ಒಟ್ಟು 830 ಕಡೆಗಳಲ್ಲಿ , 63 ದಾಸರು , 806 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಹರಿಯೆಂದು ನೆನೆಯೋ ಮರಿಯದೆ ಮನುಜ ಧ್ರುವ ನಡೆಯುತ ನುಡಿಯುತ ನಡೆ ನುಡಿಯೊಳಗೆ ಪೊಡವಿಧರನ ಮಹಿಮೆಯ ಕೊಂಡಾಡುತ ಇಡವುತ ತೊಡವುತ ಮುಡವುತ ಮನದೊಳು ಬಿಡದೆ ಸ್ಮರಸೊ ನೀ ಅಡಿ ಗಡಿಗೊಮ್ಮೆ 1 ಉಣುತ ಉಡುತನ್ನೋದಕ ಕೊಳುತ ವನಿತಯರೊಡಗೂಡಿ ಘನಸುಖ ಪಡೆಯುತ ಅನಭದಿಂದಾನಂದದಿ ನೆನೆಯೋ ತನುಮನದೊಳು ನೀ ಕ್ಷಣಕ್ಷಣಕೊಮ್ಮೆ 2 ಏಳುತ ಕೂಡುತ ಮಲಗುತ ನೆನೆಯೋ ಹಲವು ಪರಿಲಿ ಶ್ರೀ ಹರಿ ಸರ್ವೋತ್ತಮ ನೆಲೆಗೊಂಡಿರೋ ಮಹಿಪತಿ ನಿಜನಾಮವ ಸಲಹುತ ಸ್ವಾಮಿ ಶ್ರೀಗುರು ಶ್ರೀಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿನಾಮ ಘೋಷ ಧ್ರುವ ಎಲ್ಲಿ ಶ್ರೀಹರಿನಾಮ ಘೋಷ ಅಲ್ಲಿ ಸಕಲ ಸುಖ ಸಂತೋಷ ಸುಲಭಲಿಹುದು ಭವಭಯದ ನಾಶ ಹರಿನಾಮ ಘೋಷ 1 ಹರಸುವದಾನಂದದ ಹರುಷ ಹರಿಸುವದು ಕಲಿಮಲ ಕಲುಷ ತ್ವರಿತೋಡಿಸುವದು ಮಹಾಪಾತಕ ದೋಷ ಹರಿನಾಮ ಘೋಷ 2 ಸ್ವಹಿತ ಸಾಧನದ ಸುಉಪದೇಶ ಬಾಹ್ಯಾಂತರದೋರುವ ಪ್ರಕಾಶ ಮಹಿಪತಿಗಿದೆ ನಿತ್ಯವನುಭವದುಲ್ಹಾಸ ಹರಿನಾಮ ಘೋಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಭಕುತರ ದರುಶನವು ಅತಿಹರುಷವು ಧ್ರುವ ಹರಿ ನೆನೆವರಾ ನೆರಿಯು ನಿಧಾನದಾ ಕೆರೆಯು ಹರಿ ಸ್ಮರಿಸುವರ ಮರಿಯು ವಜ್ರವರಿಯು ಹರಿ ಭಜಿಸುವರ ಸರಿಯು ನಿಜಘನಾತ್ಮದ ಝರಿಯು ಹರಿ ಮಹಿಪರ ಕರಿಯು ಪರಮಾನಂದದ ತೆರಿಯು 1 ಹರಿಶರಣರ ನುಡಿಯು ಕರುಣದಮೃತಧ್ವನಿಯು ಹರಿಯದಾಸರ ನಡೆಯು ನಿಲಕಡೆಯು ಹರಿಭಕ್ತರಿದ್ದೆಡೆಯು ಪುಣ್ಯಕ್ಷೇತ್ರದ ತಡಿಯು ಹರಿಮಹಿಮರ ಕಡಿಯು ಕ್ಯಾದಿಗ್ಹೊಡಿಯು 2 ಹರಿಭಕ್ತರ ಸಂಗ ಸ್ನಾನಗಂಗ ತುಂಗ ಹರಿಮಹಿಮರ ಅಂಗ ಅಂತರಂಗ ಹರಿಪರಮಾನಂದ ಗುರು ಕರುಣಾಕೃಪಾಂಗ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯನರಿಯದ ಜನುಮ ಧೆರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ಧ್ರುವ ಹರಿಗೆ ನಮಿಸದ ಸಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣಿಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರುಕ ಕೀಲಿಯ ಕೈಯು ಹರಿ(ಯ) ಕೊಂಡಾಡುವ ನಾಲಿಗೆ ಒಡಕ ಸೊಲಿಗೆಯ 1 ಹರಿಯ ಸ್ತುತಿಸದ ಮುಖ ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು 2 ಹರಿಯ ಸೇವೆಗೊದಗದ ಕಾಲು ಮುರುಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢ ಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವವೆಂದು ಸಲೆಮೊರೆಹೊಕ್ಕಿಹ ಮೂಢ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯನರಿಯದಿಹ್ಯ ನರಜನ್ಮಾವ್ಯಾಕೆ ಪರಬ್ರಹ್ಮವರಿಯದ ಬರೆ ಬ್ರಾಹ್ಮಣವ್ಯಾಕೆ ಧ್ರುವ ಹರಿಃ ಓಂ ತತ್ಸದಿತಿಯೆಂಬ ಶ್ರೀ ಹರಿ ವಾಕ್ಯವರಿಯದೆ ಬರುದೆ ಶ್ರೀ ಹರಿ ಶ್ರೀ ಹರಿಯಂದೊದರುವದ್ಯಾಕೆ 1 ಏಕಾಂಶೇನ ಸ್ಥಿತೋ ಜಗತ ಎಂಬ ವಾಕ್ಯವರಿಯದೆ ನಾಲ್ಕಾರು ವೇದಶಾಸ್ತ್ರವೋದಿ ಕೇಳುವದ್ಯಾಕೆ 2 ಎಂಬ ವಾಕ್ಯವರಿಯದೆ ಹದಿನೆಂಟು ಪುರಾಣ ಕೇಳಿ ಹೇಳುವದ್ಯಾಕೆ 3 ಮಮೈವಾಂಶೋ ಜೀವಲೋಕೇ ಜೀವಭೂತ:ಸನಾತನ ಎಂಬ ವಾಕ್ಯವರಿಯದೆ ನಾನಾವ್ರತಾಚಾರ ಸಂನ್ಯಾಸ ಕೈಕೊಂಬುದ್ಯಾಕೆ 4 ಸುದರ್ಶನ ಮಹಾಜ್ವಾಲಾ ಕೋಟಿಸೂರ್ಯ ಸಮಪ್ರಭ ಎಂಬ ವಾಕ್ಯವರಿಯದೆ ಸೀಳಿ ಸುದರ್ಶನಗಳ ಪೂಜಿ ಮಾಡುವದ್ಯಾಕೆ 5 ಮಂತ್ರ ಪ್ರಣಮ್ಯವರಿಯದೆ ತಂತ್ರ ಮಂತ್ರಸರವ್ಯಾಕೆ ಅಂತರಾತ್ಮವರಿಯದೆ ತರ್ಕಭೇದಗಳ್ಯಾಕೆ 6 ವಿಶ್ವವ್ಯಾಪಕ ಗುರು ಭಾಸ್ಕರಮೂರ್ತಿ ಶ್ರೀಪಾದ ವಿಡದಿಹ ಮಹಿಪತಿಗೆ ಭವಪಾಶದಂಜಿಕಿನ್ಯಾಕೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಲರಿಯದು ಜನ್ಮ ಗುರುಪಾದವರಿಯದೆ ಧ್ರುವ ಬಯಲು ಭಾವಿಸಿ ನಿರ್ಬೈಲ ನೆಲೆಗೊಳ್ಳದೆ ಭಾವಭಕ್ತಿಯ ಕೀಲು ಹೊಯಿಲು ತಿಳಿಯದೆ 1 ರವಿ ಶಶಿಯನೊಡಗೊಡಿ ಶಿವಸುಖವ ತಿಳಿಯದೆ ಸೂತ್ರ ಸೋಹ್ಯ ಹೊಳಿಯದೆ 2 ಆಧಾರವಂ ಬಲಿದು ಆರೇರಿ ಬೇರಿಯದೆ ಮಹಿಪತಿ ನಿನ್ನೊಳು ಗುರುಗತಿ ಅರಿಯದೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಹರಿಯೆಂದು ಮನವೆ ನೀ ಸ್ಮರಿಸೋ ದೃಢದಿಂದ ಸ್ಮರಿಸಿದಾಕ್ಷಣ ಬಂದು ಒದಗುವ ಗೋವಿಂದ ಕರುಣದಿಂದಲಿ ನೋಡಿ ಹಿಂಗಿಸುವ ಭವಬಂಧ ಪರಮದಯಾನಿಧಿಯು ಶ್ರೀಹರಿ ಮುಕುಂದ 1 ಸ್ಮರಿಸಿದಾಕ್ಷಣ ಪುಣ್ಯಗತಿಗೈದಜಾಮಳ ಮರೆಯದೆ ಸ್ಮರಿಸಿದ ಧ್ರುವ ಯೈದಿದಢಳ ಹರಿಯೆಂದು ಪ್ರಹ್ಲಾದ ಪುಣ್ಯಗೈದ ಸಬಳ ಸ್ಮರಿಸಿದವರ ಕಾವ ಶ್ರೀಹರಿ ಗೋಪಾಲ 2 ಗಜ ಭಯ ಸ್ಮರಿಸಿದಾಕ್ಷಣ ಮೊರೆ ಇಟ್ಟು ದ್ರೌಪದಿಗಾಯಿದಭಿಮಾನ ಸ್ಮರಿಸಿದ ಪಾಂಡವರ ರಕ್ಷಿಸಿದ ಪ್ರಾಣ ಪರಮಭಕ್ತರ ಜೀವ ಶ್ರೀಹರಿ ನಾರಾಯಣ 3 ಹರಿನಾಮದಿಂದಾಯಿತು ಅಹಲ್ಯೋದ್ಧಾರಣ ಸ್ಮರಣೆ ಸಕಲವೆಲ್ಲ ತರಿಸಿತು ಪೂರ್ಣ ಸುರಮುನಿಜನರಿಗೆ ಇದೇ ನಿಜಭೂಷಣ ಪರಮ ವೈಷ್ಣವರಿಗೆ ಇದೇ ಜೀವ ಪ್ರಾಣ 4 ಹರಿಯೆಂದು ನೆನಿಯೋ ನೀ ಗುರು ಕೃಪೆಯಿಂದ ಸ್ಮರಿಸೊ ಮನವೆ ದೃಢಭಾವ ಭಕ್ತಿಯಿಂದ ನಿತ್ಯ ನಿಜಾನಂದ ತೋರುವ ಶ್ರೀಹರಿನಾಮ ಸುಖ ಸದಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೇ ಎನ್ನ ಪ್ರಾಣಧೊರಿಯೆ ಹರಿಯೆ ಧ್ರುವ ಕರುಣಾನಂದ ಪೂರ್ಣ ವರಮುನಿಗಳ ಪ್ರಾಣ ಶರಣಜನರಾಭರಣ ಹರಿ ನಿಮ್ಮ ಚರಣ 1 ಭಂಜನ ದುರಿತ ವಿಧ್ವಂಸನ ಪರಮಸು ಸಾಧನ ಹರಿ ನಿಮ್ಮ ಕರುಣ 2 ಶಿರದಲಿಟ್ಟು ಆಭಯ ಹೊರಿಯೊ ಮಹಿಪತಿಯ ಕರುಣಿಸಿ ನಿಮ್ಮದಯ ಹರಿಯೊ ಭವಭಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೇ ನಮ್ಮ ಪರದೈವಾ ಹರಿಯೇ ತ್ರಿಭುವನ ಕಾವಾ ಹರಿಯೇ ಇಹಪರ ನೀವಾ ಜಗದೊಳಗೆ ಪ ಬಿಟ್ಟು ತಾಯ ತಂದೆಗಳ ನೆಟ್ಟನಡವಿಗೆ ಪೋಗಿ | ಮುಟ್ಟಿ ಭಜಿಸಲಾಗಿ ದಯವಿಟ್ಟು ಬಂದನು | ವಿಠಲ ನಚಲ ಪದವಿಯ ಕೊಟ್ಟು ಸಲಹಿದಕ | ಧಿಟ್ಟ ಧ್ರುವರಾಯ ಸಾಕ್ಷಿ ಅಂಬರದಲಿ 1 ಶರಧಿ ದಾಟ ಬಂದು ರಘು | ಪತಿ ಕರಿಸಿದನು | ಧರಿಯದುಳ್ಳನಕಾ ಲಂಕಾಪುರದ ಪದವಿಕೊಟ್ಟು ಕಾಯ್ದಾ | ಮೆರೆವಾ ವಿಭಿಷಣÁ ಸಾಕ್ಷಿ ಮೃತ್ಯುಲೋಕದೀ 2 ಧರೆಯ ನೆಳೆದು ಕೊಟ್ಟರಂಘ್ರಿ ವೆರಡರಿಂದ ಮುಚ್ಚಲಾಗಿ | ಶರಣ ತೃತಿಯ ಪಾದಕ ಶಿರಸವ ನೀಡಲು | ಹೊರೆದನೆಂದು ಬಲಿಸಾಕ್ಷಿ ಪಾತಾಳದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ಶ್ರೀಗುರು ನಮ್ಮ ಹರಿಯೇ ಸದ್ಗುರು ನಮ್ಮ ಹರಿಯೇ ಮದ್ಗುರು ಪರಾತ್ಪರ ಪೂರ್ಣನು ಧ್ರುವ ಹರಿಯೇ ಗುರುವೆಂದೆನಿಸಿ ಗುರವೆ ಹರಿ ಎಂದೆನಿಸಿ ಕರಸಿಕೊಂಡವನೊಬ್ಬನೆ ಪರಬ್ರಹ್ಮನು ನರಮನುಜಾಗಾಗುವದು ದುರ್ಗತಿಯ 1 ಒಂದು ವಸ್ತುವೆ ತಾನನೇಕ ನಾಮವ ಧರಿಸಿ ಸಂದಿಸಿ ಹ್ಯಾ ನಂದ ರೂಪದೊಳಗೆ ಮಂದಮತಿಗಳ ವಿವರ ಮರ್ಮವನು ಅರಿಯದೆ ದ್ವಂದ್ವ ಭೇದದಿ ಗಾಢಸುತ್ತಿಹರು 2 ಹರಿಯೇ ಶ್ರೀಗುರುವಾಗಿ ಗುರುವೆ ಶ್ರೀಹರಿಯಾಗಿ ತೋರಿದನೇಕೋಮಯವಾಗಿ ಎನಗೆ ತರಳ ಮಹಿಪತಿ ಸಬಾಹ್ಯಾಂತ್ರ ಪರಿಪೂರ್ಣದಲಿ ಗುರುತವಾದನು ಹರಿಯೇ ಸಾಕ್ಷತನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿರೇವ ಪರೋ ಹರಿದೇವ ಗುರೋ ಹರಿಯೇ ಗುರುವೆಂದರವ್ಹಿರೋ ಧ್ರುವ ಗುರುಮಧ್ವಪರ್ಹೇಳಿದ ನಿಜಕೀಲು ಅರಿತುಕೊಂಬುವಾದಿದೆವೆ ಮೇಲು ಪರಮ ಭಗತರನುಭವದ ಬಾಗಿಲು ಪರಗತಿ ಸಾಧನಕಿದೆ ಮಿಗಿಲು 1 ಹರಿಗುರುವೆರಡಾಗಿ ತೋರಿತು ನಾಮವು ಅರಿಯಲರಿಯದವಾಗಿದೆ ಭ್ರಮವು ತೋರುವದೊಂದೇ ಸಜ್ಜನರಿಗಿದೇ ನೇಮವು ಅರಿಕ್ಯುಳ್ಳವರಿಗಿದೇ ಕ್ರಮವು 2 ಹರಿಗುರು ಒಂದಾಗಿ ತೋರಿತು ನಿಜಘನ ತರಳ ಮಹಿಪತಿಸ್ವಾಮಿಯ ಕರುಣ ಗುರುಭಾನುಕೋಟಿತೇಜನೆ ಪರಿಪೂರ್ಣ ತೋರುವದೊಂದಾಗಿದೆ ನಿಜಖೂನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಸ್ಮರಣೆ ಪೂರಣ ಕರತನ್ನಿ ಧ್ರುವ ಕರತನ್ನಿರೊ ವರಗುರು ಕೃಪೆಯಿಂದ ಗುರುವರ ಮೂರುತಿ ಕರುಣಾನಂದ 1 ಕರುಣಿಸಿ ನೋಡಲು ಬಾಹುದು ಪುಣ್ಯ ಶರಣ ಜನರಿಗಿದು ತಾರ್ಕಣ್ಯ 2 ತಾರ್ಕಣ್ಯಂಬುದು ತರ್ಕರಹಿತ ಸರ್ಕನೆ ತಿಳಿವದು ತನ್ನೊಳು ಗುರುತ 3 ಗುರ್ತವಾಗಲು ನಿಜ ಹಿತಾರ್ಥ ಅರ್ತವಗಿದು ಸ್ವಸುಖ ಪರಮಾರ್ಥ 4 ಪರಮಾರ್ಥವು ಪರಗತಿ ಸಾಧನ ಪರಲೋಕಕೆ ಐದುವ ಸೊಪಾನ 5 ಸೋಪಾನವೆ ಸುಲ್ಲಭ ಸುಪಥ ಉಪಾಯದಲಿ ತಿಳಿಯಲು ಸ್ವಹಿತ 6 ಸ್ವಹಿತ ಮಾರಿಕೊಂಬುದೇ ಸುಖ ಸಾಹ್ಯ ಮಾಡುವ ಶ್ರೀ ಗುರುಕುಲತಿಲಕಾ 7 ಶ್ರೀಗುರು ಸೇವೆಯ ಮಾಡಿರೊ ಬ್ಯಾಗ ಜಗದೊಳಗಿದು ಮಹಾ ಪುಣ್ಯದ ಯೋಗ 8 ಯೋಗವೆ ಮಹಾ ನಿಜ ಭಕ್ತರ ಪ್ರಾಣ ಸುಗಮ ಸುಪಥ ಸದ್ಗತಿ ಸಾಧನ 9 ಸಾಧನ ಪಡೆವದು ಗುರುದಯ ಕರುಣ ಸದಮಲ ಸುಖ ಸುಜ್ಞಾನದ ಸ್ಪುರಣ10 ಸ್ಪುರಣ ಸುಫಲಿತ ಸುಜನರ ಹೃದಯ ಸುರ ಮುನಿ ಜನರಾನಂದದ ಉದಯ 11 ಉದಯವಾಯಿತು ಮಹಿಪತಿ ಮನದೊಳಗೆ ಸದೋದಿತವಾಯಿತು ಗುರುಕೃಪೆಲೆನಗೆ 12 ಎನ್ನೊಳು ದೋರಿತಾನಂದದಲಹರಿ ತನ್ನಿಂದಲಿ ತಾನೊಲಿದ ಶ್ರೀ ಹರಿ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಹರಿ ಎನ್ನಿ ಹರಿವದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲುಮೇಲು ಧ್ರುವ ಮೂಢಗೆ ಉಪಾಯ ಹೇಳಿದರೆ ತಿಳುವದೆ ತಿಳುವದೆ ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ 1 ಬಿಸಲು ಬೀಳುದೆ ಬೀಳುದೆ ಗೂಢ ಗುರುವಿನ ಮಾತಿದು ನಾಡಿಗೆ ತಿಳುವದೆ 2 ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ ತುಸು ಝರಿ ಇಲ್ಲದೆ ಬಾವಿಲಿ ನೀರು ಸೂಸುದೆ ಸೂಸುದೆ 3 ಹಸಗೆಟ್ಟಹ್ಯ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ 4 ಮೀಸಲ ಮನ ಒಂದಾದರೆ ಸಾಕು ತಿಳಿಕೊಳ್ಳಿ ತಿಳಿಕೊಳ್ಳಿ ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ 5 ಲೇಸಿನ ನಿಜಸುಖ ನೆರೆಗೊಳ್ಳು ಮಹಿಪತಿ ನಿನ್ನಲ್ಲಿ ನಿನ್ನಲ್ಲಿ ಹೇಸಿ ಮುಖದೋರದೆ ಹೋಗುವುದು ಭವದ ತಳ್ಳಿ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ ಧ್ರುವ ಸತ್ಯವೆಂದೆನಬ್ಯಾಡ ದೃಶ್ಯ ಮಿಥ್ಯಾಮಾಯದ ಮೋಡ ನಿತ್ಯವಾಗಿಹದ ಸತ್ಯ ಸುಪಥ ಕೂಡೊ 1 ಹೊನ್ನು ಹೆಣ್ಣಿನ ಕೂಡ ನೀ ದಣ್ಣನೆ ದಣಿಬ್ಯಾಡ ಸುಣ್ಣ ಸಾರಿಸಿ ಮ್ಯಾಲೆ ಬಣ್ಣದೋರುವದಕ್ಕೆ ಕಣ್ಣಗೆಟ್ಟಿರಬ್ಯಾಡ ಮಣ್ಣೆÀಂದರಿಯದೆ ಕಣ್ಣಗೆಟ್ಟಿರಬ್ಯಾಡ 2 ಗುಹ್ಯಗೂಢವ ತಿಳಿಯೊ ನಾ ದೇಹವೆಂಬುದನಳಿಯೊ ತಿಳಿದು ನೋಡೊ ಶ್ರೀ ಹರಿಯ ಮಹಿಮೆ ಸೋಹ್ಯ ತಿಳಿದು ನೋಡೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು