ಒಟ್ಟು 2370 ಕಡೆಗಳಲ್ಲಿ , 104 ದಾಸರು , 1557 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ಪ. ನೀಲಕಂಠನೆಂದೆನಿಸುತ ಸುರರನು ಪಾಲಿಸಿದನು ಕಂಡ್ಯಾ ಅ.ಪ. ಸುರರು ಅಸುರರು ಕೂಡಿ ಶರಧಿಯ ಭರದಿ ಮಥನವ ಮಾಡಿ ಗರಳವು ಉದ್ಭವಿಸಲು ಕಂಗೆಡುತಲಿ ಹರನನು ಸ್ತುತಿಮಾಡಿ 1 ಮೃತ್ಯುಂಜಯ ಪಾಹಿ | ಸಲಹೊ ಕೃತ್ತಿ ವಾಸನೆ ಪಾಹಿ ಮೃತ್ಯುವಾದ ವಿಷ ಭಯವನೆ ಬಿಡಿಸೈ ಸತ್ಯವಿಕ್ರಮ ಪಾಹಿ 2 ಪರಿಪರಿ ಸ್ತುತಿಗೈಯೆ | ಹರಮನ ಕರಗುತ ಕೃಪೆ ಗೈಯೆ ಗಿರಿಜೆ ನೀಡು ಅಪ್ಪಣೆ ವಿಷ ಕುಡಿವೆನು ಪರಮ ಮಂಗಳ ಕಾಯೆ 3 ತನುಸುಖವ ತೊರೆದು | ಲೋಕವ ಘನಕೀರ್ತಿಯನು ಪಡೆಯಲು ಹರಿ ಮೆಚ್ಚುವ ಎನುತ ಗಿರಿಜೆಗೆ ಪೇಳ್ದು 4 ಕರದಿ ಸೆಳೆದು ಕುಡಿದ | ವಿಷವನು ವಿಧಿ ಕಂದ ಹರಿಯ ಕೃಪೆಯಿಂದ 5 ನಗಜೇಶನು ಕೇಳ ಬಿಗಿದು ಕಂಠದಿ ನಿಲ್ಲಿಸಿ ಲೋಕವ ಪೊರೆದನು ಉರಿಫಾಲ 6 ಪೋಯ್ತು ಕಾಳರಾತ್ರಿ | ಮಂಗಳ ಆಯಿತು ಶಿವರಾತ್ರಿ ಶ್ರೀಯರಸ ಗೋಪಾಲಕೃಷ್ಣ ವಿಠ್ಠಲನ ಪ್ರೀತಿ ಪಾತ್ರ 7
--------------
ಅಂಬಾಬಾಯಿ
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಹೆಂಗಳೆಯರು ನಾವು ರಂಗೈಯ್ಯ ಮಾನಂಗಳ ಕಾಯಬೇಕೋ ಭಂಗ ಬಡುವೆವು ಮಂಗಚೇತನದಂಬಿಗನು ವಾಸಂಗಳನು ನೆರೆ ಸೆಳೆದಿಹಾನು ಪ ಗೋಪಿವೃಂದವು ಕೂಡಿ ಚಿತ್ತದ ಸಂತಾಪ ನೀಗಲು ಮಾಡಿ ತೋಷಗೊಳಿಸಲು ಪಾಪಿಯಂಬಿಗ 1 ಬಯಕೆಯಾ ಹಾರವನು ನಾವೆಲ್ಲರು ವಯನಾಗಿ ಕಟ್ಟಿದ್ದೆವೋ ಮಾಡ್ದೆವು ಮತಿಯು ಪೋದುದು ನಯನದಿಂದವುಗಳನೆ ನೋಡದೆ ಬಯಲುಮಾಡಿದೆವಿತ್ತೀಕಂಗೆ 2 ಎಷ್ಟು ಬಳಲುತಿಹೆವೊ ಶ್ರೀಕೃಷ್ಣ ನಿನ್ನಿಷ್ಟಕ್ಕೆ ಬಂದುದೇನೋ ಇಷ್ಟು ಪರಿಯಲ್ಪರಿವುದೇತಕೆ ಇಷ್ಟ ಮೂರುತಿ ಕೃಷ್ಣನೀಗಲೆ ದುಷ್ಟ ಅಂಬಿಗನಂಗ ತೊಲಗಿ ಶಿಷ್ಟ ನರಸಿಂಹ ವಿಠ್ಠಲಾದ 3
--------------
ನರಸಿಂಹವಿಠಲರು
ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನÀ ಅರ್ಜುನಸಾರಥಿ ಮೂರ್ಜಗದೊಡೆಯನ ಪ. ಮಚ್ಛನಾಗಿ ವೇದವ ತಂದವನಂತೆ ಕೂರ್ಮನಾಗಿ[ಭೂಧರ]ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ 1 ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ2 ಮಾತೃದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನ ಕೃಷ್ಣಾವತಾರನಬೌದ್ಧ ಸ್ವರೂಪನ ಹಯವÀನೇರಿದ ಕಲ್ಕಿಹಯವದನನ ದಿವ್ಯ 3
--------------
ವಾದಿರಾಜ
ಹೇಮದ ತೊಟ್ಟಿಲ ಭಾಮೆಯರ್ಹೂಡಿ ಕೋಮಲ ಕಾಂಚನಧಾಮವ ಮಾಡಿ ಕಾಮಜನಕನೊಳು ಕಾಮಿತ ಬೇಡಿ ಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ 1 ಚೆನ್ನಿಗರರಸ ಮೋಹನ್ನ ಸುಶೀಲ ಕನ್ನಡಿ ಕದಪಿನ ಕಮನೀಯ ಬಾಲ ಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲ ನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ 2 ಕೆಂದಾವರೆಯಂತೆ ಚೆಂದುಳ್ಳ ಚರಣ ಚಂದಿರವದನ ಗೋವಿಂದನ ಶರಣ ಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣ ಕಂದ ಕಂದರ್ಪನ ಸುಂದರಾಭರಣ ಜೊ ಜೋ 3 ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣ ನ್ಯಾಯ ನೀತಿ ಸದುಪಾಯ ಸಂಪನ್ನ ಪ್ರೀಯನೆ ಕರ್ಣಾಂತಾಯತನಯನ ಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ4
--------------
ತುಪಾಕಿ ವೆಂಕಟರಮಣಾಚಾರ್ಯ
ಹೇಳುತಿ ಕೇಳುತಿ ಏನಿಲ್ಲವೊ ಆಳಿದಾ ಊಳಿಗನ ಬಾಳಿವಿನ್ನೇನೊ ಪ ಭಾರ ಬೆನ್ನಲಿ ಪೊತ್ತು ದೂರದೊಳು ಮುಳುಗಿ ಭೂಭಾರ ನೆಗಹಿ ಧೀರ ಕರ್ಣವು ಮಂದವೊ ಹ್ಯಾಗೊ ತಿಳಿಯದು ಘೋರ ದೈತ್ಯನ ಕೊಲ್ಲೊ ಚೀರಾಟವೊ 1 ಮೇದಿನಿ ಪತಿಯ ತುತಿಸುವ ಭರದಿ ನೀ ಧನುರ್ವೇದಗಳನೋದಿಸುವ ನಿರ್ಭರವೊ ಕಾದÀುವ ರಾಕ್ಷಸರ ಕುಲದ ಕೂಗ್ಯಾಟವೊ ಮೋದದಿ ಗೋಪಿಯರ ಕೋಲಾಟವೊ 2 ಬತ್ತಲೆ ನಿಂತು ನುಡಿಯಲಿ ಬಾರದೊಯೆಂತೊ ಹತ್ತಿದ ವಾಜಿಯು ನಿಲ್ಲದೇನೊ ಇತ್ತ ಬಾರೊ ವಾಸುದೇವವಿಟ್ಠಲರೇಯ ಮತ್ತೆ ಹೇಳೊ ನಿಲ್ಲೊ ಬಾಯೆಂತಲೆನ್ನ 3
--------------
ವ್ಯಾಸತತ್ವಜ್ಞದಾಸರು
ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ಪ. ಶ್ರೇಷ್ಠ ಗುರುಗಳ ಆಜ್ಞೆಯಿಂದ ಮನ ಮುಟ್ಟಿ ನಡೆಸುವ ದಾಸವೃತ್ತಿಯು ಅ.ಪ. ವಂದನೆ ನಿಂದ್ಯಗಳನ್ನು ಗಮನಿಸದೆ ಇಂದಿರೇಶನ ಪದಕರ್ಪಿಸುತ ಮಂದಭಾಗ್ಯರ ಮಾತನೆ ಗಣಿಸದೆ ಬಂದ ಭಯಗಳ ದೂರೋಡಿಸುತಲಿ 1 ಆಶಪಾಶಗಳ ನಾಶಗೈಸಿ ಮನ ಕ್ಲೇಶಪಡದೆ ಸಂತೋಷಿಸುತ ವಾಸುದೇವ ಆನಂದಪೂರ್ಣ ಸ ರ್ವೇಶ ನಿನಗೆ ನಾ ದಾಸನೆಂತೆಂಬುದು 2 ಗೆಜ್ಜೆ ಕಾಲಿಗೆ ಕಟ್ಟಿ ತಾಳವ ಲಜ್ಜೆಯ ತೊರೆದು ಬಾರಿಸುತ ಮೂರ್ಜಗದೊಡೆಯ ಜಗಜ್ಜನ್ಮಾಧಿಕಾರಣನೆಂದು ಘರ್ಜಿಸುತಲಿ ಸಂಚಾರಮಾಳ್ಪುದೆ 3 ಇಂದು ನಾಳೆಗೆಂಬೋ ಮಂದಬುದ್ಧಿಯ ಬಿಟ್ಟು ಬಂದದರಿಂದಾನಂದಿಸುತ ತಂದೆ ಮುದ್ದುಮೋಹನದಾಸರ ಪದ ದ್ವಂದ್ವವ ಭಜಿಸುತ ಮುಂದೆ ಸಾಗುವುದು 4 ಗುರುಗಳ ಕರುಣದಿ ಅಂಕಿತ ಪಡೆಯಲು ದೊರೆವುದು ದಾಸತ್ವದ ಸಿದ್ಧಿ ಅರಿಯದೆ ವೇಷವ ಧರಿಸಿ ಮೆರೆದರೆ ಸಿರಿವರ ಮೆಚ್ಚನು ಗುರುವು ಒಲಿಯನು 5 ಉಚಿತ ಧರ್ಮಕರ್ಮಗಳನೆ ಮಾಡುತ ಖಚಿತ ಜ್ಞಾನ ಮನದಲಿ ತಿಳಿದು ವಚನದಿ ಹರಿನಾಮಗಳನೆ ನುಡಿಯುತ ಶುಚಿರ್ಭೂತರಾಗಿ ಆನಂದಪಡುವುದು 6 ದುಷ್ಟರ ತೊರೆದು ಶಿಷ್ಟರೊಳಾಡುತ ಶ್ರೇಷ್ಠವಾದ ದಾಸತ್ವದಲಿ ಬಿಟ್ಟು ಪ್ರಪಂಚವ ಸೃಷ್ಟೀಶ ಗೋಪಾಲ ಕೃಷ್ಣವಿಠಲನು ಶ್ರೇಷ್ಠದಿ ಭಜಿಪುದು 7
--------------
ಅಂಬಾಬಾಯಿ
ಹೊಡಿ ಜೈಭೇರಿ ಮ್ಯಾಲೆ ಕೈಯ ತಿವ್ರ್ಹೊಡಿ ಪ ಕಡಲೊಳು ಭೇದಿಸಿ ಅಡಗಿದ್ದ ್ಹಯಾಸುರ- ನ್ಹೊಡೆದು ವೇದವ ತಂದೊಡೆಯ ಶ್ರೀಕೃಷ್ಣನೆಂದ್ಹೊಡಿ 1 ಮಂದರೋದ್ಧರ ತಾ ಸುಂದರಿ ರೂಪದಿ ತಂದಮೃತೆರೆದ ಮುಕುಂದ ಶ್ರೀಹರಿಯೆಂದ್ಹೊಡಿ 2 ಖಳಹಿರಣ್ಯಾಕ್ಷನ ಸೆಳೆದಪ್ಪಳಿಸಿದ ಇಳೆಧಾರಕ ನಳಿನಾಕ್ಷ ಶ್ರೀಹರಿಯೆಂದ್ಹೊಡಿ3 ನಾಶ ಮಾಡಿದ ಲಕ್ಷ್ಮೀಶ ಶ್ರೀಹರಿಯೆಂದ್ಹೊಡಿ4 ತ್ರಿಚರಣದ ಇಳೆ ಬೇಡಿ ತ್ರಿವಿಕ್ರಮ- ರೂಪ ಧರಿಸಿದ ಉಪೇಂದ್ರ ಶ್ರೀಹರಿಯೆಂದ್ಹೊಡಿ 5 ಕೊಡಲಿ ಪಿಡಿದು ತಾ ಮಡುಹಿದ ದÉೂರೆಕುಲ ಕಡು ಮಾಋಷಿ ಪೊಡವ್ಯೇಶ ಶ್ರೀಹರಿಯೆಂದ್ಹೊಡಿ 6 ದಶಶಿರ ಹತ ಮಾಡಿದ ಸತಿ ಸೀತಾಂಗನೆ ಪತಿಯೆ ಶ್ರೀಹರಿಯೆಂದ್ಹೊಡಿ7 ಗೋಕುಲದೊಳಗಾನೇಕ ಸೂರ್ಯರಂ ತಾಕಳ ಕಾಯ್ದ ಗೋಪಾಲ ಶ್ರೀಹರಿಯೆಂದ್ಹೊಡಿ 8 ಮುದ್ದು ಸ್ತ್ರೀಯರ ವ್ರತ ಮೋಹಿಸಿ ಕೆಡಿಸಿದ ಶುದ್ಧ ವೈಷ್ಣವರಿಗೆ ಸುಲಭ ಶ್ರೀಹರಿಯೆಂದ್ಹೊಡಿ 9 ದುಷ್ಟ ಕಲಿಗಳಿಗೆ ಶಿಕ್ಷಕ ತಾ ನಿ- ರ್ದುಷ್ಟನು ಭೀಮೇಶಕೃಷ್ಣ ಶ್ರೀಹರಿಯೆಂದ್ಹೊಡಿ 10
--------------
ಹರಪನಹಳ್ಳಿಭೀಮವ್ವ
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು
ಹೊಂದಿಕೊಂಡಿರಬೇಕು ಮನವೆ ಘನಚೈತನ್ಯಸಂದೋಹನಾದ ದೇಶಿಕನ ಪಾದಾಬ್ಜದೊಳು ಪರಾಗವನು ನೆರೆಬಿಟ್ಟು ರತಿಯ ಮನದಲಿ ನೆಟ್ಟುಭಾಗವತನಾಗದರೊಳು ಭಕ್ತಿಯುಟ್ಟುಭೋಗವಾಂಛೆಯ ಬಿಟ್ಟು ಬೋಧಿಸುತಲೊತ್ತಟ್ಟುಯೋಗ ರಾಜ್ಯವ ಕಟ್ಟು ಯುಕ್ತಿುಂ ಸುಖಬಟ್ಟು 1ಯಮ ನಿಯಮಗಳ ಮಾಡಿ ಏಕಾಗ್ರತೆಯೊಳಾಡಿಸಮ ಚಿತ್ತದೊಳ್ಪಾಡಿ ಸೌಖ್ಯವನು ಬೇಡಿಕ್ರಮದಿ ಸಾಧನೆಗೂಡಿ ಕಾಯ ದಂಡನೆ ಮಾಡಿವಿಮಲ ವೇದಾಂತ ವಿದ್ಯವನೊಲಿದು ನೋಡಿ2ಭೇದ ಬುದ್ಧಿಯನುಳಿದು ಭಿಕ್ಷಾನ್ನದೊಳ್ಬೆಳೆದುವಾದ ವಿದ್ಯವ ಕಳೆದು ವಸ್ತುವೆಂದರಿದೂಸಾಧನಗಳೊಳ್ಮೆರೆದು ಸಂಸ್ಕøತಿ ಪಥವ ತರಿದುಸಾಧು ಗೋಪಾಲಾರ್ಯ ಗುರುವಿನೊಳ್ಬೆರೆದೂ 3
--------------
ಗೋಪಾಲಾರ್ಯರು
ಹೊನ್ನ ತಾ ಗುಬ್ಬಿ ಹೊನ್ನ ತಾ ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ. ಆಗಮವನು ತಂದು ಅಜಗಿತ್ತ ಕೈಗೆ ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ ನಾಗಶಯನ ನರಸಿಂಹನ ಕೈಗೆ 1 ಬಲಿಯ ದಾನವ ಬೇಡಿ ಬಂದಂಥ ಕೈಗೆ ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ ಕಲಿ ವಿಭೀಷಣಗಭಯವಿತ್ತಂಥ ಕೈಗೆ ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ 2 ಪತಿವ್ರತೆಯರ ವ್ರತವಳಿದಂಥ ಕೈಗೆ ಹಿತವಾಜಿಯನೇರಿ ದುರುಳಮರ್ದನ ಕೈಗೆ ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ ಚತುರ ಹೆಳವನಕಟ್ಟೆÉ ರಂಗನ ಕೈಗೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ಬಹುಸರಸಿಜಾಕ್ಷಿಯರು ದೂರುವರೋ ಗೋವಿಂದಾ ಬಾ ಮನೆಗೆ ಮುಕುಂದಾ ಪ ಹೆಂಗಸ ಕೊಂದನೆಂಬುವರು ಮನೆ ಅಂಗಳದೊಳಗೆ ಬಚ್ಚಿಟ್ಟು ಕೊಂಬುವರೋಶೃಂಗಾರದಲಿ ಮೋಹಿಸುವರೋ ತಮ್ಮ ಕಂಗಳಿಂದಲಿನೋಡಿ ದೃಷ್ಟಿ ಬಿಡುವರೋ1 ಕಳ್ಳತನವ ಕಲಿಸುವರೋ ಏನ ಬಲ್ಲೆ ಕಂದಮ್ಮ ನೀ ಸುಳ್ಳಕಲಿಸುವರೋಒಳ್ಳೆಯವರಲ್ಲ ಗೋಪಿಯರು ಗ್ರಾಮದಲೆ ನಿಲ್ಲಲು ಕೆಟ್ಟ ಸೊಲ್ಲನಾಡುವರೋ2 ಸುಂದರ ಸೌಭಾಗ್ಯನಿಧಿಯೇ ನಿನ್ನಒಂದು ಕ್ಷಣವು ಬಿಟ್ಟು ಇರಲಾರೆ ಹರಿಯೇ ಇಂದಿರೇಶನಸುರ ದೊರೆಯೇ 3
--------------
ಇಂದಿರೇಶರು
ಹ್ಯಾಗೆ ಉದ್ಧಾರ ಮಾಡುವನೋ ಹರಿ ಹೀಗೆ ದಿನಗಳ ಕಳೆಯುವರ ಪ. ಆದಿಮೂರುತಿ ಶ್ರೀ ದೇವ ಪದುಮನಾಭ ವೇದ ಉದ್ಧಾರನೆಂದನಲಿಲ್ಲ ಸಾದರದಲಿ ಹರಿ ಸಕಲರಿಗೊಡೆಯನೆಂ ದಾದರದಲಿ ನಾ ಪಾಡಲಿಲ್ಲ 1 ಮೃಚ್ಛಕೂರ್ಮಹರಿ ಸ್ವಚ್ಛÀವರಹನೆಂದು ಉಚ್ಚಧ್ವನಿಯಿಂದ ಕೂಗಲಿಲ್ಲ ತುಚ್ಛಕನ ಕೊಂದು ಅಚ್ಚ ಭಾಗವತಗೆ ಮೆಚ್ಚಿ ರಕ್ಷಿಸಿದನೆಂದೆನಲಿಲ್ಲ 2 ಚಲುವ ವಾಮನನಾಗಿ ಬಲಿಯ ದಾನವ ಬೇಡಿ ಮಲವನಳಿವ ಗಂಗೆ ಪಡೆದನೆಂದು ಕುಲವಳಿದು ಭೂಲಲನೆಯ ವಿಪ್ರರಿ ಗೊಲಿದು ಇತ್ತನೆಂದು ನೆನೆಯಲಿಲ್ಲ 3 ಸೀತೆಗಾಗಿ ಪಡೆಸವರುತ ಹರುಷದಿ ವಾತತನಯಗಜಪದವಿತ್ತನ ಈತನೆ ಪರದೈವನಾಥನು ಪರಕೆಂದು ಪ್ರೀತಿ ಭಕ್ತಿಯಲಿ ಮೈಮರೆಯಲಿಲ್ಲ 4 ಗೋಪಿಯರ ಕೂಡಿ ಗೋಪನ ಮನೆಯಲಿ ಶ್ರೀಪತಿ ಲೀಲೆಯ ತೋರ್ದನೆಂದು ಪಾಪದ ಕಾಷ್ಠಕೆ ಪಾವಕನಾಗಿಹ ತಾಪಹರನ ನಾ ನೆನೆಯಲಿಲ್ಲ 5 ಲಲನೇರ ವ್ರತವಳಿದು ಚಲುವ ಕುದುರೆ ಏರಿ ಕಲಿಮುಖರನು ಸದೆಬಡಿದನೆಂದು ಚಲುವ ಗೋಪಾಲನೆ ನೀನೇ ಗತಿ ಎಂದು ಹಲವು ಬಗೆಯಿಂದ ಪೊಗಳಲಿಲ್ಲ 6 ಗುರುಗಳು ಪೇಳಿದ ಪರಮ ರಹಸ್ಯವು ಅರಿವಾದರೂ ಅನುಭವ ಇಲ್ಲ ಪರಿಪರಿ ಮಹಿಮೆಯ ಉದಯಸ್ತ ಪರಿಯಂತ ಅರಿವು ಮನಕೆ ಎನಗಾಗಲಿಲ್ಲ 7 ದೇಹಸ್ತ ಹರಿ ಎಂದು ದೇಹವ್ಯಾಪ್ತನು ಎಂದು ದೇಹ ಗೇಹ ಜೀವ ಭಿನ್ನವೆಂದು ಶ್ರೀ ಹರಿ ಜೀವಾಂತರ್ಯಾಮಿಯಾಗಿಹನೆಂದು ಮೋಹವಳಿದು ಜ್ಞಾನ ಪುಟ್ಟಲಿಲ್ಲ 8 ತತ್ವಾಧಿಪತಿ ಹರಿ ತತ್ವಾಭಿಮಾನಿಗಳು ನಿತ್ಯ ಹರಿಮಾರ್ಗ ತೋರ್ವರೆಂದು ಸತ್ಯವಚನವನು ವಾಯು ಮತದಿ ನಂಬಿ ಭೃತ್ಯ ಭಾವವ ನಾ ವಹಿಸಲಿಲ್ಲ 9 ಎಷ್ಟು ಹೇಳಲಿ ಎನ್ನ ಅವಗುಣಗಳನೆಲ್ಲ ದೃಷ್ಟಿಯಿಂದಲಿ ನೋಡಿ ನೀನೆ ಸಲಹೋ ಬೆಟ್ಟದೊಡೆಯನಾಗಿ ಎಲ್ಲರ ಸಲಹುವ ಅಷ್ಟಭುಜ ಗೋಪಾಲಕೃಷ್ಣವಿಠಲ10
--------------
ಅಂಬಾಬಾಯಿ
ಹ್ಯಾಗೆ ದರುಶನ ಪಾಲಿಸುವೆ ವಿಠ್ಠಲನೆ ಹ್ಯಾಗೆನ್ನ ಪೊರೆವೆ ವಿಠ್ಠಲನೆ ಪ. ನಾಗಶಯನನೆ ನಿನ್ನ ನೋಡಬೇಕೆಂದು ಮನ ಈಗ ತವಕಿಸುತಿಹುದು ಹ್ಯಾಗೆ ಮಾಡಲಿ ವಿಠಲ ಅ.ಪ. ಅರಿಯದಾ ದೇಶದಲಿ ಆಲ್ಪರಿದು ಅನ್ಯರಿಗೆ ಬರಿದಾಯ್ತು ಬಯಕೆ ವಿಠ್ಠಲನÉ ಪರಿ ಹರಿಯೆ ನೀನಲ್ಲದಲೆ ಪೊರೆಯುವರ ಕಾಣೆ ವಿಠ್ಠಲನÉ 1 ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ಬಲವಿಲ್ಲ ಹ್ಯಾಗೆ ಬರಲಿನ್ನು ವಿಠ್ಠಲನೆ ನ್ಯಾಯದಿಂದಲಿ ಹಿಂದಿನಾ ಭಕ್ತರಂದದಲಿ ಕಾಯಬಾರದೆ ಎನ್ನ ಪೇಳೂ ವಿಠ್ಠಲನೆ 2 ಭಕ್ತ ಸುರಧೇನೆಂಬೊ ಬಿರುದು ಕೇಳೀ ಬಂದೆ ಚಿತ್ತಕ್ಕೆ ಬರದೆ ವಿಠ್ಠಲನೆ ಭಕ್ತರಾ ಕೂಟದಲಿ ಸೇರಲಿಲ್ಲವೆ ನಾನು ಭಕ್ತವತ್ಸಲನಲ್ಲವೇನೊ ವಿಠ್ಠಲನೆ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೇಶನೆ ಕಾಯೊ ಸತತ ವಿಠ್ಠಲನೇ ಹಿಂದಿನವರನು ಪೊರೆದ ಕೀರ್ತಿ ಉಳಿಯಲು ಈಗ ಕುಂದನೆಣಿಸದೆ ಕಾಯಬೇಕೊ ವಿಠ್ಠಲನೇ 4 ಕರುಣಿ ಎನ್ನಯ್ಯ ಕಂಗೆಡಿಸದಲೆ ಕಾಪಾಡೊ ಚರಣವೇ ಗತಿ ಎಂದು ಬಂದೆ ವಿಠ್ಠಲನೆ ಗುರು ಅಂತರ್ಯಾಮಿ ಎನ್ನಭಿಮಾನ ನಿನದೈಯ್ಯ ಸಿರಿಯರಸ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ