ಒಟ್ಟು 1718 ಕಡೆಗಳಲ್ಲಿ , 106 ದಾಸರು , 1309 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಎನ್ನು ಹರಿ ಎನ್ನು ಹರಿ ಎನ್ನು ಮನವೆ ಪ. ನಿರುತದಿ ಪೊರೆವನ ಮರೆವರೆ ಮನವೆ ಅ.ಪ. ಸರಿಯುವುದು ಆಯುಷ್ಯ ಸಂಪತ್ತು ನೋಡು ಬರುತಿದೆ ಮೃತ್ಯುವು ಕರೆಯಲು ನೋಡು ಹರಿನಾಮ ಯಮದಂಡ ಕಡಿವುದು ನೋಡು ಪರಮಪುರುಷನ ನೀ ಬಿಡದೆ ಕೊಂಡಾಡು 1 ಹರಿಯ ನಾಮಾಮೃತ ಸುಜನಕೆ ನೀಡು ಹರಿಯ ಜ್ಞಾನಾನಂದಾಂಬುಧಿಯೊಳೊಲ್ಯಾಡು ಹರಿಯ ಮೂರುತಿಯನ್ನು ಮನದಲ್ಲಿ ನೋಡು ಹರಿಭಕ್ತಿ ಮದವೇರಿ ಕುಣಿ ಕುಣಿದಾಡು 2 ಹರಿಗುರು ಸ್ಮರಣೆಯ ನಿರುತದಿ ಮಾಡು ಹರಿಭಕ್ತಿ ಲಾಂಛನ ಮೈಯಲ್ಲಿ ಮೂಡು ಹರಿದಾಸ ಸಂಪತ್ತಿನೊಳಗೆ ಓಲಾಡು ಹರಿಯ ಮನದಿ ಕಂಡು ನಲಿನಲಿದಾಡು 3 ಕಾಮಕ್ರೋಧಗಳನ್ನು ಖಂಡಿಸೀಡ್ಯಾಡು ನೇಮ ಶ್ರೀ ಗುರು ಆಜ್ಞೆಯಂದದಿ ಮಾಡು ಯಾಮ ಯಾಮಕೆ ಹರಿನಾಮವ ಪಾಡು ಶ್ರೀಮದಾನಂದತೀರ್ಥರ ಮತ ನೋಡು 4 ಶ್ರೀ ಪರಮಾತ್ಮನ ಗುಣವ ಕೊಂಡಾಡು ಶ್ರೀಪತಿ ಭಕ್ತರ ಸಂಗದಿ ಕೂಡು ಭವ ಹರ ಸ್ತುತಿ ಮಾಡು ಗೋಪಾಲಕೃಷ್ಣವಿಠ್ಠಲನ ದಯ ಬೇಡು 5
--------------
ಅಂಬಾಬಾಯಿ
ಹರಿ ಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ ಪ ವೇದರಾಶೀ ಎಂಬ ಭೂಸುರನು ಯಮಪುರದ ಹಾದಿಯಲಿ ಪೋಗುತಿರೆ ಎಡಬಲದಲಿ ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ 1 ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ ಮೃತ್ಯು ನಡುಗೀ ನಿಂದು ಪೂಜೆ ಮಾಡೀ ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ 2 ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ ಅಂತಕ ಬಂದು ಕಾದೆ ಸ ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ3 ಹದಿನಾರು ಸಾವಿರ ತರುಣಿಯರು ಅಸುರನ್ನ ಸದನದಲಿ ಸೆರೆಬಿದ್ದು ಹರಿಯ ತುತಿಸೇ ಮುದದಿಂದ ಹರಿಪೋಗಿ ಖಳನ ಕೊಂದು ಆ ಸುದತಿಯರಿಗೆ ತನ್ನ ಅಂಗಸಂಗವನಿತ್ತ4 ಕಂಡವರ ಮನೆ ಉಂಡು ಚಾಂಡಾಲರ ಕೂಡ ಮಂಡಲದೊಳಗೆ ಪಾತಕನಾದರೂ ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ5
--------------
ವಿಜಯದಾಸ
ಹರಿ ಗೋವಿಂದ ಮುಕುಂದ ಮನುವಂದ್ಯ ಮಾಧವ ಹರ ಅಜನುತ ಪರಮಾನಂದ ಪ ದೇವ ಗಿರಿಧರ ಸುರನರ ಮುರಹರ ಪರತರ ಶರಧಿಜಾ ವರ ನರಹರಿ ಕೇಶವ ಸ್ಮರಿಪರ ಸುರತರು ಪರಮಪ್ರಕಾಶನೆ ಪುರಹರವರಸುಖ ಸುರೇಶ 1 ಈಶ ಮುನಿಕುಲ ವಸುಕಾಲ ತನುಶೀಲ ವನಮಾಲ ಜನಕಜೆಪತಿ ಭಕ್ತರಾನಂದ ವನಜಾಕ್ಷ ದಿನಕರ ಘನಪ್ರಭೆತನುಶೋಭ ವಿನಮಿತ ಸನಕಾದಿಸಾನಂದ 2 ಜಗದೀಶ ಅಘಪೋಷ ಮೃಗನಾಶ ಲಕುಮೀಶ ಖಗಗಮನ ದಶಶತನಾಮ ಬಗೆಬಗೆ ಪೊಗಳುವ ನಿಗಮ ಆಗಮನುತ ಶ್ರೀರಾಮ 3
--------------
ರಾಮದಾಸರು
ಹರಿ ಹರಿ ಹರಿ ಹರಿ ಹರಿಯೆನಬೇಕು ಹರಿ ಸ್ಮರಣೆಯೋಳನುದಿನವಿರಬೇಕು ಧ್ರುವ ಹರಿಯೇ ಶ್ರೀ ಪರಬ್ರಹ್ಮೆನಬೇಕು ಹರಿ ಪರಂದೈವೆವೆಂದರಿಬೇಕು ಹರಿಯೇ ತಾ ಮನದೈವೆನಬೇಕು ಹರಿ ಋಷಿ ಮುನಿಕುಲಗೋತ್ರೆನಬೇಕು 1 ಹರಿಯೇ ತಾಯಿತಂದೆನಬೇಕು ಹರಿಯೇ ನಿಜ ಬಂಧುಬಳಗೆನಬೇಕು ಹರಿಯೇ ಆಪ್ತ ಮೈತ್ರೆನಬೇಕು ಹರಿಕುಲಕೋಟೀ ಬಳಗೆನಬೇಕು 2 ಹರಿಯೇ ಸಲಹುವ ದೊರೆಯನಬೇಕು ಹರಿ ಸುಖ ಸೌಖ್ಯದ ಸಿರಿಯೆನಬೇಕು ಹರಿ ನಾಮವೆ ಧನದ್ರವ್ಯೆನಬೇಕು ಹರಿಸ್ಮರಣೆಯು ಸಂಪದವೆನಬೇಕು 3 ಹರಿದಾಸರ ಸಂಗದಲಿರಬೇಕು ಹರಿಭಕ್ತರ ಅನುಸರಿಸಿರಬೇಕು ಹರಿಚರಣದಿ ರತಿಮನವಿಡಬೇಕು ಹರಿ ನಿಜರೂಪವ ನೋಡಲಿಬೇಕು 4 ಹರಿ ಮಹಿಮೆಯ ಕೊಂಡಾಡಲಿಬೇಕು ಹರಿಸ್ತುತಿಸ್ತವನ ಪಾಡಲಿಬೇಕು ಹರಿತಾರಕ ಪರಬ್ರಹ್ಮೆನಬೇಕು ಹರಿ ಸರುವೋತ್ತಮ ಸ್ವಾಮೆನಬೇಕು 5 ಹರಿಯೇ ಸಕಲ ತಾ ಧರ್ಮನಬೇಕು ಹರಿ ಸರ್ವಮಯ ಪುಣ್ಯಕ್ಷೇತ್ರೆನಬೇಕು ಹರಿಯೇ ಇಹಪರ ಪೂರ್ಣೆನಬೇಕು ಹರಿ ಸದೋದಿತ ಸಹಕಾರೆನಬೇಕು 6 ಹರಿ ಬಾಹ್ಯಾಂತರೇಕೋಮಯವೆನಬೇಕು ಹರಿ ಸಕಲವು ವ್ಯಾಪಕವೆನಬೇಕು ಹರಿಯೇ ಶ್ರೀ ಪರಮಾತ್ಮೆನಬೇಕು ಹರಿ ಮಹಿಪತಿ ಸದ್ಗತಿಯೆನಬೇಕು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಸಮಹತಿ ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿಕ್ಷಮಶೀಲವೆಂಬ ದಾಸೋಹ ಬಿರುದಿನೊಳು ಪ ಸುರರು ಸಾಧುಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ಅ ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-ಕರಿಸಿ ಇಷ್ಟೆಂದು ಪೇಳಲುಬಹುದುಸಿರಿವರದನ ಅಂತಃಕರಣಕೊಪ್ಪಿದ ನಿಮ್ಮಇರವ ತಿಳಿಯಲು ನರರ ವಶವೆ ಸ್ವಾಮಿ1 ಆಢಕದೊಳಗಂಬರವನೆ ಅಳೆದು ಲೆಕ್ಕಕೂಡಿದ ಮಿತಿಯ ಪೇಳಲು ಬಹುದುರೂಢಿಗೀಶನ ಸೇವೆ ಮಾಡಿದ ಮುಕ್ತರಈಡಿಲ್ಲವೆಂಬುದನಿತರರರಿವರೆ ಸ್ವಾಮಿ 2 ಈ ಶರೀರದೊಳಗಿಪ್ಪ ಕೇಶಗಳೆಲ್ಲವನುಬೇಸರಿಸದೆಣಿಸಿ ಹೇಳಲು ಬಹುದುಶೇಷಶಯನ ಕಾಗಿನೆಲೆಯಾದಿಕೇಶವದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ 3
--------------
ಕನಕದಾಸ
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ಅರಿವೆ ಅನ್ನಾಭರಣ ದ್ರವ್ಯ ಸರ್ವವು ಶ್ರೀ ವರನೆ ಎಂಬ ಪ ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1 ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2 ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3 ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4 ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5 ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6 ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
--------------
ಜಗನ್ನಾಥದಾಸರು
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿನಾಮ ಮರೆಯ ಬೇಡಯ್ಯ ಪರಿ ದುರಿತಗಳನ್ನು ಅದು ನೀಗುವುದಯ್ಯಾ ಪ ತರಳಪ್ರಲ್ಹಾದನಿಗೊಲಿದ ನಾಮವುಯಿದು ದುರುಳ ರಕ್ಕಸರನ್ನು ತರಿದ ನಾಮವೋ 1 ನಿರುತದಿ ಭಕ್ತರಿಗೊಲಿವ ನಾಮವುಯಿದು ಸರಸದಿ ಭಜಕರ ಪೊರೆವ ನಾಮವೋ 2 ಭಾಮೆಗಕ್ಷಯವಿತ್ತ ಪರಮನಾಮವುಯಿದು ಪ್ರೇಮದಿ ದಾಸರಿಗೊಲಿವ ನಾಮವೋ 3 ಕಾಮಿತ ವರಗಳನೀವ ನಾಮವುಯಿದು ನಿತ್ಯ ಭಜಿಪ ನಾಮವೋ 4 ದಶರೂಪ ಧರಿಸಿದ ದಿವ್ಯ ನಾಮವುಯಿದು ದಶಕಂಠನನು ಕೊಂದ ಶ್ರೀನಾಮವೋ 5 ಕೇಶವ ರೂಪದಿ ಮೆರೆವ ನಾಮವುಯಿದು ಪಾಶವ ಕಡಿಯುವ ನಿಜ ನಾಮವೋ 6 ವರ ದೂರ್ವಾಪುರದ ಶ್ರೀಹರಿಯ ನಾಮವುಯಿದು ಮರೆಯದೆ ಭಕ್ತರ ಪೊರೆವ ನಾಮವೋ 7 ಸಿರಿ ಚನ್ನಕೇಶವನೆಂಬ ನಾಮವೋ 8
--------------
ಕರ್ಕಿ ಕೇಶವದಾಸ
ಹರಿನಿನ್ನ ಕರುಣವಿರಾಲಾವ ಭಯವು ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ - ಬಿನ್ನಪವನಾಲಿಸಿ ರೋಗಮೋಚನ ಗೈದ 1 ದಾಸಕುಲರತ್ನ ಪ್ರಾಣೇಶ ದಾಸಾರ್ಯರ ಆಸುವಂಶದ ತರುಳ ರೋಗದಿಂದಾ ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2 ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ ಪರಿ ಪೀಡಿಸುವದುಚಿತವೇನೊ ಶ್ರೀ ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3 ವಾಸವಾದ್ಯಮರನುತ ವಾಸುದೇವನೆ ನೀನು ಈ ಸಮಯದೊಳಗಿವನ ಕರುಣದಿಂದ ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ ದಾಸನೆಂದೆನಿಸಿ ಜೀವಿಸಲಿಯನವರತ 4 ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ ಬನ್ನ ಬಡಿಸಲು ಸಲ್ಲ ಇನ್ನು ನೀ ಕರುಣಿಪುದು ವರದೇಶವಿಠಲ 5
--------------
ವರದೇಶವಿಠಲ
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಪಾದಕಮಲಕ್ಕೆ ಮರೆಹೊಕ್ಕ ಬಳಿಕ ಮರಮರ ಮರುಗುವ ಪರಿಯು ಇನ್ನ್ಯಾಕೋ ಪ ಪರಮಪಾವನ ತನ್ನ ಚರಣದಾಸರ ಸ್ಥಿತಿ ಅರಿಯನೆನೆನ್ನುತ ಸ್ಥಿರವಾಗಿ ನಂಬಿ ಅ.ಪ ಕಂತುಪಿತನಧ್ಯಾನ ಚಿಂತಾಮಣಿಯೆಂದು ಚಿಂತಾದೂರನ ನಿಜಸ್ಮರಣೆಯೇ ಪರಷೆಂದು ಸಂತರೊಡೆಯ ಶ್ರೀಕಾಂತನ ಭಜನೆಯೇ ಭ್ರಾಂತಿನೀಗಿಸುವಂಥ ಕಲ್ಪತರುವಿದೆಂದು 1 ಸೃಷ್ಟಿಕರ್ತನ ಕಥನ ಕಷ್ಟನಿವಾರಣ ಅಷ್ಟಮೂರುತಿ ಕೀರ್ತನಷ್ಟಸಂಪದ ಪೂರ್ಣ ಎಷ್ಟು ಮಾತ್ರಕೆ ತನ್ನ ಇಷ್ಟ ಭಕ್ತರಿಗಿಹ್ಯ ಕಷ್ಟ ನಿವಾರಿಸಿದೆ ಬಿಡನೆಂದು ಗಟ್ಟ್ಯಾಗಿ 2 ಧ್ಯಾನಮೂರುತಿ ಎನ್ನ ಮಾನಾಪಮಾನವು ನಿನ್ನಗೆ ಕೂಡಿತು ಎನಗಿನ್ನೇನೆಂದು ಅನ್ಯಾಯವನು ತ್ಯಜಿಸಿ ಧ್ಯಾನವ ಬಲಿಸಿ ಜಾನಕೀಶನೆ ಭಕ್ತಧೇನು ಶ್ರೀರಾಮೆಂದು 3
--------------
ರಾಮದಾಸರು
ಹರಿಭಕುತರ ದರುಶನವು ಅತಿಹರುಷವು ಧ್ರುವ ಹರಿ ನೆನೆವರಾ ನೆರಿಯು ನಿಧಾನದಾ ಕೆರೆಯು ಹರಿ ಸ್ಮರಿಸುವರ ಮರಿಯು ವಜ್ರವರಿಯು ಹರಿ ಭಜಿಸುವರ ಸರಿಯು ನಿಜಘನಾತ್ಮದ ಝರಿಯು ಹರಿ ಮಹಿಪರ ಕರಿಯು ಪರಮಾನಂದದ ತೆರಿಯು 1 ಹರಿಶರಣರ ನುಡಿಯು ಕರುಣದಮೃತಧ್ವನಿಯು ಹರಿಯದಾಸರ ನಡೆಯು ನಿಲಕಡೆಯು ಹರಿಭಕ್ತರಿದ್ದೆಡೆಯು ಪುಣ್ಯಕ್ಷೇತ್ರದ ತಡಿಯು ಹರಿಮಹಿಮರ ಕಡಿಯು ಕ್ಯಾದಿಗ್ಹೊಡಿಯು 2 ಹರಿಭಕ್ತರ ಸಂಗ ಸ್ನಾನಗಂಗ ತುಂಗ ಹರಿಮಹಿಮರ ಅಂಗ ಅಂತರಂಗ ಹರಿಪರಮಾನಂದ ಗುರು ಕರುಣಾಕೃಪಾಂಗ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು
ಹರಿಯೆ ಚಿತ್ರಲೀಲೆಗಳನು ಅರಿಯಲಳವೇ ಸುಲಭದಿ ಪ ನಿರತ ಸೇವೆ ಮಾಡುತಿರುವ ಸಿರಿಯು ತಾನಚ್ಚರಿಯಲ್ಲಿರಲು ಅ.ಪ ಪೊಡವಿಯಲಿ ದುರಿತಗಳನ್ನು ನಡೆನುಡಿಗಳಿಂದರಿಯದಿರುವ ಹುಡುಗರಾಗಿ ನಲಿಯುವರನ್ನು ಸಿಡಿಲಿನಿಂದ ತನ್ನಡಿಗಳಿಗೆಳೆವ 1 ಕ್ಲೇಶದಿಂದ ಗಳಿತವಾದ ಹೇಸಿಗೆಯ ದೇಹದಲ್ಲಿ ಆಸೆ ತೊರೆದು ನರಳುವರಲಿ ಲೇಶ ಕರುಣ ತೋರದೆ ಇರುವ2 ಸತ್ಯ ಸಂಕಲ್ಪನೆಂದರಿತು ನಿತ್ಯನನ್ನು ನೆನೆದು ತಮ್ಮ ಕೃತ್ಯಗಳನು ರಚಿಸಿ ಮುದದಿ ತೃಪ್ತನಾಗುವ ಭಕ್ತರ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಹರಿಯೆಂದು ಮನವೆ ನೀ ಸ್ಮರಿಸೋ ದೃಢದಿಂದ ಸ್ಮರಿಸಿದಾಕ್ಷಣ ಬಂದು ಒದಗುವ ಗೋವಿಂದ ಕರುಣದಿಂದಲಿ ನೋಡಿ ಹಿಂಗಿಸುವ ಭವಬಂಧ ಪರಮದಯಾನಿಧಿಯು ಶ್ರೀಹರಿ ಮುಕುಂದ 1 ಸ್ಮರಿಸಿದಾಕ್ಷಣ ಪುಣ್ಯಗತಿಗೈದಜಾಮಳ ಮರೆಯದೆ ಸ್ಮರಿಸಿದ ಧ್ರುವ ಯೈದಿದಢಳ ಹರಿಯೆಂದು ಪ್ರಹ್ಲಾದ ಪುಣ್ಯಗೈದ ಸಬಳ ಸ್ಮರಿಸಿದವರ ಕಾವ ಶ್ರೀಹರಿ ಗೋಪಾಲ 2 ಗಜ ಭಯ ಸ್ಮರಿಸಿದಾಕ್ಷಣ ಮೊರೆ ಇಟ್ಟು ದ್ರೌಪದಿಗಾಯಿದಭಿಮಾನ ಸ್ಮರಿಸಿದ ಪಾಂಡವರ ರಕ್ಷಿಸಿದ ಪ್ರಾಣ ಪರಮಭಕ್ತರ ಜೀವ ಶ್ರೀಹರಿ ನಾರಾಯಣ 3 ಹರಿನಾಮದಿಂದಾಯಿತು ಅಹಲ್ಯೋದ್ಧಾರಣ ಸ್ಮರಣೆ ಸಕಲವೆಲ್ಲ ತರಿಸಿತು ಪೂರ್ಣ ಸುರಮುನಿಜನರಿಗೆ ಇದೇ ನಿಜಭೂಷಣ ಪರಮ ವೈಷ್ಣವರಿಗೆ ಇದೇ ಜೀವ ಪ್ರಾಣ 4 ಹರಿಯೆಂದು ನೆನಿಯೋ ನೀ ಗುರು ಕೃಪೆಯಿಂದ ಸ್ಮರಿಸೊ ಮನವೆ ದೃಢಭಾವ ಭಕ್ತಿಯಿಂದ ನಿತ್ಯ ನಿಜಾನಂದ ತೋರುವ ಶ್ರೀಹರಿನಾಮ ಸುಖ ಸದಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು