ಒಟ್ಟು 160 ಕಡೆಗಳಲ್ಲಿ , 43 ದಾಸರು , 139 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಣ್ಯ ಪೂರ್ವಾರ್ಜಿತವಿದು ಸುರ ಮಾನ್ಯ ಶ್ರೀ ನಿಲಯನ ದರುಶನ ಪ ಚೆನ್ನಿಗನೀತನು ಸುಜನರ ಪೊರೆಯಲು ಪನ್ನಗಾಚಲದಿ ಬಂದಿರುವುದು ಬಲು ಅ.ಪ ರಾಜ್ಯವಿವಗೆ ಹದಿನಾಲ್ಕು ಲೋಕಗಳು ಭೋಜ್ಯ ಚರಾಚರಜಗವೆಲ್ಲ ರಾಜೀವಾಲಯನಾಥನಿವನು ಬಲು ಸೋಜಿಗದಲಿ ಬಂದಿಹ ನೋಡಿ ಪೂಜ್ಯಚರಣ ಗುರುವ್ಯಾಸರಾಜ ಯತಿರಾಜ ರಚಿತ ದ್ವಿಕ್ಷಡಬ್ಧದ ಪೂಜೆಯ 1 ಸೌಂದರ್ಯದ ಗಣಿ ಇವನು ಎಲ್ಲರನು ತಂದೆಯಂತೆ ಸಲಹುವ ಸತತ ಒಂದೊಂದೆಡೆಯಲು ವ್ಯಾಪ್ತನಿವನು ತಾ ನೊಂದೆಡೆಯಲು ಸುಲಭದಿ ಸಿಗನು ನಂದತೀರ್ಥ ಪರಿವಾರ ಜನರು ಇವರೆಂದು ಹರುಷದಲಿ ಮುಂದೆ ನಿಂತಿಹುದು 2 ಪದ್ಮಾವತಿ ವಲ್ಲಭನಿವ ಮುನಿಜನ ಹೃದ್ಗತ ಪ್ರಕಟಾಮಿತ ಚರಿತ ಮುಗ್ಧಜನರು ಪರಮಾದರ ತೋರಲು ಸ್ನಿಗ್ಧನಾಗುವನು ಹರುಷದಲಿ ಛದ್ಮಕೆ ದೂರನು ಭಕ್ತ ಪ್ರಸನ್ನನು ಉದ್ಧರಿಸಲು ಈ ಸದ್ಮಕೆ ಬಂದಿಹ 3
--------------
ವಿದ್ಯಾಪ್ರಸನ್ನತೀರ್ಥರು
ಪೂರ್ಣ ಪರಿಪೂರ್ಣ ಸಂ- ಪೂರ್ಣ ಜಾಜಿಪುರೀಶ ಮಹಾಪೂರ್ಣ ಪ ಸರ್ವದೇಶ ಪರಿಪೂರ್ಣ ಸರ್ವಜನ ಪರಿಪೂರ್ಣ ಸರ್ವಕಾಲ ಪರಿಪೂರ್ಣ 1 ವಿಶ್ವವನೆಲ್ಲ ಉದರದಲಿಟ್ಟಿಹ ವಿಶ್ವವನೆಲ್ಲ ಬಾಯಲಿ ತುಂಬಿಹ ವಿಶ್ವವನೆಲ್ಲ ರಣಭೂಮಿಲಿ ತೋರಿಹ ವಿಶ್ವಾತ್ಮನು ತಾ ಪರಿಪೂರ್ಣ 2 ಕಾಲ ಜೀವರಲ್ಲಿ ಭೂವಲ್ಲಭ ಸಕಲ ಲೋಕರಲ್ಲಿ ಭಾವಿಪ ಕೋಟೆ-ಪೇಟೆ ಚನ್ನಿಗರಾಯ ಯಾವೆಲ್ಲರಲ್ಲು ಸಂಪೂರ್ಣ 3
--------------
ನಾರಾಯಣಶರ್ಮರು
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ಬಡನಡುವು ಬಾಲೆಯರ ಕೂಡಿ | ಪಾ | ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ 1 ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ | ಹನ್ಮಾಲೆ ಪದಕ ನ್ಯಾವಳ ಸರಿಗೆಸರ ಮುತ್ತು | ವಾಲೆ ಪೊಂಪುಷ್ಟ ಬುಗುಡಿ ಥೋ | ರನ್ಮುತ್ತು ನಾಸಾಮಣಿ | ಅರರೆ | ಮನ್ಮನೋಹರವಾದ ಕಡಕ ಕಂಕಣ ಮುದ್ರೆ | ಸನ್ಮೋಹನಾಂಗಿಯರು ಸರ್ವಾಭರಣವಿಟ್ಟು | ಮನ್ಮಥನ ಹಿಡಿದೇಜಿ ಕುಣಿವಂತೆ ಮುಂದೊರಿದು | ಕಣ್ಣಂಚಿನಿಂದ ಜಗವೆಲ್ಲ ಬೆಳಗುತಲಿ 2 ಕರ್ಪುರದ ವೀಳ್ಯೆಯವ ಮೆಲುತ ನಾನಾ ಬಗೆ | ಅಗರು ಶಿರಿಗಂಧ | ಸಾರ್ಪರಿಮಳ ಸಕಲ ದ್ರವ್ಯದಿಂದೋಕುಳಿಯ | ಮಾರ್ಪೆಸರು ಬಾರದಂತೆ | ಅರೆರೆ | ಕರ್ಪಾಣಿಯೊಳಗೆ ದ್ವೀಪಾಂತರದ ತರ ನಿಲುವ | ದರ್ಪಣವ ಪಿಡಿದು ಸರ್ವಾಂಗ ನೋಡಿಕೊಳುತ | ದರ್ಪ ತಗ್ಗಿಸದಲೆ | ಪೊನ್ನುಡೆಗಳ ತುಡುಕಿ ಕಂ | ದರ್ಪನಪ್ಪನ ಮೇಲೆ ಗುಪ್ಪಿರರು ಮುದದೀ 3 ಮೇಲ್ಮೇಲು ಸೊಗಸು ಚನ್ನಿಗರಾಯನಿಲ್ಲ ನಿಲೂ ನೀಲ್ಮೇಘ ವರ್ಣಾನೆ | ಕಾಲ್ದೆಗೆದು ನಮ್ಮಮ್ಮ | ತೋಳ್ಮದವ ತೀರಿಸದೆ ಪೋಗದಿರು ಭಡಭಡಾ | ಕರವ ತೆಕ್ಕೊ | ಅರೆರೆ | ತಾಳ್ಮದತಿಗತಿಯಂತೆ ಹೆಜ್ಜೆಯ ನಿಡುತ | ಸತಿ | ಜಾಲ್ಮೊಗದು ವಾರಿಧಿಯ ಥೆರೆಯಂತೆ ಮೂದಲಿಸಿ | ಆಳ್ಮಾತಿಲಿಂದ ಹೈ ಎನುತ ಚಲ್ಲಿದರೂ4 ಪೆಣ್ಗಳಿರಾ ನಿಮಗೇಕೆ ಪ್ರಬಲತನವೆಂದೆನುತ | ಅಣ್ಗದಾ ಗೋವಳರ ನಡುವೆ ವಪ್ರ್ಪಿರ್ದಸು | ವಣ್ಮಾತ್ರ ಪರಮಾತ್ಮನೀಕ್ಷಿಸಿದ ಅವರವರ | ಕಣ್ಗೊರಳ ಕುಚ ತೊಡೆಗಳ | ಅರೆರೆ | ಹೃತ್ತಾಪ ಹರಿಸುವ | ಸಿರಿ | ಸರ್ರನೆ ಓಕಳಿ ಚಲ್ಲೆ | ಸಣ್ಗೊಲ್ಲತಿಯರು ಬೆರಗಾಗಿ ಮರಳೆÀ ಹರಿಯ | ಬೆಣ್ಗಳ್ಳನೆಂದು ಮುತ್ತಿದರು ಹಾಸ್ಯದಲಿ 6 ತೋರ್ಕೈಯ ಬಚ್ಚಿಡದೆ ಪಳ್ಳಿಗನೆ ಠಕ್ಕಿಸದೆ | ಮಾರ್ಕರೆದುಕೋ ನಿನ್ನ ಗೆಳೆಯರನ ಒಂದಾಗಿ | ಸೂರ್ಕುದೇಗಂತೆ ಸರ್ವೋದ್ಧಾರಗರದ ವೈ | ಜೀರ್ಕೋಳಲಿ ತೆರವಿಲ್ಲದೆ | ಅರೆರೆ | ಅರ್ಕನರ್ಕಕೆ ವಾರಿ ಇಂಗಿ ಪೋಗುವಂತೆ | ನರ್ಕಾಂತಕನ ಕಾಯದೊಳಗೆ ಓಕುಳಿಯಡಗೆ | ಅರ್ಕಾದ್ರಿಯಂತೆ ಶಿರಿ ಕೃಷ್ಣರಾಜಿಸುತಿರೆ | ತರ್ಕೈಪ ಭರದಿಂದ ನಾರಿಯರು ಇರಲು 7 ಹಸ್ತ ಲಾಘವ ನೋಡಿ ತಲೆದೂಗಿ ನಕ್ಕು ಸ | ಮಸ್ತ ನಾರಿಯರಿಟ್ಟು ಉಟ್ಟ ಮಂಗಳವಸನ | ವಸ್ತುಗಳು ಜಿಗಳುವಂತೆ ಓಕುಳಿಯಿಂದ | ವಿಸ್ತಾರವಾಗಿ ಉಗ್ಗೆ | ಅರೆರೆ | ಕಸ್ತೂರಿಮೃಗದಂತೆ ಸುಳಿಸುಳಿಯ ನಿಂದಿರ್ದ| ಹಸ್ತಿಗಮನಿಯರೊಡನೆ ಕ್ರೀಡೆಯನು ಪರಾತ್ಪÀರ | ವಸ್ತು ಲಕುಮಿಯ ರಮಣ ಆಡುತಿರೆ ನಾಲ್ಕೈದು | ಮಸ್ತಕಾದ್ಯರು ವಿಸ್ತರಿಸಲರಿದೆನಲು 8 ಸುಕ್ಕದೆ ಕುಚಗುಳುಬ್ಬಿ ಕಕ್ಕಸವಾಗೆ ಹೆಜ್ಜೆ | ಇಕ್ಕಲಾರದೆ ವಿರಹತಾಪದಿಂದೀಕ್ಷಿಸುತ | ವಖ್ಖಣಿಸುವ ಮಾತು ಹಿಂದಾಗುತಿರೆ ಕಲೆಗ | ಳುಕ್ಕೇರಿ ಬೆವರುತಿರಲು | ಅರೆರೆ | ಅಕ್ಕಕ್ಕೊ ಎಂದು ಅಕ್ಕೋಜಗೆಗೊಳ್ಳುತ್ತ ತಾ | ರಕ್ಕಿಯಂತೆ ಕೃಷ್ಣ ಸುತ್ತ ವಲ್ದರು | ಸಕ್ಕರೆದುಟಿ ಚಲುವ ಉಡುಪನಂತೆ ವಪ್ಪೆ | ದಕ್ಕಿವನಂತೆ ಸಂತರಿಸುತಲಿ ಇಂದೂ 9 ಬೆರ್ದೋಕಳಿಯನಾಡಿ ಸರಿ ಮಿಗಿಲು ಎನಿಸಿ ಕೆಲ | ಸಾರ್ದಿರ್ದ ನಾರಿಯರ ಶಿರವ ತಡವರಿಸಿ ಶತ | ಸಾರ್ದವೆಲೆ ಉಳ್ಳ ಉಡುಗೊರೆನಿತ್ತು ಮನ್ನಿಸಿ | ಮೀರ್ದಾಭರಣವ ತೊಡಿಸಿ | ಅರೆರೆ | ಸಾರ್ದೆಗೆದು ತರ್ಕೈಸಿ ಪ್ರೀತಿಯಿಂ ಬಡಿಸಿ ಮುರ ಮರ್ದನ ವಿಜಯವಿಠ್ಠಲ ಮೆರೆದ ಗೋಕುಲ ದೊರೆ | ಸುಜನ ಜನಸಂಗಾ 10
--------------
ವಿಜಯದಾಸ
ಬಂದು ಹೃದಯಮಂದಿರದೊಳಗೆಕೂಡೋ ಕೇಶವಮಾಧವ ಪ ತಂದೆಯೆನಾಂ ವಂದಿಪೆನೋ ಕಂದನ ಕುಂದನೆಣಿಸದೆ ಅ.ಪ ಭ್ರಮರ ಕೀಟನ್ಯಾಯದಿ ಬೇಗದಿ ತಾನೆ ತಾ ತನ್ಮಯತೇ ದಿವ್ಯಮಂಗಳ ವಿಗ್ರಹನೇ 1 ನಾಲಗೆಯ ನಡೆಮುಡಿ ಹಾಸುವೆ ಪಾಲ ಸುಮೃದುಪದಾ ಶುಭದ ನೀನೊಲಿಯುತೆ ನಲಿದು 2 ಗಾತ್ರ ಮೂರ್ತಿ ಶ್ರೀಕರ ತಂಗದಿರಾ ಬೆಂಗದಿರಾ ಶಂಕಚಕ್ರ ಚತುರ್ಭುಜ 3 ಸಂಚಿತವೆಂತೋ ಸ್ವಾಮಿ ಹಂಚಿ ನಿನ್ನ ಸೇವೆಯ ಗೈಸುತ 4 ಮುನಿಜನಗಳ ಪೊರೆವುದು ಹೆಚ್ಚೇ ಚಿನುಮಯಾತ್ಮನೇ ಚೆನ್ನಿಗ ಅಣುಗನು ನಾನಜ್ಞಾನಿ ಕನಿಕರದೆನ್ನ ಕಾಯ್ದರೆ ಕೀರ್ತಿ 5 ಮಾಯಮುಚ್ಚಿ ಕಾಯನೆಚ್ಚಿ ನೋಯುತ್ತಿಹೆನೋ ನರಹರಿ ಜೀಯ ಜಾಜೀಶಹರಿ ರಾಮ ರಕ್ಷಿಸು ಶ್ರೇಯ ಕೊಟ್ಟು6
--------------
ಶಾಮಶರ್ಮರು
ಬಾಲಕ ಕಂಡೆನು ನಿನ್ನ | ಬಾಲಕ ಪ. ಬಾಲಕ ಕಂಡೆನು ನಿನ್ನಾ | ಮುದ್ದು ಬಾಲ ತೊಡಿಗೆ ಇಟ್ಟರನ್ನಾ | ಆಹ ಕಾಲ ಕಾಲದ ಪೂಜೆ ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ. ವಸುದೇವ ಕಂದ ಗೋವಿಂದ ವಸುಧಿ ಭಾರವನಿಳುಹೆ ಬಂದಾ | ಪುಟ್ಟ ಹಸುಗಳ ಕಾಯ್ವ ಮುಕುಂದ | ರ ಕ್ಕಸರನೆಲ್ಲರ ತಾನೆ ಕೊಂದಾ | ಆಹಾ ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು ಶಶಿಮುಖಿಯರಮನಕಸಮ ಸಂತಸವಿತ್ತು 1 ವಿಶ್ವವ್ಯಾಪಕನಾದ ಬಾಲಾ | ಸರ್ವ ವಿಶ್ವ ತನ್ನೊಳಗಿಟ್ಟ ಬಾಲಾ | ಸ ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ ಈಶ್ವರ ಸುರ ಪರಿಪಾಲಾ | ಆಹ ವಿಶ್ವ ಪ್ರದೀಪಕ ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2 ಸಿರಿಗರಿಯದ ಗುಣನೀತಾ | ಮತ್ತೆ ಸಿರಿಯ ತನ್ನೊಳಗಿಟ್ಟಾತಾ | ಆ ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ ಸಿರಿಯಿಂದ ಮಾಡಿಸುವಾತಾ | ಆಹ ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3 ಪ್ರಳಯಾಂಬುವಟಪತ್ರ ಶಯನಾ | ಥಳ ಥಳಿಸುವ ಪದತಳ ಅರುಣಾ | ವರ್ಣ ಎಳೆಗೂಸಿನಂತಿಹ ಚಿಣ್ಣಾ | ಆರು ತಿಳಿಯಲಾಗದ ಗುಣಪೂರ್ಣ | ಆಹ ನಳಿನಭವನ ಪೊಕ್ಕಳಲಿ ಪಡದು ತನ್ನ ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4 ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್ ಸುತರ ಪಡೆದಂಥ ಸಂಪನ್ನಾ | ವೇದ ತತಿಗೆ ಶಿಲ್ಕದ ಸುಗುಣಾರ್ಣ | ಅ ದ್ಭುತ ರೂಪ ಜಗದೇಕ ಘನ್ನಾ | ಆಹ ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ ಜತನದಿ ಜಗಜೀವತತಿಗಳ ಕಾಯೂವ 5 ಸುರತತಿಗಳನೆ ನಿರ್ಮೀಸಿ | ಅವರೊಳ್ ತರತಮ ಭೇದ ಕಲ್ಪಿಸಿ | ತನ್ನ ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ ಗರಸನ್ನ ಮಾಡಿ ನೀ ನಿಲಿಸೀ | ಆಹ ಪರಮೇಷ್ಟಿ ಪದವಿತ್ತು ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6 ಸರಿ ಇಲ್ಲ ವಾಯುಗೆಂದೆನಿಸೀ | ತತ್ವ ಸುರರಿಗಧೀಶನೆಂದೆನಿಸೀ | ತನ್ನ ಶರಣರ ಕಾಯ್ವನೆಂದೆನಿಸೀ | ಅವ ನಿರುವಲ್ಲಿ ತಾ ಸಿದ್ಧನೆನಿಸೀ | ಆಹ ತರಣಿಜಗೊಲಿಯುತ್ತ ಕುರುಕುಲವಳಿಯುತ್ತ ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7 ತ್ರಿವಿಧ ಜೀವರಗತಿದಾತಾ | ನಮ್ಮ ಪವನನಂತರ್ಯಾಮಿ ಈತಾ | ಪದ್ಮ ಭವ ರುದ್ರ ತ್ರಿದಶರ ಪ್ರೀತಾ | ಭಕ್ತ ರವಸರಕೊದಗುವ ದಾತಾ ಪವನಜ ಸತಿಭಕ್ತ ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8 ಶೋಣಿತ ನೀಲ ಕಾಯಾ | ದೇವ ಅಕ್ಲೇಶ ಆನಂದಕಾಯಾ | ಯುಗಕೆ ತಕ್ಕಂಥ ವರ್ಣಸುಕಾರ್ಯ | ಮಾಳ್ಪ ರಕ್ಕಸಾಂತಕ ಕವಿಗೇಯಾ | ಆಹ ಪೊಕ್ಕಳ ನಾಡಿಯೊಳ್ ಸಿಕ್ಕುವ ಜ್ಞಾನಿಗೆ ದಕ್ಕುವ ಸುರರಿಗೆ ಠಕ್ಕಿಪ ದನುಜರ 6 ಸಚ್ಚಿದಾನಂದ ಸ್ವರೂಪ | ಭಕ್ತ ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ ಭವ ಕೂಪಾ | ದಲ್ಲಿ ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10 ವಲ್ಲನು ಸಿರಿಸತಿ ಪೂಜೆ | ಮತ್ತೆ ವಲ್ಲನು ಸುರ ಸ್ತುತಿ ಗೋಜೆ | ತಾ ನೊಲ್ಲನು ಮುನಿಗಳ ಓಜೆ | ಹರಿ ವಲ್ಲನು ಋಷಿಯಾಗವ್ಯಾಜೆ | ಆಹ ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11 ಅಂಬುದಿಶಯನ ಶ್ರೀಕಾಂತಾ | ಸರ್ವ ಬಿಂಬನಾಗಿಹ ಮಹಶಾಂತ | ತನ್ನ ನಂಬಿದ ಸುಜನರ ಅಂತಾ | ರಂಗ ಅಂಬುಜ ಮಧ್ಯ ಪೊಳೆವಂಥಾ | ಆಹ ಭಂಜನ ಪಶ್ಚಿ- ಮಾಂಬುಧಿ ತಡಿವಾಸ ಶಂಬರಾರೀಪಿತ12 ಸ್ವಪ್ನದಿ ಗೋಪಿಕರ ತಂದು | ಎನ ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ ದಪ್ಪಾರಭರಣವದೆಂದೂ | ನಾನು ವಪ್ಪದಿರಲು ಎತ್ತೆನೆಂದೂ | ಆಹಾ ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13 ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ ನಾಮಕ ಶಿರಿವರ ಕರುಣಾ | ಪೂರ್ಣ ಹೇಮಾಂಡ ಬಹಿರಾವರ್ಣ | ವ್ಯಾಪ್ತ ಮಾ ಮನೋಹರ ಪ್ರಣವ ವರ್ಣಾ | ಆಹ ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14 ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ ಅದುಭುತ ರೂಪ ತೋರಿಸೀ | ಸ- ನ್ಮುದವಿತ್ತು ಕುರುಕುಲವರಸಿ | ಆಹ ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15 ನಿತ್ಯನೂತನ ದೇವ ದೇವಾ | ಸರ್ವ ಶಕ್ತ ನಿನ್ಹೊರತಾರು ಕಾವಾ | ಎನ್ನ ಚಿತ್ತದಿ ನೆಲಸು ಪ್ರಭಾವಾ | ಸರ್ವ ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16 ಚರಣತಳಾರುಣ ಪ್ರಭೆಯೂ | ಹತ್ತು ನಖ ಪಂಕ್ತಿಯ ಪರಿಯೂ | ಗೆಜ್ಜೆ ಸರಪಳಿ ಪಾಡಗರುಳಿಯೂ | ಮೇಲೆ ಜರೆಯ ಪೀತಾಂಬರ ನೆರಿಗೆಯೂ | ಆಹ ವರ ಜಾನುಜಂಘೆಯು ಕರಿಸೊಂಡಲಿನ ತೊಡೆ ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17 ಸರಸಿಜೋದ್ಭವ ವರಸೂತ್ರ | ಮೇಲೆ ಮೆರೆವಂಥ ಸಿರಿಯ ಮಂದೀರ | ಹೃದಯ ವರರತ್ನ ಪದಕದ ಹಾರ | ಸ್ವಚ್ಛ ದರ ವರ್ಣ ಪೊಲ್ವ ಕಂಧಾರಾ | ಆಹ ಕರದ್ವಯ ಕಂಕಣುಂಗುರ ತೋಳ ಬಾಪುರಿ ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18 ಮೊಸರರ್ಧ ಕಡದಿರೆ ಜನನೀ | ಬಂದು ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ- ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19 ಪದ್ಮ ಮುಖದ ಕಾಂತಿ ಸೊಂಪೂ | ಅಧರ ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ ಕುಂಡಲ ಕೆಂಪೂ | ಆಹ ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20 ಕಮಲಸಂಭವ ವಾಯುಚಲನಾ | ಹುಬ್ಬು ವಿಮಲ ಫಣೆ ತಿಲುಕದಹನಾ | ಮೇಲೆ ಭ್ರಮರ ಕುಂತಳ ಕೇಶ ಚನ್ನಾ | ವಜ್ರ ಅಮಿತ ಸುವರ್ಣ ಮುತ್ತೀನಾ | ಆಹ ಕಮನೀಯ ಮಕುಟವು ಸುಮನಸರೊಂದಿತ ಕಮಲ ತುಳಸಿಹಾರ ವಿಮಲಾಂಗ ಸುಂದರ 21 ಅಂತರ ಬಹಿರ ದಿವ್ಯಾಪ್ತಾ | ಸರ್ವ ರಂತರ ಬಲ್ಲ ನೀ ಗುಪ್ತಾ | ಜೀವ ರಂತರಂಗದಿ ವಾಸ ಸುಪ್ತಾ | ದಿಗ ಳಂತಾನೆ ನಡೆಸುವ ಆತ್ತಾ | ಆಹ ಸಂತತ ಚಿಂತಿಪರಂತರಂಗದಿ ನಿಂತು ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22 ಎಚ್ಚತ್ತು ಇರುವ ಸರ್ವದಾ | ಕಾಲ ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ ನುಚ್ವಾಸದುತ್ಪತ್ತಿಯಾದ | ಬಾಯ ಪಾದ | ಆಹ ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23 ಗೊಲ್ಲರೊಡನಾಟ ಬಯಸೀ | ವಸ್ತು ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ ಚಲ್ವ ಕುದುರೆ ಏರಿ ಚರಿಸೀ | ತಾ ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24 ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ ರೂಪ ಸಜ್ಜನ ಪರಿಪಾಲಾ | ಗುರು ನಿತ್ಯ ನಿರ್ಮಾಲಾ | ದೇವಾ ಗೋಪಾಲಕೃಷ್ಣವಿಠ್ಠಾಲ | ಆಹ ಪರಿ ನಿಂತು ಮ ಕೊಂಡ ಶ್ರೀಪತಿ ಮರುತೇಶ 25
--------------
ಅಂಬಾಬಾಯಿ
ಬಿಟ್ಟನ್ಯಭಜನೆಯ ಕಂಡು ಪ ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ ಬೆಚ್ಚಿ ಅರಗಿನ ಮನೆಯ ಹೊಗುವವನಂತೆ ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ ತುಚ್ಛ ದೈವಗಳ ಮರೆಯೊಗುವ ಮನುಜರಕಂಡು 1 ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು ಹರಣವನುಳುಹಿಕೊಂಬೆನೆಂಬಂತೇ ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ 2 ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ ಮಿಗೆ ಬಾಳ್ವೆನೆಂಬ ಮರುಳನಂದದೀ ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ ತೆಗಳಮರೆಯೊಗುವ ಮನುಜರ ಕಂಡು 3 ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು 4 ಯಾತಮುಳಿದರೆ ಜಗದಲುಳಿದವರಾರು ಮ ತ್ತೀತನುಳುಹಿದನನು ಕೊಂದವನಾವ ಇ ದೇತಕರಿಯರೋ ನರರು ಅಕಟಕಟ ವೈಕುಂಠ ನಾಥ ಪರಿಪೂತನ ಪದಕಮಲವ ಭಜಿಸರೆಂದು 5 ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ ಕೃಪಾನಿಧಿಯಿರಲು 6
--------------
ಬೇಲೂರು ವೈಕುಂಠದಾಸರು
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ. ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ 1 ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ2 ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ3 ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ4 ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ5 ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ6 ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ7
--------------
ಗಲಗಲಿಅವ್ವನವರು
ಬಿದಿಗೆಯ ದಿವಸ (ಹನುಮಂತನನ್ನು ಕುರಿತು) ರಂಭೆ : ಕಮಲದಳಾಕ್ಷಿ ಪೇಳೆಲೆ ಈತನ್ಯಾರೆ ಸಮನಸನಾಗಿ ತೋರುವನಲ್ಲೆ ನೀರೆಪ. ಧನ್ಯನಾಗಿರುವ ದೊರೆಯ ಧರಿಸುತ್ತ ಚೆನ್ನಿಗನಾಗಿ ತೋರುವನಲ್ಲೆ ಈತ1 ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವ ಕಟ್ಟಿದುತ್ತರೀಯ ಭೂಷಣದಿಂದ ಮೆರೆವ 2 ಸೋಮಾರ್ಕಶಿಖಿಯಂತಿರುವುದು ತ್ರಿನಾಮ ರಾಮಣೀಯಕ ಮನೋಹರ ಪೂರ್ಣಕಾಮ3 ವೀರವೈಷ್ಣವ ಮುದ್ದು ಮೋಹನಕಾಯ ಭೂರಿಭೂಷಣಭುಜಬಲ ಹರಿಪ್ರಿಯ4 ರೂಪ ನೋಡಲು ಕಾಮರೂಪನಂತಿರುವ ಚಾಪಲ ಪ್ರೌಢ ಚಿದ್ರೂಪನಂತಿರುವ 5 ಬಾಲವ ನೆಗಹಿ ಕಾಲೂರಿ ಶೋಭಿಸುವ ನೀಲದುಂಗುರದ ಹಸ್ತವ ನೀಡಿ ಮೆರೆವ 6 ಗೆಜ್ಜೆ ಕಾಲುಂಗರ ಪದಕ ಕಟ್ಟಾಣಿ ಸಜ್ಜನನಾಗಿ ತೋರುವನು ನಿಧಾನಿ 7 ಊರ್ವಶಿ : ತರುಣಿ ಕೇಳೀತನೆ ದೊರೆ ಮುಖ್ಯಪ್ರಾಣ ವರ ನಿಗಮಾಗಮ ಶಾಸ್ತ್ರಪ್ರವೀಣ 1 ಮಾಯವಾದಿಗಳ ಮಾರ್ಗವ ಖಂಡಿಸಿದ ರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆ ಚಟುಳ ಹನುಮನ ಉತ್ಕಟರೂಪ ಕಾಣೆ 1 ವಾಮನನಾದ ಕಾರಣವೇನೆ ಪೇಳೆ ನಾ ಮನಸೋತೆ ಎಂತುಂಟೊ ಹರಿಲೀಲೆ 2 ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳು ಸಾಗಿತು ಸೇವೆಯೆಂಬುದು ಮನಸಿನೊಳು1 ವಾದವ ಮಾಡಿ ವಿನೋದದಿ ಹರಿಯ ಪಾದಸೇವೆಗೆ ಮನನಾದ ಕೇಳಿದೆಯೊ2 ವೀರ ವೇಷವನಿದ ಕಂಡು ಶ್ರೀಹರಿಯ ದೂರವಾದನೋ ಎಂದು ಮನದೊಳು ನಿಜವು3 ಭೂರಿಭೂಷಣ ಸುಂದರ ರೂಪವಾಂತ4 ಇಂದಿನ ಸೇವೆಯೆನ್ನಿಂದತಿ ದಯದಿ ಮಂದರಧರಿಸಿಕೊಳ್ವುದು ಎಂದು ಭರದಿ5 ಒಯ್ಯನೆ ಪೇಳುತ್ತ ವಯ್ಯಾರದಿಂದ ಕೈಯನು ನೀಡಿ ಸಾನಂದದಿ ಬಂದ6 ಕಂತುಪಿತನು ಹನುಮಂತ ಮಾನಸಕೆ ಸಂತಸ ತಾಳಿ ಆನಂತನು ದಿಟಕೆ7 ಭೂರಿ ವೈಭವದಿ ಸ್ವಾರಿಯು ಪೊರಟ ಸಾಕಾರವ ಮುದದಿ8 ತೋರಿಸಿ ಭಕ್ತರ ಘೋರ ದುರಿತವ ಸೂರೆಗೊಳ್ಳುವನು ವಿಚಾರಿಸಿ ನಿಜವ9 ಹದನವಿದೀಗೆಲೆ ಬಿದಿಗೆಯ ದಿನದಿ ಮದನಜನಕನು ಮೈದೋರುವ ಮುದದಿ10 ಪ್ರತಿದಿನದಂತೆ ಶ್ರೀಪತಿ ದಯದಿಂದ ಅತಿಶಯ ಮಂಟಪದೊಳು ನಲವಿಂದ11 ಎಂತು ನಾ ವರ್ಣಿಪೆ ಕಂತುಜನಕನ ಅಂತ್ಯರಹಿತ ಗುಣಾನಂಮಹಿಮನ12 ಏಕಾಂತದಿ ಲೋಕೈಕನಾಯಕನು ಶ್ರೀಕರವಾಗಿ ನಿಂದನು ನಿತ್ಯಸುಖನು13 * * * ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾಪ. ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆ ತವಕದಿ ಬರುವತ್ತಿತ್ತವರನ್ನು ನೋಡದೆ 1 ಅಂದಣವೇರಿ ಮತ್ತೊಂದ ತಾ ನೋಡದೆ ಒಂದೇ ಮನದಿ ಬೇಗ ಮುಂದೆ ಬರುವನಮ್ಮಾ2 ಬಾಲಬ್ರಹ್ಮಚಾರಿ ಶಿಲೆಯಂತಿರುವನು ಅಲೋಚಿಸಲಿವ ಮೂಲಪುರುಷನಮ್ಮಾ3 ಪುಟ್ಟನಾದರು ಜಗಜಟ್ಟಿಯಂತಿರುವನು ದಿಟ್ಟನಿವನವನ ಮುಟ್ಟಿ ನೋಡಮ್ಮ 4 ಊರ್ವಶಿ : ನಾರೀ ಇವನೀಗ ಹೊಂತಕಾರಿ ಲೋಕಕ್ಕಾಧಾರಿ ಪ. ಕೊಬ್ಬಿದ ದೈತ್ಯರಿಗೀತನೆ ಕಾಲ ಹಬ್ಬುವದಾತ್ಮಕ್ಕೀತನೆ ಮೂಲ ಉಬ್ಬುವ ಹರಿಯೆಂದರೆ ಮೈಯೆಲ್ಲ ಒಬ್ಬನಿಗಾದರೂ ಬಗ್ಗುವನಲ್ಲ1 ಎಲ್ಲಿರುವನು ಹರಿ ಅಲ್ಲಿಹನೀತ ಬಲ್ಲಿದ ನಾರಾಯಣಗಿವ ದೂತ ಖುಲ್ಲರ ಮನಕತಿ ಝಲ್ಲೆನುವಾತ ಸುಲ್ಲಭನೆಯಿವ ಮುಂದಿನ ಧಾತ2 ಭೇದವಿಲ್ಲೆಂಬುದವರಿಗೆಯಿವ ತುಂಟ ಮೇದಿನಿ ಬಾಧಕರಿಗೆ ಯಿವ ಕಂಟ ಆದಿ ಮೂರುತಿ ಕೇಶವನಿಗೆ ಬಂಟ ಮಾಧವಭಕ್ತರಿಗೀತನೆ ನೆಂಟ 3 ದುರಿತಾರಣ್ಯದಹನ ನಿರ್ಲೇಪ ವರ ವೆಂಕಟಪತಿಯಿದಿರೊಳಗಿಪ್ಪ ಪರಮಾತ್ಮನ ಪರತತ್ತ್ವ ಸ್ವರೂಪ ಮರೆಮಾತೇನಿವ ದೊರೆ ಹನುಮಪ್ಪ4
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಲೂರು ಬೇಲೂರ ಚೆನ್ನಿಗನ ನೋಡುವ ಬನ್ನಿ ಬಾಲಾರ್ಕತೇಜನ ಪಾಡುವ ಬನ್ನಿ ಪ ಮೇಲಾದ ವರಗಳ ಬೇಡುವ ಬನ್ನಿ ನೀಲಾಂಗನಿಗೆ ಪೂಜೆ ಮಾಡುವ ಬನ್ನಿ ಅ.ಪ ಕ್ಷೀರಸಮುದ್ರದಿ ಮೀಯುವ ಬನ್ನಿ ಇಲ್ಲಿ ದ್ವಾರದೇಶದಿ ನಿಂತು ಕಾಯುವ ಬನ್ನಿ ಚಾರುಸುಗಂಧವ ತೇಯುವ ಬನ್ನಿ ನಮ್ಮ ಕಾರುಣ್ಯದಿಂದವ ಕಾಯುವ ಬನ್ನೀ1 ಸುತ್ತು ಪ್ರದಕ್ಷಿಣೆ ಮಾಡುವ ಬನ್ನಿ ಅಲ್ಲಿ ಚಿತ್ತಾಕರ್ಷಕ ಚಿತ್ರ ನೋಡುವ ಬನ್ನಿ ಅತ್ತಿತ್ತ ವಂದನೆ ಮಾಡುವ ಬನ್ನಿ ಎಲ್ಲ ಮತ್ತೆ ಕೈ ಜೋಡಿಸಿ ಪಾಡುವ ಬನ್ನಿ 2 ಎಂಥ ಚೆಲುವ ಚೆನ್ನನಿವನಬ್ಬ ಮ ತ್ತಿಂಥ ಚೆಲುವನಿಲ್ಲ ಇನ್ನೊಬ್ಬ ಎಂಥ ಲಾವಣ್ಯವಿದಬ್ಬಬ್ಬ ಮ ತ್ತಿಂಥಾವ ಮಾಂಗಿರಿ ರಂಗನೊಬ್ಬ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಜಿಸುವೆ ಕೇಶವ ದೇವನ ಗಜನನು ಸಲಹಿದ ರಂಗನ ಪ ತರಳ ಧೃವನಿಗೆ ರಾಜ್ಯವನಿತ್ತ ಶರಣರ ಸಲಹುವ ರಂಗನ 1 ರಾವಣರಾಕ್ಷಸನಾಶ ಶ್ರೀ ಕೃಷ್ಣನ ದೇವಕಿನಂದನ ರಂಗನ 2 ಭವರೋಗವ ಪರಿಹರಿಸುವ ದೇವನ ಪವನಜವಂದಿತ ರಂಗನ 3 ಸುಜನರ ಪಾಲಿಸಿ ಕುಜನರ ತರಿಯುವ ಭಜಕರ ಪೊರೆಯುವ ರಂಗನ 4 ಪನ್ನಗಶಯನನ ಶ್ರೀ ಮಾಧವನ ಚನ್ನಿಗಕೇಶವ ರಂಗನ 5
--------------
ಕರ್ಕಿ ಕೇಶವದಾಸ
ಭಾಗೀರಥೀ ಜನಕಗೆ ಭಾಗವತಪ್ರಿಯಗೆ ಆಗ ನೀರೆರೆದರವಿಂದಲೋಚನನಿಗೆ ಗೋಪಿ 1 ಸಾಗರಶಯನನ ತೂಗಿ ತೊಟ್ಟಿಲೊಳಿಟ್ಟು ನಾಗಮುರಿಗೆ ವಂಕಿ ನಂದಗೋಪನ ಸುತಗೆ ಬೆರಳಿಗುಂಗುರ ಕೋಟಿಭಾಸ್ಕರತೇಜಗೆ ಹೊಳೆವೊ ಬಿಂದಲಿ ಗುಂಡು ಭುಜಕೀರ್ತಿ ಭೂಷಣ 2 ಮಲಕು ಮುತ್ತಿನ ಹಾರ ಪದಕ ಪಚ್ಚೆಯ ಕಾಂತಿ ಕೌಸ್ತುಭ ರತ್ನ ಥಳಥಳಿಸುವ ಕರ್ಣದಲ್ಲಿ ಬಾವುಲಿ ಚೌಕುಳಿ ಚಳತುಂಬು ಮುತ್ತಿನಬಟ್ಟು ಮುಂದಲೆಗೆ 3 ಹೊಸ ವಜ್ರದರಳೆಲೆ ಹುಲಿಯುಗುರು ತಾಯಿತ ಕುಸುಮನಾಭಗೆ ಕಿರುಗೆಜ್ಜೆ ಕಾಲಲಂದಿಗೆ ಮಿಸುಣಿ ಮಾಣಿಕ್ಯದುಡಿದಾರದಡ್ಡಿಕೆ ಕಟ್ಟಿ ಗೋಪಿ 4 ಕಂಜನಯ್ಯನ ನೋಡೆ ಕಂಗಳಿನ್ನೆರಡಿಲ್ಲ ಜಿಹ್ವೆ ಒಂದೆ ಸಾಲದೆನಗೆಂದು ಅಂಗಿಟೊಪ್ಪಿಗೆ ಹಾಕ್ಯಾಲಿಂಗನೆ ಮಾಡುತ ಸತಿ ತಾನಂದಾನಂದಭರಿತಳಾಗಿ5 ತನ್ನ ಮಗನ ಮುದ್ದು ತಾ ನೋಡಿ ಸಾಲದೆ ಹೊನ್ನ ಪುತ್ಥಳಿಯಂತೆ ಹೊಳೆವೊ ಕೂಸನು ಎತ್ತಿ ನಿನ್ನ ಮಗನ ಆಟ ನೀ ನೋಡೆಂದೆನುತಲಿ ತನ್ನ ಪತಿಯ ತೊಡೆಯಲ್ಲಿಟ್ಟು ನಲಿಯುತ 6 ಹೊನ್ನ ಪುತ್ಥಳಿಗೊಂಬೆ ಹೊಸ ಚಿನ್ನದರಗಿಳಿಯೆ ಹೊನ್ನು ತಾ ಗುಬ್ಬಿತಾರಮ್ಮಯ್ಯ ಎನುತಲಿ ಬಣ್ಣ ಬಣ್ಣದ ಆಟ ವರ್ಣಿಸುತಲಿ ನೀಲ- ವರ್ಣನ ತನ್ನ ತೋಳಿಂದಪ್ಪಿ ನಲಿಯುತ 7 ಸೃಷ್ಟಿಮಾಡುವರಿಲ್ಲೀ ಶಿವ ಬ್ರಹ್ಮರೊಡೆಯನ ಸೃಷ್ಟಿಕರ್ತನಾದನನ್ಹುಟ್ಟಿಸಿದ ನಾಭಿಯಿಂದಿವನು ಹೊಟ್ಟೆಲೀರೇಳು ಜಗವಿಟ್ಟು ಸಲಹುವ ಎಷ್ಟು ಸರ್ವೋತ್ತಮ ಈಗಿಲ್ಲ್ಯವತರಿಸಿದ 8 ಚತುರವದನಗೆ ವೇದ ತಂದಿಟ್ಟು ಸಾಗರ ಮಥಿಸಿ ಮಂದರವನು ಪೊತ್ತು ಅಮೃತವ ಹೀರಿ ಪೃಥಿವಿಯನು ತಂದ ಕೋರೆಯಲಂದ್ಹಿರಣ್ಯಾಕ್ಷನ ಹತವ ಮಾಡಿದ ತಾ ಭೂಪತಿ ಎಂದೆನಿಸಿದಿವನು 9 ಪರಮಭಕ್ತನು ಕರೆಯೆ ಬಿರುದು ಕಂಬದಿ ಬಂದು ಕರುಳ ಬಗೆದ ಪುಟ್ಟ ತÀರÀಳ ರೂಪವ ನೋಡಿ ಮರುಳಾಗಿ ಬಲಿ ಮೂರು ಚರಣ ದಾನ ನೀಡೆ ಬೆಳೆದು ಬ್ರಹ್ಮಾಂಡಕ್ಕೆ ಭುವನ ವ್ಯಾಪಿಸಿಕೊಂಡ10 ಕ್ಷತ್ರ ಸಂಹಾರಿ ತಾ ಎತ್ತಿ ಧನುವ ಸೀತಾ ಸೌ- ಮಿತ್ರಿಸಹಿತ್ವನದಲ್ಲಿ ಇರುತಿರಲಾಗ ಪತ್ನಿ ಒಯ್ಯಲು ಅಸುರನ್ಹತ್ತು ಶಿರಗಳ ತರಿದ ದುಷ್ಟ- ರಂತಕನೆ ನಿರ್ದುಷ್ಟ ಸಜ್ಜನಪ್ರಿಯ 11 ದೇವಾಧಿದೇವ ದೇವಕ್ಕಿ ಜಠರದಿ ಬಂದು ಮಾಯಾ- ಪೂತಣಿಯನ್ನು ಕೊಂದು ವಿಷಮೊಲೆನುಂಡು ಕಾಲಲಿ ಶಕಟನ ಕೆಡವಿದ ಯದುವೀರ ತಾ- ಗೋಪಾಲಕ ಗೋಪೀಸುತನೆಂದೆನಿಸಿಕೊಂಡ12 ವಿಪರೀತ ಮಾಯದಿ ತ್ರಿಪುರದ ಜನರಿಗೆ ದುರ್ಮತವ ಬೋಧಿಸಿ ಅಸುರಾರಿ ಮೋಹಕ ತೋರಿ ಚಪಲ ಚೆನ್ನಿಗ ಖಡ್ಗಪಿಡಿದು ತೇಜಿಯ- ನೇರಿ ಕಪಟನಾಟಕ ಕಲಿಮರ್ದನ ಕರಿಗ್ವರವಿತ್ತ13 ಜನ್ಮಕರ್ಮವು ಜರಾಮರಣಗಳಿವಗಿಲ್ಲ ಜಗದೋ- ಪರಬ್ರಹ್ಮನ ಪಾದಾಂಘ್ರಿಸ್ಮರಣಿ (ಣೆಯಿ?)ರೆ ಪರಮಾ- ದರದಿ ಕರೆದೊಯ್ವ ತನ್ನ (ಬಳಿಯ)ಲ್ಲೆ 14 ಏಸುಜನ್ಮದ ಫಲವಿನ್ನೆಷ್ಟು ಜನ್ಮದ ಸುಕೃತ ಈ ಸಮಯದಿ ಫಲಿಸಿತೀತ ಇಲ್ಲುದಿಸಿರಲು ದೋಷವರ್ಜಿತನೆ ಸಂತೋಷಭರಿತನಿವ ಭೀ- ಮೇಶಕೃಷ್ಣ ಯಶೋದೆ ಕೂಸೆಂದೆನಿಸಿಕೊಂಡ15
--------------
ಹರಪನಹಳ್ಳಿಭೀಮವ್ವ
ಭೂರಿ ಕರುಣಾಕರನೋ ಸಾರುವ ತೆರೆದೊಳು ತೋರಿಹ ಭಕ್ತರ ಪ. ಅಗಣಿತ ಮಹಿಮನ ಪೊಗಳುವೆ ನಾನೆಂತು ಬಗೆ ಬಗೆ ರೂಪದಿ ಸಿಗದೆಸಿಗುವ ಹಾಂಗೆ ಪೊಗಳಿಸಿಕೊಂಡು ತಾ ಝಗಝಗಿಸುತ ಬಹ ನಗೆಮೊಗ ಚೆನ್ನಿಗ ನಿಗಮಗೋಚರ ಕೃಷ್ಣಾ 1 ಭಕ್ತ ಪ್ರಹ್ಲಾದಗೆ ಅತ್ಯಧಿಕ ಹಿಂಸೆ ಯಿತ್ತ ಪಿತನ ಕೊಂದು ಇತ್ತ ಮುಕುತಿ ಅವ ನತ್ಯಪರಾಧವನೆತ್ಯಾಡಿದನೇ ಚಿತ್ತಜನೈಯ್ಯನು ಭಕ್ತವತ್ಸಲ ದೇವ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನೀನೆಂದು ಕ್ಷಣ ಬಿಡದಲೆ ಗಜರಾಜನು ಸ್ತುತಿಸೆ ಅನುವಿಲಿ ಚಕ್ರದಿ ನಕ್ರನ ಹರಿಸಲು ದಣಿದ ಹರಿಗೆ ಗಜರಾಜನೇನಿತ್ತನೋ 3 ಭಕ್ತರ ಮನದಘ ನಿತ್ಯದಿ ಕಳೆದನೋ ಅಶಕ್ತ ಅಜಮಿಳನೆಮ ಭೃತ್ಯರೆಳೆಯಲು ಇತ್ತು ನಾರಗನುಡಿ ಮತ್ತೆ ಯಮಭಟರ ಇತ್ತ ಮುಕುತಿ ದೇವ ಅತ್ಯಧಿಕ 4 ಮೂಗುತಿ ನೆವದೊಳು ಸಾಗಿಸಿ ಭಾಗ್ಯವ ಜಾಗರ ಮೂರುತೆ ಯೋಗಿಗಳರಸನು ಬಾಗಿಸಿ ತನ್ನವರಾಗಿಸಿ ದಾಸರ ಸರ್ವರ ಅನುರಾಗದಿ ಸಲಹುವ 5
--------------
ಸರಸ್ವತಿ ಬಾಯಿ
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ | ಮಂಗಳಂ ಬಲುದುರಿತ ಸಂಹಾರಿಗೆ | ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ ಕುಸುಮ ಚಿತ್ರಹಾರಿಗೆ ಪ ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ | ಪಾಣಿಗೆ ಗಂಭೀರ ಗುಣಶ್ರೇಣಿಗೆ | ತ್ರಾಣಿಗೆ ಕೋಕಿಲವಾಣಿಗೆ ಯಾದವನ | ರಾಣಿಗೆ ಮಣಿಹೇಮ ಭೂಷಣೆಗೆ 1 ಖ್ಯಾತಿಗೆ ತ್ರಿಲೋಕ ಮಾತೆಗೆ ಯ | ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ | ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ | ಅಮಿತ ಗುಣ ಪ್ರತಾಪಿಗೆ || 2 ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ | ಪನ್ನಿಗೆ ಸಗರಕುಲ ಪಾವನ್ನಿಗೆ | ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು | ವರ್ನಿಗೆ ವಿಜಯವಿಠ್ಠಲ ಕನ್ನಿಗೆ 3
--------------
ವಿಜಯದಾಸ
ಮಗುವ ತಡೆಯಬಾರದೆ ಮಾನಿನಿಯರುಸುಗುಣ ಚೆನ್ನಿಗನೆಂಬ ಸೊಬಗುಳ್ಳ ಮಗುವ ಪ ನೀರೊಳಗೆ ಪೊಕ್ಕು ತಾ ಬೀರುತಿದೆ ಮಾತುಗಳಧರಣಿಧರ ತಳಕಿಳಿದು ಬಾರದಿದೆಕೊಘೋರ ಪಾತಕವೆಂಬ ಬೇರ ಮೆಲ್ಲುತಲಿದೆಕೊಬಾರಯ್ಯ ಎನೆ ಕೋಪವೇರುತಿಹ ಮಗುವ 1 ಬೇಡುತಿದೆ ದಾನವನು ನೀಡುತಿದೆ ಪಾದವನುರೂಢಿಪಾಲರ ಕಂಡು ಕೊಲ್ಲುತಿದೆಕೊಓಡುತಿದೆ ಮೃಗದೊಡನೆ ಆಡುತಿದೆ ಕಪಿಗಳೊಳುನೋಡಲ್ಕರಿನಾಗರ ಹಾವ ತುಳಿಯುತಿದೆಕೊ 2 ಇತ್ತ ಬಾರೆಂದೆನಲು ಬತ್ತಲೆ ನಿಲ್ಲುತಿದೆಕೊಮತ್ತೆ ತೇಜಿಯನೇರಿ ನಲಿಯುತಿದೆಕೊಹತ್ತೆ ಬಂದವರಿಗೆ ಅರ್ತಿಯನು ನೀಡುತಿಹನಿತ್ಯ ವೈಕುಂಠದಲಿ ನಲಿವ ಮಗುವ 3
--------------
ಕನಕದಾಸ