ಒಟ್ಟು 340 ಕಡೆಗಳಲ್ಲಿ , 60 ದಾಸರು , 289 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಹೇಳಲಿ ವೆಂಕಟಗಿರಿಯ ದೃಷ್ಟಿಗೆ ಬಹು ಸಿರಿಯ ಬೆಟ್ಟವನೆ ಮನಸಿಟ್ಟೇರಲು ಬೇಡಿದ ಇಷ್ಟಾರ್ಥಗಳ ಈಡಾಡುವ ದೊರೆಯ ಪ ಚಿತ್ರ ವಿಚಿತ್ರದ ಮಹಾದ್ವಾರ ಚಿನ್ನದ ಗೋಪುರ ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ ಸುತ್ತಲು ಪ್ರಾಕಾರ ಹೆಚ್ಚಿನ ತೀವ್ರತವೆ ಮನೋಹರ ಮಾರುವ ವಿಸ್ತಾರ ಚಿತ್ತಜನಯ್ಯನ ಶೈಲವೆ ದೂರದಿಂ- ದ್ಹತ್ತಿ ಬರುವುದೀತನ ಪರಿವಾರ 1 ಕಟ್ಟಿದ ಉಡಿದಾರ ಉಟ್ಟಿದ್ದ ನಿರಿಜರಪೀತಾಂಬರ ಕೌಂಸ್ತುಭ ಮಣಿಹಾರ ಗಟ್ಟಿ ಕರಕಂಕಣ ಕುಂಡಲಧರ ಚತುರ್ಭುಜದಲಂಕಾರ ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ- ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2 ಆಕಾಶರಾಜನ ಕಿರೀಟ ಚಿತ್ರವು ಬಹುಮಾಟ ಹಾಕಿದ್ದ ಹರಿ ಕಡೆಗಣ್ಣಿನ ನೋಟ ಭಕ್ತರ ಕುಣಿದಾಟ ಭವ ಪಡಿಪಾಟ ಬಿಡಿಸುವ ಯಮಕಾಟ ಕೋಟಿ ಜನರ ಓಡ್ಯಾಟವೆ ನಮ್ಮ ಕಿ- ರೀಟಿಯ ಸಖ ಕೇಶವನ ಮಂದಿರದೊಳ್ 3 ತಪ್ಪುಗಾಣಿಕೆಯ ಬೇಡುವ ಸರ್ಪ ಶೈಲದ ತಿಮ್ಮಪ್ಪ ಕಪ್ಪವ ಕಾಸು ಕವಡೆ ಮುಡುಪು ಹಾಕದೆ ತಾನೊಪ್ಪ ಜಪ್ಪಿಸಿ ನೋಡುವ ಜನರ ತಪ್ಪ ಹುಡಿಕ್ಯಾಡುತಲಿಪ್ಪ ಅಪ್ಪ ಮಹಿಮಾನಂತ ಮೂರುತಿ ತಾ- ನೊಪ್ಪಿದರೊಲಿದು ಕೊಡುವ ಸಾರೂಪ್ಯ 4 ದೇಶದೇಶದೊಳು ಈತನ ವಾರುತೆಯು ತುಂಬಿದ ಕೀರುತಿಯು ಆಸೆಯ ದೈವ ಈ ಮೂರುತಿಯು ಫಲ್ಗುಣ ಸಾರಥಿಯು ಲೇಸಾಗಿ ಜನರ ನೋಡುವ ರತಿಯು ಕರ್ಪುರದಾರತಿಯು ವಾಸವಾಗಿರುವ ಈ ಶೇಷಾದ್ರಿಯಲಿ ಭೀ- ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5
--------------
ಹರಪನಹಳ್ಳಿಭೀಮವ್ವ
ಎಸೆವ ಸಮುದ್ರವ ಮಥನ ಮಾಡಿತಯ್ಯಾ ನಿನ್ನ ನಾಮ ಹರಿ ಶಶಿಧರ ಶಿವನಿಗೆ ಶಾಂತಿಮಂತ್ರಾಯ್ತಯ್ಯಾ ನಿನ್ನ ನಾಮ ಪ ಚೋರನೆನಿಸಿವನ ಸೇರಿಕೊಂಡವನಿಗೆ ನಿನ್ನ ನಾಮಾ ಪಾರ ಜ್ಞಾನವಿತ್ತು ಮುಂದಕ್ಹಾಕಿತಯ್ಯಾ ನಿನ್ನ ನಾಮ1 ಮೀರಿದ ನಿನ್ನ ಮಾಯೆಗೆ ಸಿಲ್ಕಿದ್ಯೆತಿವರಗೆ ನಿನ್ನ ನಾಮ ಭೂರಿಕರುಣದಿನೆರಗಿ ರಕ್ಷಿಸಿತಯ್ಯಾ ನಿನ್ನ ನಾಮ 2 ಅಮೃತ ಮಾಡುಣಿಸಿ ಪಾಲಿಸಿತಯ್ಯಾ ನಿನ್ನ ನಾಮ 3 ಕಡುರೋಷದೆಸೆದ ವಜ್ರಾಯುಧದೆಚ್ಚೆ ನಿನ್ನ ನಾಮ ಸಿಡಿ ಮುಳ್ಳಿಗಿಂತ ಕಡೆಮಾಡಿಬಿಟ್ಟಿತಯ್ಯಾ ನಿನ್ನ ನಾಮ 4 ನೂರುಯೋಜನದ ವಿಸ್ತೀರ್ಣದ್ವಾರಿಧಿಯ ನಿನ್ನ ನಾಮ ತೋರಿಸಿತೊಂದು ಕಿರಿ ಸರೋವರ ಸಮಮಾಡಿ ನಿನ್ನ ನಾಮ 5 ಮೀರಿದ ದೈತ್ಯರಪಾರಂಗರುವಮಂ ನಿನ್ನ ನಾಮ ಹೀರಿ ಕ್ಷಣದಿ ಸುರಲೋಕ ಸೇರಿಸಿತಯ್ಯಾ ನಿನ್ನ ನಾಮ 6 ತ್ರಿಣಯರ್ಹೊಗಳಲು ಶಕ್ತಿ ಸಾಲದ ಪಟ್ಟಣ ನಿನ್ನ ನಾಮ ಅಣುಗಿಂತ ಅಣುಮಾಡಿ ತೋರಿಸಿತ್ಹನುಮಂಗೆ ನಿನ್ನ ನಾಮ 7 ಅಸಮಪರಾಕ್ರಮ ಅಸುರಕುಲಾಳಿಯಂ ನಿನ್ನ ನಾಮ ನಶಿಸೆ ಶಿವಪುರ ಭಸ್ಮಮಾಡಿತಯ್ಯಾ ನಿನ್ನ ನಾಮ 8 ಪಕ್ಷಿಗಮನ ಪಾಂಡುಪಕ್ಷನೆನಿಸಿತಯ್ಯಾ ನಿನ್ನ ನಾಮ ಅಕ್ಷಯಾಂಬರವಿತ್ತು ಸತಿಯ ರಕ್ಷಿಸಿತಯ್ಯಾ ನಿನ್ನ ನಾಮ 9 ಕಾದು ದಳ್ಳುರಿಹತ್ತಿದೆಣ್ಣೆ ಕೊಪ್ಪರಿಗೆಯ ನಿನ್ನ ನಾಮ ಸುಧನ್ವಂಗನುಪಮ ಶೀತಲವೆನಿಸಿತು ನಿನ್ನ ನಾಮ 10 ಅರಿತು ಭಜಿಪರ ಭವರೋಗಕ್ವೈದ್ಯೆನಿಸಿತು ನಿನ್ನ ನಾಮ ಅರಿದು ಭಜಿಪೆ ನಿನ್ನವರ ಮುಕ್ತಿ ಕರುಣಿಸೋ ಸಿರಿರಾಮ 11
--------------
ರಾಮದಾಸರು
ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಏನು ಇದ್ದರೇನು ನಿನ್ನ ಸಂಗದ ಸಂಗಡ ಬಾರದೇನು ದಾನ ಧರ್ಮವ ಮಾಡಿದ್ದೊಂದು ಬೆನ್ನಬಿಡದದೇನು ಪ ಆಳು ಕಾಳು ಮಂದಿ ಮನುಷರು ಬಹಳವಿದ್ದರೇನು ಮಾಳಿಗೆ ಕೈಸಾಲೆ ಚಂದ್ರಶಾಲೆಯಿದ್ದರೇನು ನೀಲ ಮುತ್ತು ಕೆಂಪಿನುಂಗುರ ಕೈಯಲಿದ್ದರೇನು ಕಾಲನವರು ಎಳೆಯುತಿರಲು ನಾಲಗೆಗೆ ಬಾರದೇನು 1 ನೆಟ್ಟ ಹತ್ತಿಲು ತೋಟ ತೆಂಗು ಎಷ್ಟುತಾನಿದ್ದರೇನು ಮಹಿಷಿ ಸಾವಿರವಿದ್ದರೇನು ಪಟ್ಟೆ ಶಾಲು ಚಿನ್ನದ ಕುಳದ ಘಟ್ಟಿಯಿದ್ದರೇನು ಕಟ್ಟಿಯಿಟ್ಟ ಗಂಟುನಿನ್ನ ಸಂಗಡ ಬಾರದೇನು 2 ಲಕ್ಷವಿತ್ತ ಜಯಿಸಿ ರಾಜ್ಯ ಪಟ್ಟವಾದರೇನು ಕಟ್ಟಿದಾನೆ ಮಂದಿ ಕುದುರೆ ಹತ್ತಿರಿದ್ದರೇನು ನೆಟ್ಟನೆ ಜೀವಾತ್ಮ ಗೂಡ ಬಿಟ್ಟು ಪೋಗದೇನು ಕುಟ್ಟಿ ಕೊಂಡಳುವುದರೆ ಮಂದಿ ಎಷ್ಟು ಇದ್ದರೇನು 3 ಮಕ್ಕಳು ಮೊಮ್ಮಕ್ಕಳು ಹೆಮ್ಮಕ್ಕಳಿದ್ದರೇನು ಚಿಕ್ಕ ಪ್ರಾಯದ ಸತಿಯು ಸೊಸೆದಿಕ್ಕಳಿದ್ದರೇನು ಲೆಕ್ಕವಿಲ್ಲದ ದ್ರವ್ಯ ನಿನಗೆ ಸಿಕ್ಕುಯಿದ್ದರೇನು ಡೊಕ್ಕೆ ಬೀಳೆ ಹೆಣವ ಬೆಂಕಿಗಿಕ್ಕಿ ಬರುವರೋ 4 ಹೀಗೆ ಎಂದು ನೀನು ನಿನ್ನ ತಿಳಿದು ಕೊಳ್ಳಬೇಕೋ ಆಗೋದ್ಹೋಗೋದೆಲ್ಲ ಈಶ್ವರಾಜÉ್ಞ ಎನ್ನ ಬೇಕೋ ವೈರಿ ಕೋಣೆ ಲಕ್ಷ್ಮೀರಮಣನ ಭಜಿಸಬೇಕೋ ಯೋಗ ಮಾರ್ಗದಿಂದ ನೀನು ಮುಕ್ತಿ ಪಡೆಯ ಬೇಕೋ 5
--------------
ಕವಿ ಪರಮದೇವದಾಸರು
ಏನು ಹೇಳಲಿ ನಾ ಧೇನುಪಾಲಕನಆನನವ ತೋರಿ ಧ್ಯಾನ ಹಚ್ಚೆಹನು ಪ ಸುತ್ತ ತಿರುಗುವಾಗ ಹತ್ತಿರಕೆ ಬಂದುಚಿತ್ತ ಸುಖಿಸಿ ಪೋದ ಮುತ್ತಿನಂಥ ಬಾಲ 1 ಸಣ್ಣ ಕಂದನೆಂದು ಚಿನ್ನಾಭರಣನಿಟ್ಟುಬೆನ್ನಿನ್ಹಿಂದೇ ಬಂದು ತನ್ನ ತೋರಿದನು 2 ನಂದಬಾಲಕನ ಎಂದು ಕಾಂಬೆನೆಂದುನಂದು ಮನಸ್ಸು ಹರಿವುದು ಇಂದಿರೇಶ ಕೃಷ್ಣ3
--------------
ಇಂದಿರೇಶರು
ಏನೆಂದು ಬಣ್ಣಿಪೆನೆ ಈ ನವ್ಯವಿಗ್ರಹನೆ ಮನದನ್ನನಾದನೆ ವನಜನಯನೆ ತೊಳೆದಕೆಂಡದ ಕಾಂತಿ ಮೊಳದುದ್ದ ಮೋರೆಯು ಕೊಳಗುಳದ ಮನವಿತ್ತು ಮೊಳಗುತಿಹನು ಕತ್ತಿಯನು ಪಿಡಿದೆತ್ತಿ ಉತ್ತಮಾಶ್ವವ ಹತ್ತಿ ಅತ್ಯಂತ ರೋಷದಿಂ ಸುತ್ತುತಿಹನು ಕೊಲೆಗೆ ಹೇಸದ ವÀರನೆ ಪಲಜನರ ಕಡಿದವನೆ ಕಲಿತಾನೆ ಎನುತಿಹನೆ ಕಲ್ಕಿಯಿವನೆ ಇಂತಿರ್ಪ ವರಗೆ ಮನಸೋತು ನಾನು ಕಾಂತನೆಂದಾಡಿದೆನು ಪೇಳ್ವುದೇನು ಶಾಂತಗುಣ ಶೇಷಾದ್ರಿನಿಲಯ ತಾನು ಸಂತತವು ಭಕ್ತರನು ಸಲಹನೇನು
--------------
ನಂಜನಗೂಡು ತಿರುಮಲಾಂಬಾ
ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ
ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ಪ ತುಂಬಿ ಭಾನು ಪ್ರಭೆ ಚಂದಮಾಮಅ ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ 1 ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ 2 ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ 3 ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ 4 ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ 5 ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ 6 ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮಸುಲಭ ಪದವಿದು ನಳಿನಜಾಂಡದೊಳು ಚಂದಮಾಮ 7 ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ 8 ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ 9
--------------
ಕನಕದಾಸ
ಒಳಿತಲ್ಲ ನಿನ್ನ ತಳ್ಳಿ ಅಭಿಮಾನದೇವಿ ಎಲೆ ತಾಯೆ ನಮಿಸುವೆನು ದೂರಾಗೆ ಮಾಯಿ ಪ ಬಗೆಗೊಂಡು ಬ್ರಹ್ಮನ ತಲೆಯೊಂದು ಕಳೆದಿಟ್ಟು ಹೆಗಲೇರಿ ಶಿವನ ಸುಡುಗಾಡದಿಳಿಸಿದಿ ಜಗರಕ್ಷಕನನು ಹತ್ತು ಅವತಾರದೆಳಸಿದಿ ನಿಗಯಿಟ್ಟಂದ್ರನ ಮೈ ಛಿದ್ರ ಮಾಡಿಟ್ಟಿ 1 ಸೆರೆಹಿಡಿದು ತಾರಕನ ಆರೆದಿನದವನಿಂ ಕೊಂದಿ ಕರಪಿಡಿದು ಹಿರಣ್ಯನ ಅಸಮವರ ಸುಟ್ಟಿ ನೆರೆಯಾಗಿ ರಾವಣ ಆರುಕೋಟ್ಯಾಯುಷ್ಯ ಉರುತರದ ಸಿರಿಯೆಲ್ಲ ಮಾಯ ಮಾಡಿಟ್ಟಿ 2 ಸೆಳೆಕೊಂಡು ಕುರುಪನ ಕುಲನಾಶ ಮಾಡಿಟ್ಟಿ ಒಲಿದು ಕಲಿಯುವಗೆಲ್ಲ ನುಂಗಲ್ಹತ್ತಿರುವಿ ಸುಲಭದೆನ್ನನು ಬಿಟ್ಟು ಅಗಲದಿರ್ದರೆ ನಿನಗೆ ಜಲಜಾಕ್ಷ ಶ್ರೀರಾಮನೊನರುಹಂಘ್ರ್ಯಾಣೆ 3
--------------
ರಾಮದಾಸರು
ಕಡಲಶಯನ ಹರಿಯ ತೊಡೆಯಲ್ಲಿ ಮಡದ್ಯೇರಿಬ್ಬರು ಕುಳಿತು ಪ ಪನ್ನಂಗಶಯನ ಕೇಳೆ ಸ್ವಾಮಿ ನೀ ಎನ್ನ ಮನೆಗೆ ಏಳೊ ನಿನ್ನ ಪಾದಕ್ಕೆ ಎರಗುವೆನೆಂದು ಭಾಮೆ ಕೈ- ಯನ್ನು ಮುಗಿದಳಾಗ 1 ಎನ್ನ ಮನೆಯಲ್ಲಿದ್ದ ಶ್ರೀಹರಿ- ಯನ್ನು ಕರೆಯಲವರ ಕಣ್ಣೇಸೆನುತಲಿ ಕರ್ಣಿ(ನ್ಯೆ?) ರುಕ್ಮಿಣಿ ಕೋಪ- ವನ್ನು ಧರಿಸಲಾಗ 2 ಎಷ್ಟು ಹಣವ ನೀನು ಕೃಷ್ಣಗೆ ಕೊಟ್ಟು ಕೊಂಡಿ ಹೇಳೆ ದಿಟ್ಟತನದ ಮಾತಾಡೋ ರುಕ್ಮಿಣಿ ನಿನ್ನ ಶ್ರೇಷ್ಠತನವೇನ್ಹೇಳೆ 3 ಹತ್ತು ಆರು ಸಾವಿರದಷ್ಟ ಭಾರ್ಯೇರವೊಳಗೆ ಸತ್ಯಭಾಮೆ ಉತ್ಕøಷ್ಟ ಚೆಲುವೆಯೆಂದು ಕೃಷ್ಣ ನಿನ್ನಲ್ಲಿಹನೆ4 ಹದಿನಾಲ್ಕು ಲೋಕದಲಿ ಹರಿ ಪಾದಾಂಬುಜವ ಕಾಂಬುವೋರಿಲ್ಲೆ ಯದುನಾಥನ ಎದೆ ಮ್ಯಾಲ್ಹತ್ತಿರುವೋದು ಇದು ಸೋಜಿಗವಲ್ಲೆ 5 ಇಷ್ಟೆ ಸೋಜಿಗವೆಂದು ಆಡಲು ದಿಟ್ಟೆ ನಿನಗೆ ಅರಿದೆ ಅಷ್ಟದಿಕ್ಪಾಲಕರನೆ ಓಡಿಸಿ ವೃಕ್ಷ ಕಿತ್ತು ಒದರು(ರುವು?) ದಲ್ಲೆ 6 ಜಲಪ್ರಳಯ ಕಾಲದಲಿ ಜನರಿಲ್ಲದ ಅಂಧಕಾರದಲಿ ಎಲೆಯಾಗಾ ಪರಮಾತ್ಮನ ಮನವ ನೀ ಮೊ- ದಲೆ ಒಲಿಸಿಕೊಂಡೆ 7 ಕಾದು ಸೇವಿಸೆ ಹರಿಯ ಪಾದದ- ಲ್ಲಾದರವಿಲ್ಲದಲೆ ದಾನ ಮಾಡುತ ಮುನಿಹಿಂದಟ್ಟಿದರ್ಹರಿ ಹ್ಯಾಗೆ ಬರುವನ್ಹೇಳೆ 8 ಮೂರು ಲೋಕದ ದೊರೆಯ ಮೂರೆಲೆ ತುಳಸಿ- ಸರಿಯ ಮಾಡಿ ಮುಕುತಿದಾಯಕ ಕೈವಶವಾ- ಗಿರಲು ನೀ ಸಕಲ ಮಾಯವ ಬಲ್ಲೆ 9 ಪಟ್ಟದ್ವೊಲ್ಲಭೆ ನಾನು ಕೃಷ್ಣಗೆ ಮೆಚ್ಚಿ ಬಂದೆಯೆ ನೀನು ಅಚ್ಚುತ ತಾ ಪರಮಾನುಗ್ರ(ಹ)ವ ಮಾಡಿ ಬಂ- ದಿಚ್ಛೆಲಿರುವ ತಾನು10 ಮಾತಾಪಿತರು ಅನುಜನನ್ವಂಚಿಸಿ ಈತಗ್ವಾಲೆಯ ಬರೆದು ಯಾತಕಂಜಿಕೆ ವಲಿಸ್ಯೋಡಿ ಬಂದವಳೆಂದು ಕೀರ್ಹೊಗಳುವುದಲ್ಲೆ 11 ತಂದು ಕೊಡಲು ಮಣಿಯ ಸಭೆಯೊಳು ಅಂದು ತಗ್ಗಿಸಿ ತಲೆಯ ನಿಂದ್ಯದ ಮಾತಿಗೆ ತಂದು ನಿಮ್ಮಯ್ಯ ಮುಂದಿಟ್ಟು ಪೋದನೆ ನಿನ್ನ 12 ಕೇಳೊ ಕೇಳೊ ನುಡಿಯ ನೀನೀ- ರೇಳು ಲೋಕದ ಒಡೆಯ ಹೇಳೋ ಬುದ್ಧಿ ನಿನ್ನಯ ವಲ್ಲಭೆ ಮಾತಾ- ಡೋಳೊ ನಿರ್ಭಿಡೆಯ 13 ರಕ್ಕಸಾಂತಕ ಕೇಳೊ ನಿನ್ನ ಚಿಕ್ಕವಲ್ಲಭೆ ಮ(ಹಿ)ಮೆ ಉಕ್ಕಿ ಉಕ್ಕಿ ಎನ್ನ ಮ್ಯಾಲೆ ಬರಲು ನಿನ- ಗಕ್ಕರ ತೋರುವುದೆ 14 ಆರ್ಯಳೆಂದು ನಾನು ತಾಳಿದೆ- ನಕ್ಕ ರುಕ್ಮಿಣಿ ಮಾತ ಏರಿ ಏರಿ ಏನ್ನಮ್ಯಾಲೆ ಬರಲು ಇದು ನ್ಯಾಯವೇನೊ ನಿನಗೆ 15 ನಾಲ್ಕು ತೋಳಿನಿಂದ ಆಲಿಂಗಿಸಿ ಕಾಂತೆಯರಿಬ್ಬರನು ಯಾತಕಿಂಥ ಕದನವು ಘನವಾಯಿತು ಸಾಕು ಸಾಕುಯೆನುತ16 ವಾರಿಜಾಕ್ಷ ಕೇಳೋ ನಾರದ- ರ್ಹೂಡಿದರೀ ಜಗಳ ಪಾರಿಜಾತ ಸರಿಸವತಿಗೆ ಕೊಟ್ಟ- ರಿನ್ಯಾರು ಸೈರಿಸೋರ್ಹೇಳೊ 17 ನಂದನವನ ತರುವ ನಾ ತಂದಿಟ್ಟೆನಂಗಳದಲ್ಲೆ ಅಂದಿಬ್ಬರನಾನಂದವ ಬಡಿಸಿದ ಚೆಂದದಿಂದಲಿ ನಗುತ 18 ಭಾಮೆ ರುಕ್ಮಿಣಿ ಸಹಿತ ನಡುವೆ ಭೀಮೇಶ ಕೃಷ್ಣನು ಕುಳಿತ ಕಾಮನಯ್ಯನ ಚರಿತ್ರೆಯ ಪಾಡ- ಲಮೃತ ಪಾನವು ನಿರುತ 19
--------------
ಹರಪನಹಳ್ಳಿಭೀಮವ್ವ
ಕಂಡೆವಯ್ಯ ನಿಮ್ಮ ಗುರುಪುಣ್ಯ ಚರಣಮಹಿಮೆ ಮಂಡಲದೊಳು ಗುರುಕೃಪೆಯಿಂದ ದ್ರುವ ಕಣ್ಣಮುಚ್ಚಿದರೆ ತಾ ಕಣ್ಣನೊಳಗದೆ ಕಣ್ದೆರದರೆ ಕಾಣಿಸುತದೆ ಸಣ್ಣ ದೊಡ್ಡದರೊಳು ತುಂಬಿತುಳುಕುತದೆ ಬಣ್ಣ ಬಣ್ಣದಲೆ ಭಾಸುತಲ್ಯದೆ 1 ಆಲಿಸಿಕೇಳಲು ಹೇಳಗುಡುತಲ್ಯದೆ ತಾಳಮೃದಂಗ ಭೇರಿ ಭೋರಿಡುತ ಒಳಹೊರಗೆ ಧಿಮಿಧಿಮಿಗೊಡುತಲ್ಯದೆ ಹೇಳಲಿನ್ನೇನು ಕೌತುಕವ 2 ಸುಳಿ ಸುಳಿದಾಡುತಹೊಳೆಯುತ ಎನ್ನೊಳಗೆ ಥಳಥಳಿಸುವ ತೇಜ:ಪುಂಜವಿದು ಪರಿ ಕಳೆದೋರುತಲ್ಯದೆ ಝಳಝಳಿಸುತ ಎನ್ನ ಮನದೊಳಗೆ 3 ತುತ್ತಾಯಿತಾ ಮಾಡಿನಿತ್ಯ ಸಲುಹುತದೆ ಎತ್ತಹೋದರೆ ತನ್ನಹತ್ತಿಲ್ಯದೆ ದತ್ತವುಳ್ಳವಗೆ ತಾ ಪ್ರತ್ಯಕ್ಷವಾಗ್ಯದೆ ಮೊತ್ತವಾಗ್ಯದೆ ತನ್ನ ನೆತ್ತಿಯೊಳಗೆ 4 ಧನ್ಯಗೈಸಿತು ಎನ್ನ ಪ್ರಾಣ ಜೀವನವಿದು ಚೆನ್ನಾಗಿ ಪೂರ್ಣ ಗುರುಕೃಪೆಯಿಂದ ಕಣ್ಣಾರೆ ಕಂಡೆ ಭಾನು ಕೋಟಿಪ್ರಕಾಶ ನಿಮ್ಮ ಧನ್ಯಧನ್ಯವಾದ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಮಲನಾಭ ಕ್ಷಮೆಯಳೆದ ಪಾದ ರಮೆಯರಸನೆ ರಮ್ಯ ಚರಿತ ಕಮಲ ಪಾದವ ತೋರೋ ಅ.ಪ. ಸೂರ್ಯ ತೇಜ ಪೊಳೆವ ಶೇಷಶಯನ ತಲ್ಪದಿ ಹಾಟಕಾಂಬರಧರ ಕಿರೀಟ ಮಾಲ ಶೋಭ ಕೃಷ್ಣನೆ ಸಾಟಿಯಿಲ್ಲದ ಕರದಿ ಲಕುಮಿ ಧಾಟಿಯಿಂದ ವೊತ್ತುವ ಪಾದ ಸಾಟಿಯಿಲ್ಲದೆ ನಿನ್ನ ಭಕ್ತರ ಪೊರೆವ ದೇವ ನಿನ್ನ ಪಾದವು 1 ದುಷ್ಟರನ್ನು ಮೆಟ್ಟಿ ತುಳಿದ ದಿಟ್ಟ ಕೃಷ್ಣನ ಪಾದವು ಮೆಟ್ಟಿ ಕಾಳಿಂಗನ ಹೆಡೆಯ ದಿಟ್ಟ ರಂಗನ ಪಾದವು ಕಟ್ಟಿದ ವರಳನೆಳೆದು ಮತ್ತಿ ಮರವ ಮುರಿದ ಪಾದವು ಕೊಟ್ಟ ಅಭಯ ಭಕ್ತರ ಪೊರೆವಡಿಟ್ಟ ಪಾದವು 2 ಕೂರ್ಮ ವರಹ ನರಹರಿ ಅಚ್ಚವಾಮನ ಪಾದವು ಸಯಿಚ್ಚೆ ಪರಶುಧರ ಶ್ರೀರಾಮ ಕೃಷ್ಣ ನಿನ್ನ ಪಾದವು ಅಚ್ಚವರವನಳಿದು ತೇಜ ಹತ್ತಿ ಮೆರೆವ ಪಾದವು ಅಚ್ಚುತ ಶ್ರೀ ಶ್ರೀನಿವಾಸ ಕೃಷ್ಣ ನಿನ್ನ ಪಾದವು 3
--------------
ಸರಸ್ವತಿ ಬಾಯಿ
ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ | ನಿರುತ ನಿನ್ನವನೊ ನಾನು ಪುರಂದರರಾಯ ಯಿಂದು ಪ ಲೋಕದ ಜನರು ತಮ್ಮ ಸುಕುಮಾರರಿಗೆ ಪೆಸರು | ಯಾಕೆ ಯಿಡವರೊ ಜೀಯ್ಯಾ | ನೇಕ ಮಮತೆಯಲಿ || ಬೇಕೆ ಎನಗೆ ಯಿಂಥsÀ ಖ್ಯಾತಿ ನೀ ಕೊಟ್ಟ ಭಾಗ್ಯವೆಯಿರಲಿ | ವಾಕು ವ್ಯರ್ಥವಾಗದಂತೆ ಸಾಕುವದು ಬಿಡದೆ ಒಲಿದು 1 ಅಡವಿ ಹತ್ತಿ ಪೋಪ ನರನ ಒಡನೆ ಕೂಡಿಕೊಂಡು ಬಂದು | ಕಡು ಮಹೋತ್ಸವವ ಮಾಡಿ ವೇಗ ಪೊಡವಿಪತಿತನವು || ತೊಡರು ಕಳೆದು ಸರ್ವರೊಳಗೆ | ನಡತಿವಂತ ಮಾಡಿದಂತೆ ಬಡವನ್ನಾ ಉದ್ಧರಿಸು ಜ್ಞಾನಿ2 ಯಿರಲಾಗಿ ಪುತ್ರನೀಗೆ ಬರುವಾವೆ ಪಾಲಿಪದು ಎತ್ತಲಿದ್ದರೂ | ಸತ್ಯ ವಿಜಯವಿಠ್ಠಲನ್ನ | ತುತ್ತಿಸುವ ಮಹಾಮಹಿಮಾ 3
--------------
ವಿಜಯದಾಸ
ಕರುಣಿಸಿ ಕೇಳು ಕಂದನ ಮಾತಗರುಡವಾಹನನೆ ಗಂಗೆಯ ಪೆತ್ತ ಹರಿಯೆಪ. ಇತ್ತ ಬಾರೆಂಬುವರಿಲ್ಲ ಇರವ ಕೇಳುವರಿಲ್ಲಹತ್ತಿಲಿ ಕುಳ್ಳಿರು ಎಂಬ ದಾತರಿಲ್ಲತತ್ತರಗೊಳ್ಳುತಲಿದೆ ತಾವರೆಯೆಲೆಯೊಳನೀರಿನಂತೆಹತ್ತು ನೂರಾರು ನಾಮವುಳ್ಳ ಶ್ರೀಹರಿಯ ನೀ ಕೇಳೊ1 ಇಂದು ಬಂಧನವಿಲ್ಲ ಇದ್ದವ ಕೇಳುವುದಿಲ್ಲಒಂದು ಸುತ್ತಿಗೆ ಬಟ್ಟೆಯಾದರೂ ಇಲ್ಲ ಈಬೆಂದೊಡಲಿಗೆ ಒಬ್ಬ ಅಯ್ಯೋ ಎಂಬುವನಿಲ್ಲಬಿಂದು ಮಾತ್ರದಲ್ಲಿ ಸುಖವ ಕಾಣೆ ಹರಿಯೆ 2 ಎಲ್ಲಿಯೂ ಧಾರಣೆಗೊಂದು(?)ನೆರಳನು ಕಾಣೆ[ಅಲ್ಲವÀÀತಿಂದಿಲಿಯಂತೆ]ಬಳಲುತಿದ್ದೆಫುಲ್ಲಲೋಚನ ಪೂರ್ಣ ಹಯವದನ[ಸಲ್ಲುವ]ನಾಣ್ಯವ ಮಾಡಿ ಸಲಹೋ ಎನ್ನ ಹರಿಯೆ 3
--------------
ವಾದಿರಾಜ
ಕರುಣಿಸೊ ಗುರು ಎನಗೆ ಅರಘಳಿಗಿ ನೀ ಎನ್ನ ಹೃದಯದಿಂದಲಗದ್ಹಾಂಗೆ ಧ್ರುವ ಕಣ್ಣಿನೊಳಗ ನಿನ್ನ ಕಾಣದಿದ್ದರೆ ಪೂರ್ಣ ಪ್ರಾಣನಿಲ್ಲದೊ ನಿಮಿಷಾರ್ಧದಲಿ ಕ್ಷಣಕ್ಷಣಕ್ಕೊದಗಿ ನೀ ಖೂನದೋರದಿದ್ದರೆ ತನು ವಿಕಳಿತವಾಗಿ ಕ್ಷೀಣಹೊಂದುವದೊ 1 ಬೇಡುವದೊಂದೆ ನಾ ಬಿಡದೆ ನಿಜರೂಪ ಪೊಡವಿಯೊಳಗೆ ದೃಢ ನಿಶ್ಚಯಲಿ ಎಡಬಲವು ನೋಡದೆ ಒಡಲ ಹೊಕ್ಕಿದೆ ನಿನ್ನ ಕಡೆಗಾಣಿಸುವದೆನ್ನೊಡೆಯನೆ ಪಿಡಿದು ಕೈಯ 2 ಸುತ್ತಸೂಸುತಲಿನ್ನು ಚಿತ್ತದಿಂದಗಲದೆ ನಿತ್ಯವಾಗಿರೊ ನೀ ಹೃತ್ಕಮಲದಲಿ ಹೆತ್ತ ತಾಯಿಯೋಪಾದಿ ತುತ್ತುತುತ್ತಿಗೆ ಒಮ್ಮೆ ಹತ್ತಿಲಿದ್ದು ಸಂತತ ಸಲಹೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು