ಒಟ್ಟು 727 ಕಡೆಗಳಲ್ಲಿ , 90 ದಾಸರು , 636 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ಪ ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ 1 ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ 2 ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ 3
--------------
ವಿಜಯದಾಸ
ಹನುಮ ಭೀಮಾನಂದ ಮುನಿವರೇಣ್ಯ ತಾಪ ಕಳೆದನುದಿನದಿ ಪಾಲಿಪುದು ಪ ಪ್ರಾಣಪಂಚಕ ಸುಪರ್ವಾಣ ಗುರುವರ ಜಗ ತ್ರಾಣ ತ್ರಯೀಮಯಿ ಪುರಾಣವೇದ್ಯಾ ಮಾಣದೆನ್ನಯ ಹೃದಯ ತಾಣದೊಳಗರಿ ಶಂಖ ಪಾಣಿರೂಪನ ಬಿಡದೆ ಕಾಣಿಸು ಕೃಪಾಸಿಂಧು 1 ಸೂತ್ರನಾಮಕನೆ ತಾಪತ್ರಯಗಳಿಂದ್ಹಗಲು ರಾತ್ರಿಯಲಿ ಬಳುಲುತಿಹ ನಿತ್ರಾಣನ ಗಾತ್ರದೊಳು ನೆಲೆಸಿ ಸರ್ವತ್ರದಲಿ ಸುಖವಿತ್ತು ಶತ್ರುತಾಪಕನಾಗು ಸ್ತೋತ್ರವನೆ ಕೈಕೊಂಡು 2 ಅಸುನಾಥ ಶರಣಂಗೆ ವಶವಾಗು ಅನುದಿನದಿ ಅಸುರಭಂಜನ ಜ್ಞಾನ ಸುಸುಖ್ಮಾತನೇ ಬಿಸರುಹಾಂಬಕ ಜಗನ್ನಾಥವಿಠಲನ ಕೈ ವಶಮಾಡಿ ಕೊಡುತಿಪ್ಪ ಶ್ವಸನಾವತಾರಿ3
--------------
ಜಗನ್ನಾಥದಾಸರು
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
ಹರಿಯಂದೆನ್ನಿ ಪ ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ | ನಿಪುಣಗ ನೀಡಿದ ಫಲಾ 1 ರಾಜಸೂಯಾಶ್ವಮೇಧ ಮೊದಲಾದ ಯಜ್ಞಗಳು | ತ್ಯಾಜ್ಯದಿ ಮಾಡಿದ ಫಲಾ 2 ಕಾಶಿ ರಾಮೇಶ್ವರದಿ ತೀರ್ಥಂಗಳಾ | ವಾಸದಿ ಮಿಂದ ಫಲಾ 3 ಪರಿ ಪರಿ ಪರಿ ತಪಗಳಾ | ಚರಿಸಿ ತಿರುಗಿದ ಫಲಾ 4 ತಂದೆ ಮಹಿಪತಿ ಪ್ರಭು ಯಚ್ಚರಿಸಿದ ಸ್ವಕೀಲಾ | ಬಂದ ಜನುಮಕ ಸಫಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ. ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು 1 ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ 2 ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ 3 ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ವೀರನಾರಾಯಣನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ 4
--------------
ವೀರನಾರಾಯಣ
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಹರಿಯೆನ್ನ ನರಜನ್ಮ ವ್ಯರ್ಥವಾಯ್ತು ಪರಮ ಭಕ್ತಿಯೊಳಿನ್ನು ಭಜಿಸುವೆನು ಕಾಯೋ ಪ ತೊಡೆಯ ಮೇಲಾಡುತಿಹ ಶಿಶುವಿನಾನುಡಿ ಕೇಳಿ ಕಡು ಮೂರ್ಖತನದಿಂದ ಭ್ರಮೆಗೊಂಡೆನೋ ಸಡಗರದಿ ಕಿವಿಗೊಟ್ಟು ಕಿಂಕಿಣಿಯ ದ್ವನಿಗಳನು ಎಡಬಿಡದೆ ಕೇಳುತಿಹ ಹರಿಣನಂತಾದೇ 1 ತೊಡೆಗÀುಹ್ಯ ಕುಚಗಳಿಗೆ ಅನುದಿನವು ನಲಿಯುತ್ತ ಮಡದಿಯರ ಅಂಗ ಸಂಗದ ನಂಬುತಾ ಒಡಲ ಶಾಂತಿಯಗೊಳಿಸೆ ಬಡಿಗೋಲು ಕೆಡಹಿಕೊಂ ದಡಗುತಿಹ ಮೂಷಕನ ತೆರದಲ್ಲಿ ಕಳೆದೇ 2 ನಿರುತದಿಂ ಪರಸತಿಯ ಲಾವಣ್ಯವನು ನೋಡಿ ಚರಿಸಿತೆನ್ನಯ ಮನವು ಅವಳ ಕೂಟಕ್ಕೇ ಉರಿವ ದೀಪವ ಕಂಡು ಕನಕ ಮಣಿಯೇಯೆಂದ ಎರಗುತಿಹ ಹುಳದಂತೆ ಹಾಳಾದೆ ಬರಿದೇ 3 ಜರಿದು ನಿಜವೃತ್ತಿಯನು ಪರದಾಸ್ಯದಲಿ ಮುಳುಗಿ ಪೊರದೆ ಹೊಟ್ಟೆಯನಾ ಪರಾನ್ನ ಭಕ್ಷದಲೀ ಹರುಷದಿಂ ಬಲೆಯತುದಿ ಮಾಂಸಕ್ಕೆ ಮೆಚ್ಚಿದಾ ಮರುಳಾ ಮೀನಿನ ಗತಿಯು ಯನಗಾಯ್ತು ನಿಜದೀ4 ನಾರಿಯರ ಜಾಲಕ್ಕೆ ಪ್ರತಿದಿನವು ಸಿಲುಕುತ್ತ ಮಾರಿಯರ ಸಾಕಿ ನಾ ಫಲವ ತಿಂದೆ ಭ್ರಮರ ಸಂಪಿಗೆಯಸಳ ಸಾರಿ ಕೊಡಲೆ ಮೃತ್ಯುವಶವಾಗುವಂತೇ 5 ಮೂರಾರು ಶತ್ರುಗಳು ತರಿದೆನ್ನ ಮನವನ್ನು ಗಾರು ಮಾಡುತಲಿಹವು ತಿಳಿಯದಾ ಹರಿಯೇ ನರಸಿಂಹನೇ ಐದು ಇಂದ್ರಿಯವ ಗೆಲಲಾರೆ ಭೂರಿ ಭಕ್ತಿಯೊಳೆರಗಿ ಮರೆಹೊಕ್ಕೆ ಕಾಯೋ 6 ಪನ್ನಗಶಯನ ಶ್ರೀ ವೇಣುಗೋಪಾಲನೆ ಚನ್ನಿಗಕೇಶವನೇ ದೂರ್ವೇಶನೇ ನಿಂನನಾ ಬಿಡಲಾರೆ ಮಾರಮಣ ಪೊರೆಯಂನ ಯೋನಿ ಜನ್ಮಕೆ ಮುಂದೆ ಬರದಂತೆ ಮಾಡೋ 7
--------------
ಕರ್ಕಿ ಕೇಶವದಾಸ
ಹರಿಹರಿಯಂದು ಸ್ಮರಿಸಿ ಉರಗೇಂದ್ರ ವರಮಂಚ ಮಿಗಿಲೇರಿಸಿ ಚರಣದೊಳದೃಷ್ಟಿಯಿರಿಸಿ ಪ. ಅಕ್ಷಯಗುಣ ಪೌರುಷ ಅನವರತ ರಕ್ಷಿಸುವುದೆನ್ನಾಶ್ರಿತ ರಾಕ್ಷಸಾಂಬುಧಿವಿಶೋಷ ಭಕ್ತಜನ ರಕ್ಷಾವಿನೋದ ಭೂಪ 1 ಏನೆಂಬೆನದ್ಭುತವನು ಬಹು ಸೂಕ್ಷ್ಮ ದಾನಯಜ್ಞಾದಿಗಳನು ಧ್ಯಾನಿಸುತ ತ್ವತ್ಪದವನೀ ಚರಿಸಲನ್ಯೂನವಹ ವಿಸ್ಮಯವನು 2 ವರ ಶ್ರುತಿಸ್ಮøತಿಗಳರಿತು ವಿಧಿಯೋಳಾಚರಿಸಿದರು ಫಲವ ಕುರಿತು ಸಿರಿವರನೆ ನಿನ್ನ ಮರೆತು ಇರಲದಿಹ ಪರಕಲ್ಲವಾದಸರಿತು 3 ಬಾಗಿ ಪೊರೆವ ದೊರೆಯೆ ಕಂಭದಲಿ ತೋರ್ದ ಸಿರಿಯೆ 4 ಮೂರ್ತಿ ಅವಗುಣಗಳೇನೊಂದನೆಣಿಸದರ್ಥಿ ಶ್ರೀನಿಧಿಯೆ ಮಾಡು ಪೂರ್ತಿ ಶೇಷಾದ್ರಿ ಮಾನಿಮರುದೀಡ್ಯ ಕೀರ್ತಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತವಾವುದದೆ ಪಥದಿ ಸತತದೆನ್ನಿರಿಸೊ ಮತಿಹೀನನ್ಹಿತದ ಪಥವರಿಯೆ ಹರಿಯೆ ಪ ಅರಿವಿಗರಿವು ನೀನು ಮರೆಯಮಾನವ ನಾನು ಹರಿದಾಸರರಸ ನೀ ಚರಣದಾಸನು ನಾನು ದುರಿತ ಪರಿಹರ ನೀನು ದುರಿತಕಾರಿಯು ನಾನು ದುರಿತ ಪರಿಹರಿಸೆನ್ನ ಪೊರೆಯೊ ಸಿರಿದೊರೆಯೆ 1 ಜೀವಜೀವೇಶ ನೀ ಜೀವನಾಧಾರ ನೀ ಪಾವನೇಶ್ವರ ನೀ ಭಾವಿ ಭಕ್ತನು ನಾ ಭವರೋಗದ್ವೈದ್ಯ ನೀ ಭವದ ರೋಗಿಯು ನಾನು ಭವರೋಗ ಪರಿಹರಿಸಿ ಪಾವನನೆನಿಸಭವ 2 ನಾಶರಹಿತನು ನೀನು ನಾಶಕಾರಿಯು ನಾನು ನಾಶನದಿಂದುಳಿಸೆನ್ನ ಪೋಷಿಸಲಿ ಬೇಕೊ ಅನುದಿನ ಮೀಸಲಮನದಿಂದ ಶ್ರೀಶ ಶ್ರೀರಾಮ ನಿಮ್ಮ ದಾಸನೈ ನಾನು 3
--------------
ರಾಮದಾಸರು
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
--------------
ಲಕ್ಷ್ಮೀನಾರಯಣರಾಯರು
ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ 1 ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ 2 ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ 3 ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ 4 ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ5 ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ6 ವಿಭವ ತೋರುತಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೇಗೆ ಕಳೆಯಬೇಕೋ ಹೊತ್ತು ಹೇಗೆ ಕಳೆಯಬೇಕೋ ಪ ಹೇಗೆ ಕಳಿಲಿ ಭವಸಾಗರದಲಿ ಮನ ನೀಗದು ಚಂಚಲ ಸಾಗರನಿಲಯ ಅ.ಪ ಹುಟ್ಟಬಾರದಿತ್ತು ಇಹ್ಯದಿ ಹುಟ್ಟಿದ್ದೇ ತಪ್ಪಾಯಿತು ನಿಷ್ಠೆಲಿರಗೊಡದೆನ್ನ ದುಷ್ಟಮನಸು ಘಳಿ ಗಿಷ್ಟೆಲ್ಲ ಎಲ್ಲಿತ್ತು ಹುಟ್ಟದಿದ್ದರೆ ನಾನು 1 ಕ್ಷಣಕ್ಷಣಕೊಂದು ರೀತಿ ಮನಸಿನ ಗಣನೆಯಿಲ್ಲದ ಭ್ರಾಂತಿ ಜನಿಸಿದಂದಿನಿಂದ ಘನತರ ಕುಣಿಸ್ಯಾಡಿ ಜನರ ಸೇವೆಯೊಳು ದಣಿಸಿತು ಪಾಪಿ 2 ಅನುಗಾಲವು ಚಿಂತೆ ಜೀವಕೆ ಇನಿತು ಇಲ್ಲ ಸ್ವಸ್ಥ ತನುಮನಧನ ನಿನಗರ್ಪಿಸಿ ಬೇಡುವೆ ಘನ ಬೇಸತ್ತೆ ಪೊರೆ ಚಿನುಮಯ ಶ್ರೀರಾಮ 3
--------------
ರಾಮದಾಸರು