ಸಾಸಿರ ನಾಮವ ಹಾಡೆ | ತಂಗಿ ಪ
ದಾಸರು ಬಂದರೆ ಕೈ ಜೋಡಿಸಿ ವಂದಿಸೆ
ತೋಷದಿ ವರಗಳ ಸೀಡುವರಮ್ಮ ಅ.ಪ
ಪರಿಮಳ ಭರದಲಿ ಮೆರೆಯುವ ಹೂಗಳ
ಅರಸಿ ತಂದಿರುವಳು ನೀನಲ್ಲವೇ
ಪರಮ ಮಂಗಳಕರ ಸರಸಿಜಪಾದಕೆ
ಹರುಷದೊಳರ್ಪಿಸೆ ಮರೆಯದಿರಮ್ಮ 1
ಮಂದರಧರ ಗೋವಿಂದನು ಮನದಲಿ
ನಿಂದಿರುವನು ತಾನೆಂದೆಣಿಸಮ್ಮ
ಬಂಧಿಸಿ ಪಂಚೇಂದ್ರಿಯಗಳನೆಲ್ಲ
ವಂದಿಸಿ ಕೈಪಿಡಿ ಎಂದು ಬೇಡಮ್ಮ 2
ಅಂಗನೆಯರ ಭಾವಭಂಗಿಗೆ ನಲಿಯುವ
ಮಾಂಗಿರಿಯರಸನು ನಿಜವಮ್ಮ
ಇಂಗಿತವರಿತು ಗೋಪಾಂಗನೆಯರಿಗಾ-
ಲಿಂಗನವಿತ್ತವನಿವನಮ್ಮ 3
ಇವನಮ್ಮ ಮನದೈವ ಗೋಪಾಲನು
ಇವನಮ್ಮ ಪರದೈವ ನೀಲಾಂಗನು
ಭವದೂರ ಸುಕುಮಾರ ಸಿರಿಲೋಲನು
ನವನೀತ ದಧಿಚೋರ ಸುವಿಲಾಸನು 4
ಪರಮಾರ್ಥ ಚರಿತಾರ್ಥ ವರದಾತನು
ಪರತತ್ವ ಚಿರತತ್ವ ಗುರುವೀತನು
ದುರಿತಾರಿ ಉಪಕಾರಿ ಪರಮಾತ್ಮನು
ಸಿರಿರಂಗ ಮಾಂಗಿರಿಯ ದೊರೆಯೀತನು 5