ಒಟ್ಟು 919 ಕಡೆಗಳಲ್ಲಿ , 94 ದಾಸರು , 786 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನುಪೇಕ್ಷೆಯ ಮಾಡೆ ಎನ್ನ ಕಾಯುವರಿಲ್ಲ ಮನ್ನಿಸಿ ಸಲಹೊ ದಯದಿ ಪ ಆಪನ್ನ ಪರಿಪಾಲ ಶ್ರೀನಿವಾಸ ಅಖಿಳಾಮರೇಶ | ಶ್ರೀಶಾ ಅ.ಪ ಕ್ರೂರತರ ಸಂಸಾರ ದಾವಾಗ್ನಿ ಮೇರೆಯಿಲ್ಲದೆ ಸುಟ್ಟು ಘೋರ ದುಃಖ ಬಿಡಿಸುತಿಹುದೊ ವಾರಿಜಾಕ್ಷ ನಿನ್ನ ನಾಮಾಮೃತವೆಂಬ ಮಳೆಗರೆದು ಹರಸಿ ಪೊರೆಯಯ್ಯ | ಜೀಯ 1 ಸತಿಸುತರ ಹಿತಕಾಗಿ ಅತಿ ನೀಚವೃತ್ತಿಲಿ ನಡೆದು ಪತಿತ ನಾನಾದೆನಯ್ಯ ಪತಿತಪಾವನ ನಿನ್ನ ಕಥೆಗಳನು ನುಡಿಸಿ ಸ- ದ್ಗತಿಯ ಪಾಲಿಸಯ್ಯ | ಪ್ರೀಯ 2 ಆರು ಮಂದಿಗಳೆಂಬ ವೈರಿಗಳೆನ್ನನು ಸೇರಿ ಗಾರು ಮಾಡುತಲಿಹರೊ ಕಂಸಾರಿ ಸೇರಿದೆ ಪರಿಹರಿಸೊ ಕಷ್ಟ | ನಿನ್ನಿಷ್ಟ 3 ಪಶುಪತಿ ಘುಡುಘುಡಿಸಿ ವ್ಯಸನದಿಂ ಕೊಲ್ಲುತಿಹುದೋÀ ಶ್ವಸನ ಅಂತರ್ಯಾಮಿ ನಿಶಾಚರ ವೈರಿ ವಶಮಾಡಿ ಎನ್ನ ಪೊರೆಯೊ | ಕಾಯೊ 4 ಅತಿತ್ತ ಪೋಗದಲೆ ಹಿತವಾದ ಚಿಂತೆಯೊಳು ರತನಾಗಿ ಖತಿಗೊಳ್ಳುತಿಹೆನೊ ಸ್ಮøತಿಯಿತ್ತು ಪಾಲಿಸೊ | ಸಲಿಸೊ 5 ಒಂದು ಕ್ಷಣವಾದರು ಕುಂದು ಮಾಳ್ಪಾಲೋಚನೆ ಯಿಂದ ಮನ ಹಿಂದಾಗದೊ ಆನಂದ ಮುನಿವಂದ್ಯ ದ್ವಂದ್ವತಪ ಪಾದದಿ ಮನ ಹೊಂದುವಂದದಿ ಮಾಡೊ | ಎನ್ನ ಕೂಡೊ 6 ಐಹಿಕ ಸುಖ ಬಯಸಿ ಲೋಕದ ವಿಹಿತಗಳೆಲ್ಲ ಮರೆದೆ ತಲ್ಪ ವಿಜಯರಾಮಚಂದ್ರವಿಠಲ ಪಾಹಿ ಸತತಯೆನ್ನ | ಮುನ್ನ 7
--------------
ವಿಜಯ ರಾಮಚಂದ್ರವಿಠಲ
ಇಷ್ಟಾದರು ದಯಮಾಡು ಪಂಡರಿನಾಥ ಪಾದ ಮುಟ್ಟಿ ಪ್ರಾರ್ಥಿಪೆನು ಪ ದಾನಧರ್ಮವು ಮಾಡಬೇಕೆಂದು ಮನವಿರೆ ದಾನವಾಂತಕ ಕೃಷ್ಣ ಧನವಿಲ್ಲವಯ್ಯ ಗಾನಲೋಲನೆ ಭಕ್ತಪಾಲ ನಿನ್ನಯ ಪಾದ ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ 1 ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ- ಮೂರ್ತಿ ಸೇವಿಸಲಸಮರ್ಥನಾಗಿರುವೆ ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ 2 ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ ಜ್ಞಾನಿಗಳರಸ ಭಕ್ತರ ಸುರಧೇನು ಅಜ್ಞಾನಿಗಳಳಿದು ಸುಜ್ಞಾನಜನರ ಸಂಘ 3 ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ ಖಗವಾಹನ ಕಂಸಾರಿಯೆ ದೇವ ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ ಪಾದಗಳು ಸೇವಿಪ ಪರಮಲಾಭವನು 4 ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ 5
--------------
ನಿಡಗುರುಕಿ ಜೀವೂಬಾಯಿ
ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು ಶಿಷ್ಟರ ನಡತೆಲ್ಲೆಲ್ಲೂ ಗುರುವೇ ಬಲು ಕಷ್ಟದೊಳಗೆ ನಾ ಮುಳುಗಿರುವೆ ನೀ ಕೊಟ್ಟ ಅಭಯದಿಂ ಬದುಕಿರುವೆ ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣುಸಾರಥಿಯ ಪ್ರೀಯ ಮಗುವೆ ಬಾ ಬಾ ಗುರುವೆ ಪ ಇತ್ತರು ಸರಿಯಿಲ್ಲ ಈ ಮಾತು ಹೊರಗೆ ಪೇಳುವವಲ್ಲಾ ನಾ ನಿದ್ದೆ ಪೂರ್ವದಲಿ ಅತಿ ಖುಲ್ಲಾ ಶಿಲೆಯನು ಸುಂದರ ಮೂರ್ತಿಗೈದತೆರ ಬಲು ವಿಧದಲಿ ಸಲಹಿದಿಯಲ್ಲ ಹರಿಬಲ್ಲಾ ಜ್ಞಾನವಿತ್ತಿ ಹರಿಪಾದದಲ್ಲಿ ಅಭಿಮಾನವಿತ್ತಿ ಸುಖವೆಲ್ಲಾ ಬಲುಹೇಯವೆಂದು ತಿಳಿಸಿದಿಯಲ್ಲಾ ಮೇಲ್ವರದಿ ರಂಗನೊಲಿಯುವ ಸೊಲ್ಲಾ ಅಸನ ವಸನಗಳು ಕೊಟ್ಟು ಕೊನೆಗೆ ತುಚ್ಛಿಸುವ ನಿನ್ನ ಗುಣ ತಿಳಿಯಲಿಲ್ಲಾ ಇದು ಥsÀರವಲ್ಲಾ ನಿನ್ನ ಪಾದವೇ ಸಡಗರ ಸಿರಿ ಮೇಲೆ ಸುರಪುರಿ ಜ್ಞಾನನಿಧಿ ಥsÉರಿ ಕಾಶಿ ಗಯಾ ಮಧುರಿ ಹರಿ ಓಂ ಓಂ ಓಂ ನಿನ್ನ ನಾಮ ದುರಿತವೆಂಬೊ ಕರಿ ಕುಲಕೆ ಘನ ಹರಿ ಪರಿ ತಿಳಿದೆನೆಲೊಧೊರಿ ಹರಿ ಓಂ ಓಂ ಓಂ ಇನ್ನಾದರು ಕೋಪವತ್ವರಿ ಕರುಣಿ ಕಣ್ತೆರಿ ಸುತಗೆ ಸುಖಗರಿ ತೋರೋ ನಿನ್ನ ಮಾರಿ ಹರಿ ಓಂ ಓಂ ಓಂ ಎನ್ನಯ ಬಿsÀಷ್ಟಗಳನ್ನು ನೀಡದಿರೆ ನಿನ್ನ ವಿಮಲ ಕೀರ್ತಿಗೆ ಗುರುವೆ ಕುಂದನ್ನು ಬಿಡದೆ ತಿಳಿ ನಾ ತರುವೆ ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣು ಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ 1 ಪಂಥವೇ ಹೇ ಮಹಾಕಾಂತ ಪ್ರಿಯ ನಿನ್ನ ಸಂತತಿಯೊಳು ಸೂರಿಗಳೊಡೆಯ ನೀನೆಂತು ಪೊಂದಿದೈ ನಿರ್ಭಿಡಿಯಾ ಇದು ಸಂತರು ಕೇಳಿದರಾಶ್ಚರ್ಯ ವಂತರು ಆಗರೆ ಸಾಕು ಮುಂದೆಯನ್ನಂತರಂಗವೇ ತವನಿಲಯ ಆಗಲಿ ಜೀಯಾ ಕಂದನ ಕಾಯುವದಂತು ಸಹಜ ಸಿರಿ ಹಿಂದಕೆ ಪಾಂಡವನೆಂಭಿರಿಯಾ ಆ ಗಂಧರ್ವನ ಮಗನಾದ ಗಯಾ ತಾ ಬಂದು ಹೋಗಲವನನು ಮೊರೆಯ ಸಿಂಧು ಜಪನ ಸಹ ಲಕ್ಷಿಸದಲೆ ತ್ವರ ತಂದು ಕೊಟ್ಟನವನಿಗೆ ವಿಜಯಾ ಮೇಲ್ಹರಿಯದಯಾ ಇದು ಅಲ್ಲದೆ ಬಹು ಭಕ್ತರು ಜ್ಞಾನಯುಕ್ತರು ಸುಧಿಯ ಭೋಕ್ತರು ನೆನೆದವರ ದು:ಖ ಬಿಡಿಸಿದರು ಸುಧೆಯ ಬಡಿಸಿದರು ಹರಿ ಓಂ ಓಂ ಓಂ ಬಲು ಹಿತದಿ ಶುಭವ ಕೋರಿದರು ತಾಪ ಹೀರಿದರು ವಾಕ್ಯ ಸಾರಿದರು ಹರಿಯ ತೋರಿದರು ಹರಿ ಓಂ ಓಂ ಓಂ ನೀನಾದರೂ ಬಹಳರ ಪೊರದಿ ಈ ಹೀನ ಓರ್ವ ನಿನ್ನಗೆಯರವೆ ಮರಿಯಬ್ಯಾಡ ಕರುಣೆ ಕರವ ಮುಗಿವೆ ಸಿಟ್ಟು ಮಾತ್ರ ನೀನಾಗ ಬೇಡ2 ಪರ ಖರೆ ಗುರುವಿಲ್ಲದ ಗತಿಯನ್ನು ಧರೆತ್ರಯದಿ ತೋರು ತುಸು ನೋಡೋಣ ಗಿರಿಧರಿಯ ಬಿಟ್ಟು ನಿಲ್ಲುವುದೇನು ಗುರುವೆ ತ್ರಿಟಿಯ ಬಿಟ್ಟೊರುಷವಾಗುತದೆ ಹಿರಿಯರಿ ಪೇಳ ವದಿನ್ನೇನು ಹೇ | ಸುರಧೇನು ಗುರುವೆ ಸುಖದ ಖಣಿ ಗುರುತನುಮಣಿ ಮಣಿ ತಿಳಿದೆ ನಾ ಮನದಾಗೆ ಪರಕಿಸಿದೆನ್ನನು ಪೊರೆಯೆ ಯನುತ ಬಾ ಯ್ತೆರೆಯುತ ಮಣಿಸುವೆ ಶಿರನಿನಗೆ ಮೂಜಗದಾಗೆ | ನಿನ್ನಿಂದ ಎನಗೆ ಸದ್ಬುದ್ಧಿ ಯೋಗದಾಸಿದ್ಧಿ ಕಾರ್ಯದಾಸಿದ್ಧಿ ಸ್ವರ್ಗದಾಸಿದ್ಧಿ ಹರಿ ಓಂ ಓಂ ಓಂ ನಿನ್ನಿಂದ ಪಡೆದ ವಿಜ್ಞಾನ ಹರಿಯರಾ ಖೂನಾ ಲೋಕದೊಳು ಮಾನ ಮುಕ್ತಿ ಸೋಪಾನ ಹರಿ ಓಂ ಓಂ ಓಂ ನೀನೇವೆ ಯನಗೆ ಆಭರಣ ಝಗಝಗಿಪ ವಸನ ಶ್ರೀಹರಿಯ ಚರಣ ವಿರಜಾನದಿ ಸ್ನಾನ ಹರಿ ಓಂ ಓಂ ಓಂ ನಿನ್ನೊಮ್ಮೆ ನೆನಸೆ ಪವಮಾನ ಕಾಯ್ವ ಪ್ರತಿದಿನ ಇದಕೆ ಅನುಮಾನ ಇಲ್ಲ ಏನೇನ ಹರಿ ಓಂ ಓಂ ಓಂ ಗಡ ಕೇಳ್ವಡೆಯನೆ ಕಡೆ ನುಡಿಯನ್ನದು ಭಿಡೆಯ ಇಡದೆ ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ 3
--------------
ಅಸ್ಕಿಹಾಳ ಗೋವಿಂದ
ಉಡುಪಿಯ ಶ್ರೀಕೃಷ್ಣ ನುಡಿಯ ಲಾಲಿಸು ಮಾಧವ ನುಡಿಯ ಲಾಲಿಸು ಪಾಲಕಡಲಶಯನ ದೇವ ಕಡಗೋಲ ಪಿಡಿದ ನಮ್ಮುಡುಪಿಯ ಶ್ರೀಕೃಷ್ಣ ಪ. ಮಾನವ ಮದವನ್ನು ಮಸರಂತೆ ಮಥಿಸಿದ ಭಾವನ ತೋರುವಿಯೊ ಹಾಗಲ್ಲದಿದ್ದರೆ ದೇವತಗಳಿಗಮೃತವನುಣಿಸಿದನೆಂಬ ಸೋವನು ಸೂಚಿಪೆಯೊ ಸೌಭಾಗ್ಯ ಸಿರಿಯೊ ಸೇವಕರ ಸೇವಾನುಗುಣಫಲ ನೀವ ತರತಮ ಭಾವವೊ ಭವ ನಾವ ನಡೆಸುವ ನಿಪುಣತೆಯೊ ದುರಿ ತಾವಳಿಯ ದೂರೋಡಿಸುವೆಯೊ1 ಕಲಿಯ ಬಲದಿ ಜ್ಞಾನಕಲೆಯಡಗಲು ದೇವ- ರ್ಕಳು ಬಂದು ಸ್ತುತಿಸಲಂದು ಸಕಲಸುರ ತಿಲಕ ವಾಯುವಿನ ಭೂವಲಯದೊಳವ- ಗೊಳುವರೆ ಪೇಳ್ವೆನೆಂದು ನೀ ಮನಕೆ ತಂದು ಹಲವು ಭವದಲಿ ಭಜಿಪೆ ಸಜ್ಜನ ಕುಲಕೆ ಮೋಕ್ಷಾಂತದ ಚತುರ್ವಿಧ ಫಲವ ನೀಡುವೆನೆಂದು ಪವನನಿ- ಗೊಲಿದು ಬಂದೀ ನಿಲಯದೊಳಗಿಹೆ 2 ಸರ್ವಜ್ಞ ಮುನಿಕೃತ ಸಕಲ ಪೂಜೆಗಳನ್ನು ನಿವ್ರ್ಯಾಜದಲಿ ಕೊಳ್ಳುತ ನಿರ್ವಾಹಗೊಳುತ ದುರ್ವಾದಿಪಟಲಾದ್ರಿ ಗರ್ವಾಪಹರ ಶತ ಪರ್ವ ಶಾಸ್ತ್ರವ ಕೇಳುತ ಸಂತೋಷಪಡುತಾ ಪೂರ್ವಸುಪರ್ವ ರಿಪುಗಳ ನಿರ್ವಿಯೊಳಗಡಿಯಿಡಗೊಡದ ಸುರ ಸಾರ್ವಭೌಮ ಶುಭೋನ್ನತಿ ಪ್ರದ 3 ಶ್ರೀನಿಕೇತನ ಸರ್ವ ಪುರುಷಾರ್ಥದಾಯಿಯೆ ನೀನೆಲ್ಲೆ ನೆಲೆಯದೋರಿ ಇರಲಿನ್ನು ಭಜಿಸದೆ ನಾನಾ ದೈವಗಳ ಸೇರಿ ಹಲ್ಲುಗಳ ತೋರಿ ಏನನುಸುರುವೆ ಕೃಷ್ಣ ಬುದ್ಧಿ ವಿ- ಹೀನತೆಯನದನೊ ಮಾನಿಸೆನ್ನ ಕಡಪಾನಿಧಿಯೆ ಪವ- ಪಾದ ಪಲ್ಲವ 4 ದ್ವಾರಾವತಿಯೊಳು ಸಂಸಾರಿ ಭಾವವನೆಲ್ಲ ತೋರಿದ ಕಾರಣದಿ ಅಲ್ಲಿಂದ ಭರದೀ ವಾರುಧಿ ಮಾರ್ಗದ ಸ್ವಾರಿಯ ನೆವನದಿ ಪಾರಿವ್ರಾಜರ ಸೇರಿದಿ ತದ್ಭಕ್ತಿಗೊಲಿದಿ ದೂರ ಭಯದಲಿ ವೆಂಕಟಾದ್ರಿಗೆ ಬಾರದಿಹ ಸಜ್ಜನರ ಮೇಲ್ಕರು- ಣಾರಸಾಮೃತ ಸೂಸುತ್ತಿಲ್ಲಿ ಸರೋರುಹಸ್ಮಿತ ಮುಖ ತೋರುವಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಉತ್ತರಾದಿಯ ಮಠದ ಪೀಠವಾಸಾ ಪ ಸತ್ಯಧರ್ಮಾಖ್ಯ ಯತಿ ಭಕ್ತ ಜನ ಪೋಷಾ ಅ.ಪ. ಪಂಚಮುಖ ಪ್ರಾಣನೂಪಾಸಕನೆ ಎನ್ನವಂಚಿಸದೆ ಭವದೊಳಗೆ ಕಾಯೊ ಬೇಗಾ |ಸಂಚಿತವ ಪರಿಹರಿಸೊ ವಾಂಛಿತಾರ್ಥದ ಹರಿಯಮಂಚ ಪದ ಯೋಗ್ಯಾಂಶ ಸಂಭೂತ ಯತಿಯೇ 1 ಭದ್ರೆ ತೀರದಿ ವಾಸ ಭವದುಪದ್ರವ ಕಳೆಯೊಕಾದ್ರ ವೇಯನ ಪದವು ಭದ್ರ ನಿನಗೇ |ಮಾದ್ರ ವೇಯಾಗ್ರಜಗೆ ವಲಿದಿತ್ತೆ ಅಸ್ತ್ರವನುರೌದ್ರ ಮೂರುತಿ ಕಾಯೋ ಗುರು ವರೇಣ್ಯಾ 2 ಭಾಗವತ ವ್ಯಾಖ್ಯಾ |ಸಜ್ಜನೋದ್ಧಾರಿಯನ್ನ ಜ್ಞಾನ ಪರಿಹರಿಸಿವಿಜ್ಞಾನಮಯ ಹರಿಯ ತೋರೈಯ್ಯ ಜೀಯಾ 3 ಸತ್ಯವರ ಕರಜಾತ ಶ್ರೀ ಸತ್ಯ ಧರ್ಮಾಖ್ಯನಿತ್ಯ ತವ ಸಚ್ಚರಣ ಸ್ತುತಿಪ ಜನರಾ |ಅತ್ಯಧಿಕ ಪ್ರೀತಿಯಲಿ ಹತ್ತಿರಕೆ ಕರೆಯುತ್ತಸತ್ಯ ಮೂರುತಿ ಪುರಕೆ ಎತ್ತೊಯಿವ ಗುರುವೇ4 ವತ್ಸರ ಸುವಿಕೃತವು ಅಸಿತ ಶ್ರಾವಣದಲ್ಲಿಮತ್ಸ್ಯಾದಿ ದಶ ಮತ್ತೆ ಮೂರನೆಯ ದಿನದೀ |ವತ್ಸಾರಿ ಶ್ರೀ ಗುರು ಗೋವಿಂದ ವಿಠ್ಠಲನಹೃತ್ಸರೋಜದಿ ಭಜಿಸಿ ತನುವ ತ್ಯಜಿಸಿದನೇ 5
--------------
ಗುರುಗೋವಿಂದವಿಠಲರು
ಉಬ್ಬುವದ್ಯಾಕೋ ಮದದಲಿ ಪ ಎರಡು ದಿನದ ಛಂದ ಮರನ್ಯಾಡಿ ತೋರುತ ಜರೆ ಬಂದು ನೂಕಲು ಮರಳುವ ಪ್ರಾಯದಿ 1 ಲೆಕ್ಕವಿಲ್ಲದೆ ಗದ್ದಿಗಿಕ್ಕಿದ ಜಲದಂತೆ ಪುಕ್ಕಟೆ ಜಾರುತ ದಕ್ಕದ ಧನದಿಂದ 2 ಬುದ್ಧಿಲಿ ಬಹುಜನ ಗೆದ್ದನು ಮದದಿ ಬಿದ್ದೋಗು ಕಾಲಕ ಸದ್ದಿಲ್ಲ ವಿದ್ಯದಿ 3 ಉಬ್ಬುವ ಕೊಬ್ಬುವ ಹಬ್ಬುವ ಸುಖದಿಂದ ಜಬ್ಬರ ಮಾಡುತಾ ರುಬ್ಬುವ ಕಾಲನು 4 ತಂದೆ ಮಹಿಪತಿ ನಂದನು ಸಾರಿದಾ ದ್ವಂದ್ವಗಳೆದು ಗೋವಿಂದನ ನೆನೆಯದೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉರುಟಣೆ ಪದ ಜಯ ಜಯ ರಾಮ ಜಯಜಯ ಜಯ ನಮ್ಮ ಜಾನಕೀ ರಮಣಗೇ ಪ ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ 1 ಗುರು ವಿಜಯದಾಸರ ಚರಣಾಸರಸಿರುಹವ ಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ 2 ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ 3 ಸರಸ್ವತಿ ಭಾರತಿ ಮೊದಲಾದಸರಸಿಜ ಮುಖಿಯರೆಲ್ಲಾರು ನೆರೆದುಸರಸ ಉರುಟಣಿಯ ಮೊಡಬೇಕೆನುತಾಲಿಕರೆಸಿದರಾಗ ಮುತ್ತೈದೆರಾಗ 4 ಹೇಮಮಯದ ಮಂಟಪದೊಳಗೆಪ್ರೇಮದಿಂದಲಿ ಹಾಸಿಕೆ ಹಾಕಿಸೋಮವದನನ ಗುಣವ ಕೊಂಡಾಡುತಕಾಮಿನಿಯರು ಕರೆದಾರು ಹಸೆಗೇ 5 ಕೌಸಲ್ಯಾದೇವಿ ತನಯಾನೆ ಕೇಳುಹರ್ಷದಾಯಕ ರಕ್ಷಕನೇಳುಹಂಸವಾಹನನಯ್ಯನೆ ಹಸೆಗೆ ಏಳೇಳೆಂದುಹಂಸಗಮನೆಯರು ಕರೆದರು ಹಸೆಗೆ 6 ನಿಗಮವ ತಂದಾ ಮಚ್ಚ್ಯಾನೇಳುನಗವ ಬೆನ್ನಿಲಿ ಪೊತ್ತ ಕೂರ್ಮನೇಳುಜಗವನುದ್ಧರಿಸಿದ ವರಹ ಮೂರುತಿ ಏಳುಮೃಗ ನರ ರೂಪ ಹರಿಗೇಳೆಂದಾರು 7 ಸುರನದಿಯ ಪಡೆದ ವಾಮನನೇಳುಪರಶುರಾಮ ಮೂರುತಿ ಏಳುಶರಧಿಯ ದಾಟಿ ಸೀತೆಯ ತಂದಶಿರಿ ರಾಮಕೃಷ್ಣ ಹಸೆಗೇಳೆಂದರು 8 ವ್ರತವನಳಿದ ಬೌದ್ಧನೇಳುಅತಿಬಲ ರಾಹುತನೇಳುಪೃಥಿವಿಗೊಡೆಯ ರಾಮನೇಳೆಂದುಅತಿ ಚಮತ್ಕಾರದಿ ಕರೆದರಾಗ 9 ಇಂತು ಬಗೆಯಾಲಿ ತುತಿಸಿ ಕರೆಯೇಕಂತುಜನಕನು ಹರುಷದಾಲೆದ್ದುಕಾಂತೆ ಕೈ ಪಿಡಿದು ನಡೆ ತರಲಾಗಲುನಿಂತಾರು ನಾರಿಯರೆಲ್ಲರಾಗ 10 ಎತ್ತಿಕೊಂಬುವದು ರಾಘವ ನಿಮ್ಮಪತ್ನಿಯ ನಡೆಸಲಾಗದು ಕೇಳಿನೀ ಪೃಥ್ವೀಶನಾದರೆ ನಮಗೇನೆನುತಾಲಿಸುತ್ತು ಕಟ್ಟಿದರು ವಾಮಾಕ್ಷಿಯರು 11 ಮಂಗಳಾಂಗಿಯನು ಎತ್ತಿಕೊಂಡು ರಾಮಹಿಂಗಾದೆ ದ್ವಾರದಲ್ಲಿಗೆ ಬರಲುಮಂಗಳದೇವಿಯ ಹೆಸರು ಹೇಳೆನುತಾಲಿಅಂಗನೆಯರು ಅಡ್ಡಗಟ್ಟಿದರಾಗಾ 12 ನಾಳೆ ಹೇಳುವೆನು ಇವಳ ಹೆಸರುತಾಳಲಾರೆನು ಭಾರವು ಎನಲುಶ್ರೀ ಲಕ್ಷ್ಮೀದೇವಿಯ ಹೆಸರು ಹೇಳಿದೆ ಬಿಡೆವೆಂದುಬಾಲೆಯರೆಲ್ಲಾರು ಇಟ್ಟರು ಕದವಾ 13 ಪುತ್ಥಳಿ ಗೊಂಬೆ ಹೆಸರು ಹೇಳೆನೆ ರಘು-ನಾಥಾನು ಎಂದಾಳು ಜಾನಕೀ 14 ಅಂಗಜನಯ್ಯಾ ಸತಿಯು ಸೀತೆಯ ಸಹಿತರಂಗು ಮಾಣಿಕದ ಹಾಸಿಕೆಯ ಮೇಲೆಶೃಂಗಾರದಿಂದಾಲಿ ಬಂದು ಕುಳ್ಳಿರಲಾಗಸುರರೆಲ್ಲಾ ಹಿಗ್ಗಿ ಕರೆದರು ಪೂ ಮಳೆಯಾ 15 ಸಾಸಿರ ನಾಮದ ಒಡೆಯ ಬಂದಾಶೇಷಶಯನಾ ಮೂರುತಿ ಬಂದಾಭಾಸುರಾಂಗನೆ ಸೀತೆ ಆಳಿದಾ ರವಿಕುಲಾ-ಧೀಶ ಬಂದಾನು ಎಂದಾರು ಕೇಳೆ 16 ವಾನರಾಧೀಶನೊಡೆಯಾ ಬಂದಾದಾನವಾಂತಕ ರಾಘವ ಬಂದಾ ಶ್ರೀ-ಜಾನಕೀದೇವಿ ಪ್ರಾಣದೊಲ್ಲಭ ಜಗ-ತ್ರಾಣ ಬಂದಾನು ಎಂದಾರು ಕೇಳೆ 17 ಸತ್ಯ ಸಂಕಲ್ಪ ಶ್ರೀ ಹರಿಯು ಬಂದಾಭೃತ್ಯ ಪಾಲಕ ದೊರೆಯು ಬಂದಾಮಿತ್ರೆ ಜಾನಕಿದೇವಿ ಪ್ರಾಣದೊಲ್ಲಭ ಸ-ರ್ವೋತ್ತಮ ಬಂದನೆಂದಾರು ಕೇಳೇ 18 ಸುಗ್ರೀವನ ಪರಿಪಾಲಕ ಬಂದಾ ಕ-ರಿಗ್ರಾಹ ಸಂಹಾರಿಕ ಬಂದಾವ್ಯಾಘ್ರ ಚರ್ಮಾಂಬರ ಸಖ ಸುಂದರವಿಗ್ರಹ ಬಂದಾ ಎಂದಾರು ಕೇಳೇ 19 ಇಂದ್ರನ್ನ ಪರಿಪಾಲಕ ಬಂದಾಚಂದ್ರನ್ನ ಪ್ರಭೆಯಾ ಸೋಲಿಪ ಬಂದಾಇಂದುವದನೆ ಸೀತೆ ಪ್ರಾಣದೊಲ್ಲಭ ರಾಮ-ಚಂದ್ರ ಬಂದನೆಂದಾರು ಕೇಳೇ 20 ಚಂದನ ಗಂಧೆಯರು ಎಲ್ಲಾರು ಕೂಡಿಗಂಧ ಕುಂಕುಮ ಅರಿಷಿಣ ಕಲಿಸಿಇಂದುವದನೆ ಸೀತೆಯ ಕೈ ಒಳಗಿಟ್ಟು ಶ್ರೀರಾಮ-ಚಂದ್ರಗೆ ಹಚ್ಚಿಸಿರೆಂದರಾಗ 21 ವಾರಿಜೋದ್ಭವ ಮೊದಲಾದವರುತಾರತಮ್ಯದಿಂದಾಲಿ ಕುಳಿತುವಾರಿಜಾಮುಖಿ ಸೀತೆ ನುಡಿಯೆಂದೆನುತಾಲಿಸಾರಿದರಾಗ ಸಂದಣಿಯರೆಲ್ಲಾ 22 ವಾಕು ಕೇಳಬೇಕೆಂದುಜಲಜ ಸಂಭವನು ನುಡಿದಾನು ನಗುತಾ 23 ಕಂಜವದನೆ ಜಾನಕೀದೇವಿಅಂಜಲಾಗ ನಿಮ್ಮ ಪುರುಷಾರಿಗೆಕುಂಜರ ವರದಾ ದಾಕ್ಷಿಣ್ಯ ಬ್ಯಾಡೆಂದುಅಂಜಾದೆ ನುಡಿದಾರು ನಸುನಗುತಾ 24 ದೋಷ ವರ್ಜಿತನೇ ಹರಿ ನಿಮ್ಮದೂಷಣೆ ಮಾಡಿದಳೆನ ಬ್ಯಾಡಿಮೋಸದಿಂದಲಿ ಬಲು ದೈತ್ಯರ ಕೊಂದ ಜಗ-ದೀಶ ನಿಮ್ಮ ಮುಖವಾ ತೋರೆಂದಾಳು 25 ದೇವಿ ಹಸ್ತದೊಳು ಅರಿಶಿನವ ಪಿಡಿದುಭಾವಜನಯ್ಯನ ನುಡಿದಾರಾಗದೇವರ ದೇವೋತ್ತಮ ಶಿಖಾಮಣಿದೇವಾ ನಿಮ್ಮಯ ಮುಖವಾ ತೋರೆಂದಾಳು 26 ಭಸ್ಮಾಸುರನ ಕೊಂದಾ ಬಹು ಶೂರನಾರಿಕಂಸನಳಿದಾ ಧೀರ ಅಸುರ ಹಿರಣ್ಯಕನಅಸುವ ಹೀರಿದ ದೊಡ್ಡಅಸುರಾಂತಕ ಮುಖವಾ ತೋರೆಂದಾಳು 27 ವಾಲಿಯ ಸಿಟ್ಟಿನಿಂದಾಲಿ ಕೊಂದುಕಾಲ ಯಮನಾನಸುವ ಯುಕ್ತಿಯಿಂದಾಭಳಿರೆ ಮಧುಕೈಟಭರ ಕೊಂದಾಕಾಲಾಂತಕ ಮುಖವ ತೋರೆಂದಾಳು 28 ಶ್ರೀನಾಥ ದ್ವಾರಕಾಪುರ ಮಾಡಿಆ ನಂದಿ ಗೋಮಂತಾ ಗಿರಿಗೊಲಿದೆವಾನರಾಧೀಶನಾ ಬಲು ಕೊಂಡಾಡುತ್ತದಾನವಾಂತಕಾ ಮುಖವಾ ತೋರೆಂದಾಳು 29 ಅರಿಶಿನವಾನು ಹಚ್ಚಿದಳು ಸೀತೆಅರಸನ ಫಣೆಗೆ ಕುಂಕುಮವಾ ಹಚ್ಚಿಸರಸದಿ ವದನಕ್ಕೆ ಗಂಧವಾ ಹಚ್ಚಲುಸುರರೆಲ್ಲಾ ನಕ್ಕಾರು ಕೈ ಹೊಡೆದು 30 ಪತಿ ಮೊದಲಾಗಿ ಚಪ್ಪಾಳೆನಿಟ್ಟುಹರಸಿದರಾಗ ಜಾನಕಿದೇವಿಶಿರಿಯು ಗೆದ್ದಳು ಅಯೋಧ್ಯದಅರಸು ಸೋತನೆಂದು ನಗುತೆ 31 ಬಾಹುಗಳಿಗೆ ಗಂಧವಾ ಹಚ್ಚಿಸಿಮ್ಯಾಲೆ ಪರಿಮಳಾ ಪೂಸಿದಳುಶ್ರೀ ಹರಿಯ ಚರಣಾವ ಪಾಲಿಸಬೇಕೆನುತಲಿಸರಸಾದಿಂದಾಲಿ ನುಡಿದಾಳು ಜಾನಕೀ 32 ಪಾಷಾಣ ಪೆಣ್ಣಾ ಮಾಡಿದಾ ಚರಣಶೇಷನಾ ಮ್ಯಾಲೆ ಮಲಗಿದ ಚರಣಭಾಸುರಾಂಗಿ ನಿನ್ನ ಲೀಲೆಯಾ ತೋರಿದಾಶೇಷಶಯನ ಚರಣಾ ಪಾಲಿಸೆಂದಾಳು 33 ಆಕಾಶಗಂಗೆಯ ಪಡೆದಾ ಚರಣಾಶಕಟನ ಮುರಿದೊಟ್ಟಿದ ಚರಣಾಭಕುತ ಜನರ ಸೇವೆ ಕೊಂಬ ಚರಣರಕ್ಕಸ ದಲ್ಲಣ ಚರಣಾವ ಪಾಲಿಸೆಂದಾಳು 34 ಅಂಕುಶದೊಜ್ರ ರೇಖೆಯ ಚರಣಾಕುಂಕುಮಾಂಕಿತ ರಾಶಿಯ ಚರಣಾಬಿಂಕದಿಂದ ಕುರುಪತಿಯ ಕೆಡಹಿದ ಬಿರು-ದಾಂಕ ನಿನ್ನಯ ಚರಣಾ ಪಾಲಿಸೆಂದಾಳು 36 ನಸುನಗುತ ಹರಿ ಚರಣ ವೀಕ್ಷಿಸಿಶಶಿಮುಖಿ ಸೀತೆ ಆನಂದದಿಂದಾಮಿಸಣಿಯಂತೊಪ್ಪುವ ಅರಿಶಿನೆಣ್ಣೆಯಾಎಸೆವ ಪಾದಕ್ಕೆ ಹಚ್ಚಿದಳಾಗ 37 ಪಾದ ಪದ್ಮಕ್ಕೆ ಎರಗಿಪಾಲಿಸಬೇಕೆಂದಾಳು ಅಂಗನೆ 38 ಕರಗಳ ಪಿಡಿದೆತ್ತಿದನು ರಾಮಾಹರಸಿದ ಮುತ್ತೈದಾಗೆಂದುಪರಮ ಪತಿವ್ರತೆಯೆನಿಸು ಎನುತಾಲಿಹರಿ ಹರಸೀದಾನು ಹರುಷದಲ್ಲಾಗ 39 ಅಂಡಜವಾಹ ಭಗವಂತನುಹೆಂಡತಿಯ ಮುಖವ ನೋಡೆನುತಲಿಗಂಡು ಮಕ್ಕಳ ಘನವಾಗಿ ಪಡೆಯೆಂದುಪುಂಡರೀಕಾಕ್ಷ ಹರಸಿದನಾಗ 40 ಮಂದಗಮನಿಯ ಕುಳ್ಳಿರಿಸಿಇಂದಿರೇಶ ಮುಂಗುರಳಾ ತಿದ್ದಿಎಂದೆಂದಿಗೆ ಅಗಲದಿರೆಂದು ರಾಮ-ಚಂದ್ರಾನು ಹರಸಿದನಾಗ 41 ಭೂಲೋಕದೊಡೆಯ ರಾಘವರಾಯನಶ್ರೀಲತಾಂಗಿಯ ಕುಳ್ಳಿರಿಸಿದನುಬಾಲಕಿಯರೆಲ್ಲಾರು ಗಲಿಬಿಲಿ ಮಾಡಾದಿರೆಂದುಫಾಲಾಲೋಚಾನು ನುಡಿದನು ನಗುತ 42 ಕಂತುಜನಕ ರಾಘವಾ ನಿಮ್ಮಾಪಂಥ ಸಲ್ಲಾದು ಜಾನಕಿಯೊಡನೆಯಂತ್ರವಾಹಕ ಶ್ರೀರಾಮ ಏಳೇಳೆಂದುಕಾಂತೆಯರೆಲ್ಲರು ನುಡಿದಾರು ನಗುತಾ 43 ಭಾಗೀರಥಿ ಪಾರ್ವತಿದೇವಿಬೇಗದಿ ಅರಿಷಿನ ಕೈಲಿ ಕಲಿಸಿಸಾಗರ ಶಯ್ಯನ ಕೈಯೊಳಗಿಟ್ಟುಬಾಗಿ ಸೀತೆಯ ಮುಖಕೆ ಹಚ್ಚೆಂದಾರು 44 ನಿಂದಲ್ಲಿ ನಿಲ್ಲಾದೆ ಚಂಚಳೆ ಲಕ್ಷ್ಮೀಬಂಧು ಬಳಗವನಗಲಿಸುವ ತರಳೆತಂದೆ ಮಕ್ಕಳೊಳಗೆ ಕದನವ ನಿಡುವಂಥಮಂದಹಾಸೆ ಮುಖವ ತೋರೆಂದಾನು ರಾಮಾ 45 ಅಣ್ಣನ ವಂಚಿಸಿ ಬೇಡಿದವಳೇಮನ್ನೆ ಮನ್ನೆಯರಾ ಕಳಿಸಿದವಳೇಚೆನ್ನಾಗಿ ಮನೆಯೋಳಿದ್ದು ಪೋಗುತಚೆನ್ನಾಯಿತೆ ಮುಖವ ತೋರೆಂದಾನು 46 ಭಾಷೆಯನು ಕೊಟ್ಟು ತಪ್ಪಿಸುವಳೆಕಾಸುವೀಸಾಕೆ ವತ್ತಿ ಬೀಳುವಳೆಹೇಸಿಕಿಲ್ಲದೆ ಕುಲಹೀನನ ಮನೆಯೊಳುವಾಸವಾಗಿರುವಾ ಮುಖವ ತೋರೆಂದಾನು 47 ರಾಮಚಂದ್ರಾನು ಅರಿಶಿನ ಗಂಧವಭೂಮಿಜಳಿಗೆ ಹಚ್ಚಿದನಾಗಾಸಾಮಜಗಮನೆಯ ಹಣೆಗೆ ಕುಂಕುಮ ಹಚ್ಚಿಪ್ರೇಮದಿ ಪರಿಮಳ ಪೂಸಿದಾನು 48 ಕುಸುಮ ದಂಡೆಯ ಮಾಡಿದರುಬಾಸಿಂಗವನು ಕಟ್ಟಿದಾರುಭೂಸುರರೆಲ್ಲರು ಮಂತ್ರಾಕ್ಷತೆ ತಳಿದು ನಿ-ರ್ದೋಷನಾಗೆಂದು ಹರಸಿದರು 49 ಇಂದುಮುಖಿಯರೆಲ್ಲಾರು ಕೂಡಿನಂದದಿ ಜಾನಕಿಗೆ ವೀಳ್ಯವನಿತ್ತುಅಂದಮಾಣಿಕದ ಅಕ್ಷತೆಗಳ ತಳಿದುಮಂದರೋದ್ಧರನ ಹರಿಸಿದರು 50 ದೇವಿಯನ್ನೆತ್ತಿಕೊಂಡು ರಾಮದೇವರ ಮನೆಗೆ ಬಾಹೋದು ಕಂಡುಭಾವುಕರೆಲ್ಲಾ ಹೆಸರು ಪೇಳೆಂದೆನುತದೇವಿ ರಘುನಾಥನೆಂದು ಪೇಳಿದಳಾಗ 51 ಇಂದುಮುಖಿಯರೆಲ್ಲಾರು ಕೂಡಿಇಂದಿರೇಶಾನೆ ಹೆಸರು ಪೇಳೆನಲುಎಂದಾ ಮೇಲೆ ಜಾನಕಿಯೆಂತೆಂದುಮಂದರಧರನು ನುಡಿದನಾಗ 52 ಸತಿಪತಿಯರಿಬ್ಬರು ಕೂಡಿಅತಿಶಯದಲಿ ನಮಸ್ಕರಿಸಿದಾರುಕ್ಷಿತಿಯ ಸುರರಿಗೆ ಲೀಲೆಯ ತೋರಿದ ದೇವಾಪತಿತ ಪಾವನ್ನ ಎನ್ನ ಸಲಹು ಎಂದಾನು 53 ಈ ಕಥೆಯನು ಆದರದಿಂದಾ ಬರೆದು ಹೇ-ಳಿ ಕೇಳುವ ಜನರಾಶ್ರೀಕಾಂತನೊಲಿದು ಕರುಣಿಸುವ ತಾ ಸಿದ್ಧನೇಮದಿಂದಾ ಪಾಡಿರಿ ಜನರು 54 ಕುರುಡಾನು ಈ ಕಥೆಯಾನು ಕೇಳಿದರೆಕರುಣದಿಂದಾಲಿ ಕಂಗಳ ಬರಿಸುವಶರಣವತ್ಸಲ ತನ್ನ ಶರಣರೊಳಿಟ್ಟುಪರಿಪಾಲಿಸುವನು ಶತಸಿದ್ಧ 55 ಸಿರಿ ಒದಗುವದುದಾರ ಇಲ್ಲದ ಬ್ರಹ್ಮಚಾರಿ ತಾ ಕೇಳಲುನಾರಿಯ ಸಹಿತೆ ವಾಸಿಸುವನು 56 ಉದ್ಯೋಗ ಇಲ್ಲದವನು ಕೇಳಿದರೆಸದ್ಯ ಐಶ್ವರ್ಯ ಒದಗುವದು ಸಿದ್ಧಮುದ್ದು ಸುತರಿಲ್ಲದ ಸ್ತ್ರೀಯು ಕೇಳಲುಬುದ್ಧಿವಂತ ಸುತರಾಗುವರು ಸಿದ್ಧ 57 ಮೂರ್ತಿ 58 ಕಮಲ ಧರಿಸಿಪ್ಪಪಾವನ ಮೂರುತಿ ಹೃದಯಾದಲ್ಲಿದೇವಿ ಸಹಿತವಾಗಿ ಕಾವನು ಕರುಣಾದಿನೀವೆಲ್ಲಾರು ತಿಳಿರಿ ಜನರು 59 ಜಾಹ್ನವಿ ಜನಕನುಜಯ ಜಯವೆಂದು ಮಂಗಳವ ಪಾಡೇ 60
--------------
ಮೋಹನದಾಸರು
ಊ. ವಿಶಿಷ್ಟ ಹಾಡುಗಳು ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ ಕೋಲುಗಾರನೊಬ್ಬನಲ್ಲಿ ಹೊರಟನಂತೆ ಬೇಳುವ ಶಂಖದ ಧ್ವನಿಯ ತೋರ್ಪನಂತೆ ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ 1 ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ ಸಾರಿ ಬಂದ ದೂತರಿಂಗೆ ಲಂಚ ನಡೆಯದು ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು ಸಾರಿ ಕಂಡು ಬದುಕುವರೆ ದಾರಿವೊಳ್ಳೆದು 2 ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ ಸದರ ಬಡ್ಡಿಯಿಂದ ಬರೆದು ಚದುರತನದಲಿ ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ 3 ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು 4 ಗಂಧಿಕಾರನಂಗಡಿ ಗೋವಿಂದನಲ್ಲಿ ಚಂದದ ಔಷಧವನ್ನು ತಿಂಬೆವಲ್ಲಿ ಬಂದ ಭವದ ರೋಗ ಕೊಂದೆವಲ್ಲಿ ಆತ ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ 5 ಸಾಲವನ್ನು ತಿದ್ದಿ ಮುದದ ಸಾಲವನ್ನು ನಾಲಿಗೆಯ ಪತ್ರದಿಂದ ತಂದೆವಿನ್ನು ನೀಲದ ಮಣಿಯನೊಂದ ಕದ್ದುದನ್ನು ಆಲಿಯೊಳಗಿಟ್ಟುಕೊಂಡು ಬಂದುದನ್ನು 6 ಅಂಗಡಿ ಗೋವಿಂದ ಬಹಳ ಅಂಗವುಳ್ಳವ ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ ಮುಂಗುಡಿಯ ಜನಕೆ ಅಂತರಂಗ ಕೊಡುವವ 7 ದಾಸರಿಗೆ ಧರ್ಮವನ್ನು ಕೊಡುವನಲ್ಲದೆ ಕಾಸು ಹೊರತು ಮೀಸಲನ್ನ ನೀಡಲರಿಯನು ಶೇಷಗಿರಿಯವಾಸನೆಂದು ಹಾಸಿಕೊಂಬನು ಬೇಸರನ್ನು ಕಂಡು ಸಂತೋಷವೀವನು 8 ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ 9
--------------
ವರಹತಿಮ್ಮಪ್ಪ
ಊರ ದೇವರ ಮಾಡಿ ಊರ ಶಾಂತಿಯಾಗಲಿಊರದೇವತೆ ಗುರು ಚಿದಾನಂದ ತಾನೆನುತ ಪ ಶುದ್ಧ ಸುನಾದವೆನಿಸುವ ಡಂಗುರವ ಸಾರಿಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದುವೇದಾಂತವೆಂದೆಂಬ ಹಂದರವನೆ ಹಾಕಿವಾದಾತೀತಾತ್ಮದೇವಿಯ ಎದುರುಗೊಂಡು 1 ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ 2 ಅಡ್ಡಾಡುವ ಮನವ ಹಿಡಿ ತಂದು ಕಟ್ಟಿದೊಡ್ಡ ಅಹಂಕಾರದ ಕೋಣವನು ಕಡಿಸಿಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ3 ಸಿದ್ಧ ತಾನೆಂದೆಂಬ ಅಡುಗೆಯದು ಆಗಲುಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲುಅದ್ದಿಸಿರಿ ಆನಂದದಲಿ ಊರ ಜನರ 4 ಊರೆಂಬುದು ನಿಮ್ಮ ದೇಹವೇ ತಿಳಿಯಿರೋಊರ ದೇವತೆ ನೀನು ನಿಜವನರಿಯೋಊರ ದೇವರ ಮಾಡಿ ಆನಂದಪಡೆಯೋಇದಕೆ ತಾ ಸಾಕ್ಷಿ ಚಿದಾನಂದನರಿಯೋ 5
--------------
ಚಿದಾನಂದ ಅವಧೂತರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಋಣವ ಮಾಡಿದ ಪತಿತನು ನಾನು ಸ್ಮøತಿಧನವ ಪಾಲಿಸು ಸೀತಾರಾಮ ನೀನು ಪ'ರಿಯರ ಮಾತನು 'ಂದುಗಳೆದು ಮುಂದೆಬರುವ ದುಃಖಗಳ ಬಗೆಗೊಳದೆದುರುದುಂಬಿತನದಿಂದ ದುಷ್ಟಸಂಗತಿಗೈದುಪರರ ಮೆಚ್ಚಿಸಿ ಬಾಳ್ವ ಪೌರುಷ್ಯವನು ನೀಗಿ 1ಹೆಮ್ಮೆಯ ಬಲು'ಷ ಹೆಡತಲೆಗೇರಿರೆಸುಮ್ಮಾನಬಡುತತಿಸುಖ'ದೆಂದುಉಮ್ಮಳಿಪರ ಠಕ್ಕಿಗುಬ್ಬಿ ುೀ ಪರಮಾತಿಗೊಮ್ಮೆಯು ಮನಗೊಡದೊರಟುಮಾರ್ಗವ ಸಾರಿ 2ಕಾಶಿಯೊಳ್ಮರಣವ ಕಾ'ುಸಿದರೆಯುಸನ್ಯಾಸವ ಮಾಡ್ದರು ಸನ್ಮುಕ್ತಿಯುತಾ ಸೋಕದು ಋಣತಗು'ದ್ದವನನೆನ್ನು'ೀ ಸೊಲ್ಲ 'ರಿಯರು ಸಾರಿದರೆಯು 'ುೀರಿ 3ಗೋವ ಕೊಂದವನಿಗೆ ಗಂಗೆಯ ಹಳಿದಗೆಭಾವೆ ಭೂಸುರರನು ಬಡಿದವಗೆಯಾವದು ಗತಿಯದು ನಿಷ್ಕøತಿ ಋಣಿಗಿಲ್ಲೆಂದುಭಾವಜ್ಞರರು'ದ ಭಯವನು ಗಣಿಸದೆ4ಬಡ್ಡಿಯ ಹೆಚ್ಚಿಸಿ ಬಹು ಧನವನು ತಂದುಕಡ್ಡಿಗೆ ಸರಿಮಾಡಿಕೊಟ್ಟವರಾಅಡ್ಡಿಯ ತೋರಿಸುತ ಸುಲಭ ಮುಳುಗಿಸಿದುಡ್ಡು ದುಗ್ಗಾಣಿಯ ತಿರಿದುಂಬ ರೀತಿಗೆ 5ಋಣಕರ್ತೃ ಪಿತೃಶತ್ರು ಧನಕರ್ತೃ ಪಿತೃ ಸಖಯೆನುವ ಗ್ರಂಥಾರ್ಥಗಳನು ಕೇಳಿಯೂಗಣಿಸದೆ ಸತಿ ಸುತರ್ಕೊರಗಿದರೆಯು ಕೆಟ್ಟುತೃಣಕಿಂತ ಕಡೆಯಾಗಿ ತಬ್ಬಿಬ್ಬನಾಡುತ್ತ6ಸಾಲವ ಕೊಟ್ಟವ ಸಾರಿ ಸಾರಿಗೆಕೇಳಿದರವನಿಗೆ ಕದ್ದೋಡುತಾಬೇಳುವೆ ಮರಣವ ಬಾಯಲಾಡುತ ಬುದ್ಧಿಜಾಳಾಗುವಂದದಿ ಜಡಿದು ಹೆದರಿಸುತ 7
--------------
ತಿಮ್ಮಪ್ಪದಾಸರು
ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ
ಎತ್ತಲಿಂದ ಬಂದೆ ಎನ್ನ ಒಗೆತನಕೆ ಎಲೆಖೋಡಿ ಸವತಿಎತ್ತಲಿಂದ ಬಂದೆ ಎನ್ನ ಒಗೆತನಕೆ ಪ ಕತ್ತಲು ಬೆಳುದಿಂಗಳಂತಾಯಿತುಮಿತ್ತು ಎತ್ತಲಿಂದ ಬಂದು ಸೇರಿತುಬಂದು ಎದುರಿಗೆ ಹಲ್ಲ ತೆರೆದಳುಒಂದು ಮಾತನು ಆಡದೆನ್ನೊಳುಒಂದನ್ನು ಸೇವೆಗೆ ಬರಗೊಡಳುಸಂದಿಯಲಿ ಲೊಟಕೆಯ ಹಾಕುತಲಿಹಳು1 ಹಾಲೊಳು ವಿಷವ ಹೊಯ್ದಂತೆ ಮಾಡಿದಳುಇಲ್ಲವನೆ ಹೇಳಿ ಕಾಲಕಾಲಲಿ ಎನ್ನ ಒದೆಸಿದಳುಬೇಳ ಮೇಳದಿ ತೊಡೆಯ ಮೇಲೆ ಹೊರಳಿಮೇಲೆಯೆ ಮೀಸೆಯ ಹುರಿ ಮಾಡುವಳು 2 ನೆರಳ ನೀರೊಳು ಬಗ್ಗಿ ನೋಡುವಳು ಎಬ್ಬಿ ತೆಗೆದುಮರಳಿ ಮರಳಿ ಒಡವೆಯ ನಿಡುವಳುಹೊರಯಿಕೆ ಒಳಯಿಕೆ ಮುರುಕಿಸಿ ನಡೆಯುತಲಿರೆ ಗಂಡಸು ಎಂದು ಅಣಕಿಸುತಿಹಳು3 ಮೋರೆಯನೀಗ ಎನಗೆ ತೋರಿಸಳುಸೀರೆ ಕುಪ್ಪುಸವ ಆರು ಕಾಣದಂತೆ ಉಡುವಳುದಾರಿಯ ಹಿಡಿ ನೀನಿರಬೇಡೆಂಬಳುನೂರು ಬಾರಿಯು ಸಾರಿದೆನೆಂಬಳು 4 ಒಗೆತನ ಕೊಂಡಳು 5 ಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನತಾನಾಗಿ ಇರುವನವನ6 ಪತಿ ಚಿದಾನಂದ ಮೂರುತಿ ತಾನಾದವನು7
--------------
ಚಿದಾನಂದ ಅವಧೂತರು
ಎಂಥಾ ಠೌಳಿಗಾರನಮ್ಮ ಗೋಪಮ್ಮ ನಿನ್ನ ಮಗ ನ್ನೆಂಥಾ ಠೌಳಿಗಾರನಮ್ಮ ಪ. ಎಂಥಾ ಠೌಳಿಗಾರ ಪಂಥಾದಿ ಬೆನ್ನಟ್ಟಿ ಬಂದು ನಿಂತಲ್ಲೆ ನಾನಾರೂಪವೆಂತು ತಾಳುವ ನೋಡೆ ಎಂಥಾ ಅ.ಪ. ನೀರೊಳು ಮೀಯಲು ಪೋದೆನೆ ಗೋಪಮ್ಮ ಸಾರಿ ಪಿಡಿಯಲು ಹೋದೆ ಆರು ಅರಿಯರೆಂದು ಪೊತ್ತು ಮರೆಯಾದನೇ ಗೋಪಮ್ಮ 1 ಗೋಪಿ ಧೂಳು ಕೆದರಿ ಕೋರೆ ತೋರುವನ ಖೂಳ ದೈತ್ಯನ ಸೀಳೆ ಕೇಳಿ ಕಂದನ ನುಡಿ ಭಾಳ ಕ್ರೂರ ಮೃಗ ಕೇಳಿದೊಡಲು ಭಯ ತಾಳಿ ಬಂದೆ ಇಂಥ2 ದೊರಕಿದನೆಂದೆ ತಿರುಕ ಬ್ರಹ್ಮಚಾರಿ ತಿರುಗಿ ನೋಡೆ ಥೋರ ಕೊಡಲಿ ಪಿಡಿದು ನಿಂತು ಮಾರುತಿ ಸೇವಿತನಾದ ಗಮನ ದೇವನು ಎಂಥಾ 3 ಚಿತ್ತಜನೈಯ್ಯನು ನಾನೆತ್ತ ಪೋದರು ಬಿಡ ಸುತ್ತಿ ಬಹನೆ ಕೃಷ್ಣಾ ಮುತ್ತ ತಾರೆನುತ ಕತ್ತಲೆಯೊಳು ಪೋದೆ ವಿಸ್ತರಿಸುವೆನೆಂತು ಗೋಪಿ ಇಂಥಾ 4 ಶ್ರೀಪತಿ ಶ್ರೀನಿವಾಸನ ಪಿಡಿದು ಗೋಪಾಲನ ಎಳತಂದೆ ನಿನ್ನೆಡೆಗೆ ತಾ ಪರಾರಿಯಾಗಿ ಗೋಪತಿ ಹಯನೇರಿ ಏಪರಿ ಪೋದನೊ ತಾಪತಾಳಲಾರೆ ಎಂಥಾ 5
--------------
ಸರಸ್ವತಿ ಬಾಯಿ