ಆಶಾ ಪಾಶದಲಿ ಬಿದ್ದು ಘಾಸಿಯಾಯಿತು ಜೀವ
ವಾಸುದೇವನೆ ನಿಮ್ಮ ಆಶೆಗೆನ್ನ ಮನವಿಲ್ಲ ಪ
ಮಡದಿಯಾಗಲು ಮತ್ತೆ ಮನೆಯಾ ಮಾಡುವದಾಶಾ
ಒಡಗೂಡಲದು ಮಕ್ಕಳಾಗುವಾಶಾ
ಬಿಡದೆ ಕುಟುಂಬ ಪೋಷಣೆಯಾಗುವಾದಾಶಾ
ಕಡಲ ಶಯನಾ ನಿಮ್ಮ ಆಶೆಗೆನ್ನ ಮನವಿಲ್ಲ 1
ಅನ್ನವಾಗಲು ವಸ್ತ್ರ ಅಲಂಕಾರದಾಶಾ
ಇನ್ನು ಮಕ್ಕಳ ಮುಂಜಿ ಮದುವಿಯಾಶಾ
ತನ್ನ ನೆಂಟರಸರಿಯಾ ಮಾಡುವದಾಶಾ
ಪನ್ನಗಾಶನವಾಹನಾಶೆಗೇ ಮನವಿಲ್ಲ 2
ನಡೆವಕಾಲಕೆ ದೊಡ್ಡ ಕುದುರೆ ಏರುವದಾಶಾ
ಅಡರಲು ರಥದಿಂದ ಆಂದಣಾಶಾ
ಕಡಿಗೆ ತೀರದ ಹೊನ್ನು ಹಣದ ಸಂಗ್ರಹದಾಶಾ
ಪೊಡವಿಧರನೇ ನಿಮ್ಮ ಆಶೆಗೆ ಮನವಿಲ್ಲ 3
ಒಂದೊದಗಲು ಮತ್ತೆ ಒಂದು ಬಯಸುದಾಶಾ
ಎಂದಿಗೇ ಸರಿಯದು ವಿಷಯದಾಶಾ
ಕುಂದಿದ ತನುವಿನ ಬಲವಾಗುವದಾಶಾ
ಇಂದಿರೇಶನ ಆಶೆಗೆನ್ನ ಮನವಿಲ್ಲ 4
ಆಶೆಯೆಂಬಾ ನದಿಯ ಸುಳಿಯ ಬಿಡಿಸಿ ನಿಜ
ದಾಸರಾ ಸಂಗ ಮನವ ತಿದ್ದೀ
ಲೇಸಾಗಿ ಮಹಿಪತಿ ಸುತ ಪ್ರಭು ಭಕುತಿಯಾ
ಆಶೆ ಹೆಚ್ಚಿಸಿ ಎನ್ನ ದಯದಿ ಪಾಲಿಸೋ ದೇವಾ 5