ವಂದನೆಯು ವಂದನೆಯು ವಂದನೆಗಳು
ನಂದಕುಮಾರ ಗೋವಿಂದನ ಚರಣಕೆ ಪ
ವಂದನೆ ಇಂದಿನ ಬಂಧನ ನಾಶಕೆ
ಮುಂದಿನ ಭವಗಳ ಮುಂದಿನ ಹರಣಕೆ ಅ.ಪ
ಹುಟ್ಟು ಸಾವುಗಳ ಕಟ್ಟಳೆ ಅವನದು
ಕೊಟ್ಟುದನು ಪಡೆಯುವದೃಷ್ಟ ನನ್ನದು
ಬೆಟ್ಟದ ಗಾತ್ರದ ಪಾಪವು ನನ್ನದು
ಇಷ್ಟನು ಕ್ಷಮಿಸುವ ದೃಷ್ಟಿ ಅವನದು 1
ಶರಣರ ಪೊರೆಯುವ ಬಲವಾತನದು
ಪರಿಪರಿ ಪಾಪವ ಗಳಿಸುವುದೆನ್ನದು
ಕರುಣೆಯ ತೋರುವ ಮನವಾತನದು
ವರದ ಮಾಂಗಿರಿರಂಗ ನೀ ಶರಣೆಂಬುದು ನನ್ನದು2