ಒಟ್ಟು 1873 ಕಡೆಗಳಲ್ಲಿ , 107 ದಾಸರು , 1497 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ
ನಿತ್ಯ ಸಾಗರನರಾಣಿ ಪ ಅಜನ ನಿರೂಪದಲಿ ಜಾಬಾಲಿ ರಿಷಿ ನಿಂದು ಭಜಿಸಿದನು ನಿನ್ನ ಬಹುದಿನಂಗಳಲಿ ನಿಜವಾಗಿ ಹರನ ಶಿರದಲ್ಲಿ ಉದ್ಧವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಸುರಶುಭವರದೆ 1 ಎತ್ತ ನೋಡಿದರತ್ತ ನಾಲ್ಕೂವರೆ ಯೋಜನವು ಸ್ತುತ್ಯ ಪುಣ್ಯದೇವಿ ಎನಿಸಿಕೊಂಬೆ ಸ್ತುತಿಸಲಳವೇ ನಿಮ್ಮ ಮಹಿಮೆ ಅಮಿತವಲ ಮತ್ತಗಜಗಮನೆ ಶುಭಕರೆ ಙÁ್ಞನಧಾರೆ 2 ನೂಗದ ಪಾಪಗಳೆನಿತೊ ನಿನ್ನ ದುರುಶನವು ಆಗುತ್ತ ಓಡಿದವು ತಳವಿಲ್ಲದೇ ಬಾಗಿಲ ಕಾಯುವ ಭಾಗ್ಯವ ನೀಡೆಲೆ ವರದೇ 3 ಕಲಿಯುಗದಿ ನೀನೇ ವೆಗ್ಗಳಳೆಂದು ಸಾತ್ವಿಕರು ಒಲಿದು ಕೊಂಡಾಡುವರು ನಿರುತದಲಿ ಜಲನಿಧಿಯ ಇಮ್ಮೊಗದಿಂದಲಿ ಮೆರದೆ ಮಹತಟನಿನೆಲೆಗೊಳಿಸು ವಿಜಯವಿಠ್ಠಲನ ಸಂಪದದೊಳು4
--------------
ವಿಜಯದಾಸ
ನಿತ್ಯ ಶುಭ ಮಂಗಲಂ ಮಂಗಲಂ ಮಾರುತಿಯ ಪೆಗಲೇರಿ ಬರುವನಿಗೆ ಪ. ಮಂಗಲಂ ಮಾರೀಚ ವೈರಿಹರಿಗೆ ಮಂಗಲಂ ಸೀರಜಾ ಮುಖಪದ್ಮ ಭೃಂಗನಿಗೆ ಮಂಗಲಂ ವೀರ ರಾಘವ ದೇವಗೆ ಅ.ಪ. ರಾವಣಾದಿಗಳಿಂದ ಲಾಹವದಿ ಬಹು ನೊಂದ ದೇವತೆಗಳನು ಬೇಗ ಕಾವೆನೆಂದು ತಾ ಒಲಿದು ಕೌಸಲ್ಯದೇವಿ ಗರ್ಭದಿ ಬಂದು ಸಾವಧಾನದಿ ಸಕಲ ಸಜ್ಜನರ ಸಲಹಿದಗೆ 1 ಮಂದಮತಿಗಳೊಳಧಿಕ ತುಂಡಿಲನು ಮಾತ್ಸರ್ಯ ದಿಂದ ಮಾಡಿರುವ ಪ್ರತಿ ಬಂಧಕವನು ಇಂದಿಲ್ಲಿ ಬರಲು ಸಮಂಧಗೈಸದೆ ದಾಸ ನೆಂದೆನ್ನ ಮೇಲೆ ದಯದಿಂದಲೊಲಿದವಗೆ 2 ಇಂಗಿತಾಭೀಷ್ಟದ ಕುರಂಗ ಮರ್ದನ ರಾಮ ಶೃಂಗರಿಸಿ ಸರ್ವಪರಿವಾರ ಸಹಿತಾ ಮಂಗಲಾರತಿ ಕೊಂಡು ಮಂಗಳವ ಬೆಳೆಸುವ ಭು ಜಂಗ ರಾಜೇಂದ್ರ ಗಿರಿಶೃಂಗನಾಥನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ ಮೂರೇಳವತಾರ ನಿನಗೆ ನೂರೆಂಟು ಎನಗೇ1 ನಿನಗೆ ಸುರಮುನಿಗಣ ಎನಗೆ ಭೂಸುರಗಣ ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ2 ಜಗವು ಉದರವೆಂದು ಬಗೆದು ಪೋಪೆನೀ ಜಗದ ಸರ್ವಾರ್ಥವ ಮಿಗೆ ಬಯಸುವೆನಾ 3 ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ 4 ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ ದುರಿತ ತೃಪ್ತತೆ ಯೆನಗೆ 5 ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು ರಂಗನಾಥ ಶ್ರೀಶ ತುಂಗವಿಕ್ರಮ ನೀ 6 ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ ಕಮಲಾಕ್ಷ ಪೊರೆದೇವ ರಾಮದಾಸನುತಾ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನಗೇನು ಘನವೇನು ವನಜಾಕ್ಷ ವೆಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ಪ ದೇಶ ನಿನ್ನದು ಬಹುಕೋಶ ನಿನ್ನದು ಜಗ ದೀಶ ನಿನ್ನನು ಭಾಗ್ಯಲಕುಮಿ ಸೇವಿಸುವಳು ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ 1 ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ ಅಣುಮಹತ್ತಿನೊಳಗೆ ಗುಣವ ತೋರಲು ಬಲ್ಲೆ ಕ್ಷಣಕೆ ಮುನಿಯ ಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ ಗುಣಗಳವಗುಣಗಳ ನೋಡದೆ ಸಲಹಯ್ಯ 2 ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ 3 ತಂದೆ ತಾಯಿಗಳಿಲ್ಲ ಬಂಧು ಬಾಂಧವರಿಲ್ಲ ಕುಂದು ಹೆಚ್ಚಿಯೆ ನಿರ್ಬಂಧ ಬಡಿಸುತಿದೆ ಮಂದರಾದ್ರಿಯ ಗೋವಿಂದ ನಿನ್ನಯ ಪಾದ ದ್ವಂದ್ವವ ತೋರಿಸಿ ಚಂದದಿ ಸಲಹಯ್ಯ 4 ಮನದ ಸಂಕಲ್ಪಕೆ ಅನುಗುಣವಾಗಿಯೆ ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ ತನು ಮನದೊಳಗನುದಿನದಿನ ಸಲಹಯ್ಯ 5
--------------
ವರಹತಿಮ್ಮಪ್ಪ
ನಿನಗೇನೊ ಭಕುತರ ಚಿಂತೀ ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ ಪರಮೇಷ್ಟಿ ನಿನಪುತ್ರ ಕಿರಿಯ ಮಗನು ಜಗತ್ಪ್ರಾಣದೇವಾ ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ ಸುರರು ಪರಿವಾರ 1 ಸಕಲಲೋಕಕೆ ಅರಸು ಲಕುಮಿಕಾಂತನು ಎಂದು ನಿಖಿಳವೇದ ಸ್ಮøತಿಯು ಸಾರುತಿಹದೋ ಅಖಿಳವ್ಯಾಪಕನಾಗಿ ಸಕಲಸುರನರರಿಂದ ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2 ಸುರನಾಥ ನೀನಲ್ಲದಿತರ ದೇವತೆಯುಂಟೆ ಸರವೋತ್ತಮಾನೆಂಬನಾವನವನೋ ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3
--------------
ಗುರುಜಗನ್ನಾಥದಾಸರು
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ ಹರುವ ಸರ್ಪಯಿರುವ ಚೋರ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ1 ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ ಪಾಡಿ ಪೊರ ಮಟ್ಟ ಒಪ್ಪ ತಿರುವೆಂಗಳಾ2 ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣಿದು ಪದೋಪದಿಗೆ ಹಾಡಿ ಪಾಡುತ ಹದುಳವಾದ ಪಂಚವಾದ್ಯ ಎದುರುನಿಂದು ಧ್ವನಿಯ ಮಾಡುತಾ ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3 ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು ಇಲ್ಲೆ ಸುಖವು ಬಟ್ಟು ಕಡಿಗೆ ಎಲ್ಲೆಲ್ಲಿ ಜನಿಸಿ ಬಹು ಭವದ ಪಲ್ಲಡಿಯೊಳಗೆ ಜನಿಸಿ ಜ್ಞಾನ ವಿಲ್ಲದೆ ಸಲ್ಲುವರು ದುರಿತವ ವಹಿಸಿ 4 ಮನುಜರೆಣಿಕೆ ಏನು ಮತ್ತೆ ವನಜ ಸಂಭವ ಈಶ ಮುಖ್ಯ ಅನಿಮಿಷರೆಲ್ಲ ಬಂದು ಭಯದಿ ಮನಸಿನಲಿ ನಿನ್ನ ಅರಸುತನದ ಶೌರ್ಯ ಮಣಿದು ನಮಸ್ಕರಿಸುತಾ ವಾಲ್ಗೈಸುತಾ ಹೊಣಿಯೊ ವಿಜಯವಿಠ್ಠಲ ಎನುತಾ 5
--------------
ವಿಜಯದಾಸ
ನಿನ್ನ ಉನ್ನತ ಮಹಿಮೆಯನ್ನು ಬಣ್ಣಿಪ ಶಕ್ತಿ ಎನಗೆಂತು ಕರುಣಾರ್ಣವ ಪ ಅನ್ಯಕುಲದಲಿ ಜನಿಸಿ ಅನ್ಯ ಆಹಾರಗಳುಂಡು ಕುನ್ನಿಯಂತೆ ಕಳೆವೆ ದಿನವ ಅಭವ ಅ.ಪ ಶೋಧಿಸಿಶಾಸ್ತ್ರಪದ ಛೇದಿಸಿ ಬಣ್ಣಿಸಲೆ ಓದು ನಾ ಕಲಿತಿಲ್ಲವೋ ವೇದಪೂರ್ವಕಮಾಗಿ ಸಾಧನದಿ ಬಣ್ಣಿಸಲೆ ವೇದ ಎನಗೊಳುಪಿಲ್ಲವೋ ಸಾಧುವರ್ತನದ ಮಹಾದಾದಿಯಿಂ ಬಣ್ಣಿಸಲೆ ಸಾಧುಪಥ ಗುರ್ತಿಲ್ಲವೋ ಆದಿಮೂರುತಿ ನಿನ್ನ ಪಾದಪೊಗಳಲು ಒಂದು ಹಾದಿಗೊತ್ತೆನಗಿಲ್ಲವೋ 1 ದೃಢಮಾಗಿ ನಿನ್ನ ಸಮದೃಢ ಮಹಿಮೆ ಬಣ್ಣಿಸಲೆ ದೃಢಭಕ್ತಿಯೆನಗಿಲ್ಲವೋ ಎಡಬಿಡದೆ ಬಣ್ಣಿಸಲೆ ಪೊಡವಿಯೋಳ್ನಿನ್ನವರ ಒಡನಾಟ ಎನಗಿಲ್ಲವೋ ಕಡು ಗೂಢವಾಗಿ ನಿನ್ನಡಿಗಳನು ಬಣ್ಣಿಸಲೆ ಜಡಮತಿ ನಾ ಬಣ್ಣಿಪೆನೆ ಕಡೆಯಿಲ್ಲದ ತವಮಹಿಮೆ ಮೃಡ ಅಜರಿಗಸದಳವೋ ತಿಳಿವೋ 2 ಸುಗುಣಗುಣಾಂತ ನಿನ್ನ ಸುಗುಣಗಳ ಬಣ್ಣಿಸಲು ಸುಗುಣಗುಣ ಎನಗಿಲ್ಲವೋ ನಿಗಮಾತೀತನೆ ನಿನ್ನ ಗುಟ್ಟು ಬಣ್ಣಿಸಲೆ ನಿಗಮವ ನಾನರಿತಿಲ್ಲವೋ ಅಗಣಿತಮಹಿಮ ನಿನ್ನ ಹಗರಣದ ಮಹಿಮೆಯ ಬಗೆಬಲ್ಲವ ನಾನಲ್ಲವೋ ಪೊಗಳುವೆನು ಮಿಗಿಲೆನ್ನುತ ಸತತ3
--------------
ರಾಮದಾಸರು
ನಿನ್ನ ಕಾಣಬಂದೆನಯ್ಯ ಚೆನ್ನಕೇಶವಾ ನಿನ್ನ ಕಂಡು ನಲಿದೆ ರಮಾರನ್ನ ಮಾಧವಾ ಪ ಜಳದಿ ಮುಳುಗಿ ತೊಳಲಿ ಬಳಲಿ ಬಹಳನೊಂದೆನು ತಳವ ಬಯಸಿ ಬಳಸಿ ಬಳಸಿ ನಡುವೆ ನಿಂದೆನೊ ಬಳಿಯ ಬಳಗವಿಲ್ಲ ನೋವಿನಿಂದ ಬೆಂದೆನೋ ಸುಳಿಗೆ ಸಿಲುಕಿ ಅಳುಕಿ ಬಳುಕಿ ವಿಧಿಯ ಬೈದೆನೋ 1 ಕರವ ಮುಗಿದು ಕರೆವೆ ನಿನ್ನ ಕರುಣದಿ ಬಾರೋ ಮರುಗಿ ಮರುಗಿ ಕೊರಗಿದೆನಗೆ ಚರಣವ ತೋರೋ ಕರಿಯ ಪೊರೆದೆ ತರಳಗೊಲಿದೆ ಮರುಕವ ಬೀರೋ ಶಿರವ ಚರಣಕಿರಿಸುವೆ ಮಾಂಗಿರಿಯರಂಗ ಬಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಅ.ಪ. ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ 1 ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ ಪ್ರತಿದಿವಸವಾಗೆ, ದೇವ 2 ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು ಪಾತ್ರ ಜನರೊಳು ಪೊಂದಿಸು ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು ಧಾತ್ರಿಯೊಳು ನೀಚನೆನಿಸು ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು ಸ್ತೋತ್ರಕ್ಕೆ ಯೋಗ್ಯನೆನಿಸು ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ ರಾತ್ರಿ ಹಗಲು ಎನ್ನದೆ ದೇವ 3 ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು ಜಪತಪವನೆ ಮಾಡಿಸು ಅಪಹಾಸ್ಯ ಮಾಡಿಸು ಅದ್ಭುತವನೈದಿಸು ಗುಪಿತರೊಳಗಧಿಕನೆನಿಸು ಉಪಕಾರಿ ನರನೆನಿಸು ಉದ್ದಂಡನಿವನೆನಿಸು ವಿಪುಳ ಮತಿಯಲಿ ನಿಲಿಸು ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ ಸಫಲಮತಿಯೀವ ದೇವ 4 ವೇದವನು ಓದಿಸು ವೇದಾರ್ಥಗಳ ನುಡಿಸು ಓದಿದರು ದಡ್ಡನೆನಿಸು ಹಾದಿಯನು ತಪ್ಪಿಸು ಹಿತದವರನಗಲಿಸು ಸಾಧು ಮಾರ್ಗವನೆ ಕೊಡಿಸು ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು ಉದರಕೋಸುಗ ತಿರುಗಿಸು ಪಾದದಲಿ ಗಂಗೆಯನು ಪೆತ್ತ ಪರಮಾನಂದ ಮೋದ ವಿನೋದವಾಗೆ ದೇವ 5 ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು ಮಣಿ ಭೂಷಣವ ತೊಡಿಸು ಘನ ಕವನ ಪೇಳಿಸು ಕೌತುಕವನೈದಿಸು ವನ ಭುವನದೊಳು ನಿಲಿಸು ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು ಬಿನುಗು ವೈರಾಗ್ಯನೆನಿಸು ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ ಎನಗೆ ನೀನೆ ಸದ್ಗತಿ ಸ್ವಾಮಿ 6 ಯಾವುದಾದರು ನೀನು ಇತ್ತುದಕೆ ಎನಗಿಷ್ಟು ನೋವು ಒಂದಾದರಿಲ್ಲ ಜೀವೇಶರೊಂದೆಂಬ ದುರ್ಮತವ ಕೊಡದಿರು ಭಾವದಲಿ ನಾ ಬೇಡುವೆ ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ ನಾನೊಲ್ಲೆ ಮಿಥ್ಯಮತವ ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ ಪಾವನ್ನ ಮಾಳ್ಪ ಶಕ್ತ ವ್ಯಕ್ತ 7
--------------
ವಿಜಯದಾಸ
ನಿನ್ನ ತಂತ್ರಗಳೆಲ್ಲ ಬಯಲಾಯ್ತೊ ರಂಗ ನಿನ್ನ ಕಥೆಯ ಕೇಳಿ ಭಯವಾಯ್ತೋ ಪ ನಿನ್ನ ವಂಚನೆಗೇ ಜಯವಾಯ್ತೋ ಅ.ಪ ಶರನಿಧಿಯ ಮಥನದಿ ಗರಳವು ಜನಿಸಲು ಪರಶಿವನುಂಬುವ ಪರಿಗೈದೆಯೇನೋ ತರುಣಿ ಸಂಜನಿಸಲು ಶರಗಳ ನೀಡಿ ದೈ ಪರಿ ಸಟೆಯೇನೋ 1 ಧರಣಿಯನಿತ್ತನ ಶಿರವನು ತುಳಿದೆ ಪರಿಗಣಿಸದೆ ತಾಯ ಕೊರಳನು ತರಿದೆ ಪರಸತಿಯರ ಕೂಡ ನೆರೆ ನಲಿದಾಡಿದೆ ಕರದಿ ಸನ್ನೆಯ ಮಾಡಿ ಕುರುಕುಲವಿರಿದೇ 2 ಮದನ ಸುಂದರಿಯಾಗಿ ಸುಧೆಯ ಕುಂಭವ ಕೊಂಡೆ ಅದಿತಿಯ ಸುತರಿಗೆ ಅದ ನೀನುಣಿಸಿದೆ ಮಧುರುಚಿಯರಿತನ ಚಕ್ರದಿ ತರಿದೆ [ಎದುರಿಸದೆವಾಲಿಯ ಮರೆಯಲಿರಿದೆ] 3 ಪೊಡವಿಯೊಡೆಯನ ಕಡೆಗಣಿಸೀ ನಿನ್ನ ಅಡಿಯಿಡೆ ಯಿದ್ದವನೊಡವೆರೆದೆ ನುಡಿದು ಕರ್ಣನ ಕಂಗೆಡಿಸಿದೆ ಭೀಷ್ಮನ ಕೆಡಹಿದೆ ಮಾಂಗಿರಿಯೊಡೆಯ ಗೋಪಾಲಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ. ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1 ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2 ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3 ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4 ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5
--------------
ವಾದಿರಾಜ
ನಿನ್ನ ನಂಬಿದವರ ಕಾಯೊ ನಿಜವುಳ್ಳ ದೇವ ಎನ್ನನು ಉದ್ಧರಿಸಿ ಕಾಯೊ ಕರುಣಿವೆಂಕಟ ಪ. ಸುರಪತಿಯು ಮುನಿದು ಮಳೆಗರೆಯಲೇಳು ದಿನವೂ ಬಿಡದೆ ತುರುಗಳೆಲ್ಲ ಸೊರಗಿ ಬಾಯ ಬಿಡುತಿರಲು ಬೆರಳಿನಿಂದ ಗೋವರ್ಧನ ಗಿರಿಯನ್ನೆತ್ತಿ ಗೋವ್ಗಳನು ದ್ಧರಿಸಿ ಕಾಯ್ದೆ ಕರುಣಾಸಿಂಧು ಕಮಲಲೋಚನ 1 ಮಡುವಿನೊಳಗೆ ಮಲೆತನೀರ ಕುಡಿಯ ಬಂದಾಗಜವ ನೆಗಳು ಪಿಡಿದು ಕಾಲಕಚ್ಚಿ ಭಂಗಬಡಿಸುತ್ತಿರಲು ತಡೆಯಲಾರದೆ ಪ್ರಾಣ ಬಿಡುವ ಸಮಯದಲ್ಲಿ ಬಂದು ಕೆಡಹಿ ಚಕ್ರದಿಂದ ನೆಗಳ ಕರಿಯ ಸಲಹಿದೆ2 ಮಂದ ತುತ್ತು ಮಾಡಿ ಪಿಡಿದು ಕುದುರೆ ಕ್ರೂರ ದಂತದಿ ಕತ್ತರಿಸುವ ಸಮಯದಲ್ಲಿ ಕಡೆಮಾಡಿ ಕಾಯೆನ್ನ ಕರ್ತು ಹೆಳವನಕಟ್ಟೆ ಕರುಣಿ ವೆಂಕಟ 3
--------------
ಹೆಳವನಕಟ್ಟೆ ಗಿರಿಯಮ್ಮ
ನಿನ್ನ ನಾನೇನೆಂದೆನೊ | ಗುರುವೆ ಜಗದ್ಗುರುನಿನ್ನ ನಾನೇನೆಂದೆನೋ ಪ ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನ ದೂತಅ.ಪ. ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ದಗೆ ಶರಣೆಂದೆನು ಅಲ್ಲದೇ ||ಭಾರಿ ಕೋತಿಯು ಎಂದೆನೆ - ಕುಪ್ಪುಸ ತೊಟ್ಟುನಾರಿಯಾದವನೆಂದೆನೆ - ಕಾವಿಯನುಟ್ಟುಪೋರಯತಿಯು ಎಂದನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1 ನೆರಹಿ ಕಪಿ ಸೈನ್ಯವ | ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಿಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೋ ಎಂದನು ಅಲ್ಲದೇ ||ಗಿರಿಯ ಪೊತ್ತವನೆಂದನೆ - ರಕ್ಕಸಿಯಬೆರೆದ ನೆಂದವನೆಂದೆನೆ - ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳವನೆಂದೆನು ಅಲ್ಲದೆ 2 ಕರ್ತು ಹರಿಯೆ ಎಂದುನೀಚೋಚ್ಛ ತರತಮ ಪೇಳ್ದೆ ಎಂದೆಲ್ಲದೆ ||ಖೇಚರ ನೀನೆಂದೆನೆ - ವಿರಾಟನೊಳ್‍ಪಾಸಚಕ ನೀನೆಂದೆನೆ - ಭವಾಟವಿಮೋಚಕನೇ ಗುರು ಗೋವಿಂದ ವಿಠಲಅರ್ಚಕನೆಂದು ಸ್ತುತಿಗೈದೆನಲ್ಲದೆ 3
--------------
ಗುರುಗೋವಿಂದವಿಠಲರು
ನಿನ್ನ ನಾಮವೆ ಘನವಆಗಿದೆ ನೆನೆವರಕಾವ ಕರುಣಿಯೆಂದು ಪ ಪಾದ ಯುಗವನಾ ಕಾಣಬಲ್ಲನೆ ಕೇಳಿ ಗರುಢಾ ರೂಢ ನಾಗಿ ಬಂದು ಗಜವ ಕಾಯ್ದವನೆಂದು 1 ಸಂಗದಿಂದಲಿ ಯಿರುತಿರಲು ಬಂದು ಯಮನ ದೂತರೆಳೆಯೆ ಭಯದಿ ತನ್ನ ನಂದನ ಕರೆದರೊಂದು ನಾಮವೆ ಕಾದುದೆಂದು 2 ದುರುಳ ಕಶ್ಯಪುಸುತನ ಭಾಧಿಸೆ ಮೊರೆಯಿಡಲದನುಕೇಳಿ ಭರದಿ ಕಂಬದಿ ಬಂದು ನರಹರಿಯಾಗಿ ನಿಂದು ಕರದೊಳವನ ಕೊಂದು ತರಳನ ಕಾಯ್ದೆಯೆಂದು 3 ಅಂಬುಧಿಶಯನ ನಿನ್ನ ರುಕ್ಮಾಂಗದ ಮೃತ್ಯವೆಂಬುದೆಲ್ಲವಗೆದ್ದು ಕುಂಭಿನಿಯೊಳು ಪೆಸರೊಡೆದರೆಂಬುದ ಕೇಳಿ 4 ಓಲಗದೊಳು ಶಾಲೆಯ ಸುಲಿಯೆ ದ್ರುಪದ ಭೀಮನಕೋಣೆ ಲಕ್ಷ್ಮೀ ಲೋಲ ಸೀರೆಯ ಸೆರಗ ಬೆಳೆಸಿದ ನಾಮವೆಂದು 5
--------------
ಕವಿ ಪರಮದೇವದಾಸರು