ಒಟ್ಟು 142 ಕಡೆಗಳಲ್ಲಿ , 46 ದಾಸರು , 134 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಚಿಂತಿಸಬೇಡ ಮನವೆ ಭಯಗೊಂಡು ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ ಬಲ್ಲನೊ ಅರಿಯನೋ ಇದನೆಲ್ಲವೆನುತ ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು 1 ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ ಮರೆವಿನೊಳಜಾಮಿಳನು ಕರೆಯಲಾಗಿ ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ ಉರಗ ಗಿರಿವಾಸ 2 ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ ಉಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ 3 ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು ಕಡಸಾರ ಬಂದವಳು ಕಾಲು ಸುತ್ತಿ ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು ಬಿಡಿಸಿ ಸಲಹಿದರಾರು ಜಡನಾದ ಮನವೆ 4 ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು ಕರೆದು ಈವನು ನಮಗೆ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಬರುವುದೆಲ್ಲವು ಬಂದು ತೀರಿ ಹೋಗಲಿ ಹರಿ ನಿನ್ನ ಸ್ಮರಣೆಯೆ ಸ್ಥಿರವಾಗಿರಲಿ ಪ ಕಳ್ಳನೆಂದು ಎನ್ನ ಮರಕೆ ಬಿಗಿಯಲಿ ಸುಳ್ಳನೆಂದು ಮೋರೆ ಮೇಲೆ ಉಗುಳಲಿ ತಳ್ಳಿಕೋರನೆಂದು ಎಳದಾಡಿ ಒದಿಲಿ ಎಲ್ಲಿನೋಡಿದಲ್ಲಿ ಹಾಸ್ಯಮಾಡಲಿ 1 ಡಂಭಕನಿವನೆಂದು ಬಿಡದೆ ನಿಂದಿಸಲಿ ನಂಬದೆ ಜನರೆನಗೆ ಇಂಬುಗೊಡದಿರಲಿ ಕುಂಭಿನಿಪರು ಎನ್ನ ಮುನಿದು ನೋಡಲಿ ಇಂಬು ಸಿಗದೆ ನಾನು ತೊಳಲಿ ಬಳಲಲಿ 2 ಸತಿಸುತರೆನ್ನನು ಬಿಟ್ಟು ಹೋಗಲಿ ಕ್ಷಿತಿಯೊಳೆನ್ನನು ಯಾರು ಸೇರದಂತಿರಲಿ ಪತಿತಪಾವನ ಸಿರಿಪತಿ ಶ್ರೀರಾಮನ ಪೂರ್ಣ ಹಿತವೊಂದೆ ಎನ್ನ ಮೇಲೆ ಬಿಡದಂತಿರಲಿ 3
--------------
ರಾಮದಾಸರು
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ಪ ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳವೆಂದು ಪಾಡುತ ಅ.ಪ ಸುಧೆಯ ಕಲಶದೊಳು ಮಧುವೈರಿನಯನದ ಮುದ ಜಲಬೀಳಲು ಉದುಭವಿಸಿದಳೆಂದು 1 ದರುಶನ ಮಾತ್ರದಿ ದುರಿತಗಳೋಡಿಸಿ ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು 2 ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ3
--------------
ಕಾರ್ಪರ ನರಹರಿದಾಸರು
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು
ಭಗವಂತನ ಸಂಕೀರ್ತನೆÀ ಇಂದಿರಾರಮಣ ಆನಂದಮೂರುತಿ ನಿನ್ನ ವಂದಿಸಿ ಕರಗಳ ಬಂಧಿಸಿ ಬೇಡುವೆ ಪ ಎಂದಿಗೂ ಎನ್ನ ಹೃದಯಮಂದಿರ ಬಿಡದಿರೊ ನಂದಮುನ್ನೀಶ್ವರ ವಂದಿತ ಚರಣನೆ ಅ.ಪ ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ ಕೃತಿಯಾಗಿರಲು ಶ್ರೀಪತಿಯೇ ನೀ ಬಂದು ರತಿಪತಿಪಿತನೆ ಯುವತಿಯನ್ನೆ ಮಾಡಿದ ಪತಿತಪಾವನ ನೀನಲ್ಲವೇನೊ ಹರಿಯೆ 1 ನಾಕರಾಜನ ಸುತನು ಕಾಕರೂಪದಿ ಬಂದು ಏಕಾಂತದೊಳು ಅವಿವೇಕವ ಮಾಡಲು ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೆ 2 ಮತ್ತು ಗಜೇಂದ್ರನಾಪತ್ತು ಪರಿಹರಿಸಿ ಉತ್ತಮ ಪದವವಗಿತ್ತು ರಕ್ಷಿಸಿದೆ ಭಕ್ತವತ್ಸಲ ಎನ್ನ ಕುತ್ತುಗಳನು ನೀ ಚಿತ್ತಕೆ ತರದೇ ಸದ್ವøತ್ತನೆಂದೆನಿಸೈ 3 ನೇತ್ರವೆಂಬುದು ನಾರಿಗಾತ್ರದೊಳಿರುವುದು ಶ್ರೋತ್ರವು ಗೀತವ್ರಾತದೊಳಿಹುದು ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ 4 ವರನಾಮಗಿರಿಲಕ್ಷ್ಮೀನರಸಿಂಹ ಮೂರುತೆ ಚರಣಕಮಲಯುಗ ಸ್ಮರಣೆಯ ಎನಗೆ ಸ್ಥಿರವಾಗಿರುವಂತೆ ವರವಿತ್ತು ಸಲಹೆಲೊ ಪರಮಪುರುಷ ದಿನಕರಕುಲತಿಲಕನೆ 5
--------------
ವಿದ್ಯಾರತ್ನಾಕರತೀರ್ಥರು
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ಮಂಗಳಂ ಶ್ರೀರಾಮಚಂದ್ರಗೆ ಜಯ ಮಂಗಳಂ ಸೀತಾಸಮೇತನಿಗೆ ಪ. ಮಚ್ಛಾವತಾರಗೆ ವೇದವ ತಂದಗೆ ಕೂರ್ಮರೂಪದಿ ಜಲದೊಳು ಪೊಕ್ಕವಗೆ ಹಿರಣ್ಯಾಕ್ಷಸುರನ ಗೆಲಿಯೆ ಬಂದು ಮೆಚ್ಚೆ ವರಹರೂಪ ತೋರಿದಗೆ 1 ಛತ್ರಿಯ ಪಿಡಿದು ಭರತ ನಿಂದಿರಲಾಗ ಶತ್ರುಘ್ನ ಚಾಮರವನು ಬೀಸಲು ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ ವಿಸ್ತಾರ ವೈಭೋಗ ರಘುರಾಮಗೆ 2 ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ ನಮ್ಮ ಶ್ರೀರಘುರಾಮಚಂದ್ರನಿಗೆ ಸನ್ಮಾನದಲಿ ರಾಮ ಸಾಗರಶಯನಾಗೆ ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ 3 ಎಡದ ಕರದಿ ಬಿಲ್ಲು ಬಲದ ಕರದಿ ಬಾಣ ಕರದ ಕಮಲದೊಳಗಿಪ್ಪವನಿಗೆ ಸಿರಿ ಸೀತೆಯ ಧರಿಸಿದ ಚದುರ ಶ್ರೀ ಕಲ್ಯಾಣ ಚಂದ್ರನಿಗೆ 4 ಹರುಷದಿ ದೇವತೆಗಳಿಗೊರವಿತ್ತಗೆ ದುರುಳ ರಕ್ಕಸರ ಸಂಹರಿಸಿದಗೆ ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ ಹಯವದನಮೂರ್ತಿ ಎಂದೆನಿಸಿದಗೆ 5
--------------
ವಾದಿರಾಜ
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ
ಮನರಥದಿಂದಲಿ ಘನರಥಕೀಗಲೆ ಬೇಗನೆ ಬಾರೊ ಪ. ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ದನುಜದಲ್ಲಣ ಬೇಗ ಬಾರೋ ಕೃಷ್ಣ ಅ.ಪ. ಮುತ್ತಿನ ತೋರಣ ಸುತ್ತು ಛತ್ತರಿಗೆಯು ಬೇಗನೆ ಬಾರೊ ಸಿರಿ ಸಹ ಬೇಗನೆ ಬಾರೊ ಉತ್ತಮ ಭಕ್ತರು ಎತ್ತಿ ಕೈ ಕರೆವರು ಬೇಗನೆ ಬಾರೊ ನಿತ್ಯ ಮಂಗಳ ನಿನ್ನ ಉತ್ತಮ ರೂಪವ ಚಿತ್ತದಿ ತೋರುತ ಸತ್ಯ ಸಂಕಲ್ಪನೆ 1 ಗಡಗಡ ನಡೆಯುವ ಘನರಥದಲಿ ನಿಂದು ಬೇಗನೆ ಬಾರೊ ಎಡಬಲದಲಿ ಶ್ರೀ ಭೂಮಿಯರೊಡಗೂಡಿ ಬೇಗನೆ ಬಾರೊ ಧಡಧಡ ನಡೆಯುತ ದೈತ್ಯದಲ್ಲಣನೆ ಬೇಗನೆ ಬಾರೊ ನುಡಿಸುವ ವಾದ್ಯಗಳ್ ಪಿಡಿದಿಹ ಚಾಮರ ಕಡೆಗಣ್ಣೊಳು ಭಕ್ತರನೀಕ್ಷಿಸುತಲಿ 2 ನಾರದ ತುಂಬುರ ನಾಟ್ಯವನಾಡ್ವರು ಬೇಗನೆ ಬಾರೊ ಬಾರಿ ಬಾರಿಗೆ ಭಕ್ತರು ನುತಿಗೈವರು ಬೇಗನೆ ಬಾರೊ ವಾರಿಜಾಸನ ವಂದ್ಯ ಶ್ರೀನಿವಾಸ ದೊರಿ ಬೇಗನೆ ಬಾರೊ ತೋರುತ ರೂಪವ ಬೀರುತ ಕರುಣವ ಮಾರಜನಕ ಅಪಾರ ಮಹಿಮನೆ 3 ವಂದಿಸಿ ಕರೆವರೊ ನಿಂದು ಭಕ್ತರೆಲ್ಲ ಬೇಗನೆ ಬಾರೊ ಇಂದಿರೆಯರಸನೆ ಮಂದರೋದ್ಧರ ಕೃಷ್ಣ ಬೇಗನೆ ಬಾರೊ ಇಂದು ಸ್ಥಿರವಾರ ಸ್ಥಿರವಾಗಿ ಸಲಹಲು ಬೇಗನೆ ಬಾರೊ ಹಿಂದೆ ಮುಂದೆ ಭಕ್ತ ಸಂದಣಿಯೊಳು ಗುರು ವೃಂದ ಬಿಂಬ ಮನ್ಮನ ಬಿಂಬನೆ ರಥಕೆ 4 ಅಪಾರ ಕರುಣದಿ ಭಕ್ತರ ಪೊರೆಯಲು ಬೇಗನೆ ಬಾರೊ ಶ್ರೀಪತಿ ಶೇಷಾಚಲನಿಲಯನೆ ಹರಿ ಬೇಗನೆ ಬಾರೊ ಗೋಪಾಲಕೃಷ್ಣವಿಠ್ಠಲನೆ ತ್ವರಿತದಿ ಬೇಗನೆ ಬಾರೊ ಭೂಪರೈವರ ಕಾಯ್ದ ಗೋಪಕುವರ ಕೃಷ್ಣ ಈ ಪರಿಯಿಂದಲಿ ಭಕ್ತರ ಪೊರೆಯಲು 5
--------------
ಅಂಬಾಬಾಯಿ
ಮನವೆ ನೀ ದೃಢವಾದರೆ ಮನಸಿಜನಯ್ಯನ ಚರಣ ಕಾಂಬೆನೊ ನಾನು ಪ ಹಂಬಲವನು ಮಾಡದಿದ್ದರೆ ಹರಿ ಎಂಬ ನಾಮಪೀಯೂಷ ದೊರಕುವುದು1 ಚಂಚಲವುಳ್ಳವುನಾಗದಿದ್ದರೆ ದುಷ್ಟ ಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ 2 ಅತ್ತಲಿತ್ತಲಿ ಪೋಗದಿರು ಎ ನ್ನತ್ತ ವಿಜಯವಿಠ್ಠಲ ಬರಲೀ 3
--------------
ವಿಜಯದಾಸ
ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜ_ವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ. ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ 1 ನಿತ್ಯ 2 ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ 3 ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು 4 ಗದುಗಿನ ವೀರನಾರಾಯಣಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು 5
--------------
ವೀರನಾರಾಯಣ
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಮುಳಬಾಗಲುರಂಗಸ್ವಾ'ುೀ ಯಮ್ಮನುಳುಹಬೇಕು ಭಕ್ತಪ್ರೇ'ುೀ ಪನಳಿತೋಳು ಕಳೆಮುಖ ತಲೆಗೆ ಕಿರೀಟವುನಳಿನಲೋಚನಮೂರ್ತಿ ಕಳೆುಂದ ಬೆಳಗುವೆಅ.ಪಅದ್ವೈತ ಶಾಸ್ತ್ರಾನುಭವರು ನಮ್ಮಅಣ್ಣಯ್ಯಸ್ವಾ'ುಯ ಸುತರೂಸಾಧ್ವೀಗುರ್ರಮಗರ್ಭಾಂಬುಧಿ ಶಶಿಯಾಗಿಸದ್ವಿಲಾಸದೊಳು ಸಂಜನಿಸಿದ ಚಲುವ 1ಕೃತ್ತಿಕಾನಕ್ಷತ್ರ ಪ್ರಥಮಾ ಪಾದತಿಥಿಯು ದ್ವಾದಶಿ 'ಭವನಾಮಾ'ತವಾದ ಧನುರ್ಮಾಸ ಸ್ಥಿರವಾರದುದಯದೊಳ್‍ಪೃಥಿ'ೀಪಥನವಾದ ಪರಮಪುರುಷಮೂರ್ತಿ 2ಸದ್ಗುಣದಾಟಿನೋಟಗಳೂ ಶಾಸ್ತ್ರ'ದ್ಯ ಸಂಯೋಗಪಾಠಗಳೂ ಸದ್‍ವೃದ್ಧಿ ಸ'ಯ ವ್ಯಾಪಾರ ವರ್ಜಿತಮಾಡಿಶುದ್ಧವೈಷ್ಣವ ತುಲಸಿರಾಮರ ಭಜಿಸುವ 3ಹರಸೀ ವಾಗೀಶಕಿರೀಟಾ ಗುರುಪರಂಪರೆ ಕಥೆನುಡಿದಾಟ ಹರುಷದಿ ಮೆಚ್ಚಿಸಿ ಧರಿಸಿ ಕಿರೀಟಾ ನಿರುಪಮ ಪರತತ್ವದೊಳಗೆ 'ಶೇಷಾ 4ಪರಕಾಲಮಠಕಾಗಾ'ುಸಿದೇ ಜನರತರುಣೋಪಾಯಗಳ ಮಾಡಿಸಿದೇತಿರುಮಂತ್ರಸಂಸ್ಕಾರ ಚರಮಾರ್ಥದೊರಕಿಸಿಪರಮಪಾವನರಾಗಿ ಮಾಡುತಲಿರುತಿಹ 5ವರಯತಿಗುರುಗಳ ಭಾಷಾ ಪೂರ್ಣಪರತತ್ವಬೋಧೆ ಗುಣಭೂಷಪರಮಾನುಭವಜ್ಞಾನ ಅರು' ಭಕ್ತರನೆಲ್ಲ ಪರಲೋಕಸಾಧನ ಅರಿವು ತೋರಿಸುವಂಥಾ 6ಚನ್ನಪಟ್ಣಾದಿರಾಮಕೋಟಿ ಅಲ್ಲಿಜನಕೆನೀ ತುಂಬಿದೆ ನಾಟಿಮುನ್ನುಮಾಡಿದ ಪಾಪವೆಲ್ಲವು ಪರಿಹಾರವುನ್ನತಮಾರ್ಗವ ತೋರಿದ ಗುರುದೇವ 7ರಾಮಕೃಷ್ಣೋತ್ಸವಗಳನೂ ಬಹುಪ್ರೇಮದಿನಡೆಸಿದಾದರನೂಆಮಹಾ ಕಾರ್ಯಕಾತುರದುರಂಧರನೂುೀಮ'ಯೊಳು ಪ್ರಖ್ಯಾತನಾಗಿಹನೂ 8ಪುರಪುರಗ್ರಾಮಗಳಲ್ಲಿ ಗುರು ತಿರುನಕ್ಷತ್ರೋತ್ಸವವಲ್ಲಿಪರಮವೈಭವದಿಂದ ಸ್ಥಿರವಾಗಿ ನಡೆಯಲುಹರುಷದಿ ಸೌಲಭ್ಯ ದೊರಿಕಿಸಿ ಇರುವಂಥಾ 9ಪ್ರತಿವರ್ಷ ಧನುರ್ಮಾಸ ಭಜನೇ ಒಳ್ಳೆಶೃತಿಮೃದಂಗವು ತಾಳರಚನೇಸತತವು ಹರಿಕಥೆ ತೀರ್ಥಪ್ರಸಾದವು'ತಕರಗುರುಸೇವಾ ದುರಂಧರಬಿರುದುಳ್ಳ 10ಭರತಪುರೀವಾಸಶ್ರೇಷ್ಟಾ ಗುರುವರತುಲಸಿರಾಮ ಪ್ರತಿಷ್ಠಾಪರಿಪರಿತತ್ಸೇವಾನಿರತ ಸಂತುಷ್ಟಾಗುರುಪಾದಸರಸಿಜ ಭೃಂಗಾವೆ ಸ್ವಷ್ಟಾ 11ಅಪರೋಕ್ಷಜ್ಞಾನ ಸಂಪೂರ್ಣ ಜನ್ಮಸಫಲಮಾರ್ಗದಲ್ಲಿ ಉತ್ತೀರ್ಣಾ ಅಪರಾಧಗಳನು ಮನ್ನಿಸಿ ಶ್ರಿತಜನರನ್ನುಸಫಲಗೊಳಿಸಿ ಜನ್ಮಸಾರ್ಥಕಪಡಿಸುವ 12ಪತಿತಪಾಮರರಿಗೆಯೆಲ್ಲಾಪ್ರತಿಫಲ'ಲ್ಲಾದುಪದೇಶ ಬಲ್ಲಾ'ತಕರವಾಗಿ ತೋರ್ಪುದು ಶಿಷ್ಯಜನಕೆಲ್ಲಾ ಸತತವು ತವಪಾದ ಗತಿಮೋಕ್ಷದಾಯಕ 13ಜ್ಞಾನಭಕ್ತಿಯು ವೈರಾಗ್ಯ ಸುಜ್ಞಾನದಿ ತುಳುಕುವ ಭಾಗ್ಯಮಾನವ ಜನ್ಮದಿ ಅವತರಿಸಿರುತಿಹದೀನರ ಮುಕ್ತಿಗೆ ಕಾರಣವಾಗಿಹ 14ಅಂಗ ದ್ವಾದಶನಾಮಧಾರಾ ಬಹುಶೃಂಗಾರತರ ಮಕುಟಾಂಬರಾರಂಗುಮಂಟಪದಿ ಲಂಘಿಸಿ ರಾಗ ಪಾಡುತ್ತಮಂಗಳಕರ ತುಲಸಿನಳಿನಾಕ್ಷಹಾರುಳ್ಳ 15ಗೃಹಮಣಿ ಸುಬ್ಬಾಂಬನವರೂ ನಿಮ್ಮಮಹದಾಂಶ ಸುಗುಣವಂತೆಯರುಸಹಚರಿಸುತ ಪುರಗ್ರಾಮ ಮಾದರಿಯಾಗಿಸಹಪತ್ನಿಸ'ತ ಭಕ್ತರನು ಪಾಲಿಸತಿರ್ಪಾ 16ದಿನಚರಿಬರುವ ದಾಸರನೂ ಮನದನುವಾರಿತಾನ್ನದಾನವನೂಮನದೊಳು ಭಕ್ತರವೊಡಲ ಪರೀಕ್ಷಿಸಿಘನವಾದ ಮೋಕ್ಷಾರ್ಹವಾದನರ ಕೈಪಿಡಿದ 17ಅಂಕಿತಮಾಡದೆ ುಹೆನೂ ಚಕ್ರಾಂಕಿತ 'ಲ್ಲದ್ಯೋಚಿಪೆನೂ ಕಿಂಕರನಾಗಿ ಬೇಡುವೆ ಪಾದವನೂಅಂಕಿತಕನುವiತಿ ಆಗಹೊಂದುವೆನೂ 18ಸೋಮೆಗೌಡನ ಪುರವಾಸಾ ರಂಗಸ್ವಾ'ುದಾಸರ ದಾಸದಾಸಪ್ರೇಮಭೈರವಗೌಡನೊಳಗೆ ತೋರಿಸಬೇಕು ಸ್ವಾ'ುನಿನ್ನಾಜ್ಞೆಗೇ ಬಾಗಿದಂಕಿತ'ದು19
--------------
ಮಳಿಗೆ ರಂಗಸ್ವಾಮಿದಾಸರು
ಯತಿರಾಜ ಯತಿರಾಜ ಮಾಧವೇಂದ್ರ ಗುರು ಸಾರ್ವಭೌಮ ಪ್ರಭು ಪ ಧಾರುಣಿಯೊಳಗಪಾರವಾದ ವಿದ್ಯಾ ವಾರಿಧಿಚಂದ್ರಮ ವೈರಾಗ್ಯಮೂರುತಿ1 ಶಿಷ್ಟಶಿರೋಮಣಿ ಕಟ್ಟಳೆಯಿಂದ ಬಲು ದಿಟ್ಟತನದಿ ಯತಿಪಟ್ಟವೇರಿದನೀತ 2 ಭೇದದಿಂದತಿಶಯ ವಾದಿಪ ಮಹದು ರ್ವಾದಿಗಳನು ಗೆದ್ದು ನೀ ಸಾಧಿಸಿದಧಿಕಾರ 3 ಅಧಮರ ಉಪಟಳಕೆದೆಪೊಡೆಯದೆ ನಿಜ ಸದಮಲ ವೈಕುಂಠಪದವಿಗೆ ನಡೆದನು 4 ಮಧ್ವಶಾಸ್ತ್ರ ಪ್ರಸಿದ್ಧ ಪದ್ದತಿಗಳ ಸಿದ್ಧಿಪಡೆದು ಪರಿಶುದ್ಧನೆನಿಸಿಕೊಂಡ 5 ಗುರುವೆಂದೆನಿಸಿ ಭೂಸುರರನುದ್ಧರಿಸೀತ ಸ್ಥಿರವಾಗಿ ನಿಂತನು ಮೆರೆವ ಬುದ್ಧಿನ್ನಿಯೊಳು 6 ಪರಮಭಕ್ತಿಯಿಂದ ನಿರುತ ಸೇವೆಗೈದು ವರವ ಬೇಡಿರೆಲೋ ಭರದಿ ಕೊಡುವ ಮೆಚ್ಚಿ 7 ಆಸೆರಹಿತನನುಮೇಷ ಪೂಜಿಸಿರೊ ದೋಷ ದಾರಿದ್ರ್ಯವ ನಾಶಮಾಡುವನು 8 ಸ್ವಾಮಿ ಕೃಷ್ಣ ಶ್ರೀರಾಮನಾಮಾಮೃತ ಪ್ರೇಮದಿಗರೆಯುವ ಕಾಮಧೇನು ಸತ್ಯ 9
--------------
ರಾಮದಾಸರು