ಒಟ್ಟು 199 ಕಡೆಗಳಲ್ಲಿ , 63 ದಾಸರು , 181 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀ ನರಸಿಂಹ (ಪ್ರಹ್ಲಾದ ಚರಿತೆ)] ಪ್ರಥಮ ಅಧ್ಯಾಯ - ಹಿರಣ್ಯಕಶಿಪು ಪೂರ್ವ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ತೋಯಸ್ಥ ಪತ್ರಸ್ಥ ತೋಯಜಾಲಯಾ ಸ್ತುತ್ಯ ಅಂಡ ಸ್ರಷ್ಟಾ ಸರ್ವಸ್ಥ ಅಚ್ಯುತಾನಂತ ಗೋವಿಂದ ನೀ ಸಜ್ಜನರ ಭಯ ನಿವಾರಣ ಮಾಳ್ಪಿ ತೋರಿ ಆಗಾಗ 1 ಪ್ರಳಯ ಜಲಚರ ಶೈಲಧರ ಧರೋದ್ಧರ ನಮೋ ಬಾಲಕಗೆ ಒಲಿದು ಬಲಿಯಲಿ ದಾನ ಕೇಳಿ ಖಳ ಕುಪಾಲರ ಸದೆದು ಜಲಧಿಯ ಬಂಧಿಸಿದ ಲಲನೇರ ರಂಜಿತ ಶಿಶು ಶಂಭಳದಿ ತೋರ್ವಿ 2 ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೇ ತಡೆದರು ದ್ವಾರಪಾಲಕರು 3 ಜಯವಿಜಯರೆಂಬ ಆ ದ್ವಾರಪಾಲಕರಿಗೆ0 ಮಾಯೇಶ ಹರಿ ಪ್ರಿಯತರರು ಮುನಿವರರು ಈಯಲು ಶಾಪವ ಆ ವಿಷ್ಣು ಪಾರ್ಶದರು0 ದೈತ್ಯಜನ್ಮವ ಹೊಂದಿದರು ಪತನವಾಗಿ 4 ಸುತಪೋನಿಧಿ ಕಶ್ಯಪ ತೇಜೋಲ್ಬಣದಿಂ ದಿತಿದೇವಿ ಜಠರದಲಿ ವಿಷ್ಣು ಪಾರ್ಶದರು ಪತಿತ ಆ ಜಯ ವಿಜಯರು ಪ್ರವೇಶಿಸಿದರು ದಿತಿ ಹಡೆದಳು ಗಂಡು ಮಕ್ಕಳೀರ್ವರನು 5 ದಿತಿದೇವಿ ಅಗ್ರಸುತ ಹಿರಣ್ಯಕಶಿಪು ಜಯ ದಿತಿ ಅವರಸುತ ವಿಜಯನೇ ಹಿರಣ್ಯಾಕ್ಷ ಉಪಟಳ ಕೊಟ್ಟನು ಈ ಧರೆಯ ಅಬ್ಧಿಯ ಕೆಳಗೆ ಅಡಗಿಸಿದ 6 ಸುರಸುಜನ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಹಿರಣ್ಯಾಕ್ಷನ ಕೊಂದು ಧರೆಯ ಲೀಲೆಯಿಂದ ಮೇಲೆತ್ತಿತಂದಿ ವರಾಹ ಹರಿ ನೀನು 7 ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 -ಇತಿ ಪ್ರಥಮಾಧ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಕಶಿಪು ವರ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಮೂರ್ಜಗದ ದೊರೆ ಹರೇ ನೀ ತನ್ನ ತಮ್ಮನ ಭಂಜಿಸಿದೆ ಎಂದು ಕಡುಕೋಪಗೊಂಡು ದುರ್ಜನ ದಾನವ ವಂದಿತ ಹಿರಣ್ಯಕನು ರಜಸ್ತಮೋಚ್ಛದಿ ದ್ವೇಷ ಮಾಡಿದನು ನಿನ್ನಲ್ಲಿ 1 ಶೂಲದಿಂ ಅಚ್ಯುತನ ಕುತ್ತಿಗೆ ಕತ್ತರಿಸಿ ಗಳರುಧಿರ ತರ್ಪಣ ಕೊಡುವೆ ಎನ್ನುತ್ತ ಖಳ ದೈತ್ಯ ಪ್ರಮುಖರಿಗೆ ಹೇಳಿದನು ವೈಷ್ಣವ ಸ್ಥಳ ದ್ವಿಜ ಗೋ ಭಕ್ತರನ್ನ ತರಿ ಎಂದ 2 ಗರ್ಜಿಸುತ ದೈತ್ಯರು ಪುರ ಗ್ರಾಮ ಆಶ್ರಮ ವ್ರಜಕ್ಷೇತ್ರ ದಹಿಸÀಲು ಹಿರಣ್ಯಕಶಿಪು ಅಜೇಯಾಜರಾಮರತ್ವವ ಅಪ್ರತಿ ಮುಖ್ಯ ರಾಜತ್ವ ಹೊಂದಲು ತಪಸ್ಸು ಮಾಡಿದನು 3 ಊಧ್ರ್ವದಲಿ ಬಾಹುಗಳ ನಭದಲಿ ದೃಷ್ಟಿಯು ಪಾದಾಂಗುಷ್ಟ ಮಾತ್ರದಿ ನಿಂತು ತಪವ ಗೈದನು ಆ ತಪೋಧೂಮಾಗ್ನಿ ಪೀಡಿತ ತ್ರಿದಿವರು ಮೊರೆ ಇಟ್ಟರು ಬ್ರಹ್ಮನಲ್ಲಿ 4 ಪದುಮಭವ ಭೃಗು ದಕ್ಷಾದಿಗಳೊಡೆಯೈದು ದೈತ್ಯೇಶ್ವರ ಹಿರಣ್ಯಕನ ಆಶ್ರಮವ ಭದ್ರಂತೇ ತಪಸಿದ್ಧಿ ಆಯಿತು ವಶೀಕೃತನಾದ ಉತ್ತಿಷ್ಠೋತ್ತಿಷ್ಠ ವರ ಕೊಡುವೆನು ಎಂದ 5 ಬ್ರಹ್ಮನ್ನ ನೋಡಿ ಹಿರಣ್ಯಕನು ಸನ್ನಮಿಸಿ - ಬ್ರಹಾಂತರ್ಗತ ಹರಿ ವಿವಕ್ಷಿತ ಗುಣಗಳ ಬ್ರಹ್ಮ ಹರುಷದಿಂದಲಿ ಸಮ್ಯಕ್ ಕೀರ್ತನೆ ಮಾಡಿ ಆ ಹಂಸವಾಹನನ ವರಗಳ ಬೇಡಿದನು 6 ಸರೋರುಹಾಸನ ಸೃಷ್ಟ ಸರ್ವಭೂತಂಗಳು ಮೃಗ ಪ್ರಾಣ ಉಳ್ಳವು ಇಲ್ಲದವು ಹೊರ ಒಳಗೆ ಭೂಮ್ಯಾಂಬರ ದಿವಾ ರಾತ್ರಿಯು ಸುರಾಸುರ ಮೃತ್ಯು ಮಾ ಭೂನ್ಮ್‍ಮ ಎಂದ 7 ಏಕಪಥ್ಯವು ಅಪ್ರತಿ ಶಕ್ತಿಮತ್ಯವವು ಲೋಕಪಾಲಕರಂತೆ ಬಲವು ಮಹಿಮೆಗಳು ಯೋಗಿ ತಪಸ್ವಿಗಳಂತೆ ಸಿದ್ಧಿಗಳು ಸರ್ವವು ಬೇಕು ತನಗೆಂದು ವರ ಬೇಡಿದ ಬ್ರಹ್ಮನ್ನ 8 ಶತಧೃತಿಯು ಈ ದುರ್ಲಭ ವರಗಳನ್ನಿತ್ತು ತಾ ತೆರಳಿದನು ದೈತ್ಯನಿಂ ಪೂಜೆಗೊಂಡು ಭ್ರಾತೃವಧ ಅನುಸ್ಮರಿಸಿ ಹರಿದ್ವೇಷ ಬೆಳಸಿದನು ಲಬ್ಧವರ ದೈತ್ಯೇಶ ಇನ್ನೂ ಹೆಚ್ಚಾಗಿ 9 ನರಸುರಾಸುರ ಋಷಿ ಗರುಡೋರಗ ಸಿದ್ಧ ಚಾರಣ ವಿದ್ಯಾಧರ ಯಕ್ಷ ಗಂಧರ್ವ ಪಿತೃ ಪ್ರೇತ ಭೂತಪತಿ ರಾಕ್ಷಸ ಪಿಶಾಚೇಶ ಸರ್ವರನು ಜೈಸಿ ತನ್ನವಶ ಮಾಡಿಕೊಂಡ 10 ಮೂರ್ಲೋಕಂಗಳಲ್ಲಿ ದಶದಿಕ್ಕುಗಳಲ್ಲಿ ಈ ಹಿರಣ್ಯಕಶಿಪು ತನ್ನ ಜಯಭೇರಿ ಹೊಡೆದ ಸರ್ವಲೋಕಪಾಲರ ತೇಜಃಸ್ಥಾನಗಳ ಅಪ - ಹರಿಸಿ ತ್ರಿವಿಷ್ಟಪ ಭೋಗದಲಿ ಮನಸ್ಸಿಟ್ಟ 11 ಅಜಿತೇಂದ್ರಿಯ ಹೇಯ ಭೋಗರತ ಅಹಂಕಾರಿ ಮೂರ್ಜಗಾರಿಯು ಧರ್ಮ ಆಚಾರ ದ್ವೇಷಿ ನಿರ್ಜರರು ಅವನಿಂದ ಹಿಂಸೆ ತಾಳದೆ ವಿಷ್ಣೋ ತ್ರಿಜಗದೀಶನೇ ಮೊರೆ ಹೊಕ್ಕರು ನಿನ್ನಲ್ಲಿ 12 ಅಚ್ಯುತ ಈಶ್ವರ ನಿನ್ನ ಭದ್ರವಾಣಿ ಅಭಯ ಹೊಂದಿ ಸುರವರರು ನಿರೀಕ್ಷಿಸಿದರು ಪ್ರಶಾಂತ ಮಹಾತ್ಮಾ ನಿರ್ವೈರ ಪ್ರಹ್ಲಾದ ಹುಟ್ಟುವ ಕಾಲವನು 13 ಜಯತು ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 13 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ - ತೃತೀಯ ಅಧ್ಯಾಯ - ಬಾಲಕ ಪ್ರಹ್ಲಾದ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಯುಕ್ತ ಕಾಲದಿ ಹೇಮಕಶಿಪುಗೆ ಐದು ಮಕ್ಕಳು ಹುಟ್ಟಿದರು ನಾಲ್ವರು ಗಂಡು ಮಕ್ಕಳು ನಾಲ್ವರಲ್ಲಿ ಪ್ರವರ ಪ್ರಹ್ಲಾದನು ಅಕಳಂಕ ಗುಣಶ್ರೇಷ್ಠ ಮಹದುಪಾಸಕನು 1 ಸತ್ಯಸಂಧನು ಶೀಲಸಂಪನ್ನ ಬ್ರಹ್ಮಣ್ಯ ಜಿತೇಂದ್ರಿಯ ಸಮದರ್ಶಿ ಆರ್ಯರ ವಿಧೇಯ ಸ್ನಿಗ್ಧರಿಗೆ ಭ್ರಾತೃವತ್ ಯಥಾದೇವೋ ತಥಾಗುರೋ ಭೂತಪ್ರಿಯ ಸುಹೃತ್ತಮ ದೀನವತ್ಸಲನು 2 ವಿಧ್ಯಾರ್ಥಿ ರೂಪಾದಿಗಳ ಗರ್ವ ಇವಗಿಲ್ಲ ಶ್ರುತ ದೃಷ್ಟ ವಿಷಯದಲಿ ಗುಣಗ್ರಾಹಿಯು ಶಾಂತನು ದಾಂತನು ಸಾಧುಗಳಲಿ ಪ್ರಿಯ ಸದಾ ಸ್ವಭಾವದಿ ಶ್ರೀ ವಿಷ್ಣುಭಕ್ತಿ 3 ವಾಸುದೇವ ನಿನ್ನಲ್ಲೇ ಸರ್ವದಾ ಮನವನು ನೆಲಸಿ ಈ ಬಾಲ ಸರ್ವ ನಡೆನುಡಿ ಊಟ ಶಯನ ಪರ್ಯಟನ ಸರ್ವಾವಸ್ಥೆಯಲೂ ನಿನ್ನ ಸ್ಮರಿಸುವನು 4 ಅಂಬುಜೋದ್ಭವ ತ್ರ್ಯಿಂಬಕ ಮುಖ್ಯವಿನುತ ನಿನ್ನ ಅಂಬುಜಾಂಘ್ರಿಗಳನ್ನ ಧ್ಯಾನಿಪ ಈ ಬಾಲಕನ ಅಂಬಕದಿ ಸುಜ್ಞಾನ ಭಕ್ತಿ ಪುಳಕಾಂಬುವು ತುಂಬಿ ತುಳುಕಾಡುವುದು ಕಂಡಿಹರು ಅಂದು 5 ಒಮ್ಮೆ ನಗುವನು ಒಮ್ಮೆ ರೋದಿಸುವನು ಒಮ್ಮೆ ಸುಮ್ಮನಿರುವ ಹರಿ ಪ್ರೇಮಾನಂದದಲಿ ಅಮ್ಮಮ್ಮ ಭಕ್ತಿಯಲಿ ಕೂಗಿ ಕುಣಿವನು ಮಹಾನ್ ರಮೆಯರಸ ನಿನ್ನ ದಾಸಾಗ್ರಣಿಯು ಪ್ರಹ್ಲಾದ 6 ಮಹಾತ್ಮನು ಮಹಾಭಾಗ ಮಹಾಭಾಗವತನು ಮಹಾಕಾರುಣಿಕ ಪ್ರಹ್ಲಾದಗೆರಗುವೆನು ಅಹರ್ನಿಶಿ ಧೃತಿಸ್ಥ ಹರಿ ನಿನ್ನಲ್ಲಿ ಭಕ್ತಿ ಇಹಪರದಿ ಸೌಭಾಗ್ಯ ಎಮಗೀಯಲೆಂದು 7 ಜಯ ಗುಣಾರ್ಣವ ಭೂಮನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 - ಇತಿ ತೃತಿಯಾ ಅಧ್ಯಾಯ ಸಂಪೂರ್ಣಂ - ಚತುರ್ಥ ಅಧ್ಯಾಯ ಪ್ರಹ್ಲಾದರ ವಿಧ್ಯಾಭ್ಯಾಸ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ದೈತ್ಯರಾಜನು ಪ್ರಿಯಪುತ್ರ ಪ್ರಹ್ಲಾದನಿಗೆ ವಿದ್ಯೆಕಲಿಸಲು ಶಂಡಾಮರ್ಕರು ಎಂಬ ಬೋಧಕರ ಏರ್ಪಾಡು ಮಾಡಿಸಲು ಆ ಮಹಾನ್ ಇತರ ಬಾಲಕರೊಡೆ ಕೂಡಿ ಓದಿದನು 1 ವಿದ್ಯೆ ಕಲಿಯುವಾಗ ಇತರ ಬಾಲರ ಮೀರಿ ಪ್ರತಿಭೆ ತೋರಿಸಿದನು ಬಾಲಪ್ರಹ್ಲಾದ ಕೇಳ್ದ ಕಲಿತದೆÀ್ದಲ್ಲಿ ಸಾಧು ಹೇಳೆಂದು 2 ಸಂಸಾರಿ ಜೀವರುಗಳು ಸದಾ ಐಹಿಕ ನಿಸ್ಸಾರ ವಿಷಯಂಗಳಲ್ಲಿ ಮುಳುಗಿ ತಮಃಸಿಲಿ ಬೀಳದಿರೆ ಸಾಧು ಜನಸಂಗ ಶ್ರೀಶ ಹರಿ ಸರ್ವವಂದ್ಯನ ಆಶ್ರಯಿಪುದು 3 ಹೀಗೆ ಪ್ರಹ್ಲಾದ ಪೇಳಲು ಹಿರಣ್ಯಕ ಕೇಳಿ ಪರ ಬೋಧಿತನಾಗಿಹನೆಂದು ನೆನೆದು ಶುಕ್ರ ಸುತರು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಕ್ಕ ವಿಧದಲಿ ಬುದ್ಧಿ ತಿದ್ದಿಸುವುದು ಎಂದ 4 ಗುರುಗಳು ಮನೆಯಲ್ಲಿ ಒಳ್ಳೆಮಾತಿಂದಲಿ ಪರಕೃತವೋ ಸ್ವತಃ ಕೃತವೋ ಈ ಹರಿಪಕ್ಷಬುದ್ದಿ ಅನೃತವಾಡದೆ ಸತ್ಯ ಪೇಳೆಂದು ಕೇಳಿದರು ಭಾಗವತ ಪ್ರಹ್ಲಾದ ಬಾಲನ್ನ 5 ಸತ್ತಾ ಪ್ರವೃತ್ತಿ ಪ್ರತೀತ್ಯಾದಿಪ್ರದ ಸರ್ವ - ಚಕ್ರಧರ ವಿಷ್ಣು ವಿಧಿ ಶಿವಾದೀಡ್ಯನಲಿ ರತತಾನು ಕಾಂತವು ಅಯಸ್ಸನ್ನು ಸೆಳೆವಂತೆ ಎಂದು 6
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರೆಮಾಂಬುಧಿ ಶುಭದಾಯಕ ಜಯ ಜಯ 1 ಪ್ರಹ್ಲಾದಾವರ ಜಾತನೆ ಜಯಯ ಶಲ್ಯ ನೃಪಾಲಕ ಯೋಧನೆ ಜಯ ಜಯ 2 ಪುರುಹೂತಾರ್ಯ ಪೋತನೆ ಜಯ ಜಯ ಮರುತ ಪದಾರ್ಹರ ಪ್ರೀತನೆ ಜಯ ಜಯ 3 ನರಸಿಂಹಾರ್ಯರ ಪುತ್ರನೆ ಜಯ ಜಯ ಗುರುವರದೇಂದ್ರರ ಛಾತ್ರನೆ ಜಯ ಜಯ 4 ತುರುರಕ್ಷಕ ವಿಜಯಾರ್ಯರ ಜಯ ಜಯ ಕರುಣ ಪೂರ್ಣ ಪಡೆದಾತನೆ ಜಯ ಜಯ 5 ಪಂಕಜವೈರಿಯ ಭಾಗದಿ ಜಯ ಜಯ ಅಂಕಿತ ಪಡೆದ ಅಕಳಂಕನೆ ಜಯ ಜಯ 6 ಪಂಢರಿನಾಥನ ಮೂರುತಿ ಜಯ ಜಯ ಕಂಡು ಕೊಂಡಾಡಿದ ಧೀರನೆ ಜಯ ಜಯ 7 ರಂಗವಲಿದ ದಾಸ್ತೋತಮ ಜಯ ಜಯ ತುಂಗ ಮಹಿಮ ಶುಭಾಂಗನೆ ಜಯ ಜಯ 8 ನತಜನ ತತಿ ಮಂದಾರನೆ ಜಯ ಜಯ ಕೃತ ಹರಿಕಥಾಸುಧೆ ಸಾರವ ಜಯ ಜಯ 9 ಮೂಕರ ಮುಖದಿಂ ಕರುಣದಿ ಜಯ ಜಯ ವಾಕು ಪೇಳಿಸಿದ ಗುಣನಿಧಿ ಜಯ ಜಯ 10 ಮಾನವಿ ಮಂದಿರ ಮಾನಿತ ಜಯ ಜಯ ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ 11 ಕುಂಭಿಣಿನಾಥ ದಾಸಾಗ್ರಣಿ ಜಯ ಜಯ ನಂಬಿದೆ ನಿನ್ನ ಪದಾಂಬುಜ ಜಯ ಜಯ 12 ಸಾಧು ವರಿಯ ಪ್ರಹ್ಲಾದನೆ ಜಯ ಜಯ ಭೇದಜ್ಞಾನ ಸುಬೋಧಕ ಜಯ ಜಯ 13 ಭೂಸುರ ಕುಮುದಕೆ ಭೇಶನೆ ಜಯ ಜಯ ಭಾಸುರ ಸ್ತಂಭ ನಿವಾಸನೆ ಜಯ ಜಯ 14 ಪವನಾಗಮ ಪ್ರವೀಣನೆ ಜಯ ಜಯ ಸನ್ನುತ ಮಹಿಮನೆ ಜಯ ಜಯ 15 ತಂದೆ ನಮಗೆ ನೀನೆಂದಿಗು ಜಯ ಜಯ ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ 16 ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ ಭವ ಹಿಂಸೆಯ ಜಯ ಜಯ 17 ನಿನ್ನ ತಾಣ ಸುಕ್ಷೇತ್ರವು ಜಯ ಜಯ ನಿನ್ನ ಕವನ ಶೃತ್ಯರ್ಥವು ಜಯ ಜಯ 18 ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ ವಲಿದು ಕರಪಿಡಿದು ಸಲಹೈ ಜಯ ಜಯ 19 ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ 20 ಎನ್ನವವ ಚನವಿದಲ್ಲವು ಜಯ ಜಯ ನಿನ್ನನು ಭವಕಿದು ಬಂದದು ಜಯ ಜಯ 21 ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ ನಿಂದಿಪ ಮನುಜ ದಿವಾಂಧನು ಜಯ ಜಯ 22 ಧರ್ಮದ ಮಾರ್ಗವ ತೋರಿಸು ಜಯ ಜಯ ಕರ್ಮಜ ದೇವನೆ ಕೈಪಿಡಿ ಜಯ ಜಯ 23 ಅನಿಲ ಮತಾಂಬುಧಿ ಮೀನನೆ ಜಯ ಜಯ ಪ್ರಣತಾಮರಮಣಿಧೇನುವೆ ಜಯ ಜಯ 24
--------------
ಶಾಮಸುಂದರ ವಿಠಲ
ಬಲ್ಲಿದನಲ್ಲೇನು ಶ್ರೀಹರಿ ಬಲ್ಲಿದನಲ್ಲೇನು ಪ ಬಲ್ಲಿದನಲ್ಲೇನು ಖುಲ್ಲಮನವೆ ತಿಳಿ ಎಲ್ಲ ಲೋಕಗಳ ನಲ್ಲನಾಗಿಹ್ಯನೀತ ಅ.ಪ ಕಡುದಯದಿಂದಿನ್ನು ಪಿಡಿದು ಬಿಡದೆ ಪಾಂಡವರನ್ನು ಪೊಡವಿನೆಲ್ಲ ಒಂದೆ ಕೊಡೆಯಿಂದಾಳಿಸಿದ ಎಡರು ತಾರದಂತೆ ಒಡೆಯ ಮುಕ್ಕುಂದನೀತ 1 ಧೂರ್ತ ಹಿರಣ್ಯಕನ ಕರದಿಂ ಭಕ್ತ ಪ್ರಹ್ಲಾದನ್ನ ಸ್ವಸ್ಥದಿಂದ ದಯವಿತ್ತು ಕಾಯ್ದನಿಗೆ ದಾರು ಸರಿ ಅರ್ತುನೋಡಲೀತ 2 ಉರಿಹಸ್ತ ಪಡೆದವನ ಕ್ಷಣದಿಂ ಉರುವಿದ ಮಾರಮಣ ಭರದಿಂ ತ್ರಿಪುರರ ಹರಿದಿಯರ್ವ್ರತ ಕೆಡಿಸ್ಹರನ ಮೊರೆಯ ಕೇಳಿ ಸುರರ ಸಲಹಿದೀತ 3 ಮೀರಿದ ಅಸುರರನು ತರಿದು ಸಾರುವ ಬಿರುದನ್ನು ಅ ಪಾರ ಶೂರ ದನುಜಾರಿ ಭಕ್ತ ಸಹಕಾರಿ ಶೌರಿ ನಿಜ ಮೂರು ಜಗದಿ ಈತ 4 ಜಡಮತಿ ಮಾನವರ ನುಡಿಗಳು ದೃಢಲ್ಲೆಲೊ ಪೂರ ಪೊಡವಿಗಧೀಶ ನಮ್ಮ ಒಡೆಯ ಶ್ರೀರಾಮನಡಿ ದೃಢದಿ ನಂಬು ಭವತೊಡರ ಕಡಿವನೀತ 5
--------------
ರಾಮದಾಸರು
ಬಾಯಿ ತೆರೆದ ಬಗಿಯೇನೊ ದೇವದೇವ ತೋಯಜದಳ ನೇತ್ರನೆ ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ ರಾಯಣ ನರಸಿಂಹನೆ ಪ ಅಸುರನ ಉದರವ ಹಸನಾಗಿ ಬಗೆವಾಗ ಬಾಯ ತೆರೆದಿಯಾ ಬಿಸಜ ಭವಾಂಡವು ಬಸುರೊಳಗಿದ್ದ ಉ- ಬ್ಬಸಿಗೆ ಬಾಯ ತೆರೆದಿಯೊ 1 ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ ಬಿಡದೆ ಬಾಯ ತೆರೆದಿಯಾ ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ ನುಡಿಗೆ ಬಾಯ ತೆರೆದಿಯೊ 2 ಗುರು ಸತ್ಯಬೋಧರಾಯರ ನಿತ್ಯಭಜನೆಗೆ ಬರಿದೆ ಬಾಯ ತೆರೆದಿಯೊ ವರ ಕದರುಂಡಲಗಿ ಹನುಮಯ್ಯನೊಡೆಯನೆ ಕರವ ಮುಗಿವೆ ಕರುಣಿಸೊ 3
--------------
ಕದರುಂಡಲಗಿ ಹನುಮಯ್ಯ
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ಪ ತೋರಯ್ಯ ನಿನ್ನ ದಯ ತೋಯಜಾಂಬಕನೆ ಅ.ಪ. ದುರುಳರ ತರಿವಂಥ ವರಚಕ್ರಧಾರಿ ಪರಮಾತ್ಮ ಪರಬೊಮ್ಮ ಪರರಿಗುಪಕಾರಿ1 ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ ತರಳ ಪ್ರಹ್ಲಾದನ್ನ ವೈರಿಯ ಮುರದಿ 2 ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ3 ಅನಂತನಾಮನೆ ನಿನ್ನ ಅನಂತ ಸದ್ಗುಣವ ನೆನೆವರಿಗೊಲಿವಂಥ ಪವಮಾನನೀಶಾ 4 ಅಜಭವಾಧಿಪ ನೀನು ವಿಜಯಸಾರಥಿಯೇ ತ್ರಿಜಗವಂದಿತ ಈಶ ವಿಜಯವಿಠ್ಠಲನೇ 5
--------------
ವಿಜಯದಾಸ
ಬೇಗನೆ ಬಾರೊ ದೇವ ಜಾಗೂ ಮಾಡದೆ ಪ ಬೇಗನೆ ಬಾರೊ ನೀನು ನಾಗಶÀಯನ ಕೃಷ್ಣ ಯೋಗಿ ಜನರು ಕಂಡು ಪೋಗಲೀಸರೆ ನಿನ್ನ ಅ.ಪ. ಹತ್ತಾವತಾರವಾಯ್ತು ಮತ್ತಗಜವ ಪೊರೆದೆ ಉತ್ತಮಪದ ಧ್ರುವಗಿತ್ತೆ ಮತ್ತೇನು ಕಾರ್ಯವೈಯ್ಯ 1 ತರಳ ಪ್ರಹ್ಲಾದನ ಕರುಣಾದಿ ಸಲಹಿದೆ ದುರುಳರ ಸದೆದ ಪರಿಯೆಲ್ಲವಾಯಿತು2 ಪರಿ ರೂಪವ ಧರಿಸಿದ ಎನ್ನದೇವ ಸಿರಿರಂಗೇಶವಿಠಲನೆ ಕರವೆತ್ತಿ ಮುಗಿಯುವೆ 3
--------------
ರಂಗೇಶವಿಠಲದಾಸರು
ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ ಬಂದಾನೇಕ ಶೋಕಂಗಳ ಕಳೆವÀಶ್ರೀರಂಗನ ದೇವೋತ್ತುಂಗನ ಭವಭಂಗನ ಪ. ಹಿರಣ್ಯಕನುದರ ವಿದಾರಣನ ಸ್ವಚರಣಕರಣ ಪ್ರಹ್ಲಾದನ ಭಯನಿವಾರಣನಕರಿವರ ಕರೆಯೆ ಮಕರಿಯ ಸೀಳಿದ ಸಿರಿಯನಾಳಿದಪಿರಿಯ ಶ್ರೀಹರಿಯ ಧೂರ್ತಾರಿಯ ಬಕವೈರಿಯ 1 ಯತಿಕುಲಪತಿಯ ಮಧ್ವಾಚಾರ್ಯರಕೃತಿಯಾಶ್ವರ್ಯ ಚಾತುರ್ಯಕೊಲಿದನಸತಿ ಸಭೆಯಲ್ಲಿ ಸಿರಿಪತಿ ನೀನೆ ಗತಿಯೆನೆಅತಿ ದೂರದಿಂದಕ್ಷಯವೆಂದ ಗೋವಿಂದನ ಮುಕುಂದನ2 ಕುಂಡಲ ಕೌಸ್ತುಭ ನೂಪುರ ಮೊದಲಾದ-ಲಂಕೃತಿಯಿಂದೊಪ್ಪುವ ನೀಲಗಾತ್ರನಪಂಕಜನೇತ್ರನ ಪರಮಪವಿತ್ರನ ಸುಚರಿತ್ರನ ಸುರಮಿತ್ರನ 3 ಗುರುವೆಂದರಿವ ಹರಿಯೆಂದು ಕರೆವ ತ-ಮ್ಮಿರವ ಮರೆವ ಸದ್ಗುಣ ವಿಸ್ತಾರವ-ನ್ನೊರೆವ ನಯನದಿ ಸುರಿವ ಪರಿವ ಸುಖಾಂಬುಧಿಕರೆವ ತೋರುವ ಖಳನಿರವ ಮುಕ್ತಿಗೆ ಕೂರುವ 4 ಹರಿಯನೆ ಪಾಡುವ ಹರಿಯ ಕೊಂಡಾಡುವಹರಿಯ ನೋಡುವ ಹರಿಯನೆ ಬೇಡುವದುರುಳರ ಕಾಡುವ ತಪದಿಂ ಬಾಡುವದುರಿತವ ಬಿಡುವ ಸುಕೃತವನೆ ಕೊಡುವ ಪಾಡಪಾಡುವ ನಲಿದಾಡುವ 5 ಹರಿಯನೆ ಸ್ಮರಿಸುವ ಹರಿಯನನುಸರಿಸುವಹರಿಯನೆ ಪರಿಹರಿಸುವ ಹರಿಯನೆಬೆರಿಸುವಹರಿಯನೆ ತೋರಿಸುವ ಹರಿಯನೆ ಮರೆಸುವಹರಿಪಾದಕೇರಿಸುವ ಸುಖರಸವ ಎರೆಸುವ 6 ಒಂದು ಕೈಯಲಿ ಕಡೆಗೋಲನೆ ಪಿಡಿದು ಮ-ತ್ತೊಂದು ಕೈಯಲಿ ನೇಣನಾಂತ ಶ್ರೀಕಾಂತನಮುಂದೆ ನಿಂದು ಒಲಿವುತ್ತ ನಲಿವುತ್ತತಂದೆ ಹಯವದನನರ್ಚಿಸುವ ಮೆಚ್ಚಿಸುವ ಹೆಚ್ಚಿಸುವ 7
--------------
ವಾದಿರಾಜ
ಭಕ್ತವತ್ಸಲನೀತ ಶಕ್ತ ಸದ್ಗುರುನಾಥ ಸಕಲ ಸಮ್ಮತ ಏಕೋದೇವನೀತ ಧ್ರುವ ಬಲಿಯಬಾಗಿಲ ಕಾಯ್ದು ಒಲಿದ ಫಲುಗುಣಗೀತ ತಲೆಗಾಯ್ದು ಪ್ರಹ್ಲಾದನ ಪ್ರಾಣಪಡದಾತ ಸಲಹಿ ಪಾಂಡವರ ರಕ್ಷಿಸಿದಾತ 1 ದಿಟ್ಟ ಧ್ರುವಗೊಲಿದು ನಿಜಪಟ್ಟಗಟ್ಟಿದಾತ ನಷ್ಟಾಜಮಿಳನ ನಿಷ್ಠೆಮಾಡಿದಾತ ಕೊಟ್ಟು ವಿಭೀಷಣಗೆ ಇಟ್ಟ ಲಂಕೆಯ ಲೀತ ಶಿಷ್ಟಜನಪಾಲಕ ಸೃಷ್ಟೇಶ 2 ಶಿಲೆಗೆ ಉದ್ಧರಗತಿಯ ಇಳಿಯೊಳಗೆ ಇತ್ತಾತ ಮೂಲೋಕದೊಡೆಯ ಶ್ರೀಹರಿಯು ಈತ ಪಾಲಿಸುವ ಮಹಿಪತಿಯ ಲೋಲಲಕ್ಷ್ಮೀಕಾಂತ ಕುಲಕೋಟಿ ಬಂಧು ತಾ ಬಳಗವೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾಗವತ 342 ಆಗಮದಸಾರ ಶಾಸ್ತ್ರವಿಚಾರ ಪೌರಾಣ ಯೋಗತತ್ವಗಳ ಶೃಂಗಾರವೆನಿಸುತಿಹ ಶ್ರೀ ಭಾಗವತಮಂ ಪೇಳ್ವೆಸಂಕ್ಷೇಪದಿಂದ ಹನ್ನೆರಡು ಪದ್ಯಂಗಳಾಗಿ ಗುರುಸುತನ ಬಾಣದುಪಹತಿಗೆ ಮೊರೆಯಿಡುವಉ ತ್ತರೆಯ ಗರ್ಭವ ಶೌರಿರಕ್ಷಿಸಲ್ ಬಳಿಕಧರೆ ರಾಜ್ಯವಾಳುತಿರೆವಿಷ್ಣುರಾತಂ ವರಶಮೀಕಾತ್ಮಜನ ಶಾಪಬರೆತಾಕೇಳಿ ಪರಮವೈರಾಗ್ಯದಿ ಕುಶಾಸ್ತರಣದೊಳಿರಲ್ ಪ್ರಥಮಸ್ಕಂಧದೋಳ್ ತಿಳಿವುದು 1 ಸಾರವಾಗಿಹ ಭಕ್ತಿಯೋಗಮಂ ಪೂರ್ವದೋಳ್ ನಾರದಗೆ ವಿಧಿವೇಳ್ದ ಸೃಷ್ಟಿಯಕ್ರಮಂ ಪ್ರಳಯ ತನ್ನಪುರಮಂ ತೋರಿಸಿ ಚಾರುಭಾಗವತ ತತ್ವೋಪದೇಶದಿ ಸೃಷ್ಟಿ ಗಾರಂಭ ಮಾಡಿಸಿದನೆಂದು ಶುಕಮುನಿವರಂ ತಿಳಿವುದು 2 ವಿದುರ ಮೈತ್ರೇಯ ಸಂವಾದಮಂ ಸೃಷ್ಟಿಯ ಭ್ಯುದಯವಂ ಸ್ವಾಯಂಭುವಿನಜ ನನವಹರೂ ಪದ ಹರಿಯಚರಿತ ಸನಕಾದಿಗಳ್ ಜಯವಿಜಯರಿಗೆ ಕೊಟ್ಟ ಶಾಪತೆರನು ಉದಿಸಿದಂಹರಿಕರ್ದಮಂಗೆ ಕಪಿಲಾಖ್ಯದಿಂ ವಿದಿತವಾಗಲ್ ತಾಯಿಗರುಹಿದಂಸಾಖ್ಯಯೋ ತೃತೀಯಸ್ಕಂಧದೋಳ್ ತಿಳಿವದು 3 ಶಿವನ ವೈರದಿನಕ್ಷಯಾಗವಂ ಮಾಳ್ಪುದಂ ತವಕದಿಂ ಕೆಡಿಸಿ ಶಂಕರನು ಕರುಣಿಸುವದಂ ಧೃವಚರಿತಮಂಗವೇನರಚರಿತ್ರೆಗಳ್ ಪೃಥುಚಕ್ರವರ್ತಿ ಜನನ ಅವನಿಗೋರೂಪಿಯಾಗುತ ಸಕಲವಸ್ತುಸಾ ರವಕೊಡುವದುಂ ಪ್ರಚÉೀತಸರುಪಾಖ್ಯಾನಮಂ ತವೆಪುರಂಜನನುಪಾಖ್ಯಾನಮಂ ಯಿದುಚತುರ್ಥ ಸ್ಕಂಧದೋಳ್ ತಿಳಿವದು 4 ವರಪ್ರಿಯ ವ್ರತಚರಿತೆಯಾಗ್ನೀಧ್ರಚರಿತೆಯುಂ ಹರಿಯ ಋಷಭಾವತಾರದ ಮಹಾಮಹಿಮೆಯಂ ಭೂಗೋಳವಿಸ್ತಾರವು ಎರಡನೆ ಖಗೋಳದೋಳ್ ವಾಯ್ವಾದಿಮಂಡಲವಿ ವರಗಳುಂ ನರಕಾದಿ ವರ್ಣನೆಯ ಸಂಖ್ಯೆಯುಂ ಯಿದುಪಂಚಮಸ್ಕಂಧದೋಳ್ ತಿಳಿವದು 5 ಯರ ಜನನಮಂ ವಿಶ್ವರೂಪಾಖ್ಯಭೂಸುರಂ ವೃತ್ರಾಸುರನ ಕೊಲ್ವುದುಂ ಭರದಿ ಬೆನ್ಹತ್ತಿಬಹ ಬ್ರಹ್ಮಹತ್ಯವ ಸುರಪ ಧರಣಿಜಲ ವೃಕ್ಷಸ್ತ್ರೀಯರಿಗೆ ಭಾಗಿಸಿದುದಂ ತಿಳಿವದೂ 6 ವಿಧಿಯವರದಿ ಹಿರಣ್ಯಕಶ್ಯಪನು ಗರ್ವದಿವಿ ಬುಧರಂ ಜಯಿಸುವದುಂ ತರಳ ಪ್ರಹ್ಲಾದನ ನರಸಿಂಹನಾಗಿ ಹರಿಯು ಮದಮುಖನ ಸೀಳ್ವುದಂಪ್ರಹ್ಲಾದನೃಪನಜಗ ರದಮುಖದಿ ವರ್ಣಾಶ್ರಮದ ಧರ್ಮಕೇಳ್ವುದಂ ತಿಳಿವದು 7 ಮನುಗಳ ಚರಿತ್ರೆಗಳ್ ಗಜರಾಜ ಮೋಕ್ಷವಂ ದನುಜ ದಿವಿಜರು ಶರಧಿಯಂಮಥಿಸೆವಿಷವರು ಹರಿಸುರರಿಗೀಯ್ಯೆ ಅನಿಮಿಷರ ಗೆದ್ದು ಬಲಿ ಶತಕ್ರತುವಮಾಳ್ಪುದಂ ವನಜಾಕ್ಷ ವಟುವೇಷದಿಂ ದವಗೆಲ್ವುದಂ ತಿಳಿವದು 8 ಇನವಂಶ ರಾಜರಚರಿತ್ರೆಯೋಳಂಬರೀ ಷನ ಮಹಿಮೆ ಯಿಕ್ಷಾ ್ವಕುರಾಜನಚರಿತ್ರ ರಾ ಚಂದ್ರವಂಶಾನುಚರಿತಂ ವನಿತೆಯುಂ ಪುರುಷನಾಗಿದ್ದಿಳನ ಚರಿತಶು ಕ್ರನ ಮಗಳ ಶರ್ಮಿಷ್ಠೆಯರಚರಿತೆಯದುವೂರು ನವಮಸ್ಕಂಧದೋಳ್ ತಿಳಿವದು 9 ಹರಿ ದೇವಕೀ ಪುತ್ರನಾಗಿ ಗೋಕುಲದಿ ಪರಿ ಪರಿಲೀಲೆಗಳತೋರಿ ದುಷ್ಟರಂಸದೆದುತಾಂ ಪಿತೃಮಾತೃಗಳಸೆರೆಯಬಿಡಿಸಿ ವರವುಗ್ರಸೇನಂಗೆ ಪಟ್ಟಮಂಗಟ್ಟಿಸಾ ಗರದಿ ಪುರವಂರಚಿಸಿ ಬಲುತರುಣಿಯರ ಕೂಡಿ ತಿಳಿವದು 10 ನೆಸಗಿದಂ ಯದುಕುಲಕೆ ಹರಿಯಸಂಕಲ್ಪದಿಂ ಪರಮಾತ್ಮತತ್ವಬೋಧೆಯನರುಪಿದಂ ಮುಸಲದಿಂ ಯಾದವರಕ್ಷಯವೈದಲನ್ನೆಗಂ ಬಿಸಜನಾಭಂ ರಾಮನೊಡನೆ ತಾತೆರಳಿದಂ ಕರೆದೊಯಿದನೇಕಾದಶಸ್ಕಂಧದೊಳ್ 11 ಪರೀಕ್ಷಿತ ಮಹಿಪಾಲತಾಂ ಕೇಳಿದಂ ಶುಕನಿಂದಸಕಲಮುಂ ಕಲಿಕಾಲ ಸೂತಶೌನಕಾದಿಗಳಿಗಿದನು ಪೇಳಿದಂ ಬಾದರಾಯಣನ ಕೃಪೆಯಿಂದಲಿದ್ವಿ ಜಾಳಿ ಹರುಷದ ಕಡಲೊಳೀಜಾಡಿದುದುರಮಾ ಲೋಲನ ಮಹಾಲೀಲೆಯವತಾರಮದ್ಭುತಂ- -ದ್ವಾದಶಸ್ಕಂಧವಿದುವೆ 12 ಇಂತೀ ಪರಿಭಾಗವತ ಶಾಸ್ತ್ರಮಂ ಸಂತರಡಿಗಳಿಗೆರಗಿ ಪೇಳ್ದೆ ಸಂಕ್ಷೇಪದಿಂ ಕಂತುಪಿತಗÀುರುರಾಮವಿಠಲತಾಂಹೃದಯದೋಳ್- -ನಿಂತುನುಡಿಸಿದತರದೊಳು ಸ್ವಾಂತನಿರ್ಮಲರಾಗಿ ಪಠಿಸುವರಿಗನುದಿನಂ ಚಿಂತಿತಾರ್ಥಂಗಳಿಹಪರಸೌಖ್ಯವಿತ್ತುಶ್ರೀ ಕಾಂತ ಗುರುರಾಮವಿಠಲ ಪೊರೆವಜಯ- -ಜಯಮನಂತಮಹಿಮಂಗೆನಿರತಂ 13
--------------
ಗುರುರಾಮವಿಠಲ
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೂಮಿಸುರರ ಘನ | ಸ್ತೋಮವಂದಿತ ಮಹಾ ಮಹಿಮಾ ಮಹಾಮಹಿಮ ಸಜ್ಜನ - ತತಿ - ಪ್ರೇಮಾ ಪ ಕಾಮಧೇನು ಸುಕಲ್ಪತರು ಚಿಂ - ತಾಮಣಿಯು ತಾನೆನಿಸಿ ಸರ್ವದ ಕಾಮಿತಾರ್ಥವನಿತ್ತು ಮೆರೆವನು ಈ ಮಹಿಯೊಳು ಸಾರ್ವಭೌಮನು ಅ.ಪ ಪ್ರಾಣತನಯ ವಿಷ್ವಕ್ಸೇನ ಶ್ರೀಹರಿ ಶಾಪದಿಂದ ಶಾಪದಿಂದ ಭೂತಳದಲಿ ಬಂದಾ ಮಾಣವಕ ಪ್ರಹ್ಲಾದನೆನಿಸಿ - ಪ್ರಾಣದೇವಾವೇಶ ಶೇಷನು ಕ್ಷೋಣಿಯೊಳು ಶಿರಿವ್ಯಾಸನೆನಿಸೀ ಮಾಣದಲೆ ಗುರುರಾಘವೇಂದ್ರನು 1 ಅಲವಬೋಧರ ಮತ - ಜಲಧಿಚಂದಿರನೆನಿಪನೀತಾ ನೆನಿಪನೀತ ಲೋಕದಿ ಬಹು ಖ್ಯಾತಾ ಲಲಿತ ವೃಂದಾವನದಿ ನಿಂತು ಹಲವು ಭಕುತರಭೀಷ್ಠಕಾರ್ಯವ ಸಲಿಸಿ ಸುಜನರ ಸಲಹೊಗೋಸುಗ ಸುಲಭತರನಾಗಿರುವ ಗುರುವರ 2 ಕಿಟಜಸರಿದ್ವರ - ತಟದಿ ಸಂತತ ತಾನಿರುವ ತಾನಿರುವ ಭಕ್ತರು ಕರೆಯೆ ಬರುವಾ ಧಿಟ ಸುಭಕ್ತರ ಬಿಡದೆ ತಾನು ಪ್ರ - ಕಟನಾಗಿ ಮಹಿಮೆ ತೋರುವ ಧಿಟ ಗುರು ಜಗನ್ನಾಥ ವಿಠಲನ ಭಟಜನಾಗ್ರಣಿ ಎನಿಸಿ ಮೆರೆವ 3
--------------
ಗುರುಜಗನ್ನಾಥದಾಸರು
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಮಂಗಳಂ ಮಂಗಳಂ ದಯಾಬ್ಧೆ ಜಯ ಮಂಗಳಂ ಶ್ರೀರಂಗವೊಲಿದ ದಾಸಾರ್ಯ ಪ ಪ್ರಹ್ಲಾದನನುಜ ತಾ | ಸಹ್ಲಾದ ವಿಖ್ಯಾತ ಬಲ್ಲಿದ ಬಲ್ಲಾಳು ಶಲ್ಯ ನೃಪಾಲ 1 ನಾರದ ಗುರು ಭಾವಿ | ಮಾರುತ ಭೃಗು ವಿಘ್ನ ದೂರಗೈಸುವ ರತಿ | ಕಾರುಣ್ಯಪಾತ್ರ 2 ಇಂದಿರಾಧವ ಶಾಮಸುಂದರ ಪ್ರಿಯ ಭಕ್ತ ಮಂದಾರ ಮಾನವಿ ಮಂದಿರ ಧೀರ 3
--------------
ಶಾಮಸುಂದರ ವಿಠಲ
ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ ಪ ಪೃಥ್ವಿಯೊಳು ನೀ ಸಲಹಿದವರನನವರತ ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ ಪತ್ತಕಡೆಗಾಣಿಸಲಶಕ್ಯವೇನಯ್ಯಾ 1 ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು ಪರಿಹರಿಸಲೆಲ್ಲಿಂದ ಬಂದೊದಗಿದೆ ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು ಶರಣಜನಬಂಧುವೇ ಬಂಧನವ ಪರಿಹರಿಸೋ 2 ಆದೊಡೇನಾಯ್ತು ನಿನ್ನಂಘ್ರಿನಂಬಿರಲು ನೀದಯದಿ ನಿನ್ನೊಳಿಂಬಿಡುವ ನೆವದೀ ಮಾಧವನೆ ಗಜವಾಗಿ ಬಂದೊದಗಿದೆಯೋ ನಾಧನ್ಯ ವೈಕುಂಠಪತಿ ಚೆನ್ನರಾಯ 3
--------------
ಬೇಲೂರು ವೈಕುಂಠದಾಸರು
ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ