ಒಟ್ಟು 698 ಕಡೆಗಳಲ್ಲಿ , 99 ದಾಸರು , 616 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ ಬಡಜನರ ಪರ್ವತ ಒಡಲ ಆಸೆಯ ಕೊಡುವೆನೆಂದು ನುಡಿಯಲವರು ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ ಕಡೆಗೆ ನೋಯ್ವರು 1 ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ ಖೋಡಿದೈವಿನಾ ಬೇಡುವಂತೆ ನಿನ್ನ ಬೇಡಿಕೊಂಬೆ ಗಾಢಮಹಿಮ ನೋಡದಿರೊಳಿತಿತ್ತಾಡಿದ್ಯಾಕ 2 ರೂಢಿಗಧಿಕನೆ ದಯವ ಮಾಡು ಎನ್ನೊಳು ಮೂಢತನದಿ ನಾ ಮಾಡಿದಂಥ ಕೇಡುಗುಣಗಳೆಣೆಸದೆನ್ನೊ ಳಾಡಿದ್ವಾಕ್ಯ ನೀಡು ಶ್ರೀರಾಮ 3
--------------
ರಾಮದಾಸರು
ಇಂತಿದೆ ಬ್ರಹ್ಮ ಇಂತಿದೆ ಅದುಎಂತೋ ಇಹುದು ಎಂದು ಚಿಂತೆ ಮೂಡಲದೇಕೆ ಪ ಎರಡು ಕೈಗಳಿವೆ ಎರಡು ಕಾಲ್ಗಳಿವೆಎರಡು ಕಣ್ಣುಗಳು ಮತ್ತು ಎರಡು ಕಿವಿಗಳಿವೆಎರಡಕ್ಕೆ ಠಾವಿಲ್ಲ ಏಕವೇ ತಾನಿದೆಎರಡು ಎಂಬುದು ಮಾತಿನಿಂದೆರಡಾಗಿದೆ 1 ತಾನೆ ಬೇಡುತಲಿದೆ ತಾನೆ ಉಣ್ಣುತಲಿದೆತಾನೆ ತನ್ನ ಬಾಯ ತೊಳೆದುಕೊಳ್ಳುತಿದೆತಾನೆ ನಡೆಯುತಿದೆ ತಾನೆ ಮಲಗುತಿದೆತಾನೆ ಕುಳ್ಳಿರ್ದು ಹಾಡಿ ಪಾಡಿ ನಗುತಲಿದೆ 2 ಒಬ್ಬನೇ ಎನಿಸಿದೆ ಒಬ್ಬನೇ ತೋರಿದೆಒಬ್ಬನೇ ಆಗಿ ಆಡುತ್ತಲಿದೆಒಬ್ಬ ಚಿದಾನಂದ ಗುರುವರ ತಾನಿದೆಒಬ್ಬನೇ ಒಬ್ಬನೇ ಒಬ್ಬನೇ ಇದೆ ಇದೆ 3
--------------
ಚಿದಾನಂದ ಅವಧೂತರು
ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ಬದಲು ನಾನೊಲ್ಲೆನೊ ವಿದಿತ ವೇದ್ಯ ಪ ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ ಕುಣಿ ಕುಣಿವೆನು ನಿನ್ನ ಜನರೆಂದರೆ ಗುಣತ್ರಯ ವಾರಣ ನಿನ್ನ ವಾರುತಿಯಿರೆ ಒಣ ಹರಟೆಗಳ ನಾ ಕೇಳಲೊಲ್ಲೆ 1 ನೀಚ ಜನರಂಗಳ ಸಂಗವ ಕೊಡದಿರು ವಾಚದಿಗನ್ಯರಿಗಾಲ್ಪರಿಸಬೇಡ ಸೂಚಿಸು ನಿನ್ನಯ ಗುಣಗಣಂಗಳೆನೆ ನಾ ಯಾಚಿಪೆ ಇದನೆ ಇದನೆ ಮುರಾರೆ 2 ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು ಕಾಸು ಬಾಳದು ಕೇಳು ಕರುಣಾಬ್ಧಿಯೆ ತಾಸು ಒಂದಾದರು ಅವನೆ ಸುಜೀವಿಯೊ ವಾಸುದೇವವಿಠಲ ನಿನ್ನವರವನೊ 3
--------------
ವ್ಯಾಸತತ್ವಜ್ಞದಾಸರು
ಇಂದಿರಾರಾಧ್ಯನೆ ಬಂದು ನಿಲ್ಲೊ ಪ ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ- ನೆಂದು ಕರೆಯಲೋ ಗೊವಿಂದ ಅ.ಪ ಜಲದೊಳಾಡುವ-ಕಲ್ಲಹೊರುವ ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ ವನಳಿವಗೋವನೆ ಕಾಯ್ದ ಮರೆವ ನಿನ್ನಯ ರೂಪವಾ ಸಲಿಲ ಹೊಕ್ಕು ಅಸುರನ ಸಂಹರಿಸಿ ಕಲಕಿಶರಧಿಯ ಸುಧೆಯನು ತರಿಸಿ ನೆಲಗಳ್ಳನ ಮದವನೆ ಮರ್ದಿಸಿ ಚೆಲುವಚೆಳ್ಳುಗುರಿನಿಂದುದರವ ಛೇದಿಸಿ ಸುಲಭದಿಂದ ಶುಕ್ರನ ಕಣ್ಮರಿಸಿ ಬಲುಕೊಬ್ಬಿದ ಕ್ಷತ್ರಿಯರನೊರೆಸಿ ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ ಲೀಲೆಯಿಂದ ವ್ರಜನಾರಿಯರೊಲಿಸಿ ಸಲೆದಿಗಂಬರರೂಪವ ಧರಿಸಿ ಮಾಧವ 1 ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ ಎಲ್ಲವೇದವನುದ್ಧರಿಸಿ ವಾರಿಧಿಯಲಿ ತಳೆದು ಅಮೃತಮಥನಕೆ ಶಿಲೆಯ ಝಲಿಸಿ ನಿಲಸಿದೆ ನಿಜಕೆ ಧರಣಿಯ ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ ಬಿಲ್ಲನೆತ್ತಿ ವರಿಸಿದೆ ಸೀತೆಯ ಮಲ್ಲರ ಮಡುಹಿ ತೋರಿದೆ ಚರಿಯ ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ 2 ನಿಗಮತಂದಿತ್ತೆ ನಗವಾನೆ ನೆಗವಾ ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ ಎಂದೆನಿಸಿ ಮೆರೆವ ನಿನ್ನಯ ರೂಪವಾ ಪೊಗಲಳವೇ ಭೂಧವ ನಿಗಮಕಾಗಿ ನೀ ತಮನ ಮರ್ದಿಸಿ ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ ಹಗೆಯ ಹಿರಣ್ಯನ ಅಸುವನೆ ಹರಿಸಿ ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ ಆ ಗರ್ವಿಸಿದರಸರ ಪರಶುವಿಂದ ವರೆಸಿ ಯಾಗರಕ್ಷಣೆಗೆ ನೀ ರಕ್ಷಕನೆನಿಸಿ ನೀಗಲು ಕುರುಕುಲ ಕಲಹವೆಬ್ಬಿಸಿ ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ ಬೇಗ ಬಂದು ಹಯವೇರಿ ಮೆರೆವ- ಬೇಗದಿ ತೋರೋ ಶ್ರೀಪಾದವಾ 3
--------------
ಉರಗಾದ್ರಿವಾಸವಿಠಲದಾಸರು
ಇಂದಿರೇಶನು ಮಣಿನಂದಿನೀ ತೀರದಿ ಚೆಂದದಿ ಕೊಳಲೂದುತಿರಲು ಹರಿ ಆ- ನಂದದಿ ಕೊಳಲೂದುತಿರಲು ಅಂಬುಜಾಕ್ಷಿಯರು ಕೇಳತಿ ಮೋಹತನದಿ ಗೋ- ವಿಂದನಿದ್ದಲ್ಲೆ ನಡೆದರು 1 ಕರ ಸಡಿಲ ಬೀಳುತಲಿರೆ ಪರವಶವಾಗಿ ನಾರಿಯರು ದೇಹ ಪರವಶವಾಗಿ ನಾರಿಯರು ಕರುಗಳ ತೊಟ್ಟಿಲೊಳಗೆಯಿಟ್ಟು ಪಾಡುತ ಭರದಿಂದ ತೂಗಿ ನಡೆದರು 2 ಉಕ್ಕುವೊ ಹಾಲಿಗೆ ಉರಿ ಮಾಡಿ ಮತ್ತಿಷ್ಟು ಮಕ್ಕಳ ಕಣ್ಣಿಗೆ ಬಿಗಿದು ಅಳುವೊ ಕೃಷ್ಣನಿದ್ದಲ್ಲೆ ನಡೆದರು 3 ಕುಂಭಿಣಿಪತಿ ನೋಡೋ ಸಂಭ್ರಮದಿಂದಲಿ ಅಂಬರವನೆ ಬಿಟ್ಟು ಕೆಲರು ತಾವು (ಉ) ಟ್ಟಂಬರವನೆ ಬಿಟ್ಟು ಕೆಲರು ಕಂಚುಕ ಕಬರಕ್ಕೆ ಸುತ್ತಿ ನಡೆದರು 4 ಪಂಚಭಕ್ಷ ಪರಮಾನ್ನ ಘೃತವು ಕ್ಷೀರ ಪತಿಸುತರಿಗೆ ಉಣ ಬಡಿಸಿ ತಮ್ಮ ಮತಿಭ್ರಾಂತರಾಗಿ ಮ್ಯಾಲೆಡೆಗಳನಿಕ್ಕದೆ ಸತಿಯರು ಸಾಗಿ ನಡೆದರು 5 ಪಂಚರತ್ನದ ಹಾರಪದಕ ಕಠಾಣಿಯ ಟೊಂಕಕ್ಕೆ ಸುತ್ತಿ ನಾರಿಯರು ಸರವ ಟೊಂಕಕ್ಕೆ ಸುತ್ತಿ ನಾರಿಯರು ಪಂಚಮುಖದ ಪಟ್ಟಿ ಕಂಠದಲ್ಲಿಟ್ಟರು ವೈ- ಕುಂಠಪತಿಯ ನೋಡೋ ಭರದಿ 6 ಕಂಕಣ ಬಳೆ(ಡೋ)ರ್ಯ ಕಾಲಿನಲ್ಲೇರಿಸಿ ಕಿಂಕಿಣಿ ಕಿರುಗೆಜ್ಜೆ ರುಳಿಯು ಕಾಲ ಕಿಂಕಿಣಿ ಕಿರುಗೆಜ್ಜೆ ರುಳಿಯು ಪಂಕಜಾಕ್ಷೇರು ನಳಿತÉೂೀಳಿನಲ್ಲೇರಿಸಿ ಅ- ಲಂಕಾರವಾಗಿ ನಡೆದರು 7 ಮುತ್ತಿನ ಬಟ್ಟರಳಲೆ ಚಂದ್ರರಾಗಟೆ ಕಟ್ಟಿದರೊಂದೊಂದು ಕಿವಿಗೆ ಚೌರಿ ಅರಳು ಮಲ್ಲಿಗೆ ಮಾಲೆ ದಿಕ್ಕಿ ಗೊಂದೊಂದುದುರುತಲಿ 8 ವಾಲೆ ಮೂಗುತಿ ವೈಯಾರದ ಬಾವುಲಿ ಕೂ- ದಲಿಗೊಂದೊಂದು ಸಿಗಿಸಿ ತಮ್ಮ ಕೂ- ದಲಿಗೊಂದೊಂದು ಸಿಗಿಸಿ ಮಾರನಯ್ಯನ ಮೋರೆ ನೋಡಲು ಮದ- ವೇರಿದ ಗಜದಂತೆ ನಡೆದರು 9 ಹಲ್ಲಿಗೆ ಕುಂಕುಮ ಗಲ್ಲಕ್ಕೆ ಕಾಡಿಗೆ ಚೆಲ್ವ ಹಣೆಗೆ ಅರಿಷಿಣವ ತೀಡಿ ಚೆಲ್ವ ಹಣೆಗೆ ಅರಿಷಿಣವ ಫುಲ್ಲಾಕ್ಷದಲ್ಲಿ ಕಸ್ತೂರಿ ತಿಲಕವನ್ನಿಟ್ಟು ಗೊಲ್ಲ ಸತಿಯರು ನಡೆದರು 10 ಭಕ್ತಿಭಾವದಿ ಚಿತ್ತ ಪರವಶವಾಗಿದ್ದ ಮಿತ್ರೆಯರನೆ ನೋಡಿ ನಗುತ ಬರುವೊ ಮಿತ್ರೆಯರನೆ ನೋಡಿ ನಗುತ ಕತ್ತಲೊಳಗೆ ದಿಟ್ಟತನದಿಂದ ಬರುವುದಿ- ದಾಶ್ಚರ್ಯವೆಂದ ಶ್ರೀಕೃಷ್ಣ 11 ಏನು ಕಾರಣ ನೀವು ಬಂದಿರಿ ವನಕಿನ್ನು ಭಾನು ತಾ ಉದಿಸದ ಮುಂದೆ ಅರುಣ ಮಾನದಿಂದಲಿ ಮನೆಗಳಿಗೆ ಹೋಗಿರಿ ಎಂದು ದಾನವಾಂತಕ ಕೃಷ್ಣ ನುಡಿದ 12 ದೇವಾಧಿದೇವ ದೇವಕ್ಕಿ ಸುತನೆ ಕೃಷ್ಣ ತ್ರಿಲೋಕ್ಯಾಧಿಪತಿ ನಿನ್ನ ಬಿಟ್ಟು ಕೇಳೊ ತ್ರಿಲೋಕ್ಯಾಧಿಪತಿ ನಿನ್ನ ಬಿಟ್ಟು ಮಾನವೆಲ್ಲಿಹುದ್ಹೇಳೊ ಮಾವನಾಂತಕನಾದ ಶ್ರೀನಾಥ ರಕ್ಷಿಸೊ ನಮ್ಮ 13 ರಂಗನೆ ನಿನ್ನಂಗಸಂಗವ ಬೇಡುವ ಅಂಗನೇರಿಗೆ ದಯ ಮಾಡೊ ನೀ ಗೋ- ಪಾಂಗನೇರಿಗೆ ದಯ ಮಾಡೊ ಕಂಗಳ ತೆರೆದು ಕಟಾಕ್ಷದಿ ನೋಡುತ ಇಂದೀ ಜಲಕ್ರೀಡೆನಾಡೊ 14 ಭಂಗಾರಾಭರಣದಿ ಕುಂದಣವಿಟ್ಟಂತೆ ಚಂದ್ರ ತಾರದಲ್ಲಿದ್ದಂತೆ ಹರಿ ತಾ ಚಂದ್ರ ತಾರದಲ್ಲಿದ್ದಂತೆ ಮಂದಗಮನೆಯರ ಮಧ್ಯ ಆಡುತ ಗೋಪೀ ಕಂದ ದೃಷ್ಟಿಗೆ ಮರೆಯಾದ 15 ಜಾಜಿ ಮಲ್ಲಿಗೆ ಸಂಪಿಗೆ ಶಾವಂತಿಗೆ ಕಮಲ ಕ್ಯಾದಿಗೆಯೆ ಕಮಲ ಕ್ಯಾದಿಗೆಯೆ ನೀವಿಲ್ಲೆ ಕಂಡಿರ ಯಾದವ ಕೃಷ್ಣನ ತೋರೆ ತೋರೆಂದ್ವೊದರುತಲಿ 16 ಕೆಂದಾವರೆ ಕೆಲದಲ್ಲಿದ್ದ ತಾವರೆ ಕುಂದಕುಸುಮ ಎಳೆ ತುಳಸಿ ತೋರೆ ಕುಂದಕುಸುಮ ಎಳೆ ತುಳಸಿ ಅಂಬುಜನಾಭನಾಲ್ಪರಿದುಡುಕುತಲಿರೆ ಕಂಡರ್ವೊಂದರವಿಂದ ನಖವ 17 ವಂಚಿತಳಾಗಿದ್ದ ವನಿತೆಯ ಮುಖ ನೋಡಿ ಚಂಚಲಾಕ್ಷನ ಸುದ್ದಿ ಕೇಳಿ ತಾವು ಚಂಚಲಾಕ್ಷನ ಸುದ್ದಿ ಕೇಳಿ ಭ್ರಾಂತರಾಗ್ವನದಿ ಶ್ರೀಕಾಂತನ ಸ್ತುತಿಸಲು ನಿಂತ ಮನ್ಮಥನಂತೆ ಬಂದು 18 ಸೂರ್ಯ ಮಧ್ಯ ಮೇಘವು ಪೊಳೆದಂತೆ ಕಾಂತೆಯರನೆ ಕೂಡ್ಯಾಡಿ ಹರಿ ತಾ ಕಾಂತೆಯರನೆ ಕೂಡ್ಯಾಡಿ ಅಂತರಂಗದಿ ನಿಶ್ಚಂಚಲ ಭಕ್ತಿಗೆ ಸಂತೋಷ ಬಡಿಸಿದ ಕೃಷ್ಣ&ಟಿb
--------------
ಹರಪನಹಳ್ಳಿಭೀಮವ್ವ
ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ 1 ಮರೆಯಬೇಡವೊ ಸಿರಿಯ ಅರಸನೆ ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ 2 ರಂಗ ರಮಣನೆ ಭುಜಂಗಶಯನನೆ ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ 3 ಮಾರಜನಕನೆ ಉದಾರಚರಿತನೆ ಭಾರವೇನೊ ದೀನಜನರುದ್ಧಾರ ಮಾಡುವುದು 4 ನಾಮಗಿರೀಶನೆ ನಿಸ್ಸೀಮ ಮಹಿಮನೆ ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ 5
--------------
ವಿದ್ಯಾರತ್ನಾಕರತೀರ್ಥರು
ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಇಂದು ಭಾಗ ಹರಿ ವಿಠಲ | ಪೊರೆಯ ಬೇಕಿವಳಾ ಪ ನೊಂದಿಹಳೊ ಬಹುವಾಗಿ | ಹೇಸಿ ಸಂಸ್ಕøತಿಲೀ ಅ.ಪ. ವಿನುತ | ಪರಿಪರಿಯ ಶಾಸ್ತ್ರಗಳುವರಲುತಿದೆ ಶ್ರೀಹರಿಯೆ | ಮೊರೆ ಕೇಳದೇನೋತರುಣಿ ದ್ರೌಪದಿವರದ | ಕರಿವರದ ನೀನೆಂದುಮರಳಿಮಹಪಾಪಿ ಆ | ಅಜಾಮಿಳವರದಾ 1 ಉಸಿರಿದ್ದು ಭಾರವನು | ಹೊರುಎಂದು ಪೇಳ್ಬಹುದುಉಸಿರಳಿವ ಪರಿಮಾಡೆ | ಮೊರೆ ಆವನಿಡುವಾಬಸಿರಿನಿಂ ಬಂದಂಥ | ಶಿಶುಗಳೆಲ್ಲವೂ ಪೋಗಿಯಶವ ವರ ಮೆರೆಸಲ್ಕೆ | ಹಸುಮಗನಸಲಹೋ 2 ಸಂಸಾರ ಕ್ಲೇಶಗಳ | ಶಿಂಸಿಸಲು ಅಳಿವಲ್ಲಕಂಸಾರಿ ನಾವಾಗಿ | ಪೊರೆಯ ಬೇಕಿವಳಾವಂಶ ಉದ್ದರಿಸೆ ಪದ | ಪಾಂಸು ಬೇಡ್ವಳೊ ನಿನ್ನಸಂಶಯವು ಯಾಕಿನ್ನು | ಕರುಣಿಸೋ ಹರಿಯೆ 3 ಸುಜನ | ತಂದೆ ಕೈಪಿಡಿಯೋ 4 ಜ್ಞಾನ ಸದ್ಭಕುತಿ ವೈ | ರಾಗ್ಯ ಕೊಟ್ಟವಳೀಗೆಕಾಣಿಸೋ ಸದ್ಗತಿಯ | ಕಾರುಣ್ಯ ಮೂರ್ತೇಏನೊಂದು ಅನ್ಯವನು | ನಾನು ಬೇಡುವುದಿಲ್ಲಜಾಣಗುರು ಗೋವಿಂದ | ವಿಠಲಾ ಪೊರೆ ಇವಳಾ 5
--------------
ಗುರುಗೋವಿಂದವಿಠಲರು
ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುಕಾಲ ಸುಪರ್ವಕಾಲ ಧ್ರುವ ಇಂದು ಸುಕಾಲ ಇಂದು ಸುಕಾಲ ಸುಪರ್ವಕಾಲ 1 ಇಂದು ಸುಕಾಲ ಬಂದ ಗೋಪಾಲ ಸಂಧಿಸಿ ಮನದೊಳಗಾದನುಕೂಲ 2 ಇಂದು ಸುದಿನ ಚಂದವಾಯಿತು ಎನ್ನಮನ ಉನ್ಮನ3 ಭಿಕ್ಷೆ ನೋಡುವ ಲಕ್ಷ ಒಡಿಯ ಪೂರಿಸಿದ ಬೇಡುವಪೇಕ್ಷ4 ಇಂದು ಆನಂದ ಹೊಂದಿ ಮಹಿಪತಿಗುರುಪಾದಾರವಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದುಸನ್ನಿಭವದನೆ ಕುಂದಕುಟ್ಮಲರದನೆ ಸಿಂಧೂರಸಮಗಮನೆ ಚತುರವಚನೆ ಸಿಟ್ಟೇಕೆ ಪೇಳೆ ತರುಣಿ ದಿಟ್ಟಿಸೆನ್ನನು ರಮಣಿ ದಿಟ್ಟೆ ನೀನೆಲೆ ರಾಣಿ ಕೃಷ್ಣವೇಣಿ ಕಾವಗೀಯದೆಯೆನ್ನ ಭಾವೆಪಾಲಿಸು ಮುನ್ನ ಭುವಿಜಾತೆ ಮತಿವಂತೆ, ಪ್ರಾಣಕಾಂತೆ ಚಪಲೆನೀನಹುದಲ್ಲೆ ಕೃಪಣೆಯೆಂಬುದ ಬಲ್ಲೆ ವಿಪರೀತಂಮೆಲುನಲ್ಲೆ ಸೊಲ್ಲಿಸಿಲ್ಲೆ ಕ್ಷೀರಸಾಗರತನಯೆ ಸದಯೆ ಜಾಯೆ ಸಾರೆ ವೀಳ್ಯವನು ಕೈಗೊಂಡು ನೀನು ಬೀರು ಸಂತಸವನ್ನು ಬೇಡುತಿಹೆನು ನೀರೆ ಶೇಷಾದ್ರೀಶನಿವನೆತಾನು
--------------
ನಂಜನಗೂಡು ತಿರುಮಲಾಂಬಾ
ಇನಿತೆಂದು ಶಾಸ್ತ್ರ ಪೇಳುವವು ಪ ಪುನಹ ಪುನಹ ಭಗವತ್ಪ್ರಾಪ್ತಿ ಬೇಕೆಂಬುವರಿಗೆ ಅ.ಪ. ಅನುಬಂಧಿಗಳಲಿ ಮಮತೆಯನೆ ಬಿಡು ವಿಷಯ ವಾ ಸನೆಯನೀಡಾಡು ಸುಜ್ಞಾನ ಭಕ್ತಿಯ ಬೇಡು ಮನದಲ್ಲಿ ಹರಿಯ ಮೂರ್ತಿಯನೆ ನೆರೆ ನೋಡು ಸುಜ್ಞ ರನು ಕೊಂಡಾಡು ಅಜ್ಞಾನಿಗಳ ಸಹವಾಸ ಸುಡು ವನಜನಾಭನ ಪೂಜೆ ಮಾಡು ಪ್ರತಿ ಕ್ಷಣ ಬಿಡದೆ ಭಗವದ್ಗುಣಗಳ ಕೊಂಡಾಡು 1 ಪರಮಾಣು ಮೊದಲ್ಗೊಂಡು ವ್ಯಕ್ತ ತತ್ತ್ವದೊಳ ಹೊರಗೆ ವ್ಯಾಪಕನಾಗಿ ತದ್ರೂಪ ನಾಮದಿಂ ಕರೆಸುತಲಿ ತದ್ವಿಕಾರಗಳಿಲ್ಲದಲೆ ಸೃಷ್ಟಿ ಪರಿಪಾಲನೆ ಲಯಗಳನೆ ಮಾಡಿ ಮೋದಿಸುತಾ ಪರಮಾತ್ಮನೊಬ್ಬನಿಹನೆಂದು ಹರಿಗೆ ಮರೆಯದಲೆ ಮಹಿಮೆಗಳ ಪೊಗುಳುತಿರು ಮನುಜಾ 2 ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು ತಿರಿಯ ಕ್ಪುಂಡ್ರಗಳ ನಿಂದಿಸಬೇಕು ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು ಗುರು ಹಿರಿಯರ ವಗುಣಗಳೆಣಿಸದಿರ ಬೇಕು ಮ ತ್ಸರವ ಬಿಡಬೇಕು ಭಕ್ತರಲಿ ಹೀಗೆ ಒರೆದೊರೆದು ಪೇಳುವರು ಬುಧರು ನಿತ್ಯದಲಿ 3 ನಿತ್ಯ ನೈಮಿತ್ತಿಕ ಸುಕರ್ಮ ಮಾಡಲು ಬೇಕು ಕೃತ್ಯವಲ್ಲದೆ ಲೋಕವಾರ್ತೆಗಳ ಬಿಡಬೇಕು ಚಿತ್ತದಲಿ ಹರಿಪಾದ ಚಿಂತಿಸುತಲಿರಬೇಕು ವಿತ್ತದೇಹಾಗಾರ ಭಗವಂತನದೆಂದು ದೇ ಪರಿಯಂತ ಮಾಳ್ಪ ಕರ್ಮ ಸತ್ಯಸಂಕಲ್ಪಕಿವು ಪೂಜೆ ಎನಬೇಕು 4 ಸೀತೋಷ್ಣ ಸುಖ ದುಃಖ ಮಾನಾಪಮಾನ ಜಯ ಭೀತಿ ನಿರ್ಭೀತಿ ಅಪಜಯ ಜ್ವರಾಪಸ್ಮಾರ ಭೂತ ಬಾಲ ಗ್ರಹ ಮೃಗಸರ್ಪ ನೃಪ ಚೋರ ಯಾತನೆಗೆ ಭಯಪಡದೆ ಸರ್ವತ್ರದಲಿ ಜಗ ನ್ನಾಥವಿಠ್ಠಲನ ಸ್ಮರಿಸುತಿರು ಮಹಾ ಪಾತಕವ ಪರಿಹರಿಸಿ ಪೊರೆವ ದಯದಿಂದಾ 5
--------------
ಜಗನ್ನಾಥದಾಸರು
ಇನ್ನೆಷ್ಟು ಹರಿಮಹಿಮೆ ಬಣ್ಣಿಸ್ಹೇಳಲಿ ನಿನಗೆ ನಿನ್ನೊಳು ನೀ ತಿಳಿದು ಧನ್ಯಾನಾಗೆಲೊ ಮನಸೆ ಪ ತನ್ನನ್ನು ಭಜಿಪರ ತನ್ನಂತೆ ನೋಡುವ ಉನ್ನತ ಕರುಣ್ಯೆಂದು ಚೆನ್ನಾಗಿ ನೆರೆನಂಬಿ 1 ಮೊರೆಯಿಟ್ಟು ಬೇಡುವ ಚರಣದಾಸರನಗಲಿ ಅರೆಗಳಿಗೆಯಿರ ಹರಿ ಚರಣಕ್ಕೆ ಮರೆಬೀಳು 2 ನಂಬಿದ ಭಕುತರ ಚರಣದಾಸರನಗಲಿ ನಂಬಿ ನೀ ನಗಲದೆ ಗುಂಭದಿಂ ಸ್ಮರಿಸೆಲೊ 3 ಮಾನವು ಪೋದರೇನು ಹಾನಿಯೊದಗಿದರೇನು ಪ್ರಾಣಪೋದರು ಹರಿಧ್ಯಾನ ಮರೆಯದಿರು 4 ನಾಶವಿಲ್ಲದೆ ತನ್ನ ದಾಸರ ಕಾಯ್ವನನು ಮೇಷ ಶ್ರೀರಾಮಪಾದ ಧ್ಯಾಸದೊಳಿಡು ಗಟ್ಟಿ 5
--------------
ರಾಮದಾಸರು
ಇನ್ನೇನ ಮಾಡುವೆ ಇನ್ನಾರ ಬೇಡುವೆ ಪ್ರ-ಸನ್ನ ಚೆನ್ನಕೇಶವ ಎನ್ನ ಬಿನ್ನಪವಮನ್ನಿಸಿ ದಿನದಿನದಲ್ಲಿನಿನ್ನನರ್ಚಿಪಂತೆ ಮಾಡು ಪ. ಮೊಲೆಯುಂಬ ಹಸುಗೂಸು ಮಾತನಾಡಿ ತನ್ನಮನದಭೀಷ್ಟವ ಪೇಳ್ವುದೆಚೀರಿ ಅಳುವದೈಸೆ ಅದನರಿತು ಅದರ ತಾಯಿಅಪ್ಪ್ಪಿಮುದ್ದಾಡಿಸುತ್ತಬಳಲಿಕೆÀ ಪೋಪಂತೆ ನಸುಬಿಸಿಪಾಲನುಬಾಯೆಂದು ಕುಡಿಸುವಳುಸಿರಿಲಲನೆಯರಸ ನಮ್ಮ ಈ ಪರಿಯಲಿನೀನು ಲಾಲಿಸಿ ಸಲಹಬೇಕು 1 ಕರಿ ಕರೆಯಲುಪೊರೆದಂತೆ ಪೊರೆಯೆನ್ನನುಮಕರಿಯ ಕೊಂದು ಪೊರೆದಂತೆ2 ಹುಲಿಯ ಕಂಡೋಡುವ ಹುಲ್ಲೆಯ ಮರಿಯಂತೆಭವದ ಬೇಗೆಯಲಿ ಬೆಂದೆ ವಿಘಳಿಗೆ ಘಳಿಗೆಯೊಳು ಅಲಸದೆ ಪಾಪವಗÀಳಿಸುವ ಗÀಸಣೆಗಂಜೆತುಳಸಿಯ ದಳದಿಂದ ಸಂತುಷ್ಟನಹ ನಿನ್ನಒಲಿಸುವ ಭಾಗ್ಯದಲ್ಲೆ ಈ ಇಳೆಗೆ ಭಾರವಾದೆಇಹಪರ ದುಃಖದ ಹಂಬಲಿಕೆ ಎಳ್ಳಷ್ಟು ಇಲ್ಲಸನ್ಮಾರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ ಅಪವರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ3 ಹೆಂಡಿರ ಸಾಕಲಾರದೆ ಹೆಣ್ಣು ಮಕ್ಕಳುಗಳಕಂಡ ಕಂಡವಗೆರ್À ಮಾರಿ ಜಗಭಂಡನೆನಿಸಿಕೊಂಡೆ ಬಡತನ ಹಿಂಗದೆಕೊಂಡೆಯಗಳ ಪೇಳುವೆಉಂಡುಡುವರ ಕಂಡು ಮತ್ಸರ ಮಾಡುವೆತಂಡ ತಂಡÀದವರಿಂದ ಕಡಗೊಂಡರ್ಧನ ಕೊಡದೆ ಕಲ್ಲಪೊರುವೆನು ಕೋ-ದಂಡವೇರಿಸಿ ಕೊಂಡೆನು 4 ದಂಡವಿಡಿದು ವೇಷಧಾರಿಯೆಂಬುದ ಕೈಕೊಂಡು ರಾವಣನಂತೆ ಚರಿಸಿ ಎನ್ನಮಂಡೆ ಬೋಳು ಮಾಡಿ-ಕೊಂಡು ಇಳೆಯೊಳು ಪರಸತಿಯರ ಮೋಹಿಪೆಪುಂಡರೀಕಾಕ್ಷ ಈ ಪರಿಯ ಕ್ಲೇಶಗಳನುಉಂಡರೆÀ ವೈರಾಗ್ಯ ಬಾರದು ಎಲೆಪಾಂಡವಪ್ರಿಯ ಇನ್ನಾರಿ ಗುಸುರುವೆನು ಉ-ದ್ದಂಡಭಕ್ತರ ಸೇರಿಸೊ ಕೈ-ಕೊಂಡು ನಿನ್ನುದ್ದಂಡಭಕ್ತರ ಸೇರಿಸೊ5 ತಪ್ಪಿದರೆ ತಾಯಿ ತನ್ನ ಮಕ್ಕಳುಗಳತಕ್ಕೈಸಿಕೊಂಬವೊಲು ಕಾಮ-ನಪ್ಪ ಎನ್ನಪ್ಪ ಒಂದು ಕೊರತೆಯ ಕಾಣದೆಕರುಣದಿ ಕಾಯಬೇಕುಅಪಾರಮಹಿಮ ನೀನಾಶ್ರಿತ ಜನರನುಅತ್ತ ಹೋಗೆನ್ನೆ ಗಡ ನೀನ-ಪ್ರತಿಮಹಿಮನೆನಿಸಿಕೊಂಡೆ ಅದರಿಂದಅಮರರ ಶಿರೋರನ್ನವೆ ಅರ್ಜುನಸಖಅಮರರ ಶಿರೋರನ್ನವೆ 6 ಸರಿಮಿಗಿಲಿಲ್ಲದ ಸರ್ವೇಶ ಹರಿಯೆಂದುಸಿರಿಹಯವದನರಾಯ ನಿನ್ನಪರಮ ಮುನಿಗಳೆಲ್ಲಪರೀಕ್ಷೆಮಾಡಿ ನೋಡಿಮುನ್ನ ನಿರ್ಣೈಸಿದರುಹಿರಿಯರ ಮಾತನು ಪಾಟಿಮಾಡದನಗೋತ್ರ ಸೂತ್ರಗಳು ಪೋಕುಪ್ರವರ ಗೋತ್ರ ಋಷಿಮೂಲಯೆಂದು ಪ್ರಸಿದ್ಧ ಇನ್ನಾರು ನಿನ್ನಂಥವರು 7
--------------
ವಾದಿರಾಜ
ಇವನೆ ಪ್ರಹ್ಲಾದನಿಂದಲಿ ಉಪಾಸ್ಯ ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ. ವಲಯಕಾರದಿ ಶೇಷ ಛತ್ತರಿಯಾಗಿ ಹಲ ಮುಸಲ ಧರಿಸಿ ಎಡದಲಿ ವಾರುಣೀ ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ ನಲಿದು ಸೇರಿಸೆ ಇಂಥ ಆಸನದಿ ಕುಳಿತಾ 1 ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು ಆಗಮನುತ ಬಲದ ತೊಡೆಯಲ್ಲಿ ವಾಯು ಭೋಗ ರೂಪನು ಸರ್ವ ಆಭರಣ ಶೃಂಗಾರ ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ2 ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ ಕರ್ಣ ಕುಂಡಲವೂ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು ದುರುಳರಿಗೆ ಘೋರ ವರಭಕ್ತರಿಗೆ ಅಭಯ 3 ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ ವೈಜಯಂತಿ ಹಾರಾ ಕರ ಶಂಖ ಚಕ್ರವು ಪದ್ಮ ಗದೆ ಅಭಯ ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ 4 ಉರ ಉದರ ಶೃಂಗಾರ ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ ಕರಿಸೊಂಡಲಿನ ತೊಡೆಯು ಸುರವರದ ಚರಣಾ5 ಚರಣದಾಭರಣ ಸಾಲ್ಯೆರಳನಖ ಕಾಂತಿಗಳು ಪಾದ ಪದುಮಾ ಮೃಗ ಮುಖವು ನರಮೃಗಾಕೃತಿರೂಪ ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ 6 ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ ಮದನ ಇರಿಸಿ ಹೂ ಬಾಣವನು ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ 7 ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ ಅರಸಿ ಭಾರತಿಯ ಎಡತೊಡೆಯಲಿಟ್ಟೂ ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ ಇರಿಸಿಕೊಂಡತುಲ ಸಂತಸದಿಂದ ಮೆರೆಯೇ 8 ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ ಪತಿ ಭಿಕ್ಷೆ ಬೇಡುವಾ9 ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ ಶೋಭಿಸಲು ಎಡತೊಡೆಯ ಮೇಲೆ ವಾಣೀ ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ10 ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ 11 ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು ಈ ರೀತಿಯಿಂದ ಪರಿವಾರ ಸಹಿತಾ ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ ಪತಿ ಮನದಿ ತೊರೆ ಭಕ್ತರಿಗೆ 12 ಕಾಲನಾಮಕ ಗರುಡ ಬಾಲೆ ಸೌಪರ್ಣಿ ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ ಓಲಗವ ಕೊಡುತ ಹರಿಗನುಕೂಲನಾಗಿರುವ ಲೀಲ ಮಾನುಷ ಇಂಥ ವೈಭವದಿ ಮೆರೆವಾ13 ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ ಶಾಂತಮನದಲಿ ಸುಖಿಸಿ ಆನಂದಿಸುವನೂ14 ವರಭಕ್ತ ಪ್ರಹ್ಲಾದ ವರದನ್ನ ಈ ರೂಪ ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ ಪರಮ ಉತ್ಸಾರಕರನೊಂದೊಂದು ಅಂಶದಲಿ ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ 15 ಪರಿವಾರ ಆಭರಣ ಆಯುಧಗಳಿಂ ಮೆರೆವ ನರಹರಿಯ ಈ ರೂಪ ನಿರುತ ಸ್ಮರಿಸೇ ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ16
--------------
ಅಂಬಾಬಾಯಿ