ಬಾರೋ ವೆಂಕಟಗಿರಿನಾಥ| ದಯ-
ದೋರೈ ಭಕುತರ ಪ್ರೀತ ಪ.
ಮಾರಪಿತ ಗುಣಹಾರ ಮಂದರ-
ಧಾರ ದೈತ್ಯಸಂಹಾರ ಸುಜನೋ
ದ್ಧಾರ ಮಮಹೃದಯಾರವಿಂದಕೆ
ಬಾರೋ ಕೃಪೆದೋರೋ ವೆಂಕಟ ಅ.ಪ.
ವೃಷಭಾಸುರನೊಳು ಕಾದಿ ಸಾ-
ಹಸವ ಮೆರೆಸಿದ ವಿನೋದಿ
ವಶಗೈದು ದೈತ್ಯನ ಶಿರವ ಕತ್ತ-
ರಿಸುತಲಿ ನೀನಿತ್ತೆ ವರವ
ವಸುಧೆಯೊಳಗಿಹ ಸುಜನರನು ಮ-
ನ್ನಿಸುತಲಿಷ್ಟವನಿತ್ತು ಕರುಣಾ-
ರಸದಿ ಸಲಹುವ ಬಿಸಜನಾಭ ಶ್ರೀ-
ವೃಷಭಾಚಲವೊಡೆಯ ವೆಂಕಟ 1
ಅಂಜನೆಯೆಂಬಳ ತಪಕೆ ಭಕ್ತ-
ಸಂಜೀವನೆಂಬ ಶಪಥಕೆ
ರಂಜಿಪ ಪದವಿತ್ತೆ ಮುದದಿ ಖಿಲ-
ಭಂಜನಮೂರ್ತಿ ಕರುಣದಿ|
ಮಂಜುಳಾಂಗ ಶ್ರೀರಂಗ ಸುರವರ
ಕಂಜಭವವಿನುತಾದಿ ಮಾಯಾ-
ರಂಜಿತಾಂಘ್ರಿ ಸರೋರುಹದ್ವಯ
ಅಂಜನಾಚಲವೊಡೆಯ ವೆಂಕಟ 2
ಶೇಷನ ಮೊರೆಯ ತಾ ಕೇಳಿ ಬಲು
ತೋಷವ ಮನಸಿನೊಳ್ತಾಳಿ
ದೋಷರಹಿತನೆಂದೆನಿಸಿ ಕರು-
ಣಾಶರಧಿಯ ತಾನೆ ಧರಿಸಿ
ಶ್ರೀಶ ಹರಿ ಸರ್ವೇಶ ನತಜನ-
ಪೋಷ ದುರ್ಜನನಾಶ ರವಿಶತ-
ಭಾಸ ಕೌಸ್ತುಭಭೂಷ ವರ ಶ್ರೀ-
ಶೇಷಾಚಲವಾಸ ವೆಂಕಟ 3
ಮಾಧವವಿಪ್ರ ವಿರಹದಿ ಭ್ರಷ್ಟ
ಹೊಲತಿಗಳನು ಸೇರ್ದ ಮುದದಿ
ಸಾದರದಲಿ ನಿನ್ನ ಬಳಿಗೆ ಬರೆ
ನೀ ದಯಾನಿಧಿ ಕಂಡು ಅವಗೆ
ಶೋಧಿಸುತ ಪಾಪಗಳೆಲ್ಲವ
ಛೇದಿ ಬಿಸುಡುತ ನಿಂದು ವೆಂಕಟ-
ಭೂಧರದ ನೆಲೆಯಾದ ನಾದವಿ-
ಭೇದಬಿಂದು ಕಲಾದಿಮೂರುತಿ 4
ಧನಪತಿಯೊಳು ತಾನು ಸಾಲ ಕೊಂಡ
ಘನಕೀರ್ತಿಯಿಂದ ಶ್ರೀಲೋಲ
ವನಿತೆ ಪದ್ಮಾವತಿಪ್ರೀತ ಭಕ್ತ-
ಜನಸುರಧೇನು ಶ್ರೀನಾಥ
ವನಧಿಶಯನ ಮುರಾರಿ ಹರಿ ಚಿ-
ಧ್ವನಿನಿಭಾಂಗ ಸುಶೀಲ ಕೋಮಲ
ವನಜನಾಭ ನೀಯೆನ್ನ ಕೃಪೆಯೊಳ-
ಗನುದಿನದಿ ಕಾಯೊ ಕೃಪಾಕರ 5
ಛಪ್ಪನ್ನೈವತ್ತಾರು ದೇಶದಿಂದ
ಕಪ್ಪವಗೊಂಬ ಸರ್ವೇಶ
ಅಪ್ಪ ಹೋಳಿಗೆಯನ್ನು ಮಾರಿ ಹಣ-
ಒಪ್ಪಿಸಿಕೊಂಬ ಉದಾರಿ
ಸರ್ಪಶಯನ ಕಂದರ್ಪಪಿತ ಭಜಿ-
ಸಿರ್ಪವರ ಸಲಹಿರ್ಪ ಕುಜನರ
ದರ್ಪಹರಿಸುತ ಕಪ್ಪಕಾಣಿಕೆ
ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6
ಚಾರುಚರಣತೀರ್ಥವೀಂಟಿ ನಿನ್ನೊ-
ಳ್ಸಾರಿ ಬರುವ ಪುಣ್ಯಕೋಟಿ
ಸೇರಿದೆ ಕೊಡು ಮನೋರಥವ ಲಕ್ಷ್ಮೀ-
ನಾರಾಯಣನೆನ್ನೊಳ್ದಯವ
ತೋರು ನಿರತ ಸಮೀರಭವ ವರ-
ದಾರವಿಂದದಳಾಕ್ಷ ತಿರುಪತಿ
ವೀರ ವೆಂಕಟರಮಣ ಮದ್ಬಹು-ಭಾರ ನಿನ್ನದು ಪಾಲಿಸೆನ್ನನು 7