ಒಟ್ಟು 18838 ಕಡೆಗಳಲ್ಲಿ , 137 ದಾಸರು , 8355 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಟ್ಟಿದ್ದು ಫಲವೇನು ಮನುಜನು | ಮುಟ್ಟದೆ ಗುರುಪದವನು ಪ ಬೀರಿ ವಾಗ್ಜಾಲ ಆರಿಗೆ ಸೋಲಾ | ಮೆರೆದನು ಬಹಳ ಮರೆದ ಸ್ಮರಣ ಕೀಲಾ 1 ಪರರುಪಕಾರಾ ಬಾರದಾ ಶರೀರಾ | ಸಿರಿಗಂಧ ಸಾರಾ ಧರಿಸಿದರೇನು ಪೂರಾ 2 ಹವಣಿಸಿಗಾಢಾ ಶ್ರವಣವ ಮಾಡಾ | ಕುಂಡಲ ನೋಡಾ 3 ತನ್ನ ತಾ ಮರೆವಾ ಅನ್ಯರಾ ಜರಿವ | ಮನ್ನಣೆ ತೋರುವಾ ಕನ್ನಿಯ ಪರಿಲಿರುವಾ 4 ನಂದನ ಪ್ರಾಣಾ ತಂದೆ ಮಹಿಪತಿ ಜನಾ | ಹೊಂದನು ಚರಣಾ ಮಂದಗಾಣದ ಕೋಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು
ಹುರುಡು ನಿನಗೆ ಥರವೇನೊ ಸ್ವಾಮಿ ಗರುಡವಾಹನ ಸುರಧೇನು ಪ. ಕುರುಡ ಕಾಣದೆ ಕೂಪದಲಿ ಬಿದ್ದರೆತ್ತದೆ ಮೊರಡುತನದಿ ಮುಖ ನೋಡುತ ನಗುವಂಥ ಅ.ಪ. ಜ್ಞಾನಮಾರ್ಗವ ಕಾಣದಿರುವ ದೀನ ಮಾನವನಿಗೆ ಮೋಹಭರವ ತಾನೆ ಕಲ್ಪಿಸಿ ತತ್ವದಿರುವ ಮುಚ್ಚಿ ನಾನಾ ಯೋಗಿಗಳಲ್ಲಿ ತರುವ ಮಾನವು ಸರಿಯೆ ಮಹಾನುಭಾವ ನಿನ್ನ ದೀನ ಬಂಧುತ್ವಕೆ ಹಾನಿ ಬಾರದೆ ಕೃಷ್ಣ 1 ಇಂದ್ರಿಯಾರ್ಥ ಸನ್ನಕರ್ಷವೆಂಬ ಬಂಧನದಲ್ಲಿ ಸಿಕ್ಕಿ ಬೀಳ್ವ ನಾನಾ ತಂದ್ರ ಸಾಗರ ಮುನಿಗಳ ಬಹು ಮಂಜನು ಮಾಯೆಯ ಗೆಲ್ವ ಹೊಂದಿಕೆಯನು ಸುಖ ಸಾಂದ್ರ ನೀನರಿಯೆಯ ಇಂದ್ರಾದಿಗಳನು ಎಂದೆಂದಿಗೂ ಸಲಹುವಿ 2 ಅದರಿಂದ ಸರ್ವಕಾಲದಲಿ ನೀನೆ ಒದಗಿ ಪೊಳೆವುತ್ತ ಮನದಲಿ ಪದಯುಗವಿರಿಸಿ ಶಿರದಲಿ ದಾಸಪದವ ಪಾಲಿಸು ಕರುಣದಲಿ ಭವ ವಂದ್ಯ ವೆಂಕಟಗಿರಿನಾಯಕ ಪದುಮಾಲಯೆ ಕೂಡಿ ಸದನದಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ ಭಾಮೇರಿಬ್ಬರಿಗೆ ರಂಗಯ್ಯ ಪ ಬಂದು ರುಕ್ಮಿಣಿ ಭಾಮೇರಿಂದತಿ ಸಂಭ್ರಮ್ಮದಿಂದ ರಂಗಯ್ಯ ಕುಂದಣದ ಹಸೆಮ್ಯಾಲೆ ಕುಳಿತಿರೆ ಚೆಂದದಲಿ ನಗುತ ಚಂದ್ರವದನ ತಾ ಚತುರ್ಭುಜದಿಂದಲಿ ಅಂಗನೆಯರ ಆಲಿಂಗನೆ ಮಾಡುತ 1 ಹೂವ ಮುಡಿಸುತ ವಾರಿಜಾಕ್ಷೇರ ವಾರೆನೋಟದಿ ನೋಡಿ ನಗುತ ರಂಗಯ್ಯ ಸಾರಸಮುಖಿ ಸಹಿತ ಸರಸ- ವಾಡುತ ನಾರದರು ನಮ್ಮಿಬ್ಬರ ಕದನಕೆ ಹೂಡಿದರೆ ಹುಚ್ಚಾದಿರೆಂದೆನುತ 2 ಮಲ್ಲೆ ಮಲ್ಲಿಗೆಮೊಗ್ಗು ಶಾವಂತಿಗೆ ಕಮಲ ರಂಗಯ್ಯ ಅರಳು ಮೊಗ್ಗುಗಳು ಝಲ್ಲೆ ಕುಸುಮಗಳು ಎಲ್ಲ ತನಕೈಯಲ್ಲಿ ಪಿಡಿದು ಚೆಲ್ವ ಭೀ- ಮೇಶ ಕೃಷ್ಣ ರುಕ್ಮಿಣಿಗೆ 3
--------------
ಹರಪನಹಳ್ಳಿಭೀಮವ್ವ
ಹೂವ ಮುಡಿಸಿರೆ ಮುಡಿಗ್ಹರಸುತಲಿ ಮುತ್ತೈದೆಯಾಗೆನುತ ಹೂವ ಮುಡಿಸಿರೆ ಮುಡಿಗ್ಹರಸುತಲಿ ಪ ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ ಸುರಪಾರಿಜಾತ ಸಂಪಿಗೆ ಸತ್ಯಭಾಮೆಗೆ 1 ಸುರಪಾರಿಜಾತ ಪುನ್ನಾಗ ಪುಷ್ಪಗಳ 2 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆಯ ಭೀಮೇಶಕೃಷ್ಣನ ಸತಿಗೆ3
--------------
ಹರಪನಹಳ್ಳಿಭೀಮವ್ವ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ ಲೊಳು ಬಿದ್ದಾದ ಸಂಕೋಲಿ ನಾಳೆಗೆ ಬರುತಾದ ಕಾಲನ ದಾಳಿಯು ತಾಳದೆಳಿತಾರ ಜಡಿದ್ವಜ್ರದ ಕೀಲಿ 1 ಹಂದಿಯ ಜನುಮಕೆ ಬೀಳಬೇಡ ಬೇಡಿ ಮಂದರ ನಿಲಯನ ಹೊಂದಿ ಭಜಿಸಿ ಆನಂದಪಡಿ 2 ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ ಪಾರ ಮಾಡಿಕೊಳ್ಳೊ ಭರ್ಜರಿ ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ ವಾರಿಜ ನಂಬಿ ಹೊಡಿ ಜಯಭೇರಿ 3
--------------
ರಾಮದಾಸರು
ಹೆಜ್ಜೆ ತೋರೆ ಕಾಲಗೆಜ್ಜೆ ತೋರೆ ಸಾರಥಿ ಪಟ್ಟದ ರಾಣಿ ಹೆಜ್ಜೆ ತೋರೆ ಪ ಕಾಲಲಂದಿಗೆ ನೂಪುರವಿಟ್ಟ ಹೆಜ್ಜೆ ತೋರೆ ಕಾಳಿಮರ್ದನ ಕೃಷ್ಣನರಸಿಯೆ ಹೆಜ್ಜೆ ತೋರೆ ಕಾಲಸರವು ಪಾಡಗನಿಟ್ಟ ಹೆಜ್ಜೆ ತೋರೆ ಕಾಳಿಂದಿ ರಮಣನ ಸತಿಯೆ ಹೆಜ್ಜೆ ತೋರೆ 1 ಬಡವರ ಮನೆಗೆ ನಡದು ಬರುವ ಹೆಜ್ಜೆ ತೋರೆ ಬಡನಡು ಬಳುಕುತ ನಡೆಯುವ ಪುಟ್ಟ ಹೆಜ್ಜೆ ತೋರೆ ಸಡಗರದಲಿ ಹರಿಯೊಡನೆ ಬರುವ ಹೆಜ್ಜೆ ತೋರೆ ಪೊಡವಿಗೊಡೆಯ ಶ್ರೀ ಕೃಷ್ಣನರಸಿಯೆ ಹೆಜ್ಜೆ ತೋರೆ2 ಲುಲ್ಲುರುಳಿ ಪೈಜನಗಳು ಹೊಳೆವ ಹೆಜ್ಜೆ ತೋರೆ ಉಲ್ಲಾಸದಿ ಸುರರೆಲ್ಲರು ಸ್ತುತಿಪ ಹೆಜ್ಜೆ ತೋರೆ ಫುಲ್ಲಾಕ್ಷನ ಒಡಗೂಡುತ ಬರುವ ಹೆಜ್ಜೆ ತೋರೆ3 ಪದ್ಮ ರೇಖೆಗಳಿಂದ ಶೋಭಿಪ ಹೆಜ್ಜೆ ತೋರೆ ಪದ್ಮನಾಭನ ಕೂಡಿ ಬರುವ ಹೆಜ್ಜೆ ತೋರೆ ಪದ್ಮದೊಳು ಪುಟ್ಟಿರುವ ಪುಟ್ಟ ಹೆಜ್ಜೆ ತೋರೆ ಪದ್ಮಮುಖಿಯೆ ಶ್ರದ್ಧೆಲಿ ಭಜಿಪರು ಹೆಜ್ಜೆ ತೋರೆ4 ವಿರೋಧಿಕೃತ ಸಂವತ್ಸರ ಬರುತಿರೆ ಹೆಜ್ಜೆ ತೋರೆ ವಿರೋಧಿಗಳ ದೂರೋಡಿಪ ದಿವ್ಯ ಹೆಜ್ಜೆ ತೋರೆ ಸರೋಜದಳದೊಳು ಶೋಭಿಪ ದಿವ್ಯ ಹೆಜ್ಜೆ ತೋರೆ ಸುರರೆಲ್ಲರು ಕೊಂಡಾಡುತ ಸ್ತುತಿಪ ಹೆಜ್ಜೆ ತೋರೆ5 ನಿಗಮವೇದ್ಯಳೆ ನಿನ್ನ ಪೊಗಳುವೆ ಹೆಜ್ಜೆ ತೋರೆ ಅಗಣಿತ ಮಹಿಮನ ಗುಣಗಳ ಪೊಗಳುವೆ ಹೆಜ್ಜೆ ತೋರೆ ಬಗೆ ಬಗೆ ಭಕುತರು ಪೂಜಿಪ ನಿನ್ನ ಹೆಜ್ಜೆ ತೋರೆ ಖಗವಾಹನನೊಡಗೂಡುತ ಬರುವ ಹೆಜ್ಜೆ ತೋರೆ6 ಕಮಲ ಮುಖಿಯೆ ಕರುಣವ ಮಾಡಿ ಹೆಜ್ಜೆ ತೋರೆ ಕಮಲನಾಭ ವಿಠ್ಠಲನ್ನ ರಾಣಿ ಹೆಜ್ಜೆ ತೋರೆ ಕಮಲಾಕ್ಷಿಯರಿಂದ ಪೂಜೆಗೊಳ್ಳುವ ಹೆಜ್ಜೆ ತೋರೆ ಸುಮನಸವಂದ್ಯನ ಸತಿಯೆ ನಮಿಪೆ ಹೆಜ್ಜೆ ತೋರೆ7
--------------
ನಿಡಗುರುಕಿ ಜೀವೂಬಾಯಿ
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಹೆದರದಿರ್ಪೇಳ್ವೆ ಹೇ ಜೀವಾ ಬ್ರಹ್ಮನಿಗಾನು ಮೊದಲು ಪೇಳಿದ ಮಾರ್ಗವ ಪಪದರವಾಗಿ ಲೋಕಗಳನೂ ಪಲವು ಜೀವರಾಶಿಗಳನೂ ಇದಿರಮಾಡಿ ತೋರಿಸಿಹೆನು ಇದಕೆ ನೀನು ಅ.ಪಏಕನಾಗಿದ್ದು ಮೊದಲು ಬಹಳವಾಗಬೇಕೆಂದು ಬುದ್ಧಿುಡಲುಈಕೆ ಮಾಯೆಯಾುದಳೆನ್ನ ುಚ್ಛೆುಂದಲಿಲ್ಲ ಮುನ್ನಸೋಕಿದಂತೀಗಿರ್ದಡಿದೇನು ಶೂನ್ಯಕೆ ನೀನು 1ರಜ್ಜು ಸರ್ಪನ ತೆರದಿ ತೋರಿದರದು ಬೆಜ್ಜರ ಭಾಂತ್ರಿ ಮೂಲದಿಸಜ್ಜಿಸಿದೆ ಮಾಯೆ ಹಾಗೆ ಭರ್ಜಿಸುವ ಬಗೆ ಹೇಗೆವರ್ಜಿತಕೆ ವಿಧಿಯೊಂದುಂಟೆ ವೋಹೋ ಕಂಗೆಟ್ಟೆ 2ಕನಸಿನ ಸಿರಿ ಕಷ್ಟವು ಎದ್ದವನಿಗೆ ನೆನಸಿದರುಂಟೆ ನಿಜವುಮನದ ಭ್ರಮೆುಂದ ಬಂದ ಮಿಥ್ಯಕುಂಟೆ ಮುಕ್ತಿ ಬಂಧಇನಿತ ನಾನೆ ತೋರಿಸಿಹೆನು ಇದಕೆ ನೀನು 3ತಿಳಿದರೂ ತಾನೆ ತೋರ್ಪುದು ಕೇಳ್ ಬಹುಕಾಲ ಬಳಸಿ ಬಂದುದು ಬಲಿದುಹೊಳೆದರೂ ತಾ ಜೀವನನ್ನು ಹೊದ್ದದುಣ್ಣುತಿದ್ದರದನುಕಳಚಿ ಹೋುತೆಂದೆ ನೀ ಕಾಣು ಕೊರತೆ ತಾನೇನು 4ಹುರಿದ ಬೀಜವ ನೋಡಲು ಆಕಾರವಾಗಿ ುರುವದು ುದ ಬಿತ್ತಲುತಿರುಗಿ ಪುಟ್ಟಿ ತೋರುವದೆ ತಿಳಿಯೆ ಮಾಯೆಯನ್ನು ಬಾಧೆಬರುವದೇನೈ ಭದ್ರವಾಗಿರು ಭೋಗಿಸುತಿರು 5ಹೋಗದೇತಕೆ ಹೋರುತಾ ಬಾಧಿಸುವದು ಯೋಗಿಗೂ ುದ್ದೆ ತೋರುತಾಸಾಗುವಂತೆ ಮುಂದೂ ತಾನು ಸಿದ್ಧವಾಗಿ ಮುಕ್ತರನ್ನುಭೋಗಿಗಳ ಮಾಡುತಿಹದು ಬಾಧಿತವಹುದು 6ತೋರಿದ ನಾನೆ ತೆಗೆವೆ ಇದಕೆ ನೀನು ಹೋರದಿರೆನ್ನ ನಿಜವೆಸೇರು ನನ್ನ ಚರಣವನು ದಾರಿದೋರ್ಪೆ ತಿರುಪತಿವಾರಿಜಾಕ್ಷ ವೆಂಕಟೇಶನು ಒಲಿವೆ ನಾನು 7ಓಂ ಪನ್ನಗಾಶನವಾಹನಾಯ ನಮಃ
--------------
ತಿಮ್ಮಪ್ಪದಾಸರು
ಹೆದರಿಕೆ ಬರುತದೆಲೋ ಪದುಮಾಕ್ಷ ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ ಹೆದರಿಕೆ ಬರುತಿದೆ ಜಗದ ಜನರು ನಿನಗೆ ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ ಹಳಿವರು ಹೆಳವನೆಂದು ಅಂಜದೆ ನಿನಗೆ ತಲೆಯಿಲ್ಲದವನೆನುವರು ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1 ದೃಢದಿ ಭಕುತಜನರು ಬೇಡಿದ ವರವು ಕೊಡಬೇಕಾಗುವುದೆನುತ ಓಡಿ ಹಾವಿನಮೇಲೆ ಪವಡಿಸಿದ ಮಹ ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2 ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ ಸದನಗೈದನುಯೆಂಬರು ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3 ಕುದುರೆಮಾವುತನೆಂಬರು ಎಲವೋ ರಂಗ ಕದನಗಡಕನೆನುವರು ಹದಿನಾರು ಸಾವಿರ ಸುದತಿಯರೊಶನಾದ ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4 ವಿಪಿನವಾಸಿಕನೆನುವರು ನಿಷ್ಕರುಣದಿ ನೀ ಕಪಿವರನ ತರಿದೆನುವರು ಕಪಟ ತಿಳಿಯುವರಾರು ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5
--------------
ರಾಮದಾಸರು
ಹೆದರಿಕೆ ಯಾತರದೋ ತ್ರಿಜಗದಿ ಪಾದ ಸದಮಲದಾಸರಿಗೆ ಪ ಗರುಡನ ಮಂತ್ರಕೆ ಉರಗನ ಭಯವುಂಟೆ ದುರಿತದಂಜಿಕೆಯುಂಟೆ ನರಹರಿಸ್ಮರಣೆಗೆ 1 ಬಿರುಗಾಳಿ ಬೀಸಲು ಗಿರಿ ನಡುಗುವುದುಂಟೆ ಪರಿಭವ ಬಂಧಮುಂಟೆ ಸಿರಿವರನರ್ಚಕರಿಗೆ 2 ಶ್ರೀರಾಮನಡಿವಾರಿಜಭಜಕರ್ಗೆ ಸಾರಮೋಕ್ಷಂಗಳು ದೂರವಿನ್ನುಂಟೆ 3
--------------
ರಾಮದಾಸರು
ಹೆಮ್ಮೆಯಾ ಬಿಡು ಬಿಡು ಮನುಜಾ ಪ ಬೊಮ್ಮ ದೂರ್ವಾಸಾದಿಗಳೆಲ್ಲಾ | ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ | ನುಡಿಯಲಿ ತಾ ವಾಯು ವಶದಿಂದಲಿ | ತಡಿಯದೆ ಬಹುಮುಖ ಕಮಲಾಸನ ಕಂಡು | ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ 1 ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು | ಮತ್ಸರಿಸಲು ಅಂಬೃಷಿಯೊಡನೆ | ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ | ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ 2 ಮೇರು ಗಿರಿಯ ಸಮವಾಗಿ ಸೂರ್ಯನ ರಥಾ | ದಾರಿ ಕಟ್ಟುವೆನೆಂದು ಬೆಳೆಯುತಲಿ | ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ | ಧಾರುಣಿಯೊಳಗೇ ನಾದನೆಂಬುದ ಕೇಳಿ 3 ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ | ಕಕ್ಷದಿ ನಿಲುವ ರರೆನುತಾ | ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ | ದಕ್ಷ ಮನ್ಮಥರೇನಾದರೆಂಬುದ ಕೇಳಿ 4 ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ | ಬಹುತರು ನಮ್ರವೃತ್ತಿಯ ತ್ಯಜಿಸಿ | ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ | ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು