನಗೆಮೊಗ ಚಲುವೆ ಖಗವಾಹನ ಪ್ರಿಯೆ ಜಗದೊಡೆಯನ ತೋರೆ ನಿತ್ಯ ಬಗೆ ಬಗೆ ಲೀಲೆಯ ಸುಗುಣವಂತೆ ತಿಳಿಸೆ 2 ಸೃಷ್ಟಿಕರ್ತಗೆ ಪಟ್ಟದ ನಾರಿಯೆ ದೃಷ್ಟ ಇಂದ್ರಿಯವಳಿಯೆ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲ ಸತಿಯೆ 3
--------------
ಅಂಬಾಬಾಯಿ
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ