ಒಟ್ಟು 233 ಕಡೆಗಳಲ್ಲಿ , 63 ದಾಸರು , 211 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ಟೀಕಾಚಾರ್ಯರ ಸ್ತೋತ್ರ ದಯದಿ ಪಾಲಿಸೋ ಜಯತೀರಥ ರಾಯಾ | ಅಕ್ಷೋಭ್ಯರ ತನಯಾ ಪ ಅತ್ಯಂತ್ಹರುಷದಿ ಎತ್ತಾಗಿರುತಿರಲೂ ಶ್ರೀ |ಆನಂದ ತೀರಥರೂನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ |ಗುರುರಾಯರು ಪೇಳಿದತತ್ವ ಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ 1 ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀದೇಶ ದೇಶದೋಳ್ ಸೈನ್ಯವನೇ ಚರಿಸೀ | ಹಣವನ್ನೇ ಗಳಿಸೀವಾಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀಶ್ರೀಶನಾಜ್ಞೆಯೊಳಿವರನೆ ಕರೆತರಿಸೀ |ಶಿಖೆ ಸೂತ್ರವ ತೆಗೆಸೀ2 ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾಕಂಡು ಭೇಟಿಯಾ ಮಾಡುತಲೇ ನಿಂದೂ | ಧೋಂಡೋ ರಘುನಾಥನಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ - ಪ್ರಚಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ 3 ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |ನಾನಾ ಬಗೆಯಿಂದಲಿಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನುಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ 4 ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳುವಾಸಿಪನೆಂಬೋ ಬಲು ಪ್ರಖ್ಯಾತಾ |ನಿಜಗುಣ ಗಣನೀತಾಬ್ಯಾಸರದಲೆ ಕೊಂಡಾಡಿದರೆ ನಿತ್ಯಾ | ಇಷ್ಟಾರ್ಥವನಿತ್ತಾ 5
--------------
ವ್ಯಾಸವಿಠ್ಠಲರು
ತಡೆಯುತಲಿದೆ ಪುಷ್ಪಮಾಲೆ ಪ ಒಡಲೊಳಗಾತ್ಮನ ವರ ಮಕುಟಾಗ್ರದಿಅ ಕುಸುಮ ದಾಮವು ಕಿರಿದುವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದನವ ವೈಜಯಂತಿಯ ಹಿರಿದಾಗಿ ಭಾವಿಸಿ1 ಸ್ಥಿರ ಮತಿಯೆಂಬ ಆಸನವನು ಅಳವಡಿಸಿ - ತ್ರಿಕರಣವೆಂಬ ತಾಂಬೂಲವನೊಪ್ಪಿಸುತ - ಮಾಯ ಮರವೆಯೆಂಬ ದಕ್ಷಿಣೆ ಕೊಟ್ಟು - ಮಮ ಭಾವದಿರುವಿನ ತಮವನೋಡಿಸಿ ನಿಂದ ಗುರುದೇವ2 ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿಪ್ರಜ್ಞಾನವೆಂಬ ದೀವಿಗೆ ಸ್ತಂಭ ಹೂಡಿಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ 3
--------------
ಕನಕದಾಸ
ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ ಧರೆಯೊಳು ಸುಜನರಾ ಪೊರೆಯಲೋಸುಗ ನೀನು ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ 1 ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ ದೇಶ ದೇಶದಿ ಜನರು ಬಂದು ಕಾದಿಹರೋ2 ಕರೆದಾರೆ ಬರುವಂಥ ಕರುಣಸಾಗರ ನೀನು ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ 3 ಬೇಡಿದಳಾ ವರಗಳ ಕೊಡುವ ನೀನೆನುತಲಿ ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ 4 ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ ಮತಿಯ ಪಾಲಿಪುದು - ಶ್ರೀ ಗುರುರಾಘವೇಂದ್ರಾ 5
--------------
ರಾಧಾಬಾಯಿ
ದಾನಿಗಳೊಳು ಪ್ರತಿಗಾಣೆನೊ ನಿನಗೆಸ ನ್ಮೌವಿ ಶ್ರೀ ಸುಶೀಲೇಂದ್ರ | ನೀನೇವೆ ಗತಿ ಎಂದ ದೀನರ ಮನೋಭೀಷ್ಟ ಸಾನುರಾಗದಿ ಕೊಡುವಿ | ಕೈಪಿಡಿಯುವಿ ಪ ಶ್ರೀಸುವೃತೀಂದ್ರ ಸುಯಮೀಂದ್ರಗಳಿಂದಲಿ ಸ | ನ್ಯಾಸತ್ವ ಸ್ವೀಕರಿಸಿ ಪತಿ ಮೂಲ | ದಾಶರಥಿಯ ಪಾದ ಲೇಸಾಗಿ ಒಲಿಸಿದೆ ನೀ | ಸುಜ್ಞಾನಿ 1 ಕರಿವರದನ ಪೂರ್ವ ಕರುಣ ಪಡೆದು ದಿವಾ ಕರನಂತೆ ರಾಜಿಸುತ | ಗುರುರಾಘವೇಣದ್ರಾಖ್ಯ | ಸುರಧೇನುವಿಗೆ ಪುಟ್ಟ ಕರುವೆನಿಸುತ ಮೆರದಿ ಭೂವಲಯದಿ 2 ಮೋದತೀರ್ಥಾಗಮ ಸಾಧು ಸಜ್ಜನರಿಂದ ಶೋಧಿಸಿ ಬಹುವಿಧಧಿ ಪಂಚಭೇದ | ಶಿಷ್ಯರಿಗೆಲ್ಲ ಬೋಧಿಸುತಲಿ ಪೊರೆದಿ ದಯಾಂಬುಧಿ 3 ಸಿಂಧುತೀರದಿ ನೆಲಸಿ ಮಂದ ಜನರಿಗೆ | ಕ ರ್ಮಂದಿ ಪವರಗಳನು | ನೀಡುವಿ ನೀನು 4 ಶ್ರೀ ಶಾಮಸುಂದರ ವಿಠಲ ವಾಸಿಸುವ | ಕಾ ಪ್ಯಾಸನ ವರಕ್ಷೇತ್ರದಿ | ದೇಶ ದೇಶದಿ ಬಂದ | ಭೂಸುರರಿಗೆ ಧನ ರಾಶಿ ಸೂರೆ ಮಾಡಿದಿ | ಸನ್ಮೋಹದದಿ 5
--------------
ಶಾಮಸುಂದರ ವಿಠಲ
ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1 ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2 ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3
--------------
ಶ್ರೀಶಪ್ರಾಣೇಶವಿಠಲರು
ದುರಿತ ತಿಮಿರಕೆ ಸೂರ್ಯ ಶರಣ ಜನ ಭಾಗ್ಯೋದಯ ಪ ನರಹರಿಯ ದಾಸಾರ್ಯ ಮರುತಮತ ಪರಿಚರ್ಯ ಶಿರಬಾಗಿ ಮುಗಿವೆ ಕೈಯ್ಯ ಅ.ಪ. ಘೋರತರ ಸಂಸಾರ ಸಾರತರವೆಂದರಿದು ಪಾರಮಾರ್ಥಿಕವ ತೊರೆದು ಭೂರಿ ನರಕದಿ ಬೆಂದು ಗಾರಾಗಿ ಪೋಪರಂದು ನಾರದರೆ ನೀವ್ ಬಂದು ನಾರಾಯಣಾ ಎಂದು ಚೀರಿದಾ ಧ್ವನಿಗೆ ಅಂದು ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು ಸೇರಿ ಸುಖಿಸಿದರು ಎಂದು 1 ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು ಮೆರೆವ ಕನ್ನಡ ದೇಶದಿ ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ ಇರುವ ಭೂಸುರ ವಂಶದಿ ವರಗರ್ಭದಲಿ ಜನಿಸಿದಿ ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ ಸರ್ವಭಾಗ್ಯವ ಗಳಿಸಿದಿ 2 ಚಿನಿವಾರ ವ್ಯಾಪಾರದನುವರಿತು ನವಕೋಟಿ ಧನಕಧಿಪನೆಂದೆನಿಸುತ ಧನಕನಕ ವಸ್ತು ವಾಹನನಿಚಯ ಸಂಗ್ರಹದಿ ತನುಮನಂಗಳ ಶ್ರಮಿಸುತ ಕನಸಿಲಾದರು ದಾನಧರ್ಮಗಳ ನೆನೆಯದೆಲೆ ದಿನಮಾನಗಳ ಕಳೆಯುತ ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ ಘನ ಮಹಿಮ ಬಂದ ನಗುತ 3 ಅಂದು ತಾನೊಲಿದಿತ್ತ ಚೆಂದದಾ ವರಗಳನು ಇಂದು ಸಲಿಸುವೆನು ಎಂದು ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ ಕಂದನಿಗೆ ಮುಂಜಿಯೆಂದು ಮಂದ ಭಾಗ್ಯನ ತೆರದಿ ಪೊಂದಿ ಯಾಚಿಸಲು ನಿಂದು ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು ಸಿಂಧು 4 ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ ಪತ್ನಿಯನು ಯಾಚಿಸಿದನು ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು ಇತ್ತ ಬಂದಿಹೆನೆಂದನು ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ ನಿತ್ತು ಕಳುಹೆನು ಏನನೂ ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ ನತ್ತನ್ನು ಕೊಡು ಎಂದನು 5 ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ ಮೂಗುತಿಯ ತೆಗೆದಿತ್ತಳು ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ ಸಾಗಿ ಬಂದನು ಇತ್ತಲು ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು ಮೂಗುತಿಯ ಕ್ರಯಕೆ ಕೊಡಲು ಈಗ ಬಂದಿಹೆನೆಂದು ನಿಮಗದನು ತೋರಲು ಹೇಗೆ ಬಂದಿತು ಎನ್ನಲು 6 ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ ವನಜನಾಭನು ಪೇಳ್ದನು ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ ಅನುವರಿತು ಬಹೆನೆಂದನು ಸಂತೈಸಿ ಪೊರಮಡಿಸಿ ನಿನಗೆ ನಾಮವನಿಡುವೆನು ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ ವನಿತೆಯಾ ಬರಿ ಮೂಗನು 7 ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು ಮುತ್ತೈದೆ ಮನದಿ ನೊಂದು ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು ಇತ್ತ ತಾರೆನಲು ನಿಂದು ವಿಪ್ರ ಮತ್ತೇನು ಮಾಡುವರೊ ಕತ್ತಲೆಯು ಮುತ್ತಿ ತಿಂದು ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು ಕುತ್ತು ಪಾರಾಹುದೆಂದು 8 ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು ಕರದಿ ಬಟ್ಟಲನು ಹಿಡಿದು ಹರಣದಾಸೆಯ ತೊರೆದು ಸಿರಿವರನ ಪದನೆನೆದು ಕುಡಿಯುವನಿತರೊಳು ತಿಳಿದು ಕರುಣದಿಂ ಮೂಗುತಿಯ ಗರಳದಲು ಕೆಡಹಲಾ ಮಣಿ ಹರುಷದಳೆದು ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು ಭರದಿ ಅಂಗಡಿಗೆ ಬಂದು 9 ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ ಮೂಗುತಿಯು ಕಾಣದಿರಲು ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು ಬೇಗನೆ ಮನೆಗೆ ಬರಲು ಹೇಗೆಂದು ತಿಳಿಸದಿರಲು ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ ಬಾಗಿ ವಂದಿಸಿ ನುಡಿದಳು 10 ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು ಪೊದ್ದಿಯಾಚಿಸಲು ಜರಿದೆ ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ ವೃದ್ಧಿಗೋಸುಗವೆ ಬರಿದೆ ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ ಉದ್ಧಾರವಿಲ್ಲೆಂದು ತಿಳಿದೆ ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು ಹೆದ್ದಾರಿ ಹಿಡಿದು ನಡೆದೆ 11 ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ- ಶಿಷ್ಟವನು ದಾನಗೈದು ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು ವಿಠ್ಠಲನ ಪುರಕೆ ನಡೆದು ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ ಇಷ್ಟಾರ್ಥ ಸಿದ್ಧಿಗೈದು ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ ಶ್ರೇಷ್ಠರಿಂದುಪದೇಶ ಪಡೆದು 12 ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ ಗದ್ಯಪದ್ಯಗಳಿಂದಲಿ ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು ಮುದ್ದಾಗಿ ವರ್ಣಿಸುತಲಿ ಮದ್ದಳೆಯ ತಾಳ ವೀಣೆಗಳ ಗತಿಹಿಡಿದು ಶುದ್ಧರಾಗಗಳಿಂದಲಿ ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು ಪೊದ್ದಿ ಕುಣಿಯುವ ತೆರದಲಿ 13 ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ- ವಿರ ಗ್ರಂಥ ರಚಿಸಿ ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ ಸಾರ ಮಹಿಮೆಗಳ ತುತಿಸಿ ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ ಪಾರಣೆಯ ವಿಧಿಯ ತಿಳಿಸಿ ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು ಸಾರಿ ಡಂಗುರವ ಹೊಯಿಸಿ 14 ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ ಧರೆಯನೆಲ್ಲವ ತಿರುಗುತ ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ ಕೊರಳುಬ್ಬಿ ಶಿರ ಬಿಗಿಯುತ ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ ಹರಿ ಮಹಿಮೆ ಕೊಂಡಾಡುತ ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ ಹರುಷದಿಂದಲಿ ಉಣಿಸುತ 15 ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು ಶಕ್ತನಹ ದೇವ ಬಂದ ಓಗರ ಉಂಡ ಸುತನಾಗಿ ನೀರ ತಂದ ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ ಕ್ಷಿತಿಪತಿಗೆ ದೃಢ ತೋರಿದ ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು ಪಥದಲ್ಲಿ ತಲೆಗಾಯಿದ 16
--------------
ಲಕ್ಷ್ಮೀನಾರಯಣರಾಯರು
ದೇವದೇವನೆ ಓವುದೆಮ್ಮನು ಶ್ರೀವಧೂವರನೇ ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ. ನೀಲಮೇಘಶ್ಯಾಮ ರಮಾಲೋಲ ಪಾಲಿಸೈ ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ 1 ಭೋಗಿಶಯನ ಯೋಗಗಮ್ಯ ಸಾಗರಸ್ಥಿತ ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ 2 ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ ಎಳೆಯರಾವು ಚಲವನರಿಯೆವು ಒಲವನೆರೆವೆವೈ3 ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ4
--------------
ನಂಜನಗೂಡು ತಿರುಮಲಾಂಬಾ
ದೇಶದೊಳಗೀ ಕ್ಷೇತ್ರ ಬಲು ಉತ್ತಮಾ ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಪ ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ ವರನ ಶಾಪದಲಿ ಪಾವಕನು ಬಂದು ಪರಮತಪ ಮಾಡಿದನು ವರವಿತ್ತ ಪುಷ್ಕರಣಿ ಎನಿಸುವುದು1 ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ ಶಿವನೊಲಿಸೆ ಅಮೃತವ ಮಾಳ್ಪೆನೆಂದು ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ ಸವನ ಕೈಕೊಳಲು ಶ್ರೀರಾಮನಿಂದಲಿಗತಿ 2 ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ ಗಾಯತ್ರಿ ಒಲಿಸಿದನು ಈ ಸಿಲೆಯಲೀ ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು ಗಾಯತ್ರಿ ಮಂತ್ರವನು ಜಪಿಸೆ ನರನು ಮುಕ್ತಾ 3 ಅಗಸ್ತೀಶ್ವರವಿಡಿದು ರಾಮಲಿಂಗ ಪರಿಯಂತ ಬಗೆಬಗೆ ತೀರ್ಥ ಎರಡೊಂದು ಪದ್ಮ ಮಿಗೆ ಷೋಡಶಕೋಟಿ ಅರವತ್ತು ಸಾವಿರ ಸೊಗಸಾಗಿವಿಪ್ಪವಿಲ್ಲಿ ಕಾವೇರಿ ಮಧ್ಯದಲ್ಲಿ 4 ರಾಮನಾಥನ ಪುರವೆಂಬೊ ಪೆಸರೆ ಉಂಟು ವ್ಯೋಮಕೇಶನು ನಾಲ್ಕು ಹೆಸರಿನಿಂದಾ
--------------
ವಿಜಯದಾಸ
ಧನ್ಯನಾದೆನು ನಾಂ ಪ ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ಅ.ಪ ದೇಶದೇಶದಿಂದ ಸಕಲ ದಾಸಜನರು ಬಂದು ಸದಾ ಶ್ರೀಶ ಸಲಹೆಂದು ಕೂಗುವ ಘೋಷ ಕೇಳಿ ಕರ್ಣಗಳಿಂ 1 ವೈರಿ ವಿನುತ ಅರ್ಥ ಗಳಿಸುವವನ ಕಂಡು2 ಸತಿಯರೆಲ್ಲ ಮುತ್ತಿನಾ- ರತಿಯ ಬೆಳಗುವುದು ಕಂಡು 3 ಸಂತಸದಿ ಮಹಂತರು ಶ್ರೀ- ಕಾಂತನ ಗುಣರಾಸಿ ಪೊಗಳಿ ಸ್ವಾಂತನಿರ್ಮಲರಾಗಿ ಭಜಿಪ- ರಂತರಾತ್ಮನ ಕಂಡು 4 ಭೂಮಿಗಧಿಕ ಶೇಷಗಿರಿ ಧಾಮಪೂರ್ಣಕಾಮ ಭಕ್ತ- ಸ್ತೋಮವನ್ನು ಪಾಲಿಪ ಗುರು- ರಾಮವಿಠಲನ್ನ ಕಂಡು 5
--------------
ಗುರುರಾಮವಿಠಲ
ಧ್ಯಾನಿಸು ಮನವೆ ನೀ ಧ್ಯಾನಿಸು ಪ. ಧ್ಯಾನಿಸು ಮನವೆ ಶ್ರೀಹರಿಯ ಪಾದಧ್ಯಾನನಿರುತ ಈ ಪರಿಯ ಆಹಾಪ್ರಾಣಾಪಾನವ್ಯಾನೋದಾನಸಮಾನರ್ಗೆ ಪ್ರಾಣನಾಗಿಪ್ಪ ಮುಖ್ಯ ಪ್ರಾಣಾಂತರ್ಗತನ ನೀ ಅ.ಪ. ಪರಮಾಣು ಪ್ರದೇಶದಲ್ಲಿ ಪ್ರಾಣರಾಶಿ ಅನಂತುಂಟಲ್ಲಿ ಹೀಗೆಒರಲುತಿದೆ ವೇದದಲ್ಲಿ ದೃಷ್ಟಾಂತವ ಪೇಳ್ವೆ ಕೇಳು ದೃಢದಲ್ಲಿ ಆಹಾಪರಮಸೂಕ್ಷ್ಮ ವಟಮರನಾಗಿ ಅದರಲ್ಲಿಪರಿಮಿತಿಲ್ಲದರ ಫಲದಬೀಜವನರಿತು ನೀ 1 ನಿರುತ ಸುವರ್ಣಬ್ರಹ್ಮಾಂಡದಲ್ಲಿ ಹರಿ ಪೂರ್ಣವ್ಯಾಪ್ತ ಅಖಂಡನಾಗಿಮಿರುವುತಲಿಪ್ಪ ಮಾರ್ತಾಂಡ ತೇಜೋಕಿರಣದಂತಿರುವ ಪ್ರಚಂಡ ಆಹಾಹೊರಗೆ ಒಳಗೆ ಸರ್ವತ್ತರದಲ್ಲಿ ಹರಿಮಯ-ವರಿತು ನಿನಗೆ ಎಲ್ಲಿ ದೊರಕಿದ ಸ್ಥಳದಿಂದ 2 ಸಲಿಲಭೂಗಿರಿಲತೆ ನಾನಾವೃಕ್ಷಫಲಖಗಮೃಗ ಕಾನನತೃಣ ಪೊಳೆವಪಾವಕತರುಪವನ ಮುಕ್ತಸ್ಥಳ ಅವ್ಯಾಕೃತ ಗಗನ ಆಹಾಒಳಗೆ ಹೊರಗೆ ಹರಿ ಚಲಿಸದೆ ಇರುತಿಪ್ಪಸ್ಥಳದ ನಿಲುವಿನಂತೆ ತಿಳಿದು ನೀ ಅದರಂತೆ 3 ತೈಜಸ ನಿತ್ಯ 4 ಸಪ್ತಾವರಣ ಶರೀರದಿ ದಶಸಪ್ತದ್ವಿಸಹಸ್ರ ನಾಡಿಯಲಿ ದಶ-ಸಪ್ತದ್ವಿಸಹಸ್ರ ರೂಪದಲ್ಲಿ ಹರಿವ್ಯಾಪ್ತ ನಿರ್ಲಿಪ್ತಸ್ಥಾನದಲ್ಲಿ ಆಹಾಆಪ್ತನಂತಿರುವ ಸುಷುಪ್ತಿ ಸ್ವಪ್ನ ಜಾಗ್ರದಿತಪ್ತಕಾಂಚನದಂತೆ ದೀಪ್ತಿಸುತಿಪ್ಪನ 5 ಜೀವರಿಂದತ್ಯಂತ ಭೇದ ಪ್ರತಿಜೀವಾಂತರದಲಿ ಪ್ರಮೋದನಾಗಿಆವಾಗ ಚರಿಸುವ ವೇದ ಪೇಳುವುದು ಸತ್ಯಂಭಿದಾ ಆಹಾಈ ವೇದಾರ್ಥವು ಸಾವಧಾನದಿ ತಿಳಿದುಶ್ರೀವಾಯುಮತವ ಕೋವಿದರೊಡಗೂಡಿ6 ಶ್ರೀ ಕೇಶವನೆ ಮೂಲಾಸಿ ಶ್ರುತಿ ಏಕೋನಾರಾಯಣಾಸಿ ನಾನಾಲೋಕ ಸೃಷ್ಟಿಪದ ತಾನಾಸಿ ತಾರಕಮಂತ್ರ ಉಪದೇಶಿ ಆಹಾನೀ ಕೇಳು ನಿಗಮಾರ್ಥ ನೀಕರಿಸು ಸಂಶಯಏಕಮೇವಾದ್ವಿತೀಯನೆಂಬೊ ಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉತ್ತುಂಗಗುಣಗಣತರಂಗ ಕಾ-ಳಿಂಗಸರ್ಪನ ಮದಭಂಗ ಭುಜಂಗಶಯನ ಅಮಲಾಂಗ ಆಹಾಪಿಂಗಳ ಇಡಾ ಮಂಗಳ ಸುಷುಮ್ನ ಸುಸಂಗಮ ಮಧ್ಯದಿ ತಿಮಿಂಗಿಲಂತಿಪ್ಪನ 8 ಮೂರ್ತಿ ಬಲು ಅದುಭುತದಿವ್ಯಕೀರ್ತಿಅದೆ ಪದುಮಜಾಂಡದಿ ಪರಿಪೂರ್ತಿ ದೊರೆವುದಕೆ ಬೇಕು ವಾಯುಸಾರ್ಥಿ ಆಹಾಅದೆ ಬಿಂಬಮೂರ್ತಿ ಜೀವದಾಕಾರವಾಗಿ ತಾಪದುಮಜಾಂಡದಲಿಪ್ಪ ಸದಮಲಾತ್ಮಕನ 9 ಧರೆಯನಳೆದ ದಿವ್ಯಚರಣ ಅದು ಮೆರವುತಿಪ್ಪುದು ಕೋಟಿ ಅರುಣನಂತೆಪರಿಪೂರ್ಣಭರಿತವು ಕಿರಣ ತನ್ನ ಸ್ಮರಿಸುವರಿಗೆ ಮಾಳ್ಪ ಕರುಣ ಆಹಾತರುಣಿಯಂದದಿ ನಖದಿ ಸುರನದಿಯ ಪೆತ್ತ ನೂ-ಪುರ ಗೆಜ್ಜೆಪೆಂಡೆಯ ಎರಡೈದು ಬೆರಳನು 10 ಹರಡು ಜಂಘೆಯುಗಜಘನ ಸುರುಚಿರ ರೇಖಧ್ವಜವಜ್ರ ನಾನಾ ದಿವ್ಯ ವರರೇಖೆಯಿಂದಲೊಪ್ಪುವನ ಜಾನು ಪರಮಶೋಭಿಸುವ ಸುಂದರನ ಆಹಾಉರುಟುಕದಳಿಸ್ತಂಭದಂತಿರುವೊ ಊರುದ್ವಯಸರಿಗಾಣೆ ಹರಿ ಉಟ್ಟ ವರಪೀತಾಂಬರವನು 11 ಕುಕ್ಷಿ ನಿಜ ಸುಖಪೂರ್ಣನ 12 ವೈಜಯಂತಿ ಮಂದಾರವನ್ನು ಮುದದಿಂದ ಧರಿಸಿದ ಧೀರ ಆಹಾಪದುಮಜಭವರಿಂದ ತ್ರಿದಶರು ತಿಳಿದಿನ್ನುಸದಾಕಾಲ ಧೇನಿಪರು ಹೃದಯಾಂಬರದಲ್ಲಿ 13 ಕಂಬುಕಂಧರ ಅತಿಗುರುತರ ಭುಜವು ಚತುರ ಆಹಾಮರಿ ಆನೆ ಸೊಂಡಿಲಂತಿರುವ ಬಾಹುಕೀರ್ತಿ ಕೇತಕಿಬೆರಳು ನಕ್ಷತ್ರದರಸಿನಂದದಿ ನಖ14 ಸಿರಿ ಭುಜಕೀರುತಿ15 ಕಂಬು ಅಗಣಿತ ಮಹಿಮನ16 ಮುಗುಳು ಮಲ್ಲಿಗೆ ಮೊಗ್ಗೆ ದಂತಪಂಕ್ತಿ ಜಗವಮೋಹಿಸುವ ಸುಶಾಂತ ಜಿಹ್ವೆನಿಗಮಕ್ಕೆ ವೇದ್ಯವಾದಂಥ ಬಹು ಬಗೆಯಲ್ಲಿ ಮೆರೆವ ಸುಪಂಥ ಆಹಾನಗುವ ವದನ ಝಗಝಗಿಸುವ ಕುಂಡಲಕರ್ಣಮಿಗೆ ಕೂರ್ಮಕದಪು ಸಂಪಿಗೆನಾಸಿಕವನ್ನು 17 ಕರುಣಶಾಂತಶುಭನೋಟ ಕಂಗಳೆರಡರ ಚೆಲ್ವಿಕೆ ಮಾಟ ಇನ್ನುಅರವಿಂದದಳವೆನ್ನು ದಿಟ ಇನ್ನು ತರಣಿಚಂದ್ರಮರ ಕೂಟ ಆಹಾಶರಣಜನರ ಮನೋಹರ್ಷವಾರ್ಧಿಗೆ ಚಂದ್ರದುರುಳ ದಿತಿಜತಿಮಿರಕ್ಕೆ ಭಾಸ್ಕರನ 18 ಚಾಪ ತಲೆಯ ತಗ್ಗಿಸುವಂಥಾ ರಚನಾಫಾಲದಲಿಟ್ಟ ತಿಲಕ ಸುಂದರ ಲೋಕ ಕಳವಳಗೊಳಿಸುವ ಸುಗುಣ ಆಹಾನಳಿನವದನದಲ್ಲಿ ಅಳಿಗಳಂತೊಪ್ಪುವಸುಳಿಗುರುಳಿನ ಮ್ಯಾಲೆ ಒಲೆವ ಅರಳೆಲೆಯನ್ನು 19 ನಿತ್ಯ ನಖ ಲಲಾಟ ಪರಿಯಂತ್ರನೋಟದಿಂದಲಿ ಈಶಕೋಟಿ ಸಹಿತನ 20 ನಿತ್ಯ 21
--------------
ಗೋಪಾಲದಾಸರು
ಧ್ಯಾನಿಸು ಶ್ರೀಹರಿಯ ಧ್ಯಾನಿಸು ಪ ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಅ.ಪ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ನಿತ್ಯ 1 ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು ದೊರಕಿದ ಸ್ಥಳದಲ್ಲಿ 2 ಸಲಿಲ ಭೂಗಿರಿ ಲತೆ ನಾನಾ-ವೃಕ್ಷ ಮೃಗ ಪಕ್ಷಿ ಕಾನನ-ಮುಕ್ತ ಸ್ಥಳಗಳವ್ಯಾಕೃತ ಗಗನ, ತೃಣ- ಪಾವಕ ತರು ಪವನ-ಆಹ ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ ನೆಲೆಯ ನೀ ನಲವಿಂದ ತಿಳಿದು ಆವಾಗಲು3 ವಿಶ್ವ ಮತ್ಸ್ಯಾದಿ, ತೇಜೊ ರಾಶಿ ಹಯಗ್ರೀವಾದಿ, ಜೀವ ರಾಶಿಯೊಳಿದ್ದು ಅನಾದಿ ಸರ್ವ ದೇಶ ಭೇದಿಸುವಂಥ ವೇದಿ-ಆಹ ಮೂರ್ತಿ ಶ್ರೀಶ ರಂಗನೆಂದು ನಿತ್ಯ 4 ಸಪ್ತಾವರಣ ದೇಹದಲ್ಲಿ, ದಶ ಸಪ್ತ ದ್ವಿಸಹಸ್ರ ನಾಡಿಯಲಿ, ದಶ ಸಪ್ತ ದ್ವಿಸಹಸ್ರ ರೂಪದಲಿ ಹರಿ ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ5 ಜೀವರಿಂದತ್ಯಂತ ಭೇದ, ಪ್ರತಿ ಜೀವಾಂತರದಲ್ಲಿ ಮೋದನಾಗಿ ಯಾವಾಗಲಿರುತಿಹ ವೇದ-ದಲ್ಲಿ ಪೇಳುವುದು ಸತ್ಯಂಭಿದಾ-ಆಹ ಈ ವಿಧ ವೇದಾರ್ಥ ಸಾವಧಾನದಿ ತಿಳಿದು ಶ್ರೀ ವಾಯುಮತದ ಸುಕೋವಿದರೊಡಗೂಡಿ 6 ಶ್ರೀಕೇಶವನೆ ಮೂಲರಾಶಿ, ಶ್ರುತಿ- ಏಕೋ ನಾರಾಯಣ ಆಸೀತ್ ನಾನಾ ಲೋಕ ಸೃಷ್ಟಿಪ ಧಾತನಾಸೀತ್, ಜಗ ದೇಕತಾರಕ ಉಪದೇಶೀ-ಆಹ ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉ- ತ್ತುಂಗ ಗುಣಾಂತರಂಗ, ಕಾ ಳಿಂಗ ಸರ್ಪನ ಮದಭಂಗ, ಭು ಜಂಗಶಯನ ಅಮಲಾಂಗ-ಆಹ ಮಂಗಳ ಇಡಾ ಪಿಂಗಳ ಸುಷುಮ್ನ ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ 8 ಹೃದಯಸ್ಥಾನದಲಿದ್ದ ಮೂರ್ತಿ, ಬಲು ಅದುಭುತಾತನ ದಿವ್ಯಕೀರ್ತಿ, ಅದು ಪದುಮುಜಾಂಡದಿ ಪರಿಪೂರ್ತಿ ತರು ವುದಕೆ ಬೇಕು ವಾಯು ಸಾರಥಿ-ಅಹಾ ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ ಪದುಮಕೋಶದಲ್ಲಿ ಸದಮಲಾತ್ಮಕನನ್ನು 9 ಧರೆಯನಳೆದ ದಿವ್ಯ ಚರಣ, ಅದು ಮೆರೆವುತಿಹುದು ಕೋಟಿ ಅರುಣನಂತೆ ಪರಿಪೂರ್ಣ ಭರಿತವು ಕಿರಣ, ಸ್ಮರಿ- ಪರಿಗೆ ಮಾಡುವುದು ಕರುಣ-ಆಹ ತರಣಿಯಂಥ ನಖದಿ ಸುರನದಿಯನು ಹೆತ್ತ ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು 10 ಪೆರಡು ಜಾನು ಜಂಘೆ ಘನ್ನ ಸುರು- ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ ವರ ರೇಖೆಯಿಂದಲೊಪ್ಪುವನ, ಜಘನ ಪರಮ ಶೋಭಿತ ಸುಂದರನ-ಆಹ ಕದಳಿ ಕಂಬ ಇರುವೂರು ಶೋಭಿಸೆ ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು 11 ಗಜವೈರಿಯಂತಿಪ್ಪ ಮಧು ಬಲು ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ ನಿಜಘಂಟೆ ಘಣರೆಂಬೊ ವಾದ್ಯ, ಕು ಬುಜೆ ಡೊಂಕ ತಿದ್ದದನಾದ್ಯ-ಆಹ ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ ಕುಕ್ಷಿ ನಿಜಪೂರ್ಣ ಸಖನನ್ನು 12 ಉದರ ತ್ರಿವಳಿ ನಾನಾ ಹಾರ ದಿವ್ಯ ಪದಕ ಪವಳದ ವಿಸ್ತಾರ ರತ್ನ ಮುದದಿಂದ ಧರಿಸಿದ ಧೀರ ಸುಂದರ ವಾದ ಕಂಬುಕಂಧರ-ಆಹಾ ಪದುಮಜ ಭವರಿಂದ ತ್ರಿದಶರು ತಿಳಿಯುತ್ತ ಸದಾಕಾಲ ಧ್ಯಾನಿಪ ಹೃದಯಾಂಬರವನ್ನು 13 ಸಿರಿವತ್ಸ ಕೌಸ್ತುಭಹಾರ, ಮೇಲೆ ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ ವೈಜಯಂತಿ ಮಂದಾರ, ಗುರು ತರವಾದ ಭುಜ ಚತುರ-ಆಹ ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ ಬೆರಳು ನಕ್ಷತ್ರದ ಅರಸಿನಂತೆ ನಖ14 ಕರಚತುಷ್ಟಯದಲ್ಲಿ ಶಂಖ, ಚಕ್ರ ವರಗದೆ ಪದುಮು ನಿಶ್ಶಂಕನಾಗಿ ಧರಿಸಿ ಮೆರೆವೊ ಅಕಳಂಕ, ದುರು ಳರ ದಂಡಿಸುವ ಛಲದಂಕ ಆಹ ಬೆರಳು ಮಾಣಿಕದುಂಗುರ ಕಡಗ ಕಂಕಣ ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ15 ಅಗರು ಚಂದನ ಗಂಧÀಲೇಪ, ಕಂಬು ಸೊಗಸಾದ ಕಂಠಪ್ರತಾಪ, ಮಾವು ಚಿಗುರಲೆ ಕೆಂದುಟಿ ಭೂಪ, ನಸು ನಗುವ ವದನ ಸಲ್ಲಾಪ-ಆಹ ಮಗನಾಗಿ ತಾನು ಗೋಪಿಗೆ ವದನದೊಳು ಅಗಣಿತ ಮಹಿಮನ್ನ 16 ಮುಗುಳು ಮಲ್ಲಿಗೆ ಮೊಗ್ಗೆ ದಂತ ಪಙÂ, ಜಗವ ಮೋಹಿಸುವ ಸುಶಾಂತ ಜಿಹ್ವೆ ನಿಗಮಕೆ ವೇದ್ಯವಾದಂಥ ಬಲು ಬಗೆಯಿಂದ ನಡೆಸುವ ಪಂಥ-ಆಹ ಪೊಗಳಲಾರದು ವೇದ ಖಗವಾಹನನ ಮಹಾ ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು 17 ಪೊಳೆವೊ ವಿದ್ಯುತ ಕಪೋಲ, ನೀಲೋ- ತ್ಪಲದಳ ನೇತ್ರ ವಿಶಾಲ, ದಿವ್ಯ- ತಿಲಕವನಿಟ್ಟ ಸುಫಾಲ, ನೀಲಾ- ಚಲಕಾಂತಿ ತನುರುಹ ಜಾಲ-ಆಹ ಕುಂಡಲ ಕರ್ಣದೊಲುಮೆಯ ಚೆಲುವಿಕೆ ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ 18 ಶುಭ ನೋಟ, ಕಂಗ- ಳೆರಡ ಚೆಲುವಿಕೆ ಮಾಟಕಿನ್ನು ಅರವಿಂದ ಸರಿಯಿಲ್ಲ ದಿಟ ಅಲ್ಲಿ ತರಣಿ ಚಂದ್ರಮರ ಕೂಟ-ಆಹ ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ 19 ಹೊಳೆವ ಹುಬ್ಬುದ್ವಯ ಸ್ಮರನ ಚಾಪ- ತಲೆ ತಗ್ಗಿಸುವಂಥ ರಚನ ಫಾಲ- ದಲ್ಲಿಟ್ಟು ತಿಲಕ ಸುಂದರನ ಲೋಕ- ಕಳವಳಗೊಳಿಸುವ ಸುಗುಣ-ಆಹ ನಲಿವ ವದನದಲ್ಲಿ ಅಳಿಗಳಂತೊಪ್ಪುವ ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು 20 ರೂಪ ಶೃಂಗಾರ ವಿಲಾಸ ಉಡು- ಭೂಪ ನಾಚುವ ಮುಖಹಾಸ ವಿಶ್ವ ರೂಪ ಧೃತ ಸ್ವಪ್ರಕಾಶ ಸರ್ವ ವ್ಯಾಪಕಾಖಿಳ ಜಗದೀಶ-ಆಹ ತಾಪಸರಿಗೆ ಕರುಣಾಪಯೋನಿಧಿ-ಅಣು ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ21 ಕೋಟಿಮಾರ್ತಾಂಡ ಸಂಕಾಶ ಕಿ ರೀಟಕ್ಕೆ ಅಸಮ ಪ್ರಕಾಶ ಎಲ್ಲು ಸಾಟಿಗಾಣೆನು ಲವಲೇಶ ಕಪಟ- ನಾಟಕ ಶ್ರೀ ಲಕುಮೀಶ-ಆಹ ನಖ ಲಲಾಟ ಪರಿಯಂತ ನೋಟದಿಂದಲೆ ಈಶ ಕೋಟಿ ಸಹಿತನಾಗಿ 22 ಕಾಮಾದಿಗಳನೆಲ್ಲ ತರಿದು ಮುಕು- ತೀ ಮಾರ್ಗವನ್ನೆ ನೀನರಿದು ಅತಿ- ಪ್ರೇಮದಿ ಗುರುಗಳ ನೆನೆದು ಹೇಮ ಭೂಮಿ ಕಾಮಿನಿಯರ ಜರಿದು-ಆಹ ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ ಯುಗ್ಮ ನಿತ್ಯ 23
--------------
ವಿಜಯದಾಸ
ನಮೋ ನಮೋ ಗುರುರಾಜ ಪ ಭಾಸುರ ಪಂಪಾ ತುಂಗಾ ತೀರವಾಸ | ಪಾಲಿಸೊ ತವದಾಸ ಅ.ಪ. ರತಿಪತಿ ಜನಕನ ವರ ಶಯ್ಯಾಂಶದಲಿ | ವಾಯ್ವಾವೇಶದಲಿ ಜನಿಸುತ ಮೋದದಲಿ ವಿತತನು ವಿಷ್ಣುವು ವಿಶ್ವದೊಳೆನುತಲಿ | ಅತಿಶಯ ಭಕ್ತಿಯಲಿ ಪಿತಗೆ ತೋರ್ದ ಪ್ರಹ್ಲಾದನೆ ಹಿತದಲ್ಲಿ | ಅವತರಿಸಿದೆ ಇಲ್ಲಿ 1 ಧರೆಯೊಳಗೆ ಪ್ರಖ್ಯಾತ ಪರಮಾತ್ಮನ ಪದಶರಣ ವ್ಯಾಸಯೋಗಿ | ಯೆನಿಸುತಲಿ ವಿರಾಗಿ ತರತಮ ಪಂಚಕ ಪ್ರಭೇದವ ಸ್ಥಾಪಿಸಲು | ದುರುಳರ ಖಂಡ್ರಿಸಲು ಪರಿಪರಿ ಶಾಸ್ತ್ರವ ಶ್ರೀ ಪಾದರಾಯರಲಿ | ಓದಿದ್ಯೊ ಭಕ್ತಿಯಲಿ 2 ಪುರಂದರ ಕನಕರಿಗೆ ಆದರದಿಂದಲಿ ಬೋಧಿಸಿ ತತ್ವವನು | ಮಾಡಿ ಪುನೀತರನು ವೇದಶಾಸ್ತ್ರ ತರ್ಕಾದಿ ಗ್ರಂಥಗಳಲಿ | ಕೋವಿದರರಸುತಲಿ ನೀ ದಯದಿಂದಲಿ ಸೇರಿಸಿ ಪರಿಷತ್ತು | ಭಾವಿಸಿ ವಿದ್ವತ್ತು 3 ಅರ್ಥಿಕಲ್ಪಿತ ವರ ಕಲ್ಪವೃಕ್ಷವಾಗಿ | ನಿತ್ಯದಿ ಮಹಯೋಗಿ ಪ್ರಥ್ಯರ್ಥಿ ಮದಕರಿ ಪಂಚವಕ್ತ್ರನಾಗಿ | ಪ್ರತ್ಯಕ್ಷದಿ ತಾಗಿ ಹೊರ ಚೆಲ್ಲುತೆ ನೀನು ಸ್ತುತ್ಯ ಕೃಷ್ಣ ಭೂಮೀಂದ್ರನ ಕುಹುಯೋಗ | ಪರಿಹರಿಸಿದೆ ಬೇಗ 4 ವ್ಯಾಸಾಂಬುಧಿಯನು ಕಟ್ಟಿ ಖ್ಯಾತನಾಗಿ | ದಾಸರ ಚನ್ನಾಗಿ ಪೋಷಿಸುತಲಿ ಶ್ರೀ ಶೇಷಗಿರಿಗೆ ಬಂದು | ಶ್ರೀಶನಲ್ಲಿ ನಿಂದು ಪಡುತ ಹನ್ನೆರಡು ವರುಷ ದೇಶ ದೇಶದಲಿ ಆಶುಗಿಯನು ನಿಲಿಸಿ | ಶಿಷ್ಯರಿಗನುಗ್ರಹಿಸಿ 5 ಕಾಶಿ ಗಧಾಧರ ವಾಜಪೇಯಿ ಲಿಂಗ | ಮಿಶ್ರರು ನರಸಿಂಗ ವಾಸುದೇವ ಪುರಿ ಈಶ್ವರ ಪಂಡಿತರ | ವಾದದಿ ಬಿಗಿವರ ಜೈಸಿ ತಂದ ಜಯ ಪತ್ರಗಳನು ಮುದದಿ | ಶ್ರೀನಿಧಿಗರ್ಪಿಸಿದಿ ಶ್ರೀಸತ್ಯಾ ರುಕ್ಮಿಣಿ ವೇಣುಗೋಪಾಲರನು | ಸ್ತುತಿಸಿ ಪಡೆದೆ ನೀನು 6 ನ್ಯಾಯಾಮೃತ ಬಿಚ್ಚಿ ಚಂದ್ರಿಕೆಯನು ತಂದೆ ಆಯದಿ ಬುಧಮನ ತಾಂಡವಾಡುವಂತೆ | ತರ್ಕತಾಂಡವವಿತ್ತೆ ಕಾಯಜಪಿತ ಶ್ರೀಕಾಂತನ ಸೇವಿಸುತ | ಸುಖಿಸುವೆ ನೀ ಸತತ 7
--------------
ಲಕ್ಷ್ಮೀನಾರಯಣರಾಯರು
ನಮೋ ನಮೋ ನಂದಕುಮಾರ ನಿನ- ಗೆದುರ್ಯಾರೊ ಯದುಕುಲ ವೀರ ಭಜಿ- ಸುವ ಭಕ್ತ ಜನರುದ್ಧಾರ ಮಾಡೊ ಪರಮ ದಯಾಳು ನೀ ಸರ್ವ ಸ್ವತಂತ್ರ ನಿನ್ನ ಧ್ವಜ ವಜ್ರಾಂಕುಶ ರೇಖಾ ವೆಂಕಟಾದ್ರೀಶ ನಮೋ ನಮೋ ಪ ಶ್ರೀಶ ಜಗದ್ಭರಿತ ನೀನು ಒಂದು- ಕಾಸಿಗ್ವಿಷಯಗಳಲ್ಲ ನಾನು ನಿನ್ನ ದ(ರ್ಶ)ನ ಹಾರೈಸುವೆನು ಪರಮ ನುಗ್ರ(ಹ)ದಿ ಪಾಲಿಸೋ ನೀನು ಹರೇ ದೋಷರಹಿತ ಎನ್ನ ದೋಷನಾಶನ ಮಾಡಿ ಶೇಷಶಯನ ಶ್ರೀನಿವಾಸ ನೀ ದಯಮಾಡೊ1 ಬಾಯಿ ಬೀಗವನ್ಹಾಕಿ ಚರಿಯೆ ಗಂ- ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ ನಾಮವ ಕೊಂಡಾಡಲರಿಯೆ ಪಾದ- ಚಾರ್ಯಾಗಿ ಬರುವುದೀಪರಿಯೆ ತಿಳಿದು ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು ಮಾಧವ ಕರುಣದಿ 2 ಬಾಡಿಗಿದ್ದರಾಯನ್ಹಿಡಿಯ (?) ನಿನ್ನ ಅನುಮತಿಲ್ಲದೆ ದಾರಿ ನಡೆಯ ಬ್ಯಾಡ ಬಿಡು ಲೋಭಿತನವ ಎ- ನ್ನೊಡೆಯ ಬಿಡದೆ ಕಾಡುತ ಕಾಸು ಕವಡೆ ಕಡ್ಡಿ ಕಣಜಕ್ಕೆ ಈ ಪರಿ ಗಳಿಕೆ ದೇಶದ ಮೇಲೆ ಕಾಣೆನು 3 ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ ಬಡಿತ ತಡೆಯಲಾರೆ ಪೆಟ್ಟು ಮಡಿ ಮೈಲಿಗೆಂದರೆ ಅತಿಸಿಟ್ಟು ನಾ ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ- ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ- ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4 ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ ಸುತ ಸತ್ಯಲೋಕದಧಿಪತಿಯೆ ಅತಿ ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ- ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5 ಕನಕಗಿರಿದೊರೆಯೆಂಬೊದೆಲ್ಲೊ ಬಂದ ಜನಕೆ ಅನ್ನವ ನೀಡಲೊಲ್ಲ್ಯೊ ಜಗ- ಜನಕ ನಿನ್ನನು ಕಾಣಲಿಲ್ಲೋ ನಾನಿ- ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ- ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6 ಶಂಕರ ಸುರರಿಂದ್ವಂದಿತನೊ ನಾ ಕಿಂಕರ ನರರಿಂದ ನಿಂದಿತನೊ ನೀ ಮಂಕುಜನರ ಪಾಪ ಪರಿಹಾರಕನೊ ಹರೇ ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ ಶಂಕೆಯಿಲ್ಲದೆ ಕೊಟ್ಟು ವೆಂಕಟ ದಯಮಾಡೊ 7
--------------
ಹರಪನಹಳ್ಳಿಭೀಮವ್ವ
ನಮ್ಮ ಗುರುರಾಯಾ | ಪೊಡವಿಗೆ ನಡೆ ತಂದನು ಪ ಪೊಡವಿಗೆ ನಡೆ ತಂದನು| ಎಡ ಬಲದಲಿ ಭಾಗವತರ ಮೇಳದಿಂದಲಿ | ಪರಿ ಪರಿಯಾಟವ | ಆಡುತ ಪಾಡುತ ನಲಿದಾಡುತಲಿ 1 ಭವ ರೋಗಿಗಳೆಲ್ಲರು | ತ್ವರಿತದಿ ಬನ್ನಿರೋ ಯನುತಲಿ ಹರಿನಾಮಾ | ಭೇರಿಯ ಹೊಯ್ಸುತ ತತ್ವೋಪದೇಶದ | ಕರದಲಿ ಔಷಧವನೆ ಹಿಡಕೊಂಡು2 ಬಂದವರಿಗೆಲ್ಲ ಬೇಡಿದ್ದು ಕೊಡುತಲಿ | ಮಂದ ಮತಿಗಳವಗುಣವನೆ ಬಿಡಿಸುತ | ಸಾರಥಿ | ಎಂದೆಂದು ಶರಣರಿಗಾಧಾರಿಯಾಗಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು