ಒಟ್ಟು 809 ಕಡೆಗಳಲ್ಲಿ , 87 ದಾಸರು , 614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಹರಿ ಹರಿ ಹರಿ ಹರಿ ಪರಿಹರ ಸಂಸಾರ ಕಿರಿ ಕಿರಿ ಪ ಪರಿ ಪರಿ ನಿಜ ಸ್ಮರಿಪದಾಸರಿಗಾರು ಸರಿ ಸರಿಅ.ಪ ಹರಿಯೆಂದು ಹೊಗಲು ಉರಿ ಉರಿ ಪರಮ ಶೀತಲದೆಂದರಿ ಹರಿ ಹರಿಯೆಂದು ವಿಷವನ್ನು ಸುರಿ ಸುರಿ ಮರಣವಿಲ್ಲರಿದು ನೀ ಮೆರಿ ಮೆರಿ ಹರಿಧ್ಯಾನಧಿಕವೆಂದು ಸಾರಿ ಸಾರಿ ನಿತ್ಯ ಹರಿಸರ್ವೋತ್ತಮನೆಂದು ಬರಿ ಬರಿ 1 ಉಪಟಳ ತಾಳಿ ತಾಳಿ ಹರಿಯೆಂದು ಕೂಗಿ ಆಗ ತಿಳಿತಿಳಿ ಹರಿಧ್ಯಾನ ಸವಿಸವಿದು ನಲಿನಲಿ ಹರಿಭಜನಾನಂದ ಕಲಿಕಲಿ ಅದೆ ಮರಣ ಗೆಲಿಯುವ ನಿಜ ಕೀಲಿ ಕೀಲಿ 2 ತರಿಯೋ ಮನದ ದುರ್ಭೇದ ಭೇದ ಭವ ಬಾಧೆ ಬಾಧೆ ಹರಿನಾಮಕೀರ್ತನೆ ಸದಾಸದಾ ಕರತಲಸ್ಥಿರ ಮುಕ್ತಿಪದ ಪದ ಪಾದ ಪಾದ 3
--------------
ರಾಮದಾಸರು
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ ನರನಾದೆನಗಳವೇ ಪ ಕರುಣಾಳುವೆ ನಾಂ ಕರಗಳ ಮುಗಿವೆ ಪÀರವಾಸುದೇವ ಪರಮಾತ್ಮಾ ಅ.ಪ ಸತಿಶ್ರೀದೇವಿಯು ನುತಚತುರಾನನ ಪತಿತೋದ್ಧರೆ ಗಂಗೆಯು ಮಗಳು ಸ್ತುತಿಗೈಯುವವೇದ ತತಿಯಿಂ ನಿತ್ಯ ಭೃತ್ಯರು ಸುರಗಣ ಸರ್ವೇಶಾ 1 ಸಾಗರ ಮಧ್ಯದಿ ಭೋಗಿಯನೊರಗಿ ಯೋಗೀಜನರ ಹೃದಯದಿ ನೆಲಸಿ ಆಗಮ ಪೂಜೆಯ ರಾಗದಿ ಪಡೆವ 2 ಶಂಖಸುದರ್ಶನ ಪಂಕಜಧರಶ್ರೀ ವೆಂಕಟವರದ ಶೀರಂಗ ಕಿಂಕರ ಪಾಲಕ ಜಾಜೀಶಾ 3
--------------
ಶಾಮಶರ್ಮರು
ಹರಿವಾಯುಗಳು ಮೂರಕ್ಕರದ ದೇವ ಮೂರು ವಸ್ತುವ ಬೆರಸಿ ಮೂರು ಮೂರಾಗಿಸೆಯೆ ಪಾಲಿಸುವ ನಮ್ಮ ಎರಡು ವಸ್ತುವು ಸೇರಿ ದೇಹಕ್ಕೆ ಚಲನೆಯದು ಹರಿವಾಯುಗಳ ಒಲುಮೆ ದೇಹ ರಕ್ಷಕವು4 ಅವ್ಯಾಕೃತಾಕಾಶ ರೂಪದಲಿ ತಾನಿಹನು ವಿಶ್ವಂಭರಾತ್ಮಕನು ದೇವ ನಿಜದಿಂದ ಸೃಷ್ಟಿಗವನೇ ಮೂಲ ವಾಸುದೇವಾತ್ಮಕನು ಮಧ್ವಹೃದಯನಿವಾಸಿ ಸರ್ವಮೂಲನವ 5 ಪೃಥಿವಿಯಪ್ ತೇಜಸ್ಸು ಮೂರು ಭೂತಾಣುಗಳು ತುಂಬಿಯಾಗಸದಲ್ಲಿ ವ್ಯಾಕೃತವದಹುದು ತುಂಬಿ ವಾಯುವಿನಣುಗಳ್ ಒಂದೆಡೆಯೆ ತಾನಹುದು ವ್ಯಾಕೃತಾಕಾಶ 6 ಆಗಸದಿ ವಾಯುವಿನ ಪರಮಾಣು ಒತ್ತಡವೆ ದೃಶ್ಯವಾಯುವು ತಾನೆ ಹರಿವುದಾಗಸದಿ ದೃಶ್ಯವಾಯುವಿನ ಪರಮಾಣುವೊತ್ತಡದಿ ನಿಜ ತೇಜವುದಯಿಸುವುದದರಲ್ಲಿ ಮೂರಿಹವು 7 ತೇಜದಿಂದಲೆ ನೀರು ಜಗಕೆಯಾಧಾರವದು ನೀರಿನಿಂದಲೆ ಭೂಮಿ ಉದಯಿಸುವದದರಿಂ ಪಂಚಭೂತಂಗಳಿವು ಭೂಮಿಯಲಿ ತೋರುವವು ಪಂಚಭೂತಾತ್ಮದ ಪ್ರಕೃತಿಯಿದು ಸತ್ಯ 8 ಇವುಗಳಿಗೆ ಒಡತಿಯಾ ಪ್ರಕೃತಿದೇವಿಯು ಸತ್ಯ ಪ್ರಕೃತಿಯೆದೆಯಲ್ಲಿರುವ ದೇವರೂ ಸತ್ಯ ಪ್ರಕೃತಿ ಪುರುಷರ ಲೀಲೆ ಮಧ್ವಮತದಾ ತಿರುಳು ಮಧ್ವ ಸದ್ಗ್ರಂಥಗಳು ಸರ್ವಮೂಲಗಳು 9 ಭೂತಕೃತ್ತೂ ಅವನೆ ಭೂತಪಾಲಕನವನೆ ಭೂತಭಾವದಲಿದ್ದು ಪ್ರೇರಕನು ಅವನೆ ಆತ್ಮಾಂತರಾತ್ಮವೆಂದೆರಡು ರೂಪಗಳವಗೆ ಹೃದಯದಾಕಾಶದಲಿ ವಾಸವಾಗಿಹನು 10 ಪಂಚಭೂತಗಳು ಪಂಚೇಂದ್ರಿಯಗಳು ಪಂಚ ಕರ್ಮೇಂದ್ರಿಯಗಳ ರಚಿಸಿ ಹರಿಯು ಪಂಚಾತ್ಮಕನು ದೇವ ಪಂಚವಾಯುಗಳಿಂದ ಪಂಚತನ್ಮಾತ್ರಗಳ ಜ್ಞಾನವೊದಗಿಪನು11 ಸುಖ ರತಿ ಪ್ರೇರಕನು ತಾನಾಗಿ ಸಿರಿವರನು ಶಾರೀರ ಪುರದಲ್ಲಿ ನೆಲೆಯಾಗಿ ಇಹನು ಬೆಳಗುತ್ತ ದೇಹವನು ಬೆಳಗಿಸುವ ದೇವತೆಗ ಳವನ ಬಳಿಯಿದ್ದು ಸೇವೆಯ ಗೈಯುತಿಹರು 12 ವಿಶ್ವ ದರ್ಶನಕಾಗಿ ವಿಶ್ವಜನರೊಳು ಕಣ್ಣಿನಲ್ಲಿ ನೆಲೆನಿಂತು ವಿಶ್ವಸಾಕ್ಷಿಯು ಸೂರ್ಯನಲ್ಲಿಯೂ ತಾನಿದ್ದು ವಿಶ್ವವನು ಬೆಳಗಿಸುತ ಜ್ಞಾನವೊದಗಿಪನು 13 ಸೂರ್ಯನೊಂದೆಡೆಯಿದ್ದು ತಾನ್ ಬೆಳಗಿ ಲೋಕವನು ತನ್ನ ಕಿರಣಂಗಳಿಂ ಬೆಳಗಿಸುವ ತೆರದಿ ಕಣ್ಣು ಮೊದಲಾದಿಂದ್ರಿಯಗಳಲಿ ತಾನಿದ್ದು ಅವುಗಳನು ಬೆಳಗಿಸುತ ರಕ್ಷಿಪನು ನಮ್ಮ14 ತೈಜಸದ ದೇವನವ ತೇಜದಾರೂಪದಲಿ ಕಂಠಗತನಾಗಿದ್ದು ದೇಹದಲಿ ಬೆಳಗಿ ಹುಲಿ ಕರಡಿ ಮೊದಲಾದ ಜಂತುಗಳ ಸೃಷ್ಟಿಸುತ ಸ್ವಪ್ನಲೋಕವನು ಮಾನಸಕೆ ತೋರಿಸುವ 15 ಪ್ರಾಜ್ಞರೂಪದ ದೇವನಪ್ಪಿ ಜೀವಾತ್ಮನನು ಮಾಯೆಯಾ ಮುಸುಕಿನಿಂದಜ್ಞಾನಬರಿಸಿ ಜೀವನಿಗೆ ತೋರದುದರಿಂದ ಪ್ರಾಜ್ಞನದಾಗಿ ಜಗಕೆ ತನ್ನಯ ಮಾಯೆಯನು ತೋರಿಸುವನು 16 ನಾಲ್ಕನೆಯ ರೂಪವದು ತುರ್ಯ ನಾಮದಲಿಹುದು ಮುಕ್ತರಿಗೆ ಮಾತ್ರವೇ ತೋರುವುದು ಪೇಳ್ವೆ ಜಾಗರಾದಿಯವಸ್ಥೆಗಳ ನಾಲ್ಕು ಪೇಳಿದನು ಮಾಯಾವಿ ಪರಮಾತ್ಮನದು ಲೀಲೆಗಳಿವು 17
--------------
ನಿಡಂಬೂರು ರಾಮದಾಸ
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1 ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2 ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3 ಸತಿ ರೂಪಸ್ಥಳಾದರಿನ್ನೇನಿನ್ನೇನು ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4 ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5
--------------
ರಾಮದಾಸರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ ಸದ್ಗುರುವಿನ ಶ್ರೀಚರಣ ಧ್ರುವ ಹೊಲಬು ಮರೆದ್ಯೊ ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ 1 ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ ಸದ್ಗುರುಮುಖ 2 ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ ಘನ ಬೆಳಗೆ ಘನ ತನ್ನೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದು ಮನವೆ ಹೊಂದೆÉನ್ನ ಮನವೆ ಪಥ ಬ್ಯಾಗ ಸೇರೆÀನ್ನ ಮನವೆ ಧ್ರುವ ಮೂರೊಂದು ಪಾಲಾಗದಿರೆನ್ನ ಮನವೆ ಮೂರೆರಡು ಬಟ್ಯಾಗದಿರು ಮನವೆ 1 ಪರಿ ಆಗದಿರೆನ್ನ ಮನವೆ ಮೂರೆರಡರಲಿ ಅಡರದಿರು ಮನವೆ 2 ಮೂರು ಸೆರಗ ಹಿಡಿದರೆನ್ನ ಮನವೆ ಮೂರರೊಳಗೆ ತೊಳಲದಿರು ಮನವೆ 3 ಮೂರು ಬಟ್ಟೆಗಳನ್ನು ಮರಿಯೆನ್ನ ಮನವೆ ಮಹಿಪತಿ ಗುರುಪಾದ ಪೊರಿ ಎನ್ನ ಮನª 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊನ್ನ ತಾ ಗುಬ್ಬಿ ಹೊನ್ನ ತಾ ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ. ಆಗಮವನು ತಂದು ಅಜಗಿತ್ತ ಕೈಗೆ ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ ನಾಗಶಯನ ನರಸಿಂಹನ ಕೈಗೆ 1 ಬಲಿಯ ದಾನವ ಬೇಡಿ ಬಂದಂಥ ಕೈಗೆ ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ ಕಲಿ ವಿಭೀಷಣಗಭಯವಿತ್ತಂಥ ಕೈಗೆ ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ 2 ಪತಿವ್ರತೆಯರ ವ್ರತವಳಿದಂಥ ಕೈಗೆ ಹಿತವಾಜಿಯನೇರಿ ದುರುಳಮರ್ದನ ಕೈಗೆ ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ ಚತುರ ಹೆಳವನಕಟ್ಟೆÉ ರಂಗನ ಕೈಗೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಹ್ಯಾಗೆ ದೊರಕೀತು ನಿನ್ನ ಚರಣವು ನಾಗಶಯನನೆನ್ನಂಥ ಪಾಪಿಗೆ ಪ ನೀಗಿ ಹೋಯಿತು ಅರ್ಧವಯವು ಆಗಯೀಗಯಾ ವಾಗಲೋ ಹೋಗುವುದು ದೇಹ ಭೋಗದಾಸೆಯು ನೀಗವಲ್ಲದು ಎನಗೆ ಇನ್ನು ಅ.ಪ ಮನದಕ್ಲೇಶವು ಕಡಿಯವಲ್ಲದು ನೀಚತನದ ನೆನವು ಎನ್ನೊಳಳಿಯವಲ್ಲದು ಸಾಚನಾಗಿ ನಿನ್ನ ಧ್ಯಾನದಿ ಮನವುಯೆಂಬುದು ಕ್ಷಣವು ನಿಲ್ಲದು ಕ್ಷಣವು ಬಿಡದೆ ಅನ್ಯರೊಡವೆಯ ಮನದೊಳನುದಿನ ನೆನೆದು ನೆನೆದು ಘನ ಪಾಪಾತ್ಮನಾಗಿ ಚರಿಸುವೆ ಜ್ಞಾನ ಬಾರದು ಎನಗೆ ಇನ್ನು 1 ಒಡವೆವಸ್ತ್ರದ ಆಸೆ ಬಿಡವಲ್ಲದು ಪಾಪಿಮನವು ಮಡದಿ ಮಕ್ಕಳ ಮಮತೆ ತೊರೀವಲ್ಲದು ಒಡನೆ ತಿಳಿದು ಕೆಡುವ ಕಾಯದ ಮೋಹ ಮರೀವಲ್ಲದು ಜಡಮತಿಯು ಬಿಡದು ಎಡರು ಪ್ರಪಂಚ ತೊಡರಿನೊಳು ಮನ ವಡರಿ ಬಿಡದಲೆ ಮಿಡುಕಿ ಮಿಡುಕಿ ಕಡೆಯುಗಾಣದೆ ಕಷ್ಟಬಡುತಿಹೆ ಬಿಡದು ವಿಷಯದಾಸೆ ಎನಗೆ 2 ದಾಸಜನ ವ್ಯಾಸಂಗ ಮೊದಲಿಲ್ಲ ಪಾಪಿಜನುಮ ದೋಷಗುಣಗಳು ಒಂದುಬಿಟ್ಟಿಲ್ಲ ಒಡನೆನುಡಿದ ಭಾಷೆಗಳನು ತಿಳಿದು ನಡೆಸಿಲ್ಲ ಆಸೆ ಹರಿದಿಲ್ಲ ನಾಶಮಾಡಿತು ಹೇಸದಲೆ ಇನ್ನು ಮೋಸಗಾರನ ಪೋಷಿಸುವುದು ಶ್ರೀಶ ಶ್ರೀರಾಮ ನಿನಗೆ ಕೂಡಿತು 3
--------------
ರಾಮದಾಸರು
ಹ್ಯಾಗೆತೀರಸಲಿ ವಚನ ಸಾಗದುಯತನ ಪ ಆಗದ ಕಾರ್ಯದಿ ಎನ್ನ ಹೀಗೆ ನೂಕಿ ನೋಡ್ವರೇನೋ ನಾಗಶಾಯಿ ಭಕ್ತರಭಿಮಾನ ಹ್ಯಾಗೆ ನಿನಗಿಲ್ಲ ಕರುಣಾಭರಣ 1 ಕಂಡು ಬೀಳ್ವ ಭೋಗವು ಮುಂದಿದಕೇನುಪಾಯವು 2 ಭಾರವಹಿಸಿದ ಭಕ್ತಜನರ ದೂರ ನೋಡಲೀಗೆಂತು ಕೇಳ್ವರು ಶ್ರೀರಾಮ ಪ್ರಭುವರ 3
--------------
ರಾಮದಾಸರು
124-1ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರುಗೋದಾವರಿಯಿಂದ ರಾಯಚೂರು ಪೋಗಿಆ ದೇಶ ಅಧಿಪತಿ ಪೀತಾಸಿಂಗನಿಗೆಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹುಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರುಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲುಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3ತರುವಾಯ ಶ್ರೀರಂಗಪಟ್ಟಣಕೆ ಬಂದುಶ್ರೀರಂಗನಾಥನ್ನ ಸೇವಿಸಲು ಮುದದಿಶ್ರೀರಂಗಪಟ್ಟಣದ ಅರಸನು ಭಕ್ತಿಯಿಂಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣರಜತ ದಂಡಗಳುಶ್ವೇತಛತ್ರಇಂಥಾವು ಸಂಸ್ಥಾನ ಚಿಹ್ನೆಗಳ ರಾಜನುಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿತೀರ್ಥಾಟನ ಮಾಡಿ ಗದ್ವಾಲು ಸೇರಿಮತ್ತೆತೋಂಡದೇಶದ ಆರ್ಕಾಟಿಗೆ ಹೋಗಿಆದೇಶ ಮಂತ್ರಿಯಿಂದ ಕೊಂಡರು ಸೇವ 6ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರುಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿಶಿಷ್ಯೋದ್ಧಾರಕ್ಕೆವಿಜಯಮಾಡುತ್ತಿರಲುಶ್ರೀ ಸತ್ಯವರ್ಯರು ಬಂದರು ಆರಣಿಗೆ 7ಆರಣೀರಾಯನು ವೇಂಕಟನು ಸ್ವಾಮಿಗಳಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇವಸ್ತ್ರಾಭರಣ ಹೇಮಾಭೀಷೇಕಾದಿಗಳಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡುಹರಿಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿಪುರಿ ಜನರು ಜಯ ಘೋಷ ಮಾಡುತಿರಲು 9ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10 ಪ
--------------
ಪ್ರಸನ್ನ ಶ್ರೀನಿವಾಸದಾಸರು
139-1ಶ್ರೀರಮಣ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಶ್ರೀನಿವಾಸಾಚಾರ್ಯ ಪಂಡಿತೋತ್ತಮರುಅನಿಮಿಶಾಂಶರು ಹೌದು ಭುವಿಯಲ್ಲಿ ಹುಟ್ಟಿಮಾನುಷಾನ್ನವನುಂಡು ಕರ್ಮವಾತಾವರಣಸನ್ನಿವೇಶದ ಬಲದಿ ಗರ್ವಕೊಳಗಾದರು 1ಆದಿತೇಯರು ಭೂಮಿಯಲ್ಲಿ ಜನ್ಮವ ತಾಳೆಜಾತಾಪರೋಕ್ಷಿಗಳು ಶಕ್ತ್ಯಾತ್ಮನಾವ್ಯಕ್ತ್ಯಾತ್ಮನಾಅಪರೋಕ್ಷಪ್ರಕಾಶವುಒದಗಿ ಗುರುಗಳು ಅನುಗ್ರಹವು ಮಾಡಿದರೆ 2ದೇವತಾ ಕಕ್ಷದಲಿ ದೊಡ್ಡ ಮಟ್ಟದವರುವಿಶ್ವಾಮಿತ್ರರಿಗೆ ಉತ್ತಮರು ನಾರದಗೆಆವರರೆನಿಸುವ ಭೃಗುಋಷಿಯೇ ವಿಜಯಾರ್ಯರುತಾವೆ ಬಂದರು ಶ್ರೀನಿವಾಸರ ಬಳಿಗೆ 3ಪೂರ್ವದಲೆ ಕೇಳಿಹರು ಈ ವಿಜಯದಾಸರುದೇವಾಂಶಅಪರೋಕ್ಷಜ್ಞಾನಿಗಳು ಎಂದುಈ ವಿಧದಿಪೇಳುವುದುಪುಸಿಎಂದು ನೆನೆದರುಗರ್ವಮೌಢ್ಯದಿ ಶ್ರೀನಿವಾಸ ಆಚಾರ್ಯ 4ಕನ್ನಡ ನುಡಿ ಹಾಡಿ ಕುಣಿಕುಣಿವ ಈ ದಾಸಜ್ಞಾನಿಯೆ ? ಅರಿತವನೇ ಬ್ರಹ್ಮವಿದ್ಯೆ ಎಂದುಹೀನಮಾತ್ಸರ್ಯದಿ ಮನಸೋತು ಅವಹೇ -ಳನ ಮಾಡಿದರು ವಿಜಯಾರ್ಯರಲ್ಲಿ 5ತಾಳುವ ತನ್ನಲ್ಲಿ ಮಾಡುವ ಅಪರಾಧತಾಳಹರಿ ತನ್ನ ಭಕ್ತರಲಿ ಮಾಡುವುದುಮಾಲೋಲ ನಿಯಮನದಿ ಸ್ವೋತ್ತಮಾಪರಾಧಫಲವು ಕಂಡಿತು ಶ್ರೀನಿವಾಸರಲಿ ಬೇಗ 6ರಾಜಯಕ್ಷ್ಮವೋಗುಲ್ಮಮತ್ತೇನು ರೋಗವೋರಾಜವೈದ್ಯರು ಸಹ ನಿರ್ಣಯಿಸಲಶಕ್ಯಭೋಜನ ಅರುಚಿ ಉದರಶೂಲಿತನು ಕುಗ್ಗಿಲಾಜವೂ ಸಹ ಜೀರ್ಣ ಆಗದ ಮಾಂದ್ಯ 7ಇಂದಿರೇಶಗೆ ಪ್ರಿಯ ಮಹಾತ್ಮ ಸ್ವೋತ್ತಮರಲ್ಲಿಗೈದ ಅಪರಾಧ ಫಲವೆಂದರಿಯದೆವೈದ್ಯಕ್ಕೆ ಹಣ ವೆಚ್ಚ ಮಾಡಿ ಕ್ಷೇತ್ರಗಳಿಗೆಪೋದರು ದೈವಾನುಗ್ರಹ ಪಡೆಯಲಿಕ್ಕೆ 8ವಾದೀಂದ್ರಸನ್ನುತರಾಘವೇಂದ್ರಾರ್ಯರವೃಂದಾವನದಲ್ಲಿ ಸೇವೆ ಮಾಡಿದರುಮುಂದು ಯಾತ್ರೆ ಗೈದು ಘಟಿಕಾದ್ರಿ ಹನುಮಗೆದುಗ್ಧಾಭಿಷೇಕ ಹರಿವಾಯುಸ್ತುತಿಯಿಂದ 9ಮಂತ್ರಾಲಯ ವೆಂಕಟಗಿರಿ ಘಟಿಕಾದ್ರಿಇಂಥಾ ಸುಪುಣ್ಯ ಕ್ಷೇತ್ರಗಳಿಗೆ ಪೋಗಿಮಂತ್ರಾಲಯ ಮತ್ತೂ ಬಂದು ಶ್ರೀ ರಾಘ-ವೇಂದ್ರ ತೀರ್ಥರಪಾದಭಜಿಸಿ ನಮಿಸಿದರು10ಹರಿವಾಯುಸ್ತುತಿ ಪುರಶ್ಚರಣ ಆದರದಿಚರಿಸೆ ಭಾರತೀಶನು ಮತ್ತುಗುರುರಾಘವೇಂದ್ರರುಅರುಪಿದರು ಸ್ವಪ್ನದಿ ವಿಜಯವಿಠಲ ದಾÀಸಆರ್ಯರಲಿ ಶರಣಾಗುಕ್ಷಮೆಬೇಡು ಎಂದು11ಶ್ರೀನಿವಾಸ ಆಚಾರ್ಯರು ಎಚ್ಚರಿತುತಾನು ವಿಜಯಾರ್ಯರಲಿ ಗೈದ ಅಪರಾಧನೆನೆದು ಬಹುವ್ಯಾಕುಲಪಶ್ಚಾತ್ತಪ್ತರು ಆಗಿಕ್ಷಣದಿ ಹೊರಟರು ವಿಜಯದಾಸರ ಬಳಿಗೆ 12ದೀನ ಕರುಣಾಕರರುವಿಜಯದಾಸಾರ್ಯರುಘನದಯದಿ ಶ್ರೀನಿವಾಸಾಚಾರ್ಯರ ಕ್ಷಮಿಸಿತನ್ನ ಶಿಷ್ಯ ಗೋಪಾಲದಾಸಾರ್ಯರುಅನುಗ್ರಹ ಮಾಡುವ ಗುರುಗಳು ಎಂದರು 13ಪರಮಗುರುವರ್ಯ ಶ್ರೀ ವಿಜಯದಾಸಾರ್ಯರನಿವ್ರ್ಯಾಜ ಪ್ರೀತಿ ಅಪ್ಪಣೆಯ ತಾ ಕೊಂಡುಗುರುಗಳು ಗೋಪಾಲದಾಸಾರ್ಯರಲಿ ಪೋಗಿಶರಣಾಗಿ ಶ್ರೀನಿವಾಸರು ನಮಿಸಿದರು 14ತನ್ನಲ್ಲಿ ಗುರುಗಳು ಕಳುಹಿಸಿದವರೆಂದುದೀನ ಆಚಾರ್ಯರು ನಿಜ ಶರಣರೆಂದುಚೆನ್ನಾಗಿ ಆತನ ಪರಿಸ್ಥಿತಿ ಅರಿತುಅನುಗ್ರಹಿಸಿದರು ಗೋಪಾಲವಿಠಲರು 15ಅನ್ನ ಫಲಹಾರಗಳ ಕೊಳ್ಳದ ವ್ಯಾಧಿಯಲಿಸಣ್ಣ ಬಡವಾದಂಥ ಗಾತ್ರದಿಂದಸನ್ನಮಿಸಿದ ಶ್ರೀನಿವಾಸಾಚಾರ್ಯನ್ನಮನೆಯಲ್ಲಿ ಉಪಚರಿಸಿ ಆದರಿಸಿದರು 16ಗುರುಗ ಶಿರಿವಿಜಯವಿಠಲ ತನ್ನೊಳಿಪ್ಪಶಿರಿ ಗೋಪಾಲ ವಿಠsÀಲ ಶ್ರೀನಿವಾಸಸರಸಿಜಭವಾಂಡ ದೊರೆ ಶ್ರೀ ಜನಗ್ನಾಥನ್ನಸ್ಮರಿಸಿ ಅರ್ಚಿಸಿ ನೈವೇದ್ಯ ಮಾಡಿದರು 17ನಿವೇದಿತಾನ್ನ ಜೋಳದ ರೊಟ್ಟಿ ಕೊಟ್ಟುದ್ರವ ಮಾತ್ರ ಕೊಳ್ಳುವ ರೋಗಿ ಆಚಾರ್ಯಗೆದೇವರ ಅನಿಲನಪರಮಗುರುಗಳ ನೆನೆದುಸವಿದು ಉಣ್ಣುವುದೆಂದು ಹಿತದಿ ಪೇಳಿದರು 18ಶ್ರೀನಿವಾಸಾಚಾರ್ಯ ಉಣ್ಣಲು ರೋಗವುದಿನದಿನದಿ ಕ್ರಮದಿಂದ ನಿವಾರಣ ಆಯ್ತೂಧ್ಯಾನ ಪೂಜಾಅನುಸಂಧಾನಕ್ರಮಗಳುಚೆನ್ನಾಗಿ ಆಚಾಯರಾಕರ್ಷಿಸಿದವು 19ಶ್ರೀನಿವಾಸಾಚಾರ್ಯರ ರೋಗಮೋಚನಕೆಧ್ಯಾನಿಸಿ ಜಪಿಸಿ ಶ್ರೀ ಧನ್ವಂತರಿ ಮಂತ್ರಬಿನ್ನಪವ ಮಾಡಿದರು ಕೀರ್ತನಾ ರೂಪದಿದೀನದಯಾಳು ಗೋಪಾಲದಾಸಾರ್ಯ 20ಆಹ್ನಿಕ ಜಪಗುರುಪರಮಗುರು ನಮನವಿಘ್ನವಿಲ್ಲದೆ ಆಚಾರ್ಯರು ಚರಿಸಿದರುಘನರೋಗ ಹೋಯಿತು ತ್ರಾನ ಇನ್ನೂ ಬೇಕುಶ್ರೀನಿಧಿ ನೋಡಿದನು ಕೃಪಾದೃಷ್ಟಿಯಿಂದ 21ಶ್ರೀ ನಿಧಿಃ ಸರ್ವಭೂತಾನಾಂ ಭಯಕೃದ್ಭಯನಾ -ಶನನು ವಿಜಯದಾಸಾರ್ಯ ರೂಪದಲಿತಾನೆ ಸ್ವಪ್ನದಿ ಪೇಳ್ದ ಗೋಪಾಲದಾಸರಿಗೆದಾನ ಕೊಡು ಆಯುಷ್ಯ ಚತ್ವಾರಿವರ್ಷ 22ಶಿರಿವಿಜಯವಿಠ್ಠಲ ವಾಯುಗುರುಇಚ್ಛಾನು -ಸಾರದಿ ಶ್ರೀನಿವಾಸಾಚಾರ್ಯನಲಿ ವಾತ್ಸಲ್ಯಕಾರುಣ್ಯ ತೋರಿಸಿ ತಮಗಿದ್ದ ಆಯುಸ್ಸಲಿಎರೆದರು ಧಾರೆಯ ನಲವತ್ತು ವರ್ಷ 23ಏನೆಂಬೆ ಈ ನಮ್ಮ ಗುರುಗಳ ಔದಾರ್ಯದೀನಕರುಣಾಂಬುಧಿ ಗೋಪಾಲದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ ಆಯುಷ್ಯವ ಕೊಡುವರೆ ಅನ್ಯರಿಗೆ 24ರೋಗಕಳೆದು ಆಯುರ್ದಾನವಕೊಂಡಈಬ್ಯಾಗವಟ್ಟ ಶ್ರೀನಿವಾಸಾಚಾರ್ಯಜಗನ್ನಾಥವಿಠ್ಠಲ ದಾಸರಾಯರು ಎಂದುಜಗತ್ತಲ್ಲಿ ಖ್ಯಾತರಾಗುವ ಬಗೆ ಮಾಡಿದರು 25ಗುರುಹಿರಿಯರಲಿ ಮಾಳ್ಪ ಉದಾಸೀನ ಎಷ್ಟುಭಾರಿತರ ಆಪತ್ತು ಕೊಡುವುದು ಎಂದುಗುರುಅನುಗ್ರಹದಿಂದ ಸೌಭಾಗ್ಯಲಾಭವುಅಪಮೃತ್ಯು ಪರಿಹಾರ ಎಂದು ತಿಳಿಯುತ್ತೆ 26ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲ ದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 27-ದ್ವಿತೀಯಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
139-3ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹರಿದಾಸ ಶ್ರೇಷ್ಠವರ ಕರುಣಿ ಪುರಂದರಾರ್ಯಗುರುಮಹಂತರು ಕೃಪಾನಿಧಿಯು ವಿಜಯಾರ್ಯಈರ್ವರನು ಸಂಸ್ಮರಿಸಿ ಗೋಪಾಲದಾಸರುಪರಮದಯ ತೋರಿದರು ಆಚಾರ್ಯರಲ್ಲಿ1ಹರಿದಾಸ ಪಂಥದಲಿ ಆಚಾರ್ಯರು ಸೇರಿಹರಿವಾಯು ಸೇವೆಯು ಸಜ್ಜನೋದ್ಧಾರಧರೆಯಲ್ಲಿ ಮಹತ್ಕಾರ್ಯ ಆಗುವುದು ಎಂದುಅರಿವರು ಗೋಪಾಲದಾಸರು ಮೊದಲೇ 2ಹರಿದಾಸಗೋಷ್ಠಿಯು ವೆಂಕಟಾಚಲ ಯಾತ್ರೆಚರಿಸೆ ವೆಂಕಟ ರಮಣನಾಲಯದಲ್ಲಿಶ್ರೀ ಶ್ರೀನಿವಾಸನು ಈ ಆಚಾರ್ಯಗೆನೇರವಾಗಿ ತಾನೆ ಕೊಟ್ಟಿಹ ಪ್ರಸಾದ 3ನೆನೆದರು ಈಗ ಗೋಪಾಲದಾಸಾರ್ಯರುತನ್ನ ರೂಪದಿ ಅಂದುಬಂದು ವಾತ್ಸಲ್ಯದಿಅನ್ನ ನಾಮಾವೆಂಕಟಕೃಷ್ಣ ಜಗದೀಶಅನ್ನ ಕೊಟ್ಟು ಒಲಿದಿಹನು ಆಚಾರ್ಯಗೆ 4ಪುರಂದರದಾಸಾರ್ಯರು ಒಲಿದು ದಯದಿ ತಾನೆಯಾರಿಗೆ ತಿಮ್ಮಣ್ಣಾರ್ಯರದ್ವಾರ ಉಪದೇಶಅನುಗ್ರಹ ನಾಮಾಂಕಿತವ ಇತ್ತರೋ ಆನರಸಿಂಹ ದಾಸಾರ್ಯರ ಪುತ್ರರು ಇವರು 5ಹರಿದಾಸರ ಪುತ್ರರಿವರು ಯೋಗ್ಯರು ಎಂದುಹರಿದಾಸಪದ್ಧತಿ ಆರಾಧನಾಕ್ರಮಶಾಸ್ತ್ರ ಜಿಜ್ಞಾಸೆಅನುಸಂಧಾನರೀತಿಯೂಅರುಪಿದರು ಆಚಾರ್ಯರಿಗೆ ದಾಸಾರ್ಯ 6ನೆರೆದಿದ್ದರೂ ಗೋಪಾಲದಾಸಾರ್ಯರಪರಮಪ್ರೀತಿ ಪಾತ್ರ ಈಮಹಂತರುವರದ ಗೋಪಾಲರು ತಂದೆ ಗೋಪಾಲರುಗುರುಗೋಪಾಲದಾಸಾದಿಸೂರಿಗಳು7ಭಾರತೀಪತಿ ಅಂತರ್ಗತಹರಿಶ್ರೀಶಗುರುಗಳ ಒಳಗಿದ್ದು ಜ್ಞಾನೋಪದೇಶಹರಿದಾಸತ್ವದ ವರನಾಮಾಂಕಿತವಕಾರುಣ್ಯದಿಈವಅಧಿಕಾರಿಗಳಿಗೆ8ವನರುಹೇಕ್ಷಣ ಯಜÕನಧಿಷ್ಠಾನ ಯಜÕನವನಜಪಾದ ದ್ವಯವು ಮನವಾಕ್ಕಿಲಿಹುದುಅನಿಲ ಸೋಕಿದ ತೂಲರಾಶಿಯಂದದಲಿಏನು ಮೈಲಿಗೆಯಾದರು ಸುಟ್ಟು ಪೋಪುವು 9ತುಳಸಿದಳ ನಿರ್ಮಾಲ್ಯ ಹರಿಗೆ ಅರ್ಪಿತವಾದ್ದುಜಲಸ್ನಾನ ತರುವಾಯ ಧ್ಯಾನ ಸ್ನಾನಜಲಜನಾಭನ ದಿವ್ಯನಾಮ ಸಂಕೀರ್ತನೆಎಲ್ಲ ಮೈಲಿಗೆ ದೋಷ ಪರಿಹರಿಸುವುವು 10ಶೀಲ ತನುಮನದಿಂದಗುರುಪರಮಗುರುದ್ವಾರಮಾಲೋಲ ಪ್ರಿಯತಮ ಜಗದೇಕ ಗುರುವೆಂದುಗಾಳಿದೇವನು ಮಧ್ವ ಭಾವಿಬ್ರಹ್ಮನ ಸ್ಮರಿಸಿಕಾಲಿಗೆ ಎರಗಿ ಶ್ರೀಹರಿಯ ಚಿಂತಿಪುದು 11ವಾಯುದೇವನ ಒಲಸಿಕೊಳ್ಳದ ಜನರಿಗೆಭಯಬಂಧ ನಿವೃತ್ತಿಯು ಸದ್ಗತಿಯು ಇಲ್ಲಮಾಯಾಜಯೇಶನಪರಮಪ್ರಸಾದವುವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 12ಬಲಜ್ಞಾನಾದಿಗಳಲ್ಲಿ ಹ್ರಾಸ ಇಲ್ಲವು ಇವಗೆಎಲ್ಲ ಅವತಾರಗಳು ಸಮವು ಅನ್ಯೂನಶುಕ್ಲಶೋಣಿತಸಂಬಂಧವು ಇಲ್ಲವೇ ಇಲ್ಲಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 13ಮಾತರಿಶ್ವಸೂತ್ರಪವಮಾನ ಮುಖ್ಯ ಪ್ರಾಣತ್ರೇತೆಯಲಿ ಹನುಮ, ದ್ವಾಪರದಲಿ ಭೀಮಈತನೇ ಕಲಿಯುಗದೆ ಮಧ್ವಾಭಿದಾನದಿಬಂದಿಹನು ಸಜ್ಜನರ ಉದ್ಧಾರಕಾಗಿ 14ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂಪ್ರತಿಷ್ಠಿತವು ಜೀವರ ದೇಹಕಾಧಾರತತ್ವದೇವಾದಿಗಳ ವರಿಷ್ಟ ಚೇಷ್ಟಕನುಈ ವಾಯುವೇ ಬ್ರಹ್ಮಧಾಮನಾಗಿಹನು 15ಬ್ರಹ್ಮಧಾಮನುಜೀವೋತ್ತಮವಾಯು ಆದುದರಿಂದಬ್ರಹ್ಮ ಸುಗುಣಾರ್ಣವ ಸರ್ವೋತ್ತಮ ವಿಷ್ಣೂನಅಹರ್ನಿಶಿಸ್ಮರಿಪುದು ಈ ಬ್ರಹ್ಮಧಾಮನಲಿಬ್ರಹ್ಮಪ್ರಸಾದ ಆಕಾಂಕ್ಷಿ ಅಧಿಕಾರಿ 16ಬ್ರಹ್ಮಗುಣಪೂರ್ಣಹರಿಗೋಪಾಲ ವೆಂಕಟನೆಬ್ರಹ್ಮಾಂಡ ಸರ್ವವ ಪಾಲಿಸುವ ಪ್ರಭುವುಅಹೋರಾತ್ರಿ ಏಳುದಿನ ಗಿರಿ ಎತ್ತಿ ಮಳೆ ತಡೆದಮಹಾದ್ರಿಧೃಕ್ ಅನ್ನಾದ ಅನ್ನದ ಜಗನ್ನಾಥ 17ಗೋವರ್ಧನಗಿರಿ ಎತ್ತಿ ಜನ ಪಶು ಕಾಯ್ದಶ್ರೀವರ ಗೋಪಾಲ ವಿಠ್ಠಲ ರುಕ್ಮಿಣೀಶದಿವ್ಯ ಮಂದಿರದಲ್ಲಿ ಭೀಮರತಿಯ ತೀರದಲಿದೇವ ನಿಂತಿಹ ಶ್ರೀನಿವಾಸ ಜಗನ್ನಾಥ 18ಶ್ರೀನಿವಾಸ ವೆಂಕಟನೆ ಗೋಪಾಲ ವಿಠ್ಠಲನುತನ್ನ ಭಕ್ತನಿಗೊಲಿದು ಪಂಢರೀಪುರದಿತಾನೆ ಬಂದು ಅಲ್ಲೇ ನಿಂತು ಭಕ್ತರು ಮಾಳ್ಪಗಾನ ಸೇವಾ ಕೇಳುತ ಪಾಲಿಸುತಿಹನು 19ಸರ್ವಕ್ಷರ ಉತ್ತಮನು ಸರ್ವೇಶಸರ್ವ ಐಶ್ವಯಾದಿ ಸಚ್ಛಕ್ತಿ ಪೂರ್ಣಶಿವ ಸುರಪುರಿಗೆ ಸುಖಜ್ಞಾನಾದಿಗಳನೀವದೇವಿ ಶ್ರೀ ಲಕ್ಷ್ಮೀಶ ಠಲಕ ವಿಠ್ಠಲನು 20ಜಡಭವ ಅಂಡದ ಸೃಷ್ಟ್ಯಾದಿ ಕರ್ತನಿವತಟಿತ್ಕೋಟಿಅಮಿತ ಸ್ವಕಾಂತಿಯಲಿ ಜ್ವಲಿಪಜಡಜ ಭವಪಿತ ಡರಕ ಜಗನ್ನಾಥ ವಿಠ್ಠಲನುನೋಡಲಿಕೆ ಕಾಣುವ ಅವನಿಚ್ಛೆ ದಯದಿ 21ಜಲದಲ್ಲಿ ಜಲರೂಪ ಜಲಜೇಕ್ಷಣನಿಹನುಜಲದಲ್ಲಿ ನೀ ಮುಳುಗಿ ಮೇಲೇಳುವಾಗಜ್ವಲಿಸುವ ಶಿರೋಪರಿ ಜಗನ್ನಾಥ ವಿಠ್ಠಲನುಒಳನಿಲುವ ಹೊರಕಾಂಬ ಎಲ್ಲರ ಸ್ವಾಮಿ 22ಇಂಥಾಸುವಾಕ್ಯ ಧಾರಾನುಗ್ರಹವಹಿತದಿ ಗೋಪಾಲದಾಸಾರ್ಯರು ಎರೆಯೆಮುದಬಾಷ್ಪ ಸುರಿಸುತ್ತ ಶ್ರೀನಿವಾಸಾಚಾರ್ಯಭಕ್ತಿಯಲಿ ನಮಿಸಿದರು ಗುರುಚರಣಗಳಿಗೆ 23ವಾಸುದೇವನ ಒಲಿಸಿಕೊಂಡ ಐಜೀಯವರುಈಶಾನುಗ್ರಹ ಪಡೆದ ದಾಸಾರ್ಯರುಗಳುಆ ಸಭೆಯಲಿ ಇದ್ದ ಹರಿಭಕ್ತ ಭೂಸುರರುಆಶೀರ್ವದಿಸಿದರು ಆಚಾರ್ಯರನ್ನು 24ಉತ್ಕøಷ್ಟ ನಿಗಮಘೋಷಗಳು ಮಂಗಳಧ್ವನಿಹರಿನಾಮ ಕೀರ್ತನ ಸುಸ್ವರ ಸಂಗೀತದಾರಿಯಲಿ ಎದುರ್ಗೊಂಡ ಶುಭಕರ ಶಕುನವುಹೊರಟರಾಚಾರ್ಯ ವಿಠ್ಠಲ ದರ್ಶನಕೆ 25ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರುಪುರಂದರವಿಜಯಗೋಪಾಲ ದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಚತುರ್ಥ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು