ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ
ಬಂದ ಜನ್ಮಸಾಫಲ್ಯವಾಯಿತೀಗ ಧ್ರುವ
ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ
ಅಂಬುಜಾಕ್ಷನ ಕಂಡೆ ಸುಪ್ರಕಾಶ
ತುಂಬಿತುಳುಕುತಲ್ಯದ ಬಲುಹರುಷ
ಇಂಬುಸಾಲದು ಬ್ರಹ್ಮಾಂಡ ಆಕಾಶ 1
ಎನ್ನಹೃದಯ ಮಂದಿರದೊಳು ನೋಡಿ
ತನ್ನಿಂದ ತಾಂ ಬಂದನು ದಯಮಾಡಿ
ಕಣ್ಣುಪಾರಣೆಗೈಸಿದೆನ್ನ ಕೂಡಿ
ಇನ್ನು ದಣಿಯದೆನ್ನಮನ ಕೊಂಡಾಡಿ 2
ಘನ ಸುಖದೋರುತದೆ ಎನಗಿಂದು
ಭಾನುಕೋಟಿ ಉದಯವಾದನೆಂದು
ದೀನ ಮಹಿಪತಿಸ್ವಾ,ಮಿ ಕೃಪಾಸಿಂಧು
ಮನೋಹರ ಮಾಡಿದ ತಾನೆ ಬಂದು 3