ಬಾರೋ ಮನೆಗೆ ಶ್ರೀಧರನೆ ನಿಜಪರಿ
ವಾರದೊಡನೆ ಗುಣವಾರಿಧಿಯೆ ಪ
ಮಾರಜನಕ ಸುಕುಮಾರಾಂಗ ಪರಮೋ
ದಾರಾಕೃತಿಯ ನೀ ತೋರಿಸೆನಗೆ 1
ಎಷ್ಟು ಜನ್ಮದ ತಪ ಒಟ್ಟಾಗಿ ಸೇರಲು
ದೃಷ್ಟಿಸುವೆನೊ ಶ್ರೀ ಕೃಷ್ಣ ನಿನ್ನನು 2
ಚಿನ್ನದ ಪೀಠದಿ ರನ್ನದ ಕಲಶದಿ
ಚನ್ನಾಗಿ ತೊಳೆಯವೆ ನಿನ್ನಡಿಗಳ 3
ಗಂಧವ ಹಚ್ಚಿ ಸುಗಂಧ ತುಳಸೀದಳ
ದಿಂದಾಲಂಕರಿಸುವೆ ಸುಂದರಾಂಗನೆ 4
ಜಾಜಿಯು ಮೊದಲಾದ ಹೂಜಾತಿಗಳ ತಂದು
ಮೂಜಗದೊಡೆಯನನು ಪೂಜಿಸುವೆನೊ5
ಲೋಪವಿಲ್ಲದೆ ದಿವ್ಯ ಧೂಪವನರ್ಪಿಸಿ
ದೀಪಂಗಳನು ಬಹು ದೀಪಿಸುವೆನು 6
ಘೃತ ಮೇಲಾದ ಭೋಜ್ಯವ
ಮೇಳೈಸುವೆನು ಶ್ರೀಲೋಲನಿಗೆ 7
ಕರ್ಪೂರವೀಳ್ಯವನರ್ಪಿಸಿ ಮೋದದಿ
ಕರ್ಪೂರದಾರತಿಗಳರ್ಪಿಸುವೆನು 8
ಮಣಿದು ನಿನ್ನಂಘ್ರಿಗೆ ಹಣೆಯ ಚಾಚುತ ಮನ
ದಣಿಯುವಂದದಿ ನಾ ಕುಣಿದಾಡುವೆ 9
ಸದಯ ನಿನ್ನಂಘ್ರಿಯ ಹೃದಯಾರವಿಂದದ
ಸದನದೊಳಿಂಬಿಟ್ಟು ಮುದಮೊಂದುವೆ 10
ಶರಣಾಗತರನೆಲ್ಲ ಕರುಣದಿ ಸಲಹುವ
ವರದವಿಠಲ ಪುಲಿಗಿರಿಧಾಮನೆ 11