ಒಟ್ಟು 2554 ಕಡೆಗಳಲ್ಲಿ , 109 ದಾಸರು , 1860 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಡವ ಮಾಡಲಿ ಬೇಡ ಹಡೆದವ್ವ ಎ ನ್ನೊಡೆಯನನು ಹುಡುಕಿ ತಾರೆ ಪಿಡಿವೆ ಪಾದವ ಪ ತಡವ ಮಾಡದೆ ಪೊಡವಿಯೊಳು ಕಡು ಸಡಗರಾರ್ಯನ ಹುಡುಕಿ ತಂದರೆ ಹಡೆದು ನಿನ್ನ್ಹೆಸರಿಸಿವುವೆನೆನ್ನವ್ವ ಸರಿಮಾಡ್ವೆನವ್ವ ಅ.ಪ ಜೀವದರಸನ ಹಂಬಲೆನಗವ್ವ ಅತ್ಯಧಿಕವಾಗಿ ಕಾಯಸೊರಗಿ ಕ್ಷೀಣವಾಯ್ತೆವ್ವ ಪ್ರಾಯಬಂದರೆ ಸುಮ್ಮನೆ ಹೋಗುತಾದವ್ವ ಪ್ರಾಯಕ್ಕೆ ತಕ್ಕ ಚಾಯಗಾರ ಕಂಡೇನ್ಹೇಗವ್ವ ಕಾಯರಹಿತ ಕಾರುಣ್ಯನಿಧಿ ಮಾಯತಿಳಿಯುವರಿಲ್ಲ ಆತನ ದಿವ್ಯಚರಿತ ನೆನೆದು ನೆನೆದು ಬಾಯ ಬಿಡುವೆನೆ ಆಯತಾಂಬಕಿ 1 ವಸ್ತೊಡೆವೈಷ್ಟಿರಲು ಏನವ್ವ ಅತಿಶೋಭೆಯೆನಿಪ ಮುತ್ತುಯಿಲ್ಲದ ಮೋರೆಯಾಕವ್ವ ಹತ್ತಿರಕೆ ಬರಗೊಡರವ್ವಾ ಮುತ್ತೈದೆರೆಲ್ಲರು ಅತ್ತ ಇತ್ತೆಂದೆಳೆಯುತಿಹ್ಯರವ್ವ ಮತ್ತೆ ಬೇಡಲು ದೊರೆಯದಂಥ ಹೊತ್ತು ಸುಮ್ಮನೆ ಹೋಗುತಿದೆ ಕರ್ತ ತುರ್ತು ದೊರೆಯದನಕ ಚಿತ್ತ ಸ್ವಸ್ಥವಾಗದವ್ವ 2 ಭೂಮಿತ್ರಯದೊಳಧಿಕ ಕೇಳವ್ವ ಆತನಹೆಸರು ಕಾಮಿತವನೀಗರಿತುಕೊಂಡೆನವ್ವ ನೇಮದಿಂದ ಭಜಿಸುತಿಹೆನವ್ವ ಎನ್ನಕಡೆಗಾತ ಪ್ರೇಮದಿಂದ ಸುಳಿಯದಿಹ್ಯನವ್ವ ಭಾಮೆಬಾರೆಂದು ಬದಿಲಿಕರೆದು ಪ್ರೇಮದಿಂದ ಅಪ್ಪಿ ನಿನ್ನಯ ಸ್ವಾಮಿ ಶ್ರೀ ರಾಮ ನಾನೆಂದ್ಹೇಳಲು ಕ್ಷೇಮ ಪಡೆದು ಬಾಳ್ವೆನವ್ವ 3
--------------
ರಾಮದಾಸರು
ತಡೆಯುವುದ್ಯಾಕಯ್ಯಾ ಹರಿಯೆನ್ನ ಕಯ್ಯಾ ಬಿಡು ಬಿಡು ಹರಿಪಾದ ಸೇರುವೆನಯ್ಯಾ ಪ ಅರಿಗಳನೆಲ್ಲರ ಕಡಿದು ನಾ ಬಂದೇ ಇಂದು ನಾ ಬಂದೇ 1 ತುಂಟರೆಲ್ಲರನ್ನು ಗೆದ್ದು ನಾ ಬಂದೇ ಇಂದು ಶರಣೆಂದು ಬಂದೇ 2 ಸನ್ನುತ ಹರಿಸೇವೆ ಮಾಡಲು ಬಂದೆ ಚನ್ನಕೇಶವ ಸ್ವಾಮಿ ಶರಣೆಂದು ತಂದೇ 3
--------------
ಕರ್ಕಿ ಕೇಶವದಾಸ
ತತ್ವ ಚಿಂತನೆ ಮಾಡು ಮನುಜಾ ವ್ಯರ್ಥಕಾಲವು ಕಳೆಯದೆ ಪ ಮೂರುಬಾರಿಗೆ ಸಾರಿದೆ ಅ.ಪ ಮನೆಯು ಉರಿಯುವಾಗ ಭಾವಿ- ಯನು ತೆಗೆವ ನರನಂದದಿ ಕೊನೆಗೆ ಯಮನವರೆಳೆವ ಕಾಲದಿ ಕೋರಿದರೆ ಸುಖ ಬಾರದು 1 ಈಷಣತ್ರಯದಾಸೆಯಿಂದಲಿ ಮೋಸಹೋಗದೆ ಸಂತತ ರೋಷದೋಷಕೆ ಕಾರಣವು ಸಂ- ತೋಷದಿಂದರು ನಲಿಯುತ 2 ಎಲ್ಲಿ ನೋಡಿದರಲ್ಲಿ ಹರಿಯನು ಸೊಲ್ಲು ಸೊಲ್ಲಿಗೆ ತುತಿಸುತ ವೆಲ್ಲ ಕಳೆ ದೃಢವಾಗುತ 3 ನಾನು ನನ್ನದು ಎಂಬುವ ದುರಭಿ- ಮಾನ ನಿನಗೆ ಬೇಡೆಲೊ ಸ್ವಾನುಭವಕಿದು ಹಾನಿ ತರುವದು ನೀನೆ ನಿನ್ನೊಳು ನೋಡೆಲೊ4 ನೇಮಗಳನು ಪರಿಸುತ 5
--------------
ಗುರುರಾಮವಿಠಲ
ತತ್ವದರ್ಶನದಲ್ಲಿ ಮಂತ್ರಮಹಿಮೆ ಸ್ವಾಮಿಗರ್ಪಿಸೋ ಮಾನವಾ ಪ ಕಾಮಿತಾರ್ಥವ ಬೇಡದೆ ಶತ ಸಾಮಜಾಪತಿ ನೆನೆವ ಮಂತ್ರ ಅ.ಪ ದಿವಿಜರನಿಶ ಪಠಿಪ ಮಂತ್ರ ಜವನ ಭಟರ ಸದೆದ ಮಂತ್ರ 1 ಲಲನೆಪಾಂಚಾಲಿ ಹೇಳಿದ ಮಂತ್ರ ಬಲಿಗೆ ವರವನಿತ್ತ ಮಂತ್ರ 2 ಸಾರಸಭವನುಲಿದ ಮಂತ್ರ ಘೋರದುರಿತನಾಶಕ ಮಂತ್ರ ಸಂ ಸಾರಜಲಧಿ ದಾಟಿಪ ಮಂತ್ರ 3 ಉಸುರಲಳವೆ ಪರಮ ಮಂತ್ರ 4 ನರನ ಪಾಲಿಪೊಂದು ಮಂತ್ರ 5 ಸಿರಿಗೋವಿಂದನೆಂಬ ಮಂತ್ರ ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ ಸ್ವಾಮಿ ನಿಂತು ಕಾಯೋ ಎನ್ನ ಪ. ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ಅ.ಪ. ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ ನಾಗಶಯನನೆ ಯೋಗಿಗಳರಸನೆ ಬೇಗದಿ ಬಂದು ಕಾಯೋ ಎನ್ನನು 1 ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ ವಾಸುದೇವ ನಿನ್ನ ಲೇಸು ಕರುಣವ ತೋರಿ ನಿನ್ನ ದಾಸರ ಸಂಗದೊಳು ಇರಿಸೋ ಎನ್ನ 2 ರಾಮ ರಾಮ ಎಂಬೋ ನಿನ್ನ ನಾಮನೇಮದಿ ನುಡಿಸೆನೆಗೆ ರಮಾವಲ್ಲಭವಿಠಲ ಭಾಮೆಯರರಸನೆ ಪ್ರೇಮವ ತೋರೋ 3
--------------
ಸರಸಾಬಾಯಿ
ತನುಮನಧವನೆಲ್ಲ ನಿನಗರ್ಪಿಸಿದೆನಿನ್ನು ಎನಗಾವುದಾಧೀನವಿನಿತಿಲ್ಲ ದೇವ ಪ ಜನಕ ನಾನು ಕ್ಷಣಕೆ ಕ್ಷಣಕೆ ಉಣವುದೆಲ್ಲವು ನಿನ್ನ ಪ್ರಸಾದ ಕನಸುಮನಸಿನೊಳಗೆ ನಾನು ಮಣಿವುದೆಲ್ಲವು ನಿನ್ನ ಚರಣ ಅ.ಪ ಮಡದಿಯಿಂ ಮಮತದಿ ಸಡಗರದಾಡ್ಯಾಡಿ ಕಡು ಆನಂದಿಪುದೆಲ್ಲ ಒಡೆಯ ನಿನ್ನಾಟ ಎಡೆಬಿಡದೆ ಅಡಿಗಡಿಗೆ ಕಡುಸಿರಿವಡೆದು ನಾ ಪೊಡವಿಯೋಳ್ಜೀವಿಪುದು ಕಡು ನಿಮ್ಮ ಪ್ರೇಮ ನುಡಿವುದೆಲ್ಲ ನಿನ್ನ ಮಂತ್ರವು ಕೊಡುವುದೆಲ್ಲವು ನಿನ್ನ ಅಧಿಕಾರ ನಡೆವುದೆಲ್ಲವು ನಾ ನಿನ್ನ ಯಾತ್ರೆಯು ಇಡುವತೊಡುವುದು ನಿನ್ನ ಬಿರುದು 1 ಗಳಿಸುವುದೆಲ್ಲ ನಾ ಚಲಿಸದ ತವಪಾದ ನಳಿನದಾಸರಸಂಗೀ ಇಳೆಯೊಳು ಪ್ರಭುವೇ ಬಳಸುವುದೆಲ್ಲ ನಾ ಅಳಕದ ತವಚರಿತ ಕಲಿಯುವುದೆಲ್ಲ ನಿಮ್ಮ ವಿಲಸಿತನಾಮಧ್ಯಾನ ಮಲಗುವುದೇ ನಿಮ್ಮ ಧ್ಯಾನ ಆನಂದ ನಲಿವುದಖಿಲ ನಿಮ್ಮ ಭಜನೆಯು ಅಳಿವುದೆಲ್ಲನುಭವದ ಗುಣಗಳು ತಿಳಿವುದೆಲ್ಲವು ನಿಮ್ಮ ಮಹಿಮೆ 2 ಅಮಿತ ತವಪ್ರೇಮವು ಗಮಿಸುವುದೆಲ್ಲ ನಾ ಸುಮನರ ಸಭೆಯು ಕ್ರಮದಿ ನಾ ಬೇಡುವುದು ವಿಮಲ ಸುಜ್ಞಾನವು ದಮೆ ದಯ ಭಕ್ತಿ ತವ ನಿರ್ಮಲಂಘ್ರಿಯ ಅರಿವು ನೇಮದಿಂ ನಾ ಬರುವುದೆಲ್ಲ ಸ್ವಾಮಿ ನಿಮ್ಮಯ ಮಹಿಮೆ ಖ್ಯಾತಿಯು ಕ್ಷೇಮನಿಧಿ ಶ್ರೀರಾಮ ನಿಮ್ಮೊಳು ಕಾಮಿಸುವುದೇ ನಾ ಮುಕ್ತಿಪದವು 3
--------------
ರಾಮದಾಸರು
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ಧ್ರುವ ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು 1 ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾರ್ತುಯದ 2 ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನುವೆಂಬ ಭವನದಲಿ ಮನವೆಂಬ ಮಂಟಪದಿ ವನರುಹಾಸನ ವಿಹುದು ನಿನಗಾಗಿ ಕೃಷ್ಣಾ ಪ ಅನವರತ ಸ್ವಾಗತವ ಇನಿದಾಗಿ ಪೇಳುತಲಿ ಸನುಮತದೊಳೀರೈದು ಮುನಿವರರು ನಿಂದಿಹರು ಅ.ಪ ಎನಗೆ ತನಗೆಂದಿಬ್ಬರನುವಾಗಿ ಕಾದಿಹರು ಘನ ಮೌನಿಯಂತೊಬ್ಬ ಮಣಿಯುತಿಹನು ವನಜ ಸಂಭವ ಜನಕ ಮುನಿಯೊಡನೆ ನೀ ಬಂದು ಕನಕಮಂಟಪವೇರು ಅವರಿಬ್ಬರೋಡುವರು 1 ಕರಿಯ ಮೈಯವನೊಬ್ಬ ದುರದುರನೆ ನೊಡುವನು ಪರಿವಾರದವರನ್ನು ತೋರುತಿಹನೊಬ್ಬ ಕರದಿ ಸನ್ನೆಯ ಮಾಡುತಿಬ್ಬರೂ ಬರುತಿಹರು ತರಿದವರ ಮಂಟಪವನೇರೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು ಧ್ರುವ ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು ಸ್ಥೈರ್ಯವಿಲ್ಲದವ ತಪಸ್ಯಾದರೇನು ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು ಬಂಟ ಬಲ್ಲಿದನಾದರೇನು 1 ಗಂಡ ನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು ಷಂಡ ಸಾವಿರ ಹೆಣ್ಣು ಮದುವ್ಯಾದರೇನು ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು ಕಂಡು ಕಾಣದ್ಹೆಳವನ ಕೊಂಡಾಡಲೇನು 2 ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು ಅನುಭವಿಸಿ ಕೊಳ್ಳದ ನರಜನ್ಮವೇನು ದೀನ ಮಹಿಪತಿಸ್ವಾಮಿಕಾಣದ ಕಂಗಳವೇನುಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪಲರಿಯದು ಬರೆದ ಬ್ರಹ್ಮನಿರ್ಮತವು ಒಪ್ಪುವದು ಯತಿ ಮುನಿ ಋಷಿಯ ಸಂತತಿಯು ಧ್ರುವ ಆನಿ ಮೊದಲಿರುವೆ ಕಡೆ ಅಣುಮಾತ್ರಾಕಾರವನು ಮುನ್ನ ಬರೆದಂತೆ ತಾನಡೆಯುತಿಹಂದು ಇನ್ನು ಮುತ್ತನ್ಯ ದೈವಕ ಬಯಸಿ ಬೇಡಿದರೆ ಮುನ್ನಿಗೆ ಕೊಡಬಲ್ಲವೆ ಬಿನಗುದೈವವು 1 ಭಿನ್ನವಿಲ್ಲದೆ ತನುವಿನೊಳು ಆನಂದ ಘನ ಉನ್ನತ ಮಹಿಮ ಪರಿಪೂರ್ಣವಿರಲು ಮೂರ್ತಿ ಶ್ರೀಪಾದವನು ಅನುದಿನ ಭಜಿಸಿ ಘನ ಸುಖವ ಪಡಿಯೊ ಮನವೆ 2 ಕಕ್ಕುಲಾತಿಯ ಬಟ್ಟು ಕಂಡವರ ಕಾಲ್ಗೆರಗಿ ಫಕ್ಕಸಾರಿಯ ಧರ್ಮ ಜರಿಯ ಬ್ಯಾಡ ಸಕಲ ಸಹಕಾರ ಮಹಿಪತಿಸ್ವಾಮಿ ನಿನಗಿರಲು ಭಕುತಿ ಮುಕುತಿಯ ಉಂಟು ಮೂಢ ಜನವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಧ್ರುವ ನೀನೆ ದಯಾನಿಧಿ ನಾನೆ ಅಪರಾಧಿ ಖೂನ ದೋರು ಹಾದಿ ಸ್ಥಾನ ನಿಜಗಾದಿ 1 ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ 2 ಹೆಳಲಾರೆ ಬಹಳ ಕೇಳೋ ನೀ ದಯಾಳ ತಾಳಿ ಎನ್ನ ತೋಳ ಬಾಳ ವಿಶ್ವಪಾಲ 3 ಸೇವೆ ಇದೆ ನಮ್ಮ ಭಾವಿಸುದು ನಿಮ್ಮ ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ 4 ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ ಕಂದ ಮಹಿಪತಿ ಗುಣ ಚಂದಮಾಡೊ ಕರುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ಪ ನೀನೆದಯಾನಿಧಿ ನಾನು ಅಪರಾದಿ ಖೂನದೋರೋ ಹಾದಿ ಸ್ಥಾನ ನಿಜಾನಾದಿ 1 ಅನಾಥನೆಂದು ನೋಡಿ ಸನಾಥನೆನ್ನಮಾಡಿ ಸ್ವಾನಂದ ಸುಖನೀಡಿ ಮನ್ನಾಥ ನಿಜಗೂಡಿ2 ಹೇಳಲಾರೆ ಬಹಳಾ ಕೇಳೋನೀದಯಾಳಾ ತಾಳಿಯನ್ನ ತೋಲಾಬಾಲವಿಶ್ವಷಾಲಾ 3 ಸೇವಿ ಇದೇನಮ್ಮ ಭಾವಿಸುದು ನಿಮ್ಮ ಪಾವನ್ನಗೈಸು ವರ್ಮಾ ಸುನಿತ್ಯ ಪರಬ್ರಹ್ಮಾ 4 ಬಂದ ಮ್ಯಾಲೆ ಶರಣಾ ಕುಂದವ್ಯಾಕೋ ಪೂರ್ಣ ಕಂದ ಮಹಿಪತಿಗುಣಾ ಛಂದ ಮಾಡೋಕರುಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ 1 ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ ತನುಜ ವಾರಿಜಾಜನ್ನತನಯರು ವೈವಸ್ವತ ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2 ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ ಎಸವ ಸೋಮ ಪುನರ್ವಾಪಸರಿಪಶತಸ್ಥರು ನಸುನಗೆ ಕರ್ಮಜ ಋಷಿ ಈರ್ವರು ಮನು ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3 ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ ಪರೀಕ್ಷಿತ ನಂದ ಕಕುಸ್ಥ ಗಯ ಕುಂದದೆ ಯದುಕುಲದಿಂದ ಬಂದ ಹೈಹಯನು ಚಂದ್ರನ ಮಡದಿ ಏಳೊಂದನೆ ಸೂರ್ಯನು ಮಂದಹಾಸಾಂಬುಜ ಬಾಂಧವನಸತಿ ಕಲದರ್ಪನಸೂಸೆ ವೃಂದಾರಕರಿಗೆ 4 ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ ಮುದದಿಂದ ಪುಷ್ಕರ ಸಹೃದಯ ತುಂಬರರಿಂದ ಮೊದಲಾಗಿ ನೂರುಮಂದಿ ತ್ರಿದಶ ಗಂಧರ್ವರು ಚದುರೆ ಊರ್ವಸಿ ರಂಭೆ ಅದಿತಿ ಕಶ್ಯಪದಿತಿ ಹದಿನಾರು ಸಾವಿರ ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5 ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು ಪರಿಪರಿ ನೂರುಕೋಟಿ ಪರಮಋಷಿಗಳಿಗೆ ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ ಧರಿಣಿಜಾಕವಿ ಮೇಲರಿದು ಜಯಂತಗೆ ಕರ ಮುಗಿವೆ ಕ್ಷಿತಿಪರನು ಕೊಂಡಾಡುತ ಇರುಳು ಹಗಲು ಉತ್ತಮರ ಮನುಜರ ಪಾಡಿ ನಿರುತ ಜಂಗಮ ಸ್ಥಾವರಗಳ ನೋಡುತ 6 ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ ರಜನಿ ಚರಾಂತಕ ವಿಜಯವಿಠ್ಠಲನ್ನ ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7
--------------
ವಿಜಯದಾಸ
ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ 1 ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ 2 ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ3 ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ 4
--------------
ಕನಕದಾಸ
ತವರು ಮನೆಯು ನನ್ನ ಸುವಿದ್ಯಪುರಲ್ಯದೆ ಸಾವಿರಕೊಬ್ಬಗೆ ದೋರುತದೆ ಧ್ರುವ ಸಾವಿರಕೊಬ್ಬನೆ ತಾ ಸುದೇವನೆ ಬಲ್ಲ ಭಾವಿಸದಲ್ಲದೆ ತಿಳಿಯುವದಲ್ಲ ಅವಿದ್ಯಪುರ ದಾಟ, ಮಂದಾಕ್ಕಾಗಲು ಎಲ್ಲ ಆವಾಗ ತಿಳಿವುದು ಹೇಳಿದ ಸೊಲ್ಲ 1 ಸಾವಿರ ತೆನೆಯಲೊಪ್ಪುತದೆ ಒಳಕೋಟ ಠವಿಠವಿಸುತದೆ ನೋಡಿ ಮನಮುಟ್ಟಿ ಅವ್ವ ಅಪ್ಪನೇ ನಮ್ಮ ಇಹಸ್ಥಾನವು ಘಟ್ಟಿ ದೇವಾಧಿ ದೇವನೊಬ್ಬನೆ ಜಗಜಟ್ಟಿ 2 ಬಲು ಅಭೇದ್ಯಸ್ಥಳ ತಿಳಿಯದಿನ್ನೊಬ್ಬರಿಗೆ ನೆಲೆವಂತರಿಗೆ ತಾನು ತಿಳಿವದು ಬ್ಯಾಗೆ ತುಂಬಿ ಥಳಗುಟ್ಟಿ ಹೊಳವ್ಹಾಂಗೆ ಬಲಗೊಂಡು ಕೇಳಿ ಶ್ರೀಸದ್ಗುರುವಿಗೆ 3 ಅಣ್ಣನೆಂಬಾತ್ಹಾನೆ ಅನಂದದಲ್ಹಾನೆ ನೆನೆಪಿಗೊಮ್ಮೆ ಬಂದು ಸುಳವುತ್ಹಾನೆ ಕಣ್ಣೆಲಿ ಕಟ್ಯಾನೆ ತಮ್ಮನೆಂಬತ್ಹಾನೆ ಕ್ಷಣಕೊಮ್ಮೆ ಹೊಳೆವುವಾನೆ4 ಅಕ್ಕನೆಂಬಾಕಿ ತಾ ಸಖರಿ ಅಗ್ಹಾಳೆ ಅಖರದಲೆವ್ವ ಈ ಮಾತು ಕೇಳೆ ಪ್ರಖ್ಯಾತದಲಿ ಪ್ರೀತಿಮಾಡುವ ತಂಗ್ಹ್ಯಾಳೆ ಸುಖ ಸುರುತ್ಹಾಳೆ ಇರುಳು ಹಗಲು 5 ಅತ್ತಿಗೆ ನಾದುನಿ ಭಾವ ಮೈದುನರೆಲ್ಲ ಅಂತ್ಯಕವಾಗ್ಹ್ಯಾರೆ ಮನಿಯೊಳಗೆಲ್ಲ ಸುತ್ತೇಳುವ ಬಳಗ ಉತ್ತುಮರೆನಗೆಲ್ಲ ಹಿತದೋರುತಾರವ್ವ ಸರ್ವಾಪ್ತರೆಲ್ಲ 6 ಸರ್ವಾಪ್ತವೆಂಬುದು ಸರ್ವೇಶನೆ ತಾನು ಸರ್ವದಾ ಎನ್ನೊಳು ತಾ ಕಾಮಧೇನು ಪರ್ವಕಾಲದ ಬಹಳ ಏನೆಂದ್ದೇಳಲಿ ನಾನು ಸರ್ವಾರ್ಥ ಕೊಡುತ್ಹಾನೆ ಸರ್ವಾತ್ಮ ತಾನು 7 ಅವ್ವ ನಮ್ಮಪ್ಪಗೆ ಸರಿ ಇಲ್ಲ ಜಗದೊಳು ಆವ ಕಾಲಕೆ ತಾ ಇವರ ಮೇಲು ಇವರೆಂಬುದು ಒಂದೆ ಮಾತಿನ ಸ್ವಕೀಲು ಸವಿಸುಖಬಲ್ಲರು ಅನುಭವಿಗಳು 8 ತೌರಮನೆಂಬುದು ಪ್ರತ್ಯೇಕಾ ತಾನಿಲ್ಲ ಭಾವಾರ್ಥದ ಮಾತು ಕೇಳಿರೆಲ್ಲ ಅವಗುಣನೆ ಬಿಟ್ಟು ಕೇಳಿ ಸವಿಯ ಸೊಲ್ಲ ಪೂರ್ವಿಕರಿಗಿದೆ ಸಾರವೆಲ್ಲ 9 ಸುದ್ದಿ ಹೇಳಿ ಕಳುಹುಲಿಕ್ಕೆ ಈ ಸಾಧನ ಇದುವೆ ಅಯಿತು ತವರ ಮನಿ ಬುದ್ಧಿವಂತನೆಬಲ್ಲ ಲಕ್ಷಕೊಬ್ಬ ಜ್ಞಾನಿ ಸಿದ್ಧಿದರಿಡುವದು ಸದ್ಗುರು ಪ್ರಾರ್ಥನಿ 10 ಬಳಗದೊಳು ಕೂಡಿ ಒಳಿಥಾಗ್ಯಾಯಿತು ಎನಗೆ ಒಳ ಹೊರಗೆ ಸುಖ ಎದುರಿಟ್ಟತೀಗ ಕುಲಕೋಟಿ ಬಳಗ ಸದ್ಗುರು ಪಾದವ್ಯನಗೆ ಸಲಹುತಾನೆ ಸ್ವಾಮಿ ಮಹಿಪತಿಗೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು