ಒಟ್ಟು 176 ಕಡೆಗಳಲ್ಲಿ , 54 ದಾಸರು , 140 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ನೋಡು ನಿನ್ನೊಳು ನೀ ನೋಡು | ಸಾಕು ಸಾಕು ಈ ಲೋಕದ ನಡವಳಿ | ಯಾಕಬೇಕು ಪಿನಾಕಿಯ ಭಜಿಸೋ ಪ ಅಗಣಿತ ಸಂಪದ ಕೈಗೂಡುವದೋ ಅದ | ಬೇಡದೆ ಬೇಗನೆ 1 ಘಾಸಿ ಕ್ಲೇಶ ಬಡುವಿ ಜಗದೀಶನು ಒಲಿವನೆ ? 2 ಹಿಂದೆ ಜನ್ಮ ನೊಂದೆ ಸದ್ಗತಿ ಪಡೆಯದೆ | ಮುಂದೆ ಸಾಧಿಸು ಶಿವ ತತ್ತ್ವವ ಒಂದೇ | ತಂದೆ ಸದ್ಗುರು ಭವತಾರಕನಂಘ್ರಿಯ |ಹೊಂದಿ ನಿಜಾನಂದ ಬೋಧದಲಿರು ನೀ3
--------------
ಭಾವತರಕರು
ಪಾದ ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವೆಂಕಟ ಪ ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ 1 ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ ತಲೆಯಾಗುವರಯ್ಯಾ ಭಳಿರೆ ಕಾಂಚನ 2 ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ | ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ3 ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ ಫಣಿ 4 ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ ಭೂದೇವರ ವರದ5
--------------
ವಿಜಯದಾಸ
ಪಾಲಿಸಯ್ಯ ವರವ ಹರಿಹರಿ ಪಾಲಿಸಯ್ಯ ವರವ ಪ ಪಾಲಿಸಯ್ಯ ವರ ಬಾಲಗೆ ಬೇಗನೆ ಕಾಲಕಾಲದಿ ನಿನ್ನ ಲೀಲಾನಂದವ ಅ.ಪ ಸತತದಿ ತವಭಜನೆ ಅಗಲಿಸ ದತಿ ಗುಪ್ತ ತತ್ವವನು ಯತಿತತಿ ಪೊಗಳುವ ಸ್ಮøತಿಶಾಸ್ತ್ರರ್ಥವನಿತ್ತು ಸುತಗೆ ಮಹಗತಿಯ ಪಥಕೆ ಹಚ್ಚು 1 ಮತಿ ಮಾನ್ಯರು ಸದಾ ಪೊಗಳುವ- ಪಾದ ಸತತ ನುತಿಪ ಅತಿಹಿತ ಮತಿಯಿತ್ತು ಪತಿತ ಪಾವನ ಮಾಡು ರತಿಪತಿಪಿತನೆ 2 ಜಡ ಬಡತನ ಕಡಿದು ಗಡನೆ ನ್ನೊಡಲಾಶೆಯ ತೊಡೆದು ನುಡಿನುಡಿಗಡಿಗಡಿಗೆಡಬಡದಲೆ ನಿ ನ್ನಡಿಧ್ಯಾನ ಕೊಡು ಎನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಪಾಲಿಸು ಬೇಗನೆ ಪಂಕಜನಯನ ಪ ಸನ್ನುತ ಶುಭಕರ ಚರಿತ ಗಿರಿಧರ ಹರಿ ಕರಿವರದ ಮುರಾರಿ 1 ರತಿಪತಿಪಿತ ಸದ್ಗತಿಗಾಣಿಸು ಯಂ- ದತಿ ಮುದದಿ ನಿನ್ನ ಸ್ತುತಿಸುತಲಿರುವೆನು 2 ಶರಣಾಗತ ರಕ್ಷ ಕರುಣಾಂಬುಧೆ ಧರೆಯೊಳಧಿಕ 'ಹೆನ್ನೆಪುರ ಹರಿಯೆ’ 3
--------------
ಹೆನ್ನೆರಂಗದಾಸರು
ಪಾಹಿಮಾಂ ಜಗದೀಶ ಭಕ್ತವಿಲಾಸ ಶ್ರೀ ಶ್ರೀನಿವಾಸನೆ ಹೇಳಲೊಶವಲ್ಲ ದೇವನೆ ಪ ಚಂಡಶಾಸಕ ಬಿರುದುವುಳ್ಳ ಪ್ರಚಂಡ ದೇವೋತ್ತುಂಗನೆ ಮದನ ಜನಕ ಕೋದಂಡಧರ ಶ್ರೀರಾಮನೆ 1 ವಿಕಟದಾನವ ಮೂಲ ಚ್ಛೇದನ ವಿಶ್ವರೂಪ ವಿನೋದನೆ 2 ಅಮಿತ ಮಹಿಮಾನಂದ ಹರನುತ ಕಮಲಸಂಭವ ನಯ್ಯನೆ ಸುಮನರಾದ ಸುಜನರಾ ಹೃದಯ ಕಮಲದಲಿ ನೀ ವಾಸನೆ 3 ಮಂಗಳಾಂಗ ವಿಹಂಗವಾಹನ ಮಾರಕೋಟಿ ಲಾವಣ್ಯನೆ ಅಂಗನಾಮಣಿ ಲಕುಮಿಪುರದಲಿ ಅಡಗಿಸಿಪ್ಪ ಶ್ರೀ ಲೋಲನೆ 4 ಶೌರಿ ಮಹಾಗುಣ ಶಾಂತನೆ ಕರುಣೆಸೆನ್ನನು ಕಾಯೊ ಬೇಗನೆ ವರದ `ಹೆನ್ನ ವಿಠ್ಠಲನೆ' 5
--------------
ಹೆನ್ನೆರಂಗದಾಸರು
ಪೊರೆಯದಿರುವರೇ _ ಶ್ರೀ ರಮಣಾ ಪ ದುರಿತಗಜಕೆ ನೀ ಪಂಚಾನನಾ ಅ.ಪ. ಸಿರಿಯ ಮದದಿ ನಾನರಿಯದೆ ಪೋದರೆ ಗರುಡಗಮನ ನೀ ಮರೆತುಬಿಡುವರೇ ಕರುಣಶರಧಿ ಸರಿ ಬಿರುದು ಪೊಳ್ಳಾಗದೇ ಚರಣಪಿಡಿವೆ ಪೊರೆ ಮರುತನೊಡೆಯ ಹರಿ1 ಪಾತಕಿ ಎಂಬುವ ನೀತಿಯನುಡಿದೊಡೆ ಪೂತರಮಾಡುವ ಖ್ಯಾತಿಯ ಬಿಡುವೆಯ ನಾಥನೆ ನಂಬಿದೆ ಕಾತರ ಪಡುತಿಹೆ ಪ್ರೀತಿಲಿ ಕಾಣಿಸು ಆರ್ತಿವಿದೂರ 2 ನಡಿಯುವ ಚರಣವು ಎಡುವುದು ಸಹಜವೆ ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3 ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ ಶರಣರ ಪೊರೆಯುವ ವರಗುಣ ಭೂಷಣ ಅರಿಯೆನುಪಾಯವ ಶರಣುಶರಣೈಯ ಪರಮಪುರುಷ ಭಗಸರಸದಿ ನಲಿನಲಿ 4 ಸಾಕುವ ಬಿಂಬನೆ ನೂಕಿದೆ ಯಾತಕೆ ಹಾಕುತ ಮಂಕನು ಏಕಾಯತನ ನಾಕರೊಡೆಯ ಭವನೂಕುತ ಬೇಗನೆ ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5
--------------
ಕೃಷ್ಣವಿಠಲದಾಸರು
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರೇಮಸಾಗರ ಸ್ವಾಮಿ ಶ್ರೀಹರಿ ಬಾರೊ ಪ ವಿಷಮಸಂಸಾರದ ವ್ಯಸನವಳುಕಿಸಿ ಅಸಮ ನಿಮ್ಮಯ ನಿಜಧ್ಯಾಸವ ಕರುಣಿಸೊ 1 ಮನಸಿನ ಹರಿದಾಟವನು ನಿಲಿಸಿ ಎನಗನುದಿನ ಸುಸಂಗನೆ ದಯಪಾಲಿಸೊ 2 ಸುಷ್ಮಮಲದಾಯಕ ಮಮ ಕೃಪಾಕರ ಶ್ರೀ ರಾಮ ಅಪರೋಕ್ಷಜ್ಞಾನವ ಕೃಪೆಮಾಡು ಬೇಗನೆ 3
--------------
ರಾಮದಾಸರು
ಬಂದಿರುವೆನು ಭೂಜಾತೆ | ಶರ- ದಿಂದುವದನೆ ವೋ ಸೀತೆ ಪ ಕೂಗುವುದೇತಕೆ ನಿಮ್ಮಯ ಪೆಸರೇ ನೀಗ ತಿಳಿಸಿರೈ ಸ್ವಾಮಿ | ನುಡಿ ಭಾಗವತ ಜನಪ್ರೇಮಿ ಅ.ಪ ಹೀನತಮವ ಮುರಿದಜಗೆ ಶೃತಿಗಳಿತ್ತ ಮೀನಾವತಾರನೆ ನಾನು | ಬಾ ಜಾನಕಿ ಬೇಗನೆ ನೀನು ಮೀನಾದರೆ ನೀರೊಳಗಿರುವುದು ಸರಿ ಮಾನಿನಿಯಲಿ ಕಾರ್ಯವೇನು | ನಡಿ ದೀನ ಜನರ ಸುರಧೇನು 1 ಕಮಲನಯನೆ ನಾ ಪೂರ್ವದಿ | ಗಜ- ಗಮನೆಯೆ ನೋಡನುರಾಗದಿ ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ ಸಮಳೆ ನಿನಗೆ ನೀ ನೋಡು | ಸಂ ಭ್ರಮವಿದ್ದಲಿ ನಲಿದಾಡು 2 ವರಹಾರೂಪನೆ ಕಾಮಿನಿ | ಓ ತರುಣಿಯರೊಳಗೆ ಶಿರೋಮಣಿ ವರಾಹನಾದರೆ ಅಡವಿಯ ತಿರುಗುತ- ಲಿರದೇತಕೆ ಇಲ್ಲಿ ಬಂದೆ | ನಡಿ ಪರಿಪರಿ ಮೃಗಗಳ ಹಿಂದೆ 3 ಕರುಳ ಬಗೆದ ನರಸಿಂಹ | ನಾನು ಪರಮ ಪುರಷ ಪರಬ್ರಹ್ಮ ನರಸಿಂಹನು ನೀನಾದರೆ ನಡಿನಡಿ ಗಿರಿಗುಹೆಯೊಳಗಿರು ಹೋಗೈ | ಬಹು ಪರಿನುಡಿಗಳು ನಿನಗೇಕೈ 4 ಭೂಮಿಯ ದಾನವ ಬೇಡಿ ಬಲಿಯ ಗೆದ್ದ ವಾಮನ ನಾನೆಲೆ ನಾರಿ | ಸು ತ್ರಾಮಾದ್ಯರಿಗುಪಕಾರಿ ಬ್ರಾಹ್ಮಣನಾದರೆ ನಮಿಸುವೆ ಚರಣಕೆ ಹೋಮಧ್ಯಾನ ಜಪಮಾಡೈ | ನಿ ಷ್ಕಾಮ ಜನರ ಪಥನೋಡೈ 5 ದುರುಳನೃಪರ ಸಂಹರಿಸವನಿಯ ಭೂ ಸುರರಿಗೆ ಕೊಟ್ಟೆನೆ ದಾನವು | ಕೇಳ್ ಪರಶುರಾಮಾಭಿದಾನವು ವರಮಾತೆಯ ಶಿರವರಿದವ ನೀನಂತೆ ಸರಸವೇತಕೆನ್ನಲ್ಲಿ | ಮನ ಬರುವಲ್ಲಿಗೆ ತೆರಳಲ್ಲಿ 6 ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು ಪ್ರಿಯದಿ ವನದೊಳಗಿದ್ದೆನೆ | ದೈ ತ್ಯೇಯ ನಿಕರವನು ಗೆದ್ದೆನೆ ಸ್ರೀಯರಲ್ಲಿ ಹಿತವೇನು | ಕಮ ಲಾಯತಾಕ್ಷ ನಡಿ ನೀನು 7 ನಾರಿಯರನು ಕೂಡಿ ರಾಸ ಕ್ರೀಡೆಯೊಳ್ ತೋರಿದೆ ಪರಿಪರಿ ಚಿತ್ರವ | ವಿ- ಜಾರ ಪುರಷನಿಗೆ ಹೋಲುವಳಲ್ಲವು ಸಾರ ಪತಿವ್ರತೆ ನಾನು | ಇ- ನ್ನ್ಯಾರು ತಿಳಿಸು ಮತ್ತೆ ನೀನು 8 ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ ಪ್ರತಿಮ ಬುದ್ಧನೆ ಲತಾಂಗಿ | ಓ ಮತಿವಂತಳೆ ಮೋಹನಾಂಗಿ ಕೃತಕವಾಡದಿರು ಒಲ್ಲೆ | ಕೇ ಳತಿ ಮೋಹಕ ನೀ ಬಲ್ಲೆ 9 ಹಲವು ನುಡಿಗಳೇನು ಕಲಿಯುಗಾಂತದಲಿ ಮಲೆತ ಮನುಜರನು ಕೊಲ್ವೆನೆ | ಓ ಲಲನೆ ನೋಡು ಬಲು ಚೆಲ್ವನೇ ಕಲಿತನವ ತೋರಿಸದಿರು ಈ ಪರಿ ಹಲವು ವೇಷ ನಿನಗೇಕೆ | ಕೇ ಳೆಲವೊ ಸ್ವಾಮಿ ನುಡಿ ಜೋಕೆ 10 ವೇಷವಲ್ಲ ಸರ್ವೇಶ ನಾನು ಪರಿ- ಪೋಷಿಸುವೆನು ನಿಜಭಕ್ತರ | ಸಂ- ತೋಷಿಸುವೆನು ಧರ್ಮಯುಕ್ತರ ಪೋಷಿಸುವನು ನೀನಾದರೆಲ್ಲಿ ನಿನ್ನ ವಾಸಪೇಳು ನಿಜವೀಗಾ | ಪರಿ ಹಾಸವೇಕೆ ನುಡಿಬೇಗ 11 ಪರಮಾತ್ಮನು ನಾ ಕೇಳೆ | ಎನ್ನ ಮರತೆಯೇನೆ ಎಲೆ ಬಾಲೆ ಅರಿತೆನೀಗ ಬಹು ಸಂತಸವಾಯಿತು ಎರಗುವೆ ಚರಣಕೆ ನಾನು | ನಿನ್ನ ಸರಿಯಾರೈ ದೊರೆ ನೀನು 12 ಧರೆಯೊಳಯೋಧ್ಯಾ ಪುರದರಸನ ಮಗ ಗುರುರಾಮವಿಠಲನೆ ನಾನು | ಓ ತರುಣಿ ನಿನಗೊಲಿದು ಬಂದೆನು ಧರಣಿ ತನಯೆ ನಸುನಾಚಿಕೆಯಿಂದಲಿ ಣಗಳನು ತೊಳೆದಳು ಬೇಗ 13
--------------
ಗುರುರಾಮವಿಠಲ
ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ ಬಂದೆನ್ನ ಮನಮಂದಿರದಲಿ ನಿಲ್ಲೊ ಪ. ಇಂದಿರೇಶ ವೈಕುಂಠದಿಂದ ನೀ ಬಂದು ಈಗ ಎನ್ನ ಹೃದಯ ಕಮಲದಿ ಅ.ಪ. ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ ಪೊಗಳಬಲ್ಲೆನೆ ನಾ ಖಗವಾಹನನೆ 1 ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ ಅರಘಳಿಗೆ ನಿನ್ನಗಲಿರಲಾರೆನೊ ಸಿರಿಸಹಿತದಿ ನಿನ್ನರಮನೆಯಿಂದಲಿ 2 ಇಂದು | ನೀ ರಕ್ಷಕನೆಂದು ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು ಸರಿಯಲ್ಲವು ಈ ತೆರದಲಿ ತೊರೆವುದು ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ 3 ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀವಾಂತರವಾಸ ಕಂತುಪಿತ ಎಣಿಪರೆÀ ಎನ್ನಯ ದೋಷ | ಸರಿಯಲ್ಲ ಸುರೇಶ ಇಂತು ನಿನಗೆ ಒಪ್ಪಿಸಿದರೊ ಗುರುಗಳು ಚಿಂತಿತಾರ್ಥ ನಿನಗೆನ್ನ ತರ ತಿಳಿಯದೆ 4 ಬೆಟ್ಟದ ಒಡೆಯ ಬೇಗನೆ ಬಾರೊ | ಹೃತ್ಕಮಲದಿ ತೋರೊ ಶ್ರೇಷ್ಠ ಶ್ರೀ ಗುರುಗಳ ಕರುಣವ ಬೀರೊ | ಸಲಹುವರಿನ್ಯಾರೊ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಪದಂಗಳ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಬನ್ನಿರಿ ಬನ್ನಿರಿ ಪುರಜನರೆಲ್ಲರು ಕೃಷ್ಣನ ದರುಶನಕೆ ಪೋಗುವ ಪ ಕೃಷ್ಣನು ಜನಿಸಿದ ಈ ದಿನ ಇಷ್ಟವ ಪ್ರಾರ್ಥಿಸಲು ಪೋಗುವಅ.ಪ ದುಂದುಭಿ ನಾದವು ಕೇಳುತಿದೆ ಬಲು ಮಂದಿಯ ತಂಡವು ಹೋಗುತಿದೆ ಕಂದನ ರೂಪದಿ ಬಂದಿಹ ಆನಕ ದುಂದುಭಿ ಕುವರನ ಸಂಭ್ರಮ ನೋಡಲು 1 ಪೇಳಿರಿ ನಿಮ್ಮಯ ಕೊರತೆಗಳೆÀಲ್ಲವ ಕೇಳಿರಿ ವರಗಳ ಧೈರ್ಯದಲಿ ಬಾಲನು ಸುಲಭದಿ ಒಲಿಯುವ ಒಳ್ಳೆಯ ಕಾಲವಿದೆಲ್ಲರಿಗೆ ಬೇಗನೆ 2 ಜನುಮ ಜನುಮಗಳ ಪುಣ್ಯದ ರಾಶಿಯು ಜನುಮಾಷ್ಟಮಿ ದಿನದಿ ಲೋಕಕೆ ಜನುಮಾದ್ಯಷ್ಟಕದಾತನ ದರುಶನ ಮನಕೆ ಪ್ರಸನ್ನತೆ ಕೊಡುವುದು ಪೋಗುವ 3
--------------
ವಿದ್ಯಾಪ್ರಸನ್ನತೀರ್ಥರು
ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ಪ ನಾಗವೇಣಿಯೆ ನಿನ್ನೀಗಲೆ ನೋಡಲು ಬೇಗನೆ ಬಂದೆನು ತೆಗಿ ಕದವಾ ಅ.ಪ ಯಾರದು ಈ ಸಮರಾತ್ರಿಯ ವೇಳದಿ ಬಾಗಿಲು ತೆಗೆ ಎಂದೆನುತಿಹರು ತೋರದು ಎನಗೊಂದಾಲೋಚನೆ ನಿಮ್ಮ ನಾಮವು ಪೇಳಲು ತೆಗೆಯುವೆನು 1 ನೀಲವೇಣಿಯೆ ಕೇಳೆನ್ನ ಮಾತನು ಬಹಳ ಚಿಂತೆಯಾತಕೆ ಮನದಿ ನೀಲಕಂಠನೆಂದೆನ್ನನು ಕರೆವರು ಕೇಳು ಮನಸು ಚಂಚಲ ಬಿಟ್ಟು 2 ನೀಲಕಂಠನೆಂದರೆ ನೆನಪಾಯಿತು ನವಿಲಿನ ಮರಿ ಬಂದಿಹುದೆಂದು ನಾರಿಯರೆಲ್ಲರು ಹಾಸ್ಯವ ಮಾಳ್ಪರು ಸಾರುತ ವನಗಳ ಚರಿಸೆಂದು 3 ಬೆದರದೆ ತೆರೆ ಕದ ಸುದತಿಮಣಿಯೆ ನಾ ಬದಲೊಂದು ನಾಮವ ಪೇಳುವೆನು ಬುಧ ಜನರೆಲ್ಲರು ಭಕುತಿಲಿ ಸ್ಥಾಣು- ವೆನ್ನುತ ನಾಮವ ಕೊಂಡಾಡುವರು4 ಬೂಟಾಟಿಕೆ ಮಾತುಗಳನ್ನ ಏತಕೆ ಸಾಟಿಯಾರು ಜಗದೊಳಗಿನ್ನು ಮೋಟುಮರಕೆ ಸ್ಥಾಣುವೆನ್ನುತ ಕರೆವರು ಈ ಪೃಥ್ವಿಯ ಮೇಲಿನ ಜನರು 5 ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ ಪಶುಪತಿಯೆಂದು ಕರೆವರೆನ್ನ ವಸುಧೆಯ ಮೇಲಿನ ಪೆಸರುಗಳಿಗೆ ನೀ ಪ್ರತಿಯಾಗರ್ಥವ ಕಲ್ಪಿಸುವಿ 6 ವೃಷಭರಾಜ ನೀನಾದರೆ ಮುಂದಕೆ ಪಶುಗಳ ಮಂದೆಗೆ ತೆರಳುವದು ಕುಸುಮಗಂಧಿಯರ ಸದನದಿ ಕಾರ್ಯವು ವೃಷಭರಾಜಗಿಲ್ಲವು ಕೇಳೌ 7 ಶೀಲವಾಣಿಯೆ ಸುಶೀಲೆಯೆ ಎನ್ನಯ ವಾಣಿ ಕೇಳಿ ಕದವನು ತೆಗಿಯೆ ಪೇಳುವೆ ಮತ್ತೊಂದು ನಾಮವ ಎನ್ನನು ಶೂಲಿ ಎಂದು ಕರೆವರು ಜನರು 8 ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು ಯಾರಿಗೆ ಸಾಧ್ಯವು ಜಗದೊಳಗೆ ನಾರಿಯರಿಗೆ ಹೇಳದೆ ಮುಂದಕೆ ನಡೆ ಶೂರರಾದ ವೈದ್ಯರ ಬಳಿಗೆ 9 ಕರಿಯ ಮುಖನ ಮಾತೆಯೆ ತಡಮಾಡದೆ ಕನಕಮಯದ ಕದ ತೆರೆ ಬೇಗ ಕಮಲನಾಭ ವಿಠ್ಠಲನನು ಪಾಡುತ ಶಿವನ ನಮಿಸಿ ತೆಗೆದಳು ಕದವ 10
--------------
ನಿಡಗುರುಕಿ ಜೀವೂಬಾಯಿ
ಬಾದರಾಯಣರು ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ ಪ ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ ಅ.ಪ. ಬಾದರಿ ಸುಖ ವಲಜೆ ಮುನಿತವ ಪೂರ್ಣ-ಬೋಧ ವೈಶಂಪಾಯನ ಮುನಿಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-ಗಾಧ ಮಹಿಮೆ ತೋರಿಸೋ 1 ವೃಂದ ಚಕೂತ ಮುನಿಗಳಿಗೆ ಸುಖಸಂದೋಹದಾರ್ಥ ಪೇಳುತಿರಲುಬಂದ ಸಂಶಯ ಹರಿಸುತ ಬೇಗ ಮಹಾ-ನಂದ ನೀಡಿದಿ ಕೇಳಿದವರಿಗೆ 2 ಸತ್ಯವತಿಯ ಸುಕುಮಾರನೆಧಾತ್ರಿಯೊಳಗೆ ಪುಣ್ಯಚರಿತನೆಸುತ್ತಮುತ್ತಲೂ ಶೇಷಶಯ್ಯನೆ ಎನ್ನನೇತ್ರಕ್ಕೆ ಪೊಳಿ ಇಂದಿರೇಶನೆ 3
--------------
ಇಂದಿರೇಶರು