ಒಟ್ಟು 764 ಕಡೆಗಳಲ್ಲಿ , 81 ದಾಸರು , 697 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ
ಮಾಯಾದೊಳಗೆ ಶಿಲ್ಕಿ ಮಗ್ನನಾಗಿ ಮರವೆಗೆ ಒಳಗಾದೆ ಕಾಯಬೇಕಯ್ಯ ನಿನ್ನ ಕರುಣ ರಸವನ್ನು ಕಾಣದೆ ನಾ ಬರಿದೆ ಪ ದೀನದಯಾಪರ ದನುಜಾಂತಕ ನಿಧಾನ ಸುಜನವಂದ್ಯಾ ಮಾನವಾದಿ------ಜನಕ ಸನ್ಮಾನಿತ ಮುಚುಕುಂದ ನಿತ್ಯ ಶ್ರೀ ರಂಗಾ 1 ಇತರ ಜ್ಞಾನತೊರೆದು ಮನಬಣ್ಣ ಮರೆದು ಪಾದ ಸೌಖ್ಯವ ಕಾಣದಿನ್ನೂ ಪಿಡಿವರು ಇನ್ನೂ 2 ಏಸೋ ಬಾರಿ ನಾ ಹುಟ್ಟಿದರೇನು ಇನ್ನು ನಿನ್ನ ಕಾಣದೆ ಮನವು ನಿನ್ನಲ್ಲಿಲ್ಲದೆ ಘಾಸಿಗೆ ಬಿದ್ದೆನು ಕರುಣಿಸೊ ಬೇಗನೆ ಘನ್ನ `ಹೆನ್ನ ವಿಠ್ಠಲನೆ ' ವಾಸುದೇವ ಎನ್ನ ವೈನದಿ ರಕ್ಷಿಸೋ ವಸುಧೆಯ ಪಾಲಕ 3
--------------
ಹೆನ್ನೆರಂಗದಾಸರು
ಮಾರುತೀ ನಮ್ಮಗುರು ಮೂರುತೀ ಪ ಮಾರುತಿ ಕರುಣಿಸು ಜ್ಞಾನಾ ಎನ್ನ ಸೇರಿದ ಸತತ ಅಜ್ಞಾನಾ ಆಹ ದೂರ ಓಡಿಸಿ ಹರಿ ಆರಾಧನೆ ಇತ್ತು ಪಥ ಸರ್ವಾಧಾರ ಉದಾರನೆ ಅ.ಪ. ದ್ವಿತೀಯ ಯುಗದಲ್ಲವತರಿಸಿ ಸೀತಾ ಅತಿ ವೇಗದಿಂದ ಉತ್ತರಿಸಿ ರವಿ ಸುತಗೊಲಿದವನುದ್ಧರಿಸಿ ಆಹಾ ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು ದಿವಿಜರ ಸದೆದ ಭಾರತಿಯ ರಮಣನೆ 1 ಕುರುಕುಲದಲ್ಲಿ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರಣಿ ರೂಪವನೆ ಸಿಂಗರಿಸಿ ನೀಚ ತರ ಕೀಚಕನ ಸಂಹರಿಸಿ ಆಹ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2 ಭೂತಳದೊಳಗೆ ಯತಿಯ ರೂಪ ನೀ ತಾಳಿದೆಯೋ ಶುಭಕಾಯ ಮಾಯಿ ವ್ರಾತ ಗೆಲಿದೆ ಮಧ್ವರಾಯಾ ಕಾಯ ಜಾತ ಜನಕಗತಿ ಪ್ರೀಯಾ ಆಹಾ ಭೂತನಾಥನೆ ಪರಮಾತುಮನೆಂಬ ಪಾತಕರರಿ ಜಗನ್ನಾಥವಿಠಲನ ದೂತ 3
--------------
ಜಗನ್ನಾಥದಾಸರು
ಮುಖ್ಯಪ್ರಾಣನೀತಾ | ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ 1 ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ | ಮೊಗದವನಾಗಿ ವಾನರ ಬಲವ | ನಗವ ತಂದೆತ್ತಿದವನೀತಾ 2 ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ | ಪರಮ ಮಂಗಳ ಪದದಿ ಭವದ | ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ | ಮರುತಾವತಾರನೀತಾ ತನ್ನ | ಶರಣ ಜನರ ಪೊರೆವನೀತಾ 3 ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ | ನೋಡಿ ಪೊರೆವನೀತಾ | ಅಸುರ ಲಿಂಗಭಂಗವ ಮಾಡಿ | ಬೆಸನೆ ಮತವ ಕಟ್ಟುವನೀತಾ | ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ 4 ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ | ದಾನ ಧರ್ಮ ಪ್ರೇರಕನೀತಾ | ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ | ನಮಗೇನೇನು ಕೊಡುವನೀತಾ | ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ 5
--------------
ವಿಜಯದಾಸ
ಮುಂಚೆ ನೋಡಣು ಬನ್ನಿ ಜನಗಳೆ ಹಂಚಿನಾಳಿನವ ಹನುಮನ ವಾಂಛಿತಾರ್ಥಗಳೀವ ಭಾವಿ ವಿರಂಚಿದೇವ ಪದಾರ್ಹನಾ ಪ ಅಂದು ಕಪಿಕುಲದಿಂದ ದುಸ್ತರ ಸಿಂಧು ದಾಟಿದ ಧೀರನ ವಂದಿಸುತ ಭೂನಂದನೆಯು ಕ್ಷೇಮೆಂದು ರಾಮಗೆ ಪೇಳ್ದನ 1 ಧಾರುಣಿಯೊಳವತರಿಸಿ ಕುಂತಿ ಕುಮಾರನೆನಿಸಿದ ಧೀರನ ಕೌರವಾಂತಕನೆನಿಸಿ ಕೃಷ್ಣನ ಭೂರಿ ಕರುಣವ ಪಡೆದನ 2 ವಾದಿಗಳ ನಿರ್ವಾದ ಗೈಸಿದ ಬಾದರಾಯಣನ ಶಿಷ್ಯನ ಭೇದಮತವನು ಸ್ಥಾಪಿಸಿದ ಗುರು ಮೋದ ತೀರ್ಥ ಯತೀಂದ್ರನಾ 3 ಪಾಲಕಿಯ ಉತ್ಸವದಿ ಮೆರೆಯುತ ವಾಲಗವ ಕೈಕೊಳುವನ ಕಾಲಕಾಲಗಳಲ್ಲಿ ಭಜಕರ ಮ್ಯಾಳವನು ಪಾಲಿಸುವನಾ 4 ಶೇಷಭೂಷಣ ವಾಸವಾದಿಸು ರೇಶ ಭಕುತರ ಪೋಷನ ಶ್ರೀಶ ಕಾರ್ಪರವಾಸ ಸಿರಿನರ ಕೇಸರಿಗೆ ಪ್ರಿಯ ದಾಸನ5
--------------
ಕಾರ್ಪರ ನರಹರಿದಾಸರು
ಮುಡಿದಿಹ ಕುಸುಮವ ಸಡಗರದಲಿ ನೀಡೆ ಮಡದಿ ತುಳಸಿ ಎನಗೆ ಕಡುದಯದಿಂದ ಪ. ಕಂಕಣ ಕಡಗವು ವಂಕಿ ಬಳೆಯನಿಟ್ಟು ಪಂಕಜಕರದಿಂದ ಶಂಕಿಸದಲೆ ಎನಗೆ 1 ಕುಸುಮ ಭವ ಶ್ರೀ ರಮೇಶನ ತೋರಿ 2 ತುಷ್ಟಳಾಗಿ ನೀಡೆ ಅಷ್ಟು ವಿಧದ ಕುಸುಮಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠಲನ ಸತಿ3
--------------
ಅಂಬಾಬಾಯಿ
ಮುಂದೆನಗೆ ಗತಿಯೇನೋ ಇಂದಿರೇಶಾ ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ ನಾ ಕಂಠಪರಿಯಂತ ಕುಡಿದೆನೊ ಹಾಲ ಬೇಕೆಂದು ಹರಿವಾಸರಂಗಳಾಚರಿಸದೆಯೆ ಸಾಕೆಂಬವೊಲು ಸುಖವ ಸೂರೆಗೊಂಡೇ 1 ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ ಸತಿಸುತರೆ ಸರ್ವಸ್ವವೆಂದಿರ್ದೆನೋ ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ ಮತಿವಿಕಳನಾದೆನೋ ಪತಿತಪಾವನನೇ 2 ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ ಉಲ್ಲಪದಿ ನಾಕುಳಿತು ನೋಡುತಿದ್ದೆ ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ ಖುಲ್ಲುಮಾತುಗಳಾಡಿ ನೋಯಿಸಿದೆ ನರರ 3 ತಾರೆಂಬುದಕೆನಾನು ತೌರುಮನೆಯಾಗಿರುವೆ ಪಾರಮಾರ್ಥಕವಾಗಿ ಕೊಡುವುದರಿಯೆ ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ ಘೋರಪಾತಕಿಯಾಗಿ ಇರುವೆಯೀ ಜಗದಿ 4 ನರ್ಮದಾನದಿ ಸ್ನಾನ ನಿರ್ಮಲೋದಕಪಾನ ಧರ್ಮ ಮರ್ಮಗಳರಿತು ಮಾಡುವುದು ದಾನ ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ 5 ನಿತ್ಯ ಜೀವಿಸುವುದನ್ನು ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು 6 ನೀನು ಒಲಿಯುವ ಪರಿಯದಾವುದನು ಮಾಡಿಲ್ಲ ಏನು ಮಾಡಲು ಎನಗೆ ಮನಸು ಬರದು ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ7
--------------
ಶಾಮಶರ್ಮರು
ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ ಪ. ಮುದ್ದೆ ಬೆಣ್ಣೆ ಕೊಡುವೆ ಚೆನ್ನ ಮಧ್ವಮುನಿಯ ಮನ ಪ್ರಸನ್ನ ಅ.ಪ. ಲೀಲೆಯಿಂದ ಕೊಳಲನೂದಿ ಕಾಳಿಮಡುವ ಕಲಕಿ ನಿಂದ ಲೀಲೆ ಕೇಳೆ ಮನಕಾನಂದ 1 ನಿನ್ನ ಮಹಿಮೆ ಅಧಿಕವಾಗಿ ಎನ್ನ ಮನಕೆ ಹರುಷವಾಗಿ ಪನ್ನಗೇಂದ್ರಶಯನ ಸ್ವಾಮಿ ನಿನ್ನ ರೂಪ ತೋರೊ ಪ್ರೇಮಿ 2 ಪೊರೆ ಗೋಪಾಲಕೃಷ್ಣವಿಠ್ಠಲ ನಿರುತ ನಿನ್ನ ಚರಣ ಕಮಲ ಮೊರೆಯ ಹೊಕ್ಕೆ ಮರೆಯದೆನ್ನ ಕರುಣೆಯಿಂದ ಕಾಯೊ ಘನ್ನ 3
--------------
ಅಂಬಾಬಾಯಿ
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ಮುದ್ದು ಮುಖದ ಲಕುಮಿ ಎನಗೆ ಶುದ್ಧ ಜ್ಞಾನವÀ ನೀಡೆ ಪ. ಬಿದ್ದಿಹೆ ನಿನ್ನ ಪದದಲಿ ನಿರುತ ಮದ್ಬಿಂಬನ ತೋರೆ ಅ.ಪ. ಹರಿಸರ್ವೋತ್ತಮ ಸುರರಕ್ಷಕನೆಂಬ ಖರೆಯ ಜ್ಞಾನವ ನೀಡೆ ಕರಕರೆಗೊಳಿಸದೆ ದುರ್ವಿಷಯದಲೆನ್ನ ಹರಿಯ ಧ್ಯಾನವನೀಡೆ 1 ನಗೆಮೊಗ ಚಲುವೆ ಖಗವಾಹನ ಪ್ರಿಯೆ ಜಗದೊಡೆಯನ ತೋರೆ ನಿತ್ಯ ಬಗೆ ಬಗೆ ಲೀಲೆಯ ಸುಗುಣವಂತೆ ತಿಳಿಸೆ 2 ಸೃಷ್ಟಿಕರ್ತಗೆ ಪಟ್ಟದ ನಾರಿಯೆ ದೃಷ್ಟ ಇಂದ್ರಿಯವಳಿಯೆ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲ ಸತಿಯೆ 3
--------------
ಅಂಬಾಬಾಯಿ
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಮೂರು ತುಂಡಾದ ಹನುಮನ ನೋಡಿರÉ ಪ. ಮಾರುತಿಯ ಮರ್ಮವಿದರಿಂದರಿಯರೆ ಅ.ಪ. ಮೊದಲ ಕಟ್ಟೆಯ ದಡದಿ ಮೊದಲಿದ್ದ ಹನುಮನ ವಿಧಿವಶದಿ ಖಳರು ಕಿತ್ತೊಗೆಯೆ ಮದದಿ ಮೊದಲು ಕಟ್ಟೆಯು ನಿಲದೆ ಒಡೆದು ಪರಿಯಲು ತುಂಗೆ ಅದರೊಳಡಗಿದ್ದ ಕೆಲಕಾಲವೀ ರಾಯ 1 ದೇವರಿಲ್ಲದ ಭವನ ಕಂಡು ನಿಂದು ತಾವೆ ಸ್ಥಾಪಿಸುವೆವೆಂಬನಿತರೊಳು ಸ್ವಪ್ನದಲಿ ಪಾವಮಾನಿಯು ತನ್ನ ಇರುವು ತೋರಿದನೊ 2 ಬರುತ ಕಟ್ಟೆಯ ದಿಡಗಿನಲ್ಲಿ ನಿಂದು ಕರೆವಡೆ ಬರಲು ಮೂರು ತುಂಡು ಹನುಮರಾಯ ತರುತ ಸ್ಥಾಪಿಸಿ ಬಂಧಿಸಲು ದ್ವಾರವಾರದಲಿ ಕರನ್ಯೂನ ಸಾಕಾರ ಸರಿಯಾದನೀತ 3 ಮೂರು ಯುಗದಲಿ ತಾನು ಮೂರು ರೂಪವ ತಾಳಿ ಮೂರು ಮೂರ್ತಿಯ ಭಜಿಸಿ ಮೂರು ಆಶ್ರಮದಿ ದುರುಳ ಮತಗಳ ಮುರಿದು ಮೂರುದಶ ಏಳು ಗ್ರಂಥಗಳ ಸ್ಥಾಪಿಸಿದ 4 ಮೂರು ಗುಣಬದ್ಧ ಮೂರು ದೇಹದಿ ನೆಲಸಿ ಮೂರು ವಿಧ ಜಪದಿಂದ ಮೂರ್ಗತಿಯನೀವ ಮೂರು ಸ್ಥಾನದಿ ಮೂರು ಕೋಟಿರೂಪವ ಧರಿಸಿ ಮೂರು ಲೋಕದಿ ಮೆರೆವ ಮಾರುತಿಯ ಚರ್ಯ 5 ಮೂರು ನಾಡಿಯ ಮಧ್ಯೆ ಮೂರೈದುದಲ್ಲಿ ತೋರುವೊ ಹರಿರೂಪ ತೋರಿಸುವನು ಮೂರು ಅವಸ್ಥೆಗಳ ವಿೂರಿದ ಜಾಗ್ರತನು ಮೂರು ಕಾಲದಿ ಜೀವರನು ಕಾಯುವನ 6 ಮೂರು ಮಾರ್ಗಗಳಿಂದ ಮಾರುತಿಯ ತೋರುವೊ ದಾರಿಯಿಂದಲಿ ಹರಿಯ ಸಾರಿ ಭಜಿಸೆ ಸೇರಿಸುವ ಗೋಪಾಲಕೃಷ್ಣವಿಠ್ಠಲನ ಪುರವ ತಾರಿಸುವ ಭವವನಧಿ ಮೊದಲಗಟ್ಟೇಶ7
--------------
ಅಂಬಾಬಾಯಿ
ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ಮೂರ್ತಿ ಚಿನ್ಮಯಾತ್ಮಕ ರೂಪ ಸಂತತದಿ ನೆನೆವವರ ಸಲಹೊ ಕರುಣಿ ಪ. ತುಂಬಿ ಇರುತಿಹುದು ಎಂತು ನಿನ್ನಾಟ ಪೇಳ್ ನಿಗಮವೇದ್ಯ ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ ಸಂತತದಿ ನಿನ ಧ್ಯಾನ ನೀಡೆಂಬೆನೊ 1 ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ ದೇಶ ತಿರುಗುವನಿಗೆ ಹಣದ ಚಿಂತೆ ದೇಶಸ್ಥನಾದವಗೆ ರಾಜಭಟರಾ ಚಿಂತೆ ಕಾಶಿಯಲ್ಲಿರುವವಗೆ ಮನೆಯ ಚಿಂತೆ 2 ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ ಚೋರನಿಗೆ ರವಿ ಮುಳುಗದಿರುವ ಚಿಂತೆ ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ ಪತಿ ಒಲುಮೆ ಪಡೆವ ಚಿಂತೆ 3 ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ ಧರ್ಮಪುರುಷಗೆ ಕಲಿಬಾಧೆಯ ಚಿಂತೆ ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ ಹಾದಿ ನಡೆವಗೆ ದುಷ್ಟ ಜನರ ಚಿಂತೆ 4 ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ ಮಾನವಂತರಿಗೂನ ನುಡಿಯ ಚಿಂತೆ 5 ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ6 ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ ಇಂತು ನಿನ ಪದವನಾನ್ಹಾರೈಸಿ ಬಂದರೂ ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ 7 ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ ಚರಣದಲಿ ತನುಮನ ಒಪ್ಪಿಸಿದರೂ ಕರಗಲಿಲವು ಮನಸು ಕರುಣಪುಟ್ಟಲು ಕಾಣೆ ಭರವಸೆಯು ನಿನ್ನಲ್ಲಿ ಮೂಡಲಿಲ್ಲ 8 ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ 9 ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ ವರ ಪುಂಡಲೀಕಗೆ ಒಲಿದದ್ದು ನಿಜವಾಗೆ 10 ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ ಹರಿದಾಸ ಸಂತತಿಗೆ ಮನೆದೈವ ನಿಜವಾಗೆ ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು 11 ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ 12
--------------
ಅಂಬಾಬಾಯಿ