ಒಟ್ಟು 3206 ಕಡೆಗಳಲ್ಲಿ , 124 ದಾಸರು , 2368 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿರಯ್ಯ ಈ ರೂಢಿಯ ಜನರೆಲ್ಲಾ ಮೂಡಲಗಿರಿವಾಸನಾ ವೆಂಕಟೇಶನಾ ಪ ಬೇಡಿದ ವರಗಳ ಭಕ್ತ ಸಮೂಹಕೆ ನೀಡುತಲಿ ಕೊನೆಗೆ ನಿಜಪದವೀವನಾ ಅ.ಪ ಹರಿಬ್ರಹ್ಮರೊಳಾವನುತ್ತಮನೆಂದು ಪರೀಕ್ಷಿಸೆ ಭೃಗುಮುನಿಯು ತೆರಳಿಬಂದು ಅಜಹರನೊಪ್ಪದೆತಾ- ಪರಮಪದಕೆ ಬರಲು ಪರಿ ಸಿರಿಯ ತೊಡೆಯ ಮೇಲೆ ಹರಿಮಲಗಿರೆ ಕಂಡು ಚರಣದಿಂದ ಹೃದಯಕೆ ತಾಡನೆ ಮಾಡಲು ಪರಮ ಭಕುತಿಯಿಂದ ಋಷಿಯ ಪೂಜಿಸಿದ 1 ಸಿರಿಕರವೀರಪುರವನೈದಲು ಧರೆಯೊಳು ವೆಂಕಟಗಿರಿಯ ಸಾರುತ- ಲ್ಲಿರೆ ವಲ್ಮೀಕದಲಿ ಸರಸಿಜಭವ ಶಿವರು ತುರುಕರುವಾಗಿ ಪಾ ಲ್ಗರೆಯೆ ವಲ್ಮೀಕದಲಿ ದೊರೆ ಚೋಳನ ಭೃತ್ಯಗೋವನು ಭಾದಿಸೆ ಶಿರದೊಳಾಂತು ನೃಪಗೆ ಶಾಪವನಿತ್ತ 2 ಮನುಜನೋಲ್ ನಟಿಸುತಲಂಬರರಾಜನ ತನುಜೆಯ ಕೈಪಿಡಿದು ನೆನೆವರಿಗೆ ತಿರುಪತಿಯೆ ವೈಕುಂಠ- ವೆನುತ ಸಾರಿ ಒಲಿದು ಘನಮಹಿಮೆಗಳನು ತೋರಿ ಸಕಲರಿಂ ಗುಣನಿಧಿ ಶ್ರೀಗುರುರಾಮವಿಠಲ ಈ ಘಣಿಗಿರಿಯೊಳಗಿರುತಿಪ್ಪ ತಿಮ್ಮಪ್ಪ 3
--------------
ಗುರುರಾಮವಿಠಲ
ನೋಡಿರೆ ಅಡ್ಡ ಬಂದ ಗ್ರಹಚಾರಮಾಡೆ ಪಾಪವ ಮನ ಆತ್ಮಂಗೆಂಬುದು ಪ ಕಳ್ಳ ಕನ್ನದಿ ಸಾಯೆ ಡೊಳ್ಳುಕೋಮಟಿಗನತಳ್ಳಿ ಶೂಲಕೆ ಏರಿಸು ಎಂಬ ಗಾದೆಜಳ್ಳು ಮನವಿದು ನಿಲದೆ ಪಾಪವನು ಮಾಡಿದರೆಆ ಪಾಪ ಆತ್ಮಗೆ ಎಂದು ಊಹಿಸುವರು 1 ಕೋಳ ಹಾಕೆಂಬ ಗಾದೆಮೂಢ ಮನವಿದು ತಾನು ಪಾಪವನು ಮಾಡಿದರೆಆಡಲೇನದ ಆತ್ಮಗೆಂದು ಊಹಿಸುವರು 2 ಮನವು ಎಂಬುದು ಆತ್ಮನಿಂದ ಸಂಚರಿಪುದುಮನವು ಆತ್ಮನೊಳು ಲಯವು ಅಹುದುಮನವು ಮೊದಲಿಗೆ ಸುಳ್ಳು ಪಾಪಗಳಿಹವೆಲ್ಲಿಮನಕುಗೋಚರ ಚಿದಾನಂದ ಶುದ್ಧಾತ್ಮನು3
--------------
ಚಿದಾನಂದ ಅವಧೂತರು
ನೋಡಿರೆ ನೋಡಿರೆ ನಂದನ ಕಂದನ| ಆಡುವ ಆಟದ ಘನ ಮಹಿಮೆಯನು| ರೂಢಿಲಿ ಶಿಶುವೆಂದವರ ನುಡಿ ಮಾಡುವ ಬಲುಕುಂದಾ ಪ ದುರುಳತನವ ಬಲು ಮಾಡಲೈಶೋಧೆಯು| ತರಳನ ಚರಣವ ನೆರೆ ಕಟ್ಟಿದರೆ| ಒರಳವ ನೆಳೆದೊಯ್ದಾ ಭರದಲಿ ಮರಗಳ ನಡ ಮುರಿದಾ 1 ಸಿಕ್ಕಿದ ಗೋವಳನೆನುತಲಿ ಬಾಲೇರು| ಅಕ್ಕರದಲಿ ಹಿಡಿದೆಳೆತರಲವರಾ| ಮಕ್ಕಳ ರೂಪವನು ಆಗುತೆ ಠಕ್ಕಿಸಿ ಹೋಗುವನು2 ತಂದೆ ಮಹಿಪತಿ ನಂದನ ಪ್ರಭುವಿನಾ| ನಂದನ ಲೀಲೆಯ ಹೇಳಲೆನ್ನಳವೇ| ಒಂದಲ್ಲ ಎರಡಲ್ಲ ನೆಲೆಯನು ಇಂದುಧರನೇ ಬಲ್ಲ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ನೋಡು ನೋಡು ಜೀವನೆ ನೀ ನಿನ್ನಯ ನಿಜರೂಪವಾ ತಿಳಿದು ನಲಿದು ಜ್ಞಾನಪಥದಿ ಆನಂದವ ಹೊಂದು ನೀ ಪ ಅಮರನಾದ ಆತ್ಮ ನೀನು ಆನಂದದ ನಿಧಿಯೇ ನೀ ಅರಿತು ಇದನು ನಿನ್ನ ಮನದಿ ಶಾಂತರೂಪನಾಗು ನೀ 1 ನಾನೆನ್ನುವ ಅನಿಸಿಕೆಯದು ಅಡಗಲು ತಾನುಳಿಯುವಾ ತೋರಿಕೆಯನು ಮೀರಿದಾ ನಿರ್ವಿಕಲ್ಪ ನೋಡು ನೀ ಶ್ರವಣ ಮನನ ನಿದಿಧ್ಯಾಸ ಸಾಧನೆಗಳ ಮಾಡುತಾ ತಿಳಿವುದಾತ್ಮರೂಪ ನಾನೆ ಎಂದು ನಿನ್ನ ಮನದಲಿ 2 ಮನದೊಳಗೀಪರಿಯಾ ದೃಢತರದಲಿ ನಿಶ್ಚಿತಮಾಡೀ ದೇಹ ಮನಸು ಬುದ್ಧಿಗಳಿವು ನಾನಲ್ಲೆಂದರಿಯುತ ತೋರಿ ಅಡಗುತಿರುವ ಜಗವು ಕನಸೇ ಎಂದರಿತು ನೀ ಪರಮಸತ್ಯ ಆತ್ಮರೂಪ ನಾನಿಹೆನೆಂದರಿತುಕೋ 3 ಪ್ರೇಮರೂಪ ನೀನೆ ಎಂದು ಸಾರಿ ಪೇಳ್ದ ಜ್ಞಾನವ ಆ ಮಹಾತ್ಮಶಂಕರಗುರುರಾಜನ ನುಡಿ ತಿಳಿಯೋ ನೀ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನೋಡು ಮನವೆ ನಿನ್ನೊಳಾತ್ಮನ ನೋಡು ಮನವೆ ಧ್ರುವ ಸಾಧುಸಂಗವ ನೀ ಮಾಡಿ ಭೇದ ಬುದ್ಧಿಯ ಹೋಗಾಡಿ ಆದಿತತ್ವವ ನೀ ನೋಡಿ ಸದಮಲಾನಂದ ಕೂಡಿ1 ಕಾಮಕ್ರೋಧವ ಕಳೆದು ಮಮತಾ ಮಾಯವನಳಿದು ತಾಪ ತೊಳೆದು ಶಮದಮಾದಿ ತಿಳಿದು 2 ನಾನು ನೀನೆಂಬುದು ನೀಗಿ ಜ್ಞಾನದಿಂದ ಗುಪ್ತನಾಗಿ ಭಾನುಕೋಟಿತೇಜನಂಘ್ರಿ ಬೆರೆದು ನಿಶ್ಚಿಂತನಾಗಿ 3 ಅವಿದ್ಯುಪಾಧಿಯ ಜರಿದು ಮೂವಿಧ ಮದ ಮುರಿದು ಪವಿತ್ರ ಪ್ರಣವರಿದು ಸುವಿದ್ಯ ಸುಖಬೆರೆದು 4 ಬಾಹ್ಯಾಂತ್ರದೊಳಿಹ ಪೂರ್ಣ ಮಹಾಗುರುನಿರಂಜನ ಇಹ ಪರತ್ರ ಸಾಧನ ಮಹಿಪತಿ ಅಂತರಾತ್ಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುವಾ ಬನ್ನಿರೆ ರಂಗಯ್ಯನ ನೋಡುವಾ ಬನ್ನಿರೇ ಪ. ಬೇಡಿಕೊಳ್ಳುವ ನಾವು ಅ.ಪ. ಕುಂಭಮಾಸದಲಿ ಭಕ್ತರು ಬಿಟ್ಟಾನಂದಮಂಟಪದಿನಿಂದು ಪೂಜೆ ಗೊಂ[ಬ] ಹರುಷದಿ ಮಂದಹಾಸದಿ ಬಂದ ಶ್ರೀರಂಗನ 1 ಹಂಸ ಯಾಳಿ ಸಿಂಹ ಆನೆಯು ಮೊದಲಾದ ಗರುಡ ಹನುಮ ಕಲ್ಪ ವೃಕ್ಷವು ಸರ್ಪವಾಹನವೇರಿ ಅರ್ಥಿಯಿಂದಲೆ ಬರುವ ಶ್ರೀರಂಗನ 2 ಶುದ್ಧದಶಮಿಯಲಿ ರಂಗಯ್ಯ ಮುದ್ದು ಸತಿಯರ ಒಡಗೊಂಡು ಅ ಲ್ಲಿದ್ದ ಮಂಟಪದಲಿ ಹರುಷದೀ ತಾನಿ[ದ್ದ] ಶ್ರೀರಂಗನ 3 ತೆಪ್ಪಮಂಟಪವ ಭಕ್ತರೆಲ್ಲ ವಿಸ್ತಾರದಲಿ ಕಟ್ಟಿ ಪತ್ನಿಸಹಿತಲೆ ತೆಪ್ಪವ ಹತ್ತಿ ಸುತ್ತಿಸುತ್ತಿ ಮೂರುಬಾರಿ ಬರುವ [ಶ್ರೀರಂಗನ] 4 ಮಧ್ಯಮಂಟಪದಿ ತಾನಿದ್ದು ಭಕ್ತರಿತ್ತ [ಸವಿಯಾದ] ಕ್ಷೀರವು ಉದ್ದಿನವಡೆ ಹುಗ್ಗಿ ಮೆದ್ದು ಬರುವ ಶ್ರೀಮುದ್ದುರಂಗನ 5 ಪುಷ್ಪಬಾಣಂಗಳು ಸುತ್ತಿಬಿಡುವ ಚಕ್ರಬಾಣಂಗಳು ನಕ್ಷತ್ರಬಾಣಂಗಳ ಲಕ್ಷ್ಮಿಯೆದುರಲರ್ತಿಯಿಂದಲೆ ನೋಡಿ ನಿಂದ ಶ್ರೀರಂಗನ 6 ತಾ ಕರುಣದಿಂದಲೆ ತೀರ್ಥಸ್ನಾನವನಿತ್ತು ಬರುವ ವೆಂಕಟರಂಗನ 7
--------------
ಯದುಗಿರಿಯಮ್ಮ
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ ನೋವು ಬಲುಹಾದ ನೋವು ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು ಬಣ್ಣನೆ ನುಡಿಯ ನೋವು ಬಂದೀತು ನೋವು 1 ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು ಇಷ್ಟರು ಇಲ್ಲದ ನೋವು ಇಂತಾದ ನೋವು 2 ಬಡವನಾಗಿಹ ನೋವು ಒಡೆಯರಿಲ್ಲದ ನೋವು ಕೇಡುಗರ ನುಡಿಯ ನೋವು ಕೆಟ್ಟಿಹ ನೋವು ಪಡೆದ ಕರ್ಮದ ನೋವು ಪಾಪವೆಂಬುದು ನೋವು ಕಡೆಯ ಕಾಲದ ನೋವು ಕಾಳಾಹಿ ನೋವು 3 ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು ಬದ್ಧವಾಗಿಹ ನೋವು ಬಳಲುವ ನೋವು 4 ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ ಅಂತರಂಗದಿ ಬಂದು ಚಿಂತಿತಾರ್ಥತವನೀಯೊ ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ 5
--------------
ವರಹತಿಮ್ಮಪ್ಪ
ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ ಪ ಬಾಯಾಡಬಹುದೆ ಕೈಯೊಳಿತ್ತ ಹಣಗಳ ಅ.ಪ ಆರು ಅರಿಯದ್ಹಾಂಗೆ ಒಂಭತ್ತು ಕೊಡುವಾಗತೋರಿಯಾಡಿದೆ ಒಮ್ಮೆ ನಿನ್ನ ಹೆಸರಗಾರುಮಾಡದೆ ಬಡ್ಡಿ ತೆತ್ತು ಬರುವೆನೆಂದುಹಾರೈಸಿ ಕೊಡದೆ ಚುಂಗುಡಿಯ ನಿಲಿಸುವರೆ 1 ಸಾಲವ ಬೇಡಿದರೆ ಕೋಪವೇ ಕಮಲಾಕ್ಷಕಾಲಿಗೆ ಎನ್ನ ಕೊರಳ ಕಟ್ಟಿಕೊಂಬೆಆಲಯದವರ ಕೇಳದೆ ನಿನಗೊಳಗಾದೆಭೋಳೆಯತನದಲ್ಲಿ ನಿನ್ನ ನಂಬಿದೆ ಹರಿ2 ಅಸಲು ನಿನಗೆ ಸಮರ್ಪಣೆಯಾಯಿತೆಲೊ ದೇವಮೀಸಲು ಪೊಂಬೆಸರು ನಿರುತ ನಡೆಯಲಿಶಶಿಧರ ಬ್ರಹ್ಮಾದಿ ವಂದ್ಯ ಸತ್ಯವೆಂಬಮೀಸಲುಳುಹಿ ಎನ್ನ ಸಲಹೊ ಶ್ರೀಕೃಷ್ಣ 3
--------------
ವ್ಯಾಸರಾಯರು
ಪ(ಪಾ)ವನಾ ಗುರು ಪವಮಾನ ಪ ಪಾವನ ಗುರು ಪವಮಾನ ದೇವ ಅವಾವಕಾಲದಿ ಸಲಹುವ ಕರುಣಿ ಕೃಪಾ ವಲೋಕನದಿಂದ ಕಾವುದೆಮ್ಮನು ಗುರುಅ.ಪ ಪರಮ ಮಹಿಮ ಶ್ರೀ ಮುಕುಂದಾ ನಿಂದ ಕರುಣಾದಿಂದ ಜನಿಸಿಬಂದ ಬಂದು ಸರ್ವಜೀವರೊಳಾನಂದದಿಂದ ಕರಣದೊಳು ನಿಂತಚಂದಾ ||ಆಹ|| ನಿರುತದಿ ಹರಿಪ್ರೇರಣೆಯಿಂದ ಕಾರ್ಯವ ಪರಿಪರಿಮಾಡಿ ಶ್ರೀಹರಿಗರ್ಪಿಸುವ ದೇವ 1 ತರುಚ್ಛಾಯೆಯಂತೆ ಶ್ರೀ ಹರಿಗೆ ನೀನೆ ಪರಮ ಪ್ರತಿಬಿಂಬನಾಗೆ ಸರ್ವ ಚರಾಚರಾದಿಗಳೊಳಗೆ ಅದರ ದರಯೋಗ್ಯತೆಗನುವಾಗೇ ಆಹ ನಿರುತಕಾರ್ಯವ ಮಾಳ್ವೆ ಅಣುಮಹದ್ರೂಪನೆ ಪರಿಪರಿ ಪ್ರಾಣಾದಿಗಳ ಕಾರ್ಯ ನಿನ್ನಿಂದ2 ಚಕ್ರವರ್ತಿ ಆಜ್ಞೆಯಂತೇ ಪುರದ- ಧಿಕಾರಿನಿಯಮದಂತೇ ಅದಕ- ಧಿಕೃತರಿರುವರಂತೇ ಅಂತೆ ತ- ತ್ವ ಕಾರ್ಯವು ನಿನ್ನಿಚ್ಛೆಯಂತೇ ||ಆಹ|| ಮಿಕ್ಕಾದ ತತ್ವರಿಗೆ ತಕ್ಕ ಕಾರ್ಯವನಿತ್ತು ನಿ- ಯುಕ್ತರ ಮಾಡುವೆ ಹರಿಉಕ್ತಿಯ ಮೀರದೆ 3 ಇಭರಾಜವರದನ ಪ್ರೀಯ ನೀನೆ ಪ್ರಭುವಾಗಿರುವೆ ಸರ್ವಕಾಯದೊಳು ಶುಭಾಶುಭಂಗಳ ಕಾರ್ಯ ನಿತ್ಯ ನಿಬಿಡ ನಿನ್ನಿಂದಲೆ ಜೀಯಾ ||ಆಹ|| ಅಬುಜಾಂಡದೊಳಗೆಲ್ಲ ಪ್ರಬಲ ನಿನ್ನಯ ಶೌಂiÀರ್i ಅಬುಜಭವನ ಪದಪಡೆವ ಪ್ರಭುವೆ ನೀನು4 ಪ್ರಾಣಾದೇವ ನಿನ್ನಿಂದ ಪಂಚ- ಪ್ರಾಣಾದಿರೂಪಗಳಿಂದ ತನು ಸ್ಥಾನದಿಭೇದಗಳಿಂದ ಜಡ ಪ್ರಾಣಭೂತ ಪಂಚದಿಂದಾ ||ಆಹ|| ಕಾಣಿಸಿಕೊಳ್ಳದೆ ಜಾಣತನದಿ ಪುಣ್ಯ ಪಾಪ ಜೀವಗೆ ಉಣಿಸುತಲಿರುವೆಯೊ5 ಪಾಯೂಪಸ್ಥದಿ ಅಪಾನ ಮುಖ ನಾಸಿಕ ಶ್ರೋತ್ರ ಪ್ರಾಣಾ-ನಾಭಿ ಅಯನವಾಗಿರುವ ಸಮಾನಾ ಇನ್ನು ಪಯಣವು ನಾಡಿಯೊಳು ವ್ಯಾನ ||ಆಹ|| ಒಯ್ದುಕೊಡುವ ಫಲಕಾರ್ಯವೆಲ್ಲ ಉದಾನನಿಂದ ಕೂಡಿ ಜೀಯ ನೀ ನಡೆಸೂವೆ 6 ಸೃಷ್ಟಿಯೊಳು ನೀ ಪ್ರವಿಷ್ಟನಾಗಿ ಸೃಷ್ಟಿಕಾರ್ಯದೊಳು ಚೇಷ್ಟಾ ಮಾಡಿ ಸೃಷ್ಟೀಶನೊಲಿಸಿ ಪ್ರತಿಷ್ಠಾ ತತ್ವ ಶ್ರೇಷ್ಠರೆಲ್ಲರ ಮನೋಭೀಷ್ಠ ||ಆಹ|| ತುಷ್ಟಿಪಡಿಸಿ ಪರಮೇಷ್ಠಿಯಾಗುವೆ ಕಪಿ ಶ್ರೇಷ್ಠನೆ ಉರಗಾದ್ರಿವಾಸವಿಠಲನದೂತ 7
--------------
ಉರಗಾದ್ರಿವಾಸವಿಠಲದಾಸರು
ಪಕ್ಷಿ ಬಂದಿದೆ ಗಂಡಭೇರುಂಡ - ತನ್ನಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಪ ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ಅ ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾಹರುಷದಿಂದ ವೈಷ್ಣವರೆಡೆಯ ಪಾಡಿಪರವ ತೋರುವೆನೆಂದು ಪಾಕವನೆತ್ತುತಾಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ1 ಅಕಾರ ಉಕಾರ ಮಕಾರ ಸಾಕಾರದಿಂದಪರಮ ರೂಪವ ತಾಳಿಆಕಾರ ಕ್ರಿಯಾ ನಾಮ ಮಕಾರವನುಓಂಕಾರದಿಂದ ಪುಟ್ಟಿಸಿದಂಥ ಪರವಸ್ತು 2 ಪತಿ ತಿರುವಕೋವಲೂರಿನೊಳಿರುವಂಥಾದಿಕೇಶವರಾಯ ತಾನಾದ ಪರವಸ್ತು 3
--------------
ಕನಕದಾಸ
ಪಂಚಮಿಯ ದಿನ ವಿಭವ ನಮ್ಮ ಶ್ರೀನಿವಾಸನ ಮಹಾತ್ಮವ ಮಾನಿನಿ ರನ್ನೆ ನೀ ಪೇಳೆ ಭಕ್ತಾ- ಧೀನದ ಚರಣದ ಲೀಲೆ ಭಾನು ಉದಯದಲಿ ವೀಣಾದಿ ಸು- ಗಾನ ವಾದ್ಯ ನಾನಾವಿಧ ರಭಸದಿ1 ಎತ್ತಲು ನೋಡಿದಡತ್ತ ಜನ- ಮೊತ್ತವಿಲಾಸವಿದೆತ್ತ ಚಿತ್ತದಿ ನಲಿನಲಿದಾಡಿ ತೋಷ- ವೆತ್ತಿರುವನು ಒಟ್ಟುಗೂಡಿ ಸುತ್ತುಮುತ್ತು ಒತ್ತೊತ್ತಿಲಿಹರು ವಿ- ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2 ಚಾಮರ ಛತ್ರ ಸಿಗುರಿಯು ಜನ- ಸ್ತೋಮ ಪತಾಕೆ ತೋರಣವು ಹೇಮದ ಕಂಚುಕಿ ಈಟಿ ಗುಣ- ಧಾಮನ ಬಿರುದುಗಳ್ ಕೋಟಿ ಆ ಮಹಾಭೇರಿ ಪಟಹ ನಿಸ್ಸಾಳಕ ಸಾಮಗಾನ ಸಾಮ್ರಾಜ್ಯವೋಲಿಹುದು3 ಬಾಲರು ವೃದ್ಧ ಯೌವನರು\ಜನ- ಜಾಲವೆಲ್ಲರು ಕೂಡಿಹರು ಲೋಲ ಸ್ರೀಮುಂದ್ರಾಂಕಿತದಿ ಬಹು ವಿ- ಶಾಲ ದ್ವಾದಶನಾಮ ಮುದದಿ ಆಲಯದೊಳಗಿಹ ಬಾಲಕಿಯರು ಸಹ ಸಾಲಂಕೃತ ಸಮ್ಮೇಳದಿ ನಲಿವರು4 ಒಂದು ಭಾಗದಿ ವೇದಘೋಷ ಮ- ತ್ತೊಂದು ಭಾಗದಿ ಜನಘೋಷ ಇಂದಿನ ದಿನದತಿಚೋದ್ಯ ಏ- ನೆಂದು ವರ್ಣಿಸುವದಸಾಧ್ಯ ಚಂದಿರಮುಖಿ ಯಾರೆಂದೆನಗುಸುರೆಲೆ ಮಂದರಧರ ಗೋವಿಂದನ ಮಹಿಮೆಯ5 ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ ಪೇಳಲೇನದಾ ಮೂರ್ಲೋಕದೊಳಗೀ ವಿ- ಶಾಲವ ನಾ ಕಾಣೆಪ. ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ ರಾಜೀವನಾಭನ ಪೂಜಾವಿನೋದದಿ ರಾಜವದನೆ ವನಭೋಜನದಿಂದಿನ1 ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2 ನೂತನವೆಂದು ನೀ ಪೇಳುವಿ ಚಂದಿರ ಮುಖಿ ಜನಸಂದಣಿಗಳು ಮಹಾ ಮಂದಿ ಓಲೈಸುವರಿಂದು ಮುಕುಂದನ3 ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ. ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ ಕಾಣುವ ಯೋಗಭೋಗ1 ಎನಗತಿ ಮನವು ನಿನಗತಿ ಛಲವು ಜನುಮಾಂತರ ಪುಣ್ಯವೈಸೆ ನೀ2 ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ. ಅನವರತದಿಂದ ಬರುವ ಪುರುಷನಲ್ಲ ಮೀನಕೇತನ ಶತರೂಪ ಕಾಣೆ1 ನೂತನ ಪುರುಷನಿವನ್ಯಾರೆಂದರಿಯೆನಮ್ಮಾ ಶಾತಕುಂಭದ ಮಂಟಪವೇರಿ ಬರುವನಮ್ಮಾ2 ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ ತರತರ ರತ್ನವರದ ಬಾಯೊಳಿರುವದಮ್ಮಾ3 ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ ಪರಮ ಪುರುಷನಂತೆ ತೋರುವನು ಅಮ್ಮಾ4 ಬಾಲಾರ್ಕನಂತೆ ಮುಖ ಪ್ರಜ್ವಲಿಪುದು ನೀಲಮಾಣಿಕ್ಯ ಕಾಂತಿಯ ಸೋಲಿಪುದು5 ತೋರಲರಿಯೆ ಕಾಲಿಗೆರಗುವೆನು ಪೇಳಬೇಕು ಸಖಿಯೆ6 ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7 ವರರತ್ನಖಚಿತದಾಭರಣದಿಂದ ಮೆರೆವ ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8 ವಲ್ಲಭೆಯರ ಸಹಿತುಲ್ಲಾಸದಿ ಬರುವ ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9 ಬಲ್ಲಿದ ಪುರುಷನಿವನೆಲ್ಲಿಂದ ಬಂದ ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10 ಊರ್ವಶಿ : ನೋಡು ನಿತ್ಯಾನಂದಕರನ ಮೂಡಗಿರಿಯಿಂದೋಡಿ ಬಂದನ ನೋಡೆಪ. ಛಪ್ಪನ್ನೈವತ್ತಾರು ದೇಶ ಸರ್ಪಶೈಲ ರಾಜವಾಸ ಚಪ್ಪರ ಶ್ರೀ ಶ್ರೀನಿವಾಸ1 ತಿರುಗುತ್ತಿಪ್ಪಾ ತಿರುಮಲೇಶ ಶರಣ ರಾಮನ ಭಕ್ತಿಪಾಶ ದುರುಳಿನಲಿ ನಿಂದಿರ್ಪಶ್ರೀಶ ತರಿಸುವನು ಕಾಣಿಕೆ ವಿಲಾಸ2 ಪಟ್ಟದರಸನಾದ ದೇವ ಸೃಷ್ಟಿಯಾಳುವಜಾನುಭಾವ ದೃಷ್ಟಿಗೋಚರವಾಗಿ ಕಾಯ್ವ ಇಷ್ಟವೆಲ್ಲವ ಸಲಿಸಿ ಕೊಡುವ 3 ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ ವೃಂದ ನೆರಹಿ ವನಕೆ ಅಂದಣವೇರಿ ಮುಕುಂದನೊಲವಿನಲಿ ಕುಂದಣ ಮಂಟಪವೇರಿ ಮತ್ತೊಬ್ಬನು ಸಂದರುಶನವಂ ನೀಡುತ ಯಿಬ್ಬರು ಒಂದಾಗುತ್ತಾನಂದವ ಬೀರುತ್ತ 1 ಅಕ್ಕ ನೀ ನೋಡು ಬಹುಮಾನದಿ ಸಿಕ್ಕಿದಿ ಬಿರುದು ಪೊತ್ತಾ ಉಕ್ಕುವದತಿ ತೋಷ ಸ್ತುತಿಪಾಠಕ ಜನಗಳ ಮಿಕ್ಕಿ ನೊಡುವ ನೋಟಕೆ ಮನಸಿನೊಳು ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2 ಪವಿತ್ರ ನಿಶಾನಿಧಾರಣಾ ಪವಿತ್ರಗೈಯುವ ಕಾರಣ ಮಿತ್ರಮಂಡಳವನು ಮೀರಿ ಪೊಳೆವುತಿಹ ರತ್ನಖಚಿತ ಮಂಟಪದಲಿ ಮಂಡಿಸಿ ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ ಕೀರ್ತಿಯ ಧರಿಸಿ ಜಗತ್ರಯಪಾವನ 3 ನಿಸ್ಸಾಳ ಪಟಹ ಭೂರಿ ಜನ ಜಾಲ ಕೂಡಿರುವ ಮೇಳವಿಸುತ್ತನುಕೂಲಿಸಿ ಬಹು ಬಿರು ದಾಳಿಗೆ ಸಂಭ್ರಮದೇಳಿಗೆಯಿಂದಲಿ ಕೋಲು ಪಿಡಿದು ಓಹೋಯೆಂಬಂಥ ವಿ- ಶಾಲ ಭಕ್ತರ ಮೇಲು ಸಂತೋಷದಿ 4 ದೇಶದೇಶದ ಜನರು ನಾನಾ ವಿಧ &ಟಿ
--------------
ತುಪಾಕಿ ವೆಂಕಟರಮಣಾಚಾರ್ಯ
ಪಂಚರೂಪಾತ್ಮಕ ನೀನೇ ಈ ಪಾಂಚಭೌತಿಕ ದೇಹದಿ ಸಂಚರಿಸೂವೆ ಪ ಸ್ಥೂಲರಸವನು ಇತ್ತು ಸಲಹೂವೆ ಅ.ಪ ರಸಪಾಯುಆಪಜಿಹೆÀ್ವನಾಸಿಕ ಗಂಧ ಪೃಥುವಿ ಉಪಸ್ಥಯುಕ್ತ ಕೋಶವಹುದಯ್ಯ ಆ ಶನೈಶ್ವರ ವರುಣ ಭೂದೇವಿಯಿಂದಲಿ ಸೇವಿಪ ಸತತ ಲೇಶವಾದರು ಬಿಡದೆ ತಾ ಖಂಡಾಖಂಡ ರೂಪದಿ ದೇಶ ಕಾಲಗಳಲ್ಲಿ ನೆಲೆಸಿ ಕೋಶಕಾರ್ಯವ ಗೈವೆ ಪ್ರಾಣನಿಂ ಉಭಯಪಕ್ಷಗಳು ಧೇನಿಸುತಿಹರು ಭುಜದ್ವಯ ಶ್ರೀಶ ನಿನ್ನಯ ಮಧ್ಯದೇಶವೆ ಈ ಶರೀರದÀ ಮಧ್ಯಭಾಗವು ಪ್ರಸಿದ್ಧ ಪುರುಷನೆ ನಿನ್ನಿಂದೋಷಧಿಗಳು ಓಷಧಿಗಳಿಂದನ್ನವೆಲ್ಲವು ಪೋಷಣೆ ಎಲ್ಲ ಅನ್ನದಿಂದಲೆ ದೋಷದೂರ ನೀನನ್ನದನ್ನದಾ1 ಪಾಣಿತ್ವಗ್ವಾಯು ಸ್ಪರ್ಶ ನೇತ್ರ ತೇಜ ಪಾದರೂಪಗಳಿಂದಲಿ ಕಾಣಿಸಿಕೊಳ್ಳುವುದು ಪ್ರಾಣಮಯದ ಕೋಶವು ತಾನಲ್ಲಿಹ ಪ್ರದ್ಯುಮ್ನ ಮೂರುತಿ ಸತತ-ಗಣಪತಿ ಅಗ್ನಿ ವಾಯು ಮರೀಚಿಗಳೆಲ್ಲರೂ ಸನ್ನುತಿಪರೋ ಪ್ರಾಣಾಧಾರನಾಗಿಹೆ ತ್ರಾಣ ನಿನ್ನಿಂದ ಸ್ಥೂಲದೇಹಕೆ ಅ- ಪಾನ ನಿಂದೊಡಗೂಡಿ ನೆಲೆಸಿಹೆ ಪ್ರಾಣಪತಿ ಪ್ರದ್ಯುಮ್ನ ನಿನ್ನಯ ಶಿರದ ಸ್ಥಾನವು ಪ್ರಾಣನಲ್ಲಿಹುದೋ ದಕ್ಷಿಣೋತ್ತರಪಕ್ಷವಿರುತಿಹುದೋ ಕಾಣಿಪುದು ಮಧ್ಯದೇಶವು ಆಗಸದೊಳು ಉ- ದಾನ ವಾಯುವಿನಲ್ಲಿ ಇರುತಿಹುದೋ ಧೇನಿಪೋರು ಪೃಥುವಿಯು ಪಾದವೆಂಬುದು ಸ- ಮಾನ ವಾಯುವಿನಲಿ ಇರುತಿಹುದು ಜ್ಞಾನ ರೂಪದಿ ಈ ಪರಿಯಲಿ ರೂಪವಿರುತಿಹುದು ಪ್ರಾಣಿಗಳಿಗಾಯುಷ್ಯವಿತ್ತು ಪ್ರಾಣಪ್ರೇರಕನಾಗಿ ಪೊರೆಯುವೆ ಪ್ರಾಣಧಾರಣೆ ನಿನ್ನದಯ್ಯಾ ಪ್ರಾಣನುತ ಪ್ರದ್ಯುಮ್ನಮೂರುತೆ2 ತತ್ವಯುತವಾಕ್ಯೋಕ್ತಾಗಸ ಶಬ್ದ ಈತೆರ ಯುಕ್ತವಾದೀ ಕೋಶವು ಇದಕೆ ಖ್ಯಾತವಾದ ಮನೋಮಯ ಕೋಶದೊಳು ಸತತ ರುದ್ರೇಂದ್ರಾದಿ ಸುರರೆಲ್ಲರು ವಂದಿಸುತಿಹರು ಖ್ಯಾತ ಸಂಕÀರುಷಣನೆ ಖಂಡಾಖಂಡರೂಪದಿ ನೆಲೆಸಿ ಕೋಶದಿ ಪ್ರೀತಿಯಿಂದಲಿ ವ್ಯಾನನೊಡಗೂಡಿ ನೀನೆ ಯಜ್ಞಭುಕುವು ಯಜುರ್ವೇದವೆ ನಿನ್ನ ಶಿರವಹುದು ಶ್ರುತಿಗಳೊಳು ಭುಜದ್ವಯಂಗಳಾಗಿಹುದು ನುತಿಪ ಪಾಂಚರಾತ್ರಾಗಮ ವೆಂಬುದೆ ನಾಮಕಂಗಳೆನಿಪುದೆ ನಿನ್ನ ಪಾದದ್ವಯಂಗಳು ಖ್ಯಾತ ನಿನ್ನಯ ರೂಪ ಮಹಿಮೆಯ ತಿಳಿಯಲಸದಳವೋ ಜಾತರಹಿತ ನಿನ್ನ ವರ್ಣಿಸೆ ಮಾತು ಮನಸಿಗೆ ನಿಲುಕದಂತಿಹೆ ಖ್ಯಾತ ನೀನಹುದೊ ಮನೋಮಯ ಪ್ರೀತಿಯಿಂದಲಿ ಸಲಹೋ ಎನ್ನನು 3 ಮಹತ್ತತ್ವ ಪ್ರಾಚುರ್ಯದಿಂದಿಹ ಈ ವಿಜ್ಞಾನಮಯಕೋಶದಿ ಶ್ರೀಹರಿ ವಾಸುದೇವಾ ನೀನೆ ನೆಲೆಸಿಹೆ ಅಹರಹ ಬ್ರಹ್ಮ ವಾಯುಗಳಿಂದಲಿ ಮಹಾಪೂಜೆ ವಂದನೆಗೊಳುತಿಹೆ- ಖಂಡಾಖಂಡದಿ ತುಂಬಿಹೆ ದೇಹದೊಳು ಉದಾನನಿಂದೊಡಗೂಡಿ ಸಹಾಯನಾಗಿಹೆ ಜೀವಿಗಳಿಗೆ ಬಾಹ ದುರಿತದಿಂ ಪಾರುಗಾಣಿಸೋ ದೇಹ ದೇಹಿಯ ರೂಪ ನೀ ಸ್ವಗತಭೇದವಿವರ್ಜಿತನೆ ಶಿರವೆ ನಿನ್ನಯ ಶ್ರದ್ಧವೆಂಬೊರು ಮಹಾ ಭುಜಂಗಳೆ ಋತುಸತ್ ಎಂದೆನಿಸಿಕೊಳುತಿಹುದು ಇಹುದು ಮಧ್ಯದೇಶವೆ ಜಗಕೆ ಆಶ್ರಯವೆನಿಪ ಯೋಗಾವು ಮಹವೆಂಬುದೆ ಪಾದವೆನಿಸಿತು ಸೂರ್ಯತೇಜದೊಳು ಮಹಾ ಪ್ರಳಯದಿ ಉದರದೊಳಿಟ್ಟು ಇಹಪರದಿ ರಕ್ಷಿಸುವೆ ದೇವ4 ನಂದಮಯ ಕೋಶವು ತನ್ಮಯ ಅವ್ಯಕ್ತತತ್ವದಿಂದಲಿ ನನ್ನೀಯಿಂದ ಆನಂದಮಯ ಮೂರುತಿ ನಾರಾಯಣನೀ ಕೋಶಾಂತರ್ಗತನು ನೀನೆ ಸಮಾನನೊಡಗೂಡಿಹೆ ಅನಾದಿಲಿಂಗವ ಭಂಗಗೈಸುವಳೋ ಘನಮಹಿಮ ನಿನ್ನ ಅನುಸರಿಸಿ ತಾನಿಪ್ಪಳೋ ಛಿನ್ನ ಭಕ್ತರಿಗೊಲಿಯಳೋ ಅವಿ ಚ್ಛಿನ್ನ ಭಕ್ತರ ಜನನಿ ಎನಿಪಳೋ ಪ್ರಾಪ್ಯನು ಎಂದು ಪ್ರಿಯವೆಂದು ಘನ ದಕ್ಷಿಣೋತ್ತರ ಪಕ್ಷವೆನಿಪೋವು ತನ್ನ ಮಧ್ಯದ ಪ್ರದೇಶವೆಂಬೋದು ಜ್ಞಾನ ಸುಖ ಆನಂದ ಪಾದಗಳು ಬ್ರಹ್ಮನಾಮಕ ವಾಯುವೆಂಬುವರೋ ಆನಂದಮೂರುತಿ ಮಹಿಮೆ ಎಂತಿಹುದೋ ಭಿನ್ನನಾಮದಿ ಕರೆಸುತಲಿ ತಾ ಅ ಭಿನ್ನನಾಗಿ ಚರಿಸಿ ಕೋಶದಿ ಘನಕಾರ್ಯವ ನಡೆಸುತಿರ್ಪೆ ಪನ್ನಗಾದ್ರಿ ಶ್ರೀ ವೇಂಕಟೇಶನೆ 5
--------------
ಉರಗಾದ್ರಿವಾಸವಿಠಲದಾಸರು
ಪಂಚೀಕರಣಮಾಡಿ ತಾ ಸಂಚರಿಸುವ ಪ ಪಂಚೀಕರಣತಿಳಿಯದೆ ಪ್ರಪಂಚದೊಳು ಮುಳುಗಿ ನಾ ವಂಚಿತನಾದೆ ವಿರಿಂಚಿಭಕ್ತಿಗೆ ಅ.ಪ ಸಚ್ಚಿದಾನಂದ ರೂಪ ವ್ಯಾಪ್ತರೂಪಿ ನಾರಾಯಣ ಅಪ- ಅಚ್ಯುತ ತನ್ನಿಚ್ಛೆಯಿಂದ ವೈಕೃತಾಕಾಶಕ್ಕೆ ಅಂಭ್ರಣಿದೇವಿಯರನೆ ಮುಖ್ಯ ಮಾಡಿದಾ 1 ಗುಣರಾಶಿಯೊಳು ಸತ್ವಕ್ಕೆ ಶ್ರೀದೇವಿಯರು ಮುಖ್ಯ ರಜಕೆ ಭೂದೇವಿ ತಮಕೆ ದುರ್ಗಾದೇವೇರು ಸತ್ಯಜ್ಞಾನಾನಂದದಯೆ ಮೌನಪಂಚೇಂದ್ರಿಯ ಜಯ ಅಕ್ರೌರ್ಯಗುರು ಸೇವೆಯೇ ಸತ್ವಕಾರ್ಯವು2 ತಮಕ್ರೋಧ ಅಹಂಕಾರ ಮದೋನ್ಮಾದ ಚಪಲೋದ್ಯೋಗ ಡಂಭ ಸ್ವಚ್ಛಂದರಜದ ಕಾರ್ಯವು ತಮದ ಕಾರ್ಯ ಅಜ್ಞಾನ ಮೋಹ ನಿದ್ರಾಲಸ್ಯ ಬುದ್ಧಿಶೂನ್ಯ ತಾಪವಾದಿ ಹಿಂಸಾಕಾರ್ಯವು 3 ಸತ್ವಪ್ರಾಚುರ್ಯದಿ ಮದ ಗುಣತ್ರಯವೈಷಮ್ಯಹೊಂದಿ ಶ್ರೇಷ್ಠಕಾರ್ಯಕೆ ಮಹತ್ತತ್ವವಾಯಿತು ಸಾತ್ವತಾಂಪತಿಯ ಇಚ್ಛೆಯಿಂದ ಮಹತ್ತತ್ವದಿ ಅಹಂಕಾರ ತತ್ವವೆಂಬುದೇರ್ಪಟ್ಟಿತು 4 ತೈಜಸ ತಾಮಸ ಅಹಂಕಾರ ವೆನುತಲಿ ಮೂರಹಂ- ಕಾರದಿ ಮೂರು ರುದ್ರರೂಪಗಳು ಬ್ರಹ್ಮವಾಯು ಶೇಷರಿಂದುದಯಿಸಿದರು5 ವೈಕಾರಿಕ ಅಹಂಕಾರದಿ ದೇವತಾ ದೇಹ ಮನಸು ತೈಜಸದಿಂದ ದಶೇಂದ್ರಿಯ ಹುಟ್ಟಿತು ತಾಮಸಾಹಂಕಾರದಿಂದುತ್ಪನ್ನವಾದುವು6 ಸರ್ವ ಮಿಳಿತಮಾಡಿ ಬ್ರಹ್ಮಾಂಡವನೆ ಸೇರಿ ಹರಿಯು ಪದ್ಮನಾಭರೂಪದಿಂದ ಶಯನಗೈದನು ಸರ್ವಲೋಕೋದ್ಧಾರ ಹರಿಯು ನಾಭಿಯೊಳು ಪದ್ಮ ತೋರಿ ಪದುಮದಲ್ಲಿ ಪದ್ಮಸಂಭವನಾಸೃಜಿಸಿದ 7 ಸರ್ವರಂತರ್ಯಾಮಿ ಸಕಲಜೀವರನ್ನು ಸೃಷ್ಟಿಗೈಸಿ ಜೀವಯೋಗ್ಯತಾ ಕಾರ್ಯ ನಡೆಸುತಿರುವನು ಸರ್ವಜೀವಕಾರ್ಯವು ಪಂಚವಿಂಶತಿತತ್ವ ಈ- ಶರಿಂದಲೆ ಕಾರ್ಯನಡೆಯತಿರುವುದು8 ಶಬ್ದತನ್ಮಾತ್ರದಿಂದ ಆಕಾಶ ಹುಟ್ಟಿತು ವಾಯುಹುಟ್ಟಿತು ಸ್ಪರ್ಶತನ್ಮಾತ್ರದಿ ರೂಪತನ್ಮಾತ್ರದಿ ಅಗ್ನಿಭೂತ ಹುಟ್ಟಿತು ಆಗ ರಸತನ್ಮಾತ್ರದಿ ಅಷ್ಟು ಹುಟ್ಟಿತು 9 ಈ ಪರಿವಿರಾಟದಿಂದುಯಿಸಿದವು ಆಕಾಶ ಕೊಂದೆ ಶಬ್ದಗುಣವು ಮಾತ್ರ ಇರುವುದು ಅಹುದು ವಾಯವಿಗೆ ಶಬ್ದ ಸ್ಪರ್ಶವೆರಡುಗುಣಗಳು10 ತೋರುತಿರ್ಪುದಗ್ನಿ ಶಬ್ದಸ್ಪರ್ಶರೂಪ ಗುಣಗಳು ಗುಣ ಶಬ್ದ ಸ್ಪರ್ಶ ರೂಪ ರಸ ಗಂಧವೈದು ಪರಿ ಭೂತಪಂಚಕಗಳ ಅರಿವುದು 11 ಪಂಚಭೂತಗಳು ತಮ್ಮ ಸ್ವಾಂಶಗಳ ಭಾಗಗೈಸಿ ಪ್ರ- ಪಂಚ ಕಾರ್ಯಕಿತ್ತ ಪರಿಯದೆಂತೆನೆ ಆಕಾಶ ದರ್ಧಭಾಗ ಭೂತ ಪ್ರೇತ ಪಿಶಾಚಿಗಳಿಗೂ ಉಳಿ ಪಾದ ಪಾದವೆನ್ನೆ ಜೀವಕೋಟಿಗೂ12 ವಾಯು ತನ್ನರ್ಧಭಾಗ ಪಕ್ಷಿ ಪನ್ನಗಾದಿಳಿಗೂ ಪಾದ ಭಾಗ ಜೀವಕೋಟಿಗೂ ಅಗ್ನಿತನ್ನರ್ಧಭಾಗ ದೇವ ಋಷಿಗಳಿಗೂ ಮಿಕ್ಕಧರ್Àದೊಳ್ ಪಾದಭಾಗ ಜೀವಕೋಟಿಗೂ13 ಅಪ್ಪುತನ್ನರ್ಧಂಶ ಜಲಚರಪ್ರಾಣಿಗಳಿಗು ಮಿಕ್ಕರ್ಧದೊಳು ಪಾದಭಾಗ ಜೀವಕೋಟಿಗೂ ಪೃಥ್ವಿ ತನ್ನರ್ಧಂಶ ಜಡಜೀವಕೋಟಿಗೂ ಮಿಕ್ಕ ರ್ಧದೊಳ್ ಪಾದಭಾಗ ಜೀವಕೋಟಿಗೂ14 ಪೃಥ್ವಿ ಅಪ್ಪು ತೇಜೋ ವಾಯು ಆಕಾಶಗಳು ಸೂಕ್ಷ್ಮರೂಪದಿಂದೆರಡೆರಡಾದವು ಆಕಾಶತನ್ನರ್ಧಾಂಶದಲ್ಲಿ ವಾಯ್ವಗ್ನಿ ಅಪ್ಪು ಪೃಥ್ವಿಗಳಿ ಗೆ ಕೊಟ್ಟು ಸ್ವಾಂಶ ಅಂತಃಕರಣವೆನಿಸಿತು 15 ವಾಯು ಸ್ವಾಂಶದಿಂದುದಾನವೆಂದೆನಿಸಿ ಮಿಕ್ಕ ಪೃಥ್ವೈ ಪ್ತೇಜಾಕಾಶಗಳಿಗೆ ತನ್ನ ಚಲನ ಕೊಟ್ಟಿತು ಅಗ್ನಿ ತನ್ನಸ್ವಾಂಶದಿಂದ ಚಕ್ಷುಸೇಂದ್ರಿಯ ವೆನಿಸಿ ವಾಯ್ವಾಕಾಶಅಪ್ಪು ಪೃಥ್ವಿಗುಷ್ಣ ಕೊಟ್ಟಿತು 16 ಅಪ್ಪು ತನ್ನ ಸ್ವಾಂಶದಿಂ ರಸವೆಂದೆನಿಸಿ ಮಿಕ್ಕ ವಾಯ್ವಾಕಾಶಾಗ್ನಿ ಪೃಥ್ವಿಗೆ ದ್ರವವ ಕೊಟ್ಟಿತು ಪೃಥ್ವಿತನ್ನ ಸ್ವಾಂಶದಿಂ ಗಂಧವೆಂದೆನಿಸಿ ಮಿಕ್ಕ ಅಪ್ತೇಜವಾಯ್ವಾಕಾಶಕೆ ಕಠಿಣ ಕೊಟ್ಟಿತು 17 ಭೂತಪಂಚಕಗಳಿಗೆ ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ರೂಪವು ಅಧಿಷ್ಠಾನರಾಗಿ ಅವರಂತರ್ಯಾಮಿಯಾಗಿ ಅನಿರುದ್ಧಾದಿ ಐದು ಭಗವನ್ಮೂರ್ತಿ ಇರುವುದು 18 ನಾಮರೂಪ ವರ್ಣಗುಣ ಸ್ವಭಾವ ತೇಜ ಸುಮುಖ ದೇವರಶಕ್ತಿ ಅಕ್ಷರ ಕ್ರಿಯಾ ಎಂಬೀ ಹತ್ತು ಗುಣಗಳು ಭೂತ ಒಂದಕ್ಕೆ ತಿಳಿದು ಉಪಾಸನ ಮಾಳ್ಪಾದೂ ಬುಧರು ಎಲ್ಲರು 19 ನಾಮವೇ ಆಕಾಶ ರೂಪ ಒಟ್ಟು ಭಾವ ಬಯಲು ವರ್ಣ ಕಪ್ಪು ಗುಣಶಬ್ದ ಕ್ರಿಯ ಅನುಗ್ರಹ ಮುಖವೇ ಈಶಾನ ದೇವತೆ ಪರಶಿವಶಕ್ತಿ ಪರಾಶಕ್ತಿ ಅಕ್ಷರವೇ ನಾದವು20 ನಾಮ ವಾಯುರೂಪ ಷಟ್ಕೋಣ ವರ್ಣನೀಲ ಮುಖ ತತ್ಪುರುಷ ದೇವತೆ ಸದಾಶಿವ ಶಕ್ತಿ ಅಕ್ಷರ ಬಿಂದುವೆನಿಪುದು 21 ನಾಮ ಅಗ್ನಿರೂಪ ಮುಕ್ಕೋಣವರ್ಣ ರಕ್ತವರ್ಣ ಮುಖ ಅಘೋರ ದೇವತೆ ರುದ್ರಶಕ್ತಿ ಪಾರ್ವತಿ ಅಕ್ಷರ ಮಕಾರ 22 ನಾಮ ಅಪ್ಪುರೂಪ ಅಧರ್Éೀಂದು ಶ್ವೇತವರ್ಣ ಸ್ವಭಾವದ್ರವ ಗುಣ ಮಾಧುರ್ಯ ವಿಷ್ಣುಶಕ್ತಿ ಅಕ್ಷರಉಕಾರ ಎಂದು ಪೇಳ್ವರು 23 ನಾಮವೇ ಪೃಥ್ವಿರೂಪ ಚತುಷ್ಕೋಣ ವರ್ಣ ಹೇಮ ಸ್ವಭಾವವೇಕಠಿಣ ಕ್ರಿಯ ಸೃಷ್ಟಿ ಗುಣವೆ ಗಂಧವು ಮುಖಸದ್ಯೋಜಾತ ದೇವತೆ ಬ್ರಹ್ಮಶಕ್ತಿ ಸರಸ್ವತಿ ಅಕ್ಷರ ಅಕಾರವು 24 ಉಕ್ತರೀತಿ ಹತ್ತು ಗುಣಗಳೊಳ್ ಭೂತ ಒಂದ- ಕ್ಕೆತಿಳಿದು ಈ ಜ್ಞಾನೇಂದ್ರಿಯಗಳೆಂತಾದವು ಎಂದರಿವುದು ಆಕಾಶಸಮಾನಾಂಶ ಅಗ್ನಿಯು ಮುಖ್ಯಾಂಶದಿರೆ ಶ್ರೋತ್ರೇಂದ್ರಿಯ ಹುಟ್ಟಿ ತೋರುತಿರುವುದು25 ವಾಯುಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ ತ್ವಗೇಂದ್ರಿಯವು ತಾನೆ ತೋರುತಿರುವುದು ಜಿಹ್ವೇಂದ್ರಿಯವು ತೋರುತಿರುವುದು26 ಘ್ರಾಣೇಂದ್ರಿಯವು ತಾನೆ ತೋರುತಿರುವುದು ಅಗ್ನಿ ಸ್ವಾಂಶದಿಂದ ಚಕ್ಷುಷೇಂದ್ರಿಯವೆಂದು ಹಿಂದೆಯೇ ಈ ವಿವರ ಪೇಳಿರುವುದು27 ಪೃಥ್ವಿಸಮಾನಾಂಶದೊಡನೆ ಆಕಾಶ ಸಮಾಂಶಸೇರೆ ವಾಗೇಂದ್ರಿಯವೆ ತಾನೆ ತೋರುತಿರುವುದು ಪೃಥ್ವಿ ಮುಖ್ಯಾಂಶದೊಡನೆ ವಾಯು ಸಮಾಂಶಸೇರೆ ಘ್ರಾಣೇಂದ್ರಿಯವು ತಾನೆ ತೋರುವುದು 28 ಪೃಥ್ವಿಮುಖ್ಯಾಂಶದೊಡನೆ ಅಗ್ನಿ ಸಮಾಂಶಸೇರೆ ಪಾದೇಂದ್ರಿಯವು ತಾನೆತೋರುತಿರ್ಪದು ಪೃಥ್ವಿ ಮುಖ್ಯಾಂಶರೊಡನೆ ಅಪ್ಪು ಸಮಾವಾಂಶ ಸೇರೆ ಪಾಯೇಂದ್ರಿಯವೆಂದು ತೋರುತಿರ್ಪುದು29 ಪೃಥ್ವಿಸ್ವಾಂಶವೇ ಗುಹ್ಯೇಂದ್ರಿಯವೆಂದು ಪೂ ರ್ವೋಕ್ತ ರೀತಿಗಣನೆ ತರುವುದು ಈ ರೀತಿ ಕರ್ಮೇಂದ್ರಿಯಗಳೆಲ್ಲ ಪೃಥ್ವಿ ತತ್ವದಿಂದಲೇ- ರ್ಪಟ್ಟು ಬೆಳಗುತಿರುವುದು30 ಆಕಾಶ ಸಮಾನಾಂಶ ಅಪ್ಪು ಮುಖ್ಯಾಂಶದಿರೆ ಶಬ್ದ ವಾಯು ಸ್ವಯಾಂಶದಿ ಅಪ್ಪು ಮುಖ್ಯಾಂಶದಿ ಸ್ಪರ್ಶತೋರ್ಪುದು ಅಗ್ನಿ ಸಮಾನಾಂಶ ಅಪ್ಪು ಮು ಅಪ್ಪು ಮುಖ್ಯಾಂಶದಿಂದಲೆ31 ಅಪ್ಪುಸ್ವಯಾಂಶವೇ ರಸವು ಎಂದೆನಿಸಿತು ತನ್ಮಾತ್ರಪಂಚಕಕ್ಕೆ ಮೂಲ ಅಪ್ಪುತತ್ವವು ಪ್ರಾಣಾದಿಪಂಚಗಳ ಮುಂದೆ ವಿವರಿಸಿಹುದು ವಾಯುತತ್ವವೇ ಅದಕೆ ಮುಖ್ಯಕಾರಣ32 ವಾಯು ಮುಖ್ಯಾಂಶದೊಳು ಆಕಾಶ ಸಮಾನಾಂಶ ಸೇರೆ ಸಮಾನ ವಾಯುವೆಂತೆಂದೇರ್ಪಟ್ಟಿತು ವ್ಯಾನ ವಾಯು ಎಂತೆಂದೇರ್ಪಟ್ಟಿತು 33 ವಾಯು ಮುಖ್ಯಾಂಶದೊಳು ಅಪ್ಪು ಸಮಾನಾಂಶ ಸೇರೆ ಅಪಾನವಾಯುವೆಂತೆಂದೇರ್ಪಟ್ಟಿತು ವಾಯು ಮುಖ್ಯಾಂಶದೊಡನೆ ಪೃಥ್ವಿಸಮಾನಾಂಶ ಸೇರಲು ಪ್ರಾಣ ವಾಯು ಉತ್ಪನ್ನವಾಯಿತು34 ವಾಯುವಿನ ಸ್ವಯಾಂಶವೇ ಉದಾನವಾಯುವೆನಿಸಿತು ಮುಂದೆ ವಿವರಿಸುವುದು ಜ್ಞಾನ ಪಂಚಕ ಈ ಜ್ಞಾನ ಪಂಚಕಕ್ಕೆ ಆಕಾಶ ತತ್ವವೇ ಮುಖ್ಯಕಾರಣವೆಂದು ಬುಧರು ಪೇಳ್ವರು35 ಆಕಾಶ ಮುಖ್ಯಾಂಶದಿ ವಾಯು ಸಮಾನಾಂಶ ಸೇರಿ ದಾಗಲೆ ಮನಸು ಎಂಬುವುದು ಹುಟ್ಟಿತು ಆಕಾಶ ಮುಖ್ಯಾಂಶದಿ ಅಗ್ನಿ ಸಮಾನಾಂಶ ಸೇರಿ ದಾಗಲೆ ಬುದ್ಧಿ ಎಂಬುದು ಗೋಚರವಾಯಿತು 36 ಸೇರೆ ಚಿತ್ತವೆಂಬುದು ವ್ಯಕ್ತವಾಯಿತು ಆಕಾಶ ಮುಖ್ಯಾಂಶದೊಳು ಪೃಥ್ವಿಸಮಾನಾಂಶ ಸೇರಿ ಅಹಂಕಾರವೆಂಬುದೇರ್ಪಟ್ಟಿತು 37 ಆಕಾಶ ಸ್ವಾಂಶವೇ ಕತೃತ್ವವೆಂದೆನಿಸಿತು ಈಪರಿಯ ತಿಳಿವುದು ಜ್ಞಾನಪಂಚಕ ಜ್ಞಾನೇಂದ್ರಿಯ ಕರ್ಮೇಂದ್ರಿಯ ಪಂಚತನ್ಮಾ ತ್ರಗಳಿಗೆ ಆಧ್ಯಾತ್ಮಿಕಾದಿಭೌತಿಕದೇವತೆಗಳ ತಿಳಿವುದು 38
--------------
ಉರಗಾದ್ರಿವಾಸವಿಠಲದಾಸರು
ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿದ್ರೌಪತಿಗೆ ಹುಚ್ಚು ಹಿಡಿಸುವ ಕೋಲ ಪ. ಧಿಟ್ಟೆರಿಬ್ಬರು ನಮಗೆ ಇಟ್ಟರು ಅಣೆಯ ಕೃಷ್ಣಯ್ಯ ಇದಕೆ ನಗಬಹುದು ಕೋಲಕೃಷ್ಣಯ್ಯ ಇದಕೆ ನಗಬಹುದು ಮುಯ್ಯವ ಕೊಟ್ಟುಬಾಹುದಕೆ ತಡವ್ಯಾಕೆ ಕೋಲ 1 ಜಾಣಿಯರಿಬ್ಬರು ನಮಗೆ ಆಣಿಯನಿಟ್ಟರು ವೇಣುಗೋಪಾಲ ನಗಬಹುದು ಕೋಲವೇಣುಗೋಪಾಲ ನಗಬಹುದು ಮುಯ್ಯವ ಕ್ಷಣದೊಳು ನಾವು ತಿರುಗಿಸುವೆವು ಕೋಲ2 ಹರಿಯ ತಂಗಿಯರ ಗರುವಿನ ಮುಯ್ಯವತಿರುಗಿಸಿ ಬಂದು ಉಣಬೇಕು ಕೋಲ ತಿರುಗಿಸಿ ಬಂದು ಉಣಬೇಕು ಎನುತಲೆ ಹರಿಣಾಕ್ಷಿ ಭಾಮೆ ನುಡಿದಳು ಕೋಲ3 ರಂಗರಾಯರ ಮುದ್ದು ತಂಗಿಯರ ಹಂಗಿನ ಮುಯ್ಯ ತಿರುಗಿಸುವೆ ಕೋಲ ಹಂಗಿನ ಮುಯ್ಯ ತಿರುಗಿಸುವೆ ಮುಖವ ಭಂಗಿಸಿ ಬಾಹೊ ಸಭೆಯೊಳು ಕೋಲ4 ಇಂತು ರಾಮೇಶನ ಕಾಂತೆಯರೆಂಬುವರ ಪಂಥವ ಬಿಡಿಸಿ ಬರಬೇಕು ಕೋಲಪಂಥವ ಬಿಡಿಸಿ ಬರಬೇಕು ಮುಯ್ಯದ ಭ್ರಾಂತಿಯ ಹಿಡಿಸಿ ಕೊಡಬೇಕು ಕೋಲ 5
--------------
ಗಲಗಲಿಅವ್ವನವರು