ಒಟ್ಟು 284 ಕಡೆಗಳಲ್ಲಿ , 63 ದಾಸರು , 227 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆಪಾಪಿಯ ನೋಡೆ ಪಾಪದ ಪಿಶಾಚಿಪಾಪಿಯ ಮೋರೆಯ ನೋಡಬಾರದಕ್ಕೆ ಪ ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳುಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು ಎದುರಿಗೆ ನಿಂತೆ ಮುಸಿ ಮುಸಿ ನಗುವಳು 1 ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ ಬೇಸಗೆ ಸೆಖೆ ಎಂತೆಂಬಳುಮಜ್ಜಿಗೆ ಹಾಕೆನೆ ಮಂದಮತಿಗಳ ಮಹಾಶೈತ್ಯವು ಬೇಡವು ಎಂತೆಂಬಳು 2 ಉತ್ತಮರೆಂದರೆ ಒಳ್ಳೆಯದಿಕ್ಕಳು ಉಬ್ಬಿಸಹೋದರೆ ಉಬ್ಬದಿಹಳುನಿತ್ಯ ಚಿದಾನಂದ ಸತ್ಪುರುಷರಿಗೆ ನಿಶ್ಚಯವಾಗಿ ಉಣಬಡಿಸುವಳು 3
--------------
ಚಿದಾನಂದ ಅವಧೂತರು
ಪಾರ್ವತಿ ದೇವಿ ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1 ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2 ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3 ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4 ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5
--------------
ಗುರುಗೋವಿಂದವಿಠಲರು
ಪಾಲಿಸೆನ್ನನು ಪಂಪಾಕ್ಷೇತ್ರವಾಸ ಫಾಲಲೋಚನ ಶಂಭೋ ವ್ಯೋಮಕೇಶ ಪ ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ || ಕಾಲ ಕೂಟವ ಮೆದ್ದು ಕೊಂಡ ಮೇತೌಷಧವನಿತ್ತು 1 ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ ವೇದನಂದನ ನಿನ್ನ ಪಾದಕ್ಕೆ ನಮಿಸುವೆನು 2 ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ ಶಾಮಸುಂದರವಿಠಲ ಸ್ವಾಮಿ ಮಿತ್ರ ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ ಕಳತ್ರ | ಮಹಿಮ ಚಿತ್ರಾ 3
--------------
ಶಾಮಸುಂದರ ವಿಠಲ
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ಪ ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಕಾರುಣ್ಯನಿಧಿ ಹರಿ ಒಲಿವಾ ಅ.ಪ. ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದರ್ಭಶಯನ ಮಧ್ಯಾರ್ಜುನ 1 ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ ಒಂದೊಂದು ಕೋಟೀಶ್ವರಾ 2 ಸಿರಿ ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ ವೀರ ನಾರಾಯಣವೋ ಕೇದಾರ ಕುರುಕ್ಷೇತ್ರ ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ 3 ಉದ್ಭವ ಆದಿ ಅನಂತ ಬಲಕ್ಷೇತ್ರ ಪುಂಡರೀಕಾಕ್ಷ ಸುಧಿಯೆಂದು ಕನ್ಯಾಕುಮಾರಿ ಮುದದಿ ಮಹಂಕಾಳಿ ಹಸ್ತಿಪಳಿನಾಥ ಪದ ಮುರಳಿ ತ್ರಿವಿಕ್ರಮ 4 ಕೂರ್ಮ ನೆಲ್ಲನಪ ಧರಣೀಧರ ಚಾಪವಾಣಿ ಕ್ಷೇತ್ರ ಶ್ರೀನಿವಾಸನೆದ ನಿಧಿ ಗೌರೀ ಮನೋಹರ 5 ಶಂಕರನ ಕ್ಷೇತ್ರ ಗೋಗರ್ಭ ಶೇತುವನ ಗಜಾರಣ್ಯ ಓಂಕಾರನಾಥ ದೇವಾ ವೇದಿ ಗೋಪಾಲನಿಧಿ ಅಲಂಕಾರ ಮುಕ್ತಿ ಕ್ಷೇತ್ರ 6 ಮಳೂರಪ್ರಮೇಯ ಶಿವಾ ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ ನೀಲಾರಣ್ಯ ರಾಜವನ ನೈಮಿಷ ಭೋಕ್ತ 7 ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ ಮಹಾಲಕುಮಿ ರಘುನಾಥ ಶಿವಗಂಗೆ ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ 8 ಪೇಳಿದುದಕ್ಕೆ ಆರಿಗೆ ಅಳವಲ್ಲ ನೆನಸೋದು ಮಾನವರು ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ- ಪಾಲಿಸುವ ಕುಲಕೋಟಿಗಳ9
--------------
ವಿಜಯದಾಸ
ಪುರುಷರೈವರು ಕೂಡಿ ಹರುಷದಿ ಬರುತಿರೆ ಸರಸದಿ ಕೃಷ್ಣೆ ಕದವಿಕ್ಕೆ ಸರಸದಿ ಕೃಷ್ಣೆ ಕದವಿಕ್ಕೆ 1 ನಾಗವೇಣಿಯೆ ನೀನು ಸಾಗಿ ಮುಂದಕ್ಕೆ ಬಂದು ಬಾಗಿಲಿಕ್ಕಿದ ಬಗೆ ಪೇಳೆ 2 ಸರ್ಹ್ಯಾಗೆ ತೆಗೆಯಲಿ ಕದವನು ಹ್ಯಾಗೆ ತೆಗೆಯಲಿ ಕದವನು 3 ಹರದಿ ದ್ರೌಪದಿ ಕೇಳೆ ದೊರೆಯು ಧರ್ಮರು ನಾವು ತ್ವರಿತದಿ ಬಂದೆವು ತೆಗೆ ನೀನು 4 ದೊರೆಗಳಾದರೆ ರಾಜ್ಯ ಪರರಿಗೆ ಕೊಟ್ಟು ತಾ- ನಡವಿ ಯಾತಕೆ ತಿರುಗೀರಿ ಅಡವಿ ಯಾತಕೆ ತಿರುಗೀರಿ5 ಪಟ್ಟದರಸನ ಕೂಡ ಇಷ್ಟು ಮಾತುಗಳ್ಯಾಕೆ ಶ್ರೇಷ್ಠ ಭೀಮನು ನಾ ಬಂದೀನೆ ಶ್ರೇಷ್ಠ ಭೀಮನು ನಾ ಬಂದೀನೆ 6 ಶ್ರೇಷ್ಠನಾದರೆ ಕೈಯ್ಯೊಳ್ಹುಟ್ಟು ಹಿಡಿದು ರಾಜ- ಗಟ್ಟ್ಟಿ ಅಡಿಗೆ ಉಣೀಸ್ಹೋಗೋ ರಾಜ- ಗಟ್ಟಿ ಅಡಿಗೆ ಉಣೀಸ್ಹೋಗೋ 7 ಪುಂಡಕೌರವರಿಗೆ ಗಂಡನೆನಿಸುವಂಥ ಗಾಂಡೀವರ್ಜುನ ನಾ ಬಂದೀನೆ ಗಾಂಡೀವರ್ಜುನ ನಾ ಬಂದೀನೆ 8 ದುಂಡು ಹರಡಿನಿಟ್ಟು ಗೊಂಡ್ಯದ್ಹೆರಳನ್ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ 9 ಸಕಲವಿದ್ಯೆಗಳಲ್ಲಿ ಕುಶಲ ಸಂಪನ್ನನಾದ ನಕುಲರಾಯನು ನಾ ಬಂದೀನೆ ನಕುಲರಾಯನು ನಾ ಬಂದೀನೆ 10 ಸಕಲವಿದ್ಯೆಗಳಲ್ಲಿ ಕುಶಲನಾದರೆ ತೇಜಿ ಕೆಲಸ ರಾಯರಿಗೆ ತಿಳಿಸ್ಹೋಗೊ ಕೆಲಸ ರಾಯರಿಗೆ ತಿಳಿಸ್ಹೋಗೊ 11 ಪಾವಕÀತನುಜೆ ಮಾದೇವಹಾರದವೇಣಿ ಸ(ಹ) ದೇವರಾಯನು ನಾ ಬಂದೀನೀಗ ಸ(ಹ)- ದೇವರಾಯನು ನಾ ಬಂದೀನೀಗ 12 ಗೋವ ಕಾಯುತಲಿ ಗೋಪಾಲಕನಾಗಿ ಕೊಳಲೂದಿ ಗೊಲ್ಲರೊಳಾಡಹೋಗೊ ಕೊಳಲೂದಿ ಗೊಲ್ಲರೊಳಾಡಹೋಗೊ 13 ಮಾತುಳಾಂತಕನಲ್ಲಿ ಮಾತು ಕಲಿತು ಬಂದಿ(ಲ್ಲಿ) ಸೋತೆವೆ ನಿನಗೆ ಸುಂದರಾಂಗಿ ಸೋತೆವೆ ನಿನಗೆ ಸುಂದರಾಂಗಿ 14 ಸೋತರೇನಾಯಿತು ದ್ಯೂತಪಗಡೆ ಬಿಟ್ಟು ಅ- ಜ್ಞಾತವಾಸವನೆ ಚರಿಸ್ಹೋಗೊ ಅ- ಜ್ಞಾತವಾಸವನೆ ಚರಿಸ್ಹೋಗೊ15 ತಿರುಗಿ ತಿರುಗಿ ಭಾಳ ಬಳಲಿ ಬಂದೆವೆ ನಾವು ಕರುಣವಿಲ್ಲವೆ ಕಮಲಾಕ್ಷಿ ಕರುಣವಿಲ್ಲವೆ ಕಮಲಾಕ್ಷಿ 16 ಭಾಳ ಬಳಲಿದೆವೆಂದು ಹೇಳಿಕೊಂಡರು ಕರು- ಣಾಳು ನಾನಲ್ಲ ಕರೆಯಲು ಕರು- ಣಾಳು ನಾನಲ್ಲ ಕರೆಯಲು 17 ಕಾಮನಯ್ಯನ ಕರುಣಕ್ಕೆ ಪಾತ್ರರೆ ನಾವು ಸಾಮಜಗಮನೆ ಸರಸ್ಯಾಕೆ ಸಾಮಜಗಮನೆ ಸರಸ್ಯಾಕೆ 18 ಹೇಮಮಾಣಿಕ್ಯದ ಕದವ ತೆಗೆದು ಪತಿಗಳಿಗೆ ಪ್ರೇಮದಿಂದೆರಗಿ ಕರೆದಳು ಪ್ರೇಮದಿಂದೆರಗಿ ಕರೆದಳು 19 ಆದರದಿಂದ ಕರೆಯಲರ್ಜುನ ಭೀಮ ಧರ್ಮ ಸಾದೇವ ನಕುಲ ಸಹಿತಾಗಿ ಸಾದೇವ ನಕುಲ ಸಹಿತಾಗಿ 20 ಪಂಚಪಾಂಡವರು ಬಂದು ಪರಮ ಸಂಭ್ರಮದಿಂದ ಮಂಚದ ಮ್ಯಾಲೆ ಕುಳಿತಾರೊ ಮಂಚದ ಮ್ಯಾಲೆ ಕುಳಿತಾರೊ21 ಥsÀಳಕು ಬೆಳಕಿನಿಂದ ಝಳಕು ಮಿಂಚುಗಳಂತೆ ಬಳುಕುತ ಬಾಳೆಸುಳಿಯಂತೆ ಬಳುಕುತ ಬಾಳೆಸುಳಿಯಂತೆ22 ಗಂಡರೈವರ ಮುಂದೆ ಗರುವಿಲೆ ನಿಂತಳು ದುಂಡುಮಲ್ಲಿಗೆ ಶಿರ ಬಾಗಿ 23 ಕರಕಮಲವ ಪಿಡಿದು ಕರೆದು ಸಾದೇವ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ 24 ಮುಖಬೆವರ್ವೊರೆಸುತ ನಕುಲರಾಯನು ಭಾಳ ಸುಖದಿ ಮುದ್ದಿಸಿದ ಮಡದಿಯ ಸುಖದಿ ಮುದ್ದಿಸಿದ ಮಡದಿಯ 25 ಅರ್ಜುನಾಗಲೆ ಮೋಹದಿಂದ ಮುಂಗುರುಳು ತಿದ್ದಿ ವಜ್ರದಾಭರಣನಿಡಿಸಿದ 26 ಭೀಮ ನಗುತ ಬಿಗಿದಪ್ಪಿ ದ್ರೌಪದಿಯ ಧರ್ಮ- ರಾಯನ ತೊಡೆಯಲ್ಲಿರಿಸಿದ ಧರ್ಮ- ರಾಯನ ತೊಡೆಯಲ್ಲಿರಿಸಿದ 27 ಧರ್ಮ ಮುತ್ತಿನ ಹಾರ ಪದಕ ಕೊರಳಿಗೆ ಹಾಕಿ ವರಮೋಹನಾಂಗಿ ಒಲಿಸಿದ ವರಮೋಹನಾಂಗಿ ಒಲಿಸಿದ 28|| ಸಿಂಧುಸುತನ ಮುಖಬಿಂಬ ಸೋಲಿಸುವಂಥ ಚಂದ್ರವದನೆ ಮುನಿಸ್ಯಾಕೆ ಚಂದ್ರವದನೆ ಮುನಿಸ್ಯಾಕೆ 29 ಮಾತಿನರಗಿಳಿಯೆ ನೀ ಜ್ಯೋತಿ ಮುತ್ತಿನ ಗೊಂಬೆ ಪ್ರೀತಿಪತಿಗಳ ನೀ ನೋಡೆ ಪ್ರೀತಿಪತಿಗಳ ನೀ ನೋಡೆ 30 ಪ್ರಾಣಪದಕವೆಂದು ತಿಳದೆವೈವರು ನಿನ್ನ
--------------
ಹರಪನಹಳ್ಳಿಭೀಮವ್ವ
ಪೋಗವಲ್ಲದು ಇಹ್ಯಭೋಗದಾಸೆಯು ಇನ್ನು ನಾಗಶಯನ ನೀನೆ ನೀಗಿಸು ಇದನು ಪ ಏಸು ಸಾರ್ಹುಟ್ಟ್ಹುಟ್ಟಿ ಆಶಪಾಶದಿ ಬಿದ್ದು ನಾಶ ವೊಂದುತ ಬಲು ಬೇಸತ್ತೆ ಹರಿಯೆ 1 ಹೇಯಭರಿತವಾದ ಕಾಯಸುಖಕ್ಕೆ ಮೆಚ್ಚಿ ಪಾವನಪಥ ಮರೆದು ಬವಣೆಬಟ್ಟೆಭವ 2 ಅರಿದು ತವಪದಕ್ಕೆ ಎರಗಿ ಬೇಡುವೆ ಸ್ಥಿರ ವರಮುಕ್ತಿಸುಖ ನೀಡಿ ಪೊರೆಯೊ ಶ್ರೀರಾಮ 3
--------------
ರಾಮದಾಸರು
ಪ್ರಭವನಾಮ ಸಂವತ್ಸರ ಸ್ತೋತ್ರ 145 ಪದ್ಮನಾಭ ಪದ್ಮೇಶ ಪದ್ಮಸಂಭವ ತಾತ ಮೋದಬಲ ಜ್ಞಾನಾದ್ಯಾಮಲ ಗುಣನಿಧಿಯೇ ಸತ್ಯಜಗತ್ ಸೃಷ್ಟಾದಿ ಕರ್ತನೀನೇ ಪ್ರಭವ ಸಂವತ್ಸರ ನಿಯಾಮಕನು ಸ್ವಾಮೀ ನಮಸ್ತೆ ಪ ಈ ಪ್ರಭವನಾಮ ನಿನ್ನ ನಿಯಾಮನಿಂ ಸೋಮನು ಈ ಸಂವತ್ಸರರಾಜನು ಮಂಗಳನು ಮಂತ್ರಿಃ ಸಸ್ಯ ಸೈನ್ಯಾಧಿಪರು ಶುಕ್ರ ವಿಧುಧಾನ್ಯಪತಿ ಬುದನು ರಸಪ ರವಿ ನಿರಸಗುರು ಹೀಗೆ ನಾಯಕರು ನವರು 1 ವಿಷ್ಣುನವ ಶ್ರೀನವ ನರವಾಯುನವ ಪತೀಶನÀವ ಶೇಷನವ ಈ ಬಗೆ ನವ ಮೂರ್ತಿ ಅಧಿಕಾರಿಗಳಿಂ ಸ್ಮರಣೀಯ ವರ್ಷನವನಾಯಕರೊಳೆ ವಾಯ್ವುಂತರ್ಗತನಾಗಿ ಶ್ರೀಸಹ ವಿಷ್ಣು ನೀನೆ ಇದ್ದು ಕೃತಿನಡೆಸಿ ಲೋಕವಕಾಯುತಿ2 ಸೋಮ ರಾಜನು ತನ್ನ ವಶದಿ ಸೈನ್ಯ ವೇಘಗಳಿಚ್ಚಿಹನು ಅಮಾತ್ಯತ್ಯ ಕುಜಗಿಹುದು ಶಿಷ್ಟಪಾಲನತಿದುಷ್ಟರ ತಿದ್ದುವುದಕ್ಕೆ ಅಮ್ಮಮ್ಮ ಏನೆಂಬೆ ಅಮೃತಕರ ಸೋಮದಿಯಲ್ಲಿದ್ದು ರಾಜ ರಾಜೇಶ್ವರ ನೀ ಕಮಲಾಸನಪಿತ ಪ್ರಸನ್ನ ಶ್ರೀನಿವಾಸ ಸಂತಾನಾದಿ ಭಾಗ್ಯ ವೀವಿ ಕರುಣಾಳು 3
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಂದು ನಿಲ್ಲೋ | ಕಣ್ಣ ಮುಂದೆ ಪ ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ ಇಂದಿರೆಯರಸಾ ಗೋವಿಂದ ಮುಕುಂದಾ ನೀ ಅ.ಪ. ಅರಳಿದ ಕೆಂದಾ | ವರೆಯ ಧಿಕ್ಕರಿಸುವ ಚರಣಾರವಿಂದವ | ನಿರುತ ತೋರು ನೀನು 1 ಭ್ರಮರ ಕುಂಡಲ ಮಂಡಿತ || ಮೇಲಾದ ರಾಕೇಂದು | ಮುಖವ ತೋರಿಸುತಲೀ2 ಪದುಮನೇತ್ರನೆ ನಿನ್ನ | ಸದನವೆನುತಯೆನ್ನ || ಹೃದಯದೊಳಗೆ ನಿಂತು ನಾ | ಮುದದಿ ಭಜಿಸುವಂತೇ 3 ಕರಿಯ ಮೊರೆಯ ಕೇಳಿ | ಕರುಣದಿಂ ಬಂದಂತೆ || ಕರೆದಾಗ ನಿನ್ನ ದಿವ್ಯ | ಚರಣಾವ ತೋರಿಸುತಾ4 ಅಜಭವಾದಿಗಳಿಗೆ | ನಿಜಪದವನಿತ್ತಂತೆ || ಭಜಿಪ ಭಕ್ತರಿಗೊಲಿವ | ವಿಜಯವಿಠ್ಠಲರೇಯಾ5
--------------
ವಿಜಯದಾಸ
ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಪ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ಅ.ಪ. ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ 1 ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿ- ಶ್ವಂಭರಂಬರಗ್ಗಣಿಯ ಪಡೆದ ವೃ- ತ್ತುಂಬರೇಶಾಂಬುಧಿ ಶಾಯಿ 2 ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ ನಿ- ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂ ಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ ಢಾಲುಗಳು ಒಪ್ಪಿರಲು3 ಹಂಸವಾಹನ ಕ್ರತುಧ್ವಂಸಿ ಸುಮನಸೋ ತ್ತಂಸ ಕೃಶಾನು ಪಾಪಿಗಳ ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ ಅಂಶಮಾಲಿ ಸೋಮಕಂಶಿಕಮುನಿ ಪರಮ ಹಂಸರು ಅಲ್ಲಲ್ಲಿ ನಿಂದು ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ 4 ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು 5 ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಅಂದವಾಗಿಹುದೇನೊ ದೇವ6 ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಥಾಂಗ ಪಾಣಿ ವಿಹಂಗ ಪ್ಲ- ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ 7 ತಡಮಾಡಲಾಗದೊ ಪೊಡವೀಶ ನೀನಿಂದು ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ ನಡೆವುದು ನುಡಿವುದು ಅಡಿಗಡಿಗೆ ನೀನು ಬಿಡದೆ ಒಳಗೆ ಹೊರಗಿದ್ದು ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ 8 ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ- ನ್ಹತ್ತಿಲಿ ಆಡುವ ಮರಿಯೆ ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ ಅತ್ತಿತ್ತ ಪೋಗದೆ ಇತ್ತ ಬಾರೈಯ ಎ- ನ್ಹತ್ತಿಲಿ ವೆಂಕಟದೊರೆಯ 9
--------------
ವಿಜಯದಾಸ
ಬಾಗಿಲು ತೆರೆಯುವ ಹಾಡು ನಾರಿ ಶಿರೋಮಣಿ ವಾರಿಜ ಮುಖಿಯೆ ಗಂಭೀರಳೆ ಬಾಗಿಲು ತೆರೆಯೇ |ಗಂಭೀರಳೆ ಬಾಗಿಲ ತೆರೆಯೇ ಪ ಆರು ನಿನ್ನಯ ಪೆಸರೆನಗೆ ಪೇಳದಲೆ ದ್ವಾರವ ತೆಗೆಯೆನು ನಾನು |ನಾ ದ್ವಾರವ ತೆಗೆಯೆನು ನಾನು ಅ.ಪ. ನೀರೊಳು ಸಂಚರಿಸಿ ಕ್ರೂರ ತಮನ ಕೊಂದಧೀರ ಮತ್ಸ್ಯನು ಕಾಣೆ ನಾರೀ | ನಾಧೀರ ಮತ್ಸ್ಯನು ಕಾಣೆ ನಾರೀ ||ಧೀರ ಮತ್ಸ್ಯನು ನೀನಾದರೊಳಿತು ದೊಡ್ಡವಾರಿಧಿಯೊಳಗಿರು ಹೋಗಯ್ಯ | ದೊಡ್ಡವಾರಿಧಿಯೊಳಗಿರು ಹೋಗಯ್ಯ 1 ಶರಧಿ ಕೂರ್ಮ ಕೂರ್ಮ ಕಾಣೆ ||ಗಿರಿಯ ತಾಳಿದ ಕೂರ್ಮನಾದರೊಳಿತು | ದೊಡ್ಡಮಡುವಿನೊಳಗೆ ಇರು ಹೋಗಯ್ಯ | ದೊಡ್ಡಮಡುವಿನೊಳಗೆ ಇರು ಹೋಗಯ್ಯ2 ಧರೆಯ ಕದ್ದಸುರನ ದಾಡಿಯಿಂದಲಿ ಸೀಳ್ದವರಹ ಕಾಣೆಲೆ ವಾರಿಜಾಕ್ಷಿ | ನಾವರಹ ಕಾಣೆಲೆ ವಾರಿಜಾಕ್ಷೀ ||ವರಹ ನೀನಾದರೊಳಿತು ನಡೆ ನಡೆ | ದೊಡ್ಡವನಾಂತ್ರದೊಳಗಿರು ಹೋಗಯ್ಯ || ದೊಡ್ಡವನಾಂತರದೊಳಗಿರು ಹೋಗಯ್ಯ 3 ಮೃಗ ಮೃಗ ಮೃಗ ನೀನಾದರೊಳಿತು ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ | ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ 4 ಭೂಮಿ ಈರಡಿ ಮಾಡಿ ಬಲಿಯ ಪಾತಾಳಕಿಟ್ಟವಾಮನ ಕಾಣೇ ವಾರಿಜಾಕ್ಷೀ | ನಾವಾಮನ ಕಾಣೇ ವಾರಿಜಾಕ್ಷೀ ||ವಾಮನ ನೀನಾದರೊಳಿತು ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ | ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ 5 ತಂದೆ ಆಜ್ಞೆಯ ಪೊತ್ತು ತಾಯಿ ಸೋದರನ್ನಕೊಂದವ ನಾನೇ ಕೋಮಲಾಂಗೀ | ನಾಕೊಂದವ ನಾನೇ ಕೋಮಲಾಂಗೀ ||ಕೊಂದವ ನೀನಾದರೊಳಿತು ಮುನಿವೃಂದದಲ್ಲಿ ಇರು ಹೋಗಯ್ಯಾ | ಮುನಿವೃಂದಾದಲ್ಲಿ ಇರು ಹೋಗಯ್ಯ 6 ಲಂಡ ರಾವಣನ ಶಿರವ ಚಂಡಾಡಿ ಸೀತೆ ತಂದ | ಪ್ರ-ಚಂಡ ವಿಕ್ರಮ ರಾಮ ಕಾಣೇ | ನಾ ಪ್ರ-ಚಂಡ ವಿಕ್ರಮ ರಾಮ ಕಾಣೇ ||ಪ್ರಚಂಡ ವಿಕ್ರಮನಾದರೊಳಿತು ಕೋತಿಹಿಂಡುಗಳೊಳಗಿರು ಹೋಗಯ್ಯ | ಕೋತಿಹಿಂಡುಗಳೊಳಗಿರು ಹೋಗಯ್ಯ 7 ಮಧುರಾಪುರದಿ ಪುಟ್ಟಿ ಮಾವ ಕಂಸನ ಕೊಂದಚದುರ ಕಾಣೆಲೆ ಶಾಮಲಾಂಗೀ | ನಾಚದುರ ಕಾಣಲೆ ಶಾಮಲಾಂಗೀ ||ಚದುರ ನೀನಾದರೊಳಿತು ನಡೆ ನಡೆ ಗೋಪೇ-ರಧರ ಚುಂಬಿಸುತಿರು ಹೋಗಯ್ಯ | ಗೋಪೇ-ರಧರ ಚುಂಬಿಸುತಿರು ಹೋಗಯ್ಯ 8 ಶುದ್ಧ ಖಳನು ಆಗಿ ವ್ರತವನಳಿದು ಬಂದಬೌದ್ಧ ಕಾಣಲೇ ಮಂದಗಮನೇ | ನಾಬೌದ್ಧ ಕಾಣಲೇ ಮಂದಗಮನೇ ||ಬೌದ್ಧನು ನೀನಾದರೊಳಿತು ನಡೆ ನಡೆ ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ | ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ 9 ತುರಗವನೇರಿ ಕಲಿಯ ಕಡಿದು ಶಾಂತನ ಸಹೋ-ದರಗೆ ರಾಜ್ಯವನಿತ್ತೆ ಕಾಣೇ | ಸಹೋ-ದರಗೆ ರಾಜ್ಯವನಿತ್ತೆ ಕಾಣೇ ||ಪರಮ ಪುರುಷನಹುದೋ ರಾಹುತರಿರುವಸ್ಥಳದಲ್ಲಿರು ಹೋಗಯ್ಯ | ನೀರಾಹುತರಿರುವ ಸ್ಥಳದಲ್ಲಿರು ಹೋಗಯ್ಯ 10 ಕನ್ಯಾಮಣಿಯೆ ಕೋಮಲೆಯೇ ಗುಣಪೂರ್ಣ ಮೋ-ಹನ್ನ ವಿಠಲ ರಾಯ ಕಾಣೆ | ನಾ ಮೋ-ಹನ್ನ ವಿಠಲ ರಾಯ ಕಾಣೆ ||ಎನ್ನ ಅಪರಾಧ ಕ್ಷಮಿಸಬೇಕು ಎನುತಲಿಚೆನ್ನಾಗಿ ಪಾದಕ್ಕೆರಗಿದಳು ದೇವಿ 11
--------------
ಮೋಹನದಾಸರು
ಬಿಚ್ಚದಿರು.ಬಿಚ್ಚದಿರು ಮುಚ್ಚು ಈ ಬಾಯಿ ಬಿಚ್ಚಿದ ಬಳಿಕದಕೆ ಎಚ್ಚರವೆ ಇಲ್ಲ ಪ ಅಲ್ಲ ಅಹುದೆಂಬುವುದು ಎಳ್ಳಷ್ಟು ಇದಕಿಲ್ಲ ಸುಳ್ಳುಹೇಳುವುದೆಲೊ ಅಳತೆಯೆ ಇಲ್ಲ ಜೊಳ್ಳು ಮಾತುಗಳ್ಹೇಳಿ ಮಳ್ಳು ಮಾಡಿ ಜನರಲ್ಲಿ ಬಲ್ಲವೆನಿಸಿಕೊಂಬ ಸೊಲ್ಲೆ ಹುಡುಕುವುದು 1 ಸಲ್ಲದೀ ಆತ್ಮದ ಇಲ್ಲದ ಸುದ್ದಿಯನು ಎಲ್ಲಿತನಕಲು ಬೇಸರಿಲ್ಲದ್ಹೇಳುವುದು ಅಲ್ಲ ಅಹುದೆಂಬುದನು ಎಲ್ಲಬಲ್ಲಂಥ ಸಿರಿ ನಲ್ಲನ ಪಾದಕ್ಕೆ ಅಲ್ಲೆನಿಸುತಿಹ್ಯದು 2 ಮುಚ್ಚುಮರೆಯಿದಕಿಲ್ಲ ಎಚ್ಚರಮೊದಲಿಲ್ಲ ಕಿಚ್ಚಿನೋಳ್ಬಿದ್ಹೋಗ್ವ ನೆಚ್ಚಿಕಿಲ್ಲ ಕಾಯ ಅಚ್ಯುತ ಶ್ರೀರಾಮನಂ ಮುಚ್ಚಿಭಜಿಸಿ ಭವದುರುಲು ಬಿಚ್ಚಿಸಿಕೊಳ್ಳೊ 3
--------------
ರಾಮದಾಸರು
ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1 ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2 ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3 ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ ನಿರಯ ದುರಾತ್ಮಗಿಲ್ಲ ಕರವ ಮುಗಿದು ಒಂದು ವರ ಬೇಡುವೆ 4 ಭಾಗವತರ ಸಹವಾಸ ಭಾಗವತರ ಕಥಾಗುಣ ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5 ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ ನೀನೊಲಿದು ಎನ್ನ ಮನಕೆ ಆನಂದ ತೋರೋ 6 ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ ರಜನಿಚರ ವಿನಾಶಾ ಸುಜನಮಾನಸಹಂಸ ರಜದೂರ ಮಂದಹಾಸಾ ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
--------------
ವಿಜಯದಾಸ
ಬೊಮ್ಮಗೆ ಶರಣಿಂಬೆವಮ್ಮ ನಮ್ಮ ಗುರು ಎಂದುಹಮ್ಮಿನ ಸುಭದ್ರಾ ದೇವಿಗೆ ದಮ್ಮಯ್ಯ ಎನಲೆಂದು ಪ. ವಾಚಾಭಿಮಾನಿ ನಿಜ ಬುದ್ಧಿ ಸೂಚಿಸು ನಮಗೆಂದುನಾಚಿಸಿ ದ್ರೌಪತಿಯ ಆಣೆ ಅಚೆ-ಲಿಟ್ಟೆವೆಂದು1 ಮಂದ ಜಾಸನ ಜಗಕೆ ನೀವು ತಂದೆ ಹೌದೆಂದುನಿಂದಿಸಿ ಸುಭದ್ರೆ ಪಂಥ ಹಿಂದಕ್ಕೆ ಹಾಕೆವೆಂದು2 ಸರಸಿಜಾಸನ ರಾಮೇಶನ ಅರಸಿಯರ ಗೆಲಿಸೆಂದುಸರಸದಿ ಸುಭದ್ರಾ ಪಂಥ ಬಿರುಸು ಮಾಡೆವೆಂದು 3
--------------
ಗಲಗಲಿಅವ್ವನವರು
ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ ಹ್ಯಾಗೆ ಮಾಡುವೊಣುದ್ಧವ ಭಾಗವತಪ್ರಿಯಗಿನ್ನು ಬಾಗಿ ನಮಿಸುತ ನಾವು ಉದ್ಧವ ಪ ಗೋಕುಲವಾಸ ಬಿಟ್ಟ್ಯಾಕೆ ತೆರಳಿದ ಸ್ವಾಮಿ ಈ ಕಾರ್ಯವನು ತಿಳುಹಿಸೊ ಶ್ರೀಕರ ಕಮಲಾರ್ಚಿತ ಚರಣಧ್ವಜವಜ್ರ- ರೇಖಪಾದವ ಚಲಿಸಿದ ಪಾಕಶಾಸನಪ್ರಿಯನು ಪರಮ ನಿರ್ದಯ ಮಾಡಿ ಉದ್ಧವ 1 ಯಂತ್ರಮಾಯದಲಿ ಶ್ರೀಕಾಂತನೊಲಿಸುವುದಕ್ಕೆ ಮಂತ್ರವನು ಮಾಡರಿಯೆವೊ ಅಂತರಂಗದಲಿ ಅನಂತಗುಣ ಸ್ತುತಿಸಲೇ- ಕಾಂತ ಭಕ್ತರಲ್ಲವೊ ನಿಂತು ನಿತ್ಯಾನಂದಮೂರ್ತಿಯ ನೋಡದಲೆ ಉದ್ಧವ 2 ಅತಿಕ್ರೂರನೆನಿಸುವಕ್ರೂರ ಬಂದು ನಮಗ- ಹಿತಮಾಡಿ ಪೋದನಲ್ಲೊ ಮತಿಹೀನರಾಗ್ಹರಿಯ ರಥವ ನಿಲಿಸದಲೆ ಮುಂ- ದೆತನ (ಯತ್ನ ?) ಮರಿಯದೆ ನಿಂತೆವೊ ಪೃಥಿವಿ ಒಳಗಿಂಥ ಗೋಪಿಕಾಸ್ತ್ರೀಯರೆಂದು ಭಾಳಪ- ಉದ್ಧವ 3 ಸಕ್ಕರೆಯಂಥ ಸವಿಮಾತನಾಡುತ ನಮಗೆ ದಕ್ಕಿದಕ್ಕದಲ್ಹೋದನೊ ಮತ್ತೇನು ಪೇಳೋಣ ಮಂದಭಾಗ್ಯರು ಹರಿಯ ದಕ್ಕಿಸಿಕೊಳ್ಳದ್ಹೋದೆವೊ ಸಿಕ್ಕರೆ ಧನವು ಶತಸಾವಿರ ಕೊಪ್ಪರಿಗೆ ಅಷ್ಟ- ಉದ್ಧವ 4 ಮಡದಿಯರು ಕೇಳಿಗೆ ಮಧುರಾಪಟ್ಟಣದಂಥ ಚೆದುರೆಯರು ನಾವಲ್ಲವೊ ಮದನನಾಟಕೆ ಮದಗಜಗಮನೇರಿಗಿನ್ನು ಮುದದಿ ಮರುಳಾಗಿಪ್ಪನೊ ವಿಧಿ ಬರೆದನೇನೆಂದರೀ ನಮ್ಮ ಪಣೆಯಲ್ಲಿ ಉದ್ಧವ 5 ಮಲ್ಲರನೆ ಮಡುಹಿದ್ದ ಮಾವನ್ವೈರಿಯು ನಮ್ಮ ಕೊಲ್ಲಿ ಪೋದಂತಾಯಿತೊ ಸಲ್ಲ ನಡತೆಯ ಸೊಟ್ಟಕುಬ್ಜೆಗೆ ಕಡೆಯು ನಾ- ವಲ್ಲವೆಂದವಗೆ ಪೇಳೊ ನಿಲ್ಲದ್ಹೋಗ್ಹಿಂದಕೆ ಸುಳ್ಳಲ್ಲೊಂದು ಬೆರೆಸದಲೆ ಉದ್ಧವ 6 ಕಲ್ಲಾಗದೀವಿಧಿಯ ಕಾಮನಪಿತನಗಲಿ ಸೊಲ್ಲು ಸೊಲ್ಲಿಗೆ ಬಳಲ್ದೆವೊ ಮಲ್ಲಿಗ್ವೊಣಗಿದ ದಾರದಂತೆ ಗೋವ್ರಜಮೂಲೆ- ಯಲ್ಲಿ ನಾವಿರಲಾರೆವೊ ಎಲ್ಲಿ ಬಂದೊದಗಿತೀ ಬಿಲ್ಲ ್ಹಬ್ಬನಮಗೆ ಭೀ- ಉದ್ಧವ 7
--------------
ಹರಪನಹಳ್ಳಿಭೀಮವ್ವ