ಒಟ್ಟು 547 ಕಡೆಗಳಲ್ಲಿ , 72 ದಾಸರು , 346 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ ಮುನಿಸತಿ ಶಿಲೆಯಾಗಿ ವನಜನಾಭಾಯೆಂದು ನೆನೆಯುತಲಿಲ್ಲವೋ ಮನ ಮೋಹನಾ ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ 1 ದುರುಳ ಮಕರಿಯಿಂದೆ ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ ದುರುಳ ಕದ್ದೊಯ್ಯಲಿಲ್ಲ ಸರಸಿಜಾನನನೀಗ ಚರಣಕೆರಗಲಿಲ್ಲ 2 ಹದಿನಾರು ಸಾವಿರ ಸುದತೀ ಮಣಿಯರೆಲ್ಲ ಮದನಾಂಗ ಬಾರೆಂದು ಕರೆಯಲಿಲ್ಲ ಉದಧಿ ನಿನ್ನರಸಲಿಲ್ಲ ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ 3 ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ] ನೂರಾರು ಕೈಯವ ಕರೆಯಲಿಲ್ಲ ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ ವರತುರುಗವೇರಿ ಧುರಕೆ ಬಾರೆಂಬರಿಲ್ಲ4 ಕಾಮಿತವೀಯೆಂದು ಪ್ರೇಮದಿ ಭಜಿಸುವ ಪಾಮರರಿಲ್ಲಿಗೇ ಬರುತಿರ್ಪರೋ ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ ಕಾಮಹರನೆ ಬಾರೊ ರಾಮದಾಸಜೀವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನ ಪೇಳಲಿ ಹರಿಯ ವ್ಯಾಪಾರ ಮಹಿಮೆ ಪ ಆನಂದ ಆಶ್ಚರ್ಯ ಆಗುವುದು ಎನಗೆ ಅ.ಪ. ಮರಳಿಗೋಸುಗ ಪೋಗೆ ಮಾಣಿಕ್ಯ ದೊರೆಯಿತು ಅಮೃತ ಕಳಶವಾಯ್ತು ಇರುಳು ಕತ್ತಲೆಯೊಳಗೆ ಮಣಿದೀಪ ಮಿರುಗಿತು ಕಮಲ ಮಾಲಿಕೆಯಾಯ್ತು 1 ಪಾಪ ಕಾರ್ಯವ ಕೊಳಲು ಪುಣ್ಯ ಸಾಧನವೀವ ಪಾಪ ಸಾಧನವೀವ ಪುಣ್ಯ ಕಾರ್ಯದಲಿ ಪಾಪ ಬೀಜದ ಪುಣ್ಯ ಪುಣ್ಯ ಬೀಜದ ಪಾಪ ಶ್ರೀಪತಿಯ ವ್ಯಾಪಾರ ಈ ಪರಿಯಲಿಹುದು2 ಮೃಗಯಾ ವಿಹಾರದಲಿ ಮನವಿಟ್ಟು ನಾ ಬರಲು ಮೃಗಲಾಂಛನವನ ಕಳೆಯ ಮೀರುವಂಥ ಮಿಗೆ ತೇಜದೀ ಮಗುವು ಎನಗೆ ದೊರೆತುದು ನರ ಮೃಗರೂಪಿ ಕರಿಗಿರೀಶನ ಕರುಣವಿಲ್ಲದಲೆ 3
--------------
ವರಾವಾಣಿರಾಮರಾಯದಾಸರು
ಏನ ಬೇಡಲಿ ನಾನು ಏನ ನೀಡುವೆಯೋ ನೀನು ನೀನೆನ್ನ ಪ್ರಭುವಾಗಿರೆ ಹೇಳೋ ರಂಗ ಪ ನಾನಿನ್ನ ವಂದಿಸಿ ಧ್ಯಾನವ ಗೈವಾಗ ಏನನೀ ಕೊಡಲಾರೆ ಹೇಳೋ ರಂಗಯ್ಯಅ.ಪ ಕರಣಕಾರಣ ನೀನು ಕೊರಡಬೊಂಬೆಯು ನಾನು ಕರವ ಪಿಡಿದು ಎನ್ನ ನಡೆಸುವೆ ನೀನು ಕಾನನ ಸಿರಿ ಸುಖ ಭೋಗವು ಸ್ಥಿರವಲ್ಲ ಹರಿ ನಿನ್ನ ಚರಣಸೇವೆಯೆ ಸಾಕೋ 1 ಬೇಡಿ ಬೇಡಿ ನಿನ್ನ ಕಾಡುವ ಮನವೀಯಬೇಡಯ್ಯ ನೀಡಯ್ಯ ಮಂಗಳನಾಮಂಗಳ ಪಾಡಿ ಕೊಂಡಾಡುತ ನಾಡೆ ವಂದನೆಗೈವ ರೂಢಿ ಒಂದಿರಲಿ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನಿದು ಬಯಲ ಪಾಶ ನೋಡಿದರಿಲ್ಲಿ ಏನು ಹುರುಡುಗಾಣೆನೊ ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ. ನೀರಬೊಬ್ಬುಳಿಯಂದದ ದೇಹವ ನೆಚ್ಚಿ ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ- ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ ಸದ್ಗತಿ ತೋರೊ 1 ಬಡವರಾಧಾರಿ ಕೇಳೊ ಸಂಸಾರದ ಮಡುವಿನೊಳಗೆ ಧುಮುಕಿ ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ 2 ಸುತ್ತೆಲ್ಲ ಬಂಧು ಬಳಗ ನವಮಾಸದಿ ಹೊತ್ತು ಪಡೆದ ಜನನಿ ಪುತ್ರ ಸಹೋದರರ ಘಳಿಗ್ಯಗಲಲಾರದೆ ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ 3 ಆಸೆಯೆಂಬುದು ಬಿಡದು ಈ ಭುವನದೊಳ್ ಲೇಸುಗಾಣೆನು ಹರಿಯೆ ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ ಈಶಸನ್ನುತ ಹೆಳವನಕಟ್ಟೆರಂಗಯ್ಯ 4
--------------
ಹೆಳವನಕಟ್ಟೆ ಗಿರಿಯಮ್ಮ
ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಏನೆಂದು ಸ್ತುತಿಸಲಿ ದೇವ ರಂಗಯ್ಯ ನಿನ್ನ ಜಾಣ- ತನವ ನೀನೆ ಬಲ್ಲೆ ಶ್ರೀ ರಂಗಯ್ಯ ಪ. ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ ನೀನು ಕುತ್ಸಿತ ತಮನ ಕೊಂದೆ ರಂಗಯ್ಯ ಸ್ವಚ್ಛ ಕೂರುಮನಾದೆ ರಂಗಯ್ಯ ಭಕ್ತ ರಿಚ್ಛೆಯ ಪಾಲಿಸಿದೆ ಶ್ರೀ ರಂಗಯ್ಯ1 ಆದಿವರಾಹ ನೀನಾದೆ ರಂಗಯ್ಯ ನೀನು ಪೋದ ಮೇದಿನಿಯ ತಂದೆ ರಂಗಯ್ಯ ಭೇದಿಸಿ ಕಂಬದಿ ಬಂದೆ ರಂಗಯ್ಯ ಪ್ರ- ಹ್ಲಾದನ ಕಾಯ್ದೆ ಶ್ರೀ ರಂಗಯ್ಯ 2 ಬಲಿಯನ್ನು ವಂಚಿಸಿದಂಥ ರಂಗಯ್ಯ ನೀನು ನೆಲವ ಓರಡಿ ಮಾಡ್ದೆ ರಂಗಯ್ಯ ಬಲವಂತ ಭಾರ್ಗವನಾದೆ ರಂಗಯ್ಯ ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ 3 ಜಲಧಿಯನು ಕಟ್ಟಿದೆ ರಂಗಯ್ಯ ಹತ್ತು- ತಲೆಯವನ ಕುಟ್ಟಿದೆ ರಂಗಯ್ಯ ಮಲೆತ ಮಾವನ ಕೊಂದೆ ರಂಗಯ್ಯ ಯದು- ಕುಲವನುದ್ಧರಿಸಿದೆ ಶ್ರೀ ರಂಗಯ್ಯ 4 ಸತಿಯರ ಮೋಹಿಸಿದೆ ನೀನು ರಂಗಯ್ಯ ಬಲು ಚತುರ ಬೌದ್ಧನಾದೆ ರಂಗಯ್ಯ ಖತಿಯಿಂದ ಹಯವೇರಿದೆ ರಂಗಯ್ಯ ದು- ರ್ಮತಿಯ ಕಲಿಯ ಕೊಂದೆ ಶ್ರೀ ರಂಗಯ್ಯ 5 ತ್ರಿಭುವನದೊಳಧಿಕÀ ರಂಗಯ್ಯ ನೀನು ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀ- ನಭಯವಿತ್ತೆನ್ನ ಕಾಯೊ ಶ್ರೀ ರಂಗಯ್ಯ 6 ವಾದಿರಾಜಗೊಲಿದೆ ರಂಗಯ್ಯ ನೀನು ಮೋದಿ ಹಯವದನನಾದೆ ರಂಗಯ್ಯ ಸಾಧಿಸಿ ಖಳರ ಕೊಂದೆ ರಂಗಯ್ಯ ವಿ- ನೋದÀದಿ ವೇದವ ತಂದೆ ಶ್ರೀ ರಂಗಯ್ಯ 7
--------------
ವಾದಿರಾಜ
ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ಐಸಿರಿಯನೇನೆಂದು ಪಾಡಲಿ ಶ್ರೀಹರಿಯ ಮೈಸಿರಿಯ ಪಾದಾದಿ ಕೇಶ ಪರ್ಯಂತ ಪ ಸಿರಿಯ ಕರಾಬ್ಜ ಪರಾಗದಿಂ ರಂಜಿಪ ಸರಸಿಜ ಕುಂಕುಮರಜ ರಮ್ಯವೆಂದೆನಿಪ ನಿರುತ ಯೋಗೀಂದ್ರ ಹೃತ್ಕಮಲವನರಳಿಪ ತರುಣಾತಪದ ಕಾಂತಿಯೆನೆ ಕಂಗೊಳಿಪ ವರಶ್ರುತಿ ಸೀಮಂತ ಸಿಂಧೂರವೆನೆ ತೋರ್ಪ ಫಣಿ ರತುನಾರತಿಯೆನಿಪ ಸುರುಚಿರ ಶೋಣ ಪ್ರವಾಳವ ಸೋಲಿಪ ಅರುಣಾಂಬುರುಹದಂದದಿ ಥಳಥಳಿಪ 1 ಚರಣತಳಂಗಳೊಪ್ಪುವ ತನಿ ಕೆಂಪಿನ ಶರಣ ಚಿಂತಾಮಣಿಯ ನಸುಗೆಂಪಿನ ಧರಣಿಯನೀರಡಿ ಮಾಡಿದ ಪೆಂಪಿನ ಕರುಣದಿ ಕಲ್ಲ ಪೆಣ್ಮಾಡಿದ ಸೊಂಪಿನ ಕರ ಶಂಖ ಪದ್ಮ ರೇಖಾಂಕಿತದಿಂಪಿನ ಕುರುನೃಪಗರ್ವ ನಿರ್ವಾಹಾಪಗುಂಪಿನ ಸುರಮಣೀಮಕುಟ ನಾಯಕದ ಸೊಂಪಿನ ಪರಮಪಾವನ ಪಾದದುಂಗುಟದಲಂಪಿನ 2 ಕಂಜಭವಾಂಡ ಸೋಂಕದ ಮುನ್ನ ಬೆಳಗುವ ಸಂಜನಿಸಿಹ ಗಂಗೆ ಮುದದಲ್ಲಿ ಮುಳುಗುವ ಭುಂಜಿಸಿತಮಸ ಜಗಂಗಳ ಬೆಳಗುವ ಮಂಜೀರ ಕಡಗ ಭಾಪುರಿಗಳಿಂ ಮೊಳಗುವ ಮಂಜುಳಾಂಗದಿ ನಖಪಂಕ್ತಿಗಳ್ ತೊಳಗುವ ರಂಜನೆಯಿಂ ಶ್ರೀಮದಂಘ್ರಿಗಳೆಸೆವ ವಂಚಿತ ಸೌಮ್ಯ ಜಂಘೆಗಳಿಂ ಸೊಗಯಿಸುವ ಕುಂಜರ ರುಚಿಯ ಪೂರ್ಣೇಂದು ರಂಜಿಸುವ 3 ಅಳವಟ್ಟ ಪೀತಾಂಬರದ ಸುಮಧ್ಯದ ಕಳಕಾಂಚಿದಾಮದುನ್ನತ ಕಟಿತಟದ ನಳಿನಾಲವೋದಿತ ನಾಭಿಪಂಕರುಹದ ಇಳೆಯ ಜನಂಗಳಿಗೆನಿಸುವ ವುದರದ ವಿಳಸದಲಂಕೃತ ಬಾಹು ಚತುಷ್ಟದ - ಮಳ ಶಂಕಚಕ್ರ ಸದಬ್ಜ ಸಂಭೃತದ ಪೊಳೆವ ಕೌಸ್ತುಭಮಣಿ ಶ್ರಿವತ್ಸೋದರದ ತುಳಸಿ ಮಂದಾರ ಮಾಲೆಗಳ ಕಂಧರದ 4 ಘನ ಸೌಭಗ ಗಂಡಮಂಡಲಯುಗ್ಮದ ಮಕರಕುಂಡಲ ಕರ್ಣಯುಗ್ಮದ ವನಜ ನೇತ್ರಂಗಳ ಕರುಣಾಕಟಾಕ್ಷದ ವಿನುತ ಮೌಕ್ತಿಕದಿಂದ ಮೆರೆವ ನಾಸಿಕದ ನಸು ಮೋಹನದಿ ಸಮನಿಪ ಚುಬುಕಾಗ್ರದ ತನಿರಸ ತುಳುಕುವ ಚೆಲುವಿನಧರದ (?)ಲಲಿತ ವದನದ ವರದಂತಪಂಙ್ತಯ ಇನಿಗೆದರುವೆಳನಗೆಯ ಸಿರಿಮೊಗದ 5 ಸಿಂಗಾಡಿಯಿಂ ಮಿರುಗುವ ಪುರ್ಬುಗಳ ಸ - ನಾಸಿಕ ಬೆಳ ದಿಂಗಳ ಪೊಂಗಿನ ಕಸ್ತೂರಿ ತಿಲಕ ರ ತ್ನಾಂಗದ ರಂಗಿನ ಮಕುಟ ಮಸ್ತಕದ ನೀ ಲಾಂಗದಳಾಂಗನೆಯರು ಸುರಪುರ ಮಧ್ಯ ನಿಖಿಳ ಜ ಗಂಗಳ ಹಿಂಗದೆ ಪೊರೆವ ಶ್ರೀ ಲಕ್ಷ್ಮೀಶ ಮಂಗಳೋತ್ತುಂಗ ಮೂರುತಿಗೆ ನಮೋ ನಮೋ 6
--------------
ಕವಿ ಲಕ್ಷ್ಮೀಶ
ಒಳಿತಲ್ಲ ನಿನ್ನ ತಳ್ಳಿ ಅಭಿಮಾನದೇವಿ ಎಲೆ ತಾಯೆ ನಮಿಸುವೆನು ದೂರಾಗೆ ಮಾಯಿ ಪ ಬಗೆಗೊಂಡು ಬ್ರಹ್ಮನ ತಲೆಯೊಂದು ಕಳೆದಿಟ್ಟು ಹೆಗಲೇರಿ ಶಿವನ ಸುಡುಗಾಡದಿಳಿಸಿದಿ ಜಗರಕ್ಷಕನನು ಹತ್ತು ಅವತಾರದೆಳಸಿದಿ ನಿಗಯಿಟ್ಟಂದ್ರನ ಮೈ ಛಿದ್ರ ಮಾಡಿಟ್ಟಿ 1 ಸೆರೆಹಿಡಿದು ತಾರಕನ ಆರೆದಿನದವನಿಂ ಕೊಂದಿ ಕರಪಿಡಿದು ಹಿರಣ್ಯನ ಅಸಮವರ ಸುಟ್ಟಿ ನೆರೆಯಾಗಿ ರಾವಣ ಆರುಕೋಟ್ಯಾಯುಷ್ಯ ಉರುತರದ ಸಿರಿಯೆಲ್ಲ ಮಾಯ ಮಾಡಿಟ್ಟಿ 2 ಸೆಳೆಕೊಂಡು ಕುರುಪನ ಕುಲನಾಶ ಮಾಡಿಟ್ಟಿ ಒಲಿದು ಕಲಿಯುವಗೆಲ್ಲ ನುಂಗಲ್ಹತ್ತಿರುವಿ ಸುಲಭದೆನ್ನನು ಬಿಟ್ಟು ಅಗಲದಿರ್ದರೆ ನಿನಗೆ ಜಲಜಾಕ್ಷ ಶ್ರೀರಾಮನೊನರುಹಂಘ್ರ್ಯಾಣೆ 3
--------------
ರಾಮದಾಸರು
ಓಡಿ ಬಾರೋ ರಂಗಯ್ಯ ಓಡಿ ಬಾರೋ ಕೃಷ್ಣಯ್ಯ ಪ. ನೋಡಿ ನಿನ್ನ ಮುತ್ತನೀಡುವೆ ಹಾಡಿ ಜೋಗುಳವ ಪಾಡುವೆ ಅ.ಪ. ಮೊಸರು ಭಾಂಡ ಒಡೆದು ಬೆಣ್ಣೆ ಹಸುಳೆ ಮೆದ್ದು ಬಾಯೆಲ್ಲಾ ರಸಿಕಸಿಯಾಗಿರುವ ಮೈಗೆ ಬಿಸಿ ನೀರೆರೆವೆನೊ ರಂಗ 1 ಬಿಸಿ ದೋಸೆಯ ಕೊಡುವೆನೆ ಮೊಸರೋಗರವ ಉಣಿಸಿ ನಿನಗೆ ಹಸುರಂಗಿಯ ತೊಡಿಸುವೆ ಕೃಷ್ಣಾ 2 ಮುದ್ದು ಮುದ್ದಾದ ಪಾದ ಹೆಜ್ಜೆನಿಟ್ಟು ಬಾರೆಲೊ ಮುದ್ದೆ ಬೆಣ್ಣೆ ಹಣ್ಣು ಕೊಟ್ಟು ಮುದ್ರೆಯುಂಗುರವನಿಟ್ಟು ನೋಡುವೆ 3 ಅಣ್ಣ ಬಲರಾಮನೊಡನೆ ಚಿಣ್ಣ ಆಡಬಾರೆಲೊ ಚಿಣ್ಣಿಕೋಲು ಚಂಡು ಬುಗುರಿ ಚಿಣ್ಣ ಕೊಡುವೆನೋ ಕೃಷ್ಣಾ 4 ಶೃಂಗಾರವ ಮಾಡುವ ಶ್ರೀ ಶ್ರೀನಿವಾಸ ಬಾರೆಲೊ ಮುದ್ದು ಕಂಗಳಿಗೆ ಕಪ್ಪನ್ಹಚ್ಚಿ ರಂಗ ನಿನ್ನ ನೋಡುವೆದಣಿಯ5
--------------
ಸರಸ್ವತಿ ಬಾಯಿ
ಕಡಲಶಯನನ ಪುರÀದಿ ಬಡವ ರೊಬ್ಬರಿಲ್ಲಪಡೆಯಲಿ ಮುತ್ತು ಅಳೆದಳೆದು ಕೋಲಪಡೆಯಲಿ ಮುತ್ತು ಅಳೆದಳೆದು ರಂಗಯ್ಯಕೊಡವೋನು ದಾನ ಕಡೆಯಿಲ್ಲ ಕೋಲ 1 ಚಿಂತಾಮಣಿ ಕಾಮಧೇನು ಕಲ್ಪತರು ಎಂಬೊಶ್ರೀಕಾಂತನ ಕೈದಾನಕ್ಕೊಳಗಾಗಿ ಕೋಲ ಶ್ರೀಕಾಂತನ ಕೈದಾನ ಕ್ಕೊಳಗಾಗಿ ಸ್ವರ್ಗದ ಅಂತಃ ಪುರದಲ್ಲಿ ಅಡಗಿದವು ಕೋಲ2 ಒಂದಕ್ಕೊಂದು ತಾವು ನಿಂತು ಮಾತಾಡುತತಂದೆ ರಾಮೇಶನ ಅರಮನೆಗೆ ಕೋಲತಂದೆ ರಾಮೇಶನ ಅರಮನೆಗೆ ತಾವುಹೋಗೋದು ಛsÀಂದಲ್ಲವೆಂದು ಜರಿದಾವು ಕೋಲ3
--------------
ಗಲಗಲಿಅವ್ವನವರು
ಕಂಡು ಮನ ಹಿಗ್ಗೋದು ರಂಗಯ್ಯನ ಕೊಂಡಾಡಿಮನ ಉಬ್ಬೋದು ಪ. ಎಂಟು ದಿಕ್ಕಿಗೆ ದಿವ್ಯ ಮಂಟಪ ಮಣಿಯುಎಸೆಯೆ ಕಂಠದಿ ಸ್ವರವ ಕುಣಿಸುತಕಂಠದಿ ಸ್ವರವ ಕುಣಿಸುತಸಭೆಯೊಳು ನಟನೆ ಮಾಡುವರು ಕಡೆಯಿಲ್ಲ 1 ಛÀತ್ರ ಚಾಮರ ದಿವ್ಯ ಉತ್ತಮ ವ್ಯಜನವಸುತ್ತ ಬೀಸುವ ಸುಗುಣಿಯರುಸುತ್ತ ಬೀಸುವ ಸುಗುಣಿಯರುಸಭೆಯೊಳು ನರ್ತನ ಮಾಡೋರಮ್ಮ ಐವರು 2 ಕುಂದಣವುಳ್ಳ ಇಂದಿರೆರಮಣನಒಂದೊಂದು ಗುಣವ ವಿವರಿಸಿಒಂದೊಂದು ಗುಣವ ವಿವರಿಸಿಸಭೆಯೊಳು ವಂದಿಗರು ಬಂದು ಹೊಗಳೋರು3 ಭಾಗೀರಥಿ ಜಲವ ಬ್ಯಾಗ ಗಿಂಡಿಯ ತುಂಬಿಸಾಗರಶಯನನ ಅಭಿಷೇಕಸಾಗರಶಯನನ ಅಭಿಷೇಕ ಮಾಡುವಪನ್ನಂಗವೇಣಿಯರು ಕಡೆಯಿಲ್ಲ 4 ಮಲ್ಲಿಗೆ ತುರುಬಿನ ಮಲ್ಲಮುಷ್ಠಿಕರೆಲ್ಲಗುಲ್ಲು ಮಾಡುತಲೆ ಸಭೆಯೊಳು ಗುಲ್ಲು ಮಾಡುತಲೆ ಸಭೆಯೊಳು ಅಲ್ಲಲ್ಲೆಬಿಲ್ಲನೆತ್ತುವರು ಕಡೆಯಿಲ್ಲ 5 ಬಾಲೆಯರು ಅಂಗಾಲು ಲಾಲಿಸಿ ಒರೆಸುತಮ್ಯಾಲೆ ಪನ್ನೀರು ಎರೆಯುತ ಮ್ಯಾಲೆ ಪನ್ನೀರು ಎರೆಯುತ ರಂಗಯ್ಯನಕಾಲಿಗೆ ಎರಗುವರು ಐವರು 6 ಹರದೆಯರು ಅಂಗಾಲು ಸೆರಗಿಲೆ ಒರೆಸುತ ಕಿರುಗೆಜ್ಜೆ ರುಳಿಯ ಸರಿಸುತಕಿರುಗೆಜ್ಜೆ ರುಳಿಯ ಸರಿಸುತ ರಾಮೇಶನ ಎರಕಿ ನಿಂತವರು ಕಡೆಯಿಲ್ಲ7
--------------
ಗಲಗಲಿಅವ್ವನವರು
ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ ತೊಂಡವತ್ಸಲ ಧರ - ದಂಡ ಕಮಂಡಲ ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ಅ.ಪ ಮಣಿ ವಿಭವಾ ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ ಕಪೋಲ ಯುಗ ಭಾಸವಾ ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ 1 ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ ಪೊಂದಿ ಪೊಳೆವೊದದರ ಛವಿಯಾ ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ ಭುಜದಳೊಪ್ಪುವ ಮುದ್ರನಾಮವ ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ 2 ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ ಕದಳಿ ಸ್ತಂಭವಾ ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ 3 ಕರಿರದೋಪಮ ಜಂಘೆಗಳಾ - ಗುಲ್ಫ ವರರತ್ನ ಪಾದಾಂಗುಲಿ ಸಂಫÀಗಳ ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ ದುರಿತ ನಿರುತ ನೀಡುವೋ ನಭೀಷ್ಟವಾ ಭಕುತರೊಳಗೆ ತಾನಾಡುವಾ ಹಾ - ಹಾ - ಹಾ 4 ನೀತ ಗುರುಜಗನ್ನಾಥಾ ವಿಠಲಪಾದ ಪ್ರೀತಿಪೂರ್ವಕ ಭಜಿಸುತ ಭೂತ ಪ್ರೇತದ ಭಾಧೆUಳನೆಲ್ಲ ಕಳೆಯುವಾ ಸಕಲ ಸೌಖ್ಯನೀಡುವಾ ನಂಬಿದರೀತ ಪೊರೆಯುವಾ ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ 5
--------------
ಗುರುಜಗನ್ನಾಥದಾಸರು
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ ಬಡವರ ಬಂಧು ಬಹುಕೃಪಾಸಿಂಧು ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ. ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ ಅತಿಪಾತಕಿ ಅಜಾಮಿಳನ ಉದ್ಧರಿಸಿದೆ ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ 1 ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ ಬಳಲಿಸಬ್ಯಾಡವೊ ಭಕ್ತಕುಟುಂಬಿ ನಳಿನದಳಾಂಬಕ ನೀ ಸಲಹೆನ್ನನು 2 ಹೇರೊಪ್ಪಿಸಿದ ಮೇಲ್ಯಾತರ ಸುಂಕವು ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 3
--------------
ಹೆಳವನಕಟ್ಟೆ ಗಿರಿಯಮ್ಮ