ಒಟ್ಟು 453 ಕಡೆಗಳಲ್ಲಿ , 75 ದಾಸರು , 416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆನಗೆ ಬುದ್ಧಿ ಬಂದಿತೋ ಹರಿಯೆ ಇಂದೀವರಾಕ್ಷ ನೀನೆ ಗತಿ ದೊರೆಯೆ ಪ. ಕಣ್ಣಿದಿರಲಿ ಕಂಡು ಕಾಲಗತಿಗಳನ್ನು ತನ್ನ ಸಂಸ್ಥಿತಿ ಮುಂದೆಂತಾಹುದನು ಚೆನ್ನಾಗಿ ಗ್ರಹಿಸದೆ ಚಪಲ ಚಿತ್ತದಿ ಗೃಹ ಸನ್ಮಹದಲಿ ಮನವನಿಟ್ಟು ಬಳಲುವೆ 1 ಸಾಗದ ಕಾರ್ಯವ ಸುಲಭವೆಂದೆಣಿಸಿದ- ರಾಗದು ಹಗಲಿರಳೊರಳಿದರು ನಾಗಶಯನ ನೀನು ನಿರ್ಣಯಿಸಿದ ರೀತಿ ಯಾಗುವದೆಂಬುದನರಿಯದೆ ಮರುಳಾದೆ 2 ಇಂತಾದ ಮ್ಯಾಲೆ ಶ್ರೀಕಾಂತ ನೀ ದೊರಕುವ- ದೆಂತು ಸಂಘಟ್ಟಿಪದೋ ನಾನರಿಯೆ ಕಂತುಜನಕ ವೆಂಕಟೇಶನೆ ಮಾನಸ ಭ್ರಾಂತಿಯ ಬಿಡಿಸು ನಿಶ್ಚಿಂತೆಯಿಂದಿರಿಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೋ ಆಗುವುದಕೆ ಈಗ್ಯಾಕೆ ವ್ಯಾಜ್ಯ ಪ ಮುಂದೆ ನೋಡಿ ನಡಿಯದಿರೆ ಮುಕ್ತಿ ಪೂಜ್ಯ ಅ.ಪ ಬ್ರಹ್ಮಗೆ ಜೀವತ್ವ ಯಾವಾಗ ಬಂತು ನಮ್ಮೊಳಗೆ ಗೊತ್ತಿಲ್ಲದ ಭ್ರಾಂತು 1 ಮಾಯಾ ಮಿಥ್ಯ ಸತ್ಯ ನಾವು ನೋಡಿಕ್ಕೊಂಡರೆರಡು ಅಗತ್ಯ 2 ಗುರುರಾಮವಿಠಲ ಇದರ ಕುರುಹಲ್ಲಾ 3
--------------
ಗುರುರಾಮವಿಠಲ
ಎಂದು ನೀ ನೀಡುವಿಯೊ ಮನಶಾಂತಿ ಗೋವಿಂದನೆ ಎನಗೆ ಒಂದೂ ತೋರದೆ ಕವಿದಿಹುದೊ ಭ್ರಾಂತಿ ಪ ಒಂದು ಘಳಿಗೆ ನಿನ್ನ ಪೊಗಳುವೆನೆಂದರೆ ಬಂದೊದಗುವುದೊ ಕುಂದು ಸಹಸ್ರವು ಅ.ಪ ಅನುದಿನ ಗಣನೆಗೆ ಬಾರದ ನುಡಿಗೆ ಕೊನೆಮೊದಲುಗಳಿಲ್ಲದೆ ದಿನಗಳು ಕಳೆದುವು ದುರ್ವಿಷಯದಲಿ ಎಣೆಯಿಲ್ಲದೆ ಎನ್ನ ಮನದಲಿ ಬೇಸರ ಜನಿಸಿ ಕೊರೆಯುತಿದೆ ಅನವರತದಿ ನಿನ್ನ ಮನನದಿ ನಲಿಯಲು 1 ಮರುಳು ಮೋಸಗಳಲಿ ಚತುರತೆಯುಳ್ಳ ದುರುಳರು ಸಂತತ ಮುಖ ವರಳುವ ತೆರದಲಿ ಸಡಗರದಿಂದ ಒರಲುವ ವಚನಗಳ ತಿರುಳುಗಳೆಲ್ಲವನರಿತು ಮನ ತೆರಳದೆ ಸಹಿಸುತ ನರಳುತಿರುವೆನೊ2 ಬಗೆ ಬಗೆ ಮಾಡುತಲಿರುವ ದುರಾಶೆಯಗಲಿದೆ ಮನವನ್ನು ಹಗರಣ ಮಾಡಿದೆನೋ ಜೀವನವ ನಗೆಗೀಡಾದೆನು ನಾ ಹಗೆ ಪಡ್ವರ್ಗವನೊಗೆದು ತವಚರಣ ಯುಗಳದಲಿ ಮನವು ಪ್ರಸನ್ನವಾಗುವಂತೆ 3
--------------
ವಿದ್ಯಾಪ್ರಸನ್ನತೀರ್ಥರು
ಎನಗೊಬ್ಬರು ಇಲ್ಲಾ ನೋಡಿ ಸಿರಿನಲ್ಲ ಪ ಮನದಿ ಯೋಚಿಸಲು ತಂದೆ ತಾಯಿಸತಿ ತನಯ ಸಹೋದರ ಮಿತ್ರರೆಂಬುವರು ಅ.ಪ ಒಬ್ಬರಾದರೂ ಇವರಲಿ ಇದ್ದರೆ ಹಬ್ಬವಾಗಿ ಸಂತೋಷ ಪುಟ್ಟುವುದು ತಬ್ಬಲಿಯಾದೆನು ಸಂಸ್ಮರಣವೆಂಬ ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ1 ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ- ಯಾರ ಕೇಳಿ ಪರಿಹರಿಸುವರಾರು 2 ರಾಯ ತಂದೆ ಧರ್ಮವೆ ಸೋದರರು ಸತಿ ನೋಯಿಸದಿರುವುದು ಮಿತ್ರನು ಇವರೊಳು 3 ಈ ಬಂಧುಗಳುಳ್ಳವಗೆ ನಿರುತವು ಮ- ಹಾಭಾಗ್ಯವುಯಿಹಪರ ಸೌಖ್ಯವು ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು ವೋ ಭಗವಂತ ಮಹಂತಾನಂತನೆ 4 ಹೊರಗಿನವರ ಬಾಲ್ಯದಿ ಕಾಣದೆ ಕರೆ ಗುರುರಾಮವಿಠಲ ಹೊರವೊಳಗೂನೀ ನಿರುವೆ ಕರುಣಿಸೈ ಸರ್ವವು ನೀನೆ 5
--------------
ಗುರುರಾಮವಿಠಲ
ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಪ ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ 1 ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ2 ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ 3
--------------
ಕನಕದಾಸ
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1 ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2 ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3
--------------
ಚಿದಾನಂದ ಅವಧೂತರು
ಎಷ್ಟು ಪೊಗಳಿದರೇನೀ ಭ್ರಷ್ಟಮಾನವರು ಪಾದ ಪ ಸ್ವಾಭಿಮಾನ ನೀಗಿ ದೇಹಾಭಿಮಾನ ತೊರೆಯದೆ ಪ್ರಭುನಿನ್ನ ನಿಜಲೀಲೆ ಸೊಬಗು ತಿಳಿಯುವುದೆ 1 ಭ್ರಷ್ಟ ಭ್ರಾಂತಿಗಳಳಿದು ದುಷ್ಟನಡೆ ನೀಗದೆ ಶಿಷ್ಟರೊಡೆಯ ನಿನ್ನ ನಿಜಗುಟ್ಟು ತಿಳಿಯುವುದೆ 2 ವಿಷಯವಾಸನೆ ನೀಗಿ ಹಸನುಮಾಡದೆ ಮನವ ಶ್ರೀಶ ಶ್ರೀರಾಮ ನಿನ್ನ ದಾಸತ್ವಬಹುದೆ3
--------------
ರಾಮದಾಸರು
ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ ಇರು ಇರುತೆಲ್ಲ ನನ್ನದೆಂದಿ ಮರೆವಿನ ಆಲಯದೊಳು ನಿಂದಿ ಕರುಣವಿಲ್ಲದೆತುಸು ಹೆಡತಲೆಮೃತ್ಯು ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ 1 ತನುಜನರು ಇವರು ಧನಕನಕಿರುವತನಕ ಹಿತರು ಜನಕಜನನಿಯರು ಕೊನೆಗೆ ಸಂಗಡ ಬರರ್ಯಾರು ಕನಿಕರವಿಲ್ಲದೆ ಕಾಲದೂತರು ಘನಬಾಧೆಪಡಿಸಲು ಬಿಡಿಸರೋರ್ವರು 2 ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು ಪಾಮರ ಸಂಸಾರ ಕಾಮಿಸಿ ಕೆಡಬೇಡೇಲೆ ಮಳ್ಳ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಭಜಿಸಿ ಭವಗೆಲಿದು ನೀ ಬಾಳೋ3
--------------
ರಾಮದಾಸರು
ಏತಕೆ ಸಂತತ ಚಿಂತಿಸುವೆ ಪ ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ ಹಾನಿ ವೃದ್ಧಿಗಳು ತಾನಾಗಿ ಬರುವುದು ಏನೇನು ಮಾಡಲು ಬಿಡಲೊಲ್ಲದು ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ 1 ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ ಸಾಹಸ ಮಾಡುವುದೇನು ಫಲ ಊಹಿಸಿ ನೋಡಲು ಭ್ರಾಂತಿಯದಲ್ಲವೆ 2 ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ಗುರುರಾಮವಿಠಲನು 3
--------------
ಗುರುರಾಮವಿಠಲ
ಏನ ಮಾಡಲಿ ಎನ್ನ ರೋಗಕೆ ರಾಮ ಧ್ಯಾನದಮೃತವುಂಡು ಪೋಗ ಬೇಕಲ್ಲದೆ ಪ ಗೂಡಿನೊಳಗೆ ಜರೆ ಮುತ್ತಿತು ಅದಕೆ ಬಲ ಗೂಡಿ ರೋಗವು ಮತ್ತೆ ಪುಟ್ಟಿತು ಕಾಡಿನೌಷಧಿಯ ನಿತ್ಯ ಮಾಡುವ ಜಪತಪ ನಿಂತಿತು 1 ಯಾರಾರೇನೆಂದುದೆಲ್ಲವ ಮಾಚಿತು ಅದು ನಡೆಯೆಕಾಲುಬತ್ತಿತು ಶರೀರದೊಳಗೆ ಕ್ಷೀಣವಾಯಿತು 2 ವಾಂತಿ ಭ್ರಾಂತಿಗಳೆರಡಾಯಿತು ರೋಗ ಕಮಲಕಂಡಿತು ಕಾಲ ಬಂತೊ ಎಂಬಂತೆ ಮನವಾಯಿತು 3 ಹಿಂದೆ ಮಾಡಿದ ಪಾಪ ಬಂದಿತು ಈಗ ಮನದಿಹಂಬಲವಾಯಿತು ಇನ್ನು ಎಂದನೆಂದರೆ ದನಿ ಕುಂದಿತು 4 ಕಾಮನಯ್ಯನ ಚಿಂತೆ ಬಂದಿತು ರೋಗ ನಾಮಸ್ಮರಣೆಯಿಂದ ಹೋಯಿತು ಕ್ಷೇಮ ಕುಶಲಕೆಲ್ಲ ಭೀಮನ ಕೋಣೆ ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು 5
--------------
ಕವಿ ಪರಮದೇವದಾಸರು
ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1 ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2 ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3 ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4 ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5 ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ವಿನೋದವಿದು ನಮ್ಮ ಶ್ರೀ ನಿಲಯನ ಗುಣಗಾನ ಮಾಡುವುದು ಪ ಮಾನಸ ಮಂದಿರದಲಿ ಶ್ರೀ ಕೃಷ್ಣನ ಕಾಣಲು ಬಯಸುವ ಜನಕೆ ವಿಧಾನ ಅ.ಪ ಶಾಸ್ತ್ರ ವಿಚಾರ ಶ್ರೋತೃ ವಿಹಾರ ಶ್ರೋತೃ ಜನಕೆ ಇದು ಪರಮಾಧಾರ1 ಶ್ರೀಶನ ನೋಟ ಭೂಸುರ ಕೂಟ ದಾಸ ಜನಕೆ ಇದು ಭೂವೈಕುಂಠ 2 ವೇದ ಸುಘೋಷ ವಾದ್ಯದ ಹರ್ಷ ಸಾಧುಜನಕೆ ಇದು ಬಲು ಸಂತೋಷ 3 ಸಿಕ್ಕಿತು ಕಾಂತಿ ಹೊಕ್ಕಿತು ಶಾಂತಿ ಭಕ್ತ ಪ್ರಸನ್ನನು ಬಿಡಿಸಿದ ಭ್ರಾಂತಿ4
--------------
ವಿದ್ಯಾಪ್ರಸನ್ನತೀರ್ಥರು
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಏನೆಂದು ಬಣ್ಣಿಸುವೆನು ಗುರುವಿನ ನಾನು | ತಾನಂದವರಿಗಿನ್ನು ಸ್ವಾನಂದ ಸುಖವ ನೀಡುವಾ ಪ ತಾಯಿಯಂಬೆನೆ ಮೋಹದೀ | ಬಾಲಕ ಧೃವನಾ | ತಾಯಿಗಾಯ್ದಳೆ, ಸ್ನೇಹದಿ ಜನಕನೆಂಬೆÉನೆ | ನ್ಯಾಯದಿ ಪ್ರಲ್ಹಾದನ ಜನಕ ಕಾಯ್ದನೆ ನೋಡಮ್ಮಾ 1 ಬಂಧುಯಂಬೆನೆ ಜಗದೊಳು ವಿಭೀಷಣನ್ನಾ | ಬಂದು ಕಾಯ್ದನೆ, ಇಳೆಯೊಳು ಆಪ್ತನೆಂಬೆÉನೆ | ಸದು ವಿಗ್ರಹದಿ ಗಜೇಂದ್ರರ ನಾಪ್ತರು ಕಾಯ್ದರೇ 2 ಇಂತು ಸಂಬಂಧ ಸ್ನೇಹದಾ | ಸಾಸಿರ ಮಡಿಯಾ | ಸಂತತ ಕೃಪೆಯಾ ಬೀರಿದಾ | ಮಹಿಪತಿ ಕಾಯಾ | ಪಂಥವರಿಯದಾ ಪರಮ ಭ್ರಾಂತನಾನು | ದ್ಧರಿಸಿದ ನೆನ್ನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳೇಳೇಳೆಲೆ ಮಾಮ | ಆರೋ ರೇಳೋದು ಸುಳ್ಳು ಬಂತು ಕ್ಷಾಮ ಪ ಹಾಳಾಗಿ ಹೋಯ್ತು ಮಳೆಬಳೆ ಕಾಳೆಲ್ಲ ಕಸವಾಯಿತು ಅ.ಪ ಭೂಮಿ ಒಕ್ಕಲಮಗನದು ಭೂಮೆಮ್ಮನ ಮಕ್ಕಳು ಒಕ್ಕಲಿಗರು ಭೂಮಿ ಬೆಳೆದರೆ ಅರ್ಧವನ್ನು ಬ್ರಾಹ್ಮಣರಿಗೇಕೆ ಕೊಡಬೇಕು 1 ಆರೋರು ಹೊಲ ಮಾಡಬಾರದು ಮಾಡಿದರೆ ಬಲು ಪಾಪ ಮಾರಲಿ ನಮಗೆ ಮೂರಕ್ಕೆ ನಾಲ್ಕಕ್ಕೊ ಏನಲಾ ಯೀರ್ಕೆಂಪ 2 ಎರವು ಇಸ್ತೆ ಚೇಸ್ತಾನು ಒದ್ದಂಟೆ ವಾಡೆ ಪೋನಿ ವಲ್ಲ ಬಾ ಪ್ನೋಳ್ ಚೇನು 3 ಹೊಲಕುಯಿದು ಕಟ್ಟುವಾಗ ಛಲದಿ ಹಾರುವೈಯ ಬೇಗ ಒಕ್ಕಲಿಗನ ಕಾಯಬೇಕಂತಾನೆ ಬಲು ಭ್ರಾಂತನು ತಾನೆ4 ಕೊಳಗ ಕೊಡÀುವೆವೇಳು ನಮ್ಮಲ್ಲಿ ನಡೆಯದು 5 ಕಂದಾಯ ಕೊಡುವಮಟ್ಟಿಗೆ ಕಾಳುಕೊಟ್ಟರೆ ಸಾಕು ಮುಂದಲು ಬಾರಿಗೆ ಸಾವೇ ಹಾಕಿ ಮೂಗಳಕ್ಕೆ ಗುತ್ತಿಗೆಬೇಕು 6 ನಾವು ತಿಂದು ಮಿಕ್ಕದರೊಳಗೆ ಹಾರೋರಿಗೆ ಸರಿಪಾಲು ಕಾಲ ಕಳ್ವೋದೆ ಮೇಲು 7 ಹೆಂಡಿರು ಹಿಟ್ಟು ಹೊರಲಿಲ್ಲ ಈ ಪುಂಡುತನ ನಮ್ಮಲಿ ಸಲ್ಲಾ ಭಂಡಿಸೌದೆ ಬೇಕೆಂದು ಬರುತಾನೆ ಭಲೆ ಭಲೆ ಹಾರೋನೆ 8 ನಮ್ಮದುಕೇಳಲೆ ಇನ್ನು ಉಳುಮೆಯಿಲ್ಲ ಹಾರುವೈಯಂಗೆ ರಾಜಿನಾಮೆ ಕೊಡಲಿ ಬಿಡಲೆ 9 ಎಷ್ಟು ಧರ್ಮದೊಳಿದ್ದುರು ರೈತರು ಕಷ್ಟಪಡುವರು ನಾವೆ ಬಿಟ್ಟಿ ಹಾರುವಯ್ಯ ಬಲ್ಲೆನೆ ಗುರುರಾಮವಿಠಲಗಾಗಲಿ ಸೇವೆ 10
--------------
ಗುರುರಾಮವಿಠಲ