ಮಾಯದೂರನೆ ಎನ್ನ ಮಾಯ ಬಿಡಿಸಯ್ಯ
ಮಾಯದಲಿ ಸಿಲ್ಕಿ ಬಲು ಬಳಲುವೆನಭವ ಪ
ಮಾಯದಿಂ ಜನಿಸಿ ನಾ ಮಾಯದಿಂ ಬೆಳೆದಿರುವೆ
ಮಾಯವನೆ ಉಟ್ಟು ನಾ ಮಾಯ ತೊಟ್ಟಿರುವೆ
ಮಾಯವನೆ ಹಾಸಿ ನಾ ಮಾಯವನೆ ಹೊದ್ದಿರುವೆ
ಮಾಯದಲಿ ಬಿದ್ದು ಬಲು ಒದ್ದಾಡುತಿರುವೆ 1
ಮಾಯಕ್ಕೆ ಸತಿಯೆಂದು ಮಾಯಕ್ಕೆ ಸುತರೆಂದು
ಮಾಯಕ್ಕೆ ಬಂಧೆಂದು ಮಾಯದ್ಹಿಗ್ಗಿದೆನೋ
ಮಾಯಸಂಸಾರದ ಮಾಯನರಿಯದೆ ನಾನು
ಮಾಯ ಮೋಹಿತನಾಗಿ ಬಾಯ್ಬಿಡುವೆ ಸತತ 2
ಮಾಯವನು ಕಲ್ಪಿಸಿ ಮಾಯವನೆ ಕುಣಿಸಾಡಿ
ಮಾಯದಾಟಾಡುವಿಯೊ ಮಾಯವನು ತುಂಬಿ
ಮಾಯಮಹಿಮನೆ ನಿನ್ನ ಮಾಯ ಬಲ್ಲವರಾರು
ಮಾಯದಿಂದುಳಿಸೆನ್ನ ಕಾಯೊ ಶ್ರೀರಾಮ 3