(38ನೇ ವರ್ಷದ ವರ್ಧಂತಿ)
ದಯಾನಿಧೆ ಪರಿಪಾಲಯ ಮಾಂ ಪ.
ಮಾನುಷತ್ವವು ಬಂದ ಸಮಯದಿ
ಹೀನ ಭೋಗವೆ ಬಯಸಿದೆ
ನಾನು ನನ್ನದು ಎಂಬ ಕೀಳಭಿ-
ಮಾನವೇ ನಾ ವಹಿಸಿದೆ
ಏನನೆಂಬೆನು ಎನ್ನ ಬುದ್ಧಿವಿ-
ಹೀನತೆಯ ಬಯಲಾಸೆ ಬಿಡಿಸು 1
ಇಳೆಯೊಳಿರುತಿಹ ನಿನ್ನ ಮಹಿಮೆಯ
ತಿಳಿಯದಾದೆನು ಮೋಹದಿ
ಕಳೆದೆ ಮೂವತ್ತೆಂಟು ವತ್ಸರ
ಹಲವು ವಿಷಯದಿ ಚೋಹದಿ
ಕಲಿಮಲಾಪಹ ಕೃಪಾಳು ನಿನ್ನಯ
ನೆಲೆಯನರಿಯದೆ ನೊಂದೆನಲ್ಲೊ 2
ಆಸ್ಯದಲಿತ್ವನ್ನಾಮ ನುಡಿಸುತ
ದಾಸ್ಯವನು ದಯ ಮಾಡುತ
ಹಾಸ್ಯ ಮಾಳ್ಪರ ಹಲ್ಲ ಮುರಿದು
ವಿಲಾಸ್ಯ ಮತಿ ಕಾಪಾಡುತ
ಪೋಷ್ಯ ಪದವನು ನೀಡು ಲಕ್ಷ್ಮೀ-
ವಾಸ್ಯ ವಕ್ಷನ ವೆಂಕಟೇಶ3