ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ
ಸಾರ ವೇದಗಳ ವಿಧಿಗಿತ್ತ
ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-
ತಾರಗಾರತಿಯ ಬೆಳಗಿರೆ 1
ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ
ತೋರಿ ಬೆನ್ನಾಂತ ಸುರನುತ
ತೋರಿ ಬೆನ್ನಾಂತ ಸುರನುತ ಕೂರ್ಮಾವ-
ತಾರಗಾರತಿಯ ಬೆಳಗಿರೆ 2
ಧಾತ್ರಿಯ ಕದ್ದೊಯ್ದ ದೈತ್ಯನÀ ಮಡುಹಿದ
ಎತ್ತಿ ದಾಡೆಯಲಿ ನೆಗಹಿದ
ಎತ್ತಿ ದಾಡೆಯಲಿ ನೆಗಹಿದ ವರಾಹ-
ಮೂರ್ತಿಗಾರತಿಯ ಬೆಳಗಿರೆ 3
ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ
ಒಡಲ ಸೀಳಿದ ಹಿರಣ್ಯಕನ
ಒಡಲ ಸೀಳಿದ ಹಿರಣ್ಯಕನ ನರಸಿಂಹ
ಒಡೆಯಗಾರತಿಯ ಬೆಳಗಿರೆ 4
ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ
ಈ ಮೂರು ಜಗವ ಈರಡಿಯ
ಈ ಮೂರು ಜಗವ ಈರಡಿ ಮಾಡಿ ಅಳೆದ
ವಾಮನಗಾರತಿಯ ಬೆಳಗಿರೆ 5
ಅಂಬರಕೇಶನ್ನ ನಂಬಿದ ಕತ್ರಿಯರ
ಸಂಭ್ರಮ ಕುಲವ ಸವರಿದ
ಸಂಭ್ರಮ ಕುಲವ ಸವರಿದ ಪರಶುರಾ-
ಮೆಂಬಗಾರತಿಯ ಬೆಳಗಿರೆ 6
ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ
ತಂದ ರಾವಣನ ತಲೆಹೊಯ್ದ
ತಂದ ರಾವಣನ ತಲೆಹೊಯ್ದ ರಘುರಾಮ-
ಚಂದ್ರಗಾರತಿಯ ಬೆಳಗಿರೆ 7
ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ
ದುಷ್ಟ ಕಂಸನ್ನ ಕೆಡಹಿದ
ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ
ಕೃಷ್ಣಗಾರತಿಯ ಬೆಳಗಿರೆ 8
ರುದ್ರನ್ನ ತ್ರಿಪುರದೊಳಿದ್ದ ಸತಿಯರ
ಬುದ್ಧಿ ಭೇದಮಾಡಿ ಕೆಡಿಸಿದ
ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ
ಬೌದ್ಧಗಾರತಿಯ ಬೆಳಗಿರೆ 9
ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು
ತಾ ಪಿಡಿದು ಖಡ್ಗ ತುರಗವ
ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ-
ರೂಪಗಾರತಿಯ ಬೆಳಗಿರೆ 10
ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ
ಹತ್ತವತಾರಿ ಹಯವದನ
ಹತ್ತವತಾರಿ ಹಯವದನನ ಪಾಡುತ
ಚಿತ್ರದಾರತಿಯ ಬೆಳಗಿರೆ 11