ಒಟ್ಟು 1069 ಕಡೆಗಳಲ್ಲಿ , 109 ದಾಸರು , 898 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾದರಾಯಣ ಪಾದಕೆರಗಿದೆನೊ ಪ ನೀದಯದಿ ಕಾಮಕ್ರೋಧಗಳನೆ ಬಿಡಿಸಿ ಸಾಧು ಕರ್ಮದಲಿ ಆದರವೀಯೊ ಅ.ಪ ಜ್ಞಾನಿ ಗೌತಮಿ ಮೌನಿ ಶಾಪದಿಂದ ಜ್ಞಾನಿಗಳಿಗೆ ಅಜ್ಞಾನತೆ ಬರಲು ದೈನ್ಯದಲಿ ಚತುರಾನನಾದಿಗಳು ನೀನೆ ಗತಿಯೆನಲು ಮಾನಿಸಿದ ಸುಖಾತ್ಮ 1 ತಾಪಸೋತ್ತಮ ಆ ಪರಾಶರರು ದ್ವೀಪದಲ್ಲಿರಲು ನೀ ಪವಳಿಸಿದೆ ಶಾಪದಿಂದ ಕ್ರಿಮಿರೂಪ ಪೊಂದಿದವಗೆ ಭೂಪತನವನಿತ್ತ ದ್ವೈಪಾಯನಾಖ್ಯ 2 ಶೃತಿಗಳರ್ಥ ಮಂದಮತಿಗಳರಿಯದಿರೆ ಹಿತದಿ ಬ್ರಹ್ಮಸೂತ್ರತತಿಗಳನ್ನೆ ರಚಿಸಿ ಭಾಗವತ ವರ ಮಹಾಭಾ- ರತಗಳನ್ನು ರಚಿಸಿ ಅತಿ ಪ್ರಸನ್ನರಾದ 3
--------------
ವಿದ್ಯಾಪ್ರಸನ್ನತೀರ್ಥರು
ಬಾರಮ್ಮಾ ಶ್ರೀಗುರು ಜನನೀ | ಘನಕರುಣೀ | ಬಾರ ನಿಜ ಸುಖ ದಾನೀ ಪ ಭವದಾಟವ ಕೇರಿಯೊಳು ಹೋಗಿ | ಮನಮರವಾಗಿ | ಪರಿ ಬಲು ಪಾಡಿದೆ | ಬಂದೇ ತವಕದಿ ಓಡಿ 1 ಬೋಧದ ಸ್ತನಪಾನ ಮಾಡಿಸೇ | ಸುಧೆ ಉಣಿಸೇ | ತಾಪ | ಬಾಧೆಯ ಬಿಡಿಸೇ | ನಿನ್ನುದರೊಳಗಿರಿಸೇ 2 ಭಕುತಿ ತೊಟ್ಟಿಲವನ್ನು ತೂಗಿಸೀ | ಯನ್ನ ಕೂಡಿಸೀ | ಪಾಡುತಖಿಲೇಶ ನಾಮಾ | ಬಾಲಕಗ ಮಹಿಪಮ್ಮ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರಯ್ಯ ದಯೆದೋರಯ್ಯ ನೀರಜನಾಭನೆ ಕರುಣಿಸು ಮಹರಾಯ ಪ ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ 1 ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ2 ಜಡಭವತೊಡರನು ಗಡನೆ ಕಡೆಹಾಯ್ಸಿ ನಿ ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ 3
--------------
ರಾಮದಾಸರು
ಬಾರಿಯ ಜಿಡ್ಡಂತೆ ದುರ್ಜನ ಸಂಗ ಬಾರಿಯ ಜಿಡ್ಡಂತೆ ಪ ತೂರಿ ಪೋಗದಂತೆ ದಾರಿಕಟ್ಟು ಮಾಡಿ ಊರು ಸುತ್ತ್ಹಚ್ಚಿದ ಅ.ಪ ತಲೆಬಾಗಿ ನೆಲವನ್ನು ನೋಡದೆ ತಿಳಿಯದಲೆ ಇದನು ತುಳಿಯಲು ಅಂಗಾಲಿ ನೊಳಗೆ ಮುರಿದು ಖಂಡ ಕೊಳೆಸಿ ಕೀವುಮಾಡಿ ಅಳಿಸಿ ಬಳಲಿಸುವ 1 ಉಡಿಗೆ ತೊಡಿಗೆಗಳನ್ನು ಅಂಟಲು ಬಿಡಿಸಲು ಬಿಡದಿನ್ನು ಅಡರಿಕೊಂಡು ಇದು ತೊಡರಿ ತೊಡರಿ ಬಲು ಮಿಡುಕಿಸುವ ಕಡು ತೊಡರಿನ ಅಂಟು2 ನಿಷ್ಠೆಯಿಂದ ಜವದಿ ಶ್ರೀರಾಮ ಪಟ್ಟಣ ಮಾರ್ಗದಿ ನೆಟ್ಟಗೆ ಪೋಗುವ ಶಿಷ್ಟರ ಕಾಲೊಳು ನೆಟ್ಟು ಕಷ್ಟ ಕೊಟ್ಟು ಬಿಟ್ಟು ಕಟ್ಟು ಮಾಡ್ವ 3
--------------
ರಾಮದಾಸರು
ಬಾರೈ ಪ್ರಭುವೆ ಬಾರೈ ಪ್ರಭುವೆ ಪ ತೋರೈ ಹರಿಪಾದವ ಗುರುವೆ ಕಮಲ ನಂಬಿದೆ ಭವ ಬಂಧನ ಹರಿಸಿ ಕರುಣದಿ ಜವನ ಭವನ ಬಿಡಿಸೋ ದೀನ ದಿವಿಜ ತರುವೆ1 ಹರಿಕಥಾ ಸುಧಾ ಸಾರ ವರ ರಹಸ್ಯವ ಪೊರೆ ಕರುಣದಿಂದಲರುಹಿಸದಾ ಪೊರೆಯೋ ವಿಭುವೆ 2 ಸುಂದರ ಸುಪ್ರೇಮ ಪಾತ್ರ ಕಂದನನುದಾಶಿಸುವದು ತಂದೆಗೆ ಥರವೆ 3
--------------
ಶಾಮಸುಂದರ ವಿಠಲ
ಬಾರೈ ಬಾರೈ ಗುರು ಸಾರ್ವಭೌಮನೇ ಪ. ಉಟ್ಟವಸನವು ತೊಟ್ಟ ಆವಿಗೆ ಇಟ್ಟ ದ್ವಾದಶ ಊಧ್ರ್ವ ಪುಂಡ್ರವು ದಿಟ್ಟತನದಿ ಇಟ್ಟು ಕೊರಳೊಳು ಮಣಿ ಮನೋಭೀಷ್ಠವ ಸಲಿಸುತ 1 ದಂಡಕ ಮಂಡಲ ಕೈಯಲಿ ಪಿಡಿದು ಕಂಡ ಕಂಡದ ಪೂಜೆಗೊಂಬುವ ಕೊಂಡ ಜನರ ಪರಿಪಾಲಿಸುತಲಿ ಕಂಡ ಕಂಡವರ ಕಾಯುವ ಕರುಣೆ2 ಭೂತ ಪ್ರೇತ ಭಯ ನಾಶಗೊಳಿಸಿ ಭೀತಿಯ ಬಿಡಿಸಿ ಮಂತ್ರಾಲಯದಿ ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ ಪ್ರೀತಿಪ ಜನರ ಮನೋಭೀಷ್ಠವೊಲಿದ 3
--------------
ಗುಂಡಮ್ಮ
ಬಾರೈಯ್ಯಾ ಬಾರೈಯ್ಯಾ ಚಕೋರ ಶಶಾಂಕಾ ಪ ಕ್ಲೇಶ ಕಳೆದು ತವ ದಾಸ ಜನರ ಸಹವಾಸವ ನೀಡಲು 1 ಹನುಮ ಭೀಮ ಮುದ | ಮುನಿವರ ಹರಿಪದ ಅನುದಿನ ಗರೆಯಲು 2 ವಾತಜ ನಿನ್ನಯ ದೂತರು ನಾವೈ ಪಾತಕ ಭೀತಿಯ | ಪ್ರೀತಿಲಿ ಬಿಡಿಸಲು 3 ಭಾವ ಭಕ್ತಿಯಲಿ | ಸೇವಿಪರಿಗೆ ಸುಖ | ದೇವಗುರು | ಛಾವಣಿ ನಿಲಯಾ 4 ತಂದೆ ನೀನೊಲಿದರೆ | ನಂದಜ ಶಾಮ ಸುಂದರ ಸಲಹುವನೆಂದು ಪ್ರಾರ್ಥಿಪೆವು 5
--------------
ಶಾಮಸುಂದರ ವಿಠಲ
ಬಾರೋ ನಮ್ಮನಿಯೊಳಗೆ ಭಾರತಿಪತಿ ಪ ಬಾರೋ ನಮ್ಮನಿಗೀಗ ನೀರಜಾಕ್ಷನು ನಿನ್ನಸೇರಿದ ಜನರೊಳು ಭಾಳ ಬಹಳೇ ಪ್ರೀತಿಯ ಮಾಳ್ಪ ಅ.ಪ. ಹರಿಯ ಮಂಟಪದೊಳು ಸರಸಿಜಾಕ್ಷನ ಮುಂದೆಇರಿಸಿ ನಿನ್ನನು ನಿತ್ಯಾ ಸ್ಮರಿಸಿ ಪೂಜಿಪೆ ಸ್ವಾಮಿ 1 ನಿನ್ನ ಸೇರಿದ ಕಪಿಯನ್ನು ಪೊರೆದ ಹರಿನಿನ್ನ ಸೇರದ ವಾಲಿಯನ್ನು ಘಾತಿಸಿದಾ 2 ನಂತ ತೀರ್ಥರೆ ದಯದಿಂದ ನಮ್ಮೊಳು ಭವ-ಬಂಧನ ಬಿಡಿಸೆಂದು ಇಂದಿರೇಶಗೆ ಪೇಳು 3
--------------
ಇಂದಿರೇಶರು
ಬಾರೋ ಬಾರೋ ಬಾರೋ ಹರಿ ತೋರೋ ತೋರೋ ಮುಖವ ದೊರಿ ಪ ಧೀರನೆ ಬಹುಗಂಭೀರನೆ ಗೋರಸ ಗೋಪಿ ಜಾರನೆ ಬ್ಯಾಗನೆ ವೀರಾಧಿವೀರನೆ ಎನ್ನ ವಾರೆ ನೋಟ ನೋಡುವರೆ ಭೃಂಗಗಳ್ಯಾತಕೆ ಕೂಗಿದವೊ ಅಂಗಜ ಶರಗಳು ಸೇರಿದವೊ ಪಿಳಂಗೊಳವಿನೂದಲು ಆ ರಂಗ ಎನ್ನ ಬಿಡಿಸಿದ 1 ಕಾವರೆ ನಿನ್ಹೊರತಿನಾರೊ ಭಾವಜಪಿತ ಮಂದಿರ ಸೇರೊ ದೇವನೆ ಭಕುತರ ಕಾವನೆ ವರಗಳ ನೀವನೆ ರಿಪುವನದಾವನೆ ಬ್ಯಾಗನೆ ದೇವಾದಿ ದೇವನೆ ಎನ್ನ ಕಾವನು ನೀನಲ್ಲದೆ ಇ ನ್ಯಾವನು ಈ ಭೂಮಿಯೊಳ ಗೀವನು ಕಾಣಿನೊ ನಾನೊಬ್ಬ2 ಈ ಸಮಯದಿ ಪರಿಪಾಲಿಪರ್ಯಾರೋ ವಾಸುದೇವವಿಟ್ಠಲ ನೀ ತೋರೋ ಶ್ರೀಶನೆ ಸುಂದರಹಾಸನೆ ಮುನಿ ಮನ ವಾಸನೆ ಶತರವಿ ಭಾಸನೆ ಬ್ಯಾಗನೆ ಹಾಸುಮಂಚದೊಳು ಹುವ್ವಿನ ಹಾಸಿಕಿಯೊಳು ಮಲಗಿ ಬ್ಯಾಸರಗೊಂಡೆನು ಪರಿ ಹಾಸವ ಮಾಡದೆ ಬ್ಯಾಗ 3
--------------
ವ್ಯಾಸತತ್ವಜ್ಞದಾಸರು
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಬಾಲನಮ್ಮ ಬಾಲಕೃಷ್ಣ ಬಹಳ ಮಾಯಕಾರನೀತ ಪ ಬಾಲನೀನೆ ಗೋಪಾಲ ನೀಲಶ್ಯಾಮ ವನಮಾಲ ಬಾಲನಂತೆ ಕಣ್ಗೆತೋರಿ ಆಲಯ ಗೌಪ್ಯದಿಂದ ದೂರಿ ಅಧರ ಸುರಿವ ಅ.ಪ ಮಿಂದು ಮಡಿಯನುಟ್ಟಾನಂದದಿ ಶೋಭಿಸುವ ಅಂದಮಾದ ಹಂಸತಲ್ಪದಿ ಪವಡಿಸಿರುವ ಇಂದು ಮುಖಿಯವರ ಬಳಿಗೆ ಮುದದಿ ಮಂದಹಾಸದಿ ಮೋಹ ಮಾತನಾಡಿ ಬಾಧಿಸಿ ಕಂದರ್ಪನ್ಹೇವದಿ ಸುಲಿದುಕೊಂಡವ 1 ನಲಿನಲಿದು ಬೀಳುತೇಳುತ ಲಲನೆಯರಿಗೀ ಸುಲಿಯಪಲ್ಲು ತೋರಿನಗುತ ದಾರಿ ತರುಬಿ ಚೆಲುವಾದಾಟಗಳನೆ ಆಡುತ ಕೊಳಲನೂದುತ ಅರಿವು ಮರವೆಮಾಡಿ ತಿಳಿಯದ್ಹಾಗೆ ಘಳಿಲಿನ್ಹಾರಿ ಎಳೆದು ಏಕಾಂತಸ್ಥಳಕ್ಕೊಯ್ದು ಹಲವು ಕ್ರೀಡದಿಕಳೆಯ ಸೆಳೆದು ಗಲ್ಲಕಚ್ಚುವ ಜಿಗಿದು ಓಡುವ 2 ಹಿತದಿ ಆಡುವ ಸುತರ ಕೆಣಕುವ ಬಿಡಿಸಲ್ಹೋದ ಸತಿಯರ ಮೈಮೇಲೆ ಬರುವ ಸಣ್ಣವನೇನೇ ಪತಿ ನಾ ನಿಮಗೆಂದ್ಯವ್ವನ ತಾಳುವ ವ್ಯಥೆಯಬಡಿಸುವ ಮೀಸಲು ಮುರಿಸಿ ದೇವರು ತಾನೆಯೆನಿಸಿ ಪತಿತ ಶ್ರೀರಾಮ 3
--------------
ರಾಮದಾಸರು
ಬಿಡಿಸೊ ಕಡು ದಯಾನಿಧಿಯೆ ಕಡುಕಷ್ಟದುರುಲನ್ನು ಗಡನೆ ಎನ್ನಯ್ಯ ಪ ಕಡಿವಲ್ಲದೆನಗಿನ್ನು ಕಡುದು:ಖ ಜಡಮಯ ತೊಡರು ಸಂಸಾರಭಾದೆ ತಡಿಲಾರೆನಭವ 1 ತನುಬಾಧೆ ರಿಣಬಾಧೆ ವನಿತೆ ಮಕ್ಕಳ ಬಾಧೆ ಜನನಮರಣದ ಹೇಯ ಘನಬಾಧೆಯಕಟ 2 ಸೀಮೆಯಿಲ್ಲದೆ ಕಾಡ್ವ ಈ ಮಹಾಭವ ಕಳೆದು ಕ್ಷೇಮದಿಂ ಪೊರೆಯೈ ಶ್ರೀರಾಮ ಪ್ರಭು ತಂದೆ 3
--------------
ರಾಮದಾಸರು
ಬಿಡಿಸೊ ಬಂಧನ ಕ್ಲೇಶವ ಬಿಗಿಯುತಲಿದೆ ಪ ನಾನು ಬಿಟ್ಟರು ಎನ್ನ ಕಂಬಳಿ ಬಿಡದಿದೆ ಅ.ಪ ಎಲ್ಲವ ಬಿಟ್ಟು ನಾ ಬಂದೆನೆಂದರಿತೆನೊ ಎಲ್ಲವು ಎನ್ನನು ಬಿಡಲಿಲ್ಲವೊ ಕಲ್ಲು ಎದೆಯ ಪೊತ್ತ ಮಲ್ಲನೆಂದರಿತೆನೊ ಹುಲ್ಲೆಯ ಮರಿಯಂತೆ ನಡುಗುವಂತಾಯಿತೊ 1 ಮಿಕ್ಕ ವಿಷಯಗಳ ಬೇಡ ಬೇಡೆನ್ನುತ ಹೊಕ್ಕರು ಮೂಲೆ ಮೂಲೆಗಳನ್ನು ದಿಕ್ಕು ದಿಕ್ಕುಗಳಿಂದ ಸೆಳೆಯುತಲಿರುವುದು ಅಕ್ಕರೆ ತೊಲಗಿತು ಶುಷ್ಕವಾಯಿತು ಮನವು 2 ಲೋಕ ರಕ್ಷಕನು ನೀನೆಂಬುದನರಿತರು ವ್ಯಾಕುಲವೇತಕೆ ಪ್ರತಿ ಕ್ಷಣವು ತಾ ಕಾಣದ ನರ ವರವÀ ಕೊಡಲುಬಹುದೆ ಏಕಾಂತ ಭಕುತ ಪ್ರಸನ್ನನೆ ಕರುಣದಿ 3
--------------
ವಿದ್ಯಾಪ್ರಸನ್ನತೀರ್ಥರು
ಬೆಳಿಯೋ ಬೆಳಿ ಮನವೇ ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು | ಇಳೆಯೊಳು ಯಣಿಗಾಣದ್ಹಾಂಗೆ 1 ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು | ಜರಿದು ಸಂಗಿಗಳನ್ನೆಲ್ಲಾ 2 ವಿವೇಕವೇಯಂಬಾ ನೇಗಿಲ ಎಂಟು | ಭಾವವೆಂಬೆತ್ತುಗಳಿಂದ 3 ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ | ಒಡನೆ ಶಿಕ್ಷದಿ ನಡೆಸುತಾ 4 ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ | ಅನನ್ಯ ಭಾವ ಕೂರಿಗೆಯಿಂದಾ 5 ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ | ಭರದಿ ಬಿತ್ತಿ ನಾದುವಂತೆ 6 ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು| ಧನಗಾಳ ತುಂಬಿಡುವಂತೆ 7 ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ | ಪರಮ ಜಾಗೃತಿಯ ಕವಣಿಯಿಂದಾ 8 ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ | ಸಾರಿಹ ಶೃತಿ ವಾಕ್ಯದಿಂದ 9 ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ | ತೂರಿ ಅಹಂಭಾವ ಹೊಟ್ಟವನು 10 ದೈನ್ಯವನು ಹಿಂಗಿ ಬಳಕೊಂಡು ಅನ್ಯರಾ ಮರೆ ಹೋಗದಂತೆ 11 ಪರಿಪೂರ್ಣಾದ ಬಳಿಕ ಒಕ್ಕಲು ತನಕ | ಮರುಳೆ ನೀ ಸಿಕ್ಕದಿರು ಕಂಡ್ಯಾ 12 ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು ಗುರು ಮಹಿಪತಿ ವಲುಮೆಯಿಂದಾ 13
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು