ಒಟ್ಟು 235 ಕಡೆಗಳಲ್ಲಿ , 58 ದಾಸರು , 214 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಿ ಖೂನ ಕಂಡ ಮ್ಯಾಲ ಖಂಡ ಮಾಡಿಕೊಂಬುದೆ ಸುಜ್ಞಾನ ಧ್ರುವ ಕಾಣುವನು ಕಾಣಿಯೇನಾಗಿದೊ ಪ್ರಾಣಿ ಕಾಣದೆ ಹೋದರನೇಕ ಜನ್ಮ ನಾನಾಯೋನಿ 1 ಕಾಣುವನ ಸ್ಥಾನ ಕಾಣದಿಹುದೇನ ಜ್ಞಾನಗುರುವಿನ ಕೈಯ ಕೇಳಿಕೊ ನೀ ಖೂನ 2 ಕಂಡು ಕಾಂಬುವನ ಅಖಂಡ ಮಾಡೋಧ್ಯಾನ ಪಿಂಡ ಬ್ರಹ್ಮಾಂಡಕ್ಕೆ ಇದೆ ವಸ್ತು ನಿಜಘನ 3 ಕಾಣುವನ ಕೂಡಿ ಸ್ವಾನುಭವ ಮಾಡಿ ದೀನ ಮಹಿಪತಿಗಿದೆ ಘನ ಸುಖನೋಡಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಕಾಯೊ ಕರುಣ ಕೃಪಾಳ ಸದ್ಗುರು ಘನಲೋಲ ದ್ರುವ ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ ಖೂನತಿಳಿಯಲು ನಿಮ್ಮ ಕೃಪಾಸಿಂಧು ನಿಮ್ಮ 1 ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ ಗುಹ್ಯ ಅಗಾಧ ತಿಳಿಯದು ಮಹಿಮ್ಯಂಗುಷ್ಠದ 2 ಮಾಡುವರಾನಂದ ಘೋಷ ದೋರುವ ಹರುಷ ತಾ ಶೇಷ ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ ಸಿರಿಲೋಲ ನೀ ಸರ್ವೇಶ 3 ಸಕಲಾಗಮ ಪೂಜಿತ ಸದ್ಗುರು ಶ್ರೀನಾಥ ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ ಜನರಿಗೆ ಸಾಕ್ಷಾತ 4 ಸಲಹುವದೋ ನೀ ಶ್ರೀಹರಿಯೆ ನೀ ಎನ್ನ ಧೊರೆಯೆ ಮುರ ಅರಿಯೆ ಸಕಲಪೂರ್ಣಸಿರಿಯೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು 1 ಪಂಡಿತರಿಗೇನದು ಕಂಡು ತಿಳಿಯಣ್ಣ ದೂರವಿಲ್ಲವು ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ ಭಂಡರಿಗೆ ಬಹುಭಾಷೆಗಹುದೇನ ಕುಂಡಲೀಪುರ ತತ್ಪ್ರಯಾಣವು 2 ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ ಹಾದಿಯನು ತಾವು ಕಾಣದೋಡ್ಯಾರೊ ರಾ ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ ಬೋಧೆಯೊಳಗಿಹುದು ಆದಿತತ್ವವು 3 ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ ನವೈರಾಗ್ಯವನು ಕೊಟ್ಯಾರು ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ4 ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ ಳಗಿದೆಲ್ಲವು ಹುಡುಕಿ ನೋಡಣ್ಣ ಭೋಗಿಶಯನ ಶ್ರೀ ತುಲಸೀರಾಮನ ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ 5
--------------
ಚನ್ನಪಟ್ಟಣದ ಅಹೋಬಲದಾಸರು
ಕೊಟ್ಟಿಗೋತ್ಸವ ಗೀತೆ ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ. ವಾಸುದೇವನ ಸಹಸ್ರಸ್ತಂಭಮಂಟಪವ ದಾಸರು ಬಂದು ಶೃಂಗಾರವ ಮಾಡಿ ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ ಲೇಸಾದ ಮೇಲುಕಟ್ಟುಗಳ ಕಟ್ಟಿದರು 1 ಸೃಷ್ಟಿಗೀಶ್ವರನಾದ ರಂಗನಾಥನಿಗೆ ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ ಭಟ್ಟರು ಓದಿ ಪೇಳಿದರು ಸಂಭ್ರಮದಿ 2 ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು ಅರ್ಜುನಸಖ ಸಂಭ್ರಮದಲಿ ಪೊರಟು ಸ್ವರ್ಗದ ಬಾಗಿಲೊಳಗೆ ತಾ ನಿಂದು ಮೂರ್ಜಗವೆಲ್ಲ ಮೋಹಿಸುತಲೆ ಬಂದು 3 ಮಂದಹಾಸದಲಿ ನಿಂದು ಮಂಟಪದಲಿ ಬಂದ ಆಳ್ವಾರರಿಗಾಸ್ಥಾನವಿತ್ತು ಚಂದದಿಂದ ದಿವ್ಯ ಪ್ರಬಂಧವ ಕೇಳಿ ಒಂದುಅಂಕಣ ಬಿಡದೆ ಬಂದ ಶ್ರೀರಂಗ 4 ಸಂಕ್ರಾಂತಿಯಲಿ ಶಂಕರನ ಪ್ರಿಯನು ಶಂಕೆ ಇಲ್ಲದೆ ಆಭರಣವನು ಧರಿಸಿ ಪಂಕಜಮುಖಿಯರೊಡಗೊಂಡು ಹರುಷದ ಲಂಕಾರವಾಗಿ ಬಂದನು ಮಂಟಪಕೆ 5 ಮತ್ತೆ ಮರುದಿನದಲ್ಲಿ ಭಕ್ತವತ್ಸಲನು ಮುತ್ತಿನಅಂಗಿ ಮುಂಡಾಸನಳವಡಿಸಿ ಮುತ್ತಿನಛತ್ರಿ ಚಾಮರ ಸೂರೆಪಾನದಿ ಮುತ್ತರಸಿಯ ಮಂಟಪಕೆ ನಡೆತಂದ 6 ಅರ್ಥಿಯಿಂಬಂದು ತಾ ಅಶ್ವವನೇರಿ ಮತ್ತೆ ಬೇಟೆಯಮೃಗವನೆ ಕೊಂದು ಸಂ ಕ್ರಾಂತಿಯ ಪಾರ್ವೇಟೆಯನಾಡಿ ಸಂತೋಷದಿ ಬಂದ 7 ನಾರಿವೇಷವ ಆಳ್ವಾರರಿಗೆ ಧರಿಸಿ ಪೇರಿಯ ತಾ ಬಿಟ್ಟು ತೇಜಿಯನೇರಿ ಚೋರತನವ ಮಾಡಿದ ಭಕ್ತರಿಗೆ ಮೂಲಮಂತ್ರವ ಪೇಳಿ ಮುಕ್ತಿಯನಿತ್ತ 8 ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ ಬಂದ ಆಳ್ವಾರರಿಗೆ ಮುಕ್ತಿಯನಿತ್ತು ಬಂದು ಆಸ್ಥಾನದಿ ನಿಂದ ಶ್ರೀರಂಗ 9 ಭಕ್ತರು ಮಾಡಿದ ಪ್ರಬಂಧವನೆಲ್ಲ ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ ರಥವನಿತ್ತ ಬ್ರಹ್ಮಾಂಡರೂಪ 10 [ಶೌ]ರಿಯು ತಾನಿರಲು ಮೇಘಮಂಡಲದಂತೆ ತೋರುವುದು ತಾರಕೆಯಂತೆ ಮೈಯುಡುಗೆ ವಾರಿಜನಾಭನ ಮುತ್ತಿನಂಗಿಯ ನೋಡು ವವರಿಗೆ ತಾ ಆನಂದವಾಗಿಹುದು 11 ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ ವಾರಿಜನೇತ್ರಗೆ ವಜ್ರದನಾಮವು ಧರಿಸಿದರು ಹೇಮದ ಪಾದಹಸ್ತಗಳ 12 ಮುತ್ತಿನಂಗಿಸೇವೆ ನೋಡಬೇಕೆನುತ ಹತ್ತುಸಾವಿರ ಪ್ರಜೆ ಬಂದು ನಿಂತಿರಲು ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ ಮುಕ್ತರಾದೆವೆಂದು ಭಕ್ತರು ನುಡಿದರು 13
--------------
ಯದುಗಿರಿಯಮ್ಮ
ಗಂಗಾಜನಕಗೆ ಮಂಗಳಾರುತಿಯನೆತ್ತಿ ಮಂಗಳಾಂಗಿಯರು ಸಂಗೀತ ಪಾಡುತ ಪ ಅನಿಮಿಷೇಶನು ಆನಂದಾತ್ಮಾ ಪ್ರಾಕೃತನು ಅನಿಲವಾಸಾನಂತಾನಂತಾನಂತನಂತರೂಪನು 1 ಲಕ್ಷ್ಮೀವಾಸನು ಕುಕ್ಷಿಯೊಳ್ ಬ್ರಹ್ಮಾಂಡಧರನು ಲಕ್ಷಣಗ್ರಜನು ಸುಕ್ಷೇಮದಿಂದಿಡುವ ನಾಮ 2 ಕರುಣಪೂರ್ಣನು ಸ್ಮರಿಪರ ಭವವಿದೂರ ಸರಿಮಿಗಿಲಿಲ್ಲದ ಸಿರಿವಿಠಲ ನಾಮಧೇಯ 3
--------------
ಸಿರಿವತ್ಸಾಂಕಿತರು
ಗಂಗಾನದಿ ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ ಪ ವಾಮನರೂಪಿಲಿ ದಾನವ ಬೇಡಿ ಪ್ರೇಮದಿಂ ಪಾದವ ಮೇಲಕ್ಕೆ ನೀಡಲು ನೇಮದಿಂ ತಡೆದು ಬ್ರಹ್ಮಾಂಡದಿಂದ ಸುಮ್ಮಾನದಿಂ ಪೊರಟು ಬಂದ ದೇವಿಗೆ 1 ಹರಿಯ ಪಾದದಲಿ ಉದ್ಭವಿಸಿದ ಗಂಗೆಗೆ ಹರನ ಶಿರದಲ್ಲಿ ವಾಸವಾದವಳಿಗೆ ಧರಿಣಿಗೆ ಇಳಿದು ಬಂದ ದೇವಿಗೆ 2 ಭಾಗೀರಥಿ ಎಂಬೊ ಪೆಸರು ಪೊತ್ತು ಅವನ ಭಾಗಿಗಳಿಗೆ ಮೋಕ್ಷವನಿತ್ತು ಹರುಷದಿ ಯೋಗಿಗಳು ಸ್ತುತಿಪ ಗಂಗಾದೇವಿಗೆ 3 ಜಾಹ್ನವಿ ಎನಿಸಿದೆ ಜಗದೊಳಗೆ ಜನರಿಗೆ ಜನನ ಮರಣ ಕೊಡದೆ ಬಿಡಿಸಿ ಜಾಣತನದಿ ಮುಕ್ತಿ ಕೊಡುವವಳಿಗೆ 4 [ದೃಡದಿ ] ಬಲಭಾಗದಿ ಭಗೀರಥಿ ಬರುತಿರೆ ಯೆಡದ ಭಾಗದಲಿಯಮುನೆ ಬರುತಿರಲು ನಡುವೆ ಸರಸ್ವತಿ ತ್ರಿವೇಣಿಯೆಂದೆನಿಸಿ ಪೊಡವಿಗಧಿಕವಾಗಿ ಮೆರೆಯುವ ದೇವಿಗೆ 5 ಬಂದು ಭಾಗೀರಥಿಗೆ ವಂದನೆಗಳ ಮಾಡಿ ತಂದು ಪುಷ್ಪವ ತುಳಸಿ ಕ್ಷೀರವನು ಚಂದದಿಂ ಪೂಜೆಮಾಡಿ ವೇಣಿಮಾಧವಗೆ ಅಂದು ವಂದಿಸಿದವರಿಗೆ 6 ಸೃಷ್ಟಿಯ ಮೇಲುಳ್ಳ ಜನರೆಲ್ಲರು ಬಂದು ಇಷ್ಟಾರ್ಥಗಳನು ಕೊಡುವೆನೆಂದೆನುತಲೆ ಪಾದ ತೋರಿಸುವಳು 7
--------------
ಯದುಗಿರಿಯಮ್ಮ
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ. ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ1 ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು 2 ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ 3 ರೇಣು ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ4 ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ 5
--------------
ಗಲಗಲಿಅವ್ವನವರು
ಗೋಪಿ ಚಂದನದಿಂದ ಎ ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ. ಮೃಡಸಖ ನಿನ್ನಯ ರೂಹವ ತೋರೆ ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ. ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು ಮಜ್ಜಿಗೆ ಕಡಗೋಲು ನೇಣು ಸಹ ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ 1 ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ ಇಟ್ಟು ಕೌಸ್ತುಭಹಾರ ತುಳಸಿಮಾಲಾ ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ 2 ಮಕರಕುಂಡಲ ಕಿರೀಟ ಶೋಭಿಸುತಲಿ ಅಕಳಂಕ ಚರಿತ ಶ್ರೀ ಶ್ರೀನಿವಾಸ ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ 3
--------------
ಸರಸ್ವತಿ ಬಾಯಿ
ಗೋಪಿ ನಿನಗೆ ದೂರ ಯಾರ ಮಾತ ಕೇಳವಲ್ಲಾ ರಂಗ ಚೋರ ಪ ದಿಕ್ಕಡದಿಮ್ಮಿಲೆ ಕೂಡಿಸುವ ಬ್ರಹ್ಮಾಂಡ ನೂರಾ ಇವನ ಮಹಿಮಾ ತಿಳಿಯದವ್ವಾ ಮಾಯಕಾರ ಅ.ಪ. ಕಳ್ಳನಾಗಿ ಕಂಣಮುಚ್ಚಿ ಗತಿಯವಲ್ಲನೆ ಭಾರ ನೆಗಿವ್ಯಾನೆ 1 ಕ್ವಾರಿಲೆ ಹಾದು ದೈತ್ಯನ ಕೊಂದಾನೆ ತರಳಗಾಗಿ ಖಂಬದಿಂದ ವಡದು ಬಂದಾನೆ 2 ಧಾರೂಣಿ ಅಳೆದು ಮೂರಡಿ ಮಾಡಿದ ಅಂಬೆಯ ಮಗನಾಗಿ ಎಂಥ ಕಾಡಿದ 3 ಅಂಬು ಹೂಡಿದ ನಂಬೀದ ವಿಭೀಷಣಗೆ ಪಟ್ಟಗಟ್ಟಿದ 4 ಗೋಕುಲದೊಳಗೆ ಪುಟ್ಟಿ ಬೆಣ್ಣೆ ಮೆದ್ದಾನೆ ವಸ್ತ್ರವಿಲ್ಲದಂತೆ ತಾ ಬತ್ತಾಲೆ ನಿಂತಾನೆ 5 ಕುದುರೆಯೇರಿ ಹಾರುತ ಬಂದಾನೆ ಬೆದರಬೇಡೆಂದು ಶ್ರೀದವಿಠಲ ಅಂದಾನೆ 6
--------------
ಶ್ರೀದವಿಠಲರು
ಗೌತಮ ಗೊಲಿದನೆ ರಂಗನಾಥದಾತನೆ ನಮಿಸುವೆ ರಂಗನಾಥ ಪ ಕಾವೇರಿ ತೀರಗ ರಂಗನಾಥ ಮಾವಾರಿ ಸಲಹೆನ್ನ ರಂಗನಾಥ 1 ಭಕುತಾಭೀಷ್ಟ ಪ್ರದ ರಂಗನಾಥಮುಕುತರೊಡೆಯ ಶ್ರೀರಂಗನಾಥ 2 ವಕ್ಷದಿ ಲಕ್ಷ್ಮಿಯು ರಂಗನಾಥಕುಕ್ಷಿಯೊಳ್ಬ್ರಹ್ಮಾಂಡ ರಂಗನಾಥ 3 ರಂಗಧಾಮನೆ ಶಿರಿ ರಂಗನಾಥಮಂಗಳ ಮಹಿಮಾನೆ ರಂಗನಾಥ 4 ಅಜಭವ ಸುರವಂದ್ಯ ರಂಗನಾಥನಿಜ ಗುರು ಗೋವಿಂದ ರಂಗನಾಥ 5
--------------
ಗುರುಗೋವಿಂದವಿಠಲರು
ಗೌರೀಪ್ರಿಯ ಹರ ಗೌರೀಪ್ರೀಯ ಹರ ಗೌರೀಪ್ರಿಯ ಹರ ಗಂಗಾಧರ ಪ ನಿತ್ಯ ನಿರಾಮಯ ಪರ ಸ್ವಪ್ರಕಾಶ 1 ನಿರ್ಮಿತಚಿಚ್ಛಕ್ತಿ ಪರಿಣಾಮಬ್ರಹ್ಮಾಂಡ ನಿರ್ಮಲ ನಿಗಮಾಂತವೇದ್ಯ ಸ್ವಸಾಧ್ಯ 2 ಬಾಲೇಂದುಶೇಖರ ಭಕ್ತ ದುರಿತಹರ ಫಾಲಾಕ್ಷ ಫಣಿಹಾರಯುಕ್ತಶರೀರ 3 ಇನಕೋಟಿಸಂಕಾಶ ಕನಕಕುಂಡಲ ದೇವ ವಿನುತ ವಿರೂಪಾಕ್ಷ ವಿಬುಧೌಘ ಪಕ್ಷ 4 ದುರಿತ ದಿವಾಕರ ಭವ ಭಯ ಪರಿಹರ ಭವದೂರ ಧೀರ 5 ಪರಶು ಮೃಗಾಭಯ ವರದ ಚತುರ್ಭಜ ಪರಮ ಫವನ ಶೀಲ ಪುಣ್ಯ ವಿಶಾಲ 6 ಶರಣಾಗತ ತ್ರಾಣ ನಿಜಕರ್ಮ ನಿರ್ಲೇಪ ಚಾಪ ತ್ರಿಭುವನ ದೀಪ 7 ಮಂದರಗಿರಿ ವಾಸ ಮನ್ಮಥತನು ನಾಶ ನಂದಿವಾಹನ ಭೃಂಗಿನಾಟ್ಯ ವಿಲಾಸ 8 ಮುನಿವಂದ್ಯ ಮೃದುಪಾದ ಘನ ಕಕುದ್ಗಿರಿವಾಸವನಜಾಕ್ಷ ತಿರುಪತಿ ವೆಂಕಟರೂಪ 9
--------------
ತಿಮ್ಮಪ್ಪದಾಸರು
ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ 1 ಧುರಧೀರವಾಲಿಯ ಗರುವನಿವಾರನೆ ಸಿರಿರಾಮ ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ 2 ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ 3 ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ 4 ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ 5
--------------
ರಾಮದಾಸರು
ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಪ ದಿಗಳ ವೆಗ್ಗಳವ ನೋಡಲಿ ಬಂದ್ಯೋ ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ 1 ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ ಬಿಡದೆ ನಕ್ರನ ಕೂಡ ಕಾದಿ ಸೋತು ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ 2 ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ ಜಠರದೊಳು ಜಗಕರ್ತುನೆಂದೆನಿಸಿದೆ ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ3
--------------
ವಿಜಯದಾಸ
ಚೋದ್ಯ ಚೋದ್ಯ ಸರ್ವದ ವೇದ ವೇದ್ಯ ನಂಬಿದ ಭಕ್ತ ಜನರಿಗಾಗುವ ಸುಖಸಾಧ್ಯ ಪ. ಶ್ರೀ ಮಹೀಶ ಸತ್ಯಭಾಮೆಯರರಸ ಸು- ಧಾಮ ತಂದವಲಕ್ಕಿ ಪ್ರೇಮದಿಂದಲಿ ಮೆದ್ದ 1 ಅಂಡಜವಾಹ ಬ್ರಹ್ಮಾಂಡಗಣಾತತ ಪಾಂಡುಕುವರನಿಗಾದನು ಭಂಡಿಸೂತ 2 ಆದರೀ ಕೃತಮಾಯ ಕೃತ್ಯಕದಂಡ ಸ- ನ್ಮುದದಿಂದ ವಿದುರನ ಮನೆಯ ಪಾಲುಂಡ 3 ಶ್ರೀವರೀವರಿಯಿಂದ ಸರಸಮಾಡುತಲಿರೆ ಗೋಪಿಯರಿಗೆ ಮೆಚ್ಚಿ ಗೋವುಗಳ ಕಾಯ್ದ 4 ಗೊಲ್ಲರ ಹುಡುಗರ ಪೆಗಲೇರಿ ಮೆರೆದ 5 ಘೋರ ಸಂಸಾರಪಹಾರಿ ನಾರದ ವಂದ್ಯ ಜಾರ ಚೋರ ಕೃತ್ಯ ತೋರಿದ ವರದ 6 ಮಾನವ ದೈತ್ಯ ಗಣರಿಗಾಧಾರ ಮ- ತ್ತಾವ ಕಾಲಕು ಭೇದಭೇದವ ಸೇರಾ 7 ತೇಜಸ್ತಿಮಿರಾದಿ ಸೋಜಿಗ ಶಕ್ತಿಮ- ಹೋಜಸನೀತ ಪರಾಜಯ ರಹಿತಾ 8 ಪರದೇಶಿಯ ಮೇಲೆ ಕರುಣ ಕಟಾಕ್ಷದಿ ಸಿರಿಯೊಡಗೂಡಿ ಬಂದಿರುವ ಶೃಂಗಾರ 9 ಸರ್ವಕಾಲದಿ ತನ್ನ ನೆನವಿತ್ತು ದುಷ್ಕøತ ಪರ್ವತಗಳ ಪುಡಿ ಮಾಡುವ ಧೀರ 10 ತನಯನ ಕಲಭಾಷೆ ಜನನಿ ಲಾಲಿಸುವಂತೆ ಸಾರ 11 ಪೋರಭಾವವ ಶುಭವೇರಿಸುವನು ತುಷ ವಾರಿಯು ಗಂಗೆಯ ಸೇರುವಾಕಾರ 12 ವಿದ್ಯ ಬುದ್ಧಿಗಳಿಲ್ಲದಿದ್ದರು ದಾಸರ ನಿರವದ್ಯ ಬೇಗದಲಿ 13 ಸನ್ನುತ ಕರ್ಮವ ಮನ್ನಿಸನೆಂದಿಗು ಮುರನರಕಾರಿ 14 ಚಿಂತಾಕ್ರಾಂತಿಗಳಿರದಂತೆ ಸರ್ವದ ನಿ- ರಂತರ ಪೂಜೆಗೊಂಬರ ಚಕ್ರಧಾರಿ 15 ನಿರುಪಮಾನಂದ ನಿರ್ಭರ ಪುಣ್ಯಮೂರ್ತಿ ಶ್ರೀವರ ಶೇಷ ಭೂಧರವರನ ಸತ್ಕೀರ್ತಿ 16
--------------
ತುಪಾಕಿ ವೆಂಕಟರಮಣಾಚಾರ್ಯ