ಒಟ್ಟು 96 ಕಡೆಗಳಲ್ಲಿ , 1 ದಾಸರು , 95 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮದಾಚಾರ್ಯ ಮುನಿ ಪ್ರೇಮದಲಿ ಸಲಹೊ ಪ. ಕಾಮಪೂರ್ಣನೆ ಎನ್ನ ಕಾಮಿತವನೀಯೊ ಅ.ಪ. ದ್ವಿತೀಯಯುಗದಲಿ ವಾಯುಸುತನಾಗಿ ಅವತರಿಸಿ ಕ್ಷಿತಿಸುತೆಗೆ ಉಂಗುರವ ಹಿತದಿಂದಲಿತ್ತೆ ತೃತಿಯುಗದಲಿ ಕುಂತಿಸುತನಾಗಿ ಕೌರವರ ಹತಗೊಳಿಸಿ ಹರಿಯಪದ ಹಿತದಿ ಧ್ಯಾನಿಸಿದೆ 1 ಕಲಿಯುಗದೊಳವತರಿಸಿ ಕಲಿಕಲ್ಮಷವ ಕಳೆದು ಒಲಿಸಿ ಹರಿಯನು ತುರಿಯ ಆಶ್ರಮದಲಿ ಸುಲಭಮಾರ್ಗವ ತೋರಿ ಸುಜನರನು ರಕ್ಷಿಸಿದೆ ಕಲಿಕಾಲ ಸಲಹೆನ್ನ ನೆಲಸಿ ಹೃದಯದಲಿ 2 ಆಚಾರ್ಯರೂಪದಲಿ ಗೋಚರಿಸಿ ಸ್ವಪ್ನದಲಿ ಸೂಚಿಸಿದೆ ದಾಸತ್ವ ಸಿದ್ಧಿಸಲಿ ಎಂದು ಯಾಚಿಸೆನೊ ಅನ್ಯರನು ನಾಚಿಕೆಯ ತೊರೆದಿನ್ನು ನೀಚತನವನೆ ಬಿಡಿಸಿ ಗೋಚರಿಸೊ ಸತತ 3 ಉಪದೇಶವನೆ ಇತ್ತೆ ಗುಪಿತದಿಂ ಸ್ವಪ್ನದಲಿ ಚಪಲತನದಲಿ ನಾನು ಅರಿಯಲಿಲ್ಲ ಅಪರಿಮಿತ ಮಹಿಮ ಶ್ರೀ ಗುರುಗಳಲಿ ನೀ ನಿಂತು ತಪ್ಪನೆಣಿಸದೆ ಎನ್ನ ನಮನ ಸ್ವೀಕರಿಸೊ 4 ವೇದವ್ಯಾಸರ ಪ್ರಿಯನೆ ಮೋದದಲಿ ಶಿಶುವಾದೆ ಶ್ರೀ ದುರ್ಗೆ ತಾ ಬಂದು ಎತ್ತಿದಳೊ ನಿನ್ನ ವಾದಿಗಳ ಗೆದ್ದ ಅನಾದಿ ಮುನಿ ನಮಿಸುವೆನೊ ಶ್ರೀದ ಗೋಪಾಲಕೃಷ್ಣವಿಠ್ಠಲನ ತೋರೊ 5
--------------
ಅಂಬಾಬಾಯಿ
ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ ಕಾಣಿಸದೊ ನಿನಗೆನ್ನ ಕಷ್ಟ ಪ. ಜಾಣತನವಿದನೆಲ್ಲಿ ಮಾನನಿಧಿ ಕಲಿತೆಯೊ ಗಾನವಿಲೋಲ ಸ್ವಾಮಿ ಪ್ರೇಮಿ ಅ.ಪ. ಎಷ್ಟು ಕೂಗಲು ದಯವು ಪುಟ್ಟಲಿಲ್ಲವೊ ನಿನಗೆ ಕೃಷ್ಣಮೂರುತಿಯೆ ಕೇಳೊ ಕಷ್ಟಪಡಿಸುವುದೀಗ ದಿಟ್ಟತನವೇ ನಿನಗೆ ಶ್ರೇಷ್ಠ ನೀನೆನಿಸಿಕೊಂಡು ಪಟ್ಟವ್ಯಾತಕೆ ನಿನಗೆ ಮೂರು ಲೋಕದ ರಾಜ್ಯ ಬಿಟ್ಟು ಬಿಡು ನೀನೀಗಲೆ ದೃಷ್ಟಿಯಿಂದಲಿ ನೋಡಿ ನಿನ್ನ ತೋರೆಂದೆನಲು ಸೊಟ್ಟ ತಿರುಹಿರುವೆ ಮುಖವ ದೇವ 1 ತೋರೊ ಮೋರೆಯನೆನಲು ನೀರ ಪೋಗುವೆ ಬೆನ್ನು ಭಾರ ಪೊತ್ತು ಕೋರೆ ತೆರೆವೆ ಘೋರ ರೂಪವ ತೋರಿ ಈ ರೀತಿ ಬೆದರಿಸುವೆ ದಾರಿ ಎನಗಿನ್ನಾವುದೊ ನಾರಿಯನೆ ಪೆತ್ತು ನೀ ನಾರಿಯನೆ ಕೊಂದು ನಿನ್ನ ನಾರಿ ಚೋರನ ವಧಿಸಿದೆ ನಾರೆರೋಸ್ತ್ರವ ಕದ್ದು ನಾರಿಯರ ವ್ರತ ಕೆಡಿಸಿ ಏರಿ ಓಡಿದೆ ಕುದುರೆಯ ಜೀಯಾ 2 ಈ ಪರಿಗೈದರೆ ಕಾಪಾಡುವವರ್ಯಾರೊ ಭೂಪರೈವರ ಪೊರೆದನೆ ತಾಪಪಡುವುದು ನಿನಗೆ ತೋರ್ಪುದಿಲ್ಲವೆ ದೇವ ಪಾಪಿ ಎಂದೆನಬೇಡವೊ ನೀ ಪಾರುಗೊಳಿಸಬೇಕೀಪರಿಯ ಬವಣೆಗಳ ಶ್ರೀಪತಿಯೆ ಶ್ರೀನಿವಾಸ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದೆಕಾಪಾಡುವವರನರಿಯೆ ದೊರೆಯೆ 3
--------------
ಅಂಬಾಬಾಯಿ
ಸತಿ ಪ. ನಾರಿಮಣಿಯೆ ನಿನ್ನ ಯಾರು ವರ್ಣಿಸುವರೆ ಸಾರಸಾಕ್ಷಿಯೆ ನಿನ್ನ ಸಾರಿ ಭಜಿಪೆ ಮುನ್ನ 1 ರಂಗನ ಅಂಗನೆ ಮಂಗಳ ರೂಪಳೆ ರಂಗು ಮಾಣಿಕ್ಯದ್ವಜ್ರ ಅಂಗಾಭರಣವಿಟ್ಟು 2 ಶ್ರೇಷ್ಠರೂಪಳೆ ಮನಮುಟ್ಟಿ ಪೂಜಿಪೆ ನಿನ್ನ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನರಸಿ 3
--------------
ಅಂಬಾಬಾಯಿ
ಹರಿ ಎನ್ನು ಹರಿ ಎನ್ನು ಹರಿ ಎನ್ನು ಮನವೆ ಪ. ನಿರುತದಿ ಪೊರೆವನ ಮರೆವರೆ ಮನವೆ ಅ.ಪ. ಸರಿಯುವುದು ಆಯುಷ್ಯ ಸಂಪತ್ತು ನೋಡು ಬರುತಿದೆ ಮೃತ್ಯುವು ಕರೆಯಲು ನೋಡು ಹರಿನಾಮ ಯಮದಂಡ ಕಡಿವುದು ನೋಡು ಪರಮಪುರುಷನ ನೀ ಬಿಡದೆ ಕೊಂಡಾಡು 1 ಹರಿಯ ನಾಮಾಮೃತ ಸುಜನಕೆ ನೀಡು ಹರಿಯ ಜ್ಞಾನಾನಂದಾಂಬುಧಿಯೊಳೊಲ್ಯಾಡು ಹರಿಯ ಮೂರುತಿಯನ್ನು ಮನದಲ್ಲಿ ನೋಡು ಹರಿಭಕ್ತಿ ಮದವೇರಿ ಕುಣಿ ಕುಣಿದಾಡು 2 ಹರಿಗುರು ಸ್ಮರಣೆಯ ನಿರುತದಿ ಮಾಡು ಹರಿಭಕ್ತಿ ಲಾಂಛನ ಮೈಯಲ್ಲಿ ಮೂಡು ಹರಿದಾಸ ಸಂಪತ್ತಿನೊಳಗೆ ಓಲಾಡು ಹರಿಯ ಮನದಿ ಕಂಡು ನಲಿನಲಿದಾಡು 3 ಕಾಮಕ್ರೋಧಗಳನ್ನು ಖಂಡಿಸೀಡ್ಯಾಡು ನೇಮ ಶ್ರೀ ಗುರು ಆಜ್ಞೆಯಂದದಿ ಮಾಡು ಯಾಮ ಯಾಮಕೆ ಹರಿನಾಮವ ಪಾಡು ಶ್ರೀಮದಾನಂದತೀರ್ಥರ ಮತ ನೋಡು 4 ಶ್ರೀ ಪರಮಾತ್ಮನ ಗುಣವ ಕೊಂಡಾಡು ಶ್ರೀಪತಿ ಭಕ್ತರ ಸಂಗದಿ ಕೂಡು ಭವ ಹರ ಸ್ತುತಿ ಮಾಡು ಗೋಪಾಲಕೃಷ್ಣವಿಠ್ಠಲನ ದಯ ಬೇಡು 5
--------------
ಅಂಬಾಬಾಯಿ
ಹ್ಯಾಗೆ ದರುಶನ ಪಾಲಿಸುವೆ ವಿಠ್ಠಲನೆ ಹ್ಯಾಗೆನ್ನ ಪೊರೆವೆ ವಿಠ್ಠಲನೆ ಪ. ನಾಗಶಯನನೆ ನಿನ್ನ ನೋಡಬೇಕೆಂದು ಮನ ಈಗ ತವಕಿಸುತಿಹುದು ಹ್ಯಾಗೆ ಮಾಡಲಿ ವಿಠಲ ಅ.ಪ. ಅರಿಯದಾ ದೇಶದಲಿ ಆಲ್ಪರಿದು ಅನ್ಯರಿಗೆ ಬರಿದಾಯ್ತು ಬಯಕೆ ವಿಠ್ಠಲನÉ ಪರಿ ಹರಿಯೆ ನೀನಲ್ಲದಲೆ ಪೊರೆಯುವರ ಕಾಣೆ ವಿಠ್ಠಲನÉ 1 ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ಬಲವಿಲ್ಲ ಹ್ಯಾಗೆ ಬರಲಿನ್ನು ವಿಠ್ಠಲನೆ ನ್ಯಾಯದಿಂದಲಿ ಹಿಂದಿನಾ ಭಕ್ತರಂದದಲಿ ಕಾಯಬಾರದೆ ಎನ್ನ ಪೇಳೂ ವಿಠ್ಠಲನೆ 2 ಭಕ್ತ ಸುರಧೇನೆಂಬೊ ಬಿರುದು ಕೇಳೀ ಬಂದೆ ಚಿತ್ತಕ್ಕೆ ಬರದೆ ವಿಠ್ಠಲನೆ ಭಕ್ತರಾ ಕೂಟದಲಿ ಸೇರಲಿಲ್ಲವೆ ನಾನು ಭಕ್ತವತ್ಸಲನಲ್ಲವೇನೊ ವಿಠ್ಠಲನೆ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೇಶನೆ ಕಾಯೊ ಸತತ ವಿಠ್ಠಲನೇ ಹಿಂದಿನವರನು ಪೊರೆದ ಕೀರ್ತಿ ಉಳಿಯಲು ಈಗ ಕುಂದನೆಣಿಸದೆ ಕಾಯಬೇಕೊ ವಿಠ್ಠಲನೇ 4 ಕರುಣಿ ಎನ್ನಯ್ಯ ಕಂಗೆಡಿಸದಲೆ ಕಾಪಾಡೊ ಚರಣವೇ ಗತಿ ಎಂದು ಬಂದೆ ವಿಠ್ಠಲನೆ ಗುರು ಅಂತರ್ಯಾಮಿ ಎನ್ನಭಿಮಾನ ನಿನದೈಯ್ಯ ಸಿರಿಯರಸ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ