ಒಟ್ಟು 3729 ಕಡೆಗಳಲ್ಲಿ , 124 ದಾಸರು , 2629 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆÀ ಬೇಡುವೆನು ನುತಿ ಮಾಡುವೆನು 1 ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ ನಿತ್ಯ ಭಾವಿಸಿದೆ ವಂದಾರು ಮಂದಾರ ಪಾಲಿಸೆನ್ನನು ಬೇಡಿಕೊಂಬೆನು 2 ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ ಭಾವಿಪುದು ನಿಜತೋರುವುದು ದಯೆಯಿಂದ ಬಹು ವಿಧದಿಂದ 3
--------------
ಬೇಟೆರಾಯ ದೀಕ್ಷಿತರು
ಕರುಣಾನಿಧಿ ಸುರವರ ಗುಹ ಶರಜಾ ಪರಮಪುರುಷ ಅಘಹರ ನೀನೆ ಶರಜಾ ಪ ನಿಗಮ ವಜ್ರ ಶರಜಾ | ಅಗಜೆಯ ಮೋಹದ ಮಗ ನೀನೆ ಶರಜಾ 1 ಇಂದುವದನ ಅರವಿಂದೇಕ್ಷಣ ಶರಜಾ |ವೃಂದಾರಕ ಕುಲ ಮಂದಾರ ಶರಜಾ |ಕಂದರ್ಪ ಶತರೂಪ ಸುಂದರ ಶರಜಾ | ನಂದಿಧ್ವಜ ಜನಪ್ರಿಯ ಕಂದನೆ ಶರಜಾ 2 ವಾಸವ ವಂದ್ಯ ಸರ್ವೇಶನೆ ಶರಜಾ ಆಶಾದಿ ರಹಿತ ವಲ್ಲೀಶನೆ ಶರಜಾ ದಾಸ ಜನರ ಸದಾ ಪೋಷಕ ಶರಜಾ ವಾಸ ಪಾವಂಜೆ ಸೇನೇಶನೆ ಶರಜಾ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣಾಲವಾಲ ಜಿಷ್ಣುಪರಿಪಾಲ ವಿಷ್ಣು ವಿಶ್ವವ್ಯಾಪಿಸಕಲ ದೃಷ್ಟಾದೀಶ ಕೃಷ್ಣಲೋಲ ಪ. ಪೊಳೆವ ಗರುಡ ಸ್ಕಂಧವೇರಿ ಘಳಿರನೆ ಪೋಗಿ ಜಲಜವ ಹರಿಸೆ ದೈತ್ಯ ಬಲವಕೊಂಡು ಬಂದ ಮುರನ ಥಳಥಳಿಪ ಚಕ್ರದಿಂದ ತಲೆಯ ಭೂಮಿಗಿಳಿಸಿ ಮೆರೆದ 1 ಧುರದಿ ಮಂತ್ರಿ ಸುತರ ತರಿದು ಕರಿಯನೇರಿ ಖತಿಯ ತಾಳ್ದ ನರಕನನ್ನು ನಳಿನಾಂಬಕಿಯ ಕರದಿ ಭಂಗಿಸಿ ಸರಸಿಜ ಸಂಭವದತ್ತ ವರದಿ ಸಕಲ ಸುರರ ಗೆಲಿದ ಗರುವನನ್ನು ನಿಲಿಸಿ ಕ್ಷಣದಿ ಶಿರವ ಚಂಡನಾಡಿದವನೆ 2 ಧಾತ್ರಿದೇವಿ ಬಂದು ನಾನಾ ಸ್ತೋತ್ರ ಗೈಯೈ ಕರುಣದಿಂದ ಪಾತ್ರಗೊಲಿದು ಸತ್ರಾಜಿತನ ಪುತ್ರಿ ಒಡಗೊಂಡು ಸುತ್ರಾಮ ಮಂದಿರವನೈದಿ ಚಿತ್ರ ತಾಟಂಕಗಳ ದಿತಿಗೆ ಪುತ್ರ ತಾನೆಂದಿತ್ತ ಶ್ರೀಕಳತ್ರ ನಿನ್ನ ನಂಬಿರುವೆನು 3 ಸೌಂದರ್ಯಸಾರೈಕ ನಿಲಯಾ ನಂದಬೋಧಾಧಾರಮೂರ್ತಿ ಇಂದಿರಾವತಾರೆ ಭಾಮೆ ಎಂದ ನುಡಿ ಕೇಳಿ ಮಂದಹಾಸದಿಂದ ನಗುತ ಮಂದವಾಯು ಸುಳಿವ ಸುರರ ನಂದನದೊಳಿಂದುಕಿರಣ ಛಂದದೊಳಾನಂದಗೊಂಡ 4 ವಾರಿಜಾಕ್ಷಿಯೆಂದ ನುಡಿಗೆ ಧೀರತನವ ತೋರಿ ದೇವ ಪಾರಿಜಾತ ವೃಕ್ಷವ ಸರ್ಪಾರಿ ಮೇಲಿರಿಸಿ ಸಾರೆ ಸ್ವರ್ಗನಾಥ ಸ್ವಪರಿವಾರ ಸಹಿತ ತಡಿಯೆ ಗೆದ್ದು ದ್ವಾರಾವತಿಗೆ ಪೋಗಿ ಮೆರದ ನೀರಜಾಕ್ಷ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಲವಾಲ ಪ ಸಿರಿಯರಸನೆ ನಿನ್ನ ಚರಣವ ನಂಬಿದೆ ಸುರಗಣ ಸೇವಿತ ಸುರರಾಜಪಾಲ ಅ.ಪ ಇಂದ್ರನಕೂಡಿ ಮುನೀಂದ್ರನ ಸತಿಶಾಪ ದಿಂದರೆಯಾಗಿರಲಂದು ನೀ ದಯದಿ ಸುಂದರ ಚರಣಾರವಿಂದಗಳಿತ್ತ ಧೂಳಿ ಯಿಂದ ಪಾವನಗೈದ ಇಂದಿರೇಶನೆ ನೀ 1 ಚಕ್ರವರ್ತಿಯು ಮರೆಹೊಕ್ಕರೆ ನುತಿಸಿ ರಕ್ಷಿಸಿದಾಪರಿಯಕ್ಕರೆ ತೋರಿಸಿ 2 ಶಿರಸರಿಸಕ್ಕೆ ಗುರಿಯಿಡಲು ನರನ ಶಿರವುಳುಹಿದ ಸಿರಿವರದವಿಠಲ ಹರಿ3
--------------
ವೆಂಕಟವರದಾರ್ಯರು
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸಬಾರದೇನು ಶರಣೆಂಬೆ ನಾನು ಕರುಣಿಸ ಬಾರದೆ ಮೊರೆಯ ಹೊಕ್ಕವನ ಶರಣಾಗತ ಪಂಜರನೆಂಬೊ ಬಿರುದಿರೆ ಪ ಸ್ತಂಭದಿ ನೀ ಬಂದು ದೈತ್ಯನ ಬೇಗ ಶೀಳಿಕೋಪದಿಂದ ಇರಲು ಆಗ ಬ್ರಹ್ಮೇಂದ್ರ ರುದ್ರ ವೃಂದ ಬೆದರಿ ಪೋಗೆ ಪ್ರಹ್ಲಾದನಾಗ ಇಂದಿರಾವರ ಗೋವಿಂದ ಕೃಪೆಯ ಮಾಡೆಂದು ಸ್ತುತಿಸೆ ಆನಂದದಿ ಕಾಯ್ದತಿ ಸುಂದರಮೂರ್ತಿ ಮುಕುಂದ ಧರಣಿಧರ ಸಿಂಧುಶಯನ ಅರವಿಂದನಯನ ಹರಿ 1 ದಶರಥ ಸುತನೆನಸಿ ಮುನಿಯಧ್ವರ ಕುಶಲದಿನ್ನುದ್ಧರಿಸಿ ಪಶುಪತಿ ಧನು ಭಂಜಿಸಿ ಸೀತೆಯ ಕೋರಿ ದಶರಥನಾಜ್ಞೆ ವಹಿಸಿ ಕಾನನದಿ ಚರಿಸಿ ಕುಶನಿಧಿಯನು ಬಂಧಿಸಿ ರಾವಣನ ದಶ ಶಿರಗಳ ಭರದಿಂದಲಿ ಖಂಡಿಸಿ ಅವನನುಜಗ ನಿಶದೊಳ್ ಶಿರಿಲಾಲಿಸಿ ಪೊರೆದ ಶ್ರೀಶಶಿಧರನÀು ಹರಿ 2 ನಕ್ರ ಭಂಗಬಡಿಸೆ ಗಜಗಳರಸ ರಂಗ ಮುರಾರಿ ದೇವೋತ್ತುಂಗ ಶ್ರೀ ಶ್ಯಾಮಲಾಂಗ ಭಕ್ತಾಭಿಮಾನಿ ಮಂಗಳಾರಸತ್ಸಂಗ ಜಗದಂತರಂಗ ವಿಹಂಗ ಸಿರಿ ನರಸಿಂಹ ಬಂದು ಶಾಪಂಗಳ ತರಿದೆ ಭುಜಂಗತಲ್ಪ ಕಾನಂಗಪಿತ 'ಹೆನ್ನೆರಂಗ' ಶರಣು ರಣರಂಗ ಭೀಮ ಹರಿ 3
--------------
ಹೆನ್ನೆರಂಗದಾಸರು
ಕರುಣಿಸಯ್ಯಾ ಕಂಜಜನಯ್ಯಾ | ಕರ್ಣರಹಿತ ಶಯ್ಯಾ ಕನಕಾದ್ರಿರಾಯಾ ಪ ಕರಿವರದನೆ ನಿನ್ನ ಚರಣ ನಂಬಿದೆ ಎನ್ನಪರಿಪಾಲಿಸುವದು ಪರಮ ಕೃಪಾಳೊ ಅ.ಪ. ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನುದಾಟಲಾರೆನೊ ನಾನೂ | ಇದೇನೊ ||ನಾಟಕಾಧಾರ ನಿನ್ನ | ನಂಬಿದಾ ಮೇಲೆ ಎನ್ನಬೂಟಕನೆನಸುವರೇ | ಮುರಾರೇ ||ಹಾಟಕಾಂಬರ ಧರ ಹರಿಯೇ ಕೇಳ್ವುದಿನ್ನು | ಕೋಟಿ ವ್ಯಾಳೆಗೆ ಭಕ್ತ ಕೋಟಿಯೊಳಗಿಟ್ಟು ಎನ್ನ | ನೀಟು ಮಾರ್ಗವ ತೋರಿ ಪಾಟುಪಡಿಪ ಯಮಕಾಟ ಕಳೆದು ದಿವ್ಯ ನೋಟದಿ ನೋಡು 1 ಕಂಸಾರಿ ಮುರಾರಿ2 ಇಂದಿರೆ ಜನನಿ ಗೋ-ವಿಂದ ಇನ್ನೊಬ್ಬರಿಲ್ಲ | ನೀ ಬಲ್ಲೆಲ್ಲಾ ||ಸುಂದರ ವಿಗ್ರಹನೆ | ಸುಗುಣ ಸಾಕಾರ ಶುಭಸಾಂದ್ರಾ ಭಕುತ ವತ್ಸಲ | ಗೋಪಾಲಾ ||ಎಂದೆಂದಿಗೆ ಎನ್ನಿಂದ ಅಗಲದೆ ಮುಕುಂದ ಮುನಿ ವೃಂದವಂದಿತ ಚರಣನೇ | ಸಿಂಧುಶಯನ ಶಿರಿ ಮೋಹನ ವಿಠಲ ಬಾ ಲೇಂದು ವದನ ಸುಗುಣ ಸಾಂದ್ರಾ ಉಪೇಂದ್ರಾ 3
--------------
ಮೋಹನದಾಸರು
ಕರುಣಿಸಲೊಲ್ಯಾ ಕರುಣಾನಿಧೇ ಪ ಕರುಣಿಸಲೊಲ್ಯಾ ನೀ ಕರುಣಸಾಗರ ನಿನ್ನ ಭವ ಅರಣ ದಾಟುವಂತೆ ಅ.ಪ ವಿಶ್ವವ್ಯಾಪಕನೆ ವಿಶ್ವಾಸುವಿಶ್ವ ನೀ ವಿಶ್ವ ಪ್ರೇರಕ ನಿನ್ನ ವಿಶ್ವಪಾದದೊಳು ನಾ ವಿಶ್ವಾಸಮಾಳ್ಪÀಂತೆ 1 ಜ್ಞಾನದಾಯಕನೆ ಜ್ಞಾನದಾಯಕ ಎನ್ನ ಜ್ಞಾನನಿಚಯ ನೀನೆ ಹಾನಿಮಾಡಿ ನಿನ್ನ ಜ್ಞಾನವನೈದೊಂತೆ 2 ಮಂದರೋದ್ಧರನೆ ಮಹಾರಾಯಾ ನಂದದಾಯಕನೆ ಇಂದಿರಾಪತಿ ನಿಜ ನಂದಕೊಡುವ ನಿನ್ನ ದ್ವಂದ್ವ ಚರಣದೊಳು ಸಂದೇಹವಿಲ್ಲದಂತೆ 3 ಕಾಮಿತಾರ್ಥವನೆ ಕಮಲಾಕ್ಷಾ ಕಾಮನ್ನಪಿತನೆ ಕಾಮಿತಾರ್ಥಗಳನ್ನು ಕಾಮಿಸದಲೆ ನಿನ್ನ ನಾಮವ ಭಜಿಸುವ ನೇಮಮತಿಯನಿತ್ತು 4 ಸೃಷ್ಟಿಕಾರಣನೆ ಶ್ರೀಕೃಷ್ಣಯ್ಯಾ ವೃಷ್ಣಿನಾಯಕನೆ ದುಷ್ಟಮತಿಯ ಬಿಡಿಸಿ ಶಿಷ್ಟಙÁ್ಞನವನಿತ್ತು ದಿಟ್ಟಗುರುಜಗನ್ನಾಥ ವಿಠಲ ನೀ ಎನ್ನ 5
--------------
ಗುರುಜಗನ್ನಾಥದಾಸರು
ಕರುಣಿಸಿ ಕೇಳು ಕಂದನ ಮಾತಗರುಡವಾಹನನೆ ಗಂಗೆಯ ಪೆತ್ತ ಹರಿಯೆಪ. ಇತ್ತ ಬಾರೆಂಬುವರಿಲ್ಲ ಇರವ ಕೇಳುವರಿಲ್ಲಹತ್ತಿಲಿ ಕುಳ್ಳಿರು ಎಂಬ ದಾತರಿಲ್ಲತತ್ತರಗೊಳ್ಳುತಲಿದೆ ತಾವರೆಯೆಲೆಯೊಳನೀರಿನಂತೆಹತ್ತು ನೂರಾರು ನಾಮವುಳ್ಳ ಶ್ರೀಹರಿಯ ನೀ ಕೇಳೊ1 ಇಂದು ಬಂಧನವಿಲ್ಲ ಇದ್ದವ ಕೇಳುವುದಿಲ್ಲಒಂದು ಸುತ್ತಿಗೆ ಬಟ್ಟೆಯಾದರೂ ಇಲ್ಲ ಈಬೆಂದೊಡಲಿಗೆ ಒಬ್ಬ ಅಯ್ಯೋ ಎಂಬುವನಿಲ್ಲಬಿಂದು ಮಾತ್ರದಲ್ಲಿ ಸುಖವ ಕಾಣೆ ಹರಿಯೆ 2 ಎಲ್ಲಿಯೂ ಧಾರಣೆಗೊಂದು(?)ನೆರಳನು ಕಾಣೆ[ಅಲ್ಲವÀÀತಿಂದಿಲಿಯಂತೆ]ಬಳಲುತಿದ್ದೆಫುಲ್ಲಲೋಚನ ಪೂರ್ಣ ಹಯವದನ[ಸಲ್ಲುವ]ನಾಣ್ಯವ ಮಾಡಿ ಸಲಹೋ ಎನ್ನ ಹರಿಯೆ 3
--------------
ವಾದಿರಾಜ
ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ 1 ಸುಂದರಕಾಯ ಇಂದಿರೆಯ ಪ್ರಾಣಪ್ರಿಯ ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ 2 ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ ಘಾಸಿ ಮಾಡದೆ ಸಲಹಯ್ಯ 3
--------------
ರಾಮದಾಸರು
ಕರುಣಿಸೆನ್ನೊಳು ದೀನಬಂಧು ಪ. ಕರುಣಿಸೆನ್ನೊಳಿರುವ ಸಕಲದುರಿತಜಾತ ರೋಗಗಳನು ಪರಿಹರಿಸಿ ಪಾದಾರವಿಂದ ಸಿರದೊಳಿರಿಸಿ ಸಲಹು ಬೇಗ ಅ.ಪ. ಮೂರು ವಿಧದಲಿ ಸುತ್ತಿಕೊಂಡ ಘೋರ ತಾಪದಿ ಸೂರೆಗೊಳುವ ಗಹನ ಸಂಸಾರ ಕೂಪದಲ್ಲಿ ಬಿದ್ದು ಚೀರುತಿಹೆನು ಚಿತ್ತದಲ್ಲಿ ತಾರೊ ತರಳಗೊಲಿದ ದೇವ 1 ಆದಿ ಭೌತಿಕಾದೇಹಜನಿತಾಗಾಧ ಮೋಹ ತಾ ಬಾಧೆ ಸಹಿಸಲಾರೆ ಮುನಿಸಮಾಧಿಗಮ್ಯ ನಿನ್ನ ಮರವ ವೇಧೆ ವದಗಿ ಬರುವ ಮೊದಲೆ ಮಾಧವನೆ ಮದೀಯನೆಂದು 2 ಮಂದನಾದೆನು ಮಮತೆಯಿಂದ ಕುಂದಿಹೋದೆನು ಮುಂದುಗಾಣವಂದ ಕಾಣದಿಂದು ನಿನ್ನ ಬೇಡಿಕೊಂಬೆ ಇಂದಿರೇಶ ವೆಂಕಟೇಶ ಎಂದು ನಿನ್ನ ಪದವ ಕಾಂಬೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸೊ ಕರುಣಿಸೊ ಗುರುವೆಂಕಟೇಶ ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ ಬಿನ್ನಹವ ಪಾಲಿಸೊ ಚಿನುಮಯ ರೂಪ ಉನ್ನತ ಮಹಿಮ ನೀ ಘನ್ನ ಗುರು ಕೃಪ 1 ಅನಾಥ ಬಂಧು ನೀ ಶರಣ ರಕ್ಷಕ ಅನಂತ ಕೋಟಿ ಬ್ರಹ್ಮಾಂಡ ನಾಯಕ 2 ವಾಸುದೇವ ಚಿದ್ರೂಪ ದೇಶಿಕರದೇವ ಭಾಸಿ ಪಾಲಿಪ 3 ವಂದಿತ ತ್ರೈಲೋಕ್ಯ ವೇದಾಂತ ಮಹಿಮ ಇಂದಿರಾಪತಿ ಘನಗುರುಬ್ರಹ್ಮ 4 ಶ್ರೀನಾಥ ನೀನಲ್ಲದೆ ನನಗಾರು ಇಲ್ಲ ನೀನೆ ಸಕಲಪೂರ್ಣ ಭಕ್ತವತ್ಸಲ 5 ಮತಿಹೀನನವಗುಣ ನೋಡದಿರೆನ್ನ ಕ್ಷಿತಿಯೊಳು ಸದ್ಗೈಸೊ ಪತಿತಪಾವನ 6 ದೀನನಾಥ ನೀ ಬಂದು ಮನದೊಳು ನಿಂದು ಮನ್ನಿಸಿ ದಯಬೀರೊ ಘನಕೃಪಾಸಿಂಧು7 ವಿಶ್ವವ್ಯಾಪಕ ಸಾಧುಹೃದಯನಿವಾಸ ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ ¨Àವಜನ್ಮದಲಿ ಬಂದು ಬಹುಬಳಲಿದೆ ನಾನು ಅವಿದ್ಯದಾಟಕೆ ಐವರು ಕೂಡಿ ತಾ ಜೀವನ ಮುಕ್ತಿಗಾಣಿಸಗೊಡದಿಹರು 1 ಮೂರೊಂದು ಮಂದಿಯು ಸೇರಗೊಡದೆ ಪಥ ಆರುಮಂದಿಯ ಕೂಡಿ ಕಾಡುತಲಿ ಆರು ಮತ್ತೆರಡುಮಂಡೆಯ ಕಾವಲಿಗೆ ನಾನು ಆರೆನಯ್ಯ ಶ್ರೀಗುರುಶಿರೋಮಣಿಯೆ 2 ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತಿವ ತಾರಿಸಿ ಮೂಢsÀಮಹಿಪತಿಯ ಸಂತತ ಸದ್ಗತಿಸುಖ ಈವುದೆನಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೋ ಕೃಷ್ಣ ಕರುಣಿಸೊ | ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ ಭೂತಳದೊಳು ನಾನು ಈ ತನುವುತೆತ್ತು | ಪಾತಕದಲಿ ಯಮಯಾತನೆ ಪಟ್ಟೆ 1 ಇಂದೆನ್ನ ಹೃದಯವೆಂಬೊ ಮಂದಿರದೊಳು | ಇಂದಿರೆ ರಮಣ 2 ಹಿಂದಿನ ಅವಗುಣ ಒಂದೂ ಎಣಿಸದೆ | ಮುಂದೆ ದೋಷಕ್ಕೆ ಮನವೆರಗಿಸದೆ 3 ಪಾಪ ಪುರುಷನೆಂಬೊ ಪಾಪಿಯ ಕೈಗೆ | ಪೋಪಗೊಡದೆ ಎನ್ನ ಕಾಪಾಡೊ ರನ್ನ 4 ಅಂತ್ಯಕಾಲದಲಿ ಅಂತಕರು ಬಂದು | ನಿಂತಾಗಲಿ ನಿನ್ನ ಚಿಂತೆ ಒದಗಲಿ 5 ಕನಸಿನೊಳಗೆ ನಿನ್ನ ನೆನಸಿಕೊಂಬಂತೆ | ಮನಸು ಸುಸ್ಥಿರವಾಗಲಿ ಅನುಗಾಲವಿರಲಿ 6 ಇದ್ದಾಗ ದಾಸರದಾಸನೆನಿಸೊ ಬೇಗ | ಸಿರಿ ವಿಜಯವಿಠ್ಠಲ ಕರುಣಿಸೊ 7
--------------
ವಿಜಯದಾಸ
ಕರುಣಿಸೋ ಗುರು ತಾರಿಸೋ ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ ಭವ ಜನ್ಮದಲಿ ಬಂದು ಬಹು ಬಳಲಿದೆ ನಾನು ಮೂವಿಧ ಬಲೆಯಲಿ ಸಿಲುಕಿ ಜೀವನವು ಅವಿದ್ಯ ದಾಟಕ ಐವರು ಕೂಡಿ ತಾಂ ಜೀವನ ಮುಕ್ತಿಗಾಣಿಸಗುಡದಿಹರು 1 ಮೂರೊಂದು ಮಂದಿಯ ಸೇರುಗುಡದೆ ಪಥ ಅರುಮಂದಿಯು ಕೂಡಿ ಕಾಡುತಲಿ ಆರುಮತ್ಯೆರಡು ಮಂದಿಯ ಕಾವಲಿಗೆ ನಾನು ಆರಯ್ಯ ಶ್ರೀಗುರು ಶಿರೋಮಣಿಯ 2 ಹತ್ತು ಹೊಳೆಯ ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತವತಾರಿಸಿ ಮೂಢ ಮಹಿಪತಿಯ ಸಂತತಸದ್ಗತಿ ಸುಖ ಈವ ಘನಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು