ಒಟ್ಟು 2276 ಕಡೆಗಳಲ್ಲಿ , 103 ದಾಸರು , 1650 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಂಟ್ವಾಳದ ವೆಂಕಟೇಶ ದೇವರನ್ನು ನೆನೆದು) ವಂದಿಸುವೆನು ಶ್ರೀನಿವಾಸ ಶ್ರೀ ವೆಂಕಟೇಶ ವಂದಾರುನಿಚಯಮಂದಾರ ಸದಾ- ಪ. ನಂದೈಕನಿಧಿವಿಲಾಸ ಚಂದ್ರಾದಿತ್ಯಸಹಸ್ರಪ್ರಕಾಶ ಹೊಂದಿದೆ ನಿನ್ನ ಪರೇಶ ಶ್ರೀ ವೆಂಕಟೇಶ 1 ಶಾಂತಾತ್ಮನಿಯಮ ಸಂತಾಪಪ್ರಶಮ ಸಂತಜನಮನೋಲ್ಲಾಸ ಭ್ರಾಂತಿಜ್ಞಾನವಿತಾನವಿನಾಶ ಚಿಂತನೀಯ ನಿರ್ವಿಶೇಷ ಶ್ರೀ ವೆಂಕಟೇಶ 2 ಶ್ರೀಧರಾಚ್ಯುತ ಸುಮೇಧನಾಮಕ ಪ- ಯೋಧಿಶಯನ ಪರಮೇಶ ನಿತ್ಯ ನಿರ್ದೋಷ ಸಾಧು ಕೌಸ್ತುಭಮಣಿಭೂಷ ಶ್ರೀ ವೆಂಕಟೇಶ3 ನೀರಜನಾಭ ನೀಲಾಭ್ರದಾಭ ಶ್ರೀರಾಮ ತ್ರಿದಶಗಣಪೋಷ ಪ್ರಾರಬ್ಧಕರ್ಮ ಬೋಧೋದ್ಭಾಸಾ- ಪಾರಮಹಿಮ ಜಗದೀಶ ಶ್ರೀ ವೆಂಕಟೇಶ 4 ನೇತ್ರಾವತಿ ಸುಪವಿತ್ರಚಿತ್ರಸು- ಕ್ಷೇತ್ರ ವಟಪುರನಿವಾಸ ಕರ್ತ ಲಕ್ಷ್ಮೀನಾರಾಯಣನೀತ ಪಾರ್ಥಸಾರಥಿ ಪೃಥಗೀಶ ಶ್ರೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಬಪ್ಪನಾಡಿನ ಪಂಚದುರ್ಗೆ) ಮಂಗಲಂ ಶ್ರೀಪಂಚದುರ್ಗೆಗೆ ಜಯ ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆಪ. ಶಂಕರನಂಕಾಲಂಕಾರಿಗೆ ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ ಪಂಕಜಗಂಧಿ ಶ್ರೀಪಾರ್ವತಿಗೆ1 ಕೋಕಿಲಗಾನೆಗೆ ಕೋಕಪಯೋಜೆಗೆ ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ ಏಕದಂತನ ಜನನಿಗೆ ಜಗದಂಬೆಗೆ ಲೋಕನಾಯಕಿ ಶ್ರೀಮಹಾಕಾಳಿಗೆ2 ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ ಕುಂಜರಗಮನೆ ಕಂಧರಜಾತೆಗೆ ಮಂಜೀರನೂಪುರರಣಿತಪದಾಬ್ಜೆಗೆ ನಂಜುಂಡನ ಮನಮಂಜುಳೆಗೆ3 ಅಂಗಜರೂಪೆಗೆ ಮಂಗಲದಾತೆಗೆ ಭೃಂಗಕುಂತಳೆ ಸರ್ವಮಂಗಲೆಗೆ ಬಂಗಾರಮಕುಟೋತ್ತಮಾಂಗದಿ ಧರಿಸಿದ ಸಂಗೀತಲೋಲೆಗೆ ಶರ್ವಾಣಿಗೆ4 ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ ಮೂಡಿತೋರಿದ ಶ್ರೀಮುಕಾಂಬಿಕೆಗೆ ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ ಬೇಡಿದಿಷ್ಟವನೀವ ಸರ್ವೇಶೆಗೆ5
--------------
ತುಪಾಕಿ ವೆಂಕಟರಮಣಾಚಾರ್ಯ
(ಬಾಗಿಲು ತಡೆ) ಸಾರಸ ನಿಲಯೆ ಸಾಗರ ತನಯೆ ಸಾರೆ ಬಂದೆನು ಈಗ ಬೇಗ ಸಾರಿ ಬಾಗಿಲ ತೆಗೆ ಬೇಗ ಪ. ಸಾರು ಸಾರೆಲೊ ಸಾರಿಕೂಗುವನಾರೊ ಸಾರು ಬಾಗಿಲ ತೆಗೆ ನಾನು ಅ.ಪ. ಏಕಿಂತು ಕೋಪವೆ ಕೋಕಿಲಾರವೆ ನೀಂ ಕಟಾಕ್ಷಿಸು ಎನ್ನ ಮುನ ಸಾಕುಮಾಡುವುದಿದೆನ್ನ 1 ಸಾಕು ಸಾಕಿಂತು ಏಕೆ ಕೂಗುತಿರ್ಪೆ ಕಾಕು ನುಡಿಗಳುಸಲ್ಲ 2 ಪುಂಡರ ತಡೆವುದ ಕಂಡುಂಟು ಜಗದೊಳು ಗಂಡನ ತಡೆವರೆ ಭಾಮೆ ರಾಮೆ ಕಂಡವರೇನೆಂಬರೆ ಭಾಮೆ 3 ಗಂಡನಾರಿಗೆ ಹೆಂಡತಿಯಾರಿಗೆ ಪುಂಡಾಟವಾಡದೆ ಪೋಗು ಸಾಗು ಭಂಡನಾಗಿರ್ಪೆ ಪೋಗು 4 ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ ಬಲ್ಲವಳೆಂಬುವುದೆಲ್ಲೆ 5 ಬಲ್ಲೆ ಬಲ್ಲೆನೀ ಚಲ್ಲಾಟಗಳ ಸೊಲ್ಲಿಸದಾರನ್ನು 6 ದಶರಥರಾಮನೆ ಸೀತೆ ಖ್ಯಾತೆ ಪುಸಿಯಲ್ಲವೆಲೆ ಭೀತೆ 7 ನಿಶಿಚರರಿಲ್ಲಿಹರೇನೈ ಜ್ಞಾನಿ ವಿಷಮವರ್ತನವೇನೈ 8 ಅಂಗನೆ ನಿನ್ನ ಮೋಹನಾಂಗನಾದ ಶ್ರೀ ರಂಗ ನಾನೆಲೆ ಚಪ ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ 9 ತುಂಗ ವಿಕ್ರಮ ರಘು ರಾಮ ಶ್ಯಾಮ ರಂಗ ಕಾರುಣ್ಯಧಾಮ 10 ಪರಿ ಪೇಳುತೆ ಕೈಪಿಡಿದಳು ತ ನ್ನೋಪನ ವಂದಿಸಿ ರಾಣಿ ರಮಣಿ ಕೋಪರಹಿತೆ ಸುವಾಣಿ 11 ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು ನಲವೇರೆ ಅರರೆ ತಾಪಸನುತ ನಲವೇರೆ 12
--------------
ನಂಜನಗೂಡು ತಿರುಮಲಾಂಬಾ
(ಭಕ್ತಿ ಎಂಬ ಸ್ತ್ರೀಯ ವರ್ಣನೆ) ಸೇರಿರೊ ನವ ನಾರಿಕುಂಜರನನ್ನು ಧೀರಲಕ್ಷ್ಮೀವರನು ಮಂಟಪವೇರಿ ಮುಂದಕೆ ಬರುವನು ಪ. ಶ್ರವಣ ಕೀರ್ತನ ಸ್ಮರಣ ಸೇವನ ಪೂಜ ಪ್ರ- ಣವ ದಾಸ್ಯ ಸಖತ್ವ ಸರ್ವವ ವಹಿಪ ನವವಿಧ ಭಕುತಿಯ1 ದೂರ ನಿಂತರೆ ತೋರದು ಸರಿಯಾಗಿ ಸಾರಗೈಯಲು ಸಾಧನೆಗಳಿಂದಾರು ಮೂರಾಗಿರುವುದು 2 ಜೋಲುವಾ ಸೊಂಡಿಲೆಂಬುದೆ ಸುಜ್ಞಾನ ಕಾಲುಗಳೆ ಪುರುಷಾರ್ಥವೆನಿಪವು ಬಾಲ ಸದ್ಗುಣಭಾವವು 3 ಭಕ್ತಿ ಭುಕ್ತಿಗಳೆರಡು ನೇತ್ರಗಳು ವಿ- ರಕ್ತಿಯುದರವು ವಿಷ್ಣು ಗಾಥಾಸಕ್ತಿ ಸಕಲೇಂದ್ರಿಯಗಳು 4 ನಿತ್ಯ ನಿರ್ಮಲ ಚರಿತ ಲಕ್ಷ್ಮೀಶನ ಭೃತ್ಯಪಾದ ರಜಸ್ಸಮೂಹವನೆತ್ತಿ ನಾಲ್ದೆಸೆ ಸುರಿವದು 5 ಹತ್ತಿರೆಂದಿಗು ಸೇರಲೀಯದು ದು- ದುರಿತ ಕೂಪದಿ ಒತ್ತಿ ಕೆಡುಹುವ ವಹಿಲವು 6 ಛಲಕೆ ಮೆಚ್ಚುತ ನಲಿವುದು ಮನದಲಿ ಚೆಲುವ ಶೇಷಗಿರೀಂದ್ರನಾಥನ ವಲಿಸಿ ಕೊಂಡಿಲ್ಲಿಳಿವುದು 7
--------------
ತುಪಾಕಿ ವೆಂಕಟರಮಣಾಚಾರ್ಯ
(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
(ಮಂಗಳೂರಿನ ಗಣೇಶನನ್ನು ನೆನೆದು) ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ. ಬಾಗುವೆ ಶಿರ ಶರಣೌಘಶರಣ್ಯ ಸು- ರೌಘಸನ್ನುತ ಮಹಾಗುಮ ಸಾಗರ ಅ.ಪ. ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭ ಕಟಿ ವಿಗತಲೋಭ ಹೃದ್ಯಜನದುರಿತಭಿದ್ಯ ವಿನಾಯಕ ವಿದ್ಯಾದಿ ಸಕಲ ಬುದ್ಧಿಪ್ರದಾಯಕ 1 ಏಕದಂತ ಚಾಮೀಕರ ಖಚಿತ ವಿಭೂಷ ಗಣೇಶ ಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸ ಶೋಕರಹಿತ ನಿವ್ರ್ಯಾಕುಲ ಮಾನಸ ಲೇಖಕಾಗ್ರಣಿ ಪರಾಕೆನ್ನ ಬಿನ್ನಪ 2 ವರಮಂಗಲಪುರ ಶರಭಗಣೇಶ್ವರ ಧೀರ ಉದಾರ ಸುರುಚಿರ ಶುಕ್ಲಾಂಬರಧರ ವಿಘ್ನವಿದಾರ ಹರಿ ಲಕ್ಷ್ಮೀನಾರಾಯಣಶರಣರ ಗುರು ಗುಹಾಗ್ರಜ ಮನೋಹರ ಸುಚರಿತ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಮಂಗಳೂರಿನ ಪ್ರಾಣದೇವರನ್ನು ನೆನೆದು) ಪಾಲಿಸೆನ್ನ ಪಾವಮಾನಿ ಪಾವನಾತ್ಮ ಸುಜ್ಞಾನಿ ಪ. ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ. ಮೂರವತಾರವ ಗೈದು ಮುರಾರಿಯ ಪೂಜಿಸಿದೆ ಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ 1 ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳು ಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ 2 ಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು 3 ಸರ್ವಾಪರಾಧಗಳನು ಸಾಧುವರದ ಕ್ಷಮಿಸು ಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು 4 ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶ ವರ ಲಕ್ಷ್ಮೀನಾರಾಯಣ ಶರಣಾಗತರೀಶ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ) ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ. ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ ಸಾರಥಿ ದೇವ ಅ.ಪ. ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ ಧ್ಯಾನಾದಿಗಳ ಮಾಡದೆ ನಾನಾ ವಿಧದ ದುರ್ಮಾನುವಾದುದರಿಂದ ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ 1 ಬಡತನದಿಂದಿರಲು ಸಕಲ ಸುರ- ರೊಡೆಯ ನೀ ಕೈ ಪಿಡಿದು ರೂಢಿ ಮದದಿ ನಿನ್ನನು ಬಿಟ್ಟು ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ 2 ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ 3 ನಕ್ಷತ್ರಗಳಂದಿಂದಲು ಯೆನ್ನಪರಾಧ- ವಕ್ಷಯವಾಗಿರಲು ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ- ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ 4 ಎಷ್ಟು ಕರ್ಮಿಯಾದರು ನಿನ್ನಲಿ ಮನ- ವಿಟ್ಟು ಬಂದಿರುವೆನಲ್ಲ ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ- ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ 5 ನಟನ ಮಾಡುವ ಬೊಂಬೆಯ ಪೋಲುವ ಯೆನ್ನ ಹಟದಿಂದ ದಣಿಸುವುದೆ ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ ಪುಟನಾಗಿ ಬೇಡುವೆ ಘಟಿಸೊಭಿಲಷಿತವ 6 ಎಂದಿಗಾದರು ನಿನ್ನಯ ಪಾದಯುಗಾರ- ವಿಂದ ದರ್ಶನವಾಗಲು ಭವ ಸಿಂಧುವ ದಾಟುವೆ- ನೆಂದು ಬಂದಿರುವೆ ಸನಂದನಾದಿ ವಂದ್ಯ 7 ಕೂರ್ಮ ವರಾಹ ನಾರಸಿಂಹ ವಾಮನ ಶ್ರೀ ಭಾರ್ಗವ ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ ನಾಮಗಳನು ಬಿಟ್ಟು ಕಾಮಲಾಲಸನಾಗಿ 8 ಒಂದು ನಿಮಿಷವಾದರು ತತ್ವಾಧಾರ ವಿಂದ ದರ್ಶನ ಮಾಡಲು ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ- ನಂದತೀರ್ಥಚಾರ್ಯರೆಂದ ನುಡಿಯ ನಂಬಿ 9 ದ್ವೇಷಿ ಮಾನವರ ಮುಂದೆ ನಾನಾ ವಿಧ ಕ್ಲೇಶವ ತಾಳ್ದೆ ಹಿಂದೆ ಘಾಸಿಯಾಗಿ ನಾನಾ ದೇಶ ದಾಟಿ ಬಂದೆ ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ 10 ಜನರೊಳು ಪ್ರಮಿತನಾಗಿ ಬಾಳಿದ ಮಾನ- ವನು ಮಾನಹೀನನಾಗಿ ತನುವ ಪೊರೆದನತಿ ಘನಕ್ಲೇಶವೆನುತ ಅ- ರ್ಜುನನಿಗೆ ಉಪದೇಶವನು ಪೇಳಿದವ ನೀನೆ 11 ಯುಕ್ತಿ ಒಂದನು ಕಾಣೆನು ದೇಹದಿ ದೃಢ ಶಕ್ತಿಯಿಲ್ಲದವ ನಾನು ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ- ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ 12 ಕಾಸೆಲ್ಲ ವ್ಯಯವಾಯಿತು ಎನಗೆ ಪರದೇಶವಾಸವಾಯಿತು ಆಸೆ ಬಿಡದುದರ ಘೋಷಣೆಗಿನ್ನವ- ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ 13 ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ- ರೆಲ್ಯು ಮಾರ್ಗವನು ಕಾಣೆ ಬಲ್ಲಿದ ವೈರಿಗಳಲ್ಲಿ ತುಂಬಿಹರರಿ- ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ 14 ಅಶನವಸನ ಕಾಣದೆ ದೇಶವ ಸುತ್ತಿ ಬಸಿದು ಬೆಂಡಾಗಿಹೆನು ಉಶನಾಂiÀರ್i ಶಿಷ್ಯನ ವಶದಿಂದೆತ್ತಿ ಪೃಥ್ವಿಯ ದಶನಾಯಕರಿಗಿತ್ತ ಅಸಮಸಾಹಸ ದೇವ 15 ಮಾಡಿದಪರಾಧಕೆ ಮಾನಹಾನಿ ಮಾಡಿದುದು ಸಾಲದೆ ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ ರೂಢಿಯೊಳಗೆ ದಯಮಾಡು ಇನ್ನಾದರು 16 ಇನ್ನಾದರೂ ಮನದಿ ಪಶ್ಚಾತ್ತಾಪ ವನ್ನು ತಾಳೊ ದಯದಿ ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ- ತೆನ್ನನು ಬಳಲಿಪದನ್ಯಾಯವಲ್ಲವೆ 17 ನಷ್ಟವೇನಹುಣನು ಎನ್ನಲಿ ಕ್ರೋಧ ಬಿಟ್ಟು ಬಾಧಿಸುತ್ತಿರಲು ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ 18 ಇಂದ್ರಾದಿ ಸುರರುಗಳು ಕೆಲವು ಕಾಲ ನೊಂದು ಭಾಗ್ಯವ ಪಡದು ಇಂದಿರೇಶ ನಿನ್ನ ಬಂಧಕ ಶಕ್ತಿಯಾ ನಂದ ತಿಳಿದಂತೆ ಮಂದನಾನರಿವೆನೆ 19 ಆನೆಯ ಭಾರವನು ಹೊರಲು ಸಣ್ಣ ಶ್ವಾನ ಸಹಿಸಲಾಪದೆ ದೀನ ಮಾನವನೆಂದು ಧ್ಯಾನಿಸಿ ಮನದಲಿ ಘನ್ನ ದುಖ್ಖವ ಕಳೆಯಾನಂಥ ಮೂರುತಿ20 ನೀನಿತ್ತ ಮಾನವನು ನೀ ಕಳದುದ ಕಾನು ಮಾಡುವದೇನಯ್ಯ ದಾನವಾರಿ ಸುರಧೇನು ನಿನ್ಡಿಗಳ ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು 21 ಸಾಕು ಸಾಕು ಮಾಡಿದೆ ಎನ್ನನು ಬಹು ನೀಕರಿಸುತ ದೂಡಿದೆ ಬೇಕಾದರೆ ಭಕ್ತ ನೀ ಕಪಾಲನ ಪ- ರಾಕೆಂಬ ಬಿರುದಿಂದ ಸಾಕುವದುಚಿತವೆ 22 ಅಂಬರೀಷವರದ ಸ್ವಭಕ್ತ ಕು- ಟುಂಬಿಯಂಬ ಬಿರುದ ನಂಬಿದ ಮೇಲೆನಗಿಂಬುದೋರದೆ ವೃಥಾ ಡಂಬರವ್ಯಾಕಿನ್ನು ಶಂಬರಾರಿಯ ಪಿತ 23 ಹಂಸವಾಹನ ಜನಕ ದಾಸಮದ- ಭ್ರಂಶಕನೆಂದನ- ಕ ಸಂಶಯವಿಲ್ಲದೆ ತಿಳಿದೆನು ಮಾತುಳ ಕಂಸ ಮರ್ದನ ವಿಪಾಂಸ ಶೋಭಿತ ದೇವ 24 ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ ಪೊರೆದನೆಂಬ ಕಥೆಯ ಹಿರಿಯರು ಪೇಳ್ವರು ಭರವಸೆ ಎನಗಿಲ್ಲ ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು25 ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು ಭಜಿಸಿದ ಮೇಲೆನ್ನನು ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ 26 ಕುಂದಣ ವರ್ಣವಾದ ಕೇತಕಿಯನು ಗಂಧಕೆ ಮರುಳನಾಗಿ ಬಂದು ಕುಸುಮಧೂಳಿಯಿಂದ ಲಂಡನಾದ ತುಂದಿಲೋದರ ಮಿಳಿಂದನಂದದಿ ಸಿಕ್ಕಿ 27 ಬೇಡುವದೇನೆಂದರೆ ನಿನ್ನನು ಧ್ಯಾನ ಮಾಡಿ ಪಾಡುವ ಭಾಗ್ಯವ ನೀಡು ನೀಚರನೆಂದು ಬೇಡದಂದದಿ ಮಾಡು ರೂಢಿಯೊಳಗೆ ದಯಮಾಡು ನೀ ನಿರುಪದಿ 28 ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ ನಿನ್ನ ಪೊಗಳಲಾರೆ ಪನ್ನಗಾಚಲವಾಸ ಪರಮ ಪುರುಷ ಪ್ರ- ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ 29
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ನರಸಿಂಹ ದೇವರು) ರಕ್ಷಿಸು ಮನದಾಪೇಕ್ಷೆಯ ಸಲಿಸುತ ಲಕ್ಷ್ಮೀನರಹರಿ ರಾಕ್ಷಸವೈರಿ ಪ. ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ. ಉಭಯ ಶುಚಿತ್ವವು ಊರ್ಜಿತವೆನೆ ಜಗ- ದ್ವಿಭು ವಿಶ್ವಂಭರ ವಿಬುಧಾರಾದ್ಯ ಶುಭಮತಿ ಸಂಸ್ಥಿತಿಯಭಯವ ಪಾಲಿಸೊ ತ್ರಿಭುವನಮೋಹನ ಪ್ರಭು ನೀನನುದಿನ1 ಸಿಂಧುಶಯನ ನಿತ್ಯಾನಂದ ಗುಣಾಬ್ಧೇ ಹಿಂದಣ ಪಾಪವು ಮುಂದೆಸಗದ ರೀತಿ ಮಂದರಾದ್ರಿಧರ ಮಾಮವ ದಯಾಕರ 2 ಪಾಪಾತ್ಮರಲಿ ಭೂಪಾಲಕನು ನಾ ಶ್ರೀಪತಿ ಕರುಣದಿ ಕಾಪಾಡುವುದು ಗೋಪೀರಂಜನ ಗೋದ್ವಿಜರಕ್ಷಣ ಕಾಪುರುಷರ ಭಯ ನೀ ಪರಿಹರಿಸಯ್ಯ 3 ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು ಸರ್ವಾಂತರ್ಯದೊಳಿರುವನೆ ಸಲಹೊ ದುರ್ವಾರಾಮಿತ ದುರ್ವಿಷಯದಿ ಬೇ- ಸರ್ವೇನು ಪನ್ನಗಪರ್ವತವಾಸನೇ 4 ಶರಣಾಗತನಾಗಿ ಸೆರಗೊಡ್ಡಿ ಬೇಡುವೆ ವರ ಮೂಲಿಕಪುರ ದೊರೆಯೇ ಹರಿ ಲಕ್ಷ್ಮೀನಾರಾಯಣ ತ್ರಿಜಗ ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ನರಸಿಂಹದೇವರು) ಜಯತು ಜಯತು ನೃಹರಿ ಬ್ರಹ್ಮಾದಿನಿರ್ಜರ ಜಯತು ಜಾತಕೈವಾರಿ ಪ. ಜಯ ನಮೋ ಜಗದಾದಿಮಾಯಾ ಶ್ರಯ ಚರಿತ್ರ ಪವಿತ್ರ ವಿಗತಾ- ಮಯ ಸದಾನಂದೈಕನಿಧಿ ಚಿ- ನ್ಮಯ ದಯಾರ್ಣವ ಭಯನಿವಾರಣ ಅ.ಪ. ಸುಕುಮಾರ ಪ್ರಹ್ಲಾದನ ಬಾಧಿಸೆ ಭಯಾ- ನಕ ರೂಪ ತಾಳ್ದಾಕ್ಷಣ ಸಕಲ ಲೋಕಾಲೋಕಭೀಷಣ ಪ್ರಕಟನಖಮುಖ ಕ್ರೋಧವಾಹಿನಿ ಪ್ರಖರ ಜ್ವಾಲಾಮಾಲ ಬದ್ಧ- ಭ್ರಕುಟಿ ಲಾಲಿತ ಭಕುತ ವತ್ಸಲ 1 ಪಾರಮೇಷ್ಠಿ ರುದ್ರರೇ ಮುಖ್ಯಸ್ಥ ವೃಂ- ದಾರಕಋಷಿವರರೇ ವೀರಭದ್ರ ಸುಭದ್ರ ನಂದಿ ಪ್ರ- ವೀರ ಭೈರವ ಭೃಂಗಿ ಮುಖ್ಯರು ಶ್ರೀರಮಣ ಕುರು ಕರುಣ ಪಾರಾ- ವಾರಸಮ ಗಂಭೀರನೆಂಬರು 2 ಶಾಂತವಾಗದು ಕ್ರೋಧ ಮಾಡಿದುದಾ- ನಂತ ಸಂಕ್ಯಾಪರಾಧಾ ಎಂತು ನಿರ್ವೃತಿ ಎಂದು ಚಿಂತಾ- ಕ್ರಾಂತರಾಗಿ ಪಿತಾಮಹಾದ್ಯರು ಕಂತುಜನನಿಯ ಬೇಡಿಕೊಳಲ- ತ್ಯಂತ ಹರುಷವನಾಂತು ಬಂದಳು 3 ಪಟ್ಟದರಸನರೂಪ ಕಾಣುತ ಭಯ- ಪಟ್ಟಳಪೂರ್ವಕೋಪ ಶ್ರೇಷ್ಠಭಕ್ತಶಿಖಾಮಣಿಯ ಮುಂ- ದಿಟ್ಟೆರಗಿ ಸಂಸ್ತುತಿಸೆ ದನುಜಘ- ರಟ್ಟ ಹೃದಯನಿವಿಷ್ಟ ಕರುಣಾ- ದೃಷ್ಟಿಯಿಂದ ಸಂತುಷ್ಟಗೊಳಿಸಿದ 4 ಶ್ರೀ ಲಕ್ಷ್ಮೀನಾರಾಯಣ ದೈತ್ಯೇಂದ್ರ ಹೃ- ಚ್ಛೂಲ ಅಖಿಲ ಕಾರಣ ಕಾಲಕಾಲಾಂತಕ ತಮಾಲ ಸು- ನೀಲನಿಭ ನಿತ್ಯಾತ್ಮ ಸುರಮುನಿ ಜಾಲಪಾಲ ವಿಶಾಲ ಗುಣನಿಧಿ ಮೂಲಿಕಾಲಯಲೋಲ ನರಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ನರಸಿಂಹದೇವರು) ನಂಬಿದೆ ನಿನ್ನ ಇಂಬಿದೆಯೆಂದು ಸನ್ನುತ ಪ. ಕಂಬದಿಂದ ಕಾಣಿಸಿದ ಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ. ಭಾನುಕೋಟಿ ಭಾಸ್ಕರ ಪವ- ಮಾನನಯ್ಯ ಪ್ರಾಣದ ಸುತ್ರಾಣ ಸುಗುಣ ದೀನಜನಸಂತಾನ ಮಾನದ ಆನಂದ ಗುಣಾನಂತ ವಿತಾನಾಬ್ಧಿಶಯ ಹರಿ 1 ಎಷ್ಟೊ ಪಾಪಿ ಕನಿಷ್ಠನೆಂದು ಬಿಟ್ಟರೇನು ಬಿರುದು ಹಿರಿದು ಬರುವುದು ಸೃಷ್ಟಿಕರ್ತರಿಷ್ಟಹರ್ತ ಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2 ಚಿತ್ತಸಾಕ್ಷಿ ಚಿನುಮಯಾತ್ಮ ಸತ್ಯರೂಪ ಸದಯೋದಯ ಸದುಪಾಶ್ರಯ ದೈತ್ಯಭಂಜನ ಸತ್ಯರಂಜನ ಕ್ಷೇತ್ರಜ್ಞ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3 ಮೂಲಿಕಾಪುರ ಮೌಳಿರುತುನ ನೀಲೇಂದೀವರಶ್ಯಾಮಲ ಕಲಿಮಲಭೀಷಣ ಕಾಲಕಾಲ ವಿಶಾಲ ಭುಜಬಲ ಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು) ಪಿಡಿಯೆನ್ನ ಕೈಯ ಜಗನ್ಮಯ ಪಿಡಿಯೆನ್ನ ಕೈಯ ಪ. ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ. ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ ಕಾಮುಕಪರದಾರಭ್ರಾಮಕತಾಮಸ- ಧಾಮನ ಕಪಟವಿಶ್ರಾಮ ಕುಧೀಮನ ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ 1 ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ ಮೆಟ್ಟಿದ ನೆಲಮುನಿಯುವನ ಕೃತಘ್ನ ಕ- ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ- ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ2 ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ ಅತ್ಯಂತ ಪಾಪಿ ಕುಚಿತ್ತ ಮದಾಂಧನು- ನ್ಮತ್ತ ಮಾತಂಗವಿರಕ್ತಿವಿಹೀನನ ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ 3 ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ ಗುಣಗಣನಿಧಿ ಲಕ್ಷ್ಮೀನಾರಾಯಣಸಖ ದಣಿಯಲೊಲ್ಲೆ ದಯಮಾಡೆನಗೀಗಲೆ ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ 4
--------------
ತುಪಾಕಿ ವೆಂಕಟರಮಣಾಚಾರ್ಯ
(ಲಾಲಿ ಹಾಡು) ಲಾಲಿ ರಘುಕುಲವೀರ ರಾಕ್ಷಸಗಣಾರಿ ಲಾಲಿ ಜಗದೇಕ ಸುಂದರ ಸೇತುಕಾರಿ ಲಾಲಿ ನಗಚಾಪ ಹೃತ್ಕಮಲ ಸಂಚಾರಿ ಲಾಲಿ ಸುಗುಣಾಂಬುನಿಧಿ ಸುಜನಾರ್ತಿ ಹಾರಿ ಪ. ಧರಣಿ ಭಾರವನು ಬೇಗಿಳುಹಬೇಕೆಂದು ಸುರರು ನಡೆತಂದು ಸಿರಿವರನೆ ನಿನ್ನ ಪ್ರಾರ್ಥನೆ ಮಾಡಲಂದು ಧರೆಯೊಳವತರಿಸಿ ರಾಜಿಸಿದೆ ಗುಣಸಿಂಧು 1 ದರಚಕ್ರ ಶೇಷರನು ಸರಿಯಾಗಿ ತನ್ನಾ ವರಜಪದವೈದುತವತರಿಸಿರಲು ಮುನ್ನ ಭರತ ಶತ್ರುಘ್ನ ಲಕ್ಷ್ಮಣರೆಂಬರನ್ನ ಚರಣ ಸೇವಕರೆನಿಸಿ ಪೊರದಿ ಗುಣರನ್ನ 2 ಶ್ರೀ ರಾಮ ಸೀತಾವರಾಶ್ರಿತ ಪ್ರೇಮ ಮಾರುತಿಗೆ ವಿಧಿಪದವನಿತ್ತ ಗುಣಧಾಮ ಘೋರ ರಾವಣ ಮುಖ್ಯ ದಿತಿಜ ನರ್ದೂಮ ಭೂರಮಣ ಶೇಷಗಿರಿವರ ಪೂರ್ಣಕಾಮ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಷದೇವರ ಪ್ರಾರ್ಥನೆ) ಸುಕೃತ ಭಾಗ್ಯವಂತನೋ ಗುರುಶೇಷ ಯಂತು ಬಣ್ಣಿಸುವುದಿನ್ನು ಮಾಂತರಂಗದಿ ಪ್ರೇಮ ಪಾತ್ರನಾಗಿರುವದೀ ಪ. ಶ್ರೀನಿವಾಸಗೆ ಮೂರು ಸ್ಥಾನದಿ ಸರಿಯಾಗಿ ತಾನೆ ಶಯನ ಪೀಠ ಛತ್ರನಾಗಿ ಜ್ಞಾನಾನಂದನ ಪರಮಾನುರಾಗದಿ ನೋಡಿ ಮಾನವ ಪಡೆದು 1 ರಾಮರೂಪದಿ ನಿಂದ ಸ್ವಾಮಿಗೆ ನಿರವಧಿ ಪ್ರೇಮದನುಜನಾಗಿ ಪರಿಚಿರಿಸಿ ಸೋಮವಂಶದಿ ಬಲರಾಮನೆನಿಸಿ ಸತ್ಯ- ಭಾಮಾವರನ ಜೇಷ್ಠ ನಾಮವ ಪಡೆದು 2 ಹಲವು ವಿಧದ ಪುಣ್ಯ ಫಲವ ನೀಡಲು ಲಕ್ಷ್ಮಿ ಲಲನೆ ಪದ್ಮಜೆಯರ ಬಲಗೊಳ್ಳುತಾ ಕಲಿಯುಗದಲಿ ಬಂದು ನೆಲೆಯಗೊಳ್ಳಲು ಶೇಷಾ- ಚಲನೆಂದು ಹರಿಗೆ ನಿಶ್ಚಲವಾದ ನಿಲಯಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು