ಒಟ್ಟು 3196 ಕಡೆಗಳಲ್ಲಿ , 112 ದಾಸರು , 2367 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ 1 ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ 2 ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ ವಿಠಲ ನಿನ್ನ ದಯವಾಗಲಿ ಹರಿಯೆ 3
--------------
ಶ್ರೀಪಾದರಾಜರು
ನಾ ನಿನ್ನ ನಂಬಿದೆನೊ ಗೋಪಾಲಕೃಷ್ಣ ನಿನ್ನ ನಾನಂಬಿದೆನೊ ಎನ್ನ ದಾನೆಂದೆಂಬ ಹಮ್ಮಿನವಶದಲಿ ಸುಮ್ಮನೆ ಮುಳುಗಿದೆನೋ ಶ್ರೀ ಹರಿಯೆ ನಿನ್ನನಾ ನಂಬಿದೆನೋ ಪ ಸಿರಿ ಸಹಿತಲಾಗಿ ಚಿನುಮಯಾತ್ಮಕ ಆನಂದ ಕಟಾಕ್ಷದಿ ತನಯ ನೆಂದೆನ್ನನು ಕಾಯೋ ಮುರಾರಿ 1 ದ್ರಷ್ಟವಾಗಿಹುದೆಲ್ಲ ಸಟೆಯಿದು ನಷ್ಟವಾಗಿಯೆ ಪೋಪುದೋ ಕಷ್ಟ ಸಂಸಾರದ ಬಟ್ಟೆಯು ಸ್ಥಿರವೆಂಬ ತೊಟ್ಟ ಮುರಿದು ಕಾಯೋ ಶಿಷ್ಟ ಮುರಾರಿ 2 ಆಸೆಯಂಬಂಗನೆಯ ನಾಶವಮಾಡಿ ಸಲಹೋ ಎನ್ನ ವಾಸುದೇವನೆ ನಿನ್ನ ದಾಸನ ಕರುಣದಿ ಪಾ ಲಿಸಿ ಕಾಯೋ ಲಕ್ಷ್ಮೀಶ ಮುರಾರಿ 3
--------------
ಕವಿ ಪರಮದೇವದಾಸರು
ನಾಕೇಶ ವಿನುತೆ | ರ ತ್ನಾಕರನ ತಾಯೆ ಪ ಗೋಕುಲದೊಳಿದ್ದು | ಆಕಳ ಕಾಯ್ದಗೆ ಲೋಕಪಾವನೆ ಸಿರಿಯೆ ಅ.ಪ ನೀರೊಳಗೆ ಇದ್ದು ನಗಭಾರ ಬೆನ್ನಲಿಪೊತ್ತು ಬೇರು ಮೆಲ್ಲುವನಿಗೆ | ಚೀರಿ ಕಂಭದಿ ಬಂದು | ಘೋರ ರೂಪದಿ ಬಲಿ ದ್ವಾರ ಕಾಯ್ದವಗೆ | ವೀರ ನೆನಿಸಿ ಪೆತ್ತ | ನಾರಿಯ ಶಿರವ ಸಂ ಹಾರಮಾಡಿದವಗೆ | ಭೂರುಹಚರ ಪರಿವಾರ ದೊಳಗಿದ್ದು ದಧಿ ಚೋರನೆನಿಸಿದವಗೆ 1 ಸಂದೇಹವಿಲ್ಲದೆ ವಸನ ತ್ಯಜಿಸುತ ಬಂದು ನಿಂದವನಿಗೆ | ಇಂದಿರಾಧವ ನಿನ್ನ ಹಿಂದೆ ಬಂದವನ ಅಂದು ಕೊಂಡವನಿಗೆ | ಕುಂದರದನೆ ನಿನ್ನ ಪೊಂದದೆ ಛಂದದಿ ಕಂದರ ಪಡೆದವಗೆ 2 ಜಾತಿಯನರಿಯದೆ ಶಬರಿಯ ಎಂಜಲ ಪ್ರೀತಿಲಿ ಉಂಡವಗೆ ಶ್ವೇತವಾಹನಜಗೆ ತಾ ಸೂತನೆಂದೆನಿಸುತ ಖ್ಯಾತಿ ಪಡೆದವಗೆ ನೀತಿ ಇಲ್ಲದೆಯ ಮಾತೆಯ ಅನುಜನ ಘಾತಿಸಿದಾತನಿಗೆ || ವಾತಾಶನವರ ತಲ್ಪದೊಳು ಮಲಗಿದ ಶಾಮಸುಂದರ ಧೊರೆಗೆ 3
--------------
ಶಾಮಸುಂದರ ವಿಠಲ
ನಾಗವೇಣಿ ಶುಕವಾಣಿ ಸಖಿ ಪ ಭೋಗ ಭಾಗ್ಯ ಬಯಸುವ | ಕು ಯೋಗ ಕುತ್ಸಿತಳಲಿ ಅ.ಪ. ಅಗಣಿತ ಗುಣಾರ್ಣವಗೆ ಸುಗುಣನೆಂದರಿತು ನಾ ಮಣಿಯಲರಿಯೆ ಬಗೆ ಬಗೆ ಕುಸುಮಂಗಳನು ಸೊಗಸಿನಿಂದಲಂಕರಿಸಿ ನಗಧರನ ಸ್ತುತಿಸಲರಿಯದವಳಲ್ಲಿ 1 ರಮಾಭಿಮಾನ್ಯನಂತಾಸನ ಸದನಗೆ ಕಮಲಾಸನವಿತ್ತು ಪ್ರೇಮ ಮಾಡಲರಿಯೆ ಸೋಮ ಸೂರ್ಯನಂತರುಧಾಮದಿ ಬೆಳಗುತ್ತಿರೆ ನೇಮದಿಂದ ದೀಪದಾರತಿಯ ಮಾಡುವಳಲ್ಲಿ 2 ಸಿರಿಭವಾದ್ಯರೆ ಆಭರಣ ಉಳ್ಳವಗೆ ಕರಗುವ ಕನಕ ತೊಡಿಸಲರಿಯೆ ಕರಿವರದ ವಿಜಯ ರಾಮಚಂದ್ರವಿಠಲನ್ನ ಅರಿತು ಒಲಿಸಲರಿಯದವಳಲ್ಲಿ 3
--------------
ವಿಜಯ ರಾಮಚಂದ್ರವಿಠಲ
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ
ನಾಟ್ಯವಾಡಿದ ನಮ್ಮ ನಾರಸಿಂಹನ ಭಕ್ತ ಶಿಷ್ಟೇಷ್ಟ ಜನಪ್ರಿಯ ಶ್ರೀ ಪಾರ್ವತೀಶ ಪ. ಪರಮ ಸಂತೋಷದಲಿ ಉದಯಸ್ತ ಪರಿಯಂತ ಸಿರಿವರ ರಾಮನ ಪರಮ ನಾಮಾಮೃತವ ತರುಣಿ ಗಿರಿಜೆಗೆ ಅರುಹಿ ಮರೆದು ತನುಮನವನ್ನು ಉರುತರದ ಭಕ್ತಿಯಿಂ ಪರಮ ವೈರಾಗ್ಯನಿಧಿ 1 ತರತಮ್ಯ ಜಗಸತ್ಯ ಹರಿಯು ಸರ್ವೋತ್ತಮನು ಸಿರಿಯು ಅನಂತರದಿ ವಾಯು ಜೀವೋತ್ತಮನು ಪರಮ ವೈರಾಗ್ಯ ಹರ ವೈಷ್ಣವೊತ್ತಮನೆನುತ ಉರವಣಿಸಿ ನುಡಿಯುವರ ನುಡಿ ಕೇಳಿ ಹರುಷದಿ 2 ಗೋಪಾಲಕೃಷ್ಣವಿಠಲ ತಾ ಪ್ರೀತಿಯಿಂದಲಿ ಗೋಪತನಯರನೆಲ್ಲ ಸಲಹಲೋಸುಗದಿ ಪಾಪಿ ಕಾಳಿಂಗನ ಫಣೆಯಲ್ಲಿ ಕುಣಿದುದು ಪರಿ ಎಂದೆನುತ ತಾ ಪ್ರೀತಿಯಿಂ ತೋರಿ 3
--------------
ಅಂಬಾಬಾಯಿ
ನಾನಾ ಚಿಂತನೆ ಎನಗಿಲ್ಲ ಹರಿ ನಿನ್ನ ಚಿಂತನೆ ಎನಗನುಗಾಲ ಪ ಮಾನಾಪಮಾನದ ಭಯವಿಲ್ಲೆನಗೆ ತವ ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ ಗಪರೂಪ ಊಟಾದರ್ಹಿಗ್ಗಿಲ್ಲ ಕಪಟದಿ ಬೈದರೆ ಅಹಿತಿಲ್ಲ ಜನ ನಿಪುಣನೆಂದರೆ ಎನಗ್ಹಿತವಿಲ್ಲ ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ ಗುಪಿತ ಮಂತ್ರ ಮಾಡನುಕೂಲ 1 ಪರಮ ಬಡತನವಿರೆ ಪರವಿಲ್ಲ ಬಲು ಸಿರಿ ಸಂಪದವಿರೆ ಹರುಷಿಲ್ಲ ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ ಸ್ಥಿರಮಾಡು ಮರೀದಂತೆ ಗೋಪಾಲ 2 ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು ಹೇಮ ಮುತ್ತು ರತ್ನ ಇರೋದಲ್ಲ ಭೂಮಿಸೀಮೆಯ ಸುಖವಿಲ್ಲ ಇದು ನೇಮವಲ್ಲೊಂದಿನ ಬಟ್ಟಬೈಲ ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3
--------------
ರಾಮದಾಸರು
ನಾನೆಂತರಿವೆನೈ ನಿನ್ನಂತರಂಗವ ಸಾನಂದಗೋವಿಂದ ನೀನಿಂದು ದಯೆದೋರು ಪ ಆದಿ ಮೂರುತಿಯೆ ನಾನೀದೀನ ನರ ಭೇದರಹಿತನೇ ಅದರ ಹಾದಿಯರಿಯೆನೊ ವೇದ ವಂದ್ಯನು ನೀನು ಓದನರಿಯದ ನಾನು ಸಾಧುರಕ್ಷಕ ಸ್ವಾಮಿ ಬೇದಯ ತಿಳಿಸೊ 1 ಜ್ಞಾನಪ್ರಕಾಶ ನಾ ಮಾನಾಭಿಮಾನಿ ಮೌನಿರಕ್ಷಕನೇ ಆಂ ಹೀನನಡೆಯವ ದಾನಿಪರಮಾತ್ಮನು ದೀನ ತಾಪತ್ರಿಯೆನು ನೀನಮೃತದವನೈ ನಾನು ಮತ್ರ್ಯನು 2 ಸರುವಲೋಕೇಶಾ ನಾಪರದೇಶಿಯಹುದೋ ಸಿರಿದೇವಿಯರಸಾ ದಾಸ ತಿರಿದುಂಬೊತಿರುಕ ಶರಣಸುಧಾರಕ ಬಿರುದಿನಿಂ ಮೆರೆಯುವ ವರದ ಜಾಜೀಶ ಪೊರೆ ಶ್ರೀನಿವಾಸ 3
--------------
ಶಾಮಶರ್ಮರು
ನಾಮ ಧರಿಸಿಹೆಯಾ ಮೂರು ನಾಮ ಧರಿಸಿಹೆಯಾ ಶ್ರೀನಿವಾಸ ಪ. ನೀನೆ ಕರ್ತನೆಂದಾ ಮನುಜರಿಗೆಲ್ಲಾ ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ. ಅಂಬೆಯ ವಕ್ಷದಿ ಇಂಬಿನೊಳಿಟ್ಟು ಸಂಭ್ರಮದೊಳು ಕುಡಿ ನೋಟದಿಂದಾ ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ ಬೆಂಬಿಡದೆ ಕಾವೆನೆಂಬ ಬಿರುದ 1 ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ ಹೊರವೊಳಗಿದ್ದು ಜನವ ನಂಬಿಸಿ ಥರಥರದಾಭರಣ ಸುಲಿಗೆಯಗೊಂಬ ತಿರುಪತಿ ತಿರುಮಲರಾಯ ದೊರೆ 2 ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ ನಿನ್ನ ಪಾದಧ್ಯಾನವನ್ನೆ ಬಯಸುತ್ತ ನಿನ್ನನೆ ಭಕ್ತಪಾಶದಿ ಕಟ್ಟಿ 3 ಚಾರು ಮುಖನೆ ವಂದ್ಯ ನಿನ್ನ ಹಾರೈಸುವ ಭಕ್ತರ ವೃಂದ ಹಾರ ಹಾಕಿ ಮನ ಸೂರೆ ಕೊಟ್ಟ 4 ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ 5
--------------
ಸರಸ್ವತಿ ಬಾಯಿ
ನಾರಾಯಣ ಎಂಬ ನಾಮದ ಬೀಜವನು ನಾಲಗೆಯಕೂರಿಗೆಯ ಮಾಡಿ ಬಿತ್ತಿರಯ್ಯ ಪ ತನುವ ನೇಗಿಲು ಮಾಡಿ ಹೃದಯ ಹೊಲವನು ಮಾಡಿತನ್ವಿರಾ ಎಂಬ ಎರಡೆತ್ತ ಹೂಡಿಜ್ಞಾನವೆಂಬೊ ಮಿಣಿಯ ಕಣ್ಣಿ ಹಗ್ಗವ ಮಾಡಿಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ 1 ಕಾಮಕ್ರೋಧಗಳೆಂಬ ಗಿಡಗಳನು ತರಿಯಿರಯ್ಯಮದಮತ್ಸರವೆಂಬ ಪೊದೆಯ ಇರಿಯಿರಯ್ಯಪಂಚೇಂದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯಚಂಚಲವೆಂಬ ಹಕ್ಕಿಯ ಓಡಿಸಿರಯ್ಯ 2 ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯುಶ್ಯದ ರಾಶಿಯನು ಅಳೆಯಿರಯ್ಯಇದು ಕಾರಣ ಕಾಗಿನೆಲೆಯಾದಿಕೇಶವನಮುದದಿಂದ ನೆನೆನೆನೆದು ಸುಖಿಯಾಗಿರಿಯ್ಯ3
--------------
ಕನಕದಾಸ
ನಾರಾಯಣ ತನ್ನ ನಂಬಿದ ಭಕುತರ ಕಾರುಣ್ಯದಿ ಕಾವ ಪ ಮಾರುತಿ ಸಹಿತನಾಗಿ ತಾನೀ ಶರೀರದೊಳಿಹ ದೇವ ಅ.ಪ ಅನಿರುದ್ಧನು ತಾ ಸಕಲ ಚರಾಚರ ಸೃಷ್ಟಿಯ ಗೈವ ವನಧಿಶಯನ ಪ್ರದ್ಯಮ್ನನು ಬ್ರಹ್ಮಾಂಡವ ಪಾಲಿಸುವ ತ್ರಿನಯನನಂತರ್ಗತ ಸಂಕರ್ಷಣ ತಾನು ಲಯವನು ಗೈವ ವಾಸುದೇವ ಸುಜೀವರಿಗೆ ಮೋಕ್ಷವನೀವ 1 ನರಸಿಂಹ ರೂಪದಿ ಹರಿಯು ಭಕುತ ಪ್ರಹ್ಲಾದನ ಕಾಯ್ದ ಸಿರಿ ರಾಮನು ತಾನಾಗಿ ಬಂದು ದಶಶಿರನ ಭಂಜಿಸಿದ ದುರುಳ ಕಂಸನ ನಿಗ್ರಹಿಸಲು ಯದು ವಂಶದೊಳುದಿಸಿ ಬಂದ ಪರಾಶರಾತ್ಮಜನಾಗಿ ವರವೇದ ವಿಭಾಗವ ಗೈದ 2 ವರಾಹ ನರಹರಿರೂಪವ ತಾ ಕೊಂಡ ಇಚ್ಛೆಯಿಂದಲಿ ವಟುವಾಗಿ ಕೊಡಲಿಯ ಪಿಡಿದ ಪ್ರಚಂಡ ಸಿರಿ ಕೃಷ್ಣ ದಿಗಂಬರನಾಗಿ ಕಂಡ ಸ್ವಚ್ಛ ಅಶ್ವವೇರಿದ ರಂಗೇಶವಿಠಲ ಬಿನಗು ದೈವರ ಗಂಡ 3
--------------
ರಂಗೇಶವಿಠಲದಾಸರು
ನಾರಾಯಣ ನರಹರಿಯೆ ನರ ಜನ್ಮದಿ ಸಿಲುಕಿದೆನು ಮರಳಿ ಜನಿಸದಂದಲೆನ್ನ ಕರುಣಿಸೋ ಕ್ಷೀರವಾರಿಧಿಶಯನ ಪ ಮುರಹರ ಮಧುಸೂಧನ ಶ್ರೀಹರಿ ಧರಣೀಧರ ವರಾಹ ನಾರಾಯಣ ವಟು ವಾಮನ ಕೇಶವ ವಾರಿಜದಳನಯನ 1 ನಂದನಂದನ ಹರಿಯೆ ನಾರದವಂದಿತ ಸುರ ಸಂಹಾರಿ ಮಂದಜಾಯತನಯನ 2 ಅರಿಗದೆ ಶಂಖಾಬ್ಜ ಕರದೊಳು ಮೆರೆವ ಪೀತಾಂಬರ ಧಾರಿ ಕರಿವದನನೆ ಕಾಳಿಂಗಮರ್ಧನ ಸರಸಿರುಹದಳನಯನ 3 ಮುಳುಗಿದೆನು ಎತ್ತು ಕಮಲನಯನ 4 ಬಲ್ಲುದೇ ಕರು ಎತ್ತಿಕೋ ಹರಿಯೇ 5
--------------
ಕವಿ ಪರಮದೇವದಾಸರು
ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ಪ ನಾ ಮೀರಿ ದುಷ್ಕರ್ಮವ ಮಾಡಿದೆಅಪಾರಮಹಿಮ ದಯಾನಿಧೇ ಅ.ಪ ನಾನಾ ಯೋನಿಗಳಿಂದ ಬಂದೆನೋಮಾನತಾಳಲಾರದೆ ಬಲು ನೊಂದೆನೋದೀನರಕ್ಷಕ ಎನ್ನ ಗತಿ ಮುಂದೇನೋಮಾನದಿಂದಲಿ ಪಾಲಿಸುವಂಥ ದೊರೆ ನೀನೋ1 ದಾಸರ ಮನ ಉಲ್ಲಾಸನೆಶ್ರೀಶ ಆಶ್ರಿತ ಜನರ ಪೋಷನೆಸಾಸಿರ ಅನಂತಮಹಿಮನೆಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ 2 ರಂಗನಗರ ಉತ್ತುಂಗನೆಗಂಗಾಜನಕ ಗರುಡತುರಂಗನೆ ಉ-ತ್ತುಂಗ ಗುಣಗಳಂತರಂಗನೆ ಅ-ನಂಗನ ಪೆತ್ತ ರಂಗವಿಠಲನೆ 3
--------------
ಶ್ರೀಪಾದರಾಜರು
ನಾರಾಯಣ ನಿಮ್ಮ ನಾಮ ನಾಲಿಗೆಲಿರಲಿ ನಾರಾಯಣ ಘೋರಪಾತಕವೆಲ್ಲ ಹಾರಿ ಹೋಗುವುದಯ್ಯ ನಾರಾಯಣ 1 ಸಾರ್ಯವಾಗುವುದು ಶ್ರೀಹರಿಯ ಪುರ ಅವರಿಗೆ ನಾರಾಯಣ ಮಾರಜನಕನÀ ಮೊದಲೆ ಮರೆಯದಿರೊ ಮನವೆ ನಾರಾಯಣ 2 ಎಷ್ಟೆಷ್ಟು ದುರಿತಗಳು ನಷ್ಟವಾಗಿ ಹೋಗುವುವು ನಾರಾಯಣ ಎಷ್ಟು ನಾಮವ ಬಿಡದೆ ನೆನೆಕಂಡ್ಯ ಮನವೆ ನಾರಾಯಣ 3 ಅಂತ್ಯಜಸ್ತ್ರೀ ಕೂಡಿ ಭ್ರಾಂತನಾಗ್ಯಜಮಿಳನು ನಾರಾಯಣ ಕಂತುನಯ್ಯನ ಮರೆತು ಕಾಲವನು ಕಳೆಯಲು ನಾರಾಯಣ 4 ಅಂತ್ಯಕಾಲಕೆ ಹರಿಯ ಸ್ಮರಣೆ ಜಿಹ್ವೆಗೆ ಬರಲು ನಾರಾಯಣ ಲಕ್ಷ್ಮೀ- ಕಾಂತ ಕರುಣಿಸಿ ಅವಗೆ ಕರೆದÀು ಮುಕ್ತಿಯ ಕೊಟ್ಟ ನಾರಾಯಣ5 ಲಕ್ಕುಮೀರಮಣನೆ ಸಕಲಗುಣಪರಿಪೂರ್ಣ ನಾರಾಯಣ ಮುಖ್ಯ ನೀ ಎನ ಮನದಿ ಹೊಕ್ಕರ್ಹೊಗಳುವೆನಯ್ಯ ನಾರಾಯಣ 6 ಘೋರ ವೇದವ ಕದ್ದು ನೀರೊಳಗಡಗಲು ನಾರಾಯಣ ಭೇದಿಸವನಕೊಂದು ವೇದವನು ತಂದಿಟ್ಟ ನಾರಾಯಣ 7 ಶ್ರುತಿಯ ಸುತಗೆ ಕೊಟ್ಟಿ ಸ್ತುತ್ಯನಾಗಜನಿಂದ ನಾರಾಯಣ ಮಚ್ಛರೂಪವ ಧರಿಸಿದಚ್ಯುತಗೆ ಶರಣೆಂಬೆ ನಾರಾಯಣ 8 ದೇವದೈತ್ಯರು ಕೂಡಿ ಸಾಗರವ ಕಡೆಯಲು ನಾರಾಯಣ ವಾಸುಕಿ ಸುತ್ತೆ ನಾರಾಯಣ 9 ಆಗ ಸುರರಸುರರಿಬ್ಭಾಗವಾಗಿ ನಿಂತು ನಾರಾಯಣ ಭಾಳ ತುಚ್ಛದಿ ಬಲಬಿಟ್ಟು ಬಾಯಿಂದೆಳೆಯೆ ನಾರಾಯಣ 10 ವಾಸುಕಿ ಬಿಡಲು ಅಸುರಜನ ಮಡಿದ್ಹೋಗೆ ನಾರಾಯಣ ಕುಸಿದು ಹೋಗಲು ಗಿರಿ ಕೂರ್ಮರೂಪಾದಿ ನಾರಾಯಣ11 ಅಮೃತ ದೈತ್ಯರು ಕೊಂಡೋಡಲು ನಾರಾಯಣ ಸೃಷ್ಟಿ ಆದಿಕರ್ತ ಶ್ರೀ (ಸ್ತ್ರೀ?) ರೂಪವನು ಧರಿಸಿದ ನಾರಾಯಣ 12 ಮುಂಚೆ ಮೋಹವ ಮಾಡಿ ವಂಚಿಸಿ ದೈತ್ಯರನೆ ನಾರಾಯಣ ಹಂಚಿ ಸುರರಿಗೆ ಅಮೃತಪಾನ ಮಾಡಿಸಿದಯ್ಯ ನಾರಾಯಣ 13 ದಿತಿಯ ಸುತನು ಬಂದು ಪೃಥಿವಿಯನೆ ಸುತ್ತೊಯ್ಯೆ ನಾರಾಯಣ ಅತಿಬ್ಯಾಗದಿಂದ ರಸಾತಳ ಭೇದಿಸಿ ನಾರಾಯಣ 14 ಕ್ರೂರ ಹಿರಣ್ಯಾಕ್ಷನ್ನ ಕೋರೆದಾಡೆಲಿ ಸೀಳಿ ನಾರಾಯಣ ವರಾಹ ನಾರಾಯಣ 15 ಬ್ರಹ್ಮನಿಂದ್ವರ ಪಡೆದು ಹಮ್ಮಿಂದ ಕÉೂಬ್ಬ್ಯಸುರ ನಾರಾಯಣ ದುರ್ಮತಿಯಿಂದ್ಹರಿಯ ದೂಷಿಸುತಲಿದ್ದ ನಾರಾಯಣ16 ಮತಿಹೀನ ತನ ಸುತಗೆ ಮತಿಯ ಹಿಡಿಸುವೆನೆಂದ ನಾರಾಯಣ ಪಾರ್ವತೀಪತಿ ನಾಮವನು ಹಿತದಿಂದ ಬರೆಯೆಂದ ನಾರಾಯಣ 17 ಹರಿ ಹರಿ ಹರಿಯೆಂದು ಬರೆಯಾ(ಯಲಾ?) ಬಾಲಕನೋಡಿ ನಾರಾಯಣ ಉರಿಯ ಹೊಗಿಸುವೆನೆಂದ ಉಗ್ರಕೋಪಗಳಿಂದ ನಾರಾಯಣ18 ಮೆಟ್ಟಿ ಸಾಗೀಯಿಂದೆ ಬೆಟ್ಟದಿಂದಲಿ ಕೆಡೆವೆ ನಾರಾಯಣ ಕಟ್ಟಿ ಶರಧಿಯಲ್ಲÁ್ಹಕಿ ವಿಷ್ಣುಭಕ್ತನು ಬರಲು ನಾರಾಯಣ19 ಪ್ರಹ್ಲಾದ ನಿನ್ನೊಡೆಯ ಎಲ್ಹಾನೆ ತೋರೆನಗೆ ನಾರಾಯಣ ಮಲ್ಲಮರ್ದನ ಸ್ವಾಮಿ ಇಲ್ಲದೇ ಸ್ಥಳವುಂಟೆ ನಾರಾಯಣ20 ಪೃಥ್ವಿಪರ್ವತದಲ್ಲಿ ಸಪ್ತದ್ವೀಪಗಳಲ್ಲಿ ನಾರಾಯಣ ಸುತ್ತೇಳು ಸಾಗರದಿ ವ್ಯಾಪ್ತನಾಗ್ಹರಿಯಿರುವ ನಾರಾಯಣ21 ಅಣುರೇಣು ತೃಣದಲ್ಲಿ ಇರುವ ಆಕಾಶದಲಿ ನಾರಾಯಣ ರವಿ ಸೋಮ ತಾರಾಮಂಡಲದಲ್ಲಿ ತಾನಿರುವ ನಾರಾಯಣ 22 ಹದಿನಾಲ್ಕು ಲೋಕದಲಿ ಹರಿ ವಿಶ್ವವ್ಯಾಪಕನು ನಾರಾಯಣ ಸರ್ವದಿಕ್ಕುಗಳಲ್ಲಿ ಸನ್ನಿಹಿತನಾಗಿರುವ ನಾರಾಯಣ 23 ಆರಣಿಯೊಳಗಗ್ನಿಯಂದದಿ ಜನಕೆ ತೋರದಿರೆ ನಾರಾಯಣ ಜನನ ಮರಣಿಲ್ಲ ಜಗಜನ್ಮಾದಿಕಾರಣಗೆ ನಾರಾಯಣ 24 ನೀನರಿಯೆ ನಿನ್ನಲ್ಲೆ ಜೀವರಾಶಿಗಳಲ್ಲೆ ನಾರಾಯಣ ಈ ಜಗತ್ತಿಗೊಬ್ಬ ಇದ್ದಾನೆ ಎನ್ನೊಡೆಯ ನಾರಾಯಣ25 ಮಂದಭಾಗ್ಯನೆಯೆನ್ನ ಮಾತು ನಿಜವೆಂದು ತಿಳಿ ನಾರಾಯಣ ಈ ಸ್ತಂಭದಲ್ಲಿದ್ದಾನೆ ಮಂದರೋದ್ಧರ ಸ್ವಾಮಿ ನಾರಾಯಣ26 ಬಂದು ಭರದಿಂದಸುರ ಕಂಬ ಕಾಲಿಂದೊದೆಯೆ ನಾರಾಯಣ ತುಂಬಿತಾ ಘನಘೋಷದಿಂದ ಘುಡಿಘುಡಿಸುತಲಿ ನಾರಾಯಣ27 ಸಿಡಿಲು ಗರ್ಜಿಸಿದಂತೆ ಖಡಿ ಖಡಿ ಕೋಪದಲಿ ನಾರಾಯಣ ಕಿಡಿಗಳ್ಹಾರುತ ಕಂಬವೊಡೆದು ರೋಷದಿ ಬಂದ ನಾರಾಯಣ 28 ಖಳನ ಸೆಳೆದಪ್ಪಳಿಸಿ ದುರುಳನುದರವ ಬಗೆದÀು ನಾರಾಯಣ ಕರುಳ ವನಮಾಲೆ ತನ ಕೊರಳಲ್ಲಿ ಧರಿಸಿದ ನಾರಾಯಣ29 ತಲ್ಲಣಿಸಿ ಸುರರಾಗ ಮಲ್ಲಿಗೆಮಳೆ ಕರೆಯೆ ನಾರಾಯಣ ಪ್ರಹ್ಲಾದಸಹಿತ ಶ್ರೀದೇವಿ ಮುಂದಕೆ ಬರಲು ನಾರಾಯಣ30 ಕರದಿ ಕಂಗಳ ಮುಚ್ಚಿ ಸಿರಿಯ ತೋಳಿಂದಪ್ಪಿ ನಾರಾಯಣ ತೊಡೆಯನÉೀರಿಸಿ ತನ್ನ ತರುಣಿಗಭಯವನಿಟ್ಟ ನಾರಾಯಣ 31 ಸ್ತೋತ್ರವನು ಮಾಡಲಜ ಬಿಟ್ಟುಗ್ರಕÉೂೀಪವನು ನಾರಾಯಣ ಕೊಟ್ಟ ಪ್ರಹ್ಲಾದ(ಗ್ವ)ರಗಳ ಲಕ್ಷ್ಮೀನರಸಿಂಹ ನಾರಾಯಣ32 ಅಜ್ಞಾನದಿಂದ ತಾ ಯಜ್ಞ ಮಾಡುತಲಿರಲು ನಾರಾಯಣ33 ಅದಿತಿಯಲ್ಲವತರಿಸೆ ಅತಿಬ್ಯಾಗ ಕಶ್ಯಪರು ನಾರಾಯಣ ಸುತಗೆ ಉಪನಯನ ಭಾಳ್ಹಿತದಿಂದ ಮಾಡಲು ನಾರಾಯಣ 34 ಯಜÉೂೀಪವೀತ ಕೈಪು ಕೃಷ್ಣಾಂಜಿನ ಧರಿಸಿ ನಾರಾಯಣ ಶೀಘ್ರದಿಂದ ವಟು ವಾಮನ್ಯಜಶಾಲೆಗೆ ಬರಲು ನಾರಾಯಣ35 ಬಲಿಯ ಯಜ್ಞದಿ ಬಂದು ಭಾಳ ಪೂಜಿತನಾಗಿ ನಾರಾಯಣ ಛಲವಿಟ್ಟು ಮನದೊಳಗೆ ಬಲಿಯ ಯಾಚನೆ ಮಾಡೆ ನಾರಾಯಣ 36 ನಾ ಕೊಡುವೆ ಬೇಡು ಬೇಕಾದಷ್ಟು ಅರ್ಥವನು ನಾರಾಯಣ ಸಾಕಾಗದೇನಯ್ಯ ಸಲ್ಲ ಧನದಾಸ್ಯೆನಗೆ ನಾರಾಯಣ 37 ದೃಢಮನಸಿನಲಿ ಭೂಮಿ ಕೊಡು ಮೂರು ಪಾದವನು ನಾರಾಯಣ ಕೊಡುವೆನೆಂದಾಕ್ಷಣದಿ ಎರಡು ಚರಣವ ತೊಳೆದ ನಾರಾಯಣ38 ಒಂದು ಪಾದದಲಿ ಭೂಮಂಡಲವ ವ್ಯಾಪಿಸಿ ನಾರಾಯಣ ಪಾದ ನಾರಾಯಣ 39 ಕಂಡು ಕಮಲಜನು ಕಮಂಡಲೋದಕ(ದಿ) ತೊಳೆಯ ನಾರಾಯಣ ಉಂಗುಷ್ಠ ನಖದಿ ಉತ್ಪನ್ನಳಾದಳು ಗಂಗೆ ನಾರಾಯಣ40 ರಕ್ಕಸಾಂತಕನು ತ್ರಿವಿಕ್ರಮ ರೂಪಾಗಿ ನಾರಾಯಣ ಆಕ್ರಮಿಸಿಕೊಂಡ ಹದಿನಾಲ್ಕು ಲೋಕವ ಸ್ವಾಮಿ ನಾರಾಯಣ41 ಕೊಟ್ಟ ವಚನವ ತಪ್ಪಿ ಭ್ರಷ್ಟÀನಾಗದೆ ಭೂಮಿ ನಾರಾಯಣ ಕೊಟ್ಟರಿನ್ನೀಪಾದಯಿಟ್ಟು ಬಿಡುವೇನೆಂದ ನಾರಾಯಣ 42 ಕಟ್ಟಿ ಪಾಶದಲಿ ಕಂಗೆಟ್ಟಾಗ ಬಲಿರಾಯ ನಾರಾಯಣ ಕೆಟ್ಟೆನೆನ್ನದಲೆ ಮನಮುಟ್ಟಿ ಸ್ತೋತ್ರವ ಮಾಡೆ ನಾರಾಯಣ43 ದುಷ್ಟಜನ ಮರ್ದಕನು ಸೃಷ್ಟಿಸ್ಥಿತಿಲಯ ಕರ್ತೃ ನಾರಾಯಣ ಸೃಷ್ಟಿಗೊಡೆಯಗೆ ದಾನಕೊಟ್ಟರೆಂಬುವರುಂಟೆ ನಾರಾಯಣ 44 ಬಂಧನ ಬಿಡಿಸಿ ಬಲಿರಾಯಗ್ವರಗ¼
--------------
ಹರಪನಹಳ್ಳಿಭೀಮವ್ವ
ನಾರಾಯಣ ಹರಿ ಗೋವಿಂದ ಪ ಸಿರಿಯು ಸಹಿತ ಮೆರೆದಿರುವ ಜಗದ್ಗುರು ಅ.ಪ ಇತ್ತು ವೇದವ ಶತಧೃತಿಯನೆ ಸಲಹಿದೆ 1 ಸುರಿ ಸುರಿದಮೃತವ ದಿವಿಜರಿಗುಣಿಸಿದೆ 2 ಲೋಕೇಶನ ನಾಸಿಕದೊಳಗುದಿಸುತ | ಜೋಕೆಯಿಂದ ತ್ರೈಜಗವನು ಸಲಹಿದೆ 3 ಕುಂಭಿನಿಯೊಳು ನರಹರಿಯೆಂದೆನಿಸಿದೆ 4 ಒಲಿದು ತ್ರಿವಿಕ್ರಮ ವಾಮನನೆನಿಸಿದೆ5 ಅಮಿತ ಪರಾಕ್ರಮಿ ಭಾರ್ಗವನೆನಿಸಿದೆ 6 ಶಶಿಮುಖಿ ಸೀತಾರಾಮನೆಂದೆನಿಸಿದೆ 7 ಅಸುರಾಂತಕ ಶ್ರೀಕೃಷ್ಣನೆಂದೆನಿಸಿದೆ 8 ಅಪರಿಮಿತ ಮಹಿಮ ಬುದ್ಧನೆಂದೆನಿಸಿದೆ 9 ಸಾಸಿರ ನಾಮನೆ ಕ(ಲ್ಕಿ)ಯೆಂದೆನಿಸಿದೆ 10 ಹೃತ್ಕಮಲೇಶ ಸದಾನಂದನೆನಿಸಿದೆ 11
--------------
ಸದಾನಂದರು