ಒಟ್ಟು 6481 ಕಡೆಗಳಲ್ಲಿ , 135 ದಾಸರು , 4307 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ದೊರೆವುದೋ ಸಂತಸವೆಂತು ದೊರೆವುದೋ ಕಂತುಪಿತನ ಕರುಣವಿಲ್ಲದೆ ಪ ರಣಜಯವು ಹಣಪ್ರಾಪ್ತಿ ವನಿತೆಲಾಭವಿನಿತು ಎಲ್ಲ ವನಜನಾಭನೊಲಿಮೆಯಾಗೋತನಕ ಮಂದಮನುಜನಿಗೆ 1 ಕ್ಷೋಣಿಗೆಲುವ ತ್ರಾಣ ಬಲವು ಮಾಣದಿಹ್ಯ ನಾನಾ ಸೌಖ್ಯ ಜಾನಕೀಶ ಮೆಚ್ಚುವನಕ ಹೀನಭಾಗ್ಯ ಮಾನವನಿಗೆ 2 ಭೂಮಿಜನಕೆ ಬಾಗದಂಥ ಆ ಮಹ ಸುಕ್ಷೇಮ ಲಾಭ ಸ್ವಾಮಿ ಶ್ರೀರಾಮ ಪ್ರೇಮಸದನ ಪ್ರೇಮದೀಯದೆ ಪಾಮರರಿಗೆ 3
--------------
ರಾಮದಾಸರು
ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ ಪ ಕುಣಿದು ನಿನ್ನ ಮೆಚ್ಚಿಸುವೆನೆ | ಫಣಿಹಾರನೈಯನನ ಜನಕಾ | ಮಣಿದು ನಿನ್ನ ಮೆಚ್ಚಿಸುವೆನೆ | ಸನಕಾದಿಗಳ ಸುಪ್ರೇಮಾ 1 ಅನ್ನವಿತ್ತು ಮೆಚ್ಚಿಸುವೆನೆ | ನಿತ್ಯ ತೃಪ್ತ ನೀನು | ಹೆಣ್ಣನಿತ್ತು ಮೆಚ್ಚಿಸುವೆನೆ | ಹೆಣ್ಣುರೂಪ ನೀನೆ ಸ್ವಾಮಿ 2 ಅಪ್ಪ ನಿನ್ನ ಮೆಚ್ಚಿಸುವೆನೆ | ದರ್ಪಾಕ ಬೊಮ್ಮನ ತಂದೆ | ಅಪ್ಪ ನಿನ್ನ ಮೆಚ್ಚಿಸುವೆನೆ | ಸುಪ್ಪಾಣಿ ರಮೆಯರಸಾ 3 ಪಾಲು ಕುಡಿಸಿ ಮೆಚ್ಚಿಸುವೆನೆ | ಸದನ ನೀನು | ಮಾಲೆ ಹಾಕಿ ಮೆಚ್ಚಿಸುವೆನೆ | ಮಾಲೆ ಕೌಸ್ತಭ ಭೂಷಣಾ4 ಸೇವೆ ಮಾಡಿ ಮೆಚ್ಚಿಸುವೆನೆ | ಪಾವಮಾನಿ ತಾತ ನೀನು | ಕಾವುದು ವಿಜಯವಿಠ್ಠಲಾ 5
--------------
ವಿಜಯದಾಸ
ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ಪ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ1 ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ 2 ಬುದ್ಧಿ ಪೂರ್ವಕವರಿಯೆ | ಯಾತರ ಸೇವಿ ಅರಿಯೆ ಏನು ಅರಿಯೆ | ದಾತಾರ ಜಗದೇಕ | ನಿನ್ನ ನಾಮವನುಣಿಸಿಕಾಯೊ 3
--------------
ವಿಜಯದಾಸ
ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು ಕಂತುಪಿತ ಶ್ರೀಕೃಷ್ಣ ಮೂರುತಿಯಾ ಪ. ಅಂತರಂಗದಲಿ ನಿಂತು ಪೊರೆಯುವ ಏಕಾಂತ ಮೂರುತಿಯ ಕರುಣಾನಿಧಿಯಾ ಅ.ಪ. ಆಲದೆಲೆಯ ಮೇಲೆ ಮಲಗಿದ ಸಿಂಧು ನಲಿಯುತ ಕನಕನ ಕಿಂಡಿಯಲಿ ನಿಂದು ಒಲಿದು ವರಗಳನೀವ ಗುಣಸಿಂಧು 1 ಕಂಠದಲಿ ಮುತ್ತಿನಹಾರ ವಜ್ರದಂಗಿಯ ಅಲಂಕಾರ ಕಂಟೀಪದಕ ವಿಸ್ತಾರ ಕರದಲಿ ವಜ್ರದುಂಗೂರ ಸೊಂಟಪಟ್ಟಿಯ ಕಟ್ಟಿದಾ ಚಂದ ನಾಭೀ ಕಮಲದಾನಂದ 2 ಕಡೆಕಣ್ಣು ಕಂಗಳಾ ನೋಟ ಕಸ್ತೂರಿ ಲಲಾಟ ಕುಡಿಹುಬ್ಬುಗಳ ನೀಟಾ ವಜ್ರಮಾಣಿಕ್ಯದ ಕಿರೀಟ ಪಿಡಿದಿರುವ ಕಡಗೋಲು ಕರದಿ ರುಕ್ಮಿಣೀಶ ವಿಠಲ 3
--------------
ಗುಂಡಮ್ಮ
ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ಪ ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ಅ.ಪ. ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ 1 ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ 2 ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ 3
--------------
ವ್ಯಾಸರಾಯರು
ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ ಪ ಎಂತು ಬಣ್ಣಿಪೆ ನಾ ನಂತನಾಂಶ ಜಗ - ದಂತರದೊಳಗಾ - ನಂತ ಮಹಿಮರಅ.ಪ ಸುರವರನಗರಸಮ - ವರಮಂತ್ರಸದನ ಜರಿದು ಸ್ಥಿರವಾಗೀ ಪುರದಲ್ಲಿ ಮೆರೆಯುತಲಿಹರನ್ನ 1 ಪೂರ್ವಯುಗದೊಳು ಸಾರ್ವಭೌಮನೆನಿಸಿ ಪಾರ್ವರ ಪೊರೆವದಕ್ಕ ಪೂರ್ವ ಯತಿ ಎನಿಸಿಹರನ್ನ 2 ದಿನ ದಿನದಲ್ಲಿ ಮಹ ಕನಕಾಭೀಷೇಕ ಮಾಳ್ಪ ಧನಿಕರ ತೆಜಿಸಿ ನಿ - ರ್ಧನಿಕ ಗೊಲಿದಿಹರನ್ನ 3 ಕ್ಷೀರಶೇಚನ ನಿತ್ಯ-ಸಾರ ಪಂಚಾಮೃತ ಬಿಟ್ಟು ಕೀರುತಿ ಮಾಳ್ಪಜನರ ಸೇರಿ ಕೊಂಡಿಹರನ್ನ 4 ದಾತರೆನಿಸಿ ಜಗದಿ - ಖ್ಯಾತರಾಗಿ ಗುರುಜಗ ನಾಥ ವಿಠಲನೊಲಿಸಿ ದೂತಜನರ ಪೊರೆವೊರನ್ನ 5
--------------
ಗುರುಜಗನ್ನಾಥದಾಸರು
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ
ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ಪ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ ಸೇರಿದಂತೆ | ಆಗುವುದು | ಕಂಚು ಕೆಳಗೆ ಬಿದ್ದಂತೆ ಪ್ರಾಣಿ 1 ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ | ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ | ಬಗ್ಗು ನಡೆವಳಿ ನಡೆದು | ವೆಗ್ಗಳದ ನಡೆವಳಿ ನಡೆದು | ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ | ಬಿಡು ಬಿಡು ಅಗ್ಗಳಿಕೆತನವೆ | ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ 2 ಇನ್ನಾದರೂ ಕೇಳು | ಪುಣ್ಯವಂತರ ಕೂಡು | ನಿನ್ನವರು ನಿನಗೆ ದಾರೊ | ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ | ಬೆನ್ನಿಗೆ ಬಂದ ವಿಚಾರೊ ತುದಿಯಲಿ | ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು | ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ | ಖಿನ್ನನಾಗುವದೇತಕೊ ಸಾವಿರಕು | ಮುನ್ನಿಲ್ಲವೊ ಮನಸಿತೊ ಪ್ರಾಣಿ 3 ವೇದಶಾಸ್ತ್ರವನರಿಯೆ ಆದಿಪುರಾಣಗಳು | ಅದ್ವೈತ | ವಾದವರ ಕೂಡದಿರು ಇದೆ ಮಿಗಿ ಲಾದರು ಮರಿಯದಿರು ಉತ್ತಮ | ಸಿರಿ ವಿಜಯವಿಠ್ಠಲನ ಶ್ರೀ | ಪಾದವನು ಒಂದೇ ಭಕ್ತಿಯಿಂದಲಾ | ರಾಧಿಸು ಇದಕೆ ಯುಕ್ತಿ ಕಡಿಯದಲೆ | ಮಾಧವನು ಕೊಡುವ ಮುಕ್ತಿ ಪ್ರಾಣಿ4
--------------
ವಿಜಯದಾಸ
ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1 ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2 ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3 ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ವರ್ಣಿಸಲಮ್ಮ ನಾನು ಕಂತುಜನಕನಾನಂತನಗಮ್ಯನನÀಂತವತಾರನಪ. ಸಂತತ ಸಜ್ಜನರಂತರಂಗದಲಿ ನಿಂತಿಹ ಲಕ್ಷ್ಮೀಕಾಂತನ ಮಹಿಮೆಯ ಅ.ಪ. ನೀರೊಳಾಡುತ ಭಾರವ ಹೊರೆವ ಧಾರುಣಿಯ ಪೊರೆವ ಘೋರ ರೂಪದಲಿ ಭೂಮಿಯನಳೆವ ಕ್ರೂರನೃಪರಳಿವ ಆ ರಾವಣನ ಬಲವ ಮುರಿವ ಚೋರ ದಿಗಂಬರವ ಚಾರು ಕುದುರೇಯನೇರಿ ಬರುವ ಸುಕು- ಮಾರ ಜಗದೊಳು ಶೂರ ಜಾರುವ ಕಠಿಣಶರೀರದಿ ಭೂಮಿಯ ಸೇರುವ ಕಂಬವಿದಾರಣ ಮಾಡುವ ಮೀರುವಭುವನಕೆ ತೋರುವ ಪರಶುವ ಜಾರ ವಸನಹೀನ ಧೀರ ಸುಅಶ್ವವನೇರಿ ಮೆರೆವನ 1 ನಿಗಮೋದ್ಧರಿಸುವ ನಗವನು ತರುವ ಜಗತಿಯುದ್ಧರಿಸುವ ಮಗುವ ಪಾಲಿಸುವ ಮಾಯದಿ ಬೆಳೆವ ದುಗುಡ ನೃಪಕುಲವ ಬಗಿದು ಭಾಸ್ಕರ ತನಯನಿಗೊಲಿವ ನೆಗಹಿ ಗೋವರ್ಧನವ ಬಗೆಬಗೆ ಮಾತಾಡಿ ಸುಗುಣ ವಾಜಿಯನೇರಿ ಬಂದ ಸಚ್ಚಿದಾನಂದ ಹುಗಿದು ಸೋಮಕನ ಅದ್ರಿಗೆ ಬೆನ್ನಿತ್ತು ಅಗಿದು ಭೂಮಿಯ ನರಮೃಗನಾಗುತ ಗಗನಕೆ ಬೆಳೆದು ಘಾತಿಸಿ ಕ್ಷತ್ರಿಯರ ರಘುವರ ಯದುಪತಿ ವಿಗತವಸನನಾಗಿ ಜಗಕೆ ಬಲ್ಲಿದ ಹಯವೇರಿ ಬರುವನ 2 ನಳಿನೋದ್ಭವನಿಗಾಗಮವನಿತ್ತ ಗಿರಿಯ ನಿಲಿಸಿತ್ತ ಇಳೆಯ ಕದ್ದೊಯ್ದ ದಾನವನಳಿದ ನರಹರಿ ತಾನಾದ ಬಲಿಮುಖವ ಮುರಿದ ಖಳಭೂಪರಳಿದ ದÀಶಶಿರನÀಳಿದ ಕೊಳಲನೂದಿದ ದುಷ್ಟ ಲಲನೇರ ವ್ರತವಳಿದ ಕಲಿಯ ಮರ್ದಿಸಿದ ಹೊಳೆವ ಬೆನ್ನಲಿ ಗಿರಿತಳವೆತ್ತಿದನ ನೆಲನ ಬಗಿದು ಕಂಬದಲಿ ಬಂದವನ ಬೆಳೆದ ಬೊಮ್ಮಾಂಡಕೆ ಭಾರ್ಗವಾಧಿಪನ ಬುದ್ಧ ಕಲ್ಕಿ ಚೆಲುವ ಹಯವದನನ ಬಲ್ಲಿದನ 3
--------------
ವಾದಿರಾಜ
ಎಂತು ಶೋಭಿಪ ನೋಡೀ - ಶ್ರೀವ್ಯಾಸ ವಿಠಲಸಂಪುಟವ ಮನೆ ಮಾಡೀ - ವಿಶ್ವಜ್ಞ ತೀರ್ಥರಶಾಂತ ಸೇವೆಯ ಗೂಡೀ - ಮೆರೆಯುತಿಹ ನೋಡೀ ಪ ಕಂತು ಸಿರಿ | ಕಾಂತ ವಿಠಲ ಶಾಂತಮೂರುತಿಸಂತ ಯತಿವರರಂತರಂಗದಿ | ಚಿಂತಿಸುತಲೇಕಾಂತ ಪೂಜೆಗೆ ಅ.ಪ. ಉತ್ತಮ ಮತಿ ಸುದತೇರು - ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ದ್ರುತ - ಕೃತಿವಾಸನ ಸಖನ ಪರಮ - ಸು | ಹೃತ್ತಮೋತ್ತಮ ಚಿತ್ಸುಖಪ್ರದಚಿತ್ತವಿಸು ಚಿತ್ತಾಖ್ಯ ಪೀಠಿಕೆ | ಸತ್ಯಕಾಮ ಶರಣ್ಯ ಮೂರುತಿ 1 ಕಾಯ ಭವಪಿತ ತೋಯಜಾಕ್ಷನೆ | ದಾಯ ನಿನ್ನದು ಎನ್ನ ಗತಿಗೇಪ್ರೇರ್ಯ ಪ್ರೇರಕ ಶ್ರೀಗುರು | ಗೋವಿಂದ ವಿಠಲನೆ ಕಾಯೋ ಬೇಗ 2
--------------
ಗುರುಗೋವಿಂದವಿಠಲರು
ಎಂತು ಶೋಭಿಪ ನೋಡೀ ಶ್ರೀವ್ಯಾಸ ವಿಠ್ಠಲಸಂಪುಟನ ಮನೆ ಮಾಡೀ | ವಿಶ್ವಜ್ಞ ತೀರ್ಥರಶಾಂತ ಸೇವೆಯ ಗೂಡೀ | ಮೆರೆಯುತಿಹ ನೋಡಿ ಪ ಎಂತು ಶೋಭಿಪ ಕಂತುಪಿತ ಶಿರಿ | ಕಾಂತ ವಿಠ್ಠಲ ಶಾಂತಿ ಮೂರುತಿಸಂತ ಯುತಿವರ ರಂತರಂಗದಿ | ಚಿಂತಿಸುತಲೇಕಾಂತ ಪೂಜೆಗೆ ಅ.ಪ. ಶ್ರೀಮಧ್ವಮುನಿಗಳ ಕರಜ | ಶ್ರೀವಿಷ್ಣು ತೀರಥರಾ ಮಹಾಮುನಿ ಪೂಜಾ | ಗೊಂಡಿರುವ ಶ್ರೀರಾಮ ನರಹರಿ ಪೂಜಾ | ಶ್ರೀ ವ್ಯಾಸ ವಿಠ್ಠಲ ಪ್ರೇಮ ಗುರುಗಳ ಕರಜ | ಶ್ರೀವಿಶ್ವಜ್ಞ ತೀರ್ಥ ||ಪ್ರೇಮದಲಿ ಗೈವ ಸುನೇಮದಲಿ | ಸೀಮೆ ಸುಬ್ರಹ್ಮಣ್ಯದಲ್ಲಿ ಝಾವ ಝಾವಕೆ ಭಜಿಪ ಭಕ್ತರ | ಕಾಮಿತಾರ್ಥಗಳೀಯುತಿರೆ ಹರಿ 1 ವತ್ಸರ ಸುವಿಕ್ರಮದೀ | ಎರಡೊಂದು ಮಾಸದ ಸಿತ ಪಕ್ಷದಲಿ ಹರಿ ದಿನದೀ | ರವಿವಾರದೊಳು ಶ್ರೀಯತಿವರರು ಸ್ವಗೃಹದೀ | ಆಗಮಿಸಿ ಪೂಜೆಯ ಶೃತಿ ಉಕುತ ಮಾರ್ಗದೀ | ಗೈಯ್ಯೆ ಭಕುತರೂ ಕೃತಿಪತಿಯ ಚರಣಾಬ್ಜಗಳ ಸಂ | ಸ್ತುತಿಸುತ ಸುವೇದ ಘೋಷದಿ ಕೃತ ರಜತ ಪೀಠಸ್ಥ ನರಹರಿ |ಪ್ರತಿ ರಹಿತ ಮಹ ಅತುಳ ವಿಭವದಿ 2 ಪಾವನ್ನರಾದೆವು ನಾವು | ಸಂಯಮಿ ವರರ ಪಾವನ್ನ ಪದ ರಜಕಾವು | ದ್ವಾದಶಿಯ ದಿನಶ್ರೀವರನ ಮಹ ಅರ್ಚನವು ಗೈದ ವೈಭವವೂ ||ಕಾವ ಕರುಣೆಯ ಸ್ಮರಣೆ ತವಕದಿಂದಲಿ ಮಾಡ್ದತಾವಕನ ಪರಮಾಲ್ಪವೆನಿಪ | ಸೇವೆಯನೆ ಸ್ವೀಕರಿಸಿ ನರಹರಿ ದೇವ ಗುರು ಗೋವಿಂದ ವಿಠಲ | ಕಾವ ಕರುಣಾಳುಗಳ ಒಡೆಯ3
--------------
ಗುರುಗೋವಿಂದವಿಠಲರು
ಎಂತುನುತಿಪೆ ನಾನು ಈ ಜಗದಂತರ್ಯಾಮಿಯನು ಪ ಪರಿಯವು ಸಂತತ ವಾಙ್ಮನ ಅ.ಪ ಸಾಸಿರಮುಖದವನ ಅವಯವಸಾಸಿರವುಳ್ಳವನ ಮೀಸಲಳಿಯದಂತೀ ಸಚರಾಚರ ವಾಸಿಯಾದ ಶ್ರೀ ವಾಸುದೇವನನು 1 ಜಗವನು ನಿರ್ಮಿಸುವ ಬೊಮ್ಮನು ಮಗನೆಂದೆನಿಸಿರುವ ಬಗೆಯುವಡೀ ಜಗವ ಜಠರದಿ ನುಸುಳಿಕೊಂಡಿರುವ ಮ್ಮೊಗನೆಂಬುವರೀಯಗಣಿತ ಮಹಿಮನ 2 ನಿಗಮವ ಪೆತ್ತವನ ಬೊಮ್ಮಗೆ ನಿಗಮವನಿತ್ತವನ ನಿಗಮೋದ್ಧಾರಕನ ನಿತ್ಯದಿ ನಿಗಮಗೋಚರನ [ಸುಗುಣ]ಶ್ರೀಪದಯುಗಳಾಂಬುಜನನು 3 ಮಾಯಾಧೀಶ್ವರನ ದೇವನಿಕಾಯಾರಾಧಿತನ ಕಾಯಜ ಸುಂದರನಾ ಜೀವನಿಕಾಯಕೆ ಮಂದಿರನಾ ದಾಯಗೆಟ್ಟರನ್ಯಾಯದಿ ಮುನಿಗಳು 4 ಪರಮಪದದೊಳಿಹನಾ ಪುನರಪಿ ತರಣಿಯೊಳಿರುತಿಹನ ಶರನಿಧಿ ಮಂದಿರನಾ ಶ್ರೀಪುಲಿಗಿರಿಯೊಳು ನಿಂದಿಹನಾ ಪೊರೆಯುವ ವರದವಿಠಲನ ನಾ5
--------------
ವೆಂಕಟವರದಾರ್ಯರು
ಎಂತೋ ಪೂಜಿಪುದಂತರ್ಯಾಮಿಯನನಂತಾದಿರಹಿತನ ಚಿಂತಾದೂರನ ಚಿನುಮಯರೂಪನನೆಂತೋ ಧ್ಯಾನಿಪುದು ಪ ಈಶ ವೀಸ ವಾಹನಗೀಸನ ಚರಾಚರ ಮೀಸಲಿಗಳವಲ್ಲಾ ವಾಸುಕಿ ಭೋಗ ನಿವಾಸಿಗೆ ತರವಲ್ಲಾ 1 ಚರಣದಿ ಗಂಗೆಯ ಧರಿಸಿತುವಾತನ ಚರಣವ ತೊಳೆಯುವರೇ ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ 2 ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ 3 ಕಲಶಾಂಬುಧಿಯೊಳು ನೆಲೆಸಿಹ ಮೂರ್ತಿಗೆ ಸಲಿಲ ಸ್ವರ್ಶನವೆ ಜಲರುಹ ನೇತ್ರಗೆ ಜಲರುಹಗಾತ್ರಗೆ ಜಲದಲಿ ಮಜ್ಜನವೆ 4 ಸ್ವರ್ಣಾಂಬರಗಳ ಬಣ್ಣಿಸುತುಡುವಗೆ ಬಣ್ಣದ ವಸ್ತ್ರಗಳೆ ಕೌಸ್ತುಭ ರನ್ನದ ತೊಡವಿಗೆ ಬಿನ್ನಣದೊಡವೆಗಳೆ 5 ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂ ಪಡೆದವಗೆ ಮಿಸುಪ ತುಲಸಿಯಿಂದೆಸೆವಗೆ ಪೂಗಳ ವಿಸರ ಮನೋಹರವೇ 6 ಗಂಧವಾಹನ ಸುವಿಂದ ಅಸೃಜಿಸಿದ ಗಂಧವತೀತನಿಗೆ ಗಂಧಧೂಪಗಳು ಬಂಧುರಂಗಳೆ ಗಂಧರ್ವಾತನಿಗೆ 7 ವೇದಗೋಚರಿಸುವೇದಾತ್ಮಕನು ವೇದೋದ್ಧಾರಕನು ವೇದವೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೇ 8 ಕುತ್ತಿಗೆನೆನೆಯದ ವಸ್ತು ಪರಾತ್ಪರ ಪೊಕ್ಕರೆ ಜಲವನ್ನ ನಿತ್ಯ ತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತು ಜನಾ 9 ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ ಮಂತ್ರಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ 10 ಅಂತರ್ಬಹಿಯೊಳಗಂತರ ವಿಲ್ಲದನಂತರ ಗುಣಾತ್ಮಕನ ಎಂತು ಪ್ರದಕ್ಷಿಣಿಯಾಂತು ನಮಿಪೆ ಜಗದಂತರೀಕನ 11 ಸರ್ವಾಧಾರನ ಸರ್ವಶರೀರನ ಸರ್ವವ್ಯಾಪಕ ನಾ ಸರ್ವನ ನಮಿಸುವ ಗರ್ವವೆಂತುಟೊ ಶಕ್ರ ಸಮಸ್ಕøತನಾ12 ಧರೆಯೊಳು ಪುಲಿಗಿರಿವರದ ವಿಠಲನ ಚರಣವ ಭಜಿಸುವರ ನಿರುತದಿ ಪೂಜಿಪ ಹರುಷವು ಸಾಲದೆ ಹರಿ ಸರ್ವೋತ್ತಮ13
--------------
ವೆಂಕಟವರದಾರ್ಯರು
ಎಂತೋಪೂಜಿಪುದಂತರ್ಯಾಮಿಯಾ-ನಂತಾದಿರಹಿತನ ಚಿಂತಾದೂರನ ಚಿನುಮಯ ರೂಪನಾ ದೆಂತೋಧ್ಯಾನಿಪೆ ನಾ ಪ ಈಶ-ವೀಶ-ವಾಹನಗೀಸಚರಾಚರ ಮಿಸಲಿಗೊಳಗಲ್ಲಾ ವಾಸುಕಿ ಭೋಗನಿವಾಸಿಗೆ ತರವಲ್ಲಾ 1 ಚರಣದಿ ಗಂಗೆಯ ಧರಿಸುವಾತನ ಚರಣವ ತೊಳೆಯುವರೇ ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ 2 ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ 3 ಕಲಶಾಂಬುಧಿಯೊಳು ನೆಲಸಿಹಮೂರ್ತಿಗೆ-ಸಲಿಲ ಸ್ಪರ್ಶನವೆ ಜಲರುಹನೇತ್ರಗೆ ಜಲರುಹಗಾತ್ರಗೆ ಜಲದಲ್ಲಿ ಮಜ್ಜನವೆ 4 ಸ್ವರ್ಣಾಂಬರಗಳ ಬಣ್ಣಿಸುಡುವಗೆ ಬಣ್ಣದವಸ್ತ್ರಗಳೆ ಉನ್ನತ ಕೌಸ್ತುಭರನ್ನದ ತೊಡವಿಗೆ ಬಿನ್ನಣದೊಡವೆಗಳೆ 5 ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂಪಡೆದವಗೆ ಮಿಸುಪ ತುಲಸಿಯಿಂದೆಸವಗೆ ಪೂಗಳ ವಿಸರ ಮನೋಹರವೇ 6 ಗಂಧವಾಹನ ಸುವಿಂದಲಿಸೃಜಿಸಿದ ಗಂಧವತೀಶನಿಗೆ ಗಂಧಧೂಪಗಳು ಬಂಧುರಂಗಳೆ ಗಂಧರ್ವಾನತನಿಗೆ 7 ವೇದ ಗೋಚರಿಸು ವೇದಾತ್ಮಕನು ವೇದೋದ್ಧಾರಕನು ವೇದಲೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೆ 8 ಪೊಕ್ಕರೆ ಜಲಮಂ ಕುತ್ತಿಗೆ ನೆರೆಯದವಸ್ತು ಪರಾತ್ಪರನಾ ನಿತ್ಯತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತುಜನಾ 9 ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ ಮಂತ್ರ ಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ 10 ಅಂತರ್ಬಹಿಯೊಳಗಂತರವಿಲ್ಲದ ನಂತ ಗುಣಾತ್ಮಕನಾ ಎಂತು ಪ್ರದಕ್ಷಿಣೆಯಾಂತು ನಮಿಪೆ ಜಗದಂತ ಶರೀರಕನಾ 11 ಸರ್ವಾಧಾರನ ಸರ್ವ ಶರೀರನ ಸರ್ವವ್ಯಾಪಕನಾ ಸರ್ವನ ನಮಿಸುವಗರ್ವವೆಂತುಟೊ ಶಕ್ರನಮಸ್ಕøತನಾ 12 ಧರೆಯೊಳು ಪುಲಗಿರಿವರದ ವಿಠಲನ ಚರಣವ ಭಜಿಸುವರ ನಿರುತದಿ ಪೂಜಿಪ ಹರುಷವು ಸಾಲದೆ ಹರಿದಾಸೋತ್ತಮರಾ 13
--------------
ಸರಗೂರು ವೆಂಕಟವರದಾರ್ಯರು