ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು
ಹಿಂಡ ದೈವದೊಡೆಯ ಪ್ರಚಂಡನ ಕಂಡೆ ಧ್ರುವ
ದೀನನಾಥನ ಕಂಡೆ ದೀನೋದ್ಧಾರನ ಕಂಡೆ
ಅನಾಥಜನರ ಪ್ರತಿಪಾಲನ ಕಂಡೆ 1
ಶರಣ ರಕ್ಷಕನ ಕಂಡೆ ವಾರಿಜಾಕ್ಷನ ಕಂಡೆ
ವರಮುನಿ ಜನರಾ ಪ್ರತ್ಯಕ್ಷನ ಕಂಡೆ 2
ಭಕ್ತ ಪ್ರಿಯನ ಕಂಡೆ ಮುಕ್ತಿಯೀವನ ಕಂಡೆ
ಪತಿತ ಪಾವನ ಗುರು ಸಂಜೀವನ ಕಂಡೆ 3
ದೇವದೇವನ ಕಂಡೆ ಕಾವ ಕರುಣನ ಕಂಡೆ
ಮಹಿಪತಿ ತಾರಕ ಗುರು ಭವನಾಶನ ಕಂಡೆ 4