ರಾಮ ಬಂದ ನಮ್ಮ ಪ್ರೇಮ ಬಂದಾನೊ ಪ ಕೋಮಲಾಂಗ ಕಮಲಾಪತಿ ಬಂದಾನೊ ಅ.ಪ ಸರಸಿಜನಾಭ ಬಂದ ಕರಿವರದನು ಬಂದ ಕರುಣಾಕರ ನರಹರಿಯು ತಾ ಬಂದನೊ 1 ಕಂಸ ಮರ್ದನ ಬಂದ ಹಂಸ ದೇಹನು ಬಂದ ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ 2 ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ ತ್ರಿವಿಕ್ರಮ ವಿಜಯ ರಾಮಚಂದ್ರವಿಠಲ ಬಂದಾನೊ 3
ರಾಮ ಭಜನೆ ಮಾಡೋ ಮನುಜ ರಾಮ ಭಜನೆ ಮಾಡೋ ಪ ರಾಮ ರಾಮ ಜಯ ರಾಘವ ಸೀತಾ ರಾಮನೆಂದು ಸುಸ್ವರದಲಿ ಪಾಡುತಅ.ಪ ತಾಳವನು ಬಿಡಬೇಡ ಮೇಳವನು ಮರೆಬೇಡ ತಾಳಮೇಳಗಳ ಬಿಟ್ಟು ನುಡಿದರೆ ತಾಳನು ನಮ್ಮ ಇಳಾಸುತೆಯರಸನು 1 ಭೃತ್ಯ ಮನೋಭಾವದಲಿ ಸತ್ಯ ಜ್ಞಾನ ಅನಂತ ಬ್ರಹ್ಮನು ಹೃದ್ಗತನೆಂದರಿಯುತ ಭಕುತಿಯಲಿ 2 ಭಲರೆ ಭಲರೆಯೆಂದು ತಲೆದೂಗುವ ತೆರದಿ ಕಲಿಯುಗದಿ ವರಕೀರ್ತನೆಯಿಂದಲಿ ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 3