ತಾನಾರು ತನುವು ಆರು ತಿಳಿದು ನೋಡಿ ಧ್ರುವ
ತಾನಾರು ತನುವಾರು
ತನ್ನೊಳೂ ತಾನೆ ತಿಳಿದು ನೋಡಿ
ಘನ ಬ್ರಹ್ಮದೊಳು ಮನ ಬೆರೆದಾತ ಶರಣನು 1
ಕಾಯದೊಳಿಹ್ಯ ಕಳವಳಗಳೆದು
ಮಾಯ ಮೋಹದ ಮಲಗಳ ತೊಳೆದು
ದೇಹ ವಿದೇಹವಾದಾತ ಶರಣನು 2
ಭ್ರಾಂತಿಯ ಅಭಾವಗಡಿದು
ನೀತಿ ಸುಪಥದ ಮಾರ್ಗವ ಹಿಡಿದು
ಜ್ಯೋತಿ ಸ್ವರೂಪವ ಕಂಡಾತ ಶರಣನು 3
ಭಾವ ಭಕ್ತಿಯ ಕೀಲವ ತಿಳಿದು
ಹ್ಯಾವ ಹೆಮ್ಮೆಯ ಮೂಲವನಳಿದು
ಜೀವ ಶಿಶುವು ತಿಳಿದಾತ ಶರಣನು4
ಜಾತಿಯ ಕುಲಗಳ ಭೇದವ ತಿಳಿದು
ಯಾತನೆ ದೇಹದ ಸಂಗವನಳಿದು
ಮಾತಿನ ಮೂಲವ ತಿಳಿದಾತ ಶರಣನು 5
ಸೋಹ್ಯ ಸೊನ್ನೆಯ ಸೂತ್ರವಿಡಿದು
ಲಯ ಲಕ್ಷಿಯ ಮುದ್ರೆಯ ಜಡಿದು
ದ್ಯೇಯ ಧ್ಯಾತವ ತಿಳಿದಾತ ಶರಣನು 6
ನಾದದಿಂದ ಕಳೆಯ ಮುಟ್ಟಿ
ಸಾಧಿಸಿ ಉನ್ಮನ ಮುದ್ರೆಯ ಮೆಟ್ಟಿ
ಆದಿತತ್ವದ ಗತಿ ತಿಳಿದಾತ ಶರಣನು 7
ಆಧಾರ ದೃಢದಿಂದ ಅರಹುತನಾಗಿ
ಮಧ್ಯ ಮುಪ್ಪರದಲಿ ಸ್ಥಿತಿವಾಗಿ
ಊಧ್ರ್ವ ಮಂಡಲಗತಿ ಬೆರೆದಾತ ಶರಣನು 8
ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು
ಸಾಯೋಜ್ಯ ಸದ್ಗತಿ ಸವಿಸುಖನುಂಡು
ಮಹಿಪತಿ ಗುರುಮನಗಂಡಾತ ಶರಣನು 9