ಕನ್ಯಾರತ್ನವನಿತ್ತನು ಹರಿಗೆ ಸತ್ರಾಜಿತರಾಯನು ಪ
ಧನ್ಯನು ತಾನೆಂದೆನ್ನುತ ಯದುಕುಲರನ್ನ ಸುಗುಣ
ಸಂಪನ್ನಗೆ ಹರುಷದಿ ಅ.ಪ.
ಸನ್ನುತ ಚರಣನಿಗೆ ಕಮನೀಯ ಸ್ವರೂಪಗೆ
ಕಮಲಾರಮಣಗೆ ಸ್ವರತನಿಗೆ ಕಾಮಿತ ಫಲದಾತಗೆ
ಸುಮಬಾಣನ ಪಿತ ಸುಂದರಗೆ ಸುಮದಳನೇತ್ರನಿಗೆ
ನಮಿಪ ಜನರ ಸುರದ್ರುಮನೆಂದೆನಿಸುವ
ಅಮಿತ ಮಹಿಮಯುತಸಮವಿರಹಿತನಿಗೆ 1
ಬೃಂದಾರಕ ಬೃಂದ ಸುವಂದಿತಗೆ ಶ್ರೀ ಗೋವಿಂದಗೆ
ಬೃಂದಾವನ ವಿಹರಣ ವಿಭವಗೆ ವಿಶ್ವಂಭರನಿಗೆ
ಮಂದಾಕಿನಿ ಜನಕಗೆ ಮಾಧವಗೆ ಮರಕತಶ್ಯಾಮನಿಗೆ
ಮಂದರಧರ ಮುಚುಕುಂದವರದ ಪೂ
ರ್ಣೇಂದು ವದನಗುಣಸಾಂದ್ರ ಮುಕುಂದಗೆ 2
ವರಲೀಲಾ ಮಾನುಷ ವೇಷನಿಗೆ ವದನಾಂಬುಜದಲಿ
ಸರಸಿಜ ಜಾಂಡವ ತೋರಿಪಗೆ ಸಾರಸನಾಭ
ಪರಮಪಾವನ ಚರಿತಗೆ ಪುರುಷೋತ್ತಮನಿಗೆ
ಗರುಡಗಮನ ಶ್ರೀ ಕರಿಗಿರೀಶ ಯದು
ವರಕುಲಮಣಿ ಮುರಹರನಿಗೆ ಮುದದಲಿ 3