ಒಟ್ಟು 2084 ಕಡೆಗಳಲ್ಲಿ , 116 ದಾಸರು , 1437 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮ ರಂಗ ಮಧುರೆಗೆ ನಡೆತರಲು ಪ ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ| ರಥದಲಿ ಕುಳಿತು ಫಡ ಫಡಫಡಲೆಂದು| ಪಥದಲಿ ನಡಸ್ಯಾಡುತಲಿ 1 ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ| ಇಲ್ಲಿಗೆ ಬಂದನು ಎನುತಲಿ ಕೇಳಲು| ಎಲ್ಲರು ನಡೆದರು ನೋಡಲಾಗಿ 2 ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ| ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ 3 ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ ನಡೆದರು ಸಂಭ್ರಮದಿಂದ4 ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ ದೇಹದ ಬಿಟ್ಟು ನಡೆದಳು 5 ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು| ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ6 ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ| ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು7 ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು| ಮುನ್ನಿನ ದೋಷವ ಕರಗುವ ಪರಿಯಲಿ| ಪುಣ್ಯ ಸಾಮಗ್ರಿಯ ಮಾಡಿದರಂದು 8 ಕಂಡಾ ಪರಿಯ ರೂಪವಾ| ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ ಪ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ ಅ.ಪ ಆರುಮೂರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು 1 ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗ್ಗೆ ಬೀಳಹಾಗೆ ಕುಡಿದಳು ಹತ್ತ್ಹೆಡಿಗ್ಹೋಳಿಗೆ ಪತ್ತೆಯಿಲ್ಲದೆ ತಿಂದು ಮೆತ್ತಗೆ ಸುತ್ತಿಕೊಂಡು ಮಲಗಿದಳು 2 ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳನು ಕುಡಿದೊಡೆಯ ಶ್ರೀರಾಮನ ಕೂಡಿದಳು 3
--------------
ರಾಮದಾಸರು
ನರನೆನಬಹುದೆ ಸದ್ಗುರು ವರನಾತರುವೆನಬಹುದೆ ಸುರತರುವನ್ನ ಪ ಆಸನವನೆಹಾಕಿ ಕುಳ್ಳಿರಿಸಿದವನನಾಸಿಕ ಕೊನೆದೃಷ್ಟಿ ಇರಿಸಿದವನಬೀಸುವ ವಾಯುವ ಕುಂಭೀಸೀದವನಸೂಸುವ ಮುತ್ತಿನ ಮಳೆ ಸುರಿಸಿದವನ 1 ಆರು ಮಂಟಪ ನೆಲೆ ಅಡರಿಸಿದವನಭೇರಿ ಘಂಟವು ಶಂಖವು ಭೋರಿಡಿಸಿದವನಬೀರುವ ದ್ವಿದಳ ಸದರಕಾಶಿಸಿದವನನೂರು ಕೋಟಿಯ ರವಿ ಬೆಳಕ ಚೆಲ್ಲಿದವನ 2 ಸಾವಿರ ದಳದ ಮನೆಯ ಜೈಸಿದವನಈವ ಬ್ರಹ್ಮರಂದ್ರ ಸುಖವುಣಿಸಿದವನಕೇವಲ ಶಿಂಶುಮಾರಕೆ ಸೇರಿದವನದೇವ ಚಿದಾನಂದನ ಮಾಡಿದವನ 3
--------------
ಚಿದಾನಂದ ಅವಧೂತರು
ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1 ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2 ಕ್ರೂರ ದೈತ್ಯನ ತೋರಗರುಳಾ ತೆಗೆ ದ್ಹಾರ ಮಾಡಿದೆ ನಿಜಕೊರಳ ಕಂಡು ವಾರಿಜಾಸನ ಮುಖದಯರ್ಕಳ ಪುಷ್ಪ ಧಾರಿಗೆರೆದು ವೇಗ ತರಳಾ ಆಹ ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ ರೋರುಹಾವನು ಕಾಯ್ದೆ ಕಾರಣ್ಯನಿಧಿ 3 ಜಯಜಯ ದೇವವರೇಣ್ಯ ಮಹ ದ್ಭಯ ನಿವಾರಣನೆ ಅಗಣ್ಯ ಗುಣಾ ಶ್ರಯ ಘೋರ ದುರಿತಾರಣ್ಯ ಧನಂ ಜಯ ಜಗದೇಕ ಶರಣ್ಯ ಅಹ ಲಯವಿವರ್ಜಿತ ಲೋಕ ತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರಮಯ ಹರ ದಯ ಮಾಡೆನ್ನೊಳು ಲಕ್ಷ್ಮೀ 4 ಕುಟಲ ದ್ವೇಷದವನು ನೀನಲ್ಲ ನಿನ್ನಾ ರ್ಭಟಕಂಜಿದರು ಸುರರೆಲ್ಲ ನರ ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ ಸಟಿ ಕಾಣೆನಪ್ರತಿಮಲ್ಲ ಅಹ ವಟಪತ್ರಶಯನ ಧೂ ರ್ಜಟಿವಂದ್ಯ ಜಗನ್ನಾಥ ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5
--------------
ಜಗನ್ನಾಥದಾಸರು
ನರಹರಿ ಬಂದು ಮೂಡಿದಾ ಶರಣಗದಯವಾ ಮಾಡಿದಾ ಪ ಛಟ ಛಟ ಶಬ್ಧವ ತೋರುತಾ ಪಟ ಪಟ ತಾರೆಗಳಾರಲು ತಾ 1 ಗುಡ ಗುಡ ಗುಟ್ಟಿಬಾಯಾಳಗಗ್ನಿಯ ಧಡ ಧಡ ಕಿಡಿಗಳನುಗುಳುತಾ ಗಡ ಬಡಿಸಲು ಸಮುದ್ರಗಳೆಲ್ಲವು ಬುಡು ಬುಡು ಗುಳ್ಳೆಗಳೇಳಲು ತಾ2 ಫಳ ಫಳ ಭೂಮಿಯು ಬಿಚ್ಚಿತು ಗಿರಿಗಳು ಹಳ ಹಳ ಕಲ್ಲುಗಳುದುರಿದವು ಭಳ ಭಳ ಭಾಸಮ ಗಡಿಶತ ತೇಜನ ಥಳ ಥಳ ಮಿಂಚುಗಳಾಡಿದವು 3 ಮಾಗ್ಗಿತು ಧನಿಯನು ಕೇಳುತ ಕೇಳವು ಮುಗ್ಗಿತು ಕಂಗಾಣದೆ ಹಲವು ಅಗ್ಗಳ ದೈತ್ಯರು ದೂರದಿ ಬಿಸುಟರು ನುಗ್ಗಾದವು ಅವರಾಯುಧವು 4 ಭವ ಭವ ಸುರಮುನಿ ಇಂದ್ರರು ಇರದೆವೆ ಮುರಿಯನು ಸಾರಿದಿರು ಗುರುವರ ಮಹಿಪತಿ ನಂದನಸಾರಥಿ ಶರಣಿಂದೆನುತಲಿ ಹೊಗಳಿದನು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಹರಿ ಶರಣರಸುರತರು ಶ್ರೀಕರ ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ 1 ವೇದವೇದಾದಿ ನಮಿತ ಸಾಧುಸಜ್ಜನ ವಿನುತ ಪಾದದಾಸರ ಭವಬಾಧೆಗೆಲಿಸಿ ಸು ಹಾದಿ ತೋರಿಸಿ ಬಹು ಮೋದದಿಂ ಸಲಹುವಿ 2 ನೀ ಮಾಡಿದುಪಕಾರ ನಾ ಮರೆಯಲಾರೆ ದೇವ ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ 3
--------------
ರಾಮದಾಸರು
ನರಹರಿಯ ಗುಣ ಕೊಂಡಾಡುವುದೇ ಲೇಸು ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ ಒಳ್ಳೆಯವನೆನಿಸುವ ಬಡತನವೇ ಲೇಸು ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1 ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ ಸಾಲಿಲ್ಲದ ಮನೆಯಲ್ಲಿಹುದೇ ಲೇಸು ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ ಲೋಲನಾ ಪಾದದಲ್ಲಿರುವುದೇ ಲೇಸು 2 ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ ತನ್ನವಳ ಕೂಡ ಬಡಿದಾಡುವುದೇ ಲೇಸು ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3 ತಾನು ಮಾಡಿದೆನೆಂಬುದಕಿಂತ ಹರಿಯ ಆಧೀನವೆಂದರಿಯುವುದು ಪರಮ ಲೇಸು ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ ಜ್ಞಾನಿಯಾದವನ ಸಲಹುವುದೇ ಲೇಸು 4 ದುಷ್ಟ ಮನುಜನು ಮಾಡುವ ಕೃಪೆಗಿಂತಲೂ ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ ವಿಠಲನ ಧ್ಯಾನದ ಸುಖವೇ ಲೇಸು 5
--------------
ಹನುಮೇಶವಿಠಲ
ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ ನರರಿಗೆ ಸ್ವತಂತ್ರ ಪ ಗಳಿಸಿದ ಧನವು ನಳಿನಾಕ್ಷೀಯರಿಗೀವ ಸೆಳೆದು ವಯ್ಯುವಾಗುಳೀವರಿಲ್ಲವೋ 1 ನಾನು ನನ್ನದೆಂಬುವ ಈ ದೇಹವು ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ 2 ಜೀವವು ಕಾಯವ ತ್ಯಜಿಸಿ ಪೋಗುವಾ ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ 3 ಮಾಡಿದ ಧರ್ಮಾಕರ್ಮವೆಜೀವನ ಕೂಡ ಮಂತ್ರ ಸಂಗಡ ಬಾಹುದು 4 ದೋಷ ರಹಿತ ಹನುಮೇಶವಿಠಲನೇ ಈಶನೆಂದು ನಿಜ ದಾಸನಾಗೋ ಸ್ವತಂತ್ರ 5
--------------
ಹನುಮೇಶವಿಠಲ
ನವನೀತ ಚೋರ ಎಲ್ಲರ ಭುಲ್ಲೈಸಿದಿ ನಂದಕುಮಾರ ಧ್ರುವ ಪರಿಪರಿ ಅಡಿಸಿದಿ ನೀ ಪರನಾರಿಜಾರ ಮರುಳು ಮಾಡಿದಿ ನಮ್ಮ ಗೊಲ್ಲತೇರ ಕರಗೂಡುತಲಿ ತಿಂದ್ಯೋ ನೀ ಪಾಲ್ಮೊಸರ ಆರಿಗೆ ಹೇಳಬೇಕು ನಿನ್ನ ದೂರ 1 ಮಾಡದ ಮಾಡಿದಿ ನೀ ಮನಬಂದ್ಹಾಂಗೆ ಪಡೆದು ಲೋಕದಲುಸುರಗುಡದ್ಹಾಂಗೆ ಹಿಡಿದೇನಂದರ ನೀ ಕೈಗೂಡಿ ಬ್ಯಾಗೆ ತುಡುಗತನ ಮಾಡಿದಿ ನಿನಗಕ್ಕು ಹಾಂಗೆ 2 ಬಿಡಲರಿ ಯೆವು ನಿನ್ನ ತಿಳಿಕೊ ವಿಚಾರ ಮಾಡಲಿಕ್ಕಾಗದು ಇದಕೆ ತಾ ಪರಿಹಾರ ಹಿಡಿದೇವು ನಿನ್ನಾಟ ಕಂಡು ಕಣ್ಣಾರ ಮೂಢ ಮಹಿಪತಿಗಾಯಿತು ತಾ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನವನೀತ ಜೋರನ ಅವನ ಕಂಡರದೇಳಿ ಹವಣಿಸಿ ಹಿಡಿದುಕೊಂಬಾ ಧ್ರುವ ನಾಕು ಬೀದಿಯೊಳಗೆ ಸಾಕು ಸಾಕು ಮಾಡಿದ ಸೋಂಕದೆ ಕೈಯ್ಯಗೊಡಾ ಬೇಕೆಂದಾರುಮಂದಿಗೆ 1 ಹದಿನೆಂಟು ಸಂಧಿಯೂಳು ಶೋಧಿಸಿನೋಡಿದರೆ ಮದನ ಮೋಹನ ನೋಡಿ 2 ತಾನೆ ಸಿಕ್ಕುವ್ಹಾಗೊಂದು ಮನಗೂಡಬೇಕು ತಂದು ದೀನ ಮಹಿಪತಿ ಸ್ವಾಮಿ ಅನಕಾ ದೋರತಾ ಬಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನವವಿಧ ಭಕುತಿ ಶ್ರವಣದಿಂದಲಿ ಪಾಪಹರಣವಾಗುವುದೆಂದು ಕವಿಗಳೆಲ್ಲರು ಕೂಗಿ ಒದರುತಿಹರು ಕಿವಿಗಳಿಗಾನಂದದಾಭರಣದಂತಿಹುದು ಶ್ರೀ- ಹರಿಯ ದಿವ್ಯನಾಮಾಮೃತದರಸವು ಮಾಧವನ ಮೂರ್ತಿಯನು ನೋಡದಿಹ ಕಂಗಳು ನವಿಲು ಕಣ್ಣುಗಳೆಂದು ಪೇಳುತಿಹರು ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ ಫಣಿರಾಜನಿಗೆ ವಶವಲ್ಲ ದೇವಾ 1 ಕೀರ್ತನವು ಮಾಡಲು ಪಾತಕವು ಪರಿಹರವು ಮಾತುಳಾಂತಕನ ಮಹಿಮೆ ಘನವು ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು ನಾಶಗೈವನು ದುರಿತರಾಶಿಗಳನು ಮಾಡಿದಪರಾಧಗಳ ಮಾಧವನು ಮನ್ನಿಸುವ ಶ್ರೀಧರನ ಸ್ತುತಿಸಿ ಕೊಂಡಾಡುತಿಹರ ಕರುಣಾಕರ ಕಮಲನಾಭವಿಠ್ಠಲ ದುರಿತದೂರನು ಕಾಯ್ವ ಶರಣಜನರ 2 ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ ಪರಮ ಮಂಗಳನೀವ ಪರಮಾತ್ಮನು ದುರಿತ ದೂರನ ಪಾದಸ್ಮರಣೆ ಮಾಡುವರಿಗೆ ಪರಿಪರಿಯ ಸೌಖ್ಯಗಳ ಕೊಡುವ ದೇವ ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ ಮೂರ್ತಿ ಶ್ರೀಮಾಧವ ಕನಕಗರ್ಭನ ಪಿತನು ಕರುಣಾನಿಧಿಯು ಕಮಲನಾಭ ವಿಠ್ಠಲ ಕಾಯ್ವ ಸುಜನರ3 ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ ಧರಣಿ ಈರಡಿಗೈದ ದಿವ್ಯಪಾದ ಫಣಿ ಹೆಡೆಯ ತುಳಿದ ಪಾದ ವರ ಋಷಿಗಳೆಲ್ಲ ವಂದಿಸುವ ಪಾದ ಇಂದಿರಾದೇವಿ ಬಹುಚಂದದಿಂದೊತ್ತುತ ಕಂದರ್ಪನಯ್ಯನಿಗೆ ಪಾದಸೇವ ಚಂದದಿಂದಲಿ ಮಾಡಿ ಮಾಧವನಿಗೆ ನಂದಗೋಪಿಯ ಕಂದ ಸಲಹುಎನಲು ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4 ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ ಭಕ್ತರ ಹೃದಯದಲಿ ಪೊಳೆವ ದೇವ ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು ಮತ್ತೆ ಪಾವಡಿ ಥಳಥಳನೆ ಹೊಳೆಯೆ ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5 ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ ಕಂದರ್ಪನಯ್ಯ ಕಮಲಾಕ್ಷ ಹರಿಯೂ ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ ಇಂದೀವರಾಕ್ಷಿ ನಸುನಗುತ ಬೇಗ ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ ವಂದಿಸುತ ಸಿರಬಾಗಿ ಚಂದದಿಂದ ಮಂದಾರ ಪಾರಿಜಾತಗಳ ತಂದು ತಂದೆ ಕಮಲನಾಭ ವಿಠ್ಠಲನ ಮುಡಿಗೆ ಸಂಭ್ರಮದಿ ಮಳೆಗರೆಯೆ ಚಂದದಿಂದ 6 ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ ಮೀಸಲಾಗಿಹನು ಹರಿದಾಸ ಜನಕೆ ಪೋಷಿಸೆಂದೆನುವವರ ದೋಷಗಳನೀಡಾಡಿ ದೋಷರಹಿತನು ಪೊರೆವ ಸರ್ವಜನರ ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ ವಾಸುಕೀಶಯನ ಸಜ್ಜನರ ಪೊರೆವ ಮುರಳೀಧರ ಮಾಧವನು ಕರುಣದಿಂದ ಶರಣ ಜನರನು ಪೊರೆವ ಮರೆಯದೀಗ ಕಮಲನಾಭವಿಠ್ಠಲನು ಕಾಯ್ವದೇವ 7 ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು ಕೃಷ್ಣನ ಕೊರಳಿಗ್ಹಾಕುತಲಿಬೇಗ ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ ವಿಚಿತ್ರದಿಂದಾಡುತಿರೆ ನೋಡಿ ಸುರರು ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ ಅರ್ಥಿಯಿಂದ ಸುರಿಸುತಿರೆ ಹರುಷದಿಂದ ಅಪ್ರಮೇಯನು ಶ್ರೀಶ ಶ್ರೀನಿವಾಸ ಸರ್ಪಶಯನನು ಕಮಲನಾಭ ವಿಠ್ಠಲ ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8 ನಿತ್ಯ ತೃಪ್ತಗೆ ಮಾಡಿ ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ ಅಚ್ಚುತಾನಂತನಿಗೆ ಅರ್ಪಿಸುತಲಿ ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ ನಿತ್ಯ ಮುಕ್ತಳು ಮಾಡಿ ಹರುಷದಿಂದ ಸತ್ಯ ಸಂಕಲ್ಪ ಶ್ರೀ ಮಾಧವನಿಗೆ ಮುತ್ತಿನಾರತಿ ಬೆಳಗಿ ಅರ್ಥಿಯಿಂದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9
--------------
ನಿಡಗುರುಕಿ ಜೀವೂಬಾಯಿ
ನಾ ನಿಮ್ಮ ದಾಸನಯ್ಯಾ ಸೀತಾರಾಮಾ ಪ ನಾನು ನಿಮ್ಮಯದಾಸನಹುದೊ ನೀನು ಯೀಜಗದೀಶನಹುದೊ ಭಾನು ಕೋಟಿ ಪ್ರಕಾಶನೇ ಸಂಗೀತ ಗಾನ ವಿನೋದರಂಗಾ 1 ಮತಿಹೀನ ನಾನಾದೆನೈ ಶಾಶ್ವತನಾ ಸ ದ್ಗತಿಯ ನೋಡದೆ ಹೋದೆನೈ ಹಿತವ ಪಾಲಿಸಬೇಕೊ ವೋ ಶ್ರೀ ಪತಿತಪಾವನ ರಂಗನಾಯಕ ಸತಿ ಶಿರೋಮಣಿ ಪರಮಸೀತಾ ಪತಿಯೆ ನಾನಿನ್ನ ಸುತನು ಕಾಣೈ 2 ಕಂದಯ್ಯಗಾರುಗತಿ ನಿನ್ನಯ ಚಲ್ವ ಚಂದಗಾದವೆ ಶೃತೀ ಹಿಂದೆ ಮಾಡಿದ ಕೊಲೆಗಳಂ ಬೆನ್ನ ಮುಂದೆ ಬಾರದಂತದ ಹರಿಯೋ ಇಂದಿರೇಶ ಮುಕುಂದ ಪರಮಾ ನಂದ ತುಲಸೀರಾಮ ದೇಶಿಕಾ 3
--------------
ಚನ್ನಪಟ್ಟಣದ ಅಹೋಬಲದಾಸರು
ನಾ ಮಾಡಿದತಿಶಯ ಅಪರಾಧ ಅಹಾ ಸ್ವಾಮಿದ್ರೋಹವೆ ಮಾಡಿದೆ ಪ ನೇಮವಿಲ್ಲದೆ ಪಾಪ ಕಾಮಿಸಿ ಮಾಡಿ ಹರಿ ಪ್ರೇಮಕ್ಕೆ ದೂರಾದೆ ಪಾಮರತನದಿ ಅ.ಪ ಗುರುನಿಂದೆ ಮಾಡಿದೆ ಸ್ಮರಿಸಿದೆನನುದಿನ ಸ್ಮರಿಸಬಾರದ ಸ್ತ್ರೀಯರ ಶರಣಜನರು ಕಂಡು ಶಿರವ ಬಾಗದೆ ಮಹ ಗರುವದಿಂ ಚರಿಸಿದೆ ಪರಿಪರಿ ಜಗದಿ 1 ಲಕ್ಷಿಸದೆ ಪರರರ್ಥ ಭಕ್ಷಿಸಿ ಇಲ್ಲೆನುತ ಪಕ್ಷಿಗಮನನ ಸಾಕ್ಷಿಟ್ಟು ಲಕ್ಷದಶಶತಪಾಪ ಲಕ್ಷ್ಯವಿಲ್ಲದೆ ಗೈದು ಶಿಕ್ಷೆಗೆ ಗುರಿಯಾದೆ ಮೋಕ್ಷವನರಿಯದೆ 2 ಪಿತಮಾತೆಯರ ನೂಕಿ ಇತರರ ಜತೆಯೊಳು ಮತಿಗೆಟ್ಟು ಮಮತಿಟ್ಟಿಹೆ ಮಿತಿಯಿಲ್ಲದನೃತ ಕ್ಷಿತಿಯೊಳು ಸರಿಧರ್ಮ ಹಿತಚಿಂತನಿನಿತಿಲ್ಲದತಿಭ್ರಷ್ಟನಾದೆ 3 ಮಣಿದು ದೈನ್ಯೆಂಬರಿಗೆ ಘನಹಾಸ್ಯಗೈಯುತ ಮನವ ನೋಯ್ಸಿದೆ ಬೆನ್ನ್ಹಚ್ಚಿ ಕನಿಕರೆಂಬುದು ಎನ್ನ ಕನಸಿನೊಳಿನಿತಿಲ್ಲ ಮನಸಿನಂತ್ವರ್ತಿಸಿ ಘನಕರ್ಮಿಯಾದೆ 4 ಇಂತು ಪಾಪಿಗೆ ಸುಖವೆಂತು ತ್ರಿಜಗದೊಳು ಕಂತುಜನಕ ಶ್ರೀರಾಮ ಭಕ್ತವತ್ಸಲ ನೆಂಬ ಬಿರುದು ವಹಿಸಿದಿ ಎನ್ನ ದೆಂಥ ತಪ್ಪಿರೆ ಕ್ಷಮಿಸಿ ಸಂತಸದಿಂ ಪೊರೆ 5
--------------
ರಾಮದಾಸರು
ನಾಕೇಶ ವಿನುತೆ | ರ ತ್ನಾಕರನ ತಾಯೆ ಪ ಗೋಕುಲದೊಳಿದ್ದು | ಆಕಳ ಕಾಯ್ದಗೆ ಲೋಕಪಾವನೆ ಸಿರಿಯೆ ಅ.ಪ ನೀರೊಳಗೆ ಇದ್ದು ನಗಭಾರ ಬೆನ್ನಲಿಪೊತ್ತು ಬೇರು ಮೆಲ್ಲುವನಿಗೆ | ಚೀರಿ ಕಂಭದಿ ಬಂದು | ಘೋರ ರೂಪದಿ ಬಲಿ ದ್ವಾರ ಕಾಯ್ದವಗೆ | ವೀರ ನೆನಿಸಿ ಪೆತ್ತ | ನಾರಿಯ ಶಿರವ ಸಂ ಹಾರಮಾಡಿದವಗೆ | ಭೂರುಹಚರ ಪರಿವಾರ ದೊಳಗಿದ್ದು ದಧಿ ಚೋರನೆನಿಸಿದವಗೆ 1 ಸಂದೇಹವಿಲ್ಲದೆ ವಸನ ತ್ಯಜಿಸುತ ಬಂದು ನಿಂದವನಿಗೆ | ಇಂದಿರಾಧವ ನಿನ್ನ ಹಿಂದೆ ಬಂದವನ ಅಂದು ಕೊಂಡವನಿಗೆ | ಕುಂದರದನೆ ನಿನ್ನ ಪೊಂದದೆ ಛಂದದಿ ಕಂದರ ಪಡೆದವಗೆ 2 ಜಾತಿಯನರಿಯದೆ ಶಬರಿಯ ಎಂಜಲ ಪ್ರೀತಿಲಿ ಉಂಡವಗೆ ಶ್ವೇತವಾಹನಜಗೆ ತಾ ಸೂತನೆಂದೆನಿಸುತ ಖ್ಯಾತಿ ಪಡೆದವಗೆ ನೀತಿ ಇಲ್ಲದೆಯ ಮಾತೆಯ ಅನುಜನ ಘಾತಿಸಿದಾತನಿಗೆ || ವಾತಾಶನವರ ತಲ್ಪದೊಳು ಮಲಗಿದ ಶಾಮಸುಂದರ ಧೊರೆಗೆ 3
--------------
ಶಾಮಸುಂದರ ವಿಠಲ
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ