ಒಟ್ಟು 29700 ಕಡೆಗಳಲ್ಲಿ , 137 ದಾಸರು , 8961 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀಶ ಕರುಣಾರಸ ಭೂಷಾ ಖರಾರಿ ದಯಾರಸ ಪೂರಿತ ವೇಷಾ ಪ. ಅಕ್ಷಪೂರ್ವಜನ ರುಕ್ಷಶರಾಹತಿ ವಿಕ್ಷತಕಪಿಗಳನೀಕ್ಷಿಸುತ ರೂಕ್ಷನ ನುಡಿ ಕೇಳ್ದಾಕ್ಷಣದೊಳಗರೆಲಕ್ಷಯೋಜನಕೆ ಲಂಘಿಸುತ ಕರತಲದೊಳಗಿಡುತ ಅಕ್ಷಿನಿಮೋಘಕೆ ಲಕ್ಷಕೊಡದೆ ನಿಜಪಕ್ಷದ ಜನರನು ರಕ್ಷಿಸಿದ 1 ಸೇರಿ ದುರಾಕೃತ ಕೌರವರ ಧಾರುಣಿಗೊರಗಿಸಿ ಘೋರ ರೂಪ ಕಿಂಮೀರನ ರಕ್ತನ ಕಾರಿಸುತ ಭಾರಿಗದೆಯ ಪಿಡಿದಾರುಭಟಿಸಿ ಬಹುವಾರಣ ತತಿಗಳ ಹಾರಿಸುತ ವೀರಜಗಧೀರಣ ಮೂರ್ತೆ 2 ಹಿಂಡುಗೂಡಿದಾ ಖಂಡಲ ರಿಪುಗಳು ಖಂಡ ಪರಶುಹರಿತಾನೆನುವ ಭಂಡಮಾತ ಭೂಮಂಡಲ ಮಧ್ಯದಿ ಪುಂಡುತನದಿ ಪ್ರಸ್ತಾಪಿಸುವ ಪಂಡಿತ ಮಾನಿಗಳೆನಿಸಿದ ಮೈಗಳ ಖಂಡಿಸಿ ತತ್ವವ ಬೋಧಿಸುವ ಬ್ರಹ್ಮಾಂಡಕೋಟಿಪತಿಯನುತಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತೀಶ ಮದ್ಭಾರ ನಿನ್ನದಯ್ಯ | ಕರುಣದಿ ಪಿಡಿ ಕೈಯ್ಯಾ || ಪೂರೈಸೆನ್ನ ಮನೋಭಿಲಾಷೆ ಗುರುವೆ | ಭಜಕರ ಸುರತರುವೆದ್ಭ ಪ ಹರಿಭಕ್ತಾಗ್ರೇಸರನೆ ಹನುಮಂತಾ | ಹರನುತ ಬಲವಂತಾ | ತರಣಿಕುಲಜ ಶ್ರೀರಾಮನ ಕೈಯಿಂದ | ಬಲುಸಂಭ್ರಮದಿಂದಾ | ರಣದೊಳಗೋಲ್ಯಾಡಿ | ದುರುಳ ರಕ್ಕಸರ ದುಷ್ಟ ದನುಜರ | ತರಿದೆ ಲೋಕೈಕ ಸಮರ್ಥಾ 1 ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ | ಕಂತು ಜನತನಿಚ್ಛಾನುಸಾರವಾಗಿ | ರಣದೊಳಗೆ ಚೆನ್ನಾಗಿ | ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು | ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ 2 ನಡುಮನೆಯೆಂಬೊ ವಿಪ್ರನ ಮನೆಯಲ್ಲಿ | ಅವತರಿಸಿ ಚೆನ್ನಾಗಿ | ಮೃಡ ಸರ್ವೋತ್ತಮ ಹರಿಯೆ ತಾನೆಂದು | ಮಿಥ್ಯಾಜಗವೆಂದು | ನುಡಿವ ಜನರ ಮತಗಳನೆ ನಿರಾಕರಿಸಿ ಶಾಸ್ತ್ರವ ರಚಿಸಿ |ಒಡೆಯ ತಂದೆ ಶ್ರೀ ವಿಜಯವಿಠಲನ್ನ ಪೂಜಾಸಕ್ತನೇ 3
--------------
ವಿಜಯದಾಸ
ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ಪ. ಭಾರಿಭಾರಿಗವತಾರ ಮಾಡಿ ಬಳಲೀ ಆನಂದದಲ್ಲೀ ಅ.ಪ. ತ್ರೇತೆಯಲ್ಲಿ ಶ್ರೀ ರಾಮದೂತನಾಗಿ ತನುಸುಖವ ನೀಗಿ ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ ತನುವಪ್ಪಿಸಿ ಬಾಗಿ ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ ಸೀತೆಯ ಕಂಡೆರಗಿ ವೀಹೋತ್ರಗೆ ಪುರವಪ್ಪಿಸಿ ತಿರುಗೀ ರಾಮರ ಕಂಡೆರಗಿ 1 ಕುಂತಿಯ ಜಠರದಿ ಜನಿಸಿ ಭೀಮನೆನಿಸೀ ಬಕಮುಖರನೆ ಜೈಸಿ ಸಂತೋಷದಿ ಸೌಗಂಧ ಸತಿಗೆ ಸಲಿಸೀ ಕೌರವರ ಸಂಹರಿಸೀ ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ ಪಾಂಡವರನೆ ಮೆರಸೀ ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ ಮೇಲ್ತೋರದೆ ಸ್ಮರಿಸೀ 2 ಮೂರನೆ ರೂಪದಿ ಮುನಿಯಾಗವತರಿಸೀ ದುರ್ಮತಗಳ ಜೈಸೀ ಸಾರತತ್ವಮತ ಸಜ್ಜನರಿಗೆ ತಿಳಿಸೀ ಸರ್ವೋತ್ತಮ ಹರಿ ಎನಿಸೀ ಆರು ಅರಿಯದಂತೆ ದಾಸತ್ವವಚರಿಸೀ ದುರ್ಮತಗಳ ಜೈಸೀ ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ ಯತಿ ಕುಲಜರೋಳ್ ನಿಲಿಸೀ 3 ಮೀಸಲ ದಾಸ್ಯವ ಮೂರವತಾರದಲ್ಲಿ ಚರಿಸಲು ಕಲಿಯಲ್ಲೀ ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ ನಾರದ ಮುನಿಯಲ್ಲೀ ಪುರಂದರ ಗುರುವೆನಿಸುತಲೀ ಮೆರೆಯಲು ಜಗದಲ್ಲೀ ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ ದಾಸ ತಾನಾಗುತಲೀ 4 ದಾಸತನದ ಆನಂದವನನುಭವಿಸೇ ದೇವತೆಗಳು ಬಯಸೇ ಭೂಸುರ ಜನ್ಮದಿ ಭೂಮಿಯಲವತರಿಸೇ ಹರಿದಾಸರಾಗಿ ಸುಖಿಸೇ ವಾಸುದೇವಗೆ ತಾ ನಿಜದಾಸನು ಎನಿಸೇ ಮಾರುತಿ ಇದ ಬಯಸೇ ಶ್ರೀಶ ಗೋಪಾಲಕೃಷ್ಣವಿಠಲದಾಸಾ ಬೆಳಗಾವಿ ವಾಸಾ 5
--------------
ಅಂಬಾಬಾಯಿ
ಭಾರತೀಶನೆ ಬೇಗ ಬಾರೊ ಮನ್ಮನದಲಿ ಹರಣ ಪ ಚಾರು ಭಾಸ್ಕರ ಕ್ಷೇತ್ರ ಗಾರನೆ ದಶರಥಕುಮಾರ ಸೇವಕಾಗ್ರಣಿ ಅ.ಪ ವಾರಿಧಿ ಲಂಘಿಸಿದ ಶೂರನೆ ಗಿರಿಯಾಶ್ರಯದಿ ತೋರುವಿ ಶ್ರಮಪರಿ- ಹಾರಾರ್ಥಿಗಳ ತೆರ ಘೋರ ಪಾತಕಾಂಬುದ ಸ ಮೀರ ಪಾಲಿಸೆನ್ನನು 1 ತಂದು ನೀಡಿದಿ ದ್ರುಪದ ನಂದಿನಿಯಳಿಗೆ ಸೌ ಗಂಧಿಕ ಪುಷ್ಪ ದಯದಿ ವಂದಿಸುವೆನು ಮನ ಮಂದಿರದಲಿ ಯದು ನಂದನನಂಘ್ರೀ ನೋಳ್ಪಾ ನಂದವ ಕರುಣಿಸೊ 2 ಭೇದಾಬೋಧಿಸಿ ಬಲುಮೋದವ ಗರಿವ ಶಾಸ್ತ್ರ ನೀದಯದಲಿ ರಚಿಸಿ ವಾದಿ ಮದಗಜ ಮೃ ಗಾಧಿಪನೆನಿಸಿದ ಮೋದತೀರ್ಥಾಹ್ವಯಾ- ಗಾಧ ಮಹಿಮ ಗುರು 3 ಸತತ ಸೇವಿಪ ಗರ್ಭವತಿಯಾಗಿರುವ ವಿಪ್ರ ಸತಿಯ ನುಡಿಯ ಲಾಲಿಸಿ ನತಜನ ಪಾಲನೆ ಪ- ರ್ವತ ದಿಂದಿಳಿದಶ್ವತ್ಥ ಕ್ಷಿತಿರುಹ ಮೂಲದಿ ಪಾ- ರ್ವಾತಿ ನಾಥ ಸೇವಿತನೆ 4 ಈ ಸುಕ್ಷೇತ್ರದೊಳು ವಿದ್ವಾಂಸ ದೇವರಾಜಾಖ್ಯ ಸನ್ನುತ ವಾಸಕಾರ್ಪರ ನರ ಕೇಸರಿ ಗತಿ ಪ್ರಿಯ ದಾಸ ಪಾಲಿಸೊ ಗುರು ವ್ಯಾಸರಾಜ ಪೂಜಿತ 5
--------------
ಕಾರ್ಪರ ನರಹರಿದಾಸರು
ಭಾರ್ಗವಿ ಪ ಮಹಾಲಕುಮಿ ಶ್ರೀಪತಿಗೆ ಸಮಾಸಮಳೆನಿಸಿರಲು ಅ.ಪ ಮಡುವ ಸೇರಿದ ಒಡೆಯ ಬಿಡದೆ ಮಂದರಗಿರಿಯ ಪೊಡವಿಬಗೆದು ಒಡೆದು ಕಡುಕ್ರೂರನಾದ ಬಡವನಂತೆ ಬೇಡಿ ಕೊಡಲಿ ಪಿಡಿದಿಹ ಕೆಡುಕ ಮಡದಿಯಾ ಕಳಕೊಂಡು ಕಡಹನೇರಿದ ಕ್ರಿಯಕೆ 1 ಮುಗುಧರನ ಮಾಡಿದ ಶುದ್ಧಸ್ತ್ರೀಯರನೆಲ್ಲಾ ಖಗಗಮನ ತಾ ತುರುಗವನು ಹತ್ತಿದಾಯೋಗ ಭೃಗುಮುನಿಯ ಅಪಚಯಕೆ ಕರವೀರಪುರದಲಿರೆ ನಾಗಗಿರಿಗಿಳಿದ ಪತಿಯ ಪರಿಣಯವನೆಸಗಿದೆ2 ನಾಗರಾಜನ ಕೂಗ ಕೇಳಿದಾಗ್ಹೇಳದಲೆ ಬೇಗ ಸಾಗಿಬಂದಾ ಸರಸಿನಾ ಬಳಿಗೇ ಅಂಗಜನ ವೈರಿಯ ಇಂಗಿತವನರಿತು ಹೆಂಗಳಾರೂಪದಲಿ ಮೋಹಿಸಿದ ಮಾಯಕ್ಕೆ 3 ಕ್ಷಮೆಯಸಾಗರಳೆ ನಿನ್ನ ಅನುಪಮ ಸನ್ಮಹಿಮೆ ಅಮಿತವಾಗಿಹುದು ಜಗಕಾರ್ಯದಿ ಅಮಮ ನೀನಿರಲು ನಾಭಿಕಮಲದಲಿ ಬ್ರಹ್ಮನ ಜ- ನುಮ ತೋರಿದ ಹರಿಯ ಸ್ವರಮಣನ ಕಾರ್ಯಕೆ4 ಗುಣತ್ರಯಂಗಳಭಿಮಾನಿ ಶ್ರೀ ವೇಂಕಟೇಶನರಾಣಿ ಎಣೆಯಂಟೆ ಹರಿಗುಣವನೆಣಿಸುವ ಪ್ರವೀಣೆ ಘನ್ನ ಉರಗಾದ್ರಿವಾಸವಿಠಲನ ಕರುಣ ಪೂರ್ಣಪಾತ್ರಳೆ ಹರಿಯ ವಕ್ಷಸ್ಥಳನಿವಾಸಿನಿಯೇ5
--------------
ಉರಗಾದ್ರಿವಾಸವಿಠಲದಾಸರು
ಭಾವ ನೆಲೆಗೊಳ್ಳಿ ಸಾಧಿಸಿ ದೃಢದಲ್ಲಿ ದೈವ ಪ್ರಕಟಾಗಿ ಒಲಿವುದು ಘನದಲಿ ಧ್ರುವ ಮಾಡಿ ಚಿತ್ತಶುದ್ಧ ನೋಡಿ ಸ್ವತ:ಸಿದ್ಧ ಗೂಢ ಗುಪ್ತ ಘನ ಕೈಗೂಡಿ ತಾಂ ಪ್ರಸಿದ್ದ 1 ನಡಿಯ ಪಡಕೊಳ್ಳಿ ಸದ್ಗುರು ದಯದಲಿ ಕಡೆದು ಹೋಗುವದು ಭವಪಾಶ ಮನದಲಿ 2 ಭಾವಕತಿ ಪ್ರಿಯ ಭಾನುಕೋಟಿ ಉದಯ ಪಾವನ್ನಗೈಸುತಿಹ ನೋಡಿ ಮೂಢ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವ ಭಕುತಿಗೆ ವಲಿವ ನೋಡಿರೋ| ದೇವ ದೇವ ಮುಕುಂದನು| ಆವನಾಗಲಿ ತನ್ನ ನಂಬಿದ| ಸೇವಕರನು ದ್ಬರಿಸಿ ಪೊರೆವನು ಪ ಆಚರಣೆ ನೋಡಿದನೆ ವ್ಯಾಧನ| ನೀಚನೆಂದನೆ ವಿದುರನ| ಯೋಚಿಸಿದನೇ ಧ್ರುವನ ವಯಸನು| ನಾಚಿದನೇ ಕುಬ್ಜೆಯನು ಕೂಡಲು1 ಏನು ವಿದ್ಯೆ ಗಜೇಂದ್ರದೋರಿದ| ಏನು ಕೊಟ್ಟ ಸುಧಾಮನು| ಏನು ಪೌರುಷ ಉಗ್ರಸೇನನ| ಏನುಣಿಸಿದಳು ಹರಿಗೆ ದ್ರೌಪದಿ2 ಆವಶೇವೆಯೋ ನರನ ಬಂಡಿಯ| ಬೋವತನವನು ಮಾಡಲು| ಭಾವಿಸಲು ಗುರುಮಹಿಪತಿ ಪ್ರಭು| ಕಾವಕರುಣಿಯೋ ಮಹಿಮೆ ತಿಳಿಯದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ ಪ ಕಾವ ಕೊಲ್ಲುವ ತಾನೆ ಒಬ್ಬನೆ ಕೊನೆಗೆ ನಿಲ್ಲುವೆನೆಂದು ಅ.ಪ ಮತಿಗೇನು ತೋರದೆ ಮಿತ ವ್ಯಾಪಾರದೊಳಿರಲು 1 ಪುರಾಣ ಕೇಳಿದಾಗ ನರಕ ಭಯವು ಮನಕೆ ತೋರಿ ಬರಲು ಮರದು ಪೋಗಲು 2 ಸಿರಿಯು ಬೇಕೆಂದು ನರರ ಪೂಜೆ ಮಾಡಿ ಧನವ ಕೂಡಿಸಿ ಪೋಗಲಾಗ ಹರಿಯ ನೆನೆಯೊ 3 ತಿರುಗಿ ಬೇಡಲು ನೀರಿನ ಲಾಭವಿಲ್ಲದೆ ನರಹರಿಗೆ ಮೊರೆಯಿಡಲು 4 ಅನುಕೂಲವೆಲ್ಲ ಇರಲು ಅನಿಮಿತ್ತದಿಂದ ಭಜಿಸು ಅನಿಮಿಷರೊಡೆಯ ವಿಜಯ ರಾಮಚಂದ್ರವಿಠಲನ್ನ 5
--------------
ವಿಜಯ ರಾಮಚಂದ್ರವಿಠಲ
ಭಾವಜನಯ್ಯ ನಿನಗೊಲಿದ ನಾರಿಯರುಗಳ ಲಾಲಿಸೋ ಪ ಇಂದೀವರಾಯತಾಕ್ಷಿಯೊಳು ತಾ ಮುನಿದಿರಲು ಕಂದರ್ಪಣೆರಾಯ ಕೇಳಿ ತನ್ನ ಚಂದಿರನು ದಳಪತಿಗೆ ನೇಮವನು ಕೊಟ್ಟು ನಲ- ವಿಂದ ಗಿಳಿತೇರನೇರಿ ಬರಲೂ ಮುಂದೆ ಉಗ್ಘಡದ ಕೋಗಿಲೆ ಪಾಡಿ ರಭಸ- ದಿಂದ ವಾದ್ಯಗಳು ಮೊಳಗೇ ಸಂದಣಿಸಿ ಝೇಂಕಾರಗೈದ ಭ್ರಮರಾಳಿಗಳ ವೃಂದದವರನೆಂತು ಬಣ್ಣಿಸುವರೆನ್ನಳವಲ್ಲ 1 ಅಗ್ಗದ ವಸಂತ ಮಾರುತರು ಒಗ್ಗಿ ನಲಿದಾಡುತ್ತ ಬರಲು ವೆಗ್ಗಳ ಸುಗಂಧ ಪರಿಮಳದ ಪೂವಲರುಗಳ ಒಗ್ಗಿನಲಿ ಕೂಡೆ ಬರಲೂ ತನ್ನ ಕಗ್ಗೊಲೆಗೆ ದಾಳಿಯಿಟ್ಟುದು ಕಾಮ ಪುಸಿಯಲ್ಲ ದಗ್ಗಡೆಯ ಮಾಡುವುದುಚಿತವೆ ನಿನ್ನ ಸಖಿಯಳನೂ 2 ಈ ತೆರದೊಳಿಹ ಪ ಕೊಳುವಳ್ ಕಳ ರಳ್ತೆ ಸಂಜೆ ಭಟರೊಗ್ಗಿನಲಿ ಭಾರಿಯಾಗಿ ಲಲೂ ಮತ್ತೆ ಕೆಂದಳಿರ ಸಂಪಗೆಯ ಕಿಡಿಯಲರುಗಳು ಒತ್ತಿ ಸೂಸುತ್ತ ಬರಲೂ ತನ್ನ ಬತ್ತಳಿಕೆಯೊಳಗೊಂದು ಕೂರಲಗ ತೆಗೆ ವೃತ್ತ ಕುಚದಬಲೆಯಳ ಮನ್ನಿಸದೆ ಸುರಪುರದ ಸುತ ಲಕ್ಷ್ಮೀಶನಹುದೆ ಭಳಿರೇ 3
--------------
ಕವಿ ಲಕ್ಷ್ಮೀಶ
ಭಾವಜ್ಞರ ಪಾದವನೇ ಪಿಡಿಯೋ ಭಾವಜನಯ್ಯನ ಸೇವೆಯ ಪಡೆಯೋ ಪ ಘನಗುರು ಹಿರಿಯರ ಕಾಲಿಗೆ ಎರಗೋ ಘನ ಮಹಿಮನ ಪಾದಕೆ----ಗೋ 1 ಪಂಡಿತ ಆರ್ಯರ ಪೂಜಿಸು ಇಲ್ಲೆ ಪುಂಡರೀಕಾಕ್ಷನ ಭಜಿಸಿ ಪಾದವನು ಪಿಡಿಯೋ 2 ನಿಜ 'ಹೆನ್ನವಿಠ್ಠಲನ್ನ’ ನೀನಾಗ ಕೂಡೊ 3
--------------
ಹೆನ್ನೆರಂಗದಾಸರು
ಭಾವದ ಪೊಂಬ್ಹರಿವಾಣ ಭಕುತಿಯಾ | ತೀವಿದಾರತಿ ಜ್ಞಾನಜ್ಯೋತಿಯಾರುತಿಯಾ ಪ ಆರುತಿ ಬೆಳಗುವೆನಾ | ನಮ್ಮಯ್ಯಗೆ ಆರುತಿ ಬೆಳಗುವೆನಾ | ಶ್ರೀ ಗುರುವಿಗೆ ಆರುತಿ ಬೆಳಗುವೆನಾ 1 ಮುಖದಲಿ ನುಡಿಯುತ ನಾಮಾವಳಿಯಾ | ಸಕಲರು ಪ್ರೇಮದಿ ಹಾಕಿ ಚಪ್ಪಾಳೆಯಾ 2 ನಯನದಿ ನೋಡಿ | ಶರಣವ ಮಾಡಿ | ಭಯವ ನೀಡಾಡಿ | ಶೃುತಿಗಳಪಾಡಿ3 ಇಂದಿನದಿನದಾನಂದವು ನಮಗೆ | ಹಿಂದಿನ ಪುಣ್ಯ ಇದಿರಿಟ್ಟಿತು ಈಗ4 ಒಡಲ್ಹೊಕ್ಕು ಮಹೀಪತಿ ನಂದ ನೊಡೆಯನಾ | ಪಡೆವ ಬನ್ನಿರೋ ಬೇಗ ಮುಕುತಿಯ ಸದನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ ಧ್ರುವ ತೋರಿ ಕೊಡುವುದಲ್ಲ ತೋರಿಸಿ ತಾ ಕೊಂಬುವದಲ್ಲ ತೋರಿಕೆಗೆರಡಿಲ್ಲ ತೋರಿ ತೋರದದರೊಳಾಡುವದೆಲ್ಲ 1 ಬಯಲಿಗೆ ನಿರ್ಬೈಲು ಬಯಲಿಲಿದ್ದವ ಬಲ್ಲಿದರ್ಹೋಯಿಲು ಶ್ರೇಯ ಸುಖದ ಕೀಲು ಜೈಸಿಹ ಮನದವಗಿದು ಮೇಲು 2 ಜ್ಞಾನರಹಿತ ಕೂಟ ಮನೋನ್ಮಕಾಗಿಹ್ಯ ಮುಗುಟ ಅನುದಿನ ಮಹಿಪತಿ ಸುಖದೂಟ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವವೇ ಕಾರಣವೊ ಭವಕೆ ದೇವ ಪ ಭಾವಜಾಪಿತ ನಿನ್ನ ಭಾವ ಬಿಡದವ ಧನ್ಯ ಅ.ಪ. ಭಾವಸೂತ್ರದಿ ಸಿಕ್ಕ ಬರಿ ಬೊಂಬೆ ಜಗವಯ್ಯ ಭಾವಧಾರಕ ನೀನು ಎನ್ನಿಂದಲೇನಹುದೊ 1 ಎಂತು ನೀ ಕುಣಿಸಿದರೆ ಅಂತು ಕುಣಿವುದೊ ಜಗವು ತಂತ್ರ ನಿನ್ನದು ದೇವ ಜಾವ ಜಾವದಿ ಭ್ರಾಂತಿ ರೋಗವ ನೀಗಿ ಶಾಂತಿ ಪಾಲಿಸು ಹರಿಯೆ ಸ್ವಾಂತರದಿ ಸಂತತ ದರುಶನವ ಕೊಟ್ಟೆನಗೆ 2 ವಿಷಯ ಸಂಗವ ಬಿಡಿಸು ಹೃಷಿಕೇಶ ಮೃಡಮಿತ್ರ ವಿಷಮಗತಿ ಪರಿಹರಿಸು ಪ್ರಾಣಮನದ ವೃಷಭಾದ್ರಿಪಸಖ ಜಯೇಶವಿಠಲನೆ ಕರುಣಾಬ್ಧಿ ವೃಷ್ಟಿ ಮದ್ಬಿಂಬಗಿದು ವಿಹಿತ 3
--------------
ಜಯೇಶವಿಠಲ