ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ
ನಾನೇನೂ ಮಾಡಲಾರೆ ರಂಗಯ್ಯ
ನೀನೆನ್ನ ಸಲಹ ಬೇಕು ಪ
ಗಾನಲೋಲನ ನಾಮ ಭಜನೆಯೊಂದುಳಿದು ನಾ
ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ.
ತರಳಾ ಧ್ರವನಂತೆ ತಪನ ನಾನರಿಯನು
ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ
ಹರಿದಾಸರಂತೆ ದಾಸತ್ವ ನಾನರಿಯೆನು
ಪರಮ ಸೇವಕರಂತೆ ಸೇವೆಯ ನರಿಯೇ 1
ಅಸುರನಂದನನಂತೆ ಕೀರ್ತನೆಯರಿಯೆನು
ವಸುಧೀಶನಂತೆ ನಾ ವ್ರತಗಳನರಿಯೇ
ವಸುಮತಿಯಂತೆ ನಾ ಯಾಚನೆಯರಿಯೆನು
ಋಷಿ ವೃಂದದಂತೆ ನಾ ಭಕ್ತಿಯನರಿಯೇ 2
ಸಿರಿಯಂತೆ ನಿನ್ನನು ಸೇವಿಸಲರಿಯನು
ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ
ಸುರಮುನಿಯಂತೆ ನಾ ಗಾಯನವರಿಯೆನು
ಸಿರಿ ಚನ್ನಕೇಶವ ಭಜನೆಯನರಿವೇ 3