ಒಟ್ಟು 3729 ಕಡೆಗಳಲ್ಲಿ , 124 ದಾಸರು , 2629 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನು ನಿನ್ನ ಅಂಬುಜನಯನ ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ ಇಂದು ನೀ ಗೆಲಿಸಯ್ಯ ಮಂದರಧರಗೋವಿಂದ ಎರಗುವೆ ಪದಕೆ 1 ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು ತಡೆಯೆನ್ನನು ಕಡೆಹಾಯ್ಸು ದುರಿತದಿಂ 2 ಜಗದೊಳಗೆ ಎನ್ನನು ನಗೆಗೇಡು ಮಾಡದೆ ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ 3
--------------
ರಾಮದಾಸರು
ನಂಬಿದೆನೊ ನಿನ್ನ ಪಾದಾರವಿಂದಾ ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ ಉಳಿವದಕುಪಾಯವನು ಒಂದರೆ ಕಾಣೆನೊ ಎಲೊ ಬಲುದೈವ ನೀನೆ ದಯಾಳು ಎಂದೂ 1 ಕೈವಲ್ಯ ಕೊಡುವಲ್ಲಿ ಮಂಡಲದೊಳು ಎಣಿಯಾರು ನಿನಗೆ ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು ನಿತ್ಯ ಎಳೆನೋಟದಲಿ ನೋಡು 2 ಯದುಕುಲಲಲಾಮ ಸುರಸಾರ್ವಭೌಮ ಮಹಿಮ ಮದನಪಿತ ಕಾಳಿಂಗಭಂಗ ರಂಗಾ ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ 3
--------------
ವಿಜಯದಾಸ
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ನಂಬು ನಂಬು ನಂಬು ಮನವೆ ಅಂಬುಜಾಕ್ಷನ ಪ್ರಭುವ ಪಾದ ಇಂಬು ನಿನಗೆ ದೊರಕುವುದು ತುಂಬಿ ಮಂಗಳ ಪ ದುಷ್ಟ ಅನ್ನ ದುಷ್ಟ ಸಂಗ ಭ್ರಷ್ಟ ಭಾವದಿಂದ ಮನವು ಕೆಟ್ಟು ಬೆದರಿ ಸವಿಯುಗೊಳ್ಳದು ಶಿಷ್ಟರನುಭವ 1 ಸತ್ಯಹರಿಯು ಜಗದ್ಗುರುವು ಸತ್ಯ ಮಧ್ವಶಾಸ್ತ್ರ ಫಲವು ಸತ್ಯ ಮಹಿಮ ಗುರುಕರುಣ ಸತ್ಯ ನಿತ್ಯದಿ 2 ಭಾರತ ಭಾಗವತವ ಕೇಳು ಭರತನಣ್ಣನ ಚರಿತೆ ಕೇಳು ಖರೆಯು ಹರಿಯ ಭಕ್ತರೀಗೆ ನಿರುತ ಮಂಗಳ 3 ನಿರುತ ವಿದಯ ಲೋಭಿಗಳ ದುರುಳ ದುರ್ಬಲ ಭಾವ ತಿಳಿದು ಹರಿಯ ಮೆರೆಯೆ ಸಕಲ ಭಯವು ಮರುಳು ಮಾಳ್ಪವು 4 ಕರಿಯ ಧ್ರುವನ ಅಸುರ ಬಾಲನ ನರನ ಸತಿಯು ಭೀಷ್ಮ ಕುಚೇಲ ವರದ ದೇವನ ದಾಸರ ಭಜಿಸು ನಿರುತ ದೃಢದಲಿ 5 ಹಿಂದೆ ಎಷ್ಟೊ ಕಾಲದಿಂದ ಕುಂದು ನೋಡದೆ ನಿನ್ನ ಬಿಡದೆ ಮುಂದು ತಂದ ಬಗೆಯ ತಿಳಿಯೊ ಸಂದೇಹ ಪೋಪದು 6 ಕಾಲಿಗೆ ಬಿದ್ದ ದೀನರನ್ನು ಕರ್ಮ ಮೀರಿ ಪೊರೆವ ಬಾಳ ಕರುಣಿ ಮಹಾ ವಿಜಯ ರಾಮಚಂದ್ರನು7 ಹಿಂದೆ ಪೇಳ್ದ ವಾಕ್ಯವೆಲ್ಲಿ ಇಂದು ಬಿಡದೆ ಫಲಿಸುವೋವು ಮಂದನಾಗದೆ ಪ್ರಭುವ ಪಾದ ದ್ವಂದ್ವ ಬಿಡದಿರು 8 ನಿತ್ಯ ಹನುಮ ಭೀಮ-ಮಧ್ವ ಭೃತ್ಯರ ಶಿರೋರತನುನಿವನು ಸತ್ಯ ಮಹಿಮ ಜಯೇಶವಿಠ- ಲಾಪ್ತ ಸತ್ಯವು 9
--------------
ಜಯೇಶವಿಠಲ
ನಂಬುಗೆ ಪಡಿಯಿರೋ ದೇವರ ದೇವನಾ ಪ ಧಾಮ ಸಾರ್ವಭೌಮ ತಾಮರಸ ಸಖ ಆ ಮಹಾಕುಲೋದ್ದಾಮ ಆಹವ ಭೀಮ| ಸ್ವಾಮಿ ಸಕಲರ ಕಾಮಿತಾರ್ಥವ ನೇನಿ ಮುನಿಜನ ಪ್ರೇಮಿ| ಚರಿತ ನಿಸ್ಸೀಮಿಯಾ1 ಧಾಟಿಯಲಿ ನರನಾಟಕ ವಿಡಿದ ಆಟವಾಡಲು ನೀಟಾ| ಕೋಟಿ ಕೋಟಿ ನಿಶಾಟ ದರ್ಪೋಚ್ಚಾಟ ಮಾಡಿದ ಸ್ಪೋಟಾ| ನೀಟ ಶರಣ ಮುಕುಟಿಗಿತ್ತನು ಪೀಠಾ| ಧೀಟ ಶ್ರೀ ಜಟೆ ಜೂಟ ವಂದಿತ ಪಾಟರಹಿತ ಸ್ಪರಾಟನಾ 2 ಅಂದು ಇಂದೇ-ನೆಂದಿಗಾದರ ವಂದೇ ದಯದಿಂದ| ಛಂದ ಛಂದದ-ಲಿಂದ ಭೋಕ್ತರ ಬಂಧು ಭಕ್ತರ ವೃಂದ| ಸುಂದರಾನನ ಕುಂದರದನ ಸುಮಂದ ಹಾಸಾನಂದ| ಇಂದಿರೈರಸ ತಂದೆ ಮಹಿಪತಿ ಕಂದ ಪ್ರೀಯ ಮುಕುಂದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬುವುದು ತಾನು ಎಂತು ಸತಿಯು ಸುತರು ಮಗಳನುನಂಬಿ ಕಡೆ ಹಾಯ್ದುದುಂಟೆ ಹಾದಿಕಾರರನು ಪ ದಾರಿಕಾರರಿಗೆ ವಸತಿ ಮಳಿಗೆ ಭೇಟಿಯಲ್ಲೇದಾರಿ ಹಿಡಿದ ಬಳಿಕ ತಿರುಗಿ ಭೇಟಿಯಾಗೋದೆಲ್ಲಿದಾರ ಸುತರ ಭೇಟಿಯಿದೇ ದೇಹದೊಳಗೆ ಎಂದರಿಯೋಶರೀರವು ಬಿದ್ದ ಬಳಿಕ ಭೇಟಿ ಮುಂದೆ ಮರೆಯೋ1 ಕನಸಿನವರ ತಾನು ಈಗ ನೆನಸಲಿಕ್ಕೆ ಬಹರೆಕನಸಿನಂತೆ ತೋರುವರು ನೀನು ನಚ್ಚುವರೆಮನೆಯ ಬದುಕುಭಾಗ್ಯವೆಲ್ಲ ಮನದಿ ಜರೆದು ಬಿಡುನಿನಗೆ ಗತಿಯು ಏನು ಎಂದು ನೀನು ತಿಳಿದು ನೋಡು 2 ಹೆಗ್ಗಣವು ಜಾಗಿನೊಳಗೆ ಬಿದ್ದು ಮಿಡುಕಿದಂತೆವೆಗ್ಗಳಾಗಿ ಸಂಸಾರಕೆ ಮಾಡಿವೆಯೋ ಚಿಂತೆನುಗ್ಗು ಆದೆ ಬಯಲಭ್ರಾಂತಿ ನಿನಗೆ ವ್ಯಾಪಕಾಗಿಮುಗ್ಗುವೆ ನೀನೊಣನ ತೆರದಿ ನರಕದಲ್ಲಿ ಹೋಗಿ3 ನನ್ನ ಸಂಸಾರವೆನ್ನಬೇಡ ನೀನು ಇದನು ಈಗನನ್ನ ನನ್ನದೆಂದೆ ಹೋದ ನಿಮ್ಮಪ್ಪ ಮುಕ್ತನುಇನ್ನು ನಾಶವಿದು ಒಬ್ಬರಿಲ್ಲ ಸತ್ಯನಿನ್ನದಾರೆಂದು ಮರೆಯದಡೆ ನಿತ್ಯಾ4 ಇಂದ್ರಜಾಲ ನೋಡಲಿಕ್ಕೆ ಖರೆಯದಾಗಿ ಇಹುದುಅಂದದಾ ಪರಿಯು ಸಂಸಾರವೆ ನಿತ್ಯವಿಹುದುಬಂಧನವು ನಿನಗೆ ಇಹುದು ಗುರುವಿನ ಪಾದವಹೊಂದು ಮುಂದೆ ಚಿದಾನಂದನಹೆ ನೀನೀಗ ಎಂದು 5
--------------
ಚಿದಾನಂದ ಅವಧೂತರು
ನಮಗೆಲ್ಲಿ ಮನೆಗಳಯ್ಯ ನಾರಾಯಣ ಪ ಕಮಲ ಬ್ರಹ್ಮಾಂಡ ಕೋಟಿ ಒಡಲೊಳು ತಾಳ್ದಂಥರಮಾಧವ ನಿಮಗೆ ನೀರೊಳಗೆ ವಾಸವಾಯಿತುಅ ಜಲನಿಧಿಯನುತ್ತರಿಸಿ ಲಂಕೆಯನೈವುದಕೆಕುಲಗಿರಿಯ ಕಿತ್ತು ತಂದು ಸೇತುವೆ ಕಟ್ಟಿಸಲೆ ದೈತ್ಯನ ಕೊಂದು ಸೀತೆಯ ತಂದನಿಗೆ ಗಿರಿತಲೆಯ ಮೇಲೆ ಇಹ ಪ್ರಾಪ್ತಿಯಾಯಿತು 1 ಪೃಥ್ವಿಯ ತಲೆಯನು ಪರೆಮಾಡಿ ತಾಳಿದಳುತ್ಯಾನಮಮ್ಮನ ತಂದೆಯ ಮೆಲುವನಮೃತ್ಯುನಾಶಕನೆಂದು ಸುತ್ತಿದ್ದಾನೆಹುತ್ತಿನೊಳಗೆ ಇಹ ಪ್ರಾಪ್ತಿಯಾಯಿತು 2 ನಾಡದೇವತೆಗಳ ಸೆರೆಗಳ ಬಿಡಿಸಿಕ್ರೀಡೆಯಾಯಿತು ನಿಮ್ಮ ದಯದಿಂದಲಿರೂಢಿಯೊಳತಿ ಸೇವಕನಾದ ಗರುಡನಿಗೆಬೋಡು ಮರದ ಮೇಲೆ ಇಹ ಪ್ರಾಪ್ತಿಯಾಯಿತು 3 ಜಲನಿಧಿ ಸುತನ ಮೊಮ್ಮಗನ ಕೊಂದ ಶೂರ ನಕುಲ ಸಹದೇವ ಪಾಂಡವರೈವರುಲಲನೆ ದ್ರೌಪದಿಯೊಂದಿಗೆ ವನವಾಸ ಹೋಗಿಹೊಲದೊಳಗೆ ಇಹ ಪ್ರಾಪ್ತಿಯಾಯಿತು4 ಇಂಥಿಂಥವರಿಗೆಲ್ಲ ಮನೆಯಿಲ್ಲದಿರಲು ನ-ನ್ನಂಥವನಿಗಿನ್ನೆಲ್ಲಿ ಇರಲು ಸಾಧ್ಯಕಂತುಪಿತ ಕಾಗಿನೆಲೆಯಾದಿಕೇಶವನೆ ನಿ-ಶ್ಚಿಂತನಾಗಿ ನಿಮ್ಮ ಗುಡಿಯಲಿಪ್ಪೆನು 5
--------------
ಕನಕದಾಸ
ನಮಿಪೆನು ಗುರುರಾಯನೆ | (ನಾ ನಿನ್ನನು)| ನಮಿಪೆನು ಗುರುರಾಯನೆ ಪ ಕುಮತಿಯಾಗಿರ್ದೆನ್ನ ಮಮತೆಯೊಳ್ ಪೊರೆಯೆಂದು ಅ.ಪ ಪಾದ ಕಂದನ ಸಲಹೆಂದು 1 ಇನ್ನು ನೀ ವೇದಾಂತವನ್ನು ಬೋಧಿಸೆಂದೆನುತ 2 ದೆನ್ನಯ ನಿಜದರಿವ ಚೆನ್ನಾಗಿ (ಪೇಳೆಂದು) 3 ಸಾಗರದೊಳಗೈಕ್ಯವಾಗುವಂತೆಸಗಯ್ಯ 4 ಗುರು ಪಾರ್ವತೀಶ ಸದ್ಗುರುವೆ ತ್ರೈಜಗದೀಶ 5 ಇಂದೆನ್ನ ಹೃದಯದೊಳ್ ನಿಂದು ಮೈದೋರೆಂದು 6 ನಾದ ಸ್ವರೂಪನೆಯಾದ ಸದಾನಂದ 7
--------------
ಸದಾನಂದರು
ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ನಮೋ ನಮೋ ನಮೋ ಎಂಬೆ ನಿನಗೆ ಸ್ವಾಮಿ ರಘುರಾಮಾ| ಶಮಲ ಹಾರಿಸಿ ವಿಮಲ ಮತಿಯ ಕೊಡುವ ಪುಣ್ಯ ನಾಮ ಪ ಮುನ್ನ ಮಾಡಿದ ಕೋಟಿ ಜನುಮದ ಪುಣ್ಯ ಒದಗಿತೆಂದು| ಕಮಲ ಕಂಡೆ ಧನ್ಯನಾದೆನಿಂದು 1 ಪರಮ ಪುರುಷನೆಂಬುದರಿಯ ಮಾಡಿದಪರಾಧವ ಕರುಣದಿಂದ ಕ್ಷಮಿಸಿ ಹೊರಿಯಬೇಕು ಪೂರ್ಣಬೋಧಾ 2 ಇಂದು ಮೊರೆಯಹೊಕ್ಕೆ ಸಲಹು ನಿಮ್ಮ ಸೇವೆಯಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಪ ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ ಜಗವೆಲ್ಲ ಧಾರಿಯನು ಯೆರದು ಸಂಹ್ಯಾ ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ ಈ ಭೂಮಿಯನು ಸಾಧಿಸಿದನು1 ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ ಗತಿ ತಪ್ಪಿದಂತೆ ನಿರ್ಮಾಣ ಮಾಡಿ ಸತಿಪತಿಯ ಉದ್ಧರಿಸಿ ಬರುತ ಕಂಡನು ಉ ನ್ನತವಾದ ಪರ್ವತವು ಯೋಜನವಿರೆ 2 ಬೆರಗಾಗಿ ಪರಶುರಾಮನು ಬಂದು ಈ ಗಿರಿಯಲ್ಲಿ ನಿಂದು ಅಗ್ರಭಾಗವೈದೆ ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ ನಿರೀಕ್ಷಿಸಿ ಸುಜನರು ಇದ್ದನಿತು3 ಸಿರಿರೂಪ ದುರ್ಗಾನಾಮಕಳಾದ ದೇವಿಯನು ಕರದು ಈ ಸ್ಥಾನದಲಿ ಇರ ಹೇಳಿದಾ ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು ದುರುಳರಾತಿಯರ ಸಂಹರಿಸುಯೆಂದು 4 ಅನಿತರೊಳಾಕಾಶದಲಿ ಜಯ ಜಯವೆಂದು ಅನಿಮಿಷರು ಕೊಂಡಾಡಿ ನಗುತ ದಿವ್ಯ ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು ಮ್ಮನರಾಗಿ ಬಂದು ತುತಿಸಿದರು ಹರಿಯಾ 5 ಅಂದಿನಾರಭ್ಯವಾಗಿ ಇದೇ ವಿಮಾನಗಿರಿ ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ ಎಂದೆಂದಿಗೆ ಇದನೆ ನೋಡಿದವರಿಗೆ ದೋಷ ಗಂಧವಾದರು ಇಲ್ಲಾ ಇಲ್ಲ ಇಲ್ಲಾ6 ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ ಪಾಮರರ ಉದ್ಧರಿಸಬೇಕು ಯೆಂದು7 ಪರಿ ಶ್ರೀಹರಿಯ ಧ್ಯಾನವನು ಮಾಡಲು ಶ್ರೀಪತಿ ವರವಿತ್ತ ಮುಂದೆ ಮಹ ಪಾಪಿ ಪುಟ್ಟುವನು ಅವನಗೋಸುಗ ವಾಯು ತಾ ಪರಮ ಪ್ರೀತಿಯಲಿ ಜನಿಸುವನು 8 ಅಂದ ಮಾತಿಗೆ ಯಮನು ಬಹುಕಾಲದಲಿದ್ದ ಛಂದದಿಂದದಿ ಪೋದ ತನ್ನ ಪುರಕೆ ಇಂದಿರಾಪತಿ ನೇಮಿಸಿದ ಪರಿಯಂತೆ ಆ ನಂದತೀರ್ಥರಾಗಿ ಜನಿಸಿದರು 9 ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ ಜ್ಞಾನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ ಮಾನದಲಿ ಕೊಂಡಾಡಿ ಸುಖಿಪರಲ್ಲಿ10 ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ ಸುರರು ಮುಕ್ತಿಯಿನಿತ್ತು 11 ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ ಎರಡೊಂದು ಏಳು ಕುಲತೃಪ್ತರಹರೊ ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ ಎರಡೊಂದು ಋಣದಿಂದ ಕಡೆಗಾಗುವ 12 ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ ಬಲಿವನು ಸುರದ್ರುಮದಂತೆ ರಂಗ ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ ಬಲು ವಿಷಗಳು ಪೋಗಿ ನಿರ್ಮಲಹರೋ 13 ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು ವಾಲಯಾ ಶುಭವಿದ್ಯ ಫಲಿಸುವದು ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ ಶೀಲತೆಯು ಕೇಳೆ ಮನೋ ವಾಯುವೇಗ 14 ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು ತೃಪ್ತನಾಗುವ ಮನುಜ ಮೃಷ್ಟಾನ್ನದಿ ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು ಪುತ್ರೋತ್ಸವಗಳಿಂದ ಬಾಳುತಿಪ್ಪ15 ಚಾಪ ಗದ ಪದುಮ ಎರಡೊಂದು ತೀರ್ಥಗಳು ಇರುತಿಪ್ಪ ವಾಸುದೇವನೆಂಬೊ ನಾಮಾ ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ ವಿರಜೆಯಲಿ ಸ್ನಾನ ಸಂದೇಹವಿಲ್ಲ 16 ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ ಎಣಿಕೆ ಇಲ್ಲದೆ ಚರಿತೆ ಅನುದಿನದಲಿ ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ 17 ಮಧ್ವ ಮಧ್ವ ಎಂಬೋ ನಾಮವನು ನುಡಿದರೆ ಬದ್ಧವಾಗಿದ್ದ ಭವಾಬ್ಧಿಯಿಂದ ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ ಗೆದ್ದು ಚರ್ಮ ದೇಹದಿಂದ ನಲಿವ 18 ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ ಆಪನ್ನ ಪರಿಪಾಲ ಅಮೃತಫಲದ ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ ರೂಪಾತ್ಮಕ ಪ್ರಾಣ ಭಾರತೀಶ19 ಕೇಳಿ ಹರುಷಿತನಾಗಿ ಬಂದ ವೈಭವದಂತೆ ಕಾಲ ಹಿಂಗಳಿಯದೇ ನಿತ್ಯದಲ್ಲಿ ಲೀಲೆಯಲಿ ವಾಸವಾಗಿರಲೆಂದು ಅಂದು ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು20 ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ ರಂಜನವಾಯಿತು ಇದೇ ನಾಮದಲ್ಲಿ ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ ಕಂಜವನು ಭಜಿತ ಗುರುರಾಜ ಜಯತು 21
--------------
ವಿಜಯದಾಸ
ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ ನಮೋ ನರಹರಿ ನಾರಾಯಣ ಶ್ರೀಪರಮಪುರುಷಗೆ ಪ ನಂದನಕಂದ ಮುಕುಂದ ಇಂದಿರೇಶಗೆ ಮಂದರೋದ್ಧಾರ ಹರಿಸುಂದರಾಂಗಗೆ ಅ.ಪ ಕಂದನ ನುಡಿಯ ಕೇಳಿ ತಾಯಿ ತಂದೆಗಳು ಆ ನಂದ ಪಡುವ ತೆರದಿ ಮಂದಮತಿ ಯಿಂದ ಪೇಳಿದ ಹೊಂದಿಕೆಯಿಲ್ಲದ ನುಡಿಯ ಕುಂದ ಕ್ಷಮಿಸಿ ನಿಮ್ಮ ಪಾದದ್ವಂದ್ವದಲಿರೆಸೆನ್ನ 2 ವಾಸುದೇವ ನಿಮ್ಮ ಪಾದದಾಶೆಯಿಂದಿದೆ ಆತ್ಮ ಇ ನ್ನೇಸು ದಿನ ಈ ಹೇಸಿಕೆಭವದಿ ಘಾಸಿಪಡುವುದೈ ವಾಸುಕಿಶಯನ ಶ್ರೀನಿ ವಾಸ ರಂಗ ಶೀಘ್ರದಿಂಮುಕ್ತಿಯ ಪಾಲಿಸೋ 3
--------------
ಯದುಗಿರಿಯಮ್ಮ
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ನರಜನ್ಮವನು ಕೊಟ್ಟು ಸಲಹಿದೆ ಯೆನ್ನನು ಕೊರತೆಯೇನಿಲ್ಲವೋ ಗೋವಿಂದಾ ಪ ಉರುತರ ಜನ್ಮವ ಸುರುಚಿರಾಂಗಗಳನ್ನು ಅರಿವು ಇಂದ್ರಿಯಗಳ ಸ್ಮರಣೆಯಿಂ ಕೂಡಿದ ಅ.ಪ ನಿನ್ನಧ್ಯಾನವ ಗೈವವೊಲೆನ್ನ ಈ ರಸನೆಯು ನಿನ್ನ ಮೂರ್ತಿಯ ನೋಡಲಿ ಈ ನೇತ್ರಾ ನಿನ್ನ ಪೂಜಿಸೆ ಹಸ್ತ ನಿನ್ನ ಚರಿತೆಗೆ ತರ್ಕಾ ನಿನ್ನ ನಮಿಸಲು ಶಿರವು ನಿನ್ನಾಲಯಕೆ ಕಾಲು 1 ನಿನ್ನ ಪಾದದ ತುಳಸಿಯನ್ನು ಘ್ರಾಣಿಸ ಇನ್ನೇನು ಬೇಡವಯ್ಯ ಸನ್ನುತಾಂಗ ಗೋಪಾಲ 2 ಧನಕನಕಾಂಬರ [ವಸ]ನದ ಧರ್ಮ ಮೋಕ್ಷದೊ ಳಿನಿತಾಸೆಯೆನಗಿಲ್ಲ ಕೇಳಯ್ಯ ಜನುಮ ಜನುಮದೆ ನಿನ್ನ ಘನಪುಣ್ಯ ನಾಮವ ನೆನೆವ ಭಕ್ತಿಯು ಮಾತ್ರ ಮನದೆ ನೆಲೆಗೊಳಿಸಯ್ಯ 3 ದೇವದೇವನೆ ನಿನ್ನ ಸೇವಕರಿಗೆ ಯೆನ್ನ ಸೇವಕನೆನಿಸದೆ ಬಿಡಬೇಡಾ ದಾಸರಸೇವಿಸಲೆನ್ನ ಜೀವ ತುಡಿಯುವುದೊ ವಿಸಲೆ ದಾಸರದಾಸ ಶ್ರೀ ಮಾಂಗಿರಿಯರಸ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನರದೇಹ ನಿತ್ಯವಲ್ಲ ನಾಳೆ ಮೃತ್ಯು ಬಿಡುವದಲ್ಲ ಪ ಮರುಳುಮನವೆ ಕೇಳು ಸೊಲ್ಲ ಹರಿಯ ಮರೆವುದುಚಿತವಲ್ಲ ಅ.ಪ ಹಿಂದಿನವರು ಪಟ್ಟಪಾಡು ಇಂದು ನೀನು ತಿಳಿದು ನೋಡು ಸಂದೇಹಗಳೀಡಾಡು ಒಂದೇ ಮನದಿ ಹರಿಯ ಕೊಂಡಾಡು 1 ಹರಿ ನಮಗನಾದಿ ಮಿತ್ರ ವರಶೋಭನ ಚಾರಿತ್ರ ಪೊರೆವದೇನು ನಮ್ಮ ಚಿತ್ರ ಕರುಣಿಸುವನು ಕಮಲನೇತ್ರ 2 ಹೊನ್ನು ಹೆಣ್ಣು ಮಣ್ಣು ಮೂರು ನಿನ್ನದೆಂದು ಹಿಗ್ಗದಿರು ಬೆನ್ನು ಹೊಡೆವರು ಯಮನವರು 3 ಏನು ಸುಖವು ಕಾಣಲೇಶ ಜೋಕೆ ಬಿಡುಬಿಡು ದುರಾಶಾ ಬೇಕು ಸುಜನರ ಸಹವಾಸ 4 ಗುರುರಾಮವಿಠಲ ಮುಕುಂದ 5
--------------
ಗುರುರಾಮವಿಠಲ