ಒಟ್ಟು 931 ಕಡೆಗಳಲ್ಲಿ , 87 ದಾಸರು , 810 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಲೀಲೆ ಹರಿಲೀಲೆ ಪ ಜಗದೊಳು ಸುಜನರು ಬಳಲುತಲಿರುವುದು ಅ.ಪ ಉಚ್ಚಕುಲದಿ ಪುಟ್ಟಿ ಸ್ವಚ್ಛ ಜ್ಞಾನದಿಂದ ಅಚ್ಯುತನಂಘ್ರಿಯ ಪೂಜಿಸುತಿರಲು ತುಚ್ಛ ಜನರುಗಳು ಸ್ವೇಚ್ಭೆಯಿಂದಲಿ ಹುಚ್ಚು ಹರಟೆಗಳ ಹರಟುವುದೆಲ್ಲವು 1 ಪಂಡಿತರೆಲ್ಲ ಅಖಂಡ ಕಲೆಗಳಿಗೆ ಮಂಡನರೆನಿಸಿ ಭೂಮಂಡಲದಿ ಭಂಡಿ ಭಂಡಿ ಧನರಾಶಿಗಳಿರಲಾಗಿ ಪಿಂಡಕ್ಕಿಲ್ಲದೆ ತಿರುಗುತಲಿರುವುದು 2 ಮನವ ತೊರೆಯುತ ಕಾಮಿನಿಯರುಗಳು ಗಾನವ ಮಾಡಲು ಆನಂದಿಪರು ಜ್ಞಾನಿ ದಾಸರುಗಳು ಭಕುತಿಯಿಂದ ಹರಿ ಗಾನವ ಮಾಡಲು ಮಾನಸದಿರುವುದು 3 ಪನ್ನಗಶಯನನು ತನ್ನ ಭಕುತರಿಗೆ ಹೆಣ್ಣು ಹೊನ್ನು ಮಣ್ಣಿನ ಆಸೆ ಯನ್ನು ಬಿಡಿಸಿ ಅವರನ್ನು ಉದ್ಧರಿಸಿ ಪ್ರ ಸನ್ನನಾಗುವೆ ನಾನೆನ್ನುತ ಪೇಳ್ವುದು 4
--------------
ವಿದ್ಯಾಪ್ರಸನ್ನತೀರ್ಥರು
ಹರಿಶಯ್ಯ - ಹರಿಶಯ್ಯ ಪ ಪೂರ್ವ ತ್ರಿಯಂಬಕ | ಜೀವರ ಮಾನಿಯೆ ಅ.ಪ. ಪತಿ ಚಾರು ಭವ ವಾರಿಧಿ ದಾಟಿಸು 1 ದಾತನೆ ಪ್ರಾರ್ಥಿಪೆ | ವಾತೋದ್ಭವ ಎನಪ್ರೀತಿಲಿ ಕರಪಿಡಿ | ವಾತಾಶನ ಗುರು2 ನಿಕರ ಸಿರಿ | ಕೇಶವನಲಿ ಬಿಡು 3 ಭವ 4 ಪಕ್ಷಿಯ ವಹ ಹರಿ | ಪಕ್ಷಸಾಧಕ ಗುರುಚಕ್ಷುಶ್ರ್ಯವ ಎನ | ಈಕ್ಷಿಸು ಕರುಣದಿ 5 ಸ್ವಪ್ನದಿ ಇತ್ತಿಹ | ಆಜ್ಞೆಯಂತೆ ಗುರುಸ್ವಪ್ನಾಖ್ಯಾನದಿ | ಪ್ರಜ್ಞೆಯ ನಿರಿಸೋ 6 ಸಾವಿರ ಮುಖದಲಿ | ಭುವಿಧರಭಿಧ ಗುರುಗೋವಿಂದ ವಿಠಲನ | ಸೇವಿಪೆ ಭಕುತಿಲಿ 7
--------------
ಗುರುಗೋವಿಂದವಿಠಲರು
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
ಹಾರವ ಕಟ್ಟಿ ಕೊಡುವೆ ಲಕ್ಷ್ಮೀ ವರ ಭಕುತಿಯ ಪ. ಮಾರಮಣನಿಗೆ ಹಾರ ಹಾಕಿ ತೋರಿಪೆ ಪಥವೆಂದು ಅ.ಪ. ರಾಮ ಅಮೃತವೆಂಬ ನೇಮದ ಗಂಗೆಯ ಕಾಮಿಸಿ ತಂದು ನಿರಾಮಯ ಕೃಷ್ಣಗೆಂದು ಪ್ರೇಮದ ನಾರನು ಕಾಮಿತ ಪುಷ್ಪ ಮಂದಾರ ಮಲ್ಲಿಗೆಯನು ಸ್ವಾಮಿಗೆ ಸಲಿಸೆಂದು 1 ಅಗಣಿತ ಮಹಿಮಗೆ ಸೊಗವಿನ ತುಳಸಿಯ ಚಿಗರಿನ ಹಾರವ ಜಗಿದಾನಂದದಿ ಸೊಗಸಿನ ರೋಜವ ಬಗೆಬಗೆ ಭೋಗಗ ಳೊಗೆದುಗೆಂಡಸಂಪಿಗೆ ಚಿಗಿಚಿಗಿದಾಡುತ 2 ಯುಕ್ತಿಯ ಮರುಗ ಶಕ್ತಿ ಸ್ವರೂಪಳೆ ಭಕ್ತ ವತ್ಸಲನಿಗೆ ಇತ್ತಪೆ ನಾನೀಗ ಸ್ತುತ್ಯ ಶ್ರೀ ಶ್ರೀನಿವಾಸ ದೇವಕ್ಕಳಿಂ ನೀನೆಂದು 3
--------------
ಸರಸ್ವತಿ ಬಾಯಿ
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1 ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ 2 ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3 ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ 4 ಶುಕ ಜನಕ ಸನಕಾದಿಗಳೇನೊ | ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ 5 ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6 ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ 7 ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8 ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ9 ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ 10 ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು11
--------------
ವಿಜಯದಾಸ
ಹಿಡಿ ಮನವೇ ಸಂತರ ಸಂಗ ಪ ಹಿಡಿಮನವೇ ಸಂತರ ಸಂಗಾ | ಭವ ಭಯ ಭಂಗಾ | ಅಡಿಗಳಗೆರಗುತ ಸಾಷ್ಟಾಂಗಾ | ಪಡಕೋ ಚಿತ್ಸುಖದಂಗಾ 1 ಸಿಕ್ಕಿದು ಭಾಗವತರಣ | ಶರಣಾ | ಸಿಕ್ಕಲು ದಕ್ಕಿಸಿಕೋ ಕರುಣಾ | ಉಕ್ಕಲು ಜ್ಞಾನದಾ ನಿಜ ಸ್ಪರಣಾ | 2 ಗುಕ್ಕದವನೇ ತಾ ಹರಿಶರಣಾ | ಶರಣೆಂಬುದು ಸು¯ಭವಲ್ಲಾ | ಹರಿಮಯ ಕಾಂಬನು ಜಗವೆಲ್ಲಾ | ನೆರೆ ಹಮ್ಮ ಮಾತುಗಳುಳದಿಲ್ಳಾ | ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ 3 ಎಲ್ಲರ ಮನದಂತಾನಾಗಿ | ನಿಲ್ಲುವ ಜನದೊಳು ನಿಜಯೋಗಿ | ಫುಲ್ಲನಾಭನ ಭಕುತಿಲಿ ಮುಣುಗಿ | ಬಲ್ಲವಿಕೆಯ ದೋರನು ಬಾಗೇ 4 ಏನೋ ಜ್ಞಾನಿಗಳಾನಂದಾ | ತಾನೇ ಬಲ್ಲನು ಶ್ರೀ ಗೋವಿಂದಾ | ಖೂನಕ ಸಾರಿದ ನುಡಿವಂದಾ | ಸ್ವಾನುಭವದೀ ಮಹಿಪತಿ ಕಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಡುಕತಲಿಹೆನವನಾ ಮಾಧವನಾ ಪ ಹಿಡಿಯುತ ಭಕುತಿಯ ಸೊಡರನು ಕರದೊಳುಕಡುಗತ್ತಲೆಯೊಳು ಕಡೆಗಾಣದೆನಾ 1 ಸಿದ್ಧವೇದದೊಳು ಕದ್ದಡಗಿದನಾಬುದ್ಧಿಯ ತಟ ಗಡ ನೆದ್ದಿ ಕದಡಿನಾ 2 ಜಗ ತುಂಬಿಹನೆಂದು ನಿಗಮವು ಸಾರಲುಜಗದೊಳಗೆಲ್ಲಾ ಖಗವಾಹನನ 3 ಜ್ಞಾನಿಗಳಿಗೆ ತಾ ಕಾಂಬನು ಎಂಬರುಧೇನಿಸುತಲಿ ಸಾಮಾನ್ಯನಲ್ಲನ 4 ಎದೆಯ ಮರೆಯಲಿ ಹುದುಗಿ ಮೆರೆವನಾಗದುಗಿನ ವೀರನಾರಾಯಣನನ್ನ 5
--------------
ವೀರನಾರಾಯಣ
ಹೂ ಬೇಕೆ ಹೂವು ಪರಿಮಳದ ಹೂವು ಪ ಪರಮ ಪುರುಷ ನಮ್ಮ ಕೃಷ್ಣನ ತೋಟದ ಅ.ಪ ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ ಎಲ್ಲ ವಿಧದ ಮನಕ್ಲೇಶವ ಕಳೆಯಲು ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ 1 ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ ಕೇರಿ ಕೇರಿಗಳಲ್ಲಿ ಮಾರುವುದಲ್ಲ ಭೂರಿಭಕುತಿ ಎಂಬ ಭಾರಿಯ ಬೆಲೆಗಿದ ಮಾರೆಂದು ಪೇಳಿದ ಶೌರಿಯ ಸೊಬಗಿನ2 ರಂಗು ರಂಗುಗಳಿಂದ ಕಂಗೊಳಸುವ ಸ್ವಚ್ಛ ಬಂಗಾರದ ಛವಿ ಹಂಗಿಸುವ ಸಿಂಧು ಪ್ರಸನ್ನ ಶ್ರೀ ಮಾಧವ ನಂಘ್ರಿಯ ಸಂಗದಿ ಮಂಗಳಕರವಾದ 3
--------------
ವಿದ್ಯಾಪ್ರಸನ್ನತೀರ್ಥರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು ಪ ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ ತಿಳಿಸಿದೆನು ತತ್ವಗಳು ನಿರುತ ಬಿಡದೆ ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ- ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ 1 ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲಿ ಎನ್ನಮ್ಯಾಲೆ ಇನ್ನು ಮಾಡಲಿಲ್ಲ ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ 2 ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು | ಅಕಟಕಟ ಭೂಮಿಯೊಳು ಬದುಕುವದೂ | ಸಿರಿ ವಿಜಯವಿಠ್ಠಲ ನಿನ್ನ ಭಕುತಿಗೆ ಮೆಚ್ಚಿ ತಡಮಾಡದಲೆ ಕರದೊಯ್ದು 3
--------------
ವಿಜಯದಾಸ
ಹೌರನೆ ಮತಿಯಿತ್ತು ಸಲಬೇಕೆನ್ನ ಪ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ. ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಅಗಣಿತ ಗುಣಮಣಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ 1 ಅವನಿಯೋಳ್ ಕೈಲಾಸ ವಾಸ ಅಪ್ರತಿ ನವ ವಿಧ ಭಕುತಿ ಕೊಡು ಶಂಭು ಪಶುಪತಿ ದಿವಸ ದಿವಸ ವೈಶ್ರವಣ ಬಾಂಧವ ದೇ ಹವೆ ನಿನಗೊಪ್ಪಿತು ಅವನಿಯೊಳುತ್ತಮ ಶ್ರವಣದೊಳಗೆ ರಾಘವನ ಕಥಾಮೃತ ಸವಿದೋರುವುದೋ ಭುವನ ಪವಿತ್ರ 2 ಅಜಭೃಕುಟ ಸಂಭೂತ ಭೂತಗಣೇಶ ಕುಂಡಲ ವಿಭೂತಿ ಭೂಪ ನಿಜ ಮಹಾ ಸ್ಮಶಾನವಾಸ ಉಗ್ರೇಶ ತ್ರಿಜಗಪಾವನ ಗಂಗಾಧರ ವಿಶ್ವೇಶ ಸುಜನರ ಹೃದಯ ಪಂಕಜದೊಳ್ ಮಿನುಗುವ ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ ಭಜನೆಯ ಕೊಡು ಭೂಭುಜ ದೇವೋತ್ತಮ ಗಜ ಅಜಿನಾಂಬರ 3
--------------
ವಿಜಯದಾಸ
ಹ್ಯಾಂಗೆ ಉದ್ದರಿಸುವಿ ಎನ್ನ ಕೃಷ್ಣ ಕರುಣ ಸಂಪನ್ನ ಪ ಹೋಗಿ ಹೊಗಿ ವಿಷಯ ಕೂಪದಲ್ಬೀಳ್ವವನಾಅ.ಪ. ದಾಸನು ಎಂದೆನಿಸಿ ಮೆರೆವೆ ಮನದೀ ಲೇಶಾ ಭಕುತಿಯನಾನೊಂದರಿಯೇ ವೇಷಹಾಕಿದೆ ಧನಕೆ ಬರಿದೇ ಆಶೆ ಇಟ್ಟು ಭವದಿ ವಂಚಕನೆನಿಸಿದವನಾ1 ಮಂದಿ ಜನರ ಮುಂದೆ ವೈರಾಗ್ಯನಟನೆ ಮಂದಿರದೊಳು ಬಹು ಕಾಮದ ಭಜನೆ ಬಂಧು ಬಳಗ ಕೂಡೆ ಬಹಳ ಭಕ್ತಿ ಇಂದಿರೇಶನ ಧ್ಯಾನ ದೋಳ್ವಿರಕ್ತಿ2 ಗುರುಹಿರಿಯರ ಜರಿವೊದೆ ಜಪವು ದುರುಳರ ಸಂಗ ದೋಳ್ಮೆರೆವೋದೆ ವ್ರತವು ಪರಿಸರನ ಶಾಸ್ತ್ರದೋಳ್ಮೌನ ನರನಾರಿ ಸ್ತವ ದೋಳ್ಧ್ಯಾನ 3 ವೇದ ಓದಿದೆ ನಾನು ಆದರೇನು ಮೋದತೀರ್ಥರ ಮರ್ಮ ಸಿಗಲಿಲ್ಲವು ಇನ್ನು ವಾದಕ್ಕನುಕೂಲ ವಾಯ್ತದು ಅಷ್ಟೆ ಖೇದ ತೊಲಗದೆ ಮನದಿ ಬಹುಕಷ್ಟಪಟ್ಟೇ 4 ಭುಕ್ತಿ ಪಡೆಯೆ ಕಾಲಕಳೆದೆನಲ್ಲಾ ಯುಕ್ತಿಯಿಂದಲಿ ನೀನು ಒಲಿವೋನು ಅಲ್ಲಾ ಭಕ್ತ ಜನರ ಸಂಗ ನಾ ಪಿಡಿಯಲಿಲ್ಲ ಮುಕ್ತಿಗಾಗುವ ಭಾಗ್ಯ ಎನ್ನಲಿಲ್ಲವಲ್ಲಾ 5 ಸ್ವೋತ್ತುಮರ ನೋಡೆ ಮಾತ್ಯರ್ಯ ಎನಗೇ ವಾತ್ಯಲ್ಯ ತೋರೆನು ಸ್ಧಾವರ ಜನಕೇ ಕುತ್ಸಿತ ಪಾವಡ ಬೀರುವೆ ಜಗಕೆ ತಾತ್ಸಾರ ತೋರುವೆ ಭಕ್ತರ ಗುಣದೀ6 ಈಷಣ ತ್ರಯಗಳ ಬಿಡಲಿಲ್ಲ ಲೇಶಾ ಭಾಷಣದಿ ತೋರ್ಪೆಜ್ಞಾನ ಪ್ರಕಾಶ ಈಶ ನೀನೊಬ್ಬನೆ ಸರಿಯೆಂಬೆ ಹರಿಯೆ ದಾಸನಾಗಿ ಬಾಳ್ವೆ ಬಹು ನೀಚ ಜನಕೆ 7 ನಾನು ನಾನೆಂಬುದು ತುಂಬಿದೆ ಮನದಿ ನೀನು ನಿನ್ನಾಧೀನ ವೆಂತ್ಹೇಳಿ ದೃಢದಿ ಜ್ಞಾನವಿದ್ದರು ಇಲ್ಲ ಎನಚರ್ಯೆ ನೋಡೆ ಮಾನಿನಿಯರ ಬೊಂಬೆ ಗುಣಗಣನೆ ಮಾಡೆ 8 ಮೂರೊಂದು ಹರಿತ್ಯಾಗ ತೊರೆಯಲಿಲ್ಲ ವೈರಿ ಆರರ ಬೇರು ನಾಕೀಳಲಿಲ್ಲ ವೀರ ವೈಷ್ಣವನಾಗಿ ಬಾಳಲಿಲ್ಲಾವಲ್ಲ ಗಾರು ಮನ್ನಿಸದಿರೆ ಗತಿಯೊಬ್ಬರಿಲ್ಲಾ 9 ವ್ರತನೇಮ ಉಪವಾಸ ಸಾಧನೆಯಿಲ್ಲ ರತಿಯಿಂದ ಸಲಹೆಂದು ನಾಕೂಗಲಿಲ್ಲ ಮತಿ ಮತದಿ ಪುಟ್ಟಿದರು ಫಲವಾಗಲಿಲ್ಲ ಗತಿ ನೀನೆ ಕೈ ಪಿಡಿಯೊ ಕೇಳುತ ಸೊಲ್ಲ 10 ಡಂಭಕ ತನದಿಂದ ಬಹುಕಾಲ ಕಳೆದೇ ತುಂಬಿ ಭಕ್ತಿಯ ಬೇಗ ನೀ ಕಾಯೋಮುಂದೆ ಜಂಭಾರಿ ಜಯತೀರ್ಥ ವಾಯ್ವಾಂತರ್ಗತನಾದ ಕಂಬುಕಂಧರಧಾರಿ “ಶ್ರೀ ಕೃಷ್ಣವಿಠಲ” 11
--------------
ಕೃಷ್ಣವಿಠಲದಾಸರು
130-1ದ್ವಿತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪದ್ವಿತೀಯಾಶ್ರಮವನ್ನು ಯುಕ್ತ ಕಾಲದಿ ಕೊಂಡುಸದ್ಧರ್ಮ ಆಚರಿಸಿ ಗೃಹಕೃತ್ಯದಲ್ಲಿಇದ್ದರು ಜಯತೀರ್ಥ ಆಚಾರ್ಯ ಆದರುಸದಾ ಹರಿಯಲ್ಲೇ ಧಾವಿಸಿತು ಮನಸ್ಸು 1ಕ್ಷೀರಫೇಣವೊಲ್ ತೂಲಿಕ ಹಂಸ ತಲ್ಪವುಶುಭ್ರ ಕನ್ನಡಿ ಚಿತ್ರಾಲಂಕಾರಗಳುಕೊರತೆ ಏನೂ ಇಲ್ಲ ಐಹಿಕ ಸಂಪತ್ತಿಗೆಸ್ಪುರದ್ರೂಪಿಣಿಸತಿಸುಶೀಲೆ ಸುಗುಣೆ2ಪ್ರಾರಬ್ಧ ಕರ್ಮನಿಮಿತ್ತ ಶ್ರೀಹರಿಯೇವೆಪರಿಪರಿಭೋಗಗಳ ಒದಗಿಸಿದ್ದೆಲ್ಲಹರಿಗೆ ಅರ್ಪಿಸುತ ಅನುಭವಿಸುತಿರಲಾಗಹೊರಗಿಂದ ಓರ್ವನು ಹಾಡಿದನು ನುಡಿಯ 3ಮಂಚಬಾರದು ಮಡದಿಬಾರಳು ಕುಂಚುಕನ್ನಡಿ ಬಾರದುಸಂಚಿತಾರ್ಥವು ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವಕಂಚಿನ ಗಂಟೆ ಧ್ವನಿ ಅಂದದಿ ಈ ನುಡಿಕೇಳಿಮಂಚದಿಂದಿಳಿದರು ಕುಳಿತರು ಚಿಂತೆಯಲಿ 4ಅಕಳಂಕ ಗುಣನಿಧಿ ನಾರಾಯಣ ಮಾಯೇಶಸಂಕರುಷಣ ಪ್ರದ್ಯುಮ್ನ ಅನಿರುದ್ಧಶ್ರೀಕರಾರ್ಚಿತ ಪಂಚರೂಪನ ಪ್ರೇರಣೆಯೆಂದುಮಾಕಳತ್ರನ ಸ್ಮರಿಸಿ ಹೊರಟರು ಹೊರಗೆ 5ಲೌಕಿಕ ವಿಷಯ ವಿಜೃಂಭಣಾಡಂಬರವಲೆಕ್ಕಿಸದೆ ವೈರಾಗ್ಯ ಮನಪಕ್ವದಿಭಕುತಿ ಉನ್ನಾಹದಿ ಅವಧೂತಚರ್ಯದಿಶ್ರೀಕರ ನಾರಾಯಣನ ಸೇವಿಸಿದರು 6ತೀರ್ಥಕ್ಷೇತ್ರಾಟನ ಮಾಡಲಿಕೆ ಹೊರಟರುಹಾದಿಯಲಿ ಸರ್ಪವು ಅಡ್ಡ ಬರಲುವೇದ್ಯವಾಯಿತು ಜಯತೀರ್ಥ ಮುನಿಗಳು ತಾವೇಬಂದು ತಡೆದರು ಸರ್ಪರೂಪದಲಿಯೆಂದು 7ಈ ಪುಣ್ಯ ಶ್ಲೋಕರು ಜಯತೀರ್ಥವಿಪ್ರಸರ್ಪರೂಪಶೇಷದೇವರ ಜಯಮುನಿಗಳಅಭಿಪ್ರಾಯವನ್ನರಿತು ಶಾಸ್ತ್ರಪ್ರವಚನಶಿಷ್ಯೋಪದೇಶದಿ ಹರಿಯ ಸೇವಿಸಿದರು 8ಮಲಾಪಹಾರಿಣಿ ತೀರಸ್ಥ ಮುನವಳ್ಳಿಶೀಲತಮ ಅಡವಿ ಪ್ರದೇಶ ಗ್ರಾಮದಲಿಕುಳಿತು ಶಿಷ್ಯರಿಗೆ ಸುಧಾದಿಗಳ ಪೇಳಿದರುಪೊಗಳ ಬಲ್ಲೆನೆ ಇವರ ಮಹಿಮೆಸಾಕಲ್ಯ9ಸುಮಧ್ವವಿಜಯ ಪಾರಾಯಣ ಮಾಡುತ್ತಕಲ್ಮಷ ಕಿಲುಬು ಹತ್ತಿದ ಪಾತ್ರೆಯನ್ನಕಲ್ಮಷ ಕಿಲಬನ್ನ ತ್ವರಿತದಿ ನೀಗಿಸಿಹೇಮಮಯ ಮಾಡಿದರು ಜನರು ಕಂಡಿಹರು 10ಹನ್ನೆರಡುಬಾರಿಸುಧಾದಿಗಳ ಪ್ರವಚನ ಮಾಡಿವಿನಯ ಸಂಪನ್ನಶ್ರದ್ಧಾಳು ಶಿಷ್ಯರಿಗೆಹನ್ನೆರಡಾವರ್ತಿ ಸುಧಾ ತತ್ವ ಪ್ರಕಾಶಿಕ ಪೇಳಿಘನಮಹಿಮ ಟಿಪ್ಪಣಿ ಮಾಡಿಹರು ಎರಡಕ್ಕೂ11ಭುಜಗಶಾಯಿ ಕ್ಷೀರಾಬ್ಧಿವಾಸನ ಪ್ರೀತಿಗೂಸುಜನಅಧಿಕಾರಿಗಳ ಉದ್ಧಾರಕ್ಕುರಚಿಸಿ ಗ್ರಂಥಗಳನ್ನ ಕೃತಕೃತ್ಯ ಮನದಲ್ಲಿರಾಜರಾಜೇಶ್ವರಿ ಶ್ರೀ ಹರಿಗರ್ಪಿಸಿದರು 12ಸತ್ಯಸಂಧಾರ್ಯರ ಹಸ್ತಪದ್ಮೋತ್ಪನ್ನಸತ್ಯವರ ತೀರ್ಥರ ಕರಕಂಜದಿಂದಜಯತೀರ್ಥಾಚಾರ್ಯರು ಕೊಂಡರು ತುರ್ಯಾಶ್ರಮತೋಯಜಾಕ್ಷಶ್ರೀ ವಿಷ್ಣುತೀರ್ಥ ನಾಮದಲಿ13ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ನಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 14 ಪ
--------------
ಪ್ರಸನ್ನ ಶ್ರೀನಿವಾಸದಾಸರು
139-6ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಸ್ವರ್ಣಪುರಿಯಲಿ ಜಗತ್ ಪ್ರಖ್ಯಾತ ಸ್ವಾಮಿಗಳುಘನಮಹಿಮ ಸೂರಿವರ ಸತ್ಯಬೋಧಾರ್ಯರಸನ್ನಮಿಸಿ ಈ ಮಹಾಮೂರ್ತಿಗಳಾಹ್ವಾನದಿದಿನ ಕೆಲವು ನಿಂತರು ಜಗನ್ನಾಥ ಆರ್ಯ 1ಮೂರ್ಜಗವು ಅರಿವುದು ಸತ್ಯ ಬೋಧರ ಮಹಿಮೆವಾಜಿಮುಖ ಕೋಡ ನೃಹರಿ ರಾಮಪ್ರಿಯರುಪ್ರಜ್ವಲಿಪ ಸೂರ್ಯನ್ನ ರಾತ್ರಿಯಲಿ ತೋರಿಹರುಭಜಕರಸುರಧೇನುನಿವ್ರ್ಯಾಜ ಕರುಣೆ2ಶಿಷ್ಯರ ಸಹ ಜಗನ್ನಾಥದಾಸರು ತಮ್ಮನಿಯಮಗಳ ತಪ್ಪದೇ ಭಾಗವತಧರ್ಮಕಾಯವಾಙ್ಮನ ಶುದ್ಧಿಯಲಿ ಜ್ಞಾನ ಭಕ್ತಿಸಂಯುತದಿ ಮಾಳ್ಪುದು ಕಂಡರು ಮುನಿಗಳು 3ಹರಿದಾಸವರ ಜಗನ್ನಾಥದಾಸಾರ್ಯರಲಿಹರಿಯ ಒಲಿಮೆ ಅಪರೋಕ್ಷದ ಮಹಿಮೆನೇರಲ್ಲಿ ತಾ ಕಂಡು ಬಹುಪ್ರೀತಿ ಮಾಡಿದರುಹರಿಪ್ರಸಾದದ ಸವಿಯ ಅರಿತ ಆ ಗುರುಗಳು 4ಸ್ವರ್ಣಪುರಿಯಿಂದ ಜಗನ್ನಾಥದಾಸಾರ್ಯರುದಿಗ್ವಿಜಯದಿಂದಲಿ ಶಿಷ್ಯ ಜನಗುಂಪುಸೇವಕರ ಸಹ ಊರು ಊರಿಗೆ ಪೋದರುಆ ಎಲ್ಲ ಕ್ಷೇತ್ರದಲು ಧರ್ಮ ಪ್ರಚಾರ 5ಧರ್ಮ ಪ್ರಚಾರ ಹರಿಭಜನೆ ಪೂಜಾದಿಗಳುನಮಿಸಿ ಬೇಡುವವರ ಅನಿಷ್ಟ ಪರಿಹಾರಕರ್ಮಜ ದಾರಿದ್ರ್ಯಾದಿಗಳ ಕಳೆದು ಸಂಪದವಧರ್ಮ ಆಚರಣೆ ಬುದ್ಧಿಯ ಒದಗಿಸಿದರು 6ಸುರಪುರಾದಿ ಬಹು ಸ್ಥಳದಲ್ಲಿ ಪ್ರಮುಖರುಹರಿಭಕ್ತರು ಮಂಡಲೇಶ್ವರರು ಇವರಚರಣಕೆರಗಿ ಬಹು ಅನುಕೂಲ ಕೊಂಡರುಹರಿವಾಯು ಒಲಿಮೆ ಎಷ್ಟೆಂಬೆ ದಾಸರಲಿ 7ವರಪ್ರದ ವರದಾ ತೀರದಲಿ ಸಶಿಷ್ಯಧೀರೇಂದ್ರ ಯತಿವರ್ಯರ ಕಂಡು ನಮಿಸಿಆ ರಿತ್ತಿ ಕ್ಷೇತ್ರದಲಿ ವಾಸಮಾಡಿಹರುಧೀರೇಂದ್ರ ತೀರ್ಥರ ಅನುಗ್ರಹ ಕೊಂಡು 8ಸೂರಿಕುಲ ತಿಲಕರು ಉದ್ದಾಮ ಪಂಡಿತರುಧೀರೇಂದ್ರ ಗುರುಗಳು ಕಾರುಣ್ಯಶರಧಿಊರೊಳಗೆ ಹನುಮನ ಗುಡಿ ಇಹುದು ಪಾಶ್ರ್ವದಿಇರುವ ರಸ್ತೆಯ ಮೇಲೆ ದಾಸರ ಮನೆಯು 9ಸೋದಾಪುರ ಪೋಗೆ ತ್ರಿವಿಕ್ರಮ ದೇವರಮಂದಿರದ ಧ್ವಜಸ್ತಂಭದಲ್ಲಿವಾದಿರಾಜರು ಹಂಸಾರೂಢರಾಗಿರುವವರ್ಗೆವಂದಿಸಿ ತ್ರಿವಿಕ್ರಮರಾಯಗೆ ನಮಿಸಿದರು 10ಬದರಿಯಿಂದಲಿ ಈ ಸರಥ ತ್ರಿವಿಕ್ರಮನಭೂತರಾಜರ ಕೈಯಿಂದೆತ್ತಿ ತರಿಸಿಸೋದಾಪುರದಲ್ಲಿ ಪ್ರತಿಷ್ಠೆ ಮಾಡಿಹರುವಾದಿರಾಜರು ಭಾವಿಸಮೀರ ಲಾತವ್ಯ 11ಜಗನ್ನಾಥದಾಸರು ತ್ರಿವಿಕ್ರಮಗೆ ವಂದಿಸಿಅಗಾಧ ಸುಪವಿತ್ರೆ ಧವಳಗಂಗಾಸ್ನಾನಭಕುತಿಯಿಂ ಮಾಡಿ ಶಿವಹನುಮ ಕೃಷ್ಣರಿಗೆಬಾಗಿ ಅಶ್ವತ್ಥಸ್ಥರಿಗೆ ನಮಿಸಿದರು 12ಬಯಲಲ್ಲಿ ವೃಂದಾವನಗಳಲಿ ಗುರುಗಳಿಗೆವಿನಯದಿ ವಂದಿಸಿ ಭೂತನಾಥಗೆ ಬಾಗಿಶ್ರೀವ್ಯಾಸ ದೇವನಿಗೆ ಸನ್ನಮಿಸಿ ವೇದವೇದ್ಯರಿಗು ವಾದಿರಾಜರಿಗು ನಮಿಸಿದರು 13ಚತುದ್ರ್ವಾರ ಗೃಹದಲ್ಲಿ ಪಂಚವೃಂದಾವನವುಮಧ್ಯ ವೃಂದಾವನದಿ ಶ್ರೀವಾದಿರಾಜರುವೃಂದಾವನ ಮಹಿಮೆ ಚೆನ್ನಾಗಿ ತಿಳಿಯದಕೆಭಕ್ತಿ ಶ್ರದ್ಧೆಯಲಿ ನೋಡಿ ವೃಂದಾವನಾಖ್ಯಾನ 14ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರುಪುರುಷೋತ್ತಮ ಬ್ರಹ್ಮಣ್ಯರ ವಂದಿಸಿಶ್ರೀರಂಗನಾಥನಿಗೆ ಎರಗಿ ಮಹಿಷೂರುಗರಳುಂಡ ಈಶ್ವರನ ಕ್ಷೇತ್ರಕ್ಕೆ ಪೋದರು 15ಕೇಶವನ ಪೂಜಿಸುತ ಪರ್ವತ ಗುಹೆಯಲ್ಲಿವಾಸಮಾಡುವ ಮಹಾ ಕರುಣಾಂಬುನಿಧಿಯುದಾಸಜನಪ್ರಿಯ ಶ್ರೀ ಪುರುಷೋತ್ತಮರಂಘ್ರಿಬಿ¸ಜಯುಗಳದಿ ನಾ ಶರಣು ಶರಣಾದೆ 16ಮಹಿಷೂರು ರಾಜ್ಯದ ಸರ್ಕಾರಿನಲ್ಲಿಮಹೋನ್ನತ ಸ್ಥಾನ ವಹಿಸಿದಧಿಕಾರಿಮಹಾಪಂಡಿತರುಗಳ ಸಭೆಯನ್ನು ಕೂಡಿಸಿವಿಹಿತದಿ ದಾಸರ ಪೂಜೆ ಮಾಡಿದನು 18ನಿರ್ಭಯದಿ ದಾಸರು ಘನತತ್ವ ವಿಷಯಗಳಸಭ್ಯರಿಗೆ ತಿಳಿಯದಿದ್ದವು ಸಹ ವಿವರಿಸಿದಸೊಬಗನ್ನು ಕಂಡು ವಿಸ್ಮಿತರು ಆದರು ಆಸಭೆಯಲ್ಲಿ ಕುಳಿತಿದ್ದ ದೊಡ್ಡ ಪಂಡಿತರು 19ಭಾಗವತಧರ್ಮದ ಪದ್ಧತಿ ಅನುಸರಿಸಿಭಗವಂತನ ಭಜನೆ ಸಭ್ಯರ ಮುಂದೆಆಗ ದಾಸರ ಅಪರೋಕ್ಷದ ಮಹಿಮೆರಂಗನೇ ಸಭ್ಯರಿಗೆ ತೋರಿಸಿಹನು 20ದಾಸರು ಶಿಷ್ಯರೊಡೆ ಯಾತ್ರೆ ಮಾಡಿದ್ದುಮೈಸೂರು, ಕೊಂಗು, ಕೇರಳ, ಚೋಳ, ಪಾಂಡ್ಯದೇಶಗಳು ಎಲ್ಲೆಲ್ಲೂ ಮರ್ಯಾದೆ ಸ್ವೀಕರಿಸಿಈಶಾರ್ಪಣೆ ಸರ್ವ ವೈಭವವೆನ್ನುವರು 21ಶ್ರೀಪಾದರಾಜರ ನಮಿಸಿ ವೆಂಕಟಗಿರಿಸುಪವಿತ್ರ ಘಟಿಕಾದ್ರಿ ಶ್ರೀಕಂಚಿಉಡುಪಿಶ್ರೀಪನ ಇಂಥಾ ಕ್ಷೇತ್ರಗಳಿಗೆ ಪೋಗಿಸ್ವಪುರಕ್ಕೆ ತಿರುಗಿದರು ಪೂಜ್ಯ ದಾಸಾರ್ಯ 22ಶ್ರೀಪಾದರಾಜರು ಪವಿತ್ರ ವೃಂದಾವನದಿಶ್ರೀಪತಿ ನರಹರಿ ಶಿಂಶುಮಾರನ್ನರೂಪಗುಣ ಕ್ರಿಯಾಮಹಿಮೆ ಧ್ಯಾನಿಸುತ ಇಹರುತಿರುಪತಿಮಾರ್ಗನರಸಿಂಹ ತೀರ್ಥದಲಿ23ಪುರುಷೋತ್ತಮರ ಸುತ ಬ್ರಹ್ಮಣ್ಯರ ಕುವರಶ್ರೀಕೃಷ್ಣ ಪ್ರಿಯತರ ವ್ಯಾಸಯತಿರಾಜಸೂರಿಕುಲ ಶಿರೋರತ್ನ ಶ್ರೀಪಾದರಾಜರಲಿಭಾರಿವಿದ್ಯೆಕಲಿತು ಪ್ರಖ್ಯಾತರಾದರು24ಹರಿರೂಪ ಗುಣಕ್ರಿಯ ಮಹಿಮೆಗಳ ಚೆನ್ನಾಗಿಪರಿಪರಿ ಸುಸ್ವರ ರಾಗದಲಿ ಕೀರ್ತನೆಸಂರಚಿಸಿ ಪಂಡಿತರು ಪಾಮರರು ಸರ್ವರಿಗುವರಸಾಧು ತತ್ವ ಬೋಧಿಸಿಹರು ದಾಸರು25ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಇತಿ ಸಪ್ತಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
139-7ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹಂಸನಾಮಕ ಪರಂಬ್ರಹ್ಮ ವಿಧಿಸನಕಾದಿವಂಶಜ ಗುರುಗಳಲಿ ಜಗದೇಕ ಗುರುವುದಶಪ್ರಮತಿ ಈ ಮಧ್ವ ಮುನಿಯ ಪೀಳಿಗೆ ಜಾತವ್ಯಾಸಮುನಿ ಯೋಗಿವರ್ಯರಿಗೆ ಆ ನಮಿಪೆ 1ವ್ಯಾಸರಾಯರ ಮುಖ ಕಮಲದಿಂದುಪದೇಶದಾಸತ್ವ ಹೊಂದಿದರು ಪುರಂದರದಾಸಾರ್ಯದಾಸಶ್ರೇಷ್ಠರು ದಯಾನಿಧಿಯು ಈಪುರಂದರದಾಸಾರ್ಯರೇ ನಾರದರ ಅವತಾರ 2ಪುರಂದರಾರ್ಯರಹಸ್ತಕಂಜಸಂಜಾತರುಧೀರ ಭೃಗು ಅವತಾರ ವಿಜಯದಾಸಾರ್ಯಹರಿದಾಸವರ ವಿಜಯದಾಸರ ಶಿಷ್ಯರುಸೂರಿಸುರವರ್ಯ ಗೋಪಾಲ ದಾಸಾರ್ಯ 3ವಿಶ್ವೋಪಾಸಕರು ವರಗಣೇಶಾಂಶರುಈಶಾನುಗ್ರಹಿ ಗೋಪಾಲ ದಾಸಾರ್ಯಬೇಸರವಿಲ್ಲದೆ ಸ್ಮರಿಪ ಸಜ್ಜನರ ಪಾಲಿಪರುದಾಸತ್ವ ಜಗನ್ನಾಥದಾಸರಿಗಿತ್ತವರು 4ಸೂರಿಕುಲತಿಲಕನು ಜಗನ್ನಾಥ ದಾಸಾರ್ಯಈರೆರಡು ಮುಖ್ಯ ಜನ್ಮವಕೊಂಡಹಿಂದೆಗುರುಯುಕ್ ಪುರಂದರಾರ್ಯರವತ್ಸಗುರುರಾಯ ಸೇವಾರತಮದ್ರದೇಶಾಧಿಪ ಈ ರೀತಿ ಮೂರು 5ಮಾರೀಚ ದಿತಿ ಪೌತ್ರ ಮೊದಲನೆಯದಲ್ಲಿಧೀರ ಪ್ರಹ್ಲಾದನಿಗೆ ಭ್ರಾತ ಸಂಹ್ಲಾದಹರಿಅಧೋಕ್ಷಜನ್ನೊಲಿಸಿ ಕೊಂಬ ಮಾರ್ಗವ ಅರಿತನಾರದಾನುಗ್ರಹಿಯು ಉಪದೇಶಕೇಳಿ6ಹರಿಯ ಸೇವಿಸುವುದಕೆ ಶಿಷ್ಯರುದ್ಧಾರಕ್ಕೆಪ್ರಾರಬ್ಧ ಕರ್ಮವು ತೇದು ಹೋಗಲಿಕೆಧರೆಯಲ್ಲಿ ಪುನರ್ಜನ್ಮ ಕೊಂಡನು ಬ್ಯಾಗವಟ್ಟನರಸಿಂಹ ದಾಸರ ಮಗನೆನಿಸಿಕೊಂಡು 7ಸೂರಿಕುಲ ಶಿರೋಮಣಿ ವರದೇಂದ್ರ ಯತಿವರರುಶ್ರೀರಾಘವೇಂದ್ರರ ಸ್ಮರಿಪುದಿವರಲ್ಲಿಭಾರಿಪಂಡಿತ ಶ್ರೀನಿವಾಸ ಇವರಲ್ಲೋದಿಪೌರ ವಿದ್ಯಾರ್ಥಿಗಳಿಗೆ ಪಾಠ ಪೇಳ್ದ 9ಗರುವಕೊಳಗಾಗಿ ಈ ಶ್ರೀನಿವಾಸಾಚಾರ್ಯಕರುಣಾಶಾಲಿಗಳು ವಿಜಯದಾಸರನ್ನಕ್ಷುದ್ರ ಮಾತುಗಳಾಡಿ ಸ್ವೋತ್ತಮಾಪರಾಧದಿಂಘೋರವ್ಯಾಧಿ ಕೊಂಡು ಕುಗ್ಗಿದನು ತೀವ್ರ 10ಪರಿಪರಿ ಔಷಧೋಪಚಾರಗಳು ಸೋತುಹರಿಗುರು ಕ್ಷೇತ್ರಾಟನ ಸೇವಾದಿಗಳುಹರಿವಾಯುಸ್ತುತಿಕ್ಷೀರಅಭಿಷೇಕಫಲದಿಂಅರಿತನು ಅಪರಾಧಕ್ಷಮೆಬೇಡೆ ಹೊರಟ11ತ್ವರಿತದಲಿ ವಿಜಯಾರ್ಯರಲ್ಲಿ ಶರಣಾಗಿಕರುಣದಿ ಕ್ಷಮಿಸಿ ಉದ್ಧರಿಸಬೇಕೆಂದಕರುಣಿಸಮ ಚಿತ್ತರು ಶರಣನಿಗೆ ಹೇಳಿದರುಗುರುಗಳು ಗೋಪಾಲದಾಸರ ಕಾಣೆಂದು 12ತನ್ನಲ್ಲಿ ಗುರುಗಳು ಕಳುಹಿಸಿ ಬಂದಿಹನುದೀನನು ನಿಜ ಶರಣಾಗಿಹನು ಎಂದುಘನಮೂಮಂತ್ರ ಸಹ ಧನ್ವಂತರಿ ಜಪಿಸಿಧನ್ವಂತರಿಗೆ ಬಿನ್ನೈಸಿದರು ದಾಸರು 13ವಿಜಯಗೋಪಾಲ ವೆಂಕಟ ಜಗನ್ನಾಥನ್ನಪೂಜಿಸಿ ನೈವೇದ್ಯಾನ್ನ ಜೋಳದರೊಟ್ಟಿಭುಜಿಪುದಕೆ ಕೊಡುತ ಹರಿಗುರುಗಳ ಸ್ಮರಿಸುನಿಜ ಭಕ್ತಾಯುಷ್ಪ್ರದ ಸತ್ಪತಿ ಎಂದು 14ದ್ರವ ಮಾತ್ರ ಕೊಂಬ ಆ ರೋಗಿ ತಿಂದನು ರೊಟ್ಟಿದ್ರಾವಿಕ ಆಯಿತು ರೋಗ ದಿನ ದಿನದಿದೈವಾನುಗ್ರಹವಾಯ್ತುಗುರುಅನುಗ್ರಹದಿಂದಶ್ರೀ ವೆಂಕಟ ಶೈಲಾಧಿಪನು ಒಲಿದ 15ರೋಗ ನಿವೃತ್ತ ಆಚಾರ್ಯ ದಾಸರ ಸಹಪೋಗಿ ವೆಂಕಟಗಿರಿಯಲ್ಲಿ ಶ್ರೀನಿಧಿಗೆಭಕುತಿಯಿಂ ಸನ್ನಮಿಸಿ ಮಲಗೆ ನಿತ್ರಾಣದಲಿಬೇಗ ಗಜವರದಹರಿಬಂದು ತಾ ಪೊರೆದ16ಶ್ರೀನಿಧಿಃ ಸರ್ವ ಭೂತಾನಾಂ ಭಯಕೃದ್ಭಯನಾಶನನು ವಿಜಯಾರ್ಯರ ರೂಪದಲಿ ಪೇಳೆದಾನ ಎರೆದರು ಗೋಪಾಲ ದಾಸಾರ್ಯರುತನ್ನ ಆಯುಷ್ಯದಲಿ ನಲವತ್ತು ವರ್ಷ 17ರೊಟ್ಟಿ ಕೊಟ್ಟಾಗಲೇಗುರುಪ್ರೇರಣೆಯಂತೆಕೊಟ್ಟಿದ್ದರು ಆಯುಷ್ಯ ಆಚಾರ್ಯಗೆದಿಟವಾಗಿ ಜಗಕೆ ತಿಳಿಸೆ ವೆಂಕಟ ಈಗಕೊಡಿಸಿದನು ಆಯುರ್ದಾನದ ಧಾರೆ 18ಘನ್ನ ಹರಿಗುರು ಭಕ್ತಿ ಶಿಷ್ಯ ವಾತ್ಸಲ್ಯವಏನೆಂಬೆ ನಮ್ಮಗುರುಗೋಪಾಲ ದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ನ ಆಯುಷ್ಯವ ಕೊಡುವರೆ ಅನ್ಯರಿಗೆ 19ಏನೆಂಬೆಅನಿಮಿತ್ತ ಬಂಧುವೆಂಕಟಪತಿಯದೀನ ದಯಾಳತ್ವ ಆಚಾರ್ಯನಿಗೆತಾನೇವೆ ಗೋಪಾಲದಾಸರ ರೂಪದಿತಂದುಅನ್ನ ಕೊಟ್ಟ ಆಯುಷ್ಯವ ಕೊಡಿಸಿದವ 20ಶ್ರೀನಿವಾಸಾಚಾರ್ಯ ಹರಿತನ್ನ ದಾಸರಿಗೆತಾನೆ ಬಂದೊಲಿವುದು ನೇರಲ್ಲಿ ಕಂಡುತನ್ನನ್ನು ಹರಿದಾಸರಲಿ ಓರ್ವ ಮಾಡೆಂದುವಿನಯದಿಂ ಗೋಪಾಲದಾಸರ ಬೇಡಿದನು 21ವಿಜಯಗೋಪಾಲನ್ನವಿಜಯದಾಸರ ಸ್ಮರಿಸಿನಿಜ ಶಿಷ್ಯಾಚಾರ್ಯನಿಗೆ ಉಪದೇಶಿಸಿದರುಅಜಪದಾರ್ಹನು ಮಧ್ವನಲ್ಲಿ ಜ್ವಲಿಸುವಶ್ರೀತಶ್ರೀ ಜಗನ್ನಾಥ ಎಂದು ಧ್ಯಾನಿಸು ಎಂದು 22ಪೋಗಿ ಪಂಢÀರಪುರ ಭೀಮರತಿಯಲ್ಲಿಸ್ವಗುರು ಆದಿ ಹನ್ನೆರಡು ಸ್ಮರಿಸುಬಾಗು ಮಧ್ವಾಂತಸ್ಥ ಹರಿಗೆಮಜ್ಜನಮಾಡುಜಗನ್ನಾಥ ಹರಿತೋರ್ವ ಪೊಳೆವ ಹರಿನಾಮ 23ಝಗಿ ಝಗಿಪ ತೇಜಸ್ಸು ಶಿರೋಪರಿ ಕಂಡನುಮೂಗಿನೊಂದೊಂದಡಿ ಶಿರದ ಮೇಲೆ&ಟಜquo;ಜಗನ್ನಾಥ ವಿಠಲ&ಡಿಜquo; ನಾಮ ಪ್ರಜ್ವಲಿಸಿತುಜಗನ್ನಾಥ ತನ್ನಿಚ್ಛೆಯಿಂದಲೇ ತೋರ್ದ 25ಜಡಜ ಭವಪಿತ ಡರಕ ಜಗನ್ನಾಥ ವಿಠಲನನೋಡಿದರು ಜಗನ್ನಾಥದಾಸ ಆಚಾರ್ಯಪೊಡವಿಗೊಡೆಯನುವಿಜಯಗೋಪಾಲ ಜಗನ್ನಾಥವಿಠ್ಠಲ ಪ್ರಸನ್ನನಾದನು ಶ್ರೀನಿವಾಸ 26ವೆಂಕಟಗಿರಿನಾಥ ಪಂಢರಿ ಜಗನ್ನಾಥಅಕಳಂಕ ಗುಣನಿಧಿ ವಿಠಲಪ್ರಸನ್ನನಾಗಿದಾಸರು ಮೂಲ ಮಂತ್ರಾದಿಗಳಿಂದಏಕಾಗ್ರ ಚಿತ್ತದಲಿ ಭಜಿಸಿ ಸ್ತುತಿಸಿದರು 27ಪುರಂದರದಾಸಾರ್ಯರ ವಂದಿಸಿ ಅವರಿಂದವಿರಚಿತ ಶ್ರೀಮಧ್ವ ರಮಣ ನಿನ್ನಭಾರಿತತ್ವವಕೊಂಡಕೀರ್ತನೆ ಹಾಡುತ್ತಶ್ರೀಕರ ವಿಠಲನ ಮಂದಿರದೊಳು ಪೊಕ್ಕರು 28ವಿಶ್ವವಿಷ್ಣು ವಷಟ್ಕಾರಾದಿ ನಾಮನುದಾಸಪ್ರಿಯಜನ ವಿಠ್ಠಲ ರುಕ್ಮಿಣಿಯಕೇಶವಾದಿಪಾದಾಂತ ಸಂಸ್ತುತಿಸಿ ನಮಿಸಿದರುದಾಸರು ಶರಣು ತಾನೆನ್ನುತ ಮುದದಿ 29ಏನೆಂಬೆ ವಿಠ್ಠಲನ ರುಕ್ಮಿಣಿಯ ವಾತ್ಸಲ್ಯಅನುಪಮ ಔತಣ ದಾಸರಿಗೆ ಮಾಡಿಅನುತ್ತಮ ಪ್ರಸಾದ ಮಾಲಾದಿಗಳ ಕೊಟ್ಟುಅನುಗ್ರಹಿಸಿ ಕಳಿಸಿದರು ದಾಸರ ಸ್ವಪುರಕೆ 30ಮಳಖೇಡ ಕೃಷ್ಣ ಮಂತ್ರಾಲಯಕೆ ಪೋಗಿಅಲ್ಲಿರುವಗುರುದೇವತಾ ನಮನ ಮಾಡಿಗೋಪಾಲದಾಸ ಉದ್ಧಾರಕರ ಬಳಿಬಂದುಕಾಲಿಗೆರಗಿದರು ಕೃತಕೃತ್ಯ ಭಾವದಲಿ 31ವಾಸುದೇವಗೆ ಪ್ರಿಯ ಐಜಿ ಮಹಾತ್ಮರುವ್ಯಾಸತತ್ವಜÕ ಹರಿದಾಸ ಯತಿವರರುಸಸೋದರ ಪರಿವಾರ ಗೋಪಾಲದಾಸಾರ್ಯರಬಿಸಜಾಂಘ್ರಿ ಸನ್ನಮಸಿ ಹೊರಟರಲ್ಲಿಂದ 32ಚೀಕಲ ಪರಿವಿಯಲಿ ಏಕಾತ್ಮ ನರಹರಿಯಅಕಳಂಕ ದೃಢಭಕ್ತಿಯಿಂದ ಪೂಜಿಸುವಆ ಕರುಣಿ ವಿಜಯದಾಸರ ಕಂಡು ನಮಿಸಿಚಿಕ್ಕಂದಿ ಸ್ವಪುರ ಮಾನವಿಯಯೈದಿದರು 33ಮನುತೀರ್ಥ ತಟದಲ್ಲಿ ಮೀಸಲಾಗಿವರಿಗೆಅನ್ಯರಾಕ್ರಮಿಸದೇ ರಕ್ಷಿಸಲ್ಪಟ್ಟಮನೆಯಲ್ಲಿ ನರಹರಿಯ ಹನುಮನ್ನ ಪೂಜಿಸುತದಿನದಿನದಿ ಪ್ರವಚನ ಭಜನೆ ಮಾಡಿದರ 34ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 35- ಅಷ್ಟಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು