ಒಟ್ಟು 166 ಕಡೆಗಳಲ್ಲಿ , 48 ದಾಸರು , 153 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ ನಿನ್ನ ಹೊರತು ಅನ್ಯನರಿಯೆನೂ ನಿನ್ನ ಹೊರತು ಅನ್ಯರರಿಯೆ ಪನ್ನಗೇಂದ್ರವಾಸ ಹರಿಯೆ ಸನ್ನುತಾತ್ಮ ನಿಜವನಿತ್ತು ಪ್ರಸನ್ನ ಗುರುವರೇಂದ್ರ ದೇವಾ ಪ ಉರಗನ್ಹೆಡೆಯ ನೆರಳ ಸ್ಥಿರವೆಂದು ಕಪ್ಪೆಯು ನಿಂತ ತೆರದಿ ವಿಷಯದೊಳಗೆ ಬೆರದು ಬೆಂದೆನು ನಾ ದುರಿತ ದುಷ್ಟಗಣದಿ ಹರಿದೂ ಮೃತ್ಯುವನೆ ಮರೆದು ಅರಿವು ಮಾಯವಾಗಿರುವ ಎನ್ನಾ ಸ್ತರದ ಆತ್ಮಪ್ರಭೆಯ ಮರೆತು ಇರುವ ಎನ್ನ ಮೇಲೆ ನಿನ್ನ ಕರುಣವಿಟ್ಟು ಕಾಯ್ದ ದೇವಾ 1 ತತ್ವವಿಂಶತಿ ನಾಲ್ಕು ಕೂಡಿದಾ ಈ ದೇಹದಲಿ ಏ ಕತ್ವವಾಗಿ ಇದನೆ ನಂಬುತಾ ಮುನ್ನರಿಯದಲೆ ವಿ ಚಿತ್ರವಾಸ್ತುವನ್ನು ಮರೆತು ಸತ್ತು ಹುಟ್ಟಿತೊಳಲಿ ಬಳಲಿ ನಿತ್ಯ ನಿಜದೊಳಿಟ್ಟ ದೇವಾ 2 ಆದಿ ಮಧ್ಯ ಅಂತರಾಂತದಿ ತುಂಬಿರುವ ವಸ್ತು ನಾದ ಬಿಂದು ಸ್ವಪ್ರಕಾಶದಿ ಹೃದಯದಲಿ ತೋರ್ಪ ಭೇದಾತೀತ ನಿರ್ವಿಕಾರದಿ ಸುಬೋಧದಿ ಆದರದಿ ಶಾಂತಿ ನಿಜದಾದಿ ಸುಖವನಿತ್ತ ಗುರು ಪಾದಪದ್ಮ ನೆನೆದು ಪೂರ್ಣನಾದ ನಾರಾಯಣ ಪ್ರಭು 3
--------------
ಶಾಂತಿಬಾಯಿ
ನಿರವದ್ಯ ಪ ಸದ್ಗುಣಪೂರ್ಣ ನೀನೇನೊ ಮೂಢ ಅ.ಪ ಬ್ರಹ್ಮಜಿಜ್ಞಾಸದ ಕ್ರಮವ | ನಿರ- ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ 1 ಕಾಕುಮಾಡುತಲರ್ಥ ಪೇಳ್ವುದಧರ್ಮ ಏಕವಾವುದು ಇನ್ನು ಏಕವಾವುದು ಎಂದು ನೀಕಳವಳಿಸುತ ನಿಜತತ್ವವರಿಯದೆ 2 ಆತ್ಮನಾತ್ಮಗಳೆಂದರೇನೊ | ಪರ- ಮಾತ್ಮ ಜೀವಾತ್ಮರೊ ಜೀವದೇಹಗಳೊ ಸ್ವಾತ್ಮಾನುಸಂಧಾನದಿಂದಲಿ ನೋಡ- ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು 3 ರವಿ ಗಣಪತಿ ಶಿವ ಶಕ್ತಿ | ಭೈ- ರವ ವಿಷ್ಣು ಎಂಬುವ ಷಣ್ಮತಯುಕ್ತಿ ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ- ಬ್ದವುಯಾವನಲ್ಲಿ ಸಮನ್ವಯವರಿಯದೆ 4 ಜೀವ ಜೀವರಿಗೆಲ್ಲ ಭೇದ | ವಿದುಸ್ವ ಭಾವವಾಗಿರುವುದು ಯಾತಕೀವಾದ ಜೀವರೂಪದಿ ಸರ್ವಜೀವರೊಳಗಿದ್ದು ದೇವಸಕಲ ಕರ್ಮಗಳ ಮಾಡಿಸುವನು 5 ಕರ್ಮವೆಂಬುದು ಅವನಿಗೆ ಲೋಪವಿಲ್ಲ ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ 6 ಸೂರ್ಯ | ಚಂದ್ರ ಕಿನ್ನರ ಸಿದ್ಧ ಸಾಧ್ಯ ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು ಪರಮಾತ್ಮನಲಿ ಸಮನ್ವಯವರಿಯದೆ 7 ಮಾಯಾ ಪ್ರಪಂಚವಿದೆನ್ನುತ | ನಿ- ಮಾಯೆಯಧಿಷ್ಠಾನದೊಳನಂತ ಜೀವನಿ- ಕಾಯವು ಗುಣಗಳಿರುವ ಮರ್ಮವರಿಯದೆ 8 ಸಾರ ಭೇದವಬದ್ಧ ಅಭೇದ ನಿಶ್ಚಯವೆಂದು ವಾದಿಸುವುದಕೇನಾಧಾರ ನಿನಗುಂಟೊ 9 ಜೀವಬ್ರಹ್ಮೈಕ್ಯವೆ ಮುಕ್ತಿ | ವೇ- ದಾವಳಿಗಳ ಪರಮಾರ್ಥದ ಉಕ್ತಿ ಜೀವನಿಂದೇನಾಗುವುದೆಂಬುದರಿಯದೆ 10 ದ್ವಾಸುಪರ್ಣವೆಂಬುವುದಕೆ | ವಿಷ- ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ ನೀಸರ್ವೋತ್ತಮನಾದರೆ ಇನ್ನು ಮಹದಾದಿ ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ 11 ಅಂಧ ಪರಂಪರವಾದ | ಬಿಟ್ಟು ಚಂದಾಗಿ ಪರಿಶೋಧಿಸು ಭÉೀದಾಭÉೀದ ತಂದೆತಾಯಿಗು ಮಗನಿಗೂ ಎಷ್ಟು ಭÉೀದ ಆ- ಪರಿ ತಿಳಿದರೆ ನಿರ್ವಾದ 12 ಪೂರ್ವೋತ್ತರ ವಿರೋಧವಿಲ್ಲ | ದಂತೆ ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ ಗರ್ವವೇತಕೆ ನಿನಗಿದರೊಳೇನಿಲ್ಲ ನೀ ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು 13 ಯೋಗ ಒದಗಿದಾಗ ಒಂದೆ ಎಂಬುವರೆ ಈಗೇನು ಆಗೇನು ಇಲ್ಲೇನು ಉಂಟೆ ನಾ- ವಾಗಲು ಜೀವರಿಗೆ ಹರಿಕರ್ತನಾಗಿರೆ 14 ಕಾಲಕರ್ಮ ಸ್ವಭಾವ ಜೀವ | ಹರಿಯ ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ 15 ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ 16 ಜ್ಞಾನವೆ ನಾನು ಕರ್ಮವೆ ಮಿಥ್ಯವೆಂದು ನೀನಾಡುವುದಕೇನು ನೆಲೆ ಮೂಲ ಯಾವುದು ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ 17 ಹೋಮ ಜಪವು ಸ್ನಾನ ದಾನ | ನಿತ್ಯ ಭೃತ್ಯ ನ್ಯಾಯವರಿಯದವನು ಶುದ್ಧ ತತ್ವಾರ್ಥಿ ಎನಿಸುವನೆ 18 ಕರ್ತನು ನೀನೆಂದು ಭೃತ್ಯನು ನಾನೆಂದು ತೀರ್ಥಪಾದನ ದಿನದಿನದಿ ಸಂಸ್ತುತಿಸದೆ 19 ಪಾದ ವನಜಕೊಪ್ಪಿಸಿ ಸಂಸಾರದ ಕರಕರೆಯ ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ ಘನಮಹಿಮನ ದಿವ್ಯಗುಣರಾಶಿ ಪೊಗಳದೆ 20 ಹೊರಗಣ್ಣ ಮುಚ್ಚಿ ಮೋದದಲಿ | ಒಳ- ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ ಸರಸಿಜಭವ ಶಂಕರಾದಿ ಸುರರ ನೋಡಿ ತರತಮವಾಗಿ ಮುಂದಿನ ಪರಿಯ ತಿಳಿಯದೆ 21 ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ- ನಂಗಗೆ ಸಿಲುಕದೆ ಅರ್ಥಿಯ ಪೊಂದದೆ 22 ಎಪ್ಪತ್ತೆರಡು ಸಹಸ್ರನಾಡಿ | ಗಳೊ- ಳೊಪ್ಪುವ ಭಗವದ್ರೂಪಗಳನು ನೋಡಿ ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ- ರಾವರ್ತಿರಹಿತ ಶಾಶ್ವತ ಸುಖಿಯಾಗನೆ 23 ವಿಪರೀತ ಮತಿಪುಟ್ಟದಂತೆ | ಧ್ಯಾನ- ಗುಪಿತವಾಗಿರುತ ಜನರಿಗೆ ಹುಚ್ಚನಂತೆ ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ24 ಆಪಾದಮಸ್ತಕ ದೇಹ | ದಿಸು ರಾಪದಜನಕ ಶ್ರೀಗುರುರಾಮವಿಠಲ ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ ಸಾಫಲ್ಯನಾಗಿ ಜೀವನು ಧನ್ಯನಾಗುವ 25
--------------
ಗುರುರಾಮವಿಠಲ
ನೋಡು ಮನವೆ ನಿನ್ನೊಳಾತ್ಮನ ನೋಡು ಮನವೆ ಧ್ರುವ ಸಾಧುಸಂಗವ ನೀ ಮಾಡಿ ಭೇದ ಬುದ್ಧಿಯ ಹೋಗಾಡಿ ಆದಿತತ್ವವ ನೀ ನೋಡಿ ಸದಮಲಾನಂದ ಕೂಡಿ1 ಕಾಮಕ್ರೋಧವ ಕಳೆದು ಮಮತಾ ಮಾಯವನಳಿದು ತಾಪ ತೊಳೆದು ಶಮದಮಾದಿ ತಿಳಿದು 2 ನಾನು ನೀನೆಂಬುದು ನೀಗಿ ಜ್ಞಾನದಿಂದ ಗುಪ್ತನಾಗಿ ಭಾನುಕೋಟಿತೇಜನಂಘ್ರಿ ಬೆರೆದು ನಿಶ್ಚಿಂತನಾಗಿ 3 ಅವಿದ್ಯುಪಾಧಿಯ ಜರಿದು ಮೂವಿಧ ಮದ ಮುರಿದು ಪವಿತ್ರ ಪ್ರಣವರಿದು ಸುವಿದ್ಯ ಸುಖಬೆರೆದು 4 ಬಾಹ್ಯಾಂತ್ರದೊಳಿಹ ಪೂರ್ಣ ಮಹಾಗುರುನಿರಂಜನ ಇಹ ಪರತ್ರ ಸಾಧನ ಮಹಿಪತಿ ಅಂತರಾತ್ಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನ್ಯಾಯವಾಕೊ ನ್ಯಾಯವಾಕೊ ತೋಯಜಾಕ್ಷನಲ್ಲದಿಲ್ಲ ಪ ಸಾವÀಧಾನ ಚಿತ್ತನಾಗಿ ಮಾಯನೀಗಿ ಜ್ಞಾನಗೂಡಿ ಸೇವೆ ಮಾಡೆಲೊ ದಾಸಜನರ ದಿವ್ಯತತ್ವವು ತೋರುತದೆ 1 ವೃತ್ತಿಬಲಿಸಿ ನಿತ್ಯದಿ ಹರಿ ಕೀರ್ತನದಿ ನಿನ್ನ ಚಿತ್ತನಿಲಿಸಿ ಸತ್ಯದಿಂದರಿಯುತ್ತಲಿರ್ದರೆ ಸತ್ಯವಸ್ತುವು ಅರ್ಥವಾಗ್ವುದು 2 ಮಹಾತ್ಮರ ನಿಜವಾಕ್ಯ ನಂಬಿ ದುರಾತ್ಮತನವಂ ದೂರಮಾಡಿ ಮಹಾತ್ಮೆ ಕಾಂಬುದು 3
--------------
ರಾಮದಾಸರು
ಪಂಚೀಕರಣಮಾಡಿ ತಾ ಸಂಚರಿಸುವ ಪ ಪಂಚೀಕರಣತಿಳಿಯದೆ ಪ್ರಪಂಚದೊಳು ಮುಳುಗಿ ನಾ ವಂಚಿತನಾದೆ ವಿರಿಂಚಿಭಕ್ತಿಗೆ ಅ.ಪ ಸಚ್ಚಿದಾನಂದ ರೂಪ ವ್ಯಾಪ್ತರೂಪಿ ನಾರಾಯಣ ಅಪ- ಅಚ್ಯುತ ತನ್ನಿಚ್ಛೆಯಿಂದ ವೈಕೃತಾಕಾಶಕ್ಕೆ ಅಂಭ್ರಣಿದೇವಿಯರನೆ ಮುಖ್ಯ ಮಾಡಿದಾ 1 ಗುಣರಾಶಿಯೊಳು ಸತ್ವಕ್ಕೆ ಶ್ರೀದೇವಿಯರು ಮುಖ್ಯ ರಜಕೆ ಭೂದೇವಿ ತಮಕೆ ದುರ್ಗಾದೇವೇರು ಸತ್ಯಜ್ಞಾನಾನಂದದಯೆ ಮೌನಪಂಚೇಂದ್ರಿಯ ಜಯ ಅಕ್ರೌರ್ಯಗುರು ಸೇವೆಯೇ ಸತ್ವಕಾರ್ಯವು2 ತಮಕ್ರೋಧ ಅಹಂಕಾರ ಮದೋನ್ಮಾದ ಚಪಲೋದ್ಯೋಗ ಡಂಭ ಸ್ವಚ್ಛಂದರಜದ ಕಾರ್ಯವು ತಮದ ಕಾರ್ಯ ಅಜ್ಞಾನ ಮೋಹ ನಿದ್ರಾಲಸ್ಯ ಬುದ್ಧಿಶೂನ್ಯ ತಾಪವಾದಿ ಹಿಂಸಾಕಾರ್ಯವು 3 ಸತ್ವಪ್ರಾಚುರ್ಯದಿ ಮದ ಗುಣತ್ರಯವೈಷಮ್ಯಹೊಂದಿ ಶ್ರೇಷ್ಠಕಾರ್ಯಕೆ ಮಹತ್ತತ್ವವಾಯಿತು ಸಾತ್ವತಾಂಪತಿಯ ಇಚ್ಛೆಯಿಂದ ಮಹತ್ತತ್ವದಿ ಅಹಂಕಾರ ತತ್ವವೆಂಬುದೇರ್ಪಟ್ಟಿತು 4 ತೈಜಸ ತಾಮಸ ಅಹಂಕಾರ ವೆನುತಲಿ ಮೂರಹಂ- ಕಾರದಿ ಮೂರು ರುದ್ರರೂಪಗಳು ಬ್ರಹ್ಮವಾಯು ಶೇಷರಿಂದುದಯಿಸಿದರು5 ವೈಕಾರಿಕ ಅಹಂಕಾರದಿ ದೇವತಾ ದೇಹ ಮನಸು ತೈಜಸದಿಂದ ದಶೇಂದ್ರಿಯ ಹುಟ್ಟಿತು ತಾಮಸಾಹಂಕಾರದಿಂದುತ್ಪನ್ನವಾದುವು6 ಸರ್ವ ಮಿಳಿತಮಾಡಿ ಬ್ರಹ್ಮಾಂಡವನೆ ಸೇರಿ ಹರಿಯು ಪದ್ಮನಾಭರೂಪದಿಂದ ಶಯನಗೈದನು ಸರ್ವಲೋಕೋದ್ಧಾರ ಹರಿಯು ನಾಭಿಯೊಳು ಪದ್ಮ ತೋರಿ ಪದುಮದಲ್ಲಿ ಪದ್ಮಸಂಭವನಾಸೃಜಿಸಿದ 7 ಸರ್ವರಂತರ್ಯಾಮಿ ಸಕಲಜೀವರನ್ನು ಸೃಷ್ಟಿಗೈಸಿ ಜೀವಯೋಗ್ಯತಾ ಕಾರ್ಯ ನಡೆಸುತಿರುವನು ಸರ್ವಜೀವಕಾರ್ಯವು ಪಂಚವಿಂಶತಿತತ್ವ ಈ- ಶರಿಂದಲೆ ಕಾರ್ಯನಡೆಯತಿರುವುದು8 ಶಬ್ದತನ್ಮಾತ್ರದಿಂದ ಆಕಾಶ ಹುಟ್ಟಿತು ವಾಯುಹುಟ್ಟಿತು ಸ್ಪರ್ಶತನ್ಮಾತ್ರದಿ ರೂಪತನ್ಮಾತ್ರದಿ ಅಗ್ನಿಭೂತ ಹುಟ್ಟಿತು ಆಗ ರಸತನ್ಮಾತ್ರದಿ ಅಷ್ಟು ಹುಟ್ಟಿತು 9 ಈ ಪರಿವಿರಾಟದಿಂದುಯಿಸಿದವು ಆಕಾಶ ಕೊಂದೆ ಶಬ್ದಗುಣವು ಮಾತ್ರ ಇರುವುದು ಅಹುದು ವಾಯವಿಗೆ ಶಬ್ದ ಸ್ಪರ್ಶವೆರಡುಗುಣಗಳು10 ತೋರುತಿರ್ಪುದಗ್ನಿ ಶಬ್ದಸ್ಪರ್ಶರೂಪ ಗುಣಗಳು ಗುಣ ಶಬ್ದ ಸ್ಪರ್ಶ ರೂಪ ರಸ ಗಂಧವೈದು ಪರಿ ಭೂತಪಂಚಕಗಳ ಅರಿವುದು 11 ಪಂಚಭೂತಗಳು ತಮ್ಮ ಸ್ವಾಂಶಗಳ ಭಾಗಗೈಸಿ ಪ್ರ- ಪಂಚ ಕಾರ್ಯಕಿತ್ತ ಪರಿಯದೆಂತೆನೆ ಆಕಾಶ ದರ್ಧಭಾಗ ಭೂತ ಪ್ರೇತ ಪಿಶಾಚಿಗಳಿಗೂ ಉಳಿ ಪಾದ ಪಾದವೆನ್ನೆ ಜೀವಕೋಟಿಗೂ12 ವಾಯು ತನ್ನರ್ಧಭಾಗ ಪಕ್ಷಿ ಪನ್ನಗಾದಿಳಿಗೂ ಪಾದ ಭಾಗ ಜೀವಕೋಟಿಗೂ ಅಗ್ನಿತನ್ನರ್ಧಭಾಗ ದೇವ ಋಷಿಗಳಿಗೂ ಮಿಕ್ಕಧರ್Àದೊಳ್ ಪಾದಭಾಗ ಜೀವಕೋಟಿಗೂ13 ಅಪ್ಪುತನ್ನರ್ಧಂಶ ಜಲಚರಪ್ರಾಣಿಗಳಿಗು ಮಿಕ್ಕರ್ಧದೊಳು ಪಾದಭಾಗ ಜೀವಕೋಟಿಗೂ ಪೃಥ್ವಿ ತನ್ನರ್ಧಂಶ ಜಡಜೀವಕೋಟಿಗೂ ಮಿಕ್ಕ ರ್ಧದೊಳ್ ಪಾದಭಾಗ ಜೀವಕೋಟಿಗೂ14 ಪೃಥ್ವಿ ಅಪ್ಪು ತೇಜೋ ವಾಯು ಆಕಾಶಗಳು ಸೂಕ್ಷ್ಮರೂಪದಿಂದೆರಡೆರಡಾದವು ಆಕಾಶತನ್ನರ್ಧಾಂಶದಲ್ಲಿ ವಾಯ್ವಗ್ನಿ ಅಪ್ಪು ಪೃಥ್ವಿಗಳಿ ಗೆ ಕೊಟ್ಟು ಸ್ವಾಂಶ ಅಂತಃಕರಣವೆನಿಸಿತು 15 ವಾಯು ಸ್ವಾಂಶದಿಂದುದಾನವೆಂದೆನಿಸಿ ಮಿಕ್ಕ ಪೃಥ್ವೈ ಪ್ತೇಜಾಕಾಶಗಳಿಗೆ ತನ್ನ ಚಲನ ಕೊಟ್ಟಿತು ಅಗ್ನಿ ತನ್ನಸ್ವಾಂಶದಿಂದ ಚಕ್ಷುಸೇಂದ್ರಿಯ ವೆನಿಸಿ ವಾಯ್ವಾಕಾಶಅಪ್ಪು ಪೃಥ್ವಿಗುಷ್ಣ ಕೊಟ್ಟಿತು 16 ಅಪ್ಪು ತನ್ನ ಸ್ವಾಂಶದಿಂ ರಸವೆಂದೆನಿಸಿ ಮಿಕ್ಕ ವಾಯ್ವಾಕಾಶಾಗ್ನಿ ಪೃಥ್ವಿಗೆ ದ್ರವವ ಕೊಟ್ಟಿತು ಪೃಥ್ವಿತನ್ನ ಸ್ವಾಂಶದಿಂ ಗಂಧವೆಂದೆನಿಸಿ ಮಿಕ್ಕ ಅಪ್ತೇಜವಾಯ್ವಾಕಾಶಕೆ ಕಠಿಣ ಕೊಟ್ಟಿತು 17 ಭೂತಪಂಚಕಗಳಿಗೆ ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ರೂಪವು ಅಧಿಷ್ಠಾನರಾಗಿ ಅವರಂತರ್ಯಾಮಿಯಾಗಿ ಅನಿರುದ್ಧಾದಿ ಐದು ಭಗವನ್ಮೂರ್ತಿ ಇರುವುದು 18 ನಾಮರೂಪ ವರ್ಣಗುಣ ಸ್ವಭಾವ ತೇಜ ಸುಮುಖ ದೇವರಶಕ್ತಿ ಅಕ್ಷರ ಕ್ರಿಯಾ ಎಂಬೀ ಹತ್ತು ಗುಣಗಳು ಭೂತ ಒಂದಕ್ಕೆ ತಿಳಿದು ಉಪಾಸನ ಮಾಳ್ಪಾದೂ ಬುಧರು ಎಲ್ಲರು 19 ನಾಮವೇ ಆಕಾಶ ರೂಪ ಒಟ್ಟು ಭಾವ ಬಯಲು ವರ್ಣ ಕಪ್ಪು ಗುಣಶಬ್ದ ಕ್ರಿಯ ಅನುಗ್ರಹ ಮುಖವೇ ಈಶಾನ ದೇವತೆ ಪರಶಿವಶಕ್ತಿ ಪರಾಶಕ್ತಿ ಅಕ್ಷರವೇ ನಾದವು20 ನಾಮ ವಾಯುರೂಪ ಷಟ್ಕೋಣ ವರ್ಣನೀಲ ಮುಖ ತತ್ಪುರುಷ ದೇವತೆ ಸದಾಶಿವ ಶಕ್ತಿ ಅಕ್ಷರ ಬಿಂದುವೆನಿಪುದು 21 ನಾಮ ಅಗ್ನಿರೂಪ ಮುಕ್ಕೋಣವರ್ಣ ರಕ್ತವರ್ಣ ಮುಖ ಅಘೋರ ದೇವತೆ ರುದ್ರಶಕ್ತಿ ಪಾರ್ವತಿ ಅಕ್ಷರ ಮಕಾರ 22 ನಾಮ ಅಪ್ಪುರೂಪ ಅಧರ್Éೀಂದು ಶ್ವೇತವರ್ಣ ಸ್ವಭಾವದ್ರವ ಗುಣ ಮಾಧುರ್ಯ ವಿಷ್ಣುಶಕ್ತಿ ಅಕ್ಷರಉಕಾರ ಎಂದು ಪೇಳ್ವರು 23 ನಾಮವೇ ಪೃಥ್ವಿರೂಪ ಚತುಷ್ಕೋಣ ವರ್ಣ ಹೇಮ ಸ್ವಭಾವವೇಕಠಿಣ ಕ್ರಿಯ ಸೃಷ್ಟಿ ಗುಣವೆ ಗಂಧವು ಮುಖಸದ್ಯೋಜಾತ ದೇವತೆ ಬ್ರಹ್ಮಶಕ್ತಿ ಸರಸ್ವತಿ ಅಕ್ಷರ ಅಕಾರವು 24 ಉಕ್ತರೀತಿ ಹತ್ತು ಗುಣಗಳೊಳ್ ಭೂತ ಒಂದ- ಕ್ಕೆತಿಳಿದು ಈ ಜ್ಞಾನೇಂದ್ರಿಯಗಳೆಂತಾದವು ಎಂದರಿವುದು ಆಕಾಶಸಮಾನಾಂಶ ಅಗ್ನಿಯು ಮುಖ್ಯಾಂಶದಿರೆ ಶ್ರೋತ್ರೇಂದ್ರಿಯ ಹುಟ್ಟಿ ತೋರುತಿರುವುದು25 ವಾಯುಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ ತ್ವಗೇಂದ್ರಿಯವು ತಾನೆ ತೋರುತಿರುವುದು ಜಿಹ್ವೇಂದ್ರಿಯವು ತೋರುತಿರುವುದು26 ಘ್ರಾಣೇಂದ್ರಿಯವು ತಾನೆ ತೋರುತಿರುವುದು ಅಗ್ನಿ ಸ್ವಾಂಶದಿಂದ ಚಕ್ಷುಷೇಂದ್ರಿಯವೆಂದು ಹಿಂದೆಯೇ ಈ ವಿವರ ಪೇಳಿರುವುದು27 ಪೃಥ್ವಿಸಮಾನಾಂಶದೊಡನೆ ಆಕಾಶ ಸಮಾಂಶಸೇರೆ ವಾಗೇಂದ್ರಿಯವೆ ತಾನೆ ತೋರುತಿರುವುದು ಪೃಥ್ವಿ ಮುಖ್ಯಾಂಶದೊಡನೆ ವಾಯು ಸಮಾಂಶಸೇರೆ ಘ್ರಾಣೇಂದ್ರಿಯವು ತಾನೆ ತೋರುವುದು 28 ಪೃಥ್ವಿಮುಖ್ಯಾಂಶದೊಡನೆ ಅಗ್ನಿ ಸಮಾಂಶಸೇರೆ ಪಾದೇಂದ್ರಿಯವು ತಾನೆತೋರುತಿರ್ಪದು ಪೃಥ್ವಿ ಮುಖ್ಯಾಂಶರೊಡನೆ ಅಪ್ಪು ಸಮಾವಾಂಶ ಸೇರೆ ಪಾಯೇಂದ್ರಿಯವೆಂದು ತೋರುತಿರ್ಪುದು29 ಪೃಥ್ವಿಸ್ವಾಂಶವೇ ಗುಹ್ಯೇಂದ್ರಿಯವೆಂದು ಪೂ ರ್ವೋಕ್ತ ರೀತಿಗಣನೆ ತರುವುದು ಈ ರೀತಿ ಕರ್ಮೇಂದ್ರಿಯಗಳೆಲ್ಲ ಪೃಥ್ವಿ ತತ್ವದಿಂದಲೇ- ರ್ಪಟ್ಟು ಬೆಳಗುತಿರುವುದು30 ಆಕಾಶ ಸಮಾನಾಂಶ ಅಪ್ಪು ಮುಖ್ಯಾಂಶದಿರೆ ಶಬ್ದ ವಾಯು ಸ್ವಯಾಂಶದಿ ಅಪ್ಪು ಮುಖ್ಯಾಂಶದಿ ಸ್ಪರ್ಶತೋರ್ಪುದು ಅಗ್ನಿ ಸಮಾನಾಂಶ ಅಪ್ಪು ಮು ಅಪ್ಪು ಮುಖ್ಯಾಂಶದಿಂದಲೆ31 ಅಪ್ಪುಸ್ವಯಾಂಶವೇ ರಸವು ಎಂದೆನಿಸಿತು ತನ್ಮಾತ್ರಪಂಚಕಕ್ಕೆ ಮೂಲ ಅಪ್ಪುತತ್ವವು ಪ್ರಾಣಾದಿಪಂಚಗಳ ಮುಂದೆ ವಿವರಿಸಿಹುದು ವಾಯುತತ್ವವೇ ಅದಕೆ ಮುಖ್ಯಕಾರಣ32 ವಾಯು ಮುಖ್ಯಾಂಶದೊಳು ಆಕಾಶ ಸಮಾನಾಂಶ ಸೇರೆ ಸಮಾನ ವಾಯುವೆಂತೆಂದೇರ್ಪಟ್ಟಿತು ವ್ಯಾನ ವಾಯು ಎಂತೆಂದೇರ್ಪಟ್ಟಿತು 33 ವಾಯು ಮುಖ್ಯಾಂಶದೊಳು ಅಪ್ಪು ಸಮಾನಾಂಶ ಸೇರೆ ಅಪಾನವಾಯುವೆಂತೆಂದೇರ್ಪಟ್ಟಿತು ವಾಯು ಮುಖ್ಯಾಂಶದೊಡನೆ ಪೃಥ್ವಿಸಮಾನಾಂಶ ಸೇರಲು ಪ್ರಾಣ ವಾಯು ಉತ್ಪನ್ನವಾಯಿತು34 ವಾಯುವಿನ ಸ್ವಯಾಂಶವೇ ಉದಾನವಾಯುವೆನಿಸಿತು ಮುಂದೆ ವಿವರಿಸುವುದು ಜ್ಞಾನ ಪಂಚಕ ಈ ಜ್ಞಾನ ಪಂಚಕಕ್ಕೆ ಆಕಾಶ ತತ್ವವೇ ಮುಖ್ಯಕಾರಣವೆಂದು ಬುಧರು ಪೇಳ್ವರು35 ಆಕಾಶ ಮುಖ್ಯಾಂಶದಿ ವಾಯು ಸಮಾನಾಂಶ ಸೇರಿ ದಾಗಲೆ ಮನಸು ಎಂಬುವುದು ಹುಟ್ಟಿತು ಆಕಾಶ ಮುಖ್ಯಾಂಶದಿ ಅಗ್ನಿ ಸಮಾನಾಂಶ ಸೇರಿ ದಾಗಲೆ ಬುದ್ಧಿ ಎಂಬುದು ಗೋಚರವಾಯಿತು 36 ಸೇರೆ ಚಿತ್ತವೆಂಬುದು ವ್ಯಕ್ತವಾಯಿತು ಆಕಾಶ ಮುಖ್ಯಾಂಶದೊಳು ಪೃಥ್ವಿಸಮಾನಾಂಶ ಸೇರಿ ಅಹಂಕಾರವೆಂಬುದೇರ್ಪಟ್ಟಿತು 37 ಆಕಾಶ ಸ್ವಾಂಶವೇ ಕತೃತ್ವವೆಂದೆನಿಸಿತು ಈಪರಿಯ ತಿಳಿವುದು ಜ್ಞಾನಪಂಚಕ ಜ್ಞಾನೇಂದ್ರಿಯ ಕರ್ಮೇಂದ್ರಿಯ ಪಂಚತನ್ಮಾ ತ್ರಗಳಿಗೆ ಆಧ್ಯಾತ್ಮಿಕಾದಿಭೌತಿಕದೇವತೆಗಳ ತಿಳಿವುದು 38
--------------
ಉರಗಾದ್ರಿವಾಸವಿಠಲದಾಸರು
ಪರಮಾತ್ಮನ ನೆನೆಯಲು ಬೇಕು ಪರತರಸುಖವನು ಪಡೆಯುವನಿದರಿಂ ದುರಿತಗಳೆಲ್ಲವ ನೀಗಲು ತಾ ಪ ಮೊದಲನೆ ಕಾರ್ಯವು ಜೀವರೆಲ್ಲರಿಗೆ ಇದು ಬಲು ಸುಲಭವು ಸಾಧನಗಳಲೀ ಪದುಮನಾಭನನು ನೆನೆಯದಿರುವವ ಅಧಮನು ಜಗದಿ ವ್ಯರ್ಥ ಜೀವಿಸುವ 1 ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ ಬಲ್ಲವರಿಂದಲಿ ತಿಳಿದು ವಿಚಾರಿಸಿ ನಿಲ್ಲದೆ ಸಾಧನೆ ಕೈಕೊಳ್ಳುವುದು 2 ಕೇಳುವದೈ ಪರಮಾತ್ಮನ ತತ್ವವ ತಿಳಿವುದು ತನ್ನೊಳು ತಾನೇ ನಿರುತಾ ಪೇಳಲೇನು ಧ್ಯಾನಿಸುವುದಾತನ ಮೇಳವಿಸುವದೈ ಜೀವನ್ಮುಕುತಿ 3 ನಾರಾಯಣನೇ ಪರಮಗತಿಯು ಈ ನರಜನ್ಮಕೆ ಬಂದಿರೆ ಲಾಭವಿದೇ ಅರಿತು ಇದನು ತಾ ಸಾಧನೆ ಮಾಳ್ಪುದು ಗುರುಶಂಕರನಾ ಬೋಧಸಾರವಿದು 4
--------------
ಶಂಕರಭಟ್ಟ ಅಗ್ನಿಹೋತ್ರಿ
ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು
ಪಾದ ಪದ್ಮದಲಿಮಾಯೆ ದಾಟಿತು ಮಹಿಮಳೇ ದೇವಿ ಪಕಾಯ ಕರ್ಮಗಳೆಂಬ ಕಾತ್ಯ ಸಮುದಾಯವನುದಾಯದಿಂದಳವಡಿಸಿದೆ ದೇವಿ ಅ.ಪಆಜಸುರಾದಿಗಳಿಂಗೆ ಅಮರಿಸಿಹೆ ಭಾಗ್ಯವನುಭಜಿಸುತಿಹರನವರತವೂ ದೇವಿನಿಜದಿರವನೂ ಕೊಟ್ಟು ನಿಲಿಸಿರಲು ನೀನವರತ್ರಿಜಗ ವಂದಿತರಾದರು ದೇವಿಸುಜನ ವಂದಿತನಾದ ಶ್ರೀಹರಿಯೆ ನೀನಾಗಿರುಜುಕರದಲಾಳುತಿರುವೆ ದೇವಿಕುಜನನಾದರು ನಾನು ಕರವಿಡಿದು ನೀ ಕಾಯ್ದುದ್ವಿಜಜನ್ಮದೆಣಿಕೆದೋರ್ದೆ ದೇವಿ 1ಅಣುಮಾತ್ರವಿರಲಿಲ್ಲ ವಿಷಯ ಭೋಗಕೆ ಬೀಜದಣಿಸಿದುದು ದಾರಿದ್ರವು ದೇವಿಕಣುಗಾಣದಿದ್ದವಗೆ ಕೊಟ್ಟಿಯನ್ನವ ನೀನೆಮಣಿವದನು ಮಾಡ್ದೆ ನೀನೆ ದೇವಿಪ್ರಣತ ರಕ್ಷಾಮಣಿಯೆ ಪರತತ್ವವನ್ನಿತ್ತೆಎಣಿಪುದೆಂತೀ ಮಹಿಮೆಯಾ ದೇವಿಕ್ಷಣಮಾತ್ರ ಪೂಜೆಯನು ಕ್ರಮದಿ ಮಾಡ್ದವನಲ್ಲಭಣಿತೆುದ ಬಗೆವರಾರು ದೇವಿ 2ಪರಿತೃಪ್ತಳಾಗಿರುವೆ ಪರಮಭಾಗ್ಯವನೀವೆನೆರೆ ನೀನೆ ನಿರ್ಮಿಸಿರಲು ದೇವಿಇರಿಸಿದಂತಿರುವರಿಂದೇನಹುದು ಕೊಡುವದಕೆಅರಿಯಲಖಿಳವು ನಿನ್ನದೇ ದೇವಿಮರುಗಿ ನೀನೇ ಕಾಯ್ವೆ ಮಾತೃ ರೂಪಹುದಾಗಿಸುರತರುವಿನುಪಮಾನಳೇ ದೇವಿವರದ ತಿರುಪತಿ ವಾಸ ವೆಂಕಟೇಶನ ರೂಪಧರಿಸಿಹಳೆ ದಿವ್ಯ ಲಕ್ಷ್ಮೀದೇವಿ 3ಕಂ||ಸ್ಥಿರವಾರವಿಂದು ಕೇಶವಸ್ಥಿರವಹುದಿತ್ತಭಯವೆನಗೆ ಭಯವನು ಬಿಡಿಸೈಸ್ಥಿರವಲ್ಲದ ಸಂಸಾರವಸ್ಥಿರವೆಂದೇ ನೊಂದೆನೈಯ ವೆಂಕಟರಮಣಾಓಂ ನಾರಾಯಣಾಯ ನಮಃ
--------------
ತಿಮ್ಮಪ್ಪದಾಸರು
ಪಾಲಿಸಯ್ಯ ವರವ ಹರಿಹರಿ ಪಾಲಿಸಯ್ಯ ವರವ ಪ ಪಾಲಿಸಯ್ಯ ವರ ಬಾಲಗೆ ಬೇಗನೆ ಕಾಲಕಾಲದಿ ನಿನ್ನ ಲೀಲಾನಂದವ ಅ.ಪ ಸತತದಿ ತವಭಜನೆ ಅಗಲಿಸ ದತಿ ಗುಪ್ತ ತತ್ವವನು ಯತಿತತಿ ಪೊಗಳುವ ಸ್ಮøತಿಶಾಸ್ತ್ರರ್ಥವನಿತ್ತು ಸುತಗೆ ಮಹಗತಿಯ ಪಥಕೆ ಹಚ್ಚು 1 ಮತಿ ಮಾನ್ಯರು ಸದಾ ಪೊಗಳುವ- ಪಾದ ಸತತ ನುತಿಪ ಅತಿಹಿತ ಮತಿಯಿತ್ತು ಪತಿತ ಪಾವನ ಮಾಡು ರತಿಪತಿಪಿತನೆ 2 ಜಡ ಬಡತನ ಕಡಿದು ಗಡನೆ ನ್ನೊಡಲಾಶೆಯ ತೊಡೆದು ನುಡಿನುಡಿಗಡಿಗಡಿಗೆಡಬಡದಲೆ ನಿ ನ್ನಡಿಧ್ಯಾನ ಕೊಡು ಎನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಪೋಷಿಸೆನ್ನ ಜೀಯಾ | ಗುರು |ಪ್ರಾಣೇಶ ದಾಸರಾಯಾ |ಶ್ರೀಶನ ಗುಣ ಸಂತೋಷದಿ ಪಾಡುವ |ದಾಸ ಕುಲಾಗ್ರಣಿಯೇ | ಎಣಿಯೆ ಪ ಹರಿಸ್ಮರಣೆಯ ಮರೆದೂ | ಸರ್ವದ |ಪದದನ್ನಕೆ ಬೆರಿದೂ |ದುರುಳ ಜನರ ಸಹವಾಸವನ್ನು ಮಾಡಿ |ಬಂದೆ ದಿನವ ಕಳೆದೇ ಉಳದೇ 1 ಪವನ ಮತದೊಳಿಟ್ಟೂ | ಶ್ರೀ ಹರಿ |ಸ್ತವನವನ್ನೆ ಕೊಟ್ಟೂ |ಕವಿಗಳ ಮುಖದಿಂ ತತ್ವವಿಚಾರದಿ |ಕವಲ ಮತಿಯ ಪಾಲಿಸೀ, ಉದ್ಧರಿಸೀ 2 ಮನ್ನ ಭಿನ್ನಪವನ್ನು ಕೇಳಿ |ಮನ್ನಿಸು ಸುರಧೇನೂ |ಘನ್ನ ಶ್ರೀಶ ಪ್ರಾಣೇಶ ವಿಠಲನ ಧ್ಯಾನ |ವನ್ನು ಮಾಳ್ವ ಶಕ್ತಾ ವಿರಕ್ತಾ 3
--------------
ಶ್ರೀಶಪ್ರಾಣೇಶವಿಠಲರು
ಪ್ರಣವ ಪ್ರತಿಪಾದ್ಯನು ಶ್ರೀನಾರಾ- ಯಣನೊಬ್ಬನೆ ಧ್ಯೇಯನುಜಗಕೆ ಪ ಎನುತ ಪೊಗಳುವದು ಶೃತಿ ತತಿಯೂ ಅ.ಪ ನಿಸ್ಸಂಶಯವಾಗಿರುವುದು ಸದ್ಭೋಧೆ ಪೇಳುವದು ದುರ್ಬೋಧೆ ಜೀವರಿಗೊಂದೇ ವೇಧೆ ತುದಿಗೆ ಎರಡು ಗುಂಪಿನವರನು ವಿಚಾರಿಸಿ ಮಾಳ್ಪೆನು ಕಾಲನು ಬಾಧೆ 1 ತಾಯಿ ಒಬ್ಬಳಿಗೆ ಮಕ್ಕಳು ಮೂವರು ತತ್ವವಿದೇ ನಿಶ್ವಯ ದಾರಿ ಪುರಂಜನ ಇವರಾಯತವಿವರಿವರಿಗೆ ಬಾರಿ ರಾದ್ಧಾಂತ ಪರಸ್ಪರ ಸೇರಿ 2 ನೇಮವಾಗಿ ವೇದದೊಳಿಲ್ಲ ಖಂಡಿತವಾಗಿ ಉತ್ತಮವಲ್ಲ ಪಾಮರರಾಗಿಹ ಮಧ್ಯಮಜನ ಸಂಪಾದಿಸಿದರೆ ದಕ್ಕುವದಿಲ್ಲ ಮೂವ್ವರ ಮರ್ಮವು ಬಲ್ಲಾ 3
--------------
ಗುರುರಾಮವಿಠಲ
ಪ್ರದೋಷಕಾಲವಿದೀಗ ನೀ ಮರೆ- ಯದೇ ನೆನೆಯೊ ಶಿವನಾ ಶಂಕರನಾ ಪ ಸದಾ ಸಕಲ ಸುರರಿಂದ ಕೂಡಿ ತಕ ತಧಿಂ ಎನುತ ಕುಣಿಯುವ ಶಿವನೀಗಲೂ ಅ.ಪ ಸಕಲ ವಾದ್ಯಗಳೂ ಶಂಭೋ ಎಂಬ ಸುವಾದಗಳೂ ತುಂಬುರ ನಾರದರೂ ನುಡಿಸಿ ಹೇ- ರಂಬ ಜನಕ ವಿಶ್ವಂಭರ ಎಂದು ದಿ- ಗಂಬರನಾಗಿ ಚಿದಂಬರ ಕುಣಿಯುವ 1 ಭೂಷಣಗಳ ಮಾಡಿ ಭಿಕ್ಷವನೂ ಬೇಡಿ ತಾತನಾಗಿ ಮೆರೆದು ಹಿಮ ಶೈಲ- ಜಾತೆ ಸಹಿತ ಪ್ರಖ್ಯಾತನಾಗಿ ಭವ- ಭೀತಿ ಬಿಡಿಸಿ ದುಃಖೇತರ ಕೊಡುವನು 2 ಗಿರಿರಾಜಕುಮಾರಿ ಕೈಮುಗಿದು ತನಗರುಹು ತತ್ವವೆನಲು ಸುರರು ಭಲಾ ಎನಲು ಪರಮ ಗುಣಸಾಂದ್ರ | ಕೇಳು ದಿನ- ಪರಾತ್ಪರನು ಶ್ರೀ ಗುರುರಾಮವಿಠಲ ವರತಾರಕ ಮಂತ್ರವಿದೇ ಎಂದನು 3
--------------
ಗುರುರಾಮವಿಠಲ
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು
ಬಹುತೀರ್ಥ ಸಂಗಮದ ಭಾಗವತಗಂಗೆಯಲಿಬಹುಸ್ನಾನ ದೊರಕಿ ಜೀವನ್ಮುಕ್ತನಾದೆ ಪಶುಭ್ರವರ್ಣದ ಗಂಗೆ ತಾನೆ ನಾರದನಾಗೆಅಭ್ರವರ್ಣದ ಯಮುನೆ ವ್ಯಾಸನಾಗೆಇಬ್ಬರೊಂದಾಗಿ ಪ್ರವ'ಸಿ ಬಂದು ದೋಷಗಳದಬ್ಬುತಿಹ ಪುಣ್ಯ ಪ್ರಯಾಗಿಯಾಗಿರುತಿರುವ 1ಪೂರ್ವಪಶ್ಚಿಮವಾಗಿ ದಕ್ಷಿಣೋತ್ತರವಾಗಿಶರ್ವಾಗ್ನಿ ನೈಋತ್ಯವಾಯು ಮುಖದಿಪರ್ವಕಾಲಗಳೆಂದು ಪ್ರವ'ಸುವ ನದಿಯಲ್ಲಸರ್ವವ್ಯಾಪಕವಾಗಿ ತುಂಬಿ ಸೂಸುತಲಿರುವ 2ನಾರಾಯಣಾದ್ರಿಯಲಿ ಪುಟ್ಟ ಬ್ರಹ್ಮಾಂಡವನುಪೂರೈಸಿ ಪರಮಪಾವನ ಗಂಗೆಯೂಸೇರುವರೆ ತನಗೊಂದು ತೀರ್ಥಬೇಕೆಂದೆನುತಧೀರಶುಕ ಕಾವೇರಿಯಲಿ ಕೂಡಿ ನೆಲಸಿರುವ 3ಕಮಲಸಂಭವನೆಂಬ ಗೋದಾವರಿಯದೆನಿಸಿ'ಮಲಮತಿ ಸೂತ ಶೌನಕ ಸಂಗದಿಭ್ರಮನಿವಾರಣ ತುಂಗಭದ್ರೆಯೆಂದೆನಿಸುವದುರಮೆಯ ರಸನೊಲಿದವರಿಗದು ದೊರಕುತಿಹುದು 4ಈ ನದಿಯ ಕೂಡಿರುವ ತೀರ್ಥಗಳನೆಣಿಸುವರೆನಾನೆಂಬ ಕ' ಯಾರು ಶೇಷ ತೊಡಗಿಸ್ವಾನುಭವ ಸಂಸಿದ್ಧ ನಿಜಭಕ್ತರೆಂದೆನಿಪಜ್ಞಾನಿಗಳ ಮ'ಮೆಗಳ ನದಿಗಳೊಡೆ ಬೆರೆದಿರುವ 5ಶೀತಬಾಧೆಯು ಲೇಶಮಾತ್ರ'ದರೊಳಗಿಲ್ಲವಾತಾದಿ ವ್ಯಾಧಿಗಳ ಕೊಡುವುದಲ್ಲನೂತನದ ಕಾಲದೇಶಗಳ ಬಯಕೆಯದಲ್ಲಆತುಕೊಳದಿದ್ದರೂ ಪಾತಕವ ಪರಿಹರಿಪ 6ಉತ್ತಮ ಪರೀಕ್ಷಿತನೇನು ಮೈತ್ರೇಯ 'ದುರರುಸತ್ಯಸಂಧನು ಕಪಿಲ ದೇವಹೂತಿಮತ್ತೆ ಉತ್ತಾನಪಾದನು ಧ್ರುವನು ಪೃಥು ಚಕ್ರವರ್ತಿಯೆಂಬೀ ತೀರ್ಥವ ತರಿಸಿಕೊಂಡಿರುವ 7ಪುಣ್ಯಾತ್ಮ ಪ್ರಾಚೀನ ಬರ್'ಯಾತ್ಮಜರಾದಸನ್ಮನದ ಮ'ಮರವರೀರೈವರುಇನ್ನಿವಳ ಗರ್ಭದಲಿ ಬಂದ ದಕ್ಷನು ತಾನುಕನ್ನೆಯರನರುವತ್ತ ಪಡೆದ ತೀರ್ಥಗಳಿರುವ 8ಅಪರ ಸೂರ್ಯನ ತೆರದ ಪ್ರಿಯವ್ರತನ ಸಂತತಿಯುತಪದಲನುಪಮ ವೃಷಭದೇವನುದಿಸೀಗುಪಿತ ತೇಜೋಮೂರ್ತಿ ಭರತನವತರಿಸಿರಲುಉಪಮಾನ'ಲ್ಲದೀ ತೀರ್ಥಗಳು ಬೆರೆದಿರುವ 9ದ್ವೀಪವೇಳರ ಸುತ್ತ ವ್ಯಾಪಿಸಿದ ವನಧಿಗಳುದೀಪಿಸುವ ಸೂರ್ಯಾದಿ ಚಕ್ರಗತಿಯೂಈ ಪರಿಯ ತೀರ್ಥಗಳು ಭೂ'ು ಸ್ವರ್ಗಾದಿಗಳವ್ಯಾಪಿಸಿಹ ಮ'ಮ ನದಿಗಳು ಒಂದುಕೂಡಿರುವ 10ನದಿಗಳಿಗೆ ನಿಜರೂಪವಾದ ನಾಮದ ಮ'ಮೆಒದಗಿಯಜ'ುಳನಘವನೊದೆದು ನಿಜದೀಹುದುಗಿಸಿದ ವರ್ಣನೆಯ ತಂಪು ಬಹುರುಚಿಕರವುಸದಮಲಾನಂದ ನಿಧಿಯಾಗಿ ಹುದುಗಿರುತಿರುವ 11ವೃತ್ರ ಚಾರಿತ್ರ ನದಿ ಮತ್ತೀತನಾರೆನಲು ಚಿತ್ರಕೇತುವು ಚಕ್ರವರ್ತಿಯಾಗಿಪುತ್ರ ಸಂತತಿುಂದ ಪ್ರಖ್ಯಾತ 'ಮಗಿರಿಯಪುತ್ರಿಶಾಪವು ಬಂದ ಸಿದ್ಧ ನದಿ ಬೆರೆದಿರುವ 12ನರಹರಿಯ ಚರಣಾರ'ಂದ ಮಕರಂದದಲಿಎರಗಿ ತುಂಬಿಯ ತೆರದಿ ಭಜಿಸುತಿರುವನೆರೆ ಭಕ್ತಪ್ರಹ್ಲಾದ ಗಜರಾಜ ಮನುಚರಿತಪರಮ ಪುಣ್ಯೋದಯದ ನದಿಗಳೊಂದಾಗಿರುವ 13ಕ್ಷೀರಸಾಗರ ಮಥನ ಕೂರ್ಮನಾದನು ಹರಿಯುಶ್ರೀರಮಣಿ ಸುಧೆಯುದಿಸಿದತಿ ಮ'ಮೆಯೂಶ್ರೀರಮಣ ವಟುವಾಗಿ ಬಲಿಯ ಸಲ'ದ ಬಗೆಯುಸಾರತರ ನದಿಗಳಿವು ಸೇರಿಕೊಂಡಿಹವಾಗಿ 14ಉಷ್ಣ 'ಮಕರರಂಶಸಂಭವ ಮಹಾತ್ಮರನುವ್ಣೃ ಸಂತತ್ಯುದ್ಧವಾದಿಗಳನೂ'ಷ್ಣುವಾದರು ಗಣಿಸಲಾರನೀ ತೀರ್ಥಗಳುಕೃಷ್ಣಸಾಗರದಲ್ಲಿ ಸೇರಿ ಪೂರೈಸಿರುವ 15ಯದುಕುಲಾಂಬುಧಿಯಲ್ಲಿ ಮದನಪಿತ ತಾ ಜನಿಸಿಮುದದಿಂದ ಗೋಕುಲದಿ ಬೆಳೆದು ನಲಿದುಚದುರಿಂದ ಗೋವು ಗೋವತ್ಸಪರನೊಡಗೂಡಿಸದದು ದೈತ್ಯರ ನಂದಗಾನಂದ'ತ್ತಾ 16ಬಾಲಕರ ಭೋಜನದ ನೆವದಿ ಬ್ರಹ್ಮನಿಗೊಲಿದುಕಾಳೀಯ ಫಣಗಣಾಗ್ರದಿ ನರ್ತಿಸಿಜ್ವಾಲೆಯನು ನೆರೆನುಂಗಿ ಗೋಕುಲದವರ ಸಲ'ಬಾಲಲೀಲೆಯ ಬಹಳ ಪುಣ್ಯತೀರ್ಥಗಳಿರುವ17ಗೋವಕ್ಕಳೊಡಗೂಡಿ ವನಮಧ್ಯದಲಿ ಚರಿಸಿದೇವತಾ ಯಜ್ಞ ಪತ್ನಿಯರಿಗೊಲಿದೂಗೋವರ್ಧನೋದ್ಧರಣ ಗೋಪಾಂಗನಾ ಜನದಭಾವನೆಯ ಪೂರ್ತಿಗೊಳಿಸಿದ ತೀರ್ಥ'ರುವಾ 18ವರಧನು'ನುದಯ ದರ್ಶನನೆವದಿ ಮಧುರೆಯನುನೆರೆಪೊಕ್ಕು ಕುಬ್ಜೆಗತಿಶಯದ ರೂಪಕರೆದಿತ್ತು ಕುಸುಮವನು ಕೊಟ್ಟವನಿಗೊಲಿದಾಗಪಿರಿದಾಗಿ ಕಂಸನಿಗೆ ತಾನೆ ಮುಕ್ತಿಯ ಕೊಟ್ಟು 19ದ್ವಾರಕಾ ನಿರ್ಮಾಣ ದುರುಳ ಜನಸಂಹರಣನಾರಿಯರ ನೆಂಟನೊಡಗೂಡಿ ಬಳಿಕಾಪಾರಿಜಾತವ ಕಂಡು ಈರೆಂಟು ಸಾಸಿರದನೀರೆಯರ ಸಂಸಾರ ಸಂಪತ್ತಿನತಿಶಯದ20ಮಾಸಿದರುವೆಯ ಭಕ್ತನವಲಕ್ಕಿಯನು ಮೆದ್ದುಲೇಸಾದ ಸಂಪತ್ತನೊಳಗೆ ಕೊಟ್ಟೂ'ುೀಸಲಳಿಯದ ಮ'ಮ ಭಕ್ತಜನಸಂಸಾರಿವಾಸುದೇವನ ಮ'ಮೆ ಜಲನಿಧಿಯ ಕೂಡಿರುವ 21ತತ್ವಸಾರವನು ನವಯೋಗಿಗಳು ನಿ'ುಗೊರೆದುಮತ್ತೆ ನಾರದನು ವಸುದೇವನೆಡೆಗೆಚಿತ್ತಜನ ಜನಕನಭಿಮತದಿಂದವತರಿಸಿಚಿತ್ತವನು ವಸ್ತು'ನೊಳೈಕ್ಯವನು ಮಾಡಿಸಿದ 22ವೇದಾಂತ ನಿಧಿಯಾದ ಉದ್ಧವಗೆ ತತ್ವವನುಮಾಧವನೆ ತಾನೊರೆದು ಧರಣಿಯೊಳಗೆವೇದಾಂತ 'ಸ್ತರಕೆ ನಿಲಿಸಿ ನಿಜಪಾದುಕೆಯವೇದವೇದ್ಯನು ಕೊಟ್ಟು ನಿಜಜನಕೆ ನಿಧಿಯಾದ23ಕಾಲಗತಿಗಳನೊರೆದು ಮತ್ತೆ ಭೂಲೋಕವನುಪಾಲಿಸುವ ದೊರೆಗಳಭಿಮತದ ಗತಿಯೂಮೇಲಾಗಿ ಕಲಿಯುಗದ ಗತಿ'ಸ್ತರವನೆಲ್ಲಲೋಲನೃಪಗೊಲ'ಂದ ಪೇಳ್ದ 'ವರಗಳಿರುವ 24ಪರಮಾತ್ಮನೊಡನಾಡಿ ಪರಮ ಪಾವನರಾಗಿಮೆರೆವ ಗೋಪೀ ರತ್ನ ಮಾಲೆಯೊಡನೆನೆರೆಶಿಖಾಮಣಿಯೆನಿಸಿ ತಿರುಪತಿಯ ವೆಂಕಟನುಧರಣಿಯೊಳು ಸಕಲರನು ನೆರೆ ಸಲಹುತಿಹನೂ25
--------------
ತಿಮ್ಮಪ್ಪದಾಸರು