ಒಟ್ಟು 4256 ಕಡೆಗಳಲ್ಲಿ , 116 ದಾಸರು , 2832 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು ಪೂರ್ಣಗೊಳಿಸಭಿಲಾಷೆಯ ಪ. ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ. ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ- ಪೂರ್ಣ ಗುಣಗಣನಿಲಯನೆ ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ ಪೂರ್ಣಭೋಧರ ವರದನೆ ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ ಪಾದ ನೀಡೋ 1 ಚಕೋರ ಪೂರ್ಣಚಂದ್ರನೆ ಭಕ್ತಿ ಪೂರ್ಣ ಶರಧಿಗೆ ಚಂದ್ರನೆ ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ ಪೂರ್ಣಚಂದ್ರನೆ ತಾಪಕೆ ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2 ಪೂರ್ಣಚಂದ್ರನ ವಂಶ ಪಾವನವಗೈಯಲು ಪೂರ್ಣ ಯದುಕುಲದಿ ಜನಿಸಿ ಪೂರ್ಣ ಯುದ್ಧದಲಿ ಗೆಲಿಸಿ ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3 ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು ಪೂರ್ಣಗೊಳಿಸಿದೆ ಸೃಷ್ಟಿಯ ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ ಪೂರ್ಣ ಭಕ್ತರ ರಕ್ಷಕ ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ 4 ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು ಪೂರ್ಣಬೋಧರು ನುಡಿವರೊ ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ ಪೂರ್ಣ ಪದ ಪಡೆದಿರುವರೊ ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
--------------
ಅಂಬಾಬಾಯಿ
ಪೆಂಡಿರಿಬ್ಬರನಾಳ್ವಗುಂಟೆ ಸುಖ ಕರುಣಿಸೈ ಪುಂಡರೀಕಾಕ್ಷ ತವ ಭಕ್ತಿವಧು ಒಬ್ಬಳನೆ ಪ ನರ ಬಾ ನೀ ಯೆಂದೆಳೆವಳಾಸೆ ಹೃದಯೇಶನಂ ಬರಸೆಳೆವಳಾ ಲಜ್ಜೆ ತನ್ನ ಕಡೆಗೆ ಹರಿಹರಿ ಡೋಲಾಯಮಾನವಾದುದು ಚಿತ್ತ ಸ್ಥಿರವ ಕರುಣಿಸು ಲಕ್ಷ್ಮಿಯರಸ ಶ್ರೀಕೃಷ್ಣಾ 1 ನಾಲಿಗೆಗೆ ದೈನ್ಯಮಂ ತಹಳಾಶೆ ಆ ಲಜ್ಜೆ ತಾಳಿಗೆಯನೊಣಗಿಸೀ ನುಡಿಯಲೀಯಳೋ ಪೇಳಲೇನುಭಯಸಂಕಟ ಸೀಗೆಯೊಳಗಿರ್ದ ಬಾಳೆಯಾದುದು ಚಿತ್ತ ಪರಿಹರಿಸು ಕೃಷ್ಣಾ 2 ಆಶೆಯಾ ಸವತಿಯಂ ಕೆಡಿಸಬಗೆವಳು ಲಜ್ಜೆ ಆ ಸವತಿಯಂ ಕೆಡಿಸಬಗೆವಳೆಂತೊ ಗಾಸಿಯಾದುದು ಚಿತ್ತವಿಬ್ಬರಿಂ ವೈಕುಂಠ ಕೇಶವಾ ಮನದ ಸಂಸಾರವಂ ಬಿಡಿಸಯ್ಯ 3
--------------
ಬೇಲೂರು ವೈಕುಂಠದಾಸರು
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಪ ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1 ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವÀ ಮೆಟ್ಟು 2 ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು 3 ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು 4 ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
--------------
ವಿಜಯದಾಸ
ಪೊರೆಯುವಳು ದೇವಿ ಪೊರೆಯುವಳು|| ಕರುಣದಿಂದ ನಮ್ಮ ಪೊರೆಯುವಳು ಪ ಶರಣರಿಗೊಲಿದವರಿಷ್ಟವ ಸಲಿಸುವ| ಪರಮಪಾವನೆ ದೇವಿ ಪೊರೆಯುವಳು ಅ ಪ ತೋಷದಿಂದಲವಳಾಶ್ರಿತ ಜನರಭಿ| ಲಾಷೆಯ ಸಲಿಸುತ ಪೊರೆಯುವಳು|| ವಾಸವಾದಿ ಸುರವಂದಿತೆ ಶ್ರೀ ಪರ| ಮೇಶ್ವರಿದೇವಿಯು ಪೊರೆಯುವಳು 1 ಮಹಿಷಾಸುರನನು ಮಹಿಯೊಳು ಕೆಡಹಿದ| ಮಹಿಷಮರ್ದಿನಿದೇವಿ ಪೊರೆಯುವಳು|| ಮಹಿಮೆಯದೋರುತ ಖಳ ಧೂಮ್ರಾಕ್ಷನ| ದಹಿಸುತ ಮಹಿಯನು ಪೊರೆದವಳು 2 ಚಂಡ ಮುಂಡ ಖಳ ತಂಡವಳಿಸಿ ಬ್ರ | ಹ್ಮಾಂಡದ ಭಾರವ ಕಳೆದವಳು|| ರುಂಡವ ತರಿಯುತ ಚೆಂಡಾಡಿದ ಶ್ರೀ| ಚಾಮುಂಡೇಶ್ವರಿ ಪೊರೆಯುವಳು 3 ಭಕ್ತರ ಪೊರೆಯಲು ರಕ್ತಬೀಜಾಖ್ಯನ| ರಕ್ತ ಪಾನÀವನು ಗೈದವಳು|| ಯುಕ್ತಿಯಿಂದಲಾ ನಕ್ತಂಚರನನು| ಶಕ್ತಿಸ್ವರೂಪಿಣಿ ತರಿದವಳು 4 ಶುಂಭ ನಿಶುಂಭರ ವಧಿಸಿದ ಶ್ರೀ ಜಗ| ದಂಬಾದೇವಿಯು ಪೊರೆಯುವಳು|| ಅಂಬುಜಲೋಚನೆ ಶಂಭುಮನೋಹರೆ | ಇಂಬುಗೊಡುತ ನಮ್ಮ ಪೊರೆಯುವಳು 5 ದುರುಳರ ಬಾಧೆಗೆ ಬೆದರುತ ಸುರತತಿ | ಮೊರೆಯಿಡಲಭಯವನಿತ್ತವಳು|| ಅರುಣಾಸುರನ ಸಂಹರಿಸುತ ನಂದಿನಿ| ನದಿಯೊಳು ಶರಣರಿಗೊಲಿದವಳು 6 ಪರಿಪರಿ ವಿಧದಲಿ ಧರಣಿಯ ಭಾರವ ಪರಿಹರಿಸುತಲಿ ಪೊರೆದವಳು|| ಪರಮಕೃಪಾಕರಿ ಶ್ರೀ ಜಗದೀಶ್ವರಿ ಶರಣರಾದ ನಮ್ಮ ಪೊರೆಯುವಳು 7 ಶಂಕರಿ ಶುಭಕರಿ ಕಿಂಕರಪ್ರಿಯಕರಿ|| ಪಂಕಜಲೋಚನೆ ಪೊರೆಯುವಳು|| ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ| ಕಿಂಕರರೆಮ್ಮನು ಪೊರೆಯುವಳು 8 ಕೈಟಭಾದಿ ಖಳಸಂಕುಲವಳಿಸಿದ| ನಿಟಿಲಾಂಬಕಿ ಶಿವೆ ಪೊರೆಯುವಳು|| ಜಟಾಮಕುಟ ಸುರತಟನೀಧರಸತಿ| ಕಟಿಲಪುರೇಶ್ವರಿ ಪೊರೆಯುವಳು9
--------------
ವೆಂಕಟ್‍ರಾವ್
ಪೋಗದಭಿಮಾನವೇಗೈವೆನಕಟಾಆಗದಾನಂದಪದ ಇದರಿಂದಲಕಟಾ ಪತನುವೆನ್ನದೆಂದು ಪೋಸಿ ಪೊರೆದಫಲವೇನುಧನವೆನ್ನದೆಂದು ಸಾಧಿಸಿದುದೇನುಮನವೆನ್ನದೆಂದು ಮತಿಯನು ಪಡೆದ ಬಗೆಯೇನುಅನುಕೂಲವಾಗಿ ಬಾಳಿಸಿದುದೆ ತಾನು 1ವನಿತೆಯೆನ್ನವಳೆಂದು ಒಡಲಾದ ಬಗೆಯೇನುತನುಜರೆನ್ನವರೆಂದು ತಡಿಗಂಡುದೇನುಮನುಜರೆನ್ನವರೆಂದು ಮೃತ್ಯುತೊಲಗುವದೇನುಇನಿತು 'ಧದಲಿ ಸುಖವ ಕಾಣದೆುನ್ನು 2ಇದರಿಂದ ಬಂತು ಋಣಬಾಧೆ ಮಾಸಿತು ಬೋಧೆಒದಗಿದಾ 'ರತಿಯನು ನೀಗಿ ನಿಂದೆಮದ ಹೆಚ್ಚಿ ಮೈಮರೆದೆ ಮೋಹಕ್ಕೆ ಒಳಗಾದೆಎದೆಯಲಿ 'ಷಯಸುಖಕಾಗಿ ಮತಿದೊರೆದೆ 3ಆವ ಜನ್ಮಾಂತರದ ಪೈಶಾಚವೋ ಕಾಣೆಆವ ಮಾಂತ್ರಿಕನಿದನು ಬಿಡಿಸುವನೊ ಕಾಣೆಆವ ವ್ರತನಿಯಮಗಳಿಗಂಜುವುದೊ ನಾ ಕಾಣೆಆವ ಜಪಗೈದಿದನು ಕಳೆಯಲೊ ಕಾಣೆ 4ಕರುಣಿ ಚಿಕನಾಗಪುರವರನಿಲಯ ಎನ್ನೊಡೆಯಗುರುವಾಸುದೇವಾರ್ಯ ಗೂಢಚರ್ಯಮರೆಯೊಕ್ಕೆ ನಿನ್ನಡಿಯ ಮಾನಪೈಶಾಚಭಯಹರಿವಂತೆ ಮಾಡು ನ'ುಸಿದೆನು ದಮ್ಮಯ್ಯ 5
--------------
ವೆಂಕಟದಾಸರು
ಪೋಗುವೆನೆ ರಂಗ ಪೋಗುವೆನೆ ಕೃಷ್ಣ ಈಗ ಕರೆ ಬಂದಿದೆ ಮಧುರಾ ಪುರಕ್ಕೆ ಪ. ಮದಿಸಿದ ಕಂಸನು ಚದುರ ಅಕ್ರೂರನ ಮುದದಿ ಕಳಿಸಿದ ಮಧುರ ವೇಣಿಯೆ ಕೇಳೆ 1 ಬಿಲ್ಲು ಹಬ್ಬವಂತೆ ಮಲ್ಲರ ಗೆಲ್ಲಬೇಕಂತೆ ಸಖಿ ಪುಲ್ಲಲೋಚನ ಕೃಷ್ಣಾ ಇಲ್ಲಿ ನÀಮ್ಮನು ಬಿಟ್ಟು 2 ಕಂಗೊಳಿಸುವ ಬೆಳದಿಂಗಳ ಸೊಗವಿಲಿ ಪೊಂಗೊಳಲೂದೆಮ್ಮಂಗಕೆÉ ಹರುಷವಿತ್ತ3 ನಲಿವಿಲಿ ಮೀಸಲು ಬೆಣ್ಣೆಯನಿಡಲು ನಿಲುಕಿತ ಮೆದ್ದೆಮ್ಮ ಒಲವಿತ್ತುದ್ದರಿಸಿದ 4 ಗೋಕುಲವೇತಕೆ ಆ ಕಮಲಾಕ್ಷನಾ ಕಟಾಕ್ಷವಿಲ್ಲದೀಪರಿ ಸಹಿಪುದೆ 5 ಯಮುನೆಯ ತೀರದೊಳ್ ಎಮ್ಮಯ ವಸ್ತ್ರವ ಕ್ಷಮೆಯಿಂದಿತ್ತ ಕಮಲನಯನ ಕೃಷ್ಣ 6 ರಥಬಂದಿದೆ ನೋಡೆ ಅತುಳ ಮಹಿಮಗೆಂದು ಜತೆಯೊಳು ಬಲರಾಮ ಹಿತದಿ ಅಕ್ರೂರ ಸಹ 7 ಬಿಟ್ಟಿರಲಾರೆವೆ ಪುಟ್ಟ ಕೃಷ್ಣನ ಪಾದ ದಿಟ್ಟ ಶ್ರೀ ಶ್ರೀನಿವಾಸಗಿಷ್ಟವಂತೆ ಕೇಳೆ 8 ಭಕ್ತವತ್ಸಲನೆಮ್ಮ ಭರ್ತನೊಳನುರಾಗವಿತ್ತು ಬಾಳಿರೆಂದು ಇತ್ತು ವಚನವನ್ನು 9
--------------
ಸರಸ್ವತಿ ಬಾಯಿ
ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ ಭೂತಳದೊಳಜಾತನಾಗಿ ಮೆರೆವ ಪ ಏಕಾರಾರ್ಣವದೊಳು ಎಲ್ಲರ ವೊಡಲೊಳು ಸಾಕಿಕೊಳ್ಳುತ ಪೊಂದಲಿಟ್ಟುಕೊಂಡು ಲೋಕನಾಯಕ ಹರಿವಟದೆಲಿಯ ಮೇಲೆ ಮಾಕಾಂತಿಯ ಕೂಡ ಮಲಗಿದ ಗುಣನಿಧಿ 1 ಜಿನಮತದಲಿ ಪುಟ್ಟಿ ದಾನವರು ಸ ಜ್ಜನಕರ್ಮ ಮಾಡುತಲಿರೆ ವೇಗಾ ಅನಿಮಿಷರಾಡಿದ ಮಾತಿಗೆ ದೈತ್ಯನ ಮನವಂಚಿಸಿ ಉಪದೇಶ ಮಾಡಿದ ಹರಿ2 ನಂದ ವ್ರಜದಲ್ಲಿ ಪೂತಿನಿ ಶಕಟನ್ನ ಗಜ ಮಲ್ಲರ ಸವೆದು ಅಂದವಾಗಿ ಮೆರೆದ ವಿಜಯವಿಠ್ಠಲರೇಯಅಂದು ದೇವಕಿ ಬಾಲಕನಾಗಿ ತೋರಿದಾ 3
--------------
ವಿಜಯದಾಸ
ಪೋಷಿಸೆನ್ನ ವೆಂಕಟೇಶ ಶ್ರೀಶ ಶ್ರೀನಿವಾಸ ಶೇಷಗಿರಿನಿಲಯ ಶ್ರೀ ಇಂದಿರೇಶ ಈಶ ಪ ಹೇಸಿಯಿವನೆಂದೆನುತ ದೂಷಣೆಯ ಮಾಡದಿರು ದೋಷದೂರನೆ ನಿನ್ನ ದಾಸ ನಾನಭವ ದಾಸಜನರ ಮನದುಲ್ಲಾಸದೇವರು ನೀನು ದಾಸನ ಆಸೆಯನು ಪೂರೈಸಿ ಸಲಹಯ್ಯ 1 ಕುನ್ನಿಕುಲದಲಿ ಜನಿಸಿ ಬನ್ನಬಡಲಾರದೆ ಉನ್ನತೋನ್ನತಮಹಿಮ ನಿನ್ನ ಬೆನ್ನು ಬಿದ್ದೆ ಭಿನ್ನತಾರದೆ ಎನಗೆ ನಿನ್ನ ದರ್ಶನವಿತ್ತು ಉನ್ನತಮತಿ ನೀಡಿ ಮನ್ನಿಸಿ ಸಲಹು 2 ನಿತ್ಯ ತವ ಶರಣಜನರುಂಡು ಮಿಕ್ಕ ಪರಮಪ್ರಸಾದ ಶರಣೆಂದು ಚರಣಕ್ಕೆ ಮರೆವೊಕ್ಕೆ ನೆರೆನಂಬಿ ತಿರುಪತೀಶನೆ ಭಕ್ತ ಕರುಣಿ ಶ್ರೀರಾಮ 3
--------------
ರಾಮದಾಸರು
ಪೌರಾಣಿಕ ಕಥನ ಸೃಷ್ಟಿಯಲಿ ಕಡು ದುಷ್ಟ ರಾವಣ ಕಟ್ಟಳೆಯ ಕಂಗೆಡಿಸಲು ಅಷ್ಟರೊಳು ಭಯಪಟ್ಟು ದಿವಿಜರು ಒಟ್ಟುಗೂಡುತ ಸ್ತುತಿಸಲು ಥಟ್ಟನೆ ದಯವಿಟ್ಟು ದಶರಥಪಟ್ಟಮಹಿಷಿಯೊಳುದಿಸಲು ದಿಟ್ಟ ಕೌಶಿಕನಿಷ್ಟಿಯನು ಕೈಗೊಟ್ಟು ಸಲಹಿದ ಶ್ರೇಷ್ಠಧನುಜಘರಟ್ಟಗಾರತಿಯ ಬೆಳಗಿದರು1 ಪಾದರಜದಿಂ ಪೊರೆಯುತ ಸಾಧಿಸಿದ ಧನು ಭೇದಿಸುತ ಹಿತಳಾದ ಸೀತೆಯ ಒಲಿಸುತ ಕ್ರೋಧದಿಂದೆದುರಾದ ಪರಶುವನಾ ದಯಾನಿಧಿ ಗೆಲ್ಲುತ ಸಾಧುಮಾರ್ಗವಿನೋದ ಸೀತಾಹ್ಲಾದ ಪಾಪವಿರೋಧ ದಾನವಸೂದನಗಾರತಿಯ ಬೆಳಗಿದರು 2 ಚಿಕ್ಕ ತಾಯಿಯ ಸೊಕ್ಕುನುಡಿಗತಿಸೌಖ್ಯವನು ಹೋಗಾಡುತ ಘಕ್ಕನನುಜನ ನಿಜಸತಿಯತಾ ಸೌಖ್ಯದಿಂದೊಡಗೂಡುತ ವನಕ್ಕೆ ತಾ ಸಂಚರಿಸುತ ಮಿಕ್ಕಿ ಬಂದಾ ರಕ್ಕಸಿಯ ಕುಚದಿಕ್ಕೆಲವ ಖಂಡಿಸಿದ ಪ್ರಭುಗೆ ಮಾಣಿಕ್ಯದಾರತಿಯ ಬೆಳಗಿದರು 3 ಧೂರ್ತ ಖರತ್ರಿಶಿರಾದಿ ದಾನವ ಮೊತ್ತವನು ಸಂಹರಿಸುತ ದೈತ್ಯಮಾಯಾವೃತ್ತಿಮೃಗವನು ಮತ್ತಕಾಶಿನಿ ಬೇಡುತ ಸತ್ತ್ವನಿಧಿ ಬೆನ್ನಟ್ಟಿ ಸೀತೆಯ ದೈತ್ಯಪತಿ ಕೊಂಡೋಡುತ ಮತ್ತೆ ಕಾಣದೆ ಕೋಪದಿಂದರಸುತ್ತ ಬಂದ ಮಹಾತ್ಮ ರಾಮಗೆ ಮುತ್ತಿನಾರತಿಯ ಬೆಳಗಿದರು 4 ತೋಯಜಾಕ್ಷಿಯ ಸುದ್ದಿ ಪೇಳ್ದ ಜಟಾಯುವಿಗೆ ಗತಿ ತೋರುತ ವಾಯುತನುಜಸಹಾಯದಿಂ ಕಪಿರಾಯ ಸಖ್ಯವ ಮಾಡುತ ನ್ಯಾಯಗರ್ಭಿತ ಸಾಯಕದಿ ಮಹಕಾಯ ವಾಲಿಯ ಕೊಲ್ಲುತ ಪ್ರಾಯಶದಿ ಗಿರಿಯೊಡ್ಡಿ ಶರಧಿಗುಪಾಯದಿಂ ಬಂಧಿಸಿದ ಜಾನಕೀಪ್ರಿಯಗಾರತಿಯ ಬೆಳಗಿದರು 5 ಮನವಿವೇಕವ ನೆನೆದು ಬಂದಾ ಧನುಜಪತಿ ಸೋದರನಿಗೆ ಇನಶಶಿಗಳುಳ್ಳನಕ ಲಂಕಾವನಿಯ ಪಾಲಿಸುತ ಮಿಗೆ ರಣದಿ ರಾವಣಕುಂಭಕರ್ಣರ ಹನನಗೈಯುತ ಲೋಕಕೆ ಸೀತೆಯ ವಿನಯ ಗೈದಗೆ ಮೇರುಗಿರಿನಿಭ ಇಂದ್ರಪುಷ್ಪಕಾವೇರಿ ತಾ ಸಾಕೇತಕೆ ಸೇರಿ ಸಾನುಜರಿಂದ ಧರ್ಮದ ಮೇರೆದಪ್ಪದೆ ಸುಜನಕೆ ಸಾರಸಂಪದವಿತ್ತು ಲೋಕೋದ್ಧಾರನಾಗುತ್ತಖಿಳಕೆ ನೀರಜೇಕ್ಷಣ ಕರುಣಪಾರಾವಾರ ಶರಧೀಗಂಭೀರ ಲಕ್ಷುಮೀ ನಾರಾಯಣ ರೂಪ ಜಯ ಜಯ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಕಾಶರೂಪಿ ವಿಠಲಾ ತೋಕನ್ನ ಸಲಹೋ ಪ ಅಕಳಂಕ ಚಾರಿತ್ರ | ನಿಖಿಲಾಗಮಸುವೇದ್ಯಪ್ರಕಟಿಸಿವನಲಿ ಜ್ಞಾನದಂಕುರವ ಹರಿಯೇ ಅ.ಪ. ಮಧ್ವಮತದಲಿ ದೀಕ್ಷೆ | ಶುದ್ಧ ಭಕುತಿ ಜ್ಞಾನಸಿದ್ದಿಸುವುದಿವನಲ್ಲಿ | ಮಧ್ವಾಂತರಾತ್ಮಾವಿದ್ಯೆಸಂಪದದಲ್ಲಿ | ಸ್ಪರ್ಧಿಸುವ ಮನಕಾಗಿಬುದ್ಧಿ ಪ್ರೇರಿಸು ಹರಿಯೆ ಸಿದ್ಧಮುನಿವಂದ್ಯಾ 1 ಕಾಮಾದಿ ಷಡ್ವೈರಿ | ಸ್ತೋಮವನೆ ಕಳೆಯುತ್ತನೇಮನಿಷ್ಠೆಯಲಿ ಮನ | ಕಾಮನೆಯ ಕೊಟ್ಟೂಪ್ರೇಮದಲಿ ಹರಿಗುರೂ | ಸ್ವಾಮಿ ಕಾರ್ಯವಗೈಸಿಕಾಮಿತಾರ್ಥದನಾಗೊ | ಕಾಮ ಪಿತ ಹರಿಯೇ 2 ಅಂಶದಲಿ ತನುವ್ಯಾಪ್ತಿ | ಸಾಂಶದೇವಾದಿಗಳುಸಂಸಾರ ನಿರ್ವಹಣೆ ಮಾಡಿಮಾಡಿಸುತಾಕಂಸಾರಿ ಪೂಜೆ ಎನೆ | ಶಂಸಿಸುತ ಯೋಗ್ಯರಲಿವಂಶ ಉದ್ಧರವೆಂಬ | ಅಂಶವನೆ ತಿಳಿಸೋ 3 ಕಾಕು ಜನಗಳ ಸಂಗ | ಓಕರಿಸುವಂತೆಸಗಿನೀಕೊಟ್ಟು ಸತ್ಸಂಗ | ಪ್ರಾಕ್ಕರ್ಮ ಕಳೆಯೋಲೌಕಿಕದಿ ಸತ್ಕೀರ್ತಿ | ನೀ ಕರುಣಿಸಿವನಲ್ಲಿಏಕಮೇವನೆ ಇದನೆ | ನಾ ಕೇಳ್ವೆ ಹರಿಯೇ 4 ಜೀವರಂತರ್ಯಾಮಿ | ಜೀವಕರ್ಮವವೆಸಗಿಆವಫಲ ದ್ವಂದ್ವಗಳ | ಜೀವಕರುಣಿಸುವನೇಭಾವುಕರ ಪಾಲಗುರು | ಗೋವಿಂದ ವಿಠ್ಠಲನೆಕಾವುದಿವನನು ಎಂಬ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ. ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು ಅಕಳಂಕ ನಾಮರೂಪದಲಿ ಕರೆಸಿ ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1 ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ ಸುರರು ದೀನರುದ್ಧರಿಸುವುದು ದಯದಿಂದ ನಿರುತಾ 2 ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ ಶರ್ವಾದಿಸುರರು ಪ್ರಾರ್ಥಿಸುತಿಪ್ಪರು ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ ಗರ್ವಿಸಿದ ದಾನವರ ಗಣವ ಸಂಹರಿಪೆ 3 ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4 ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ ಭೀಷಣಗೆ ಲಂಕಾಧಿಪತ್ಯವಿತ್ತೇ ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5
--------------
ಜಗನ್ನಾಥದಾಸರು
ಪ್ರಸನ್ನ ರಾಮಾಯಣ ಸುಂದರಕಾಂಡ ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ಜಯ ಜಯ ಜಯ ರಾಮ ಸ್ವರತ ಆಹ ಜಯ ಸೀತಾರಮಣ ನೀ ಭಯಬಂಧ ಮೋಚಕ ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ ಶಾಶ್ವತ ಸುಗುಣಾಬ್ಧಿ ರಾಮ ಸವೇಶ್ವರನೆ ಬಲವೀರ್ಯ ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ ಸಾಗರ ಸರ್ವವು ಕಲಕಿ ಓಡಿತು ಕೂಡ 1 ಹಿಂದೆ ಪರ್ವತಗಳ ಪಕ್ಷ ಹನನ ಕಾಲದಿ ವಾಯು ತನ್ನ ಹಿತದಿ ರಕ್ಷಿಸಿದನು ಎಂದು ಆಹ ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2 ಶ್ರಮರಹಿತನು ಎಂದೂ ಹನುಮ ಶ್ರಮ ನಿವಾರಣ ಅನಪೇಕ್ಷ ಆಶ್ಲೇಷಿಸಿ ನಗವರನ ಆಹ ನಿಸ್ಸೀಮ ಪೌರುಷ ಬಲಯುತ ಹನುಮನು ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3 ಪರೀಕ್ಷಿಸೆ ಸುರಸೆಯ ಸುರರು ಪ್ರೇರಿಸಿ ವರವನ್ನು ಕೊಡಲು ಆಹ ಫಣಿಗಳ ತಾಯಿ ಅವಳು ಬಾಯಿ ತೆರೆಯಲು ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4 ಸುರರು ಆನಂದದಿ ಆಗ ಸ್ತುತಿಸಿ ಹನುಮನ ಕೊಂಡಾಡಿ ಸುರಿಯಲು ಪುಷ್ಪದ ಮಳೆಯ ಆಹ ಶೀಘ್ರ ಪವನಜನು ಮುಂದೆ ತಾ ಹೋಗುತ್ತ ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5 ಸರಸಿಜಾಸನ ವರಬಲದಿ ಸಿಂಹಿಕಾ ಲಂಕಾ ಪೋಗುವರ ಸೆಳೆದು ತಾ ನಿಗ್ರಹಿಸುವಳು ಆಹ ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6 ತನ್ನ ನಿಸ್ಸೀಮ ಬಲವನು ತೋರಿಸಿ ಈ ರೀತಿ ಹನುಮ ಧುಮುಕಿದ ಲಂಬ ಪರ್ವತದಿ ಆಹ ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7 ಆಗಿ ಬಿಡಾಲದೊಲ್ ಸಣ್ಣ ಅಸಿತ ಕಾಲದಿ ಪೋಗೆ ಪುರಿಗೆ ಅಲ್ಲಿದ್ದ ಲಂಕಿಣಿ ತಡೆಯೆ ಆಹ ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8 ಶ್ರೀಘ್ರ ಅಶೋಕ ವನದಲಿ ಶಿಂಶುಪಾವೃಕ್ಷ ಮೂಲದಲಿ ಸೀತಾ ಅಕೃತಿಯನು ಕಂಡ ಆಹ ಸೀತೆಗೆ ಏನೇನು ಭೂಷಣ ಉಂಟೋ ಸೀತಾ ಆಕೃತಿಗೂ ಸಹ ಅದರವೊಲಿತ್ತು 9 ಅವನಿಯೋಳು ನಿನ್ನ ವಿಡಂಬ ಅರಿತು ಅನುಸರಿಸಿ ಹನುಮ ಅದರಂತೆ ಪರಿಪಂಥಾವಳಿಗೆ ಆಹ ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ ಚೂಡಾಮಣಿ ನಿನಗೆಂದು ಕೊಟ್ಟಳು 10 ಅರಿಯರು ರಾಕ್ಷಸರಿದನು ಅಮರರು ಕಲಿಮುಖರೆಲ್ಲ ಅವಲೋಕಿಸಿದರು ಈ ಕಾರ್ಯ ಆಹ ಅಮರರು ಲೋಕವಿಡಂಬವಿದೆಂದರಿಯೆ ಅಧಮ ಕಲ್ಯಾದಿಗಳ್ ಮೋಹಿತರಾದರು 11 ಕೃತಕೃತ್ಯವಾಗಿ ತಾ ಹನುಮ ಕೋವಿದೋತ್ತಮ ಬಲವಂತ ಕಾಣಿಸಿಕೊಳ್ಳುವ ಮನದಿ ಕಿಂಚಿತ್ತೂ ಭಯವೇನೂ ಇಲ್ಲದೆ ವನವನು ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12 ಕುಜನ ರಾಕ್ಷಸರನು ಕೊಲ್ಲೆ ಕೂಗಿ ಆರ್ಭಟಮಾಡೆ ಹನುಮ ಕೇಳಿ ಚೇಷ್ಟೆಗಳ ರಾವಣನು ಆಹ ಕಪ್ಪು ಕಂಠನ ವರ ಆಯುಧಯುತರು ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13 ಆರ್ಭಟದಿಂದ ಘೋಷಿಸುತ ಅವರು ಆವರಿಸಿ ಹನುಮನ ಆಯುಧಗಳ ಪ್ರಯೋಗಿಸಲು ಆಹ ಪವನಜ ಮುಷ್ಟಿಪ್ರಹರದಿ ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14 ಕಡುಕೋಪದಿಂದ ರಾವಣನು ಕಳುಹಿದನು ಏಳು ಮಂತ್ರಿ ಕುವರರ ವರ ಬಲಯುತರ ಆಹ ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15 ಅನುಪಮ ಬಲಕಾರ್ಯಕೇಳಿ ಅಧಮ ರಾವಣ ತನ್ನ ಸುತನ ಅಕ್ಷನ ಕಳುಹಲು ಹನುಮ ಆಹ ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16 ಅತಿ ದುಃಖದಿಂದ ರಾವಣನು ಅಕ್ಷನಗ್ರಜ ಇಂದ್ರಜಿತನ ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17 ರಾವಣನಲಿ ಕೊಂಡು ಪೋಗೆ ರಾವಣ ಪ್ರಶ್ನೆಯ ಮಾಡೆ ರಾಮಗೆ ನಮಿಸಿ ಹನುಮನು ಆಹ ರಘುವರ ರಾಮ ದುರಂತ ವಿಕ್ರಮ ಹರಿ ರಾಕ್ಷಸಾಂತಕ ದೂತ ಮಾರುತಿ ತಾನೆಂದ 18 ರಘುವರ ಪ್ರಿಯೆಯನು ಬೇಗ ರಾಮಗರ್ಪಿಸಲೊಲ್ಲೆ ಎನ್ನೆ ಹನುಮ ಪ್ರಕೋಪದಿ ಅವನ ಆಹ ರಾಜ್ಯ ಮಿತ್ರ ಬಂಧು ಸರ್ವನಾಶ ರಾಘವ ಮಾಡುವನೆಂದು ಪೇಳಿದನು 19 ಅಜ ಶಿವ ಮೊದಲಾದ ಸರ್ವ ಅಮರೇಶ್ವರರು ತಾವು ತಡೆಯ ಆಶಕ್ತರು ರಾಮಬಾಣವನು ಆಹ ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ ಅಸಮರ್ಥನೆಂದ ಪ್ರಭಂಜನ ಸುತನು 20 ಪ್ರಭಂಜನ 1 ಸುತ ಮಾತು ಕೇಳಿ ಪ್ರಕುಪಿತನಾಗಿ ರಾವಣನು ಪ್ರಯತ್ನಿಸೆ ಹನುಮನ ಕೊಲ್ಲೆ ಆಹ ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21 ಆತಿಭಾರ ವಸ್ತ್ರ ಕಟ್ಟುಗಳಿಂ ಅಧಮರು ಸುತ್ತಿ ಬಾಲವನು ಅಗ್ನಿಯ ತೀವ್ರದಿ ಹಚ್ಚೆ ಆಹ ಅಗ್ನಿಯ ಪರಸಖ ವಾಯು ಆದುದರಿಂದ ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22 ಅಧಮ ರಾಕ್ಷಸರ ಚೇಷ್ಟೆಗಳ ಅಸಮ ಬಲಾಢ್ಯನು ಹನುಮ ಅನುಭವಿಸಿ ಕುತೂಹಲದಿ ಆಹ ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು ಅತಿ ಮುದದಲಿ ಗರ್ಜಿಸಿದ ರಾಮದೂತ 23 ಅಧಮ ಸಪುತ್ರ ರಾವಣನ ಅಲ್ಪ ತೃಣೋಪಮ ಮಾಡಿ ಅವರೆದುರಿಗೆ ಪುರಿ ಸುಟ್ಟು ಆಹ ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24 ಸಮಸ್ತ ವಾನರ ವರರೊಡನೆ ಸಮರ್ಥ ಹನುಮ ಧೀರ ಬಂದು ಶುಭಸೂಚಕ ಚೂಡಾಮಣಿಯ ಆಹ ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25 ಭಕ್ತಿ ಸವೈರಾಗ್ಯ ಜ್ಞಾನ ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು ಪ್ರಾಣ ಯೋಗ ಬಲ ಇಂಥಾ ಆಹ ತುಂಬಿ ಇರುವುವು ಈ ಪ್ರಭಂಜನ ವಾಯು ಹನುಮನಲಿ ಸರ್ವದಾ 26 ಸರ್ವೇಶ ರಾಮ ಅಗಾಧ ಸದ್ಗುಣಾರ್ಣವ ನೀ ಹನುಮನ ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ನಮ್ಯ ಮಾರುತಿ ಮನೋಗತನೆ ಆಹ ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಕಲ್ಕಿ ಅಮಿತ ವಿಕ್ರಮ ಕಲ್ಕಿ ಅನಘ ಲಕ್ಷ್ಮೀರಮಣ ಶರಣು ಮಾಂ ಪಾಹಿ ಕೃಷ್ಣ ನರಹರಿ ಕಪಿಲ ತಿಲಕ ವೇಂಕಟರಮಣ ಪ್ರಾಣ ಹೃದ್‍ವನಜಸ್ಥ ರಕ್ಷಮಾಂ ಸತತ ಪ ಶ್ರೀ ದುರ್ಗಾಭೂರಮಣ ವಿಷ್ಣು ರುದ್ರ ಬ್ರಹ್ಮ ಮಾಯಾ ಜಯಾ ಕೃತಿ ಕೂರ್ಮ 1 ಧನ್ವಂತರಿ ಶರಣು ಅಜಿತ ಸ್ತ್ರೀರೂಪನೇ ಘನಭೂಮಿಧರ ನಾರಸಿಂಹ ವಾಮನ ತ್ರಿಪದ ರೇಣುಕಾತ್ಮಜರಾಮ ವೇಣುಗೋಪಾಲ ನಮೋ ಬುದ್ಧ ಸುಜನಪ್ರಿಯ ಕಲ್ಕಿ 2 ವೃಷಭ ತಾಪಸ ಯಜ್ಞ ದತ್ತ ವಡವಾವಕ್ತರ ಕೃಷ್ಣ ಹರಿನಾರಾಯಣ ವೇದವ್ಯಾಸ ಶಿಂಶುಮಾರ ಸುಗುಣಾರ್ಣವನೆ ಶ್ರೀಶ ಸರ್ವಾಶ್ರಯ ಅನಂತ ಸುಖರೂಪ 3 ಭೂಲೋಕದಲಿ ಮಣಿಮಂತಾದಿ ಅಸುರರು ಶೀಲ ಹರಿಭಕ್ತರನ ಕಂಡು ಸಹಿಸದಲೆ ಬಾಲ ಶಶಿಶೇಖರನ ಸ್ತುತಿಸಿ ವರಗಳ ಪಡೆದು ಇಳೆಯಲಿ ಜನಿಸಿದರು ತತ್ವಜ್ಞಾನಿಗಳ ವೋಲ್ 4 ಸೂತ್ರ ವಿರುದ್ಧ ಭಾಷ್ಯಗಳ್ ಮಾಡಿ ವೇದೋಪನಿಷದ್‍ಗಳಿಗೆ ಅಪ ಅರ್ಥ ಪೇಳಿ ಸಾಧುಗಳ ಮನಕೆಡಿಸೆ ಮಧ್ವಾಖ್ಯ ಸೂರ್ಯನು ಉದಿಸಿ ಸಜ್ಜನರ ಹೃತ್ತಿಮಿರ ಕಳೆಯೆ 5 ಶ್ರೀಪತಿ ವಿಷಯಕ ಜ್ಞಾನ ಮರೆ ಮಾಡುವ ಇಪ್ಪತ್ತು ಮೇಲೊಂದು ಅಪದ್ದ ದುರ್ಭಾಷ್ಯ ಅಪವಿತ್ರ ಅಚರಣೆ ದುಸ್ತರ್ಕ ದುರ್ವಾದ ಈ ಪರಿಸ್ಥಿತಿಯ ನೆಟ್ಟಗೆ ಮಾಡಿದಾ ಮಾಧ್ವ 6 ಇಪ್ಪತ್ತಿ(ತ್ತು) ಎರಡನೇ ಭಾಷ್ಯಾ ಸಿದ್ಧಾಂತವ ಉಪನಿಷದ್ ದಶಕಕೆ ಸರಿಯಾದ ಭಾಷ್ಯಗಳ ಸಪ್ತ ತ್ರಿಂಶತ್ ಒಟ್ಟುಗ್ರಂಥ ಸುರಧೇನುವ ಅಪವರ್ಗಾನಂದ ಒದಗಿಸಿದ ಯೋಗ್ಯರಿಗೆ 7 ಸದ್ಧರ್ಮ ಆಚರಣೆ ಯೋಗ್ಯ ಉಪಾಸನಾ ಭಕ್ತಿ ಸವೈರಾಗ್ಯ ಜ್ಞಾನ ಉನ್ನಾಹ ಅಧಿಕಾರಿಗಳು ಈ ಪರಿಯಲಿ ಸುಖಿಸಲು ಕ್ಷಿತಿಯ ಜನರಿಗೆ ಲಭಿಸಿತು ಕ್ಷೇಮ 8 ಕಾಲವು ಜರುಗಿತು ದೈತ್ಯರು ನೋಡಿದರು ಮೆಲ್ಲಮೆಲ್ಲನೆ ಪುನಃ ವಿಷಮ ಮಾಡಿದರು ಶೀಲರ ಹಿಂಸಿಸಿ ಸದ್ಧರ್ಮ ಕೆಡಿಸಿದರು ಖಳರು ಕ್ರೌರ್ಯವ ವರ್ಧಿಸಿದರು ದಿನ ದಿನದಿ 9 ಮಹಾಭಯಂಕರ ದೈತ್ಯ ಸಮೂಹವ ಸಂಹನನ ಮಾಡಿದಳು ಮಹಾದುರ್ಗಾದೇವಿ ಬ್ರಾಹ್ಮಣಕುಲದಲಿ ಪ್ರಾದುರ್ಭವಿಸಿದ ದೇವಿ ಮಹಾದುರ್ಗಾ ಜಗದಾಂಬಾ ಶರಣು ಮಾಂಪಾಹಿ 10 ಮಾಸ ಋತು ವರುಷಗಳು ಕಾಲ ಪ್ರವಹಿಸಿತು ಜನಗಳು ಕಲಿಯುಗದ ಕಡೇ ಭಾಗ ಬರಲಾಗ ಹೀನ ಕರ್ಮಂಗಳಲಿ ಆಸಕ್ತರಾದರು 11 ಪುರಾಣಂಗಳಲಿ ಕಲಿಯಗದ ಸ್ಥಿತಿಗತಿಯು ವಿವರಿಸಿದಂತೆಯೇ ನೆನೆಯಲೂ ಭೀತಿ - ಕರ ಪಾಪಕರ್ಮದಲಿ ಜನರು ರತರಾಗಿರಲು ನರಪರ ಕ್ರೂರತನ ದಿನ ದಿನ ಹೆಚ್ಚಿತು 12 ಜ್ಞಾನಾದಿ ಸಂಪತ್ತು ಕಳಕೊಂಡ ಜನರು ವಿಷ್ಣು ದ್ವೇಷಿಗಳಾಗಿ ಬಹು ಬಹು ನೀಚ- ತನದಲಿ ಇರುತಿರಲು ದೇವತಾವೃಂದವು ನಿನ್ನ ಬೇಡಿದರು ಪುನಃ ಧರ್ಮಸ್ಥಾಪಿಸಲು 13 ಯದಾಯದಾಹಿ ಸದ್ಧರ್ಮಕ್ಕೆ ಹಾನಿಯು ಅಧರ್ಮಕ್ಕೆ ವೃದ್ಧಿಯು ಆಗುವದೋ ಆಗಾಗ ಸಾಧುಗಳ ರಕ್ಷಣೆಗೆ ಪಾಪಿಗಳ ಹನನಕ್ಕೆ ಸದ್ಧರ್ಮ ಸ್ಥಾಪನೆಗೆ ಅವತಾರ ಮಾಳ್ಪಿ 14 ಭೂಮಿಯಲಿ ಸುಪವಿತ್ರ ಶಂಭಳ ಗ್ರಾಮದಲಿ ಬ್ರಾಹ್ಮಣ ಮಹಾತ್ಮ ವಿಷ್ಣು ಯಶಸ್ ಭವನದಲಿ ಅಮಿತ ಪೌರುಷಜ್ಞಾನ ಆನಂದಮಯ ನೀನು ವಿಮಲ ಕಲ್ಕ್ಯವತಾರ ಮಾಡಿದಿ ಮಹೋಜ 15 ಕ ಎಂದರಾನಂದ ಕಲ್ಕೆಂದರೆ ಜ್ಞಾನ ಆನಂದ ರೂಪ ಶೂಲಿ ವಜ್ರಿಗಳಿಗೆ ಸುಖಜ್ಞಾನ ಬಲ ಕೊಡುವ ಠಲಕನಮೋ ಪಾಪಹರ ಸೌಭಾಗ್ಯದಾತ 16 ಲೋಕವಿಲಕ್ಷಣ ಸುಪ್ರಭಾಶ್ವ ಏರಿ ನಿಖಿಳ ದುರ್ಮತಿ ಭೂಪಾಲ ಚೋರರನ್ನ ಅಖಿಳ ಪಾಪಿಗಳ ಅಧರ್ಮ ಆಚರಿಸುವರ ಶ್ರೀಕಾಂತದ್ವೇಷಿಗಳ ಕತ್ತರಿಸಿ ಕೊಂದಿ 17 ಸತ್ಯವ್ರತ ಸುರವೃಂದ ವಸುಮತಿ ಪ್ರಹ್ಲಾದ ಶತಮಖ ಪ್ರಜೆಗಳು ವಿಭೀಷಣ ಸುಗ್ರೀವ ಪಾರ್ಥಸುಧಾಮ ರಕ್ಷಕನೇ ಸುರಬೋಧಕನೇ ಸತ್ಯಧರ್ಮರ ಕಾಯ್ವ ಕರುಣಾಳು ಕಲ್ಕಿ 18 ಜ್ಞಾನಸುಖ ಭೂಮದಿ ಗುಣಪೂರ್ಣ ನಿರ್ದೋಷ ವಿಷ್ಣು ಪರಮಾತ್ಮ ಹರಿ ಉದ್ದಾಮ ಬ್ರಹ್ಮ ಪೂರ್ಣಪ್ರಜ್ಞಾರ ಹೃಸ್ಥ ವನಜಭವಪಿತ ಕಲ್ಕಿ ಪ್ರಸನ್ನ ಶ್ರೀನಿವಾಸ ಶರಣು ಮಾಂಪಾಹಿ 19 -ಇತಿ ಕಲ್ಕ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು