ಒಟ್ಟು 622 ಕಡೆಗಳಲ್ಲಿ , 82 ದಾಸರು , 565 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಕೈ ಬಿಡಬೇಡವೋ ಪ ರಿನ್ನಾರ ಕಾಣೆನು ಪನ್ನಗಶಯನನೆ ಅ.ಪ ತಂದೆ ಅನಾಥರ ಬಂಧು ಕಾಪಾಡಯ್ಯ 1 ಭುವನವಿಖ್ಯಾತನೆಂದೆನಿಸಿ ಕಾಯ್ದವ ನೀನೆ 2 ಸ್ಥಿರ ಸುಖದೊಳು ಕಾಯ್ದೆ ಕರುಣಿಗಳರಸನೆ 3 ಇಂಬಿಟ್ಟು ಭಕುತನ ಸಂಭ್ರಮದೊಳು ಕಾಯ್ದೆ 4 ಶರಣನ ಸಲಹಿದ ಪರಮ ಪುರುಷ ನೀನೆ 5 ಜೋಕೆಯೊಳ್ ನಿಜದಿ | ಸಾಕಿದೆ ಕರುಣಾಳು 6 ಕೃಪೆಯೊಳವಳಿಗೊಲಿಖಿಲವಸ್ತ್ರವನಿತ್ತೆ 7 ಸಂತೈಸಿ ಮತ್ತೆ ಪಾಂಡವರನ್ನು ಸತ್ಯಾತ್ಮರೆನಿಸಿದೆ 8 ಕುಡುತೆ ದಾಸ ವಿದುರನಿಗೆ ಲೇಸ ಮುಕ್ತಿಯ ಕೊಟ್ಟೆ 9 ವಂದ್ಯನೆಂದೆನಿಸಿದೆ ಇಂದಿರಾ ವರದನೆ 10 ದೃಢಭಕ್ತಿಗೊಲಿದಿತ್ತೆ ತಡೆಯದಿಷ್ಟಾರ್ಥವ 11 ನೀನೇನು ತೋರದೇನು || ಏನು ಗತಿಯೆನಗಿನ್ನು ನೀನೊಲಿಯದಿಲ್ಲಿನ್ನು 12 ಲೀಲೆಯಿಂದನುದಿನ ಸಲಹೊ ಸದಾನಂದ 13
--------------
ಸದಾನಂದರು
ಎನ್ನ ಪಾಲಿಸೋ ಕರುಣಾಕರಾ| ಪನ್ನಗಶಯನ ಗದಾಧರಾ ಪ ವಸುದೇವ ನಂದನ ಹರಿಮಧುಸೂದನ| ಅಸುರಾಂತಕ ಮುರಲೀಧರ, ಬಿಸರುಹನಾಭ ಸರ್ವೇಶನೆ ಮುನಿ|ಮಾ ನಸ ಸಂಚಾರ ರಮಾಧವಾ 1 ಪರಮ ಪುರುಷ ಉರಗಾಸನ ವಾಹನಾ| ಕರುಣಾರ್ಣವ ವಡವಾನಳಾ|| ಸರಸಿಜಭವ ಗಿರಿಜಾವಲ್ಲಭನುತ| ವರಸುಜನಾವಳಿ ಪಾಲನಾ 2 ಕಾವನ ಪಿತ ಮುಚಕುಂದ ವರದ ರಾ| ಜೀವ ನಯನ ನಾರಾಯಣಾ| ಶ್ರೀವತ್ಸಲಾಂಛನ ಗುರುಮಹೀಪತಿ ಸುತ ಜೀವನ ಸಖ ಶ್ರೀ ಕೃಷ್ಣನೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನನಾರು ಕರದು ತಂದರೇ ಇಲ್ಲಿಗೆ ಪ ಮುನ್ನಗೈದ ಕರ್ಮವೆಂದು ನನ್ನ ಪುಣ್ಯ ಭಾಗ್ಯವೆಂದು ಭಿನ್ನಮತವ ಪೇಳ್ವದು ನನ್ನ ಮಟ್ಟಿಗೊದಗದು ಅ.ಪ ಯಾರ ಕರೆದು ತಂದರೇನು | ಯಾರು ಹೊತ್ತು ಹೆತ್ತರೇನು ಗಾರು ಹೇಳೆನೆ ಕುಲವದೇನು ಮಾರಜನಕ ಪೊರೆವ ನೀನು 1 ತಂದೆ ನೀನೆ ಕರೆದುತಂದೆ ಎಂದು ನಾನು ಭರದಿಬಂದೆ ಬಂದು ನಿಂದೆ ಏಕೆ ತಂದೆ ಕುಲವನೆಣಿಸಬೇಡ ತಂದೆ 2 ಯಾವದೈವವ ತೋರಿಸುವೆಯೊ ಯಾವ ಜಪವ ಮಾಡಿಸುವೆಯೊ ಯಾವ ಕೃಪೆಯ ಬೀಳಿಸುತಿಹೆಯೊ ದೇವ ಮಾಂಗಿರೀಶ ಕಾಯೊ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎನ್ನಪಾಪವೇ ಎನ್ನ ಕಾಡುವುದು ಎನ್ನಯ್ಯ ಹರಿಯೆ ನಿನ್ನದಿದರೊಳನ್ಯವೇನಿಹ್ಯದು ಪ ಮುನ್ನಮಾಡಿದ ಪಾಪಕರ್ಮವು ಬೆನ್ನಬಿಡದೆ ಕಾಡುತಿರಲು ನಿನ್ನಗನ್ನುವುದಾವ ನ್ಯಾಯವು ಪನ್ನಂಗಶಾಯಿ ಸನ್ನುತಾಂಗ ಅ.ಪ ನಾನಾಜೀವಿಗಳ ಪ್ರಾಣಹಾರಿಸಿದೆ ಅನ್ಯರಿಗೆ ಬಿಡದೆ ಜಾಣನುಡಿ ಪೇಳಿ ಹಾನಿ ಬಯಸಿದೆ ದುಗ್ಗಾಣಿ ರಿಣಕಾ ಗೇನುಯಿಲ್ಲೆಂದಾಣೆ ಮಾಡಿದೆ ನಾ ನಿನ್ನ ಮರೆದೆ ಏನು ತಿಳಿಯದೆ ಜ್ಞಾನ ಪೇಳಿದೆ ಜ್ಞಾನವಂತರಿಗ್ಹೀನ ನುಡಿದೆ ಮಾನವಂತರ ಮಾನ ಕಳೆದೆ ಹೀನಬವಣೆಯೋಳ್ಬಿದ್ದೆನಭವ 1 ಅಂಗನೆಯರ ಸಂಗ ಬಯಸಿದೆ ದುರಿತಕ್ಕೆ ಹೇಸದೆ ಅಂಗನೆಯರ ಗರ್ಭ ಭಂಗಿಸಿದೆ ಅನ್ಯರ ಒಡವೆಗೆ ಕಂಗಳಿರೆ ಭಂಗಕೊಳಗಾದೆ ಮಂಗ ನಾನಾದೆ ನಿತ್ಯ ನೇವಹಕೆ ಅಂಗನೆನಿಸದೆ ಬಡವರ್ವಿಮಹಕೆ ನುಂಗಿ ಕೂತೆನು ಪರರ ದ್ರವ್ಯಿ ನ್ನ್ಹ್ಯಾಂಗೆ ನಿನ್ನೊಲಿಮೆನಗೆ ಅಭವ 2 ಕೊಟ್ಟ ಒಡೆಯರಿಗೆರಡನೆಯ ಬಗೆದೆ ನಂಬಿ ಎನ್ನೊ ಳಿಟ್ಟ ಗಂಟನು ಎತ್ತಿಹಾಕಿದೆ ಪಡೆದ ಮಾತೆಯ ಬಿಟ್ಟು ಬೇಸರ ಮಾಡಿನೋಡಿದೆ ಭ್ರಷ್ಟನಾನಾದೆ ದುಷ್ಟಗುಣಗಳನೊಂದುಬಿಡದೆ ಶಿಷ್ಟಪದ್ಧತಿ ಜನಕೆ ಉಸುರಿದೆ ಕೊಟ್ಟವಚನೊಂದು ನಡೆಸದಿಂದುಳಿದು ಕೃತಿ ಪೇಳೆನಭವ 3 ಒಂದೆ ಮನದವನಂತೆ ತೋರಿದೆ ಮತ್ರ್ಯದವರಿಗೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿದೆ ದೋಷವಿನಿತು ಹೊಂದದವರಿಗೆ ಕುಂದು ಹೊರೆಸಿದೆ ನಾನೇ ಅಹುದಾದೆ ಸಿಂಧುಶಯನ ಭಕ್ತರನ್ನು ಕಂ ಡೊಂದಿಸದೆ ಮುಖವೆತ್ತಿ ನಡೆದೆ ಮುಂದುಗಾಣದೆ ದೋಷ ಮಾಡಿದೆ- ನೊಂದು ಪುಣ್ಯವನರಿಯೆನಭವ 4 ಕೊಡುವ ಧರ್ಮಕೆ ಕಿಡಿಯನ್ಹಾಕಿದೆ ಕೂಡಿದ್ದವರಿಗೆ ಕೆಡಕು ಬೋಧಿಸಿ ಒಡಕು ಹುಟ್ಟಿಸಿದೆ ಅಡಿಗೆ ಬಾಗಿ ಮಿಡುಕುವವರಿಗೆ ದುಡುಕನಾಡಿದೆ ಕಡುಪಾಮರಾದೆ ಪಿಡಿದು ಕಾಯುವ ಒಡೆಯನ್ಹೆಸರಿನ ಮುಡಿಪು ನುಂಗಿ ಕಡುಪಾಪಾತ್ಮಾದೆನು ಸುಡುಸುಡೆನ್ನಯ ಜನ್ಮವ್ಯಾಕಿನ್ನು ಒಡೆಯ ಶ್ರೀರಾಮ ಸಾಕುಮಾಡೋ 5
--------------
ರಾಮದಾಸರು
ಎನ್ನಳವೇನಯ್ಯ ಬಣ್ಣಿಸಲು ನಿನ್ನ ಉನ್ನತ ಮಹಿಮ ಶ್ರೀ ಪನ್ನಂಗಶಯನ ಪ ಗುಪಿತ ನೀ ವೇದಾಗಮಾತೀತ ಆದಿಮಧ್ಯಂತಿಲ್ಲದಾ ನಾದಿ ವಸ್ತುವೆ ಸ್ವಾಮಿ 1 ಗಣನೆಯಿಲ್ಲದ ಕಾಲು ಎಣಿಕೆಯಿಲ್ಲದ ಹಸ್ತ ಗುಣಿತಕ್ಕೆ ಮೀರಿದ ಅ ಗಣಿತಮುಖಬ್ರಹ್ಮ 2 ಶಿಷ್ಟ ಶ್ರೀರಾಮ ಭಕ್ತ ರಿಷ್ಟದಾಯಕನೆಂದು ನಿಷ್ಠೆಯಿಂ ಪಾಡ್ವೆ 3
--------------
ರಾಮದಾಸರು
ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ. ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ 1 ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆÀಇನ್ನೇನು ಮಾಡಲಮ್ಮ ಗೋಪೆಮ್ಮ 2 ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದÀಧಿಭಾಂಡ ಜಾರಿತಮ್ಮ ಗೋಪೆಮ್ಮ 3 ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ 4 ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ 5 ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ 6 ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ7
--------------
ವಾದಿರಾಜ
ಎಲೆ ಎಲೆ ಎಲೆ ಮುದಿಮೂಳಿ ನಿನ್ನ ಕಲ್ಮಷ ಇನ್ನು ತೊಳಿವಲ್ಲಿ ಪ ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ ಹಿಡಿದಿದ್ದಿ ಸುಡುಗಾಡ ಪಥವ ಇನ್ನು ಬಿಡವಲ್ಲಿ ಮಾಯಮತವ ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ 1 ಇನತು ನಾಚಿಕಿಲ್ಲ ರೋಗಿ ನೀನು ತಿಣಿತಿಣಿಕಾದಿ ಮುದಿಗೂಗಿ ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ 2 ಹಣವೆಷ್ಟಿರಲು ನಿನ್ನದಲ್ಲ ನಾಳೆ ಮನೆಮಾರು ಬರದು ಹಿಂಬಲ ಮಣಿಕಟ್ಟೆಲವು ಮುರಿದ್ಹಣಿಯುವಾಗ ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ 3 ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ ಖೊಟ್ಟಿ ಕಡೆಯಿಲ್ಲಮ್ಮ ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ 4 ಭಿನ್ನ ಭೇದಗಳನ್ನು ಕಡಿ ನಿನ್ನ ಒಡಲೊಳು ತಿಳಕೊಂಡುನೋಡಿ ಧನ್ಯ ಶ್ರೀರಾಮನ ಉನ್ನತ ಚರಣ ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ 5
--------------
ರಾಮದಾಸರು
ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ. ಸೋಮಾಸುರನೆಂಬ ದೈತ್ಯನು ಸಾಮಕ ವೇದವನೊಯ್ಯಲು ಮಾ ಸೋಮಾಸುರನೆಂಬವನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮದೇವ ಗುಡ್ಡವ ಬೆನ್ನಲ್ಲಿಟ್ಟನು ಮಾ ಗುಡ್ಡದಂಥÀ ದೈತ್ಯರನೆಲ್ಲ ಅಡ್ಡÀಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಪೆಣ್ಣನೊಯ್ಯಲು ಮಾ ವರ್ಣರೂಪವ ತಾಳಿ ಅವನ ಭಿನ್ನ ಭಿನ್ನವ ಮಾಡಿದನು ಮಾ 3 ಕಂಭದಿಂದಲೆ ಉದಿಸಿ ನಮ್ಮ ದೇವ ಜಂಭದಸುರನ ಬಡಿದನು ಮಾ ನಂಬಿದ ಪ್ರಹ್ಲಾದನ್ನ ಕಾಯಿದ ಅಂಬುಜನಾಭ ನರಸಿಂಗನು ಮಾ 4 ಬಲು ಮುರುಡನಾಗಿ ಭೂಮಿಯ ಬಲಿಯ ದಾನವ ಬೇಡಿದ ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕೊತ್ತಿದ ಮಾ 5 ಕೊಡಲಿಯನ್ನು ಪಿಡಿದು ನಮ್ಮದೇವ ಕಡಿದ ಕ್ಷತ್ರಿಯ ರಾಯರ ಮಾ ಹಡೆದ ತಾಯ ಶಿರವ ತರಿದು ಪಡೆದನಾಕೆÉಯ ಪ್ರಾಣವ ಮಾ 6 ಎಂಟೆರಡು ತಲೆಯ ಅಸುರನ ಕಂಠವ ಛೇದಿಸಿ ಬಿಟ್ಟನು ಮಾ ಒಂಟಿರೂಪವ ತಾಳಿ ಲಂಕೆಯ ಬಂಟ ವಿಭೀಷಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳೀಮೇಳದಲಿಪ್ಪನು ಮಾ ಬಾಲಕನಾಗಿ ಪೆಣ್ಣರೂಪದಲಿ ಶ್ರೀ- ಲೋಲ ಲಕ್ಷ್ಮಿಯ ಅರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪೆವನದೊಳಗಿಪ್ಪನು ಮಾ ಸರ್ಪಶರನಾಗಿ ಪೋಗಿ ತ್ರಿಪುರಸಂಹರ ಮಾಡಿದ ಮಾ 9 ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ ಬಲ್ಲಿದ ಕಲ್ಕ್ಯವತಾರನು ಮಾ ಇಳೆಯ ಸ್ವರ್ಗ ಪಾತಾಳಕೊಡೆಯ ಚೆಲುವ ಹಯವದನನು ಮಾ 10
--------------
ವಾದಿರಾಜ
ಎಲ್ಲಿ ಕಲಿತೆಯೋ ಇಂಥಾ ಜಾಲೆಗಳನು ಆಲಲ್ಲೆಗಾರತಿಯ ಕೂಡಾಡಿ ಬಂತದಕೇನು ಪ ಅವಳ ಕುರುಳಿವಳ ಮುಗುಳ್ನಗೆಯನೆ ಬಯಸುವುದುಇವಳ ನಯನಗಳವಳ ಮುದ್ದು ಮೊಗವಾಅವಳಕ್ಷಿ ಇವಳ ತೋಳ್ಗಳನೆಂದು ನಿನ್ನ ಸಖಿವಿವರಿಸಿ ಬರೆದುದ ನೀನೋಡಿದುದ ಸಖಿ ಪೇಳ್ದ 1 ತರುಣಿ ಹಾರವನು ಮತ್ತೋರ್ವಳುಂಗುರವನುಸರ್ವಾಭರಣವ ಧರಿಸಿದಳೋರ್ವಳುಭರದಿ ಮೂವರೊಳಗಾರನು ಕಳುಹಲೆಂದು ಸಖಿಬರೆಯಲದ ನೀ ನೋಡಿಕೊಂಡುದನೆ ಸಖಿ ಪೇಳ್ದ2 ಇನ್ನಾದರೆಯು ಪರಸತಿಯರ ಬೇಟವ ಬಿಟ್ಟುನಿನ್ನ ನಂಬಿದಳೆಂದು ಮನಕೆ ತಂದುಎನ್ನ ಕರದೊಳಗೆ ಕರವಿಟ್ಟು ಮನ್ನಿಸೋ ಕೆಳದಿಪನ್ನಗಾಭರಣ ಶ್ರೀ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಏತಕೀ ಭಯ ನೀತಿಯೇನಯ್ಯ ಪ ಮಾತುಕೇಳು ತಾಮನದಲ್ಲಿನೊಂದು ಅ.ಪ ತಬ್ಬಿಕೊಂಡಿರ್ಪ ಪ್ರಾರಬ್ದ ಬಿಡುವುದೆ ಅಬ್ಜನಾಭನಿರುವ ನಮ್ಮರಕ್ಷಿಸಲು 1 ಬೊಬ್ಬೆರೋಗ ಬಂತೆಂದಬ್ಬರ ಜನಗೈಯ್ಯೆ ಉಬ್ಬಿಉಬ್ಬಿನೀ ಊರಬಿಟ್ಟೋಡಲು 2 ಹುಲಿಗಳಂಥನರರು ಇಲಿಯ ನೋಡಿ ಬೆದರಿ ಕಳೆದುಕೊಂಬರು ತಮ್ಮ ಸರ್ವಸ್ವವ 3 ಛಳಿ ಮಳೆಯು ಬಿಸಿಲು ಗಾಳಿಯೊಳು ಬಳಲುವುದ್ಯಾಕೆ ಬುದ್ಧಿಯಿಲ್ಲದೆ 4 ಕುನ್ನಿ ನಿನ್ನಂಥವರೆಷ್ಟುಮಂದಿ ಪೋದರು ಘನ್ನಗುರುರಾಮವಿಠಲನ್ನ ನಂಬು5
--------------
ಗುರುರಾಮವಿಠಲ
ಏನನಿತ್ತಪೆ ನಿನಗೆ ಶ್ರೀನಿವಾಸ ಶ್ರೀನಿಧಿಯು ನೀನಾಗಿರಲು ಸರ್ವೇಶ ಪ. ಅನುದಿನದಿ ನಿನ್ನ ಪದ ಅನುವಿನಲಿ ಸ್ತುತಿಪೆನೆನೆ ಅನುದಿನದಿ ನಿನ್ನಾದಿಶೇಷ ಸ್ತುತಿಪ ಘನಮಹಿಮ ನಿನ್ನನರ್ಚಿಪೆನೆಂದೊಡೆ ಆ ಘನ ಮಹಾ ಶ್ರೀದೇವಿ ನಿನ್ನರ್ಚಿಸಿ ಮೆಚ್ಚಿಸಿಹಳರಿಯೆ 1 ಭಕ್ತಿರಸವನು ಭಕ್ತ ಪ್ರಹ್ಲಾದ ನಿನಗಿಂತಧಿಕ ಭಕ್ತಿಯನು ಮಾಡಲರಿಯನೋ ದೇವ ದೇವ ಯುಕ್ತಿಯಲಿ ನಿನ್ನ ಸ್ತುತಿ ಮಾಳ್ಪೆನೆಂದರೆ ನಿನ್ನ ಭಕ್ತ ನಾರದ ಮಾಳ್ಪ ಸ್ತುತಿಗಧಿಕವೇ ಕೃಷ್ಣ 2 ನಿನ್ನ ಪದ ಸೇವಿಪೆನೆನೆ ನಿನ್ನ ಭಕ್ತ ಹನುಮ ಇನ್ನು ನಿನ್ನಡಿ ಬಿಡನೊ ನಿನ್ನರಿವತನಕ ಪನ್ನಗಾದ್ರಿನಿವಾಸ ಸಂಪನÀ್ನ ಶ್ರೀ ಶ್ರೀನಿವಾಸ ನಿನ್ನ ಕೃಪೆಯನೆ ತೋರೋ ಶ್ರೀ ರಮೇಶ 3
--------------
ಸರಸ್ವತಿ ಬಾಯಿ
ಏನಿದು ಮಹದಪರಾಧ ಮಾಡಿದೆ ನಾನು ನಿನ್ನವರನೆ ನಿಂದಿಸಿದೆ ತಿಳಿಯದಭವ ದೇವ ಪ ಜ್ಞಾನವಿಡಿದಿ ನೋಡದೆ ತುಸು ಏನುಕಾಣದೆ ನಾನಾಪರಿಯಲಿ ಶ್ವಾನನಂದದಿ ಚೀರುತ್ಹಾರುತ ಹೀನವಾಚಗಳ್ವಾಚಿಸಿದೆನೋ ಅ.ಪ ತತ್ತ್ವದರ್ಥಕರಾಗಿ ಗುಪ್ತದಿಂದಿರ್ವವರ ನರ್ತುನೋಡದೆ ಅನರ್ಥವಾಡಿದೆನೋ ಪ್ರಭೋ ಮತ್ರ್ಯಗುಣಗಳ ಮರ್ತುಬಿಡದೆ ನಿರ್ತಮಾನಿಸರ ಗುರ್ತುತಿಳಿಯದೆ ಕತ್ತೆಯಂತೊದರುತ್ತ ಸತ್ಯರ ಕೃತ್ತಿಮರೆಂದೆನುತ ಜರಿದೆ 1 ಮೀನು ಜಿಹ್ವೆಯ ರುಚಿಗಾ ಗೇನು ತಿಳಿಯದೆ ಪೋಗಿ ಗಾಣ ಸೆಳೆದುನುಂಗಿ ಪ್ರಾಣಕೊಟ್ಟಂತೆ ಹರಿಯೆ ಗಾನಲೋಲನ ಮನದೊಳಿಟ್ಟು ಧ್ಯಾನಿಪ ಕೋವಿದಸುಜನರ ಖೂನವಿಲ್ಲದೆ ಮನಕೆ ಬಂದಂತೆ ಕಾಣದಂಧಕನಂತೆ ಜರಿದೆ 2 ನಿನ್ನಿಂದೆ ನಾ ಬಂದೆ ನೀನೆನ್ನ ತಂದೆ ಮುಂ ದಿನ್ನಿಂಥ ದುರ್ಮತಿಯನ್ನು ಕೊಡದಿರೊ ರಂಗ ನಿನ್ನ ದಾಸರೊಳಿಟ್ಟು ಅನುದಿನ ಭಿನ್ನವಿಲ್ಲದೆ ರಕ್ಷಿಸಯ್ಯ ನಿನ್ನ ಚರಣದಾಸರ ನಾಮ ಪನ್ನಂಗಶಾಯಿ ವರ ಶ್ರೀರಾಮ 3
--------------
ರಾಮದಾಸರು
ಏನು ಕಡಿಮೆ ನಿನಗೆ ಗಣಪತಿ ಜ್ಞಾನವ ಕೊಡು ಎನಗೆ ಪ ನೀಲ ಮೇಘದ ಕಾಂತಿ ಬಾಲಕೇಳಿ ವಿಲಾಸ ನೀಲ ಕಂಠನ ಸುತ ಸ್ಥೂಲಶರೀರಿ 1 ಹೊನ್ನಾ ಭರಣ ಶೃಂಗಾರ ಕಟಿಗೆ ಚಿನ್ನದ ಉಡುದಾರ | ಚೆನ್ನಾಗಿ ಸುತ್ತಿದ ಪನ್ನಗಭೂಷಣ ಹೊನ್ನ ಕಡಗ ಕೈಯ ಬೆರಳ ಉಂಗುರವು 2 ಹೊತ್ತು ನಡೆವ ಮೂಷಿಕವು 3 ಹೊಂದಿಕೆಯಿಂದ ಕಿವಿಯಲಿಟ್ಟ ಕುಂಡಲ ಗಂಧ ಚಂದನ ಸರ್ವಾಂಗ ಲೇಪಿತನ 4 ಪರಿ ನೀಧೀರ ಉದಾರ 5
--------------
ಕವಿ ಪರಮದೇವದಾಸರು
ಏನು ಮರುಳಾಗುವೆಯೇ ಎಲೆಮಾನವ ನಿನ್ನ ಮಾನಿನಿಯ ಗುಣಕೆ ನೀ ಹಿಗ್ಗಿ ಹಿಗ್ಗಿ ಪ ದಾನ ಧರ್ಮಗಳ ಕೊಡಬೇಕೆಂದರೊಡ ಬಡಲು ಹೀನ ಗುಣಗಳನೆ ತಾ ಸೇವಿಸುವಳು ಜ್ಞಾನ ಮೋಕ್ಷಾದಿಗಳ ಹಾದಿಯನುಕಟ್ಟಿ ಭವ ಕಾನನವನೆ ಹೊಗಿಸಿ ತೊಳಲಿಸುವಳು 1 ನರಕವನು ತನ್ನಲ್ಲಿ ನೆಲೆಮಾಡಿ ಕೊಂಡಿಹಳು ಪರಿಪರಿಯ ಮೋಹಗಳ ಬೀಸುತಿಹಳು ಸ್ಮರನ ಬಾಣವ ಮಾಡಿ ಸಾಲು ಗೊಲೆಕೊಲ್ಲುವಳು ಅರಿಯದವರಂತೆ ಮಿಣ್ಣಗೆ ಇರುವಳು 2 ತನ್ನಮನ ಬಂದಂತೆ ಚರಿಸುವಳು ಪಗಲಿರುಳು ಕನ್ನಗೊಯ್ಕರ ವೋಲು ಕೊರೆಯುತಿಹಳು ಭಿನ್ನಭಾವದಿ ನಡೆದು ಮನೆಯ ಪಾಲ್ಮಾಡುವಳು ಕಣ್ಣಿನೊಳು ಕಂಡೊಡವೆಗಳನಿರಿಸಳು 3 ಸುದತಿ ಯಾಕಾರೆ ಯಾಗಿಹಳು ನೋಯೆ ನುಡಿವಳು ಕಂಡ ಕಂಡವರೊಳು ಹೋಯೆಂದು ಕೂಗುವಳು ಶಿಕ್ಷಿಸಳು ನಿನ್ನನುರೆ ಬಾಯೊಳಗೆ ಭಯಬಿಡಿಸಿ ಹಾಗಿಸುವಳು 4 ಕಾಮ ಕ್ರೋಧಾದಿಗಳ ಕೀಲ ಬಲಗೊಳಿಸುವಳು ಪ್ರೇಮ ಗೆಡಿಸುವಳೆಲ್ಲ ಬಾಂಧವರನು ಭೂಮಿಯೋಳಗಧಿಕ ಭೀಮನ ಕೋಣೆ ಲಕ್ಷ್ಮೀಪತಿಯ ನೆನೆನೆನೆದು ಸಖಿಯಾಗು ಕಂಡ್ಯಾ 5
--------------
ಕವಿ ಪರಮದೇವದಾಸರು
ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ